ಕೆ.ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ಕೆ.ಮಂಜು ನಿರ್ಮಿಸುತ್ತಿರುವ, ಸಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಲಿರುವ “ರಾಗಿಣಿ ಐ ಪಿ ಎಸ್ ವರ್ಸಸ್ ಐ ಎ ಎಸ್” ಚಿತ್ರ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.
ಇದೊಂದು ನೈಜಘಟನೆ ಆಧಾರಿತ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಮಾನ”,” ಧ್ವನಿ ” ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಸಬಾಸ್ಟಿನ್ ಡೇವಿಡ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.
ಜನಪ್ರಿಯ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿರುತ್ತಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ.
ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ನಗುವಿನ ಹೂಗಳ ಮೇಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿದೆ.
ಶ್ರೀ ರಂಗ , ಕೆಂಪಿರ್ವೆ ಮತ್ತು ಆಮ್ಲೆಟ್, ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಇರಲಿ ಬಿಡು ಈ ಜೀವ ನಿನಗಾಗಿ ಎಂಬ ರೋಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಾದ
ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗ , ಒಡೇಲ ರೈಲ್ವೆ ಸ್ಟೇಷನ್ ಮತ್ತು ಪ್ಯಾರ್ ಮೇ ಪಡೀಪೊಯಾನು ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ.
ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸವಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
“ಗುಲ್ಟು”, ” ಹೊಯ್ಸಳ “, ” ಹೊಂದಿಸಿ ಬರೆಯಿರಿ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ನವೀನ್ ಶಂಕರ್ ಪ್ರಸ್ತುತ “ಕ್ಷೇತ್ರಪತಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ನವೀನ್ ಶಂಕರ್ ಅವರಿಗೆ ಈಗ ಹುಟ್ಟುಹಬ್ಬದ ಸಂಭ್ರಮ. ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ “ಕ್ಷೇತ್ರಪತಿ” ತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. KRG ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ.
ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. “ಕ್ಷೇತ್ರಪತಿ” ಸೋಶಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೆ ಹೆಚ್ಚಾಗಿ ಗೆಲ್ಲುತ್ತಿದೆ. ಅಂತಹ ವಿಭಿನ್ನ ಪ್ರೇಮಕಥೆಯ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” ಚಿತ್ರ ಇದೇ ಜೂನ್ 2 ರಂದು ಬಿಡುಗಡೆಯಾಗುತ್ತಿದೆ.
ಕನ್ನಡದಲ್ಲಿ ಸಾಕಷ್ಟು ಪ್ರೇಮಕಥೆಯುಳ್ಳ ಚಿತ್ರಗಳು ಬಂದಿದೆ. ಆದರೆ ಇದು ಸ್ವಲ್ಪ ವಿಭಿನ್ನ ಪ್ರೇಮಕಥೆ ಎನ್ನಬಹುದು. ರಾಧಾ – ರಮಣ ಇಬ್ಬರು ಪ್ರೇಮಿಗಳು. ಒಬ್ಬರನೊಬ್ಬರು ಬಿಟ್ಟಿರದಷ್ಟು. ಕಾರಣಾಂತರದಿಂದ ತಪ್ಪಿಸಿಕೊಂಡಿರುವ ರಮಣನನ್ನು ರಾಧಾ ಹುಡುಕುವುದೆ ಚಿತ್ರದ ಪ್ರಮುಖ ಕಥಾಹಂದರ.
ಸಾನ್ವಿ ಪಿಕ್ಚರ್ಸ್ & ಅನಿಮೇಷನ್ಸ್ ಲಾಂಛನದಲ್ಲಿ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಂ.ಎನ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ. ನವನೀತ್ ಚರಿ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೀ ಕ್ರಿಯೇಷನ್ಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.
ರಾಘವ್ ರಮಣನಾಗಿ ಹಾಗೂ ಸಂಜನ ಬುರ್ಲಿ ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು ಗುರು ಹೆಗಡೆ ಹಾಗೂ ಯಶಸ್ವಿ ಶಂಕರ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ಅವರು ನಿರ್ಮಿಸಿರುವ, ಮಂಜು ಕಾರ್ತಿಕ್ ನಿರ್ದೇಶನದ ” ಮೆಲೋಡಿ ಡ್ರಾಮ” ಚಿತ್ರದ ಹಾಡು ಬಿಡುಗಡೆಯಾಗಿದೆ.
“ಮೊಲೋಡಿ ಡ್ರಾಮ” ಮೂಲಕ ಪ್ರೀತಿ ಭಾವನೆಗಳ ಜೊತೆಗೆ ಸಂಬಂಧ ಹೇಗೆ ನಡೆದುಕೊಂಡು ಹೋಗಬೇಕು ಹಾಗೂ ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ. ನಾವು ತಿದ್ದಿಕೊಳ್ಳಬೇಕು ಎಂಬ ವಿಷಯವನ್ನು ಹೇಳ ಹೊರಟ್ಟಿದ್ದೇವೆ.
“ಮೆಲೋಡಿ ಡ್ರಾಮ” ಚಿತ್ರಕ್ಕೆ “ನಿನ್ನ ಕಥೆ ನನ್ನ ಜೊತೆ” ಎಂಬ ಅಡಿಬರಹವಿದೆ. ಚಿತ್ರದಲ್ಲಿ ಏಳು ಸುಮಧುರ ಹಾಡುಗಳಿವೆ. ಸೋನು ನಿಗಮ್ , ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ. ಮನು ಡಿ ಬಿ ಹಳ್ಳಿ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. “ದ್ವಿಪಾತ್ರ” ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸತ್ಯ ಈ ಚಿತ್ರದ ನಾಯಕನಾಗಿ, “ಸೀತಾವಲ್ಲಭ” ಹಾಗೂ “ಸರಸು” ಧಾರಾವಾಹಿ ಮೂಲಕ ಮನೆಮಾತಾಗಿರುವ ಸುಪ್ರೀತ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ.
ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ನೋಡಿ ಮೆಚ್ಚುಕೊಂಡಿದ್ದು, ಜೂನ್ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ವರ್ಷಗಳಿಂದ ವಿವಿಧ ನಿರ್ದೇಶಕರ ಬಳಿ ಕೆಲಸ ಮಾಡಿರುವ ನನ್ನ ನಿರ್ದೇಶನದ ಮೊದಲ ಚಿತ್ರವಿದು ಎಂದು ಮಂಜು ಕಾರ್ತಿಕ್ ತಿಳಿಸಿದರು.
“ದಿಪಾತ್ರ” ನನ್ನ ಮೊದಲ ಚಿತ್ರ. ಇದು ಎರಡನೆಯದು. ಕಾರ್ತಿಕ್ ನನ್ನ ಪಾತ್ರದ ಹೆಸರು. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕ ಸತ್ಯ.
ಈ ಹಿಂದೆ ಕೆಲವು ಜನಪ್ರಿಯ ಧಾರಾವಾಹಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. “ಮೆಲೋಡಿ ಡ್ರಾಮ” ದಲ್ಲಿ ಹಿತ ಎಂಬುದು ನನ್ನ ಪಾತ್ರದ ಹೆಸರು. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸುಪ್ರೀತ ಸತ್ಯನಾರಾಯಣ ತಿಳಿಸಿದರು.
ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹವ್ಯಾಸ. ಮೂವತ್ತೈದು ವರ್ಷಗಳಿಂದ ತಪ್ಪದೆ ವಾರಕ್ಕೊಂದು ಸಿನಿಮಾ ನೊಡಿಕೊಂಡು ಬರುತ್ತಿದ್ದೇನೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎಂದರು ನಿರ್ಮಾಪಕ ನಂಜುಂಡ ರೆಡ್ಡಿ.
ಚಿತ್ರದಲ್ಲಿ ಏಳು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಧನಂಜಯ್ ರಂಜನ್ ಹಾಡುಗಳನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾಹಿತಿ ನೀಡಿದರು. ಛಾಯಾಗ್ರಹಕ ಮನು ಡಿ.ಬಿ ಹಳ್ಳಿ, ಸಂಕಲನಕಾರ ಆರ್ ಮಂಜು ಹಾಗೂ ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ವೈಭವ್ ನಾಗರಾಜ್, ವಿನೋದ್ ಗೊಬ್ಬರಗಾಲ ಮುಂತಾದವರು “ಮೆಲೋಡಿ ಡ್ರಾಮ” ಬಗ್ಗೆ ಮಾತನಾಡಿದರು.
ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಹಾಲಿವುಡ್-ಬಾಲಿವುಡ್ ನಟ ಕಬೀರ್ ಬೇಡಿ ಅಭಿನಯಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ಧಿಯಾಗಿತ್ತು. ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರದಲ್ಲಿ ಬರುವ “ಉದ್ಯಾವರ ಅರಸರ” ಪಾತ್ರವನ್ನು ಕಬೀರ್ ಬೇಡಿ ಸಮರ್ಥವಾಗಿ ನಿಭಾಯಿಸಿದ್ದು ಮಾತ್ರವಲ್ಲದೆ ನಿರ್ದೇಶಕರ “ವಿಷುವಲ್ ಇಮೇಜಿನೇಷನ್”ನನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯಬಲ ಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯ ವಿರುವ ಬಹಳ ದೊಡ್ಡ ದೈವಸ್ಥಾನವಿದೆ.”ಕೊರಗಜ್ಜ” ಸಿನಿಮಾದಲ್ಲಿ ಹಿರಿಯ ನಟಿ ಭವ್ಯರವರು ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ “ಪಂಜಂದಾಯಿ” ಎನ್ನುವ (ಈಗ ದೈವವೆಂದು ಪೂಜೆಗೊಳಪಟ್ಟಿರುವ)ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು,ಇದು ಚಿತ್ರದ ಹೈಲೈಟ್ ಗಳಲ್ಲಿ ಒಂದು. ಶೂಟಿಂಗ್ ವೇಳೆ ಕಬೀರ್ ಬೇಡಿ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡುತ್ತೇನೆ ಎಂದಿದ್ದರು.
ಆದರೆ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಕಬೀರ್ ಬೇಡಿ ಕನ್ನಡದಲ್ಲಿ ಸಂಭಾಷಣೆಯನ್ನು ಒಪ್ಪಿಸುತ್ತಾರೆ ಎನ್ನುವುದನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲು ಸಾಧ್ಯವಿರಲಿಲ್ಲ. . ಕಾರಣ…ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ-ತುಳು-ಮಲಯಾಳಂ ಭಾಷೆಗಳ ಸೊಗಡನ್ನು ಅರಿತು, ಅದರ ಏರಿಳಿತ ಮತ್ತು ಭಾವನೆಗಳನ್ನು ಪಾತ್ರಕ್ಕೆ ಅಳವಡಿಸಿಕೊಂಡು, ಗ್ರಾಮ್ಯ ಮತ್ತು ಸ್ವಾಭಾವಿಕ ಶೈಲಿಯಲ್ಲಿ ಧ್ವನಿಯನ್ನು ಏರಿಳಿತಗೊಳಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
ಆದರೆ ಕಬೀರ್ ಬೇಡಿ ಈ ಸವಾಲನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿ, ತನ್ನ ಪಾತ್ರಕ್ಕೆ ಮುಂಬಾಯಿಅ ಪ್ರತಿಷ್ಟಿತ ಸ್ಟುಡಿಯೋ ಒಂದರಲ್ಲಿ ದಿನಕ್ಕೆ ಎರಡು-ಮೂರು ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ. ಕಾಂತಾರ” ನಂತರ ದೈವದ ಕಥೆಯಾಧಾರಿತ ಚಿತ್ರದ ಬಗ್ಗೆ ಹೆಚ್ಚು ಕುತೂಹಲಗೊಂಡಿರುವ ಮುಂಬಾಯಿಯ ಮಾಧ್ಯಮಗಳು ತ್ರಿವಿಕ್ರಮ ಸಾಪಲ್ಯ ರವರು ನಿರ್ಮಿಸುತ್ತಿರುವ ” ಈ “ಕೊರಗಜ್ಜ” ಸಿನಿಮಾಗೆ ಕಬೀರ್ ಬೇಡಿ ಡಬ್ಬಿಂಗ್ ಮಾಡುವ ವಿಚಾರವನ್ನು ದೊಡ್ಡ ಮಟ್ಟದ ಸುದ್ಧಿಯಾಗಿಸಿದೆ.
ಮೂರರಿಂದ ನಾಲ್ಕೈದು ಕ್ಯಾಮರಾಗಳನ್ನು ಬಳಸಿಕೊಂಡು ಚಿತ್ರೀಕರಿಸಿದ್ದ ಈ ಚಿತ್ರದ ಎಡಿಟಿಂಗ್ ಕೂಡಾ ಅತ್ಯಂತ ಸವಾಲಿನ ಕೆಲಸವಾಗಿತ್ತು. ಖ್ಯಾತ ಸಂಕಲನಕಾರ ಸುರೇಶ್ ಅರಸ್ ಜೊತೆ ವಿದ್ಯಾಧರ್ ಶೆಟ್ಟಿ ಕೂಡಾ ಸಂಕಲನಕಾರರಾಗಿ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದ ಸೌಂಡ್ ಡಿಸೈನ್ ಮತ್ತು ಫ಼ಾಲಿ ಕಾರ್ಯಕ್ಕಾಗಿ ದೇಶದ ಪ್ರತಿಭಾನ್ವಿತ ಡಿಸೈನರ್ ಗಳು ಕೈ ಜೋಡಿಸುತ್ತಿದ್ದಾರೆ.
ಮುಂಬಾಯಿ ಹಾಗೂ ವಿದೇಶಗಳಲ್ಲಿ ಈ ಕೆಲಸವನ್ನು ಮಾಡಲು ಈಗಾಗಲೇ ಕಾರ್ಯತಂತ್ರ ರೂಪಿಸಿಕೊಳ್ಳಲಾಗುತ್ತಿದೆ. ಜೊತೆಗೆ ಕ್ಲೈಮ್ಯಾಕ್ಸನ್ನು ಮರು ಚಿತ್ರೀಕರಿಸಿದ್ದ ಚಿತ್ರತಂಡವು ಮೈನವಿರೇಳಿಸುವ ಗ್ರಾಫಿಕ್ಸನ್ನು ಕ್ಲೈಮ್ಯಾಕ್ಸ್ ನಲ್ಲಿ ಅಳವಡಿಸಿಕೊಳ್ಳುತ್ತಿದೆ. ಒಟ್ಟಾರೆ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ನ “ಕೊರಗಜ್ಜ” ಸಿನಿಮಾದ ಮೇಕಿಂಗ್ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ, ಚಿತ್ರದ ಬಗ್ಗೆ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರವನ್ನು ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿ ಮೆಚ್ಚಿದ್ದಾರೆ. ನಾಯಕ ರಮೇಶ್ ಅರವಿಂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ನನಗೆ ಪತ್ತೆದಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮಹಾರಾಜರು ಮನತುಂಬಿ ಹಾರೈಸಿದರು.
ಈಗಾಗಲೇ ಜನಮನಸೂರೆಗೊಂಡಿರುವ ಈಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ, 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ.
ಮೇ 29 ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.
1981ರಲ್ಲಿ ಈ ಚಿತ್ರ ತೆರೆ ಕಂಡ ಚಿತ್ರವಿದು. ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್ ಅವರು ನಾಯಕ ಎಂದು ತಿರ್ಮಾನಿಸಲಾಯಿತು. ಲಕ್ಷ್ಮೀ ಈ ಚಿತ್ರದ ನಾಯಕಿ. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.
ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. “ಅಂತ” ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು.
ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ “ಅಂತ” ಚಿತ್ರ ಇದೇ ಮೇ 26 ಮರು ಬಿಡುಗಡೆಯಾಗುತ್ತಿದೆ. ಒಳ್ಳೆಯದಾಗಲಿ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದರು.
ಮೇ29, ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ” ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ. 35 ಎಂ ಎಂ ನಿಂದ 70 ಎಂ ಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ನಿರ್ಮಾಪಕ ವೇಣು ತಿಳಿಸಿದರು.
ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಪಯಣವನ್ನು ಹೇಳುವ ಚಿತ್ರ ಯದಾ ಯದಾ ಹಿ. ಮದುವೆಯಾದ ನಂತರ ಇದೇ ಮೊದಲಬಾರಿಗೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದ್ದು, ನಟ ದಿಗಂತ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜೂನ್ 2ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಶಾಲಿನಿ ಎಂಟರ್ ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಟೈಟಲ್ ಸಾಂಗನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು, ವಿಶೇಷವಾಗಿ ಈ ಗೀತೆಗೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. ತೆಲುಗು ವರ್ಷನ್ನಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು, ಇಲ್ಲಿ ಹರಿಪ್ರಿಯಾ ಅವರು ಮಾಡಿದ್ದಾರೆ. ಹಿರಿಯನಟ ಅವಿನಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ತೆಲುಗಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರೂ, ಕನ್ನಡದಲ್ಲಿದು ಮೊದಲ ಸಿನಿಮಾ. ಇನ್ನು ಈ ಚಿತ್ರಕ್ಕೆ ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ಮೂಲದ ರಾಜೇಶ್ ಅಗರವಾಲ್ ಅವರು ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.
ಈ ಚಿತ್ರಕ್ಕೆ ಕೇರಳದ ಮನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 55 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ದಿಗಂತ್ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು, ನಿರ್ದೇಶಕರು ತೆಲುಗಿನಿಂದ ಬಂದು ಈ ಸಿನಿಮಾ ಮಾಡಿದ್ದಾರೆ. ಜನರಿಗೆ ಇಷ್ಟವಾಗುವಂಥ ಕಥೆ ಇದರಲ್ಲಿದ್ದು, ನಾನು ಒಬ್ಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಮತ್ತೊಂದು ಶೇಡ್ ಇದೆ. ತೆಲುಗಿನ ಪ್ರಸಿದ್ದ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ ಎಂದರು.
ವಸಿಷ್ಠ ಸಿಂಹ ಮಾತನಾಡಿ, ನಿರ್ದೇಶಕ ಅಶೋಕ್ ತೇಜ ಅವರು ಬಂದು ನನಗೆ ಈ ಕಥೆಯನ್ನು ಹೇಳಿದಾಗ ತುಂಬಾ ಇಂಟರೆಸ್ಟಿಂಗ್ ಅನಿಸಿತು, ತೆಲುಗಿನ ಯವುಡು ಕಾದಂಬರಿ ಆಧಾರಿತ ಚಿತ್ರ. ಒಂದೊಳ್ಳೆಯ ಜರ್ನಿ ಕಥೆ ಇದರಲ್ಲಿದೆ. ಟೈಟಲ್ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿನ ಪಾತ್ರಗಳು, ಅವುಗಳ ತೊಳಲಾಟಗಳನ್ನು ಹೇಳುವ ಸಾಹಿತ್ಯವಿದು. ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಔಟ್ಪುಟ್ ನೋಡಿದಾಗ ಖುಷಿಯಾಯ್ತು. ಚಿತ್ರದಲ್ಲಿ ಒಳ್ಳೆಯ ಕಾನ್ಸೆಪ್ಟ್ ಇದೆ. ಈವರೆಗೆ ನೋಡಿದ್ದಕ್ಕಿಂತ ಬೇರೆ ದಿಗಂತರನ್ನು ನೋಡಬಹುದು. ಇದರಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದು ಹೇಳಿದರು.
ಹರಿಪ್ರಿಯ ಮಾತನಾಡಿ, ಈ ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾ ನೋಡಿ ಮತ್ತಷ್ಟು ಖುಷಿ ಆಯ್ತು. ನಾನು ವಸಿಷ್ಠ, ದಿಗಂತ್ ಮೂರೂ ಜನ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನ್ನದು ಇನ್ಟೆನ್ಸ್ ರೋಲ್, ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ. ತುಂಬಾ ಚಾಲೆಂಜಿಂಗ್ ಕೂಡ ಆಗಿತ್ತು. ಸಿನಿಮಾನೂ ಕ್ಲಾಸ್ ಆಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ವಿಕ್ಟಿಮ್ ಅಂದ್ರೆ ಹುಡುಗಿಯರು ಮಾತ್ರವಲ್ಲ, ಹುಡುಗರ ಪಾಲೂ ಇರುತ್ತೆ, ಮೂರು ಜನರ ಮೇಲೂ ಕಥೆ ಸಾಗುತ್ತದೆ, ಮೂವರೂ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು, ಇಡೀ ಸಿನಿಮಾ ಸೀಟಿನ ತುದಿಯಲ್ಲಿ ಕೂತು ನೋಡಿಸಿಕೊಂಡು ಹೋಗುತ್ತೆ, ಟೈಟಲ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸಿನಿಮಾವನ್ನು ಕೂಡ ಜನ ಇಷ್ಟಪಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.
ನಿರ್ಮಾಪಕ ರಾಜೇಶ್ ಅಗರವಾಲ್ ಮಾತನಾಡುತ್ತ ನನ್ನ ನಿರ್ಮಾಣದ ಮೊದಲ ಕನ್ನಡ ಚಿತ್ರವಿದು, ಸಿನಿಮಾ ಮಾಡೋದು ನನ್ನ ಕನಸು. ಮೂಲ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ, ದೊಡ್ಡ ಬಜೆಟ್ನಲ್ಲಿ ಒಳ್ಳೆಯ ಸಿನಿಮಾ ನಿರ್ಮಿಸಿದ್ದೇವೆ ಎಂದರು.
ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿಯಾಗಿದೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಶ್ರೀಚರಣ್ ಪಾಕಾಲ ಅವರ ಸಂಗೀತ ನಿರ್ದೇಶನವಿದೆ. ಹರ್ಷವರ್ಧನ್ರಾಜ್ ಟೈಟಲ್ ಸಾಂಗ್ ಮಾಡಿದ್ದಾರೆ. ಯೋಗಿ ಅವರ ಕ್ಯಾಮೆರಾವರ್ಕ ಚಿತ್ರದಲ್ಲಿದ್ದು, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದಾರೆ.
ಮಾಡಲಿಂಗ್ ಲೋಕದಿಂದ ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟ ಅದೆಷ್ಟು ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆ ಸಾಲಿಗೆ ಸೇರಲು ರೋಹಿತ್ ಕಾತುರರಾಗಿದ್ದಾರೆ. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯ ರೋಹಿತ್ ಆರು ವರ್ಷಗಳ ಕಾಲ ಮಾಡಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರೀಗ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ.
ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವಿದೆ. ನಾಯಕನಾಗಿ ಬೆಳ್ಳಿಪರದೆಯಲ್ಲಿ ರಾರಾಜಿಸಬೇಕೆಂಬ ಹೊಸ ಉತ್ಸಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ.
ವಾಸುದೇವ ಎಸ್ ಎನ್ ಎಂಬುವವರು ಈ ಚಿತ್ರ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ. ರೋಹಿತ್ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಚಿಟ್ಟೆ ಧ್ವನಿಯಾಗಿದ್ದಾರೆ.
ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ಸಂಗೀತ ಈ ಹಾಡಿಗಿದ್ದು, ಶೀಘ್ರದಲ್ಲಿ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಕನಸುಕಟ್ಟಿಕೊಂಡಿರುವ ಪ್ರತಿಭಾವಂತ ರೋಹಿತ್, ತನ್ನಜೊತೆ ಹಳ್ಳಿ ಪ್ರತಿಭೆಗಳಿಗೂ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ.
ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲು ಪ್ಲಾನ್ ಹಾಕಿಕೊಂಡಿದೆ.