ಸ್ಟಾರ್ಟ್, ಕ್ಯಾಮೆರಾ, ಸೌಂಡ್, ಆಕ್ಷನ್…
ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಿರ್ದೇಶಕ, ದೇವಸ್ಥಾನಕ್ಕೆ ಹೋಗಿ ಕೈ ಮುಗಿತಾನೋ ಇಲ್ವೋ ಗೊತ್ತಿಲ್ಲ. ಆದರೆ, ಚಿತ್ರಮಂದಿರಕ್ಕೆ ಖಂಡಿತ ಕೈ ಮುಗಿದೇ ಹೋಗ್ತಾನೆ. ಯಾಕೆಂದರೆ, ಆ ಥಿಯೇಟರ್ ಗಳೇ ಅವರಿಗೆ ದೇವಸ್ಥಾನ. ಎಷ್ಟೋ ಕಥೆ, ಚಿತ್ರಗಳು ಆ ದೇವಸ್ಥಾನದ ಹೊಸಲು ಮೆಟ್ಟಲಾಗದೆ ಅವರ ಹಾಳೆಗಳ ಮೇಲೇ ಹಾಗೆ ಉಳಿದು ಬಿಡುತ್ತವೆ…
ಈ ಬಣ್ಣದ ಲೋಕಕ್ಕೆ ಬರುವವರ ಸಂಖ್ಯೆ ಕಮ್ಮಿ ಏನಿಲ್ಲ. ದಿನ ಕಳೆದಂತೆ ನೂರಾರು ಆಸೆ-ಆಕಾಂಕ್ಷೆ ಹೊತ್ತು ಬೆಟ್ಟದಷ್ಟು ಕನಸು ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಡುತಲೇ ಇದ್ದಾರೆ. ಆ ಸಾಲಿಗೆ ಉದಯಶಂಕರ್ ಎಂಬ ಪ್ರತಿಭೆ ಕೂಡ ಸೇರಿದೆ. ಹೌದು, ಕಳೆದ ಏಳೆಂಟು ವರ್ಷಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ದುಡಿದು ತಾನೂ ನಿರ್ದೇಶಕನಾಗಬೇಕು ಅಂತ ರಾತ್ರಿ ಹಗಲು ಕನಸು ಕಾಣುತ್ತಿರುವ ಯುವ ನಿರ್ದೇಶಕ ಇವರು.

ಎಲ್ಲಾ ಯುವ ನಿರ್ದೇಶಕರಂತೆ ಕಂಗಳ ತುಂಬ ಆಸೆ ಹೊತ್ತು ಮಾಗಡಿ ಸಮೀಪದ ದೋಣ ಕುಪ್ಪೆ ಗ್ರಾಮದಿಂದ ಬಂದ ಉದಯ ಶಂಕರ್ ಈಗ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದರ ಹೆಸರು ‘ಸಿನಿಮಾ’. ಹದಿನಾಲ್ಕು ನಿಮಿಷದ ಈ ಸಿನಿಮಾ ಕಿರುಚಿತ್ರ, ಸಿನಿಮಾ ಮಾಡಬೇಕು ಅಂತ ಹಂಬಲಿಸುವ ಒಬ್ಬ ಯುವ ನಿರ್ದೇಶಕನ ಕಥೆ ಮತ್ತು ವ್ಯಥೆ.

ತಮ್ಮಕಿರುಚಿತ್ರ ಸಿನಿಮಾ ಕುರಿತು ಹೇಳುವ ನಿರ್ದೇಶಕ ಉದಯಶಂಕರ್, ‘ನಾನು ನಿರ್ದೇಶಕನಾಗಬೇಕು ಅಂತಾನೆ ಕಳೆದ ಏಳೆಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಘವೇಂದ್ರ ರಾಜಕುಮಾರ್ ಅಭಿನಯದ ‘ಆಧುನಿಕ ಶ್ರವಣ ಕುಮಾರ’ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೇನೆ.

ಆ ಅನುಭವದ ಮೇಲೆ ‘ ಇವತ್ತೇ ಲಾಸ್ಟ್ ನಾಳೆಯಿಂದ ಎಣ್ಣೆ ಹೊಡೆಯಲ್ಲ’ ಎಂಬ ಕಿರುಚಿತ್ರ ನಿರ್ದೇಶಿಸಿದೆ. ಅದಾದ ಬಳಿಕ ಈಗ ‘ ಸಿನಿಮಾ’ ಎಂಬ ಮತ್ತೊಂದು ಕಿರುಚಿತ್ರ ನಿರ್ದೇಶಿಸಿದ್ದೇನೆ. ಸದ್ಯ ಈ ಸಿನಿಮಾ ಈಗ ಭಗತ್ ಎಂಟರ್ಟೈನ್ಮೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು ಎಲ್ಲೆಡೆಯಿಂದ ಉತ್ತಮ ಮೆಚ್ಚುಗೆ ಸಿಗುತ್ತಿದೆ.

ನನಗೆ ಉಪೇಂದ್ರ ಸ್ಫೂರ್ತಿ
ಇಷ್ಟಕ್ಕೂ ನಾನು ಸಿನಿಮಾ ರಂಗ ಪ್ರವೇಶ ಮಾಡಲು ನಟ, ನಿರ್ದೇಶಕ ಉಪೇಂದ್ರ ಅವರು ಕಾರಣ. ಅವರೇ ನನಗೆ ಸ್ಫೂರ್ತಿ. ಸುನಿಮಾ ನೋಡುವ ಆಸಕ್ತಿ ಇತ್ತು. ಹಾಗೆ ನೋಡ್ತಾ ನೋಡ್ತಾನೇ ಉಪೇಂದ್ರ ಅವರು ಸ್ಫೂರ್ತಿಯಾದರು. ಹಾಗಾಗಿ ನಾನು ಸಿನಿಮಾ ರಂಗಕ್ಕೆ ಬಂದೆ. ಈಗಷ್ಟೇ ಶಾರ್ಟ್ ಫಿಲ್ಮ್ ಮಾಡುವ ಮೂಲಕ ಅನುಭವ ಪಡೆಯುತ್ತಿದ್ದೇನೆ. ಮುಂದೆ ಅನಂತ್ ನಾಗ್ ಅವರಿಗೊಂದು ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದೇನೆ.
ಮೂಲತಃ ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಕಲಾವಿದನಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ಆಕರ್ಷಣೆ ಹೆಚ್ಚಾಗಿ ನಿರ್ದೇಶನ ಮಾಡಲು ಅಣಿಯಾಗುತ್ತಿದ್ದೇನೆ.

ಇನ್ನು, ಸಿನಿಮಾ ಮಾಡೋದು ಸುಲಭವಲ್ಲ. ಇಲ್ಲಿ ನಿರ್ಮಾಪಕರನ್ನು ಹುಡುಕಿ ಕಥೆ ಹೇಳಿ ಒಪ್ಪಿಸೋದು ಕಷ್ಟದ ಕೆಲಸ. ನಿತ್ಯವೂ ನಿರ್ಮಾಪಕರ ಮನೆ ಮನೆಗೆ ಅಲೆದಾಡಿದರೂ ಕಷ್ಟ. ಇವತ್ತು ನಾಳೆ ಎನ್ನುತ್ತಲೇ ನಿರ್ದೇಶಕರ ತಾಳ್ಮೆಗೆಡಿಸುತ್ತಾರೆ. ನನಗೂ ಅಂತಹ ಅನುಭವ ಆಗಿದೆ. ಅದೇ ಅನುಭವ ಇಟ್ಟುಕೊಂಡೇ ‘ಸಿನಿಮಾ’ ಕಿರುಚಿತ್ರ ಮಾಡಿದ್ದೇನೆ. ಇಲ್ಲೂ ನಿರ್ದೇಶಕನಾಗೋಕೆ ಎಷ್ಟೆಲ್ಲಾ ಒದ್ದಾಟಗಳಿವೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ.

ಇನ್ನು, ಪ್ರಮುಖ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ನಟಿಸಿದ್ದಾರೆ. ನಿರ್ದೇಶಕನ ಕನಸು ಕಾಣುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನನ್ನ ತಾಯಿ ಪಾತ್ರದಲ್ಲಿ ನಟಿ ಮಂಜುಳಾರೆಡ್ಡಿ ಅವರು ಅಭಿನಯಿಸಿದ್ದಾರೆ. ಅವರು ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಉಳಿದಂತೆ ಮಹೇಶ್, ಸವಿತ, ವಿನಯ್, ಹೇಮಂತ್ ನಟಿಸಿದ್ದಾರೆ.

ಅಶೋಕ್ ರಾಜ್ ‘ಸಿನಿಮಾ’ ಕಣ್ಣಾದರೆ, ಅರ್ಜುನ್ ಸಂಗೀತವಿದೆ. ಮಹೇಶ್ ನಿರ್ಮಾಣವಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ನಾನೇ ಬರೆದಿದ್ದೇನೆ ಎನ್ನುವ ಉದಯಶಂಕರ್ ಕನ್ನಡ ಸಿನಿಮಾ ರಂಗದಲ್ಲಿ ಸದಭಿರುಚಿಯ ಸಿನಿಮಾ ನಿರ್ದೇಶನ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ.