ಮತೀನ್ ಹುಸೇನ್ ನಾಯಕರಾಗಿ ನಟಿಸಿರುವ `ರೋಡ್ ಕಿಂಗ್’ ಚಿತ್ರದ ಮೂರು ಹಾಡುಗಳು trendsetter productions ಯೂಟ್ಯೂಬ್ ಚಾನಲ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಕಲಾರಸಿಕರ ಮನ ಗೆದ್ದಿದೆ. ಪ್ರಭು ಎಸ್ ಆರ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚಂದನ್ ಶೆಟ್ಟಿ ಮಾಧುರಿ ಹಾಗೂ ವಿಶಾಲ್ ಹಾಡಿದ್ದಾರೆ. ಡಾ||ವಿ.ನಾಗೇಂದ್ರ ಪ್ರಸಾದ್, ಮತೀನ್ ಹುಸೇನ್ ಹಾಗೂ ಸಾಯಿ ನವೀನ್ ಹಾಡುಗಳನ್ನು ಬರೆದಿದ್ದಾರೆ. ಟ್ರೇಲರ್ ಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಜೂನ್ 23 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಿಲೀಪ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮತೀನ್ ಹುಸೇನ್ ಕಥೆ ಬರೆದಿದ್ದು, ರಾಂಡಿ ಕೆಂಟ್ ನಿರ್ದೇಶನ ಮಾಡಿದ್ದಾರೆ. ಮತೀನ್ ಹುಸೇನ್, ಮಹೇಶ್ ಅವರ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ.
ರಾಂಡಿ ಕೆಂಟ್ ಹಾಗೂ ಮತೀನ್ ಹುಸೇನ್ ಸ್ನೇಹಿತರು. ಅಮೇರಿಕಾದಲ್ಲಿರುವ ರಾಂಡಿ ಅವರು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ವಿಶೇಷ.
ನಾಯಕಿಯಾಗಿ `ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದಾರೆ. ಲೀಲಾ ಮೋಹನ್, ಹರೀಶ್ ಕುಮಾರ್, ಸುಮಾ ರಾವ್, ನಯನಾ ಶೆಟ್ಟಿ, ಭುವನ್ ರಾಜ್, ರಿಜ್ವಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆರಿಫ್ ಲಲಾನಿ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಈ ಚಿತ್ರಕ್ಕಿದೆ.
ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಗ್ರಾಮಾಯಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಆರ್ ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
“ಗ್ರಾಮಾಯಣ” ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೆ ಈ ಕಥೆಗೆ ಇವರೆ ಸೂಕ್ತ ನಾಯಕ ಅಂದುಕೊಂಡೆ. ಅವರು ಕಥೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರಾದ ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ದೇವನೂರು ಚಂದ್ರು.
ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ “ಗ್ರಾಮಾಯಣ. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು ಎಂದರು ವಿನಯ್ ರಾಜಕುಮಾರ್.
“U I” ಚಿತ್ರದ ಸೆಟ್ ನಲ್ಲಿ “ಗ್ರಾಮಾಯಣ” ಚಿತ್ರದ ಟೀಸರ್ ನೋಡಿದೆ. ಟೀಸರ್ ಗೆ ತುಂಬಾ ಪಾಸಿಟಿವ್ ಕಾಮೆಂಟ್ಸ್ ಗಳು ಬಂದಿದ್ದವು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲಂಸ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದೇನೆ ಎನ್ನುತ್ತಾರೆ ಕೆ.ಪಿ.ಶ್ರೀಕಾಂತ್.
ನಾನು “ಗ್ರಾಮಾಯಣ”ದ ಹಾಡೊಂದು ಕೇಳಿ ತುಂಬಾ ಖುಷಿಪಟ್ಟಿದೆ. ಈಗ ನಮ್ಮ ಅಣ್ಣ ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಚೆನ್ನಾಗಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾವಿರಲಿ ಎಂದರು ಲಹರಿ ವೇಲು.
ಸಹ ನಿರ್ಮಾಪಕ ನವೀನ್ ಮನೋಹರನ್, ಕಲಾವಿದರಾದ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ “ಗ್ರಾಮಾಯಣ” ದ ಕುರಿತು ಮಾತನಾಡಿದರು. ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ಅಷ್ಟು ಗಣ್ಯರು “ಗ್ರಾಮಾಯಣ”, ” ರಾಮಾಯಣ” ದಷ್ಟೇ ಕೀರ್ತಿ ಪಡೆಯಲಿ ಎಂದು ಹಾರೈಸಿದರು.
ಕನ್ನಡ ಸಿನಿಮಾ ಪ್ರಪಂಚದ ಸಂಗೀತ ಪ್ರೇಮಿಗಳು ಸದಾ ಗುನುಗುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು ಎ2 ಮ್ಯೂಸಿಕ್. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ ಅಶ್ವಿನಿ ಮೀಡಿಯಾ ನೆಟ್ವರ್ಕ್ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು. ಸಲಗ ಸಿನಿಮಾ ಮೂಲಕ ಗಾಂಧಿ ನಗರದಲ್ಲಿ ಹೊಸ ಹೆಜ್ಜೆ ಇಟ್ಟು ವಿಜಯೋತ್ಸವನ್ನು ಸಂಭ್ರಮಿಸಿತು. ಬಳಿಕ A2 ಸಂಸ್ಥೆ ಭತ್ತಳಿಕೆಯಿಂದ ಬಂದ ಹಾಡುಗಳೆಲ್ಲವೂ ದಾಖಲೆ ಬರೆದಿವೆ.
ಇತ್ತೀಚೆಗೆ ಸೂತ್ರಧಾರ, ಹಂಟರ್, ಕೆಟಿಎಂ, ಯುದ್ಧಕಾಂಡ, ಹಾಸ್ಟೆಲ್ ಹುಡುಗರು ಸೇರಿದಂತೆ ನೂರಕ್ಕೂ ಹೆಚ್ಚು ಹೊಸ ಸಿನಿಮಾಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ. ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ. ಹೊಸ ಪ್ರತಿಭೆಗಳಿವೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಮ್ಯೂಸಿಕಲ್ ಸೀರೀಸ್ ನಿರ್ಮಾಣಕ್ಕೂ ಕೈ ಹಾಕಿದೆ.
A2 ಸಂಸ್ಥೆಯ ಈ ಸಾಹಸಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ. ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್ ಗಳಲ್ಲಿ ಬರ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮಂ ಪ್ಯಾನ್ ಇಂಡಿಯಾ ನಿನಗಾಗಿ ಆಲ್ಬಂ ಇದಾಗಿದೆ. ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ಮಾತನಾಡಿದೆ ಅಜಯ್ ರಾವ್, ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಹಾಗೂ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ. ವ್ಯಕ್ತಿಗಳು, ಸಂಪರ್ಕ, ಸಂಬಂಧ ಎಲ್ಲಾ ಅವರೇ. ಆ ಅಭಿಮಾನ, ಪ್ರೀತಿ ಅಲ್ಲಿಂದ ಬೆಳವಣಿಗೆ ಆಗಿದೆ. ಎಕ್ಸ್ ಕ್ಯೂಸ್ ಮಿ ಸಮಯದಲ್ಲಿಯೂ ನಾನು ಹೊಸಬ. ನನಗೂ ಯಾರು ಪರಿಚಯ ಇರಲಿಲ್ಲ. ಯಾರೋ ಒಬ್ಬರು ಅವಕಾಶ ಕೊಟ್ಟರು. ಇವತ್ತು ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದೇನೆ. ಆರ್ಟಿಸ್ಟ್ ಪ್ರಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ. ನೈಜತೆಯಾಗಿ ಹಾಡು ಮೂಡಿದೆ. ನನ್ನ ಹೊಸ ಸಿನಿಮಾ ಯುದ್ಧಕಾಂಡ ಆಡಿಯೋ ಎ2 ಮ್ಯೂಸಿಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
A2 ಮ್ಯೂಸಿಕ್ ಸಂಸ್ಥೆಯ ಪ್ರವೀಣ್ ಮಾತನಾಡಿ, ಕಾನ್ಸೆಪ್ಟ್ ಚೆನ್ನಾಗಿದೆ ಎಂದು ಮಾಡಿದ್ದೇವೆ. ಹೊಸಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಿರ್ದೇಶಕ ಅಕ್ಷ, ಇದೊಂದು ಮ್ಯೂಸಿಕಲ್ ಸೀರೀಸ್. ಕನ್ನಡದಲ್ಲಿ ನಿನಗಾಗಿ ಎಂಬ ಟೈಟಲ್ ನಡಿ ರಿಲೀಸ್ ಆಗುತ್ತಿದೆ. ಬೇರೆ ಭಾಷೆಯಲ್ಲಿಯೂ ಬರುತ್ತಿದೆ. ಕನ್ನಡ ವರ್ಷನ್ ಆಲ್ಬಂನ್ನು ಲಾಕ್ ಡೌನ್ ಗೂ ಮೊದಲು ಶುರು ಮಾಡಿದ್ದೆವು. ನಾನು ಮತ್ತು ಡಾರ್ಕ್ ಕಾಲೇಜ್ ದಿನಗಳಲ್ಲಿ ಚರ್ಚೆ ಮಾಡಿದ್ದೇವು. ಇಷ್ಡು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಅಂದುಕೊಂಡಿರಲಿಲ್ಲ. ಒಂದು ವರ್ಷ ಆದಮೇಲೆ ನಾಲ್ಕು ಹಾಡುಗಳನ್ನು ಒಂದು ಕಥೆಯಲ್ಲಿ ನರೇಟ್ ಮಾಡಬೇಕು ಎಂಬ ಐಡಿಯಾ ಬಂತು ಎಂದರು.
ನಿನಗಾಗಿ ಆಲ್ಬಂ ಸೀರೀಸ್ ಗೆ ಸಂಗೀತ ನಿರ್ದೇಶನ ಜೊತೆಗೆ ಪದಪುಂಜ ಪೊಣಿಸಿರುವುದು ಯುವ ಪ್ರತಿಭೆ ಟಾರ್ಕ್( ಆದರ್ಶ್). ಅಕ್ಷ್ ನಿರ್ದೇಶನದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ನಿರೀಕ್ಷಿತ್ ಹಾಗೂ ಯಾನ್ವಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಆಲ್ಬಂ ಕನ್ನಡದಲ್ಲಿ ವಿಭಿನ್ನ ಹಾಗೂ ಹೊಚ್ಚ ಹೊಸ ಪ್ರಯತ್ನವಾಗಿದೆ. ಚಿಕ್ಕಮಗಳೂರು, ಹಾಸನ್, ಸಕಲೇಶಪುರ ಸುತ್ತಮುತ್ತಲಿನ ರಮಣೀಯ ಪ್ರದೇಶದಲ್ಲಿ ಈ ಆಲ್ಬಂನ ಚಿತ್ರೀಕರಣ ಮಾಡಲಾಗಿದೆ.
. ಶಶಾಂಕ್, ಜಂಗಮ್, ವಿಕ್ಕಿ ಮತ್ತು ದೀಪು ನಾರಾಯಣ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥ ಹೊಸ ಪ್ರಯತ್ನಗಳಿಗೆ ಎ2 ಒರಿಜಿನಲ್ಸ್ ಮುಂದಾಗಲಿದ್ದು, ಈ ಹೊಸತನದಿಂದ ಕೂಡಿರುವ ಮ್ಯೂಸಿಕಲ್ ಆಲ್ಬಂ ಅನ್ನು ಕನ್ನಡಿಗರು ಮೆಚ್ಚಿ ಹಂಚಿ ಹಾರೈಸಬೇಕಿದೆ.
‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕ ನಟನಾಗಿ ನಟಿಸುತ್ತಿರುವ, ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸುವ ಹಯವದನ ಸಾರಥ್ಯದಲ್ಲಿ ಮೂಡಿಬರ್ತಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿ, ಒಂದು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಬಾಕಿ ಉಳಿಸಿಕೊಂಡಿದೆ.
ನಿರ್ದೇಶಕ ಹಯವದನ ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗದಲ್ಲಿ ಸಿನಿಮಾವನ್ನು ಚಿತ್ರೀಕರಿಸಬೇಕೆಂಬ ಕನಸು ಇಟ್ಟುಕೊಂಡಿದ್ದರು. ಅದರಂತೆ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ ಕೊರೆಯುವ ಚಳಿಯಲ್ಲಿಯೂ ಎಲ್ಲೋ ಜೋಗಪ್ಪ ನಿನ್ನರಮನೆ’ವನ್ನು ಶೂಟಿಂಗ್ ನಡೆಸಿದ್ದಾರೆ. ಸುಂದರ ಸ್ಥಳಗಳಲ್ಲಿ ಸಿನಿಮಾ ಶೂಟ್ ಮಾಡಿರುವ ಖುಷಿ ಚಿತ್ರತಂಡದಲ್ಲಿದೆ. ಶೂಟಿಂಗ್ ಮುಗಿಸಿ ಈಗ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಬಳಗ ಮಾತಿನ ಜೋಡಣೆ ಕೆಲಸದಲ್ಲಿ ನಿರತರಾಗಿದ್ದಾರೆ.
ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ತಾರಾಬಳಗದಲ್ಲಿದ್ದಾರೆ.. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ.
ರವಿ ಮುದ್ದಿ, ವಿಕ್ರಮ ಹಾತ್ವಾರ್, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆದಷ್ಟು ಬೇಗ ಎಲ್ಲಾ ಕೆಲಸವನ್ನು ಮುಗಿಸಿ ಸೆಪ್ಟಂಬರ್ ಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ‘ಧೂಮಂ’ ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರವು ಜೂನ್ 23ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.
ವಿಜಯ್ ಕಿರಗಂದೂರು ನಿರ್ಮಾಣದ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.
‘ಧೂಮಂ’ ಚಿತ್ರದ ಟ್ರೇಲರ್ ಈಗಾಗಲೇ ಬಿಡಗುಡೆಯಾಗಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.
‘ರಾಯರು ಬಂದರು ಮಾವನ ಮನೆಗೆ’..ಇದು ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು. ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಅತ್ಯುತ್ತಮ ಗೀತೆ. ಇದೇ ರಾಯರು ಬಂದರು ಮಾವನ ಮನೆಗೆ ಎಂಬ ಶೀರ್ಷಿಕೆಯಡಿ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ವಿಶೇಷ ಏನಂದರೆ ಇದು ಗುಜರಾತಿ ಸಿನಿಮಾ. ವರ ಪಧಾರವೋ ಸಾವಧಾನ ಎಂಬ ಟೈಟಲ್ ನಡಿ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡದಲ್ಲಿಯೂ ಮೂಡಿ ಬಂದಿದೆ. ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದನ್ನು ಕನ್ನಡದಲ್ಲಿಯೂ ರಿಲೀಸ್ ಮಾಡುವ ಪ್ರಯತ್ನಕ್ಕೆ ಕೈ ಹಾಕಿರೋದು ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿದ್ದ ಜಾಕ್ ಮಂಜು.
ಸುದೀಪ್ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಸಿರಿಗನ್ನಡಂ ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ.
ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ.
ಜಾಕ್ ಮಂಜು
ಸಾಧುತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ. ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ನಿಟ್ಟಿಯಲ್ಲಿ ಇಡೀ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಾರ್ಯ ನಡೆಸಲಿದೆ.
ಇದೇ 9ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಇಡೀ ತಂಡ ಭಾಗಿಯಾಗಲಿದೆ. ಅಂದಹಾಗೇ ರಾಯರು ಬಂದರು ಮಾವನ ಮನೆಗೆ ಸಿನಿಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ. ಕುಟುಂಬ, ಸಂಬಂಧಗಳ ಸುತ್ತಾ ಇಡೀ ಸಿನಿಮಾ ಸಾಗಲಿದೆ. ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ವಿಚಾರವೇ. ಎಲ್ಲಾ ಚಿತ್ರಗಳನ್ನ ಅಪ್ಪಿಕೊಳ್ಳುವ ಪ್ರೇಕ್ಷಕರ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಮೆಚ್ಚಿಕೊಂಡು ಹರಸಿ ಹಾರೈಸಬೇಕಷ್ಟೆ.
ವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 2.55 ನಿಮಿಷವಿರುವ ಟ್ರೇಲರ್ ಫನ್-ಎಮೋಷನ್, ಸೆಂಟಿಮೆಂಟ್, ರೋಮ್ಯಾನ್ಸ್, ಮೋಜು-ಮಸ್ತಿ, ಪಂಚಿಂಗ್ ಡೈಲಾಗ್ ಕಿಕ್ ಗಳಿಂದ ಕೂಡಿದೆ. ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್.
90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್, ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ. ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಅರಸು ಸಾಹಿತ್ಯದ ಹಾಡಿಗೆ ಕಂಠ ಕೂಡ ಕುಣಿಸಿದ್ದಾರೆ. ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ.
ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಟ್ಯೂನ್ ಹಾಕಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಟ್ರೇಲರ್ ಮೂಲಕ ಕಿಕ್ ಕೊಟ್ಟಿರುವ ಬೆಂಗಳೂರು ಬಾಯ್ಸ್ ಆದಷ್ಟು ಬೆಳ್ಳಿತೆರೆಮೇಲೆ ಅಬ್ಬರಿಸಲಿದೆ.
ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿದ್ದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜೂನ್ 9ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಮೇ 26ರಂದು ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಟೈಟಲ್ ನಡಿ ತೆರೆಕಂಡ ಈ ಸಿನಿಮಾಗೆ ಅದ್ಭುತ ಯಶಸ್ಸು ಕಂಡಿದೆ.
ಇದರ ಬೆನ್ನಲ್ಲೇ ಕನ್ನಡದಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಪವಿತ್ರಾ ಹಾಗೂ ನರೇಶ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಜೋಡಿ ಮತ್ತೆ ಮದುವೆ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
ನಟ ನರೇಶ್ ಮಾತನಾಡಿ, ಈಗಾಗಲೇ ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಮತ್ತೆ ಮದುವೆ ಒಳ್ಳೆಯ ಕಂಟೆಂಟ್ ಇರುವ, ಸದ್ಯ ಸಮಾಜದಲ್ಲಿ ಗಂಡ, ಹೆಂಡತಿ ಸಂಬಂಧಗಳ ಕುರಿತ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಎಂದು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಷ್ಟೇ ಸಾಕು ಎಂದು ಹೇಳಿದರು ಈಗ ಕನ್ನಡದಲ್ಲಿ ಜೂನ್ 9ರಂದು ಮತ್ತೆ ಮದುವೆ ಸಿನಿಮಾ ಬಿಡುಗಡೆ ಆಗುತ್ತಿದೆ.
ರಂಗಸ್ಥಳಂ ಹಾಗೂ RRR, ಪುಷ್ಪ ಅಂತಹ ಪರಭಾಷೆಯ ಸಿನಿಮಾಗಳಿಗೆ ಕನ್ನಡದಲ್ಲಿ ಡಬ್ಬಿಂಗ್ ಜೊತೆಗೆ ಹಾಡುಗಳನ್ನ ಬರೆದಿರುವ ವರದರಾಜ್ ಚಿಕ್ಕಬಳ್ಳಾಪುರ ಮತ್ತೆ ಮದುವೆ ಸಿನಿಮಾಗೆ ಬಹಳ ಅಚ್ಚುಕಟ್ಟಾಗಿ ಡಬ್ಬಿಂಗ್ ಜೊತೆಗೆ ಅದ್ಭುತ ಹಾಡುಗಳನ್ನ ಕನ್ನಡದಲ್ಲಿ ಬರೆದಿದ್ದಾರೆ. ಇವರ ಸಹಾಯದಿಂದ ಮತ್ತೆ ಮದುವೆ ಚಿತ್ರದ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ ಎಂದರು.
ಪವಿತ್ರಾ ಲೋಕೇಶ್ ಮಾತನಾಡಿ, ವಿಜಯ್ ಕೃಷ್ಣ ಮೂವೀಸ್ ಮತ್ತೆ ಲಾಂಚ್ ಮಾಡಿ ಒಳ್ಳೆ ಸಿನಿಮಾ ಮಾಡಬೇಕು. ಈ ಬ್ಯಾನರ್ ನಲ್ಲಿ ಹಿಂದೆ ಬಂದ ಸಿನಿಮಾಗಳು ಮೆಸೇಜ್ ಓರಿಯೆಂಟೆಡ್ ಆಗಿತ್ತು. ಸಮಾಜಕ್ಕೆ ಒಳ್ಳೆ ವಿಷಯ ತಲುಪಿಸುವ ಕೆಲಸ ಮಾಡಿದ್ದರು. ವಿಜಯ್ ಕೃಷ್ಣ ಮೂವೀಸ್ ನಡಿ ಮತ್ತೊಂದು ಮೆಸೇಜ್ ಕೊಡುವಂತಹ ಸ್ಟ್ರಾಂಗ್ ಸಿನಿಮಾ ಮಾಡಬೇಕು ಎಂಬುವುದು ನರೇಶ್ ಅವರ ಉದ್ದೇಶವಾಗಿತ್ತು. ಮತ್ತೆ ಮದುವೆ ಕಥೆಯನ್ನು ಎಂ ಎಸ್ ರಾಜು ಅವರು ತಂದಾಗ ಕನ್ನಡದಲ್ಲಿಯೂ ಮಾಡಬೇಕು ಎಂದು ತೀರ್ಮಾನ ಮಾಡಿದೆವು. ತೆಲುಗು ಕನ್ನಡ ಎರಡು ಭಾಷೆಯಲ್ಲಿಯೂ ಒಟ್ಟಿಗೆ ಪ್ರಚಾರ ಮಾಡಲು ಕಷ್ಟವಾಗುತ್ತದೆ ಎಂದು ಮೊದಲ ತೆಲುಗಿನಲ್ಲಿ ಸಿನಿಮಾ ರಿಲೀಸ್ ಮಾಡಿದೆವು. ಜೂನ್ 9ಕ್ಕೆ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಒಳ್ಳೊಳ್ಳೆ ಸಾಂಗ್ಸ್ ಇದೆ. ಒಳ್ಳೆ ಮೆಸೇಜ್ ಎಂದರು.
ಮತ್ತೆ ಮದುವೆ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜೂನ್ 9ರಂದು ಮತ್ತೆ ಮದುವೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ “ಯಾವ ಮೋಹನ ಮುರಳಿ ಕರೆಯಿತು” ಎಂಬ ಹಾಡು ಬಹಳ ಜನಪ್ರಿಯ. ಈಗ ಈ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚಿಗೆ “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
“ಯಾವ ಮೋಹನ ಮುರಳಿ ಕರೆಯಿತು” ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ.
ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಮೂರು ಹಾಡುಗಳಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರವೆಂದರು ನಿರ್ದೇಶಕ ವಿಶ್ವಾಸ್ ಕೃಷ್ಣ.
ನಾನು ಉದ್ಯಮಿ. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದೇನೆ. ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದರು.
ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ, ನಾಯಕ ಮಾಧವ, ನಾಯಕಿ ಸ್ವಪ್ನಾ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ಹಾಗೂ ಸಂಗೀತ ನಿರ್ದೇಶಕ ಅನಿಲ್ ಸಿ ಜೆ ಚಿತ್ರದ ಕುರಿತು ಮಾತನಾಡಿದರು. ಪತ್ರಿಕಾಗೋಷ್ಠಿಗೆ ರಾಕಿ(ಶ್ವಾನ) ಕೂಡ ಆಗಮಿಸಿತ್ತು. ರಾಕಿ ಟ್ರೈನರ್ ಸ್ವಾಮಿ, ರಾಕಿಯ ದಿನಚರಿ ಬಗ್ಗೆ ವಿವರಣೆ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ಬಣ್ಣದ ಕನಸು ಹೊತ್ತು ಬರುವವರಿಗೇನು ಕಮ್ಮಿ ಇಲ್ಲ. ದಿನ ಕಳೆದಂತೆ ಇಲ್ಲಿ ನೂರಾರು ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಗಂಧದಗುಡಿಯಲ್ಲಿ ಗಟ್ಟಿನೆಲೆ ಕಾಣಬೇಕೆಂಬ ಬಯಕೆ ಎಲ್ಲರಲ್ಲೂ ಇದೆ. ಅಂಥದ್ದೊಂದು ಬಯಕೆ, ಹಂಬಲ ಹೊತ್ತು ಬಂದ ಯುವ ನಟಿಯರ ಪೈಕಿ ಸ್ವಪ್ನ ಎಂಬ ಹಾಲುಗಲ್ಲದ ಹುಡುಗಿಯೂ ಒಬ್ಬಳು.
ಹೌದು, ಸ್ವಪ್ನ ಕನ್ನಡಕ್ಕೆ ಹೊಸ ಹುಡುಗಿಯಲ್ಲ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸಿಕ್ಕ ಪಾತ್ರಗಳ ಮೂಲಕ ಗಮನಸೆಳೆದವರು. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದರೂ, ಸ್ವಪ್ನ ಅವರು ಆಯ್ಕೆಯಲ್ಲಿ ಎಚ್ಚರ ತಪ್ಪಲಿಲ್ಲ. ಇದುವರೆಗೂ ಮಾಡಿದ ಸಿನಿಮಾಗಳ ಪಾತ್ರಗಳ ಮೇಲೆ ಸ್ವಪ್ನಗೆ ಖುಷಿ ಇದೆ. ಈಗ ನಾಯಕಿಯಾಗಿ ನಟಿಸಿರುವ ಆರೇಳು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ.
ಬೇಬಿ ಪ್ರಕೃತಿ, ರಾಕಿ
ಸ್ವಪ್ಪ ನಾಯಕಿಯಾಗಿ ಅಭಿನಯಿಸಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಈಗ ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಸಿನಿಮಾ ಬಗ್ಗೆ ಸ್ವಪ್ನ ಅವರಿಗೆ ಅತೀವ ವಿಶ್ವಾಸ. ಕಾರಣ ಸಿನಿಮಾ ಕಥೆ ಹಾಗು ಗಟ್ಟಿ ಪಾತ್ರ. ಈ ಕುರಿತು ‘ಸಿನಿ ಲಹರಿ’ ಜೊತೆ ಸ್ವಪ್ನ ತಮ್ಮ ಸಿನಿ ಜರ್ನಿ ಕುರಿತು ಮಾತಾಡಿದ್ದಾರೆ.
ಸ್ವಪ್ನ
ಓವರ್ ಟು ಸ್ವಪ್ನ…
‘ನಾನು ಮೂಲತಃ ಮಂಗಳೂರಿನ ಹುಡುಗಿ. ತಂದೆ ಮಂಗಳೂರಿನವರು. ತಾಯಿ ಉತ್ತರ ಕರ್ನಾಟಕದವರು. ಹುಬ್ಬಳ್ಳಿ ಸಮೀಪದ ನವಲಗುಂದದಲ್ಲೇ ಹೆಚ್ಛು ಆಡಿ, ಓದಿ ಬೆಳೆದವಳು.
ಬೆಳ್ಳಿಪರದೆಗೆ ಬರಲು ಕಾರಣ?
ಇಷ್ಟಕ್ಕೂ ನನಗೆ ಸಿನಿಮಾಗೆ ಬರಬೇಕು ಅಂತ ಆಸೆಯೇನೂ ಇರಲಿಲ್ಲ. ಆದರೆ, ನನಗೆ ಒಬ್ಬರು ಸಿನಿಮಾ ವಿಚಾರದಲ್ಲೇ ಹರ್ಟ್ ಮಾಡಿದರು. ಅದೊಂದೇ ಕಾರಣಕ್ಕೆ ನಾನೇಕೆ ಇಲ್ಲಿ ಬಂದು ನಿಲ್ಲಬಾರದು ಅಂತ ಚಾಲೆಂಜ್ ಮಾಡಿ ಒಬ್ಬ ನಟಿಗೆ ಬೇಕಾದ ನಟನಾ ತರಬೇತಿ ಸೇರಿದಂತೆ ಸಿನಿಮಾಗೆ ಇರಬೇಕಾದ ಒಂದಷ್ಟು ಅರ್ಹತೆ ಪಡೆದು ಸಿನಿಮಾ ಪ್ರವೇಶಿಸಿದೆ. ಆರಂಭದಲ್ಲಿ ನಾನು ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗಲೇ ತುಳು ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ತು.
ಆದರೆ, ಆ ಸಿನಿಮಾ ನಿಂತು ಹೋಯ್ತು. ಅಲ್ಲೊಂದಷ್ಟು ಅವಮಾನಗಳೂ ಆದವು. ಕೊನೆಗೆ ನಾನು ನಟಿ ಆಗಲೇಬೇಕು ಅಂತ ಡಿಸೈಡ್ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂತು. ಮೊದಲು ‘ನಾನು ನನ್ನ ಹುಡುಗಿ’ ಎಂಬ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ತು ಆದರೆ, ಆ ಸಿನಿಮಾನೂ ನಿಂತು ಹೋಯ್ತು. ಅದೇ ಸಿನಿಮಾ ನಿರ್ದೇಶಕರು ಮತ್ತೊಂದು ಸಿನಿಮಾ ಮಾಡಿದ್ರು. ಅಲ್ಲಿ ನಟಿಸೋ ಅವಕಾಶ ಸಿಕ್ತು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯ್ತು.
ಈ ಸಿನಿಮಾರಂಗಕ್ಕೆ ಬಂದಿದ್ದು ಖುಷಿ ಇದೆ. ಕಲರ್ ಫುಲ್ ಜಗತ್ತು ಇದು. ಕಲರ್ ಫುಲ್ ಆಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಅದಮ್ಯ ಆಸೆ ಇದೆ. ಆರು ವರ್ಷಗಳ ಈ ಜರ್ನಿಯಲ್ಲಿ ಸಿನಿಮಾ ಸಾಕಷ್ಟು ಕಲಿಸಿಕೊಟ್ಟಿದೆ. ಒಳ್ಳೆಯ ಮತ್ತು ಕೆಟ್ಟ ಅನುಭವವೂ ಆಗಿದೆ. ಇಲ್ಲೀಗ ಗಟ್ಟಿನೆಲೆ ಕಾಣಬೇಕು ಅಂತ ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಒಳ್ಳೊಳ್ಳೆಯ ಕಥೆ ಮತ್ತು ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.
ಬೇಸರ ಆಗಿದ್ದುಂಟು…
ಆರಂಭದಲ್ಲಿ ಸಿಕ್ಕ ಪಾತ್ರಗಳನ್ನು ಮಾಡುತ್ತಿದ್ದೆ. ಹೀರೋಯಿನ್ ಆಗುವ ತುಡಿತ ಇತ್ತು. ಆದರೆ, ಕೆಲ ನಿರ್ದೇಶಕರ ದೃಷ್ಟಿಯಲ್ಲಿ ನಾನು ಹೀರೋಯಿನ್ ಮೆಟೀರಿಯಲ್ ಆಗಿರಲಿಲ್ಲ. ಆಮೇಲೆ ಹೀರೋಯಿನ್ ಆಗಲೇಬೇಕು ಅಂತ ವರ್ಕೌಟ್ ಶುರು ಮಾಡಿದೆ. ಸಿನಿಮಾ ನಾಯಕಿ ಆಗುವ ಎಲ್ಲ ಅರ್ಹತೆ ಪಡದುಕೊಂಡೆ. ಅಲ್ಲಿಂದ ಮೂರ್ನಾಲ್ಕು ಸಿನಿಮಾಗಳಿಗೆ ನಾಯಕಿ ಅದೆ. ಒಮ್ಮೊಮ್ಮೆ ನನಗೆ ಈ ಇಂಡಸ್ಟ್ರಿ ಬೇಸರ ತರಿಸಿದ್ದು ನಿಜ. ಅವಕಾಶ ಮಿಸ್ ಆದಾಗೆಲ್ಲ ಬೇಜಾರು ಆಗುತ್ತಿತ್ತು. ಆದರೂ, ತಾಳ್ಮೆಯಿಂದಲೇ ಅವಕಾಶ ಪಡೆದೆ. 19 ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡುತ್ತ ಅನುಭವ ಪಡೆದೆ. ಈಗ ಆರು ಸಿನಿಮಾಗಳಲ್ಲಿ ನಾಯಕಿಯಾಗಿದ್ದೇನೆ. ‘ಡವ್ ಮಾಸ್ಟರ್’ ಸಿನಿಮಾ ಪಾತ್ರ ಚೆನ್ನಾಗಿದೆ. ಅಲ್ಲಿ ಕಥೆಯೇ ಹೈಲೆಟ್. ಇನ್ನು, ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಗ್ಗೆ ಹೇಳಲೇಬೇಕು. ಇದು ನನಗೆ ಮಾತ್ರವಲ್ಲ, ಇಡೀ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಭವ್ಯ ಭರವಸೆ ಇದೆ.
ಈ ಚಿತ್ರ ಭಾವನೆಗಳ ಗುಚ್ಛ
‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಇಷ್ಟ ಆಗೋಕೆ ಕಾರಣ ಕಥೆ ಮತ್ತು ಪಾತ್ರ. ಅಲ್ಲಿ ಎಮೋಷನ್ಸ್ ಇದೆ, ಭಾವನೆಗಳಿವೆ, ಭಾವುಕತೆ ಇದೆ, ಸಂಬಂಧಗಳ ಮೌಲ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಗುಣ ಇದೆ. ನಾನಿಲ್ಲಿ ವಿಕಲಚೇತನ ಮಗಳ ತಾಯಿಯಾಗಿ ನಟಿಸಿದ್ದೇನೆ. ಅದೊಂದು ತೂಕದ ಪಾತ್ರ. ಇಡೀ ಸಿನಿಮಾದಲ್ಲಿ ಬದುಕಿನ ಅರ್ಥವಿದೆ. ಭಾವನೆಗಳ ಗುಚ್ಛವಿದೆ. ಅ ಕಾರಣಕ್ಕೆ ಈ ಸಿನಿಮಾಒಪ್ಪಿಕೊಂಡೆ. ಸದ್ಯ ಸಿನಿಮಾದ ಟೀಸರ್ ಮತ್ತು ಲಿರಿಕಲ್ ಸಾಂಗ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರಾಕಿ ಹವಾ ಜೋರು!
‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾದ ಸ್ಪೆಷಲ್ ಅಂದ್ರೆ ರಾಕಿ. ಇಡೀ ಚಿತ್ರದ ಕೇಂದ್ರ ಬಿಂದು ರಾಕಿ. ರಾಕಿ ಅಂದರೆ ಶ್ವಾನದ ಹೆಸರು. ನನ್ನ ಮಗಳು ಮತ್ತು ರಾಕಿ ನಡುವಿನ ಸಂಬಂಧ ಮತ್ತು ಅವರಿಬ್ಬರ ಬದುಕಿನ ಉತ್ಸಾಹವೇ ಜೀವಾಳ. ಶೂಟಿಂಗ್ ವೇಳೆ ನಾವುಗಳು ಟೇಕ್ ತೆಗೆದುಕೊಂಡರೆ, ರಾಕಿ ಮಾತ್ರ ಒಂದೇ ಟೇಕ್ ಓಕೆ ಮಾಡುತ್ತಿದ್ದ. ಸೋ ಆ ಕ್ಷಣಗಳೇ ಮರೆಯದ ಅನುಭವ. ಸಿನಿಮಾ ಶೂಟಿಂಗ್ ಅನಿಸಲಿಲ್ಲ ಫ್ಯಾಮಿಲಿ ಟ್ರಿಪ್ ಥರಾ ಇತ್ತು. ಅದಕ್ಕೆ ಕಾರಣ ಟೀಮ್ ಮತ್ತು ಪ್ರೊಡಕ್ಷನ್ ಹೌಸ್. ನಿರ್ಮಾಪಕ ಶರಣಪ್ಪ ಹಾಗು ನಿರ್ದೇಶಕ ವಿಶ್ವಾಸ್ ಕೊಟ್ಟ ಸಹಕಾರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.
ಖಳನಟಿ ಪಾತ್ರಕ್ಕೂ ರೆಡಿ
ನನಗೆ ಬಾಲಿವುಡ್ ನಟಿ ರೇಖಾ ಅವರು ರೋಲ್ ಮಾಡೆಲ್. ಇನ್ನು ನನಗೆ ಚಾಲೆಂಜ್ ಎನಿಸುವ ಪಾತ್ರ ಮಾಡುವಾಸೆ. ಅದರಲ್ಲೂ ವಿಲನ್ ಇದ್ದರಂತೂ ಓಕೆ. ಈಗಾಗಲೇ ಕ್ಲಾಂತ ಎಂಬ ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ನಾಯಕಿಯಷ್ಟೇ ಪ್ರಬಲ ಪಾತ್ರವದು.
ಕನ್ನಡ ಮಾತ್ರವಲ್ಲ, ಪರಭಾಷೆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಕಂಟೆಂಟ್ ಇದ್ದರೆ ಅಲ್ಲೂ ಹೋಗೋಕೆ ರೆಡಿ. ಇನ್ನು, ನಟನೆ ಜೊತೆ ನಾನು ಹಾಡ್ತೀನಿ ಕೂಡ. ಅದರಲ್ಲೂ ಜನಪದ ಮಾತ್ರ. ಜೊತೆಗೆ ನಿರ್ದೇಶನದ ಮೇಲೂ ಒಲವಿದೆ. ಒಂದೆರೆಡು ಕಥೆ ಕೂಡ ಬರೆದಿಟ್ಟುಕೊಂಡಿದ್ದೇನೆ. ಆ ಟೈಮ್ ಗಾಗಿ ಕಾಯುತ್ತಿದ್ದೇನೆ.
ಈಗ ರಿಲೀಸ್ ಗೆ ಏಳು ಸಿನಿಮಾಗಳಿವೆ. ಒಂದಷ್ಟು ಕಥೆ ಕೇಳುತ್ತಿದ್ದೇನೆ. ಸದ್ಉ ಯಾವ ಮೋಹನ ಮುರಳಿ ಕರೆಯಿತು ಮೇಲೆ ಹೆಚ್ಚು ನಿರೀಕ್ಷೆ ಇದೆ.