Categories
ಸಿನಿ ಸುದ್ದಿ

ಯುವ ನಿರ್ದೇಶಕನ ಕಣ್ಣಲ್ಲಿ ಸಿನಿಮಾ ಉದಯ! ಡೈರೆಕ್ಟರ್ ಆಗಲು ಹಂಬಲಿಸೋ ಮನಸ್ಸಿನ ಒಳಗಿರುವ ಕಥೆ ವ್ಯಥೆ ಇದು

ಸ್ಟಾರ್ಟ್, ಕ್ಯಾಮೆರಾ, ಸೌಂಡ್, ಆಕ್ಷನ್…

ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಿರ್ದೇಶಕ, ದೇವಸ್ಥಾನಕ್ಕೆ ಹೋಗಿ ಕೈ ಮುಗಿತಾನೋ ಇಲ್ವೋ ಗೊತ್ತಿಲ್ಲ. ಆದರೆ, ಚಿತ್ರಮಂದಿರಕ್ಕೆ ಖಂಡಿತ ಕೈ ಮುಗಿದೇ ಹೋಗ್ತಾನೆ. ಯಾಕೆಂದರೆ, ಆ ಥಿಯೇಟರ್ ಗಳೇ ಅವರಿಗೆ ದೇವಸ್ಥಾನ. ಎಷ್ಟೋ ಕಥೆ, ಚಿತ್ರಗಳು ಆ ದೇವಸ್ಥಾನದ ಹೊಸಲು ಮೆಟ್ಟಲಾಗದೆ ಅವರ ಹಾಳೆಗಳ ಮೇಲೇ ಹಾಗೆ ಉಳಿದು ಬಿಡುತ್ತವೆ…

ಈ ಬಣ್ಣದ ಲೋಕಕ್ಕೆ ಬರುವವರ ಸಂಖ್ಯೆ ಕಮ್ಮಿ ಏನಿಲ್ಲ. ದಿನ ಕಳೆದಂತೆ ನೂರಾರು ಆಸೆ-ಆಕಾಂಕ್ಷೆ ಹೊತ್ತು ಬೆಟ್ಟದಷ್ಟು ಕನಸು ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಡುತಲೇ ಇದ್ದಾರೆ. ಆ ಸಾಲಿಗೆ ಉದಯಶಂಕರ್ ಎಂಬ ಪ್ರತಿಭೆ ಕೂಡ ಸೇರಿದೆ. ಹೌದು, ಕಳೆದ ಏಳೆಂಟು ವರ್ಷಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ದುಡಿದು ತಾನೂ ನಿರ್ದೇಶಕನಾಗಬೇಕು ಅಂತ ರಾತ್ರಿ ಹಗಲು ಕನಸು ಕಾಣುತ್ತಿರುವ ಯುವ ನಿರ್ದೇಶಕ ಇವರು.

ಎಲ್ಲಾ ಯುವ ನಿರ್ದೇಶಕರಂತೆ ಕಂಗಳ ತುಂಬ ಆಸೆ ಹೊತ್ತು ಮಾಗಡಿ ಸಮೀಪದ ದೋಣ ಕುಪ್ಪೆ ಗ್ರಾಮದಿಂದ ಬಂದ ಉದಯ ಶಂಕರ್ ಈಗ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದರ ಹೆಸರು ‘ಸಿನಿಮಾ’. ಹದಿನಾಲ್ಕು ನಿಮಿಷದ ಈ ಸಿನಿಮಾ ಕಿರುಚಿತ್ರ, ಸಿನಿಮಾ ಮಾಡಬೇಕು ಅಂತ ಹಂಬಲಿಸುವ ಒಬ್ಬ ಯುವ ನಿರ್ದೇಶಕನ ಕಥೆ ಮತ್ತು ವ್ಯಥೆ.

ತಮ್ಮಕಿರುಚಿತ್ರ ಸಿನಿಮಾ ಕುರಿತು ಹೇಳುವ ನಿರ್ದೇಶಕ ಉದಯಶಂಕರ್, ‘ನಾನು ನಿರ್ದೇಶಕನಾಗಬೇಕು ಅಂತಾನೆ ಕಳೆದ ಏಳೆಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಕೆಲಸ‌ ಮಾಡುತ್ತಿದ್ದೇನೆ. ರಾಘವೇಂದ್ರ ರಾಜಕುಮಾರ್ ಅಭಿನಯದ ‘ಆಧುನಿಕ‌ ಶ್ರವಣ ಕುಮಾರ’ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೇನೆ.

ಆ ಅನುಭವದ ಮೇಲೆ ‘ ಇವತ್ತೇ ಲಾಸ್ಟ್ ನಾಳೆಯಿಂದ ಎಣ್ಣೆ ಹೊಡೆಯಲ್ಲ’ ಎಂಬ ಕಿರುಚಿತ್ರ ನಿರ್ದೇಶಿಸಿದೆ. ಅದಾದ ಬಳಿಕ ಈಗ ‘ ಸಿನಿಮಾ’ ಎಂಬ ಮತ್ತೊಂದು ಕಿರುಚಿತ್ರ ನಿರ್ದೇಶಿಸಿದ್ದೇನೆ. ಸದ್ಯ ಈ ಸಿನಿಮಾ ಈಗ ಭಗತ್ ಎಂಟರ್ಟೈನ್ಮೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು ಎಲ್ಲೆಡೆಯಿಂದ ಉತ್ತಮ ಮೆಚ್ಚುಗೆ ಸಿಗುತ್ತಿದೆ.

ನನಗೆ ಉಪೇಂದ್ರ ಸ್ಫೂರ್ತಿ

ಇಷ್ಟಕ್ಕೂ ನಾನು ಸಿನಿಮಾ ರಂಗ ಪ್ರವೇಶ ಮಾಡಲು ನಟ, ನಿರ್ದೇಶಕ ಉಪೇಂದ್ರ ಅವರು ಕಾರಣ. ಅವರೇ ನನಗೆ ಸ್ಫೂರ್ತಿ. ಸುನಿಮಾ ನೋಡುವ ಆಸಕ್ತಿ ಇತ್ತು. ಹಾಗೆ ನೋಡ್ತಾ ನೋಡ್ತಾನೇ ಉಪೇಂದ್ರ ಅವರು ಸ್ಫೂರ್ತಿಯಾದರು. ಹಾಗಾಗಿ ನಾನು ಸಿನಿಮಾ ರಂಗಕ್ಕೆ ಬಂದೆ. ಈಗಷ್ಟೇ ಶಾರ್ಟ್ ಫಿಲ್ಮ್ ಮಾಡುವ ಮೂಲಕ ಅನುಭವ ಪಡೆಯುತ್ತಿದ್ದೇನೆ. ಮುಂದೆ ಅನಂತ್ ನಾಗ್ ಅವರಿಗೊಂದು ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದೇನೆ.

ಮೂಲತಃ ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಕಲಾವಿದನಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ಆಕರ್ಷಣೆ ಹೆಚ್ಚಾಗಿ ನಿರ್ದೇಶನ ಮಾಡಲು ಅಣಿಯಾಗುತ್ತಿದ್ದೇನೆ.

ಇನ್ನು, ಸಿನಿಮಾ ಮಾಡೋದು ಸುಲಭವಲ್ಲ. ಇಲ್ಲಿ ನಿರ್ಮಾಪಕರನ್ನು ಹುಡುಕಿ ಕಥೆ ಹೇಳಿ ಒಪ್ಪಿಸೋದು ಕಷ್ಟದ ಕೆಲಸ. ನಿತ್ಯವೂ ನಿರ್ಮಾಪಕರ‌ ಮನೆ ಮನೆಗೆ ಅಲೆದಾಡಿದರೂ ಕಷ್ಟ. ಇವತ್ತು ನಾಳೆ ಎನ್ನುತ್ತಲೇ ನಿರ್ದೇಶಕರ ತಾಳ್ಮೆಗೆಡಿಸುತ್ತಾರೆ. ನನಗೂ ಅಂತಹ ಅನುಭವ ಆಗಿದೆ. ಅದೇ ಅನುಭವ ಇಟ್ಟುಕೊಂಡೇ ‘ಸಿನಿಮಾ’ ಕಿರುಚಿತ್ರ ಮಾಡಿದ್ದೇನೆ. ಇಲ್ಲೂ ನಿರ್ದೇಶಕನಾಗೋಕೆ ಎಷ್ಟೆಲ್ಲಾ ಒದ್ದಾಟಗಳಿವೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ.

ಇನ್ನು, ಪ್ರಮುಖ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ನಟಿಸಿದ್ದಾರೆ. ನಿರ್ದೇಶಕನ ಕನಸು ಕಾಣುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನನ್ನ ತಾಯಿ ಪಾತ್ರದಲ್ಲಿ ನಟಿ ಮಂಜುಳಾರೆಡ್ಡಿ ಅವರು ಅಭಿನಯಿಸಿದ್ದಾರೆ. ಅವರು ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಉಳಿದಂತೆ ಮಹೇಶ್, ಸವಿತ, ವಿನಯ್, ಹೇಮಂತ್ ನಟಿಸಿದ್ದಾರೆ.

ಅಶೋಕ್ ರಾಜ್ ‘ಸಿನಿಮಾ’ ಕಣ್ಣಾದರೆ, ಅರ್ಜುನ್ ಸಂಗೀತವಿದೆ. ಮಹೇಶ್ ನಿರ್ಮಾಣವಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ನಾನೇ ಬರೆದಿದ್ದೇನೆ ಎನ್ನುವ ಉದಯಶಂಕರ್ ಕನ್ನಡ ಸಿನಿಮಾ ರಂಗದಲ್ಲಿ ಸದಭಿರುಚಿಯ ಸಿನಿಮಾ ನಿರ್ದೇಶನ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ.

Categories
ಸಿನಿ ಸುದ್ದಿ

ಶಿವಣ್ಣ ಅಭಿನಯದ ಘೋಸ್ಟ್ ಶೂಟಿಂಗ್ ಮುಗೀತು: ಇದು ನಿರ್ದೇಶಕ ಶ್ರೀನಿ ಸಿನಿಮಾ

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಕ್ತಾಯವಾಗಿದೆ.

ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಶ್ರೀನಿ “ಬೀರ್ ಬಲ್” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಶ್ರೀನಿ “ಬೀರ್ ಬಲ್” ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಈ ಚಿತ್ರದಲ್ಲಿ “ಬೀರ್ ಬಲ್” ಪಾತ್ರದಲ್ಲಿ ಅಭಿನಯಿಸಿರುವುದು, “ಬೀರ್ ಬಲ್ ” ಭಾಗ 2 ಬರಬಹುದಾ ? ಎಂಬ ಪ್ರಶ್ನೆ ಮೂಡಿದೆ.

ಈಗಾಗಲೇ “ಘೋಸ್ಟ್” ಫಸ್ಟ್ ಲುಕ್, “BIG DADDY” ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ.

ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅನಿರುದ್ಧ ಸಿನಿಮಾಗೆ ಪೂಜೆ: ಶೆಫ್ ಚಿದಂಬರನಿಗೆ ಭಾರತಿ ವಿಷ್ಣುವರ್ಧನ್, ಉಪೇಂದ್ರ ಚಾಲನೆ

ನಟ ಅನಿರುದ್ಧ್ ನಾಯಕರಾಗಿ ನಟಿಸುತ್ತಿರುವ, ಎಂ.ಆನಂದರಾಜ್ ನಿರ್ದೇಶನದ “ಶೆಫ್ ಚಿದಂಬರ” ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಹಿರಿಯ ನಟಿ‌ ಭಾರತಿ ವಿಷ್ಣುವರ್ಧನ್ ಕ್ಯಾಮೆರಾ ಚಾಲನೆ ಮಾಡಿದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಆನಂದರಾಜ್, ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಅನಿರುದ್ಧ್ ಅವರು ಐದು ವರ್ಷಗಳ ನಂತರ ನಟಿಸುತ್ತಿರುವ ಚಿತ್ರವಿದು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭವಾಗಲಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ.

ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಬಿ.ಆರ್ ನವೀನ್ ಕುಮಾರ್ ಸೌಂಡ್ ಡಿಸೈನ್ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ ಎಂದು ವಿವರಣೆ ನೀಡಿದರು.

ನಿರ್ದೇಶಕರು ಹೇಳಿದ ಹಾಗೆ ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಕಾಮಿಡಿಯೊಂದಿಗೆ ಕೌತುಕವು ಇದೆ. ಒಂದು ಕೊಲೆಯ ಸುತ್ತ ಕಥೆ ನಡೆಯುತ್ತದೆ. ನಾನು ಶಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ . ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.‌ ಕಳೆದ ತಿಂಗಳು ಮೈಸೂರಿನ ಡಾ||ವಿಷ್ಣುವರ್ಧನ್ ಸಮಾಧಿ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ಅಂದು ಕೂಡ ಭಾರತಿ ಅಮ್ಮ ಅವರು ಆಗಮಿಸಿದ್ದರು. ಚಿತ್ರದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ನಿಮ್ಮ ಜೊತೆ ನಾನು ಇದ್ದೀನಿ ಎಂದು ಭರವಸೆ ನೀಡಿದರು.

ಮುಹೂರ್ತ ಸಮಾರಂಭಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಮಿಸಿ ಶುಭ ಕೋರಿದರು. ಎಲ್ಲರಿಗೂ ನನ್ನ ಧನ್ಯವಾದ.‌ ನಿರ್ಮಾಪಕಿ ರೂಪ ಅವರ ಪತಿ ಸರ್ವೋತ್ತಮ ಅವರು ನನ್ನ ಸ್ನೇಹಿತರು. ಅವರಿಗೆ ಕಥೆ ಇಷ್ಟವಾಗಿ , ನಿರ್ಮಾಣ‌ ಮಾಡುತ್ತಿದ್ದಾರೆ ಎಂದು ನಟ ಅನಿರುದ್ಧ್ ತಿಳಿಸಿದರು.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ರೂಪ.

ನಾಯಕಿಯರಾದ ನಿಧಿ ಸುಬ್ಬಯ್ಯ, ರೆಚೆಲ್ ಡೇವಿಡ್, ನಟ ರಘು ರಮಣ ಕೊಪ್ಪ ಹಾಗೂ ಛಾಯಾಗ್ರಹಕ ಉದಯ್ ಲೀಲ ಚಿತ್ರದ ಕುರಿತು ಮಾತನಾಡಿದರು.

ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ “ಯಜಮಾನ” ಚಿತ್ರದ ಮುಹೂರ್ತ ಸಮಾರಂಭ ನೆನಪಾಯಿತು. ಆ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು. ಈ ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಭಾರತಿ ವಿಷ್ಣುವರ್ಧನ್ ಹಾರೈಸಿದರು.

ಚಿತ್ರದ ಕ್ಯಾರೆಕ್ಟರ್ ಟೀಸರ್ ಉಪೇಂದ್ರ ಬಿಡುಗಡೆ ಮಾಡಿದರು. ಅನಿರುದ್ದ್ ಅವರ ಪತ್ನಿ ಕೀರ್ತಿ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸಮಂತಾ-ವಿಜಯ್ ದೇವರಕೊಂಡ ಫುಲ್ ಖುಷಿ! ಸಿನಿಮಾದ ಟ್ರೇಲರ್ ರಿಲೀಸ್ : ಪ್ರೀತಿ, ಪ್ರೇಮ, ಸಂಸಾರ ಜಗಳವೇ ಇಲ್ಲಿ ಹೈಲೆಟ್

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ.

ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ. ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ ಜಗಳ ಶುರುವಾಗುತ್ತದೆ. ಆಗಿದ್ದರೆ ಮುಂದೇನಾಗುತ್ತದೆ ಅನ್ನೋವುದನ್ನು ನೀವು ಸಿನಿಮಾದಲ್ಲಿ ನೋಡಬೇಕು.

ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾವಾಗಿರುವ ಖುಷಿಗೆ ಶಿವ ನಿರ್ವಣ ಆಕ್ಷನ್ ಕಟ್ ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.

ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಜ್ಯೂಲಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲಾ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರಕ್ಷಿತ್ ಸಿನಿಮಾದ ಟೈಟಲ್ ಟ್ರ್ಯಾಕ್ ಗೆ ಫ್ಯಾನ್ಸ್ ಫಿದಾ: ಸಪ್ತ ಸಾಗರದಾಚೆ ಎಲ್ಲೋ ನೋಡಲು ಕಾತರ

ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ ” ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಹಾಗೂ ಧನಂಜಯ್ ರಂಜನ್ ಬರೆದಿರುವ ಈ ಶೀರ್ಷಿಕೆ ಗೀತೆಯನ್ನು ಕಪಿಲ್ ಕಪಿಲನ್ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಸುಮಧುರ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

“ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಸೈಡ್ 1 ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದ್ದು, ಸೈಡ್ 2 ಅಕ್ಟೋಬರ್ 20ಕ್ಕೆ ತೆರೆ ಕಾಣಲಿದೆ. ಬಹು ನಿರೀಕ್ಷಿತ ಈ ಚಿತ್ರದ ಬಿಡುಗಡೆಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೇಮಂತ್ ಎಂ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯತಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ಸುನೀಲ್ ಭಾರದ್ವಾಜ್ ಸಂಕಲನ “ಸಪ್ತ. ಸಾಗರದಾಚೆ ಎಲ್ಲೋ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದಿಗಂತ್-ಧನ್ಯ ರಾಮ್ ಕುಮಾರ್ ಹಾಡಿನ ಜಡ್ಜ್ ಮೆಂಟ್! ಅದ್ಧೂರಿ ಹಾಡಿಗೆ ದೂದ್ ಪೇಡ ಸ್ಟೆಪ್

ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ), ಇಂದಿನ ಯುವಜನತೆಯ ಮಧ್ಯೆ ಟ್ರೆಂಡ್ ಆಗುವ “ಪಬ್ ಸಾಂಗ್” ಒಂದನ್ನು “ಡೆಕ್ ಆಫ್ ಬ್ರೆವ್ಯುಸ್” ಪಬ್ ನಲ್ಲಿ “ದ ಜಡ್ಜ್ ಮೆಂಟ್” ಚಿತ್ರಕ್ಕಾಗಿ ಅದ್ಧೂರಿಯಾಗಿ ಚಿತ್ರಿಸಿಕೊಂಡಿದ್ದಾರೆ.

ಈ ಹಾಡಿಗೆ ಹೆಜ್ಜೆ ಹಾಕಿದ್ದು ದಿಗಂತ್ ಮತ್ತು ಧನ್ಯ ರಾಮಕುಮಾರ್. ಇವರಿಬ್ಬರಿಗೂ ಜೊತೆಯಾದವರು ಕಲಾವಿದರಾದ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್. ಈ ಹಾಡಿಗಾಗಿ ಸುಮಾರು 75 ಜನ ನೃತ್ಯ ಕಲಾವಿದರು ಮತ್ತು 50 ಜನ ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಹಾಡನ್ನು ಸಂಯೋಜಿಸಿದ ಅನೂಪ್ ಸೀಳಿನ್ ಮತ್ತು ಹಾಡು ಬರೆದ ಪ್ರಮೋದ್ ಮರವಂತೆ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಹೊಸತನದ ಹಾಡಿಗಾಗಿ, ಬಾಲಿವುಡ್ ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾರವರನ್ನು, ಸಿನಿಮಾ ತಂಡ ವಿಶೇಷವಾಗಿ ಆಹ್ವಾನಿಸಿದ್ದರು. ಹಾಡಿನ ನೃತ್ಯ ಸಂಯೋಜನೆ ಮಾಡಿದ್ದು ಯುವ ನಿರ್ದೇಶಕ ರಾಮ್ ಕಿರಣ್ ಮತ್ತು ಅವರ ತಂಡ.

“ದ ಜಡ್ಜ್ ಮೆಂಟ್” ಕಥೆ ಲೀಗಲ್ ಥ್ರಿಲ್ಲರ್ ಶೈಲಿಯಾಗಿದ್ದು, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ)ಯವರ ಗಟ್ಟಿ ನಂಬಿಕೆ.

ಕ್ರೇಜಿ ಸ್ಟಾರ್ ಡಾ.ವಿ. ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ, ಪ್ರಮೋದ್ ಮರವಂತೆ ಗೀತರಚನೆ ಇದೆ.

ರವಿವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನವಿದೆ. ಎಂ ಎಸ್ ರಮೇಶ್
ಸಂಭಾಷಣೆ ಬರೆದಿದ್ದಾರೆ.
ಸ್ಕ್ರಿಪ್ಟ್ ಸೂಪರವೈಸರ್ ಆಗಿ ಪಿ. ವಾಸುದೇವ ಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ

Categories
ಸಿನಿ ಸುದ್ದಿ

ಇದು ಹರ್ಷ ಚಕಿತ ಕಥೆ: ಅಪ್ಪ ಮಗನ ಬಾಂಧವ್ಯ ಚಿತ್ರ

ತಂದೆ ಮಗನ ನಡುವಿನ ಪ್ರೀತಿ, ಬಾಂಧವ್ಯದ ಕಥೆಯನ್ನು ಹೇಳುವ ಚಿತ್ರ ಹರ್ಷ. ಸೋಮು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಈಗಾಗಲೇ ಈ ಚಿತ್ರದ ಚಿತ್ರೀಕರಣವು ಕೊನೆಯ ಹಂತವನ್ನು ತಲುಪಿದೆ, ಒಂದು ಪರಿಣಾಮಕಾರಿ ಮಕ್ಕಳ ಕಥೆಯೊಂದಿಗೆ ಕನ್ನಡ ಪ್ರೇಕ್ಷಕರ ಮನರಂಜಿಸಲು ನಿರ್ದೇಶಕ ಸೋಮಶೇಖರ್ ಅವರು ಈ ಚಿತ್ರದ ಮೂಲಕ ಪ್ರಯತ್ನಿಸಿದ್ದಾರೆ. ನಿರ್ದೇಶಕರೇ ಚಿತ್ರದ ಕಥಾಹಂದರ ಹೆಣೆದಿದ್ದು, ರಾಘವೇಂದ್ರ ಬಿ. ಮೈಸೂರು ಅವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಸಹ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಹರ್ಷ ಅವರು ಕಾಣಿಸಿಕೊಂಡಿದ್ದು, ಈ ಪಾತ್ರದ ಸುತ್ತ ಇಡೀ ಕಥೆ ಸಾಗುತ್ತದೆ. ತಂದೆಯ ಪಾತ್ರದಲ್ಲಿ ಹಿರಿಯನಟ ಶಂಕರ್ ಅಶ್ವಥ್ ಅವರು ನಟಿಸಿದ್ದಾರೆ,

ಚಿತ್ರದ ನಾಯಕನಾಗಿ ಪ್ರಪುಲ್ ಸುರೇಂದ್ರ ನಟಿಸಿದ್ದು, ನಾಯಕಿ ಪಾತ್ರದಲ್ಲಿ ಮಾನಸಗೌಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಂಗೀತ, ಮೈತ್ರಿ, ಸುನಿಲ್ ಬನವಾಶಿ, ಸಂಜು, ಮಾದೇಗೌಡ ಹೆಗ್ಗಡದೇವನಕೋಟೆ, ಮನೋಜ್ ಷಡಕ್ಷರಿ, ರವಿಕುಮಾರ್ S. ಗೆಂಡೆ, ದೀಪ, ಖುಷಿ, ಸೇರಿದಂತೆ ಸಾಕಷ್ಟು ಯುವ ಕಲಾವಿದರ ತಾರಾಬಳಗವನ್ನು ಈ ಚಿತ್ರ ಒಳಗೊಂಡಿದೆ.

ಸಮೃದ್ಧಿ ರಾಘವೇಂದ್ರ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಶಿಧರ್ ಎ. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಕೊಟ್ರೇಶ್. ಪಾ. ಅರುಣಾ ಅವರ ಛಾಯಾಗ್ರಹಣ. ಮಾದೇಗೌಡ ಹೆಗ್ಗಡದೇವನ ಕೋಟೆ, ಮನೋಜ್ ಷಡಕ್ಷರಿ. ರವಿ ಶೇರ್ ಬಹದ್ದೂರ್ ಅವರ ಸಹಾಯಕ ನಿರ್ದೇಶನ, ಅತೀಶಯ್ ಜೈನ್ ಅವರ ಸಂಗೀತ ನಿರ್ದೇಶನ, ಗಿರೀಶ್.ಎ.ಪಿ ಅವರ ಸಾಹಸ,
ಸುಧಾಕರ್ ಗಂಗಾವತಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಹಾಡಲ್ಲೂ ಫೈಟ್ ಮಾಡಿದ ಅನ್ ಲಾಕ್ ರಾಘವ

ಚಿತ್ರೀಕರಣ ಶುರುವಾದಾಗಿನಿಂದಲೂ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಚಂದನವನದ ಚಿತ್ರಗಳಲ್ಲಿ ಒಂದು ‘ಅನ್‌ಲಾಕ್ ರಾಘವ’. ಈಗಾಗಲೇ ಡಬ್ಬಿಂಗ್ ಮುಗಿಸಿರುವ “ಅನ್‌ಲಾಕ್ ರಾಘವ” ಚಿತ್ರದ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಭರದಿಂದ ಸಾಗಿದೆ. ವಿಶೇಷವೆಂದರೆ ಈ ಸಿನಿಮಾದ ಫೈಟ್‌ಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ.


“ಈ ಚಿತ್ರದಲ್ಲಿ ನಾಲ್ಕೂವರೆ ಫೈಟ್ ಗಳಿವೆ. ಈ ಅರ್ಧ ಫೈಟ್ ಒಂದು ಹಾಡಿನ ನಡುವೆ ಬರುತ್ತದೆ. ಚಿತ್ರಕತೆಯ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ, ಆ ಸೀಕ್ವೆನ್ಸ್ ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಇನ್ ಕಾರ್ಪೋರೇಟ್ ಮಾಡಿದಾಗ ಈ ಸೀಕ್ವೆನ್ಸ್ ತುಂಬಾ ಬ್ಯೂಟಿಫುಲ್ ಆಗಿ ಮೂಡಿ ಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಆ ಹಾಡನ್ನು ನೋಡಿ, ಬಹಳ ಮೆಚ್ಚಿದ್ದಾರೆ. ಜೊತೆಗೆ ಆ ಹಾಡು, ಸಿನಿಮಾದ ಟ್ರಂಪ್ ಕಾರ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಈ ಆಲೋಚನೆಗೆ ಸಾಥ್ ಕೊಟ್ಟ ನಿರ್ಮಾಪಕರಾದ ಮಂಜುನಾಥ ಡಿ ಅವರು, ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್, ಡಿಒಪಿ ಲವಿತ್, ಸಾಹಸ ನಿರ್ದೇಶಕರಾದ ಅರ್ಜುನ್ ಮಾಸ್ಟರ್, ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಎಡಿಟರ್ ಅಜಯ್ ಎಲ್ಲರಿಗೂ ತುಂಬಾ ಥ್ಯಾಂಕ್ಸ್.. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಹಾಡಿರುವ ಸಾಯಿ ವಿಘ್ನೇಶ್ ಈ ಹಾಡನ್ನು ಹಾಡಿರುವುದು ಮತ್ತೊಂದು ವಿಶೇಷ” ಎಂದಿದ್ದಾರೆ ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ.


ಎಡಿಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ಗೆ ಹೋಗುವ ಮುನ್ನ ಅನ್‌ಲಾಕ್ ರಾಘವ ಸಿನಿಮಾವನ್ನು ನೋಡಿರುವ ಚಲನಚಿತ್ರ ನಿರ್ಮಾಪಕರು ಹಾಗೂ ಚಿತ್ರ ತಂಡ ಸಂತೋಷ ಪಟ್ಟಿದ್ದಾರೆ. “ಈ ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ, ನಮ್ಮ “ಅನ್‌ಲಾಕ್ ರಾಘವ” ಸಿನಿಮಾ ಸೇರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ” ಎಂದು ನಿರ್ಮಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.


“ಇಡೀ ಸಿನಿಮಾದಲ್ಲಿ ನಾಯಕರಾದ ಮಿಲಿಂದ್ ಗೌತಮ್ ಅವರು ಹ್ಯಾಂಡ್ಸಮ್ ಆಗಿ ಮಿಂಚಿದ್ದಾರೆ. ಬಹಳ ಮುಖ್ಯವಾಗಿ ಸಾಹಸ ಸೀಕ್ವೆನ್ಸ್ ಗಳನ್ನು ನೋಡಿದಾಗ ನಮ್ಮ ಕನ್ನಡಕ್ಕೆ ಪ್ರಾಮಿಸಿಂಗ್ ಕಮರ್ಷಿಯಲ್ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಬ್ಯೂಟಿಫುಲ್ ಆಗಿರೋ ನಾಯಕಿ ರೇಚಲ್ ಡೇವಿಡ್ ಅವರೊಂದಿಗಿನ ಎಲ್ಲಾ ಸೀನ್‌ಗಳು ಮ್ಯಾಜಿಕಲ್ ಆಗಿ ಮೂಡಿಬಂದಿವೆ” ಎನ್ನುತ್ತಿದೆ ಚಿತ್ರ ತಂಡ.


ಇಲ್ಲಿಯವರೆಗೂ ನಮಗೆ ಸಿಕ್ಕಿರುವ ಮಾಹಿತಿಯಂತೆ ‘ಅನ್‌ಲಾಕ್ ರಾಘವ’ ಚಿತ್ರ ಕಲರ್‌ಫುಲ್ ಆಗಿದ್ದು, ಹ್ಯೂಮರಸ್ ಮಜವನ್ನು ಉಣ ಬಡಿಸೋ ಕಮರ್ಷಿಯಲ್ ಸಿನಿಮಾ ಆಗಿದೆ. ಈಗಾಗಲೇ ಎಡಿಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ ನ ಉಳಿದ ಹಂತಗಳಲ್ಲಿ ತೊಡಗಿಸಿಕೊಂಡಿರುವ ‘ಅನ್‌ಲಾಕ್ ರಾಘವ’ ಬೇಗನೇ ತೆರೆಗಪ್ಪಳಿಸಿ, ಚಿತ್ರಪ್ರೇಮಿಗಳಿಗೆ ಮನರಂಜನೆ ಉಣಬಡಿಸಲಿದ್ದಾನೆ ಎಂಬ ಕಾತುರದಲ್ಲಿ ಸಿನಿ ಪ್ರೇಮಿಗಳಿದ್ದಾರೆ.


‘ಅನ್‌ಲಾಕ್ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ ನಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಮಿಲಿಂದ್ ಗೌತಮ್ ನಾಯಕನಾಗಿ ಹಾಗೂ ರೇಚಲ್ ಡೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ

Categories
ಸಿನಿ ಸುದ್ದಿ

ವೃಷಭ ಟೀಮ್ ಸೇರಿದ ಹಾಲಿವುಡ್ ನ ನಿಕ್ ತರ್ಲೋ! ಕಾರ್ಯಕಾರಿ ನಿರ್ಮಾಪಕರಾಗಿ ಎಂಟ್ರಿ

ಮೋಹನ್ ಲಾಲ್ ಮತ್ತು ರೋಶನ್ ಮೇಕ ಅಭಿನಯದ ‘ವೃಷಭ’ ಚಿತ್ರದ ಚಿತ್ರೀಕರಣ ಕಳೆದ ವಾರವಷ್ಟೇ ಅಧಿಕೃತವಾಗಿ ಪ್ರಾರಂಭವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ನಿಕ್ ತರ್ಲೋ, ಕಾರ್ಯಕಾರಿ ನಿರ್ಮಾಪಕರಾಗಿ ಸೇರ್ಪಡೆಯಾಗಿದ್ದಾರೆ.

ನಿಕ್ ತರ್ಲೋ ಹಲವು ಹಾಲಿವುಡ್ ಚಿತ್ರಗಳ ನಿರ್ಮಾಪಕರಾಗಿ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡವರು. ಆಸ್ಕರ್ ಪ್ರಶಸ್ತಿ ಚಿತ್ರಗಳಾದ ‘ಮೂನ್ಲೈಟ್’, ‘ಮಿಸೌರಿ’, ‘ಥ್ರೀ ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್’ ಮುಂತಾದ ಚಿತ್ರಗಳಿಗೆ ದುಡಿದವರು. ಈಗ ಅವರು ‘ವೃಷಭ’ ಚಿತ್ರದ ಮೂಲಕ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.

‘ವೃಷಭ’ ಚಿತ್ರವು ಹಾಲಿವುಡ್ ಚಿತ್ರಗಳ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಚಿತ್ರತಂಡದವರು ಚಿತ್ರಕ್ಕೆ ಹೇಗೆಲ್ಲ ತಯಾರಿಗಳು ನಡೆಯುತ್ತಿದೆ, ಚಿತ್ರೀಕರಣ ಸಮಯದಲ್ಲಿ ಏನೆಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸುವ 57 ಸೆಕೆಂಡ್‌ಗಳ ಒಂದು ವೀಡಿಯೋ ಬಿಡುಗಡೆ ಮಾಡಲಾಗಿದೆ. ಹಾಲಿವುಡ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ “ವೃಷಭ” ಪಾತ್ರವಾಗಿದೆ.

ಈ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾತನಾಡಿರುವ ನಿಕ್ ತರ್ಲೋ, ‘ಇದು ನನ್ನ ಮೊದಲ ಭಾರತೀಯ ಚಿತ್ರ ಮತ್ತು ನಾನು ಇಲ್ಲಿ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ. ಒಬ್ಬ ಕಾರ್ಯಕಾರಿ ನಿರ್ಮಾಪಕನಾಗಿ, ಚಿತ್ರದ ಸೃಜನಶೀಲ ಚಟುವಟಿಕೆಗಳು ಸೇರಿದಂತೆ ಹಲವು ವಿಭಾಗಗಳ ಕುರಿತು ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ದೇಶದ ಚಿತ್ರಗಳ ಹೊರತಾಗಿ, ನಾನು ಕೆಲಸ ಮಾಡುತ್ತಿರುವ ಬೇರೆ ದೇಶದ ಮೊದಲ ಚಿತ್ರವಿದು. ಅದರಲ್ಲೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರ ನನಗೆ ಒಂದು ಹೊಸ ಅನುಭವ. ಈ ಚಿತ್ರದಿಂದ ನಾನು ಬಹಳಷ್ಟು ಕಲಿಯುವುದಿದೆ ಮತ್ತು ಈ ಅನುಭವ ಅದ್ಭುತವಾಗಿ ಇರುತ್ತದೆ ಎಂದು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಚಿತ್ರತಂಡಕ್ಕೆ ನಿಕ್ ಸೇರ್ಪಡೆಯ ಕುರಿತು ಮಾತನಾಡಿರುವ ನಿರ್ಮಾಪಕ ವಿಶಾಲ್ ಗುರ್ನಾನಿ, ‘ನಿಕ್ ಸೇರ್ಪಡೆಯಿಂದ ನಮ್ಮ ಚಿತ್ರ ಇನ್ನಷ್ಟು ದೊಡ್ಡದಾಗಿದೆ. ಈ ಚಿತ್ರವನ್ನು ನಾವು ಹಾಲಿವುಡ್ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ನಿಕ್ರಂತಹ ಸಮರ್ಥ ವ್ಯಕ್ತಿ ನಮ್ಮ ಜೊತೆಗೆ ಕೈಜೋಡಿಸಿರುವುದು ತಂಡದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹೇಳಿಕೊಂಡಿದ್ದಾರೆ.
‘ವೃಷಭ’ ಚಿತ್ರವು ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಂದು ಆಕ್ಷನ್-ಸೆಂಟಿಮೆಂಟ್ ಚಿತ್ರವಾಗಿದ್ದು, ಮೋಹನ್ ಲಾಲ್ ಮತ್ತು ರೋಶನ್ ಮೇಕ ಜೊತೆಗೆ ಶನಾಯ ಕಪೂರ್, ಜಹ್ರ ಎಸ್ ಖಾನ್, ಶ್ರೀಕಾಂತ್ ಮೇಕ, ರಾಗಿಣಿ ದ್ವಿವೇದಿ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಮುಂದಿನ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ ಇದು ಸಹ ಒಂದಾಗಿದೆ.

‘ವೃಷಭ’ ಚಿತ್ರವನ್ನು ಬಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಕನ್ನಡದ ನಂದಕಿಶೋರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವು ಮಲಯಾಳಂ, ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡು ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ವಾಮನಗೆ ಸಾಥ್ ನೀಡಿದ ಅಭಿಷೇಕ್ ಅಂಬರೀಶ್: ಮುದ್ದು ರಾಕ್ಷಸಿ ಹಾಡು ಹೊರಬಂತು

ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆಷ್ಟೇ ರಿಲೀಸ್ ಆಗಿದ್ದ ವಾ..ವಾ..ವಾ..ವಾಮನ ಮಾಸ್ ನಂಬರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ವಾಮನ ಅಂಗಳದಿಂದ ಮುದ್ದು ರಾಕ್ಷಸಿ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಕಂಠ ಕುಣಿಸಿದ್ದಾರೆ. ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಈಕ್ವಿನಾಕ್ಸ್ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ “ಚೇತನ್‌ ಗೌಡ” ಅದ್ಧೂರಿಯಾಗಿ ನಿರ್ಮಿಸಿರುವ ವಾಮನ ಸಿನಿಮಾವನ್ನು ಯುವ ನಿರ್ದೇಶಕ “ಶಂಕರ್‌ ರಾಮನ್‌” ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಮುದ್ದು ರಾಕ್ಷಸಿ ಮೆಲೋಡಿ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರಿಲೀಸ್ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್ ಕೊಟ್ಟರು.

ಅಭಿಷೇಕ್ ಅಂಬರೀಷ್, ನಾನು ಈಗಷ್ಟೇ ಮುದ್ದು ರಾಕ್ಷಸಿ ಹಾಡು ನೋಡಿದೆ. ಒಂದು ಸಾಂಗ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ ಹೀರೋಯಿನ್ ಗೂ ಅಲ್ಲ. ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸಿಸ್ಟ್ ಗೆ. ಅವರ ಎಫರ್ಟ್ ಜಾಸ್ತಿ ಇರುತ್ತದೆ. ನಮ್ಮ ಗೆಳೆಯ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೇವು. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ ಎಂದರು.

ಧ್ವನೀರ್ ಗೌಡ ಮಾತನಾಡಿ, ಒಂದೇ ಒಂದು ಫೋನ್ ಕಾಲ್ ಗೆ ಬಂದು ಮುದ್ದು ರಾಕ್ಷಸಿ ಹಾಡನ್ನು ಅಭಿಷೇಕ್ ಅಂಬರೀಶ್ ಅವರು ಲಾಂಚ್ ಮಾಡಿಕೊಟ್ಟಿದ್ದಾರೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಗೆ ಹೆಜ್ಜೆ ಹಾಕಿದ್ದೇನೆ ಎಂದರು.

ವಾಮನ ನಿರ್ಮಾಪಕ ಚೇತನ್ ಗೌಡ ಮಾತನಾಡಿ, ಎಲ್ಲರಿಗೂ ಧನ್ಯವಾದ..ಈ ಸಮಾರಂಭವನ್ನು ಇಷ್ಟು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಾ. ನಾನು ಮೊದಲ ಸಾಂಗ್ ಬಿಡುಗಡೆ ಟೈಮ್ ನಲ್ಲಿ ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿದ್ದೇನೆ. ಈ ಹಾಡನ್ನು ನೋಡಿ ಸಪೋರ್ಟ್ ಮಾಡಿ. ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಚಿತ್ರರಂಗ ಬೆಳೆಸಿ ಎಂದರು.

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಸಾಂಗ್ ನಿಮಗೆ ಡೆಡಿಕೇಟ್ ಗೆ ಮಾಡುತ್ತಿದ್ದೇವೆ. ಅಜನೀಶ್ ಲೋಕನಾಥ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಮುದ್ದಾದ ಸಾಹಿತ್ಯ, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕೂಡಿಸಿದ್ದು, ಭೂಷಣ್ ಮಾಸ್ಟರ್ ಕೊರಿಯೋಗ್ರಫ್ ಮಾಡಿದ್ದಾರೆ. ಮನೆಗೆ ಹೋಗ್ತಾ ನೀವು ಮುದ್ದು ಮುದ್ದು ರಾಕ್ಷಸಿ ಹಾಡುತ್ತಾ ಹೋಗಿ ಎಂದರು.

ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ.

error: Content is protected !!