ಹಿಮಾಲಯ ತಪ್ಪಲಲ್ಲಿ ಜೋಗಪ್ಪ! ಕೊರೆವ ಚಳಿಯಲ್ಲಿ ಮುಗಿದ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರೀಕರಣ

‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕ ನಟನಾಗಿ ನಟಿಸುತ್ತಿರುವ, ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸುವ ಹಯವದನ ಸಾರಥ್ಯದಲ್ಲಿ ಮೂಡಿಬರ್ತಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿ, ಒಂದು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಬಾಕಿ ಉಳಿಸಿಕೊಂಡಿದೆ.

ನಿರ್ದೇಶಕ ಹಯವದನ ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗದಲ್ಲಿ ಸಿನಿಮಾವನ್ನು ಚಿತ್ರೀಕರಿಸಬೇಕೆಂಬ ಕನಸು ಇಟ್ಟುಕೊಂಡಿದ್ದರು. ಅದರಂತೆ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ ಕೊರೆಯುವ ಚಳಿಯಲ್ಲಿಯೂ ಎಲ್ಲೋ ಜೋಗಪ್ಪ ನಿನ್ನರಮನೆ’ವನ್ನು ಶೂಟಿಂಗ್ ನಡೆಸಿದ್ದಾರೆ. ಸುಂದರ ಸ್ಥಳಗಳಲ್ಲಿ ಸಿನಿಮಾ ಶೂಟ್ ಮಾಡಿರುವ ಖುಷಿ ಚಿತ್ರತಂಡದಲ್ಲಿದೆ. ಶೂಟಿಂಗ್ ಮುಗಿಸಿ ಈಗ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಬಳಗ ಮಾತಿನ ಜೋಡಣೆ ಕೆಲಸದಲ್ಲಿ ನಿರತರಾಗಿದ್ದಾರೆ.

ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್‌. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ತಾರಾಬಳಗದಲ್ಲಿದ್ದಾರೆ.. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ.

ರವಿ ಮುದ್ದಿ, ವಿಕ್ರಮ ಹಾತ್ವಾರ್, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆದಷ್ಟು ಬೇಗ ಎಲ್ಲಾ ಕೆಲಸವನ್ನು ಮುಗಿಸಿ ಸೆಪ್ಟಂಬರ್ ಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!