Categories
ಸಿನಿ ಸುದ್ದಿ

ಕಾಟೇರ ಚಿತ್ರೀಕರಣ ಮುಕ್ತಾಯ: ಇದು ದರ್ಶನ್ ಚಿತ್ರ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.

ನಮ್ಮ ಸಂಸ್ಥೆಯ ನಿರ್ಮಾಣದ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಈ ಸ್ಥಳದಲ್ಲಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ತರುಣ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು.


ದರ್ಶನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

“ಗುರು ಶಿಷ್ಯರು” ಚಿತ್ರದ ನಂತರ ನಾನು ಹಾಗೂ ಜಡೇಶ್ ಅವರು ಸೇರಿ ಈ ಚಿತ್ರದ ಕಥೆ ಬರೆದ್ದೆವು. ದರ್ಶನ್ ಅವರಿಗಾಗಿಯೇ ಬರೆದ ಕಥೆಯಿದು ಎಂದು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್, ಆನಂತರ ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಈ ಕಥೆ ಹೇಳಿ ಎಂದರು. ರಾಕ್ ಲೈನ್ ಸರ್ ಕಥೆ ಮೆಚ್ಚಿಕೊಂಡು ಚಿತ್ರವನ್ನು ಪ್ರಾರಂಭಿಸಿದರು. ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಈ ಚಿತ್ರದ ನಾಯಕಿ ಎಂದು ನಿರ್ಮಾಪಕರು, ದರ್ಶನ್ ಅವರು ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದೆವು. ಆರಾಧನಾ ಅದ್ಭುತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದಾರೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು , ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಲಾಗಿದೆ‌. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದರು.

ನೂರು ದಿನಗಳ ಚಿತ್ರೀಕರಣದಲ್ಲಿ ನಾನು, ಎಪ್ಪತ್ತೊಂದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌. ತರುಣ್ ಹಾಗೂ ಜಡೇಶ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಎಂತಹ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಅಭಿನಯಿಸುವ ಕಲಾವಿದೆ ಅವರು.


ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಈ ಚಿತ್ರದ ಛಾಯಾಗ್ರಹಣಕ್ಕಾಗಿ ಅವರಿಗೆ ಪ್ರಶಸ್ತಿ ಬರಬಹುದು ಎಂಬುದು ನನ್ನ ಅನಿಸಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು‌.

ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕಿ ಆರಾಧನಾ.

ಹಿರಿಯ ನಟರಾದ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಛಾಯಾಗ್ರಾಹಕ ಸುಧಾಕರ್, ತರುಣ್ ಸುಧೀರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ಜಡೇಶ್, ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಹಿರಿಯ ನಟಿ ಮಾಲಾಶ್ರೀ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಪುಷ್ಪ-2 ರಿಲೀಸ್ ಡೇಟ್ ಫಿಕ್ಸ್: ಮುಂದಿನ ಸ್ವಾತಂತ್ರ್ಯ ದಿನಕ್ಕೆ ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆ

ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಮಗದೊಮ್ಮೆ ಬೆಳ್ಳಿಭೂಮಿಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ-2 ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ಯಾವಾಗ ಎನ್ನುತ್ತಿದ್ದ ಫ್ಯಾನ್ಸ್ ಚಿತ್ರತಂಡ ಧಿಡೀರ್ ಸರ್ ಪ್ರೈಸ್ ಕೊಟ್ಟಿದೆ.

‘ಪುಷ್ಪ-2’ ಬಿಡುಗಡೆ ದಿನಾಂಕ ನಿಗದಿಯಾಗಿದೆ.. ಸ್ವಾತಂತ್ರ್ಯ ದಿನಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದ್ದು, ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ಉಂಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್ ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.

ಪುಷ್ಪ 2 ದಿ ರೂಲ್ಸ್ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಖಬರ್ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗೀಗಾ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗ್ತಿರುವ ಪುಷ್ಪ-2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ.

Categories
ಸಿನಿ ಸುದ್ದಿ

ಟೇಕ್ವಾಂಡೋ ಗರ್ಲ್ ಎಂಬ ಪೋರಿಯ ಕಥೆ: ಪರದೆ ಮೇಲೆ ಬ್ಲಾಕ್ ಬೆಲ್ಟ್ ಹುಡುಗಿಯ ಸಾಹಸ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅಂತಹ ಸಿನಮಾಗಳ ಸಾಲಿಗೆ ಹೀಗೊಂದು ಚಿತ್ರ ಸೇರ್ಪಡೆಯಾಗಿದೆ. ಹೆಸರು ಟೇಕ್ವಾoಡೋ ಗರ್ಲ್ . ಈ ಚಿತ್ರದ ಹೈಲೆಟ್ ಹತ್ತು ವರ್ಷದ ಪೋರಿ. ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಅಂದಹಾಗೆ ಇದೊಂದು ಟೇಕ್ವಾoಡೋ ಸಮರ ಕಲೆಯ ಸುತ್ತ ನಡೆವ ಕಥೆ.

ನಾಲ್ಕು ಬಾರಿ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದ ಹುಡುಗಿ ಈ ಚಿತ್ರದ ಆಕರ್ಷಣೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿತ್ಯ ಕೃತ್ಯಗಳು ನಡೆಯುತ್ತಲೇ ಇವೆ. ಹೆಣ್ಣು ತನ್ನನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ “ಟೇಕ್ವಾಂಡೋ ಗರ್ಲ್” ತಯಾರಾಗಿದೆ.

ಋತು ವರ್ಷ ಚಿತ್ರದ ಪ್ರಮುಖ ಆಕರ್ಷಣೆ. ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತಹ ಸಮಯದ ನಡುವೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆ ಮೂಲಕ ಸಮಾಜಕ್ಕೆ ಹೇಗೆ ಮಾದರಿ ಆಗುತ್ತಾಳೆ ಎನ್ನುವುದೇ ಕಥೆಯ ಎಳೆ.

ಇನ್ನು ಐದನೇ ತರಗತಿಯಲ್ಲಿ ಓದುತ್ತಿರುವ ಋತು ವರ್ಷ 3ನೇ ವಯಸ್ಸಿನಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ.

ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಡಾ. ಸುಮೀತಾ ಪ್ರವೀಣ್. ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ.
ಇದು ಮಗಳಿಗಷ್ಟೇ ಸೀಮಿತ ವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು
ಟೇಕ್ವಾಂಡೋ ಗರ್ಲ್‌‌ ಸಿನಿಮಾ ನಿರ್ಮಾಪಕರಾಗಿದ್ದಾರೆ.


ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.
ಮಗಳ ಹುಟ್ಟು ಹಬ್ಬದಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ನನ್ನ ಮಗಳಷ್ಟೇ ಅಲ್ಲ ಎಲ್ಲಾ ಹೆಣ್ಣು ಮಕ್ಕಳು ಟೇಕ್ವಾಂಡೋ ಕಲೆ ಕಲಿಯ ಬೇಕು ಎಂಬುದು ಸುಮೀತಾ ಮಾತು.

ಈ ಚಿತ್ರಕ್ಕೆ ರವೀಂದ್ರ ವಂಶಿ ನಿರ್ದೇಶಕರು. ಈ ಹಿಂದೆ ಪುಟಾಣಿ ಸಫಾರಿ ಚಿತ್ರ ನಿರ್ದೇಶನ ಮಾಡಿದ್ದ ಇವರು, ಟೇಕ್ವಾಂಡೋ ಗರ್ಲ್ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.

ಇದು ಮಕ್ಕಳ ಚಿತ್ರ ನಿಜ ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ಸ್ಕೂಲ್ ಮಕ್ಕಳಿಗೆ ತೋರಿಸಲು ನಿರ್ದರಿಸಿದ್ದೇವೆ ಎಂದು ಹೇಳಿದರು.

ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟ ಗಣೇಶ್ ರಾವ್ ಚಿತ್ರದ  ಹಾಡುಗಳನ್ನು ಬಿಡುಗಡೆ ಮಾಡಿದರು. ಸೆಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ತೆರೆ ಮೇಲೆ ಭೀಮಾ ಕೋರೆಗಾಂವ: ಇದು ಸತ್ಯ ಘಟನೆ ಆಧಾರಿತ ಚಿತ್ರ: ಅಬ್ಬರಿಸಲಿದ್ದಾರೆ ಸುಪರ್ ಸ್ಟಾರ್!

ಇತ್ತೀಚೆಗಷ್ಟೇ ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್, ಅದರ ಬೆನ್ನಲ್ಲೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ಭೀಮಾ ಕೋರೇಗಾಂವ

ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು ಮಾಡುತ್ತಿರುವ ಚಲನಚಿತ್ರ ಇದಾಗಿದ್ದು, ಚಿತ್ರದ ಶೀರ್ಷಿಕೆಯನ್ನು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ.

ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ಸಂಜು ವೆಡ್ಸ್ ಗೀತಾ ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು.

ನಿರ್ದೇಶಕ ನಾಗಶೇಖರ್ ಮಾತನಾಡಿ, 1818 ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ ಎಂದರು.

ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ. ನಡೆದ ಘನಘೋರ ಯುದ್ಧ. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ರೀತಿ ನೋಡಿಕೊಂಡಿದ್ದ ಯಾವ ಉದ್ದೇಶಕ್ಕೆ ಈ ಯುದ್ದ ನಡೆಯಿತು ಅನ್ನೋದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ ಎಂದರು.

ಚಿಂತಕ ಗೋಪಾಲ್ ಮಾತನಾಡಿ, ಅಸಮಾನತೆ ವಿರುದ್ದ ನಡೆದ ಹೋರಾಟವಿದು. 500 ಜನ ಸೈನಿಕರು 30 ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಬಾಜೀರಾಯ ಅಸ್ಪೃಶ್ಯರ ವಿರುದ್ದ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ದವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ‌ ಎಂದರು. ಉಳಿದಂತೆ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್, ಆ ಘಟನೆ ಬಗ್ಗೆ ಒಂದಷ್ಟು ಮಾಹಿತಿ‌ ನೀಡಿದರು.

ನಾಗಶೇಖರ್, ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು ಚಂದ್ರಚೂಡ್, ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ.

54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1, ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ 365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಕ್ಕೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

Categories
ಸಿನಿ ಸುದ್ದಿ

ರಮೇಶ್, ಗಣೇಶ್ ಹೊಸ ಚಿತ್ರ ಕ್ಕೆ ವಿಖ್ಯಾತ್ ನಿರ್ದೇಶನ

ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ‌ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.


ಸ್ಟಾರ್ ನಟರಾದ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

ಇದರಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗ ಉದ್ಭವಿಸಿರುವ ಎಲ್ಲಾ ಕುತೂಹಲಗಳಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ವಿಖ್ಯಾತ್ ಅವರೇ ಉತ್ತರ ನೀಡಬೇಕಿದೆ.

Categories
ಸಿನಿ ಸುದ್ದಿ

ರಮೇಶ್ ಅರವಿಂದ್ ಹೊಸ ಸಿನಿಮಾ ಅನೌನ್ಸ್: ದೈಜಿ ಎಂಬ ಕಾಳಜಿ ಚಿತ್ರ!

ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈ ಜೋಡಿಸುತ್ತುದ್ದಾರೆ. ಚಿತ್ರದ ಶೀರ್ಷಿಕೆ ‘ದೈಜಿ’

ಈ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ರವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ ‘ಬದ್ಮಾಶ್’ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.

ಚಿತ್ರದ ಶೀರ್ಶಿಕೆ ‘ದೈಜಿ’ ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು.

ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜ಼ಾನರ್ ಗೆ ಬರುತ್ತದೆ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ.

ಚಿತ್ರದ ನಾಯಕಿಯ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ 25 ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ.

ಇದು ಬಹುಮುಖ ಪ್ರತಿಭೆಯ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ ಶ್ರೀ ರಮೇಶ್ ಅರವಿಂದ ರವರ 106 ನೇ ಚಿತ್ರ. ತನ್ನ ಸಿನಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿಲ್ ಮಿಂಚಿದ ರಮೇಶ್ ರವರ ಸ್ಮರಣೀಯ ಚಿತ್ರಗಳೆಂದರೆ ಅಮೃತವರ್ಶಿಣಿ, ಅಮೆರಿಕ ಅಮೆರಿಕ, ರಾಮ ಶಾಮ ಭಾಮ, ಶಿವಾಜಿ ಸುರತ್ಕಲ್… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಮಿಳಿನಲ್ಲಿ ಡ್ಯೂಯೆಟ್, ಸತಿ ಲೀಲಾವತಿ, ಪಂಚತಂತಿರಂ, ಉತ್ತಮ ವಿಲ್ಲಿನ್, ತೆಲುಗು ಚಿತ್ರರಂಗದಲ್ಲಿ ಲಿಟಲ್ ಸೋಲ್ಜರ್ಸ್, ಮಲಯಾಳಂ ನಲ್ಲಿ ಅವನ್ ಅನಂತ ಪದ್ಮನಾಭನ್.. ಹೀಗೆ ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್ ರವರು ದೈಜಿ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ಚಿತ್ರೀಕರಣವನ್ನು ಬಹಳ ಹುಮ್ಮಸ್ಸಿನಿಂದ ಎದುರು ನೋಡುತ್ತಿದೆ.

Categories
ಸಿನಿ ಸುದ್ದಿ

ರಾಘವ್ ಲಾರೆನ್ಸ್, ಕಂಗನಾ ನಟನೆಯ ಚಂದ್ರಮುಖಿ 2 ಪ್ರೇಕ್ಷಕರ ಮುಂದೆ ಬರಲು ರೆಡಿ: ಸೆಪ್ಟೆಂಬರ್ 28ಕ್ಕೆ ಲೈಕಾ ನಿರ್ಮಾಣದ ಚಿತ್ರ

ನಿರ್ದೇಶಕ ಕಂ ನಟ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹಾರರ್ ಕಾಮಿಡಿ ಸಿನಿಮಾ ಸೆಪ್ಟಂಬರ್ 19 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ‘ಚಂದ್ರಮುಖಿ 2’ ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ. ಅಂದ್ರೆ ಸೆಪ್ಟಂಬರ್ 28ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಸುಭಾಷ್ ಕರಣ್ ಅವರು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ‘ಚಂದ್ರಮುಖಿ 2’ ಚಿತ್ರ ನಿರ್ಮಿಸಿದ್ದಾರೆ. ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಈ ಸಿನಿಮಾಗಿದೆ. ಕಂಗನಾ ರಣಾವತ್ ಜೊತೆ ರಾಘವ ಲಾರೆನ್ಸ್, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಮುಂತಾದವರು ನಟಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

Categories
ಸಿನಿ ಸುದ್ದಿ

ಅಮೇರಿಕಾದಲ್ಲಿ ಮೈ ಹೀರೋ! ಮೂರನೇ ಹಂತದ ಚಿತ್ರೀಕರಣ ಮುಕ್ತಾಯ: ಚಿತ್ರದಲ್ಲಿ ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ನಟನೆ

ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ” ಮೈ ಹೀರೋ” ಚಿತ್ರದ ಚಿತ್ರೀಕರಣ
ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ಹದಿನೈದು ದಿನಗಳ ಕಾಲ ನಡೆದಿದೆ‌. ಇದರೊಂದಿಗೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಹಾಲಿವುಡ್ ನ ಖ್ಯಾತ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಚಿತ್ರದ ವಿಶೇಷಗಳೊಲದಲ್ಲೊಂದು. ಜೊತೆಗೆ ಹಾಲಿವುಡ್‍ನ ಖ್ಯಾತ ನಟರಾದ “ಎರಿಕ್ ರಾಬರ್ಟ್ಸ್” ಹಾಗೂ ಹಾಲಿವುಡ್‍ನ ಮತ್ತಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಅಷ್ಟೇ ಅಲ್ಲದೆ ಈ ಚಿತ್ರದ ಮತ್ತೊಂದು ವಿಶೇಷತೆಯ ಬಗ್ಗೆ ನಿರ್ದೇಶಕರಾದ ಅವಿನಾಶ್ ವಿಜಯಕುಮಾರ್ ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಎರಿಕ್ ರಾಬರ್ಟ್ಸ್, ಮಿಸ್ಸಿಸ್ಸಿಪ್ಪಿಯ ಬಿಲೋಕ್ಸಿಯಲ್ಲಿ ಜನಿಸಿದರು‌. ಅಟ್ಲಾಂಟಾ ಪ್ರದೇಶದ ಸುತ್ತಮುತ್ತ ಬೆಳೆದರು. ಅವರು ನ್ಯೂಯಾರ್ಕ್ ನಗರದಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಬರ್ನ್ ದಿಸ್‍ನಲ್ಲಿ ಬ್ರಾಡ್‍ವೇಯಲ್ಲಿನ ಪಾತ್ರಕ್ಕಾಗಿ ಥಿಯೇಟರ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು.


“ರನ್‍ ಅವೇ ಟ್ರೈನ್” ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ ರವರು ಅಕಾಡೆಮಿ ಪ್ರಶಸ್ತಿ ಮತ್ತು “ಸ್ಟಾರ್ 80” ಮತ್ತು “ಕಿಂಗ್ ಆಫ್ ದಿ ಜಿಪ್ಸಿ” ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿ ಗೋಲ್ಡನ್ ಗ್ಲೋಬ್ ನಾಮಿನಿಯಾಗಿದ್ದಾರೆ.
ಇದರ ಜೊತೆಗೆ, “ಎ ಗೈಡ್ ಟು ರೆಕಗ್ನೈಸಿಂಗ್” “ಯುವರ್ ಸೇಂಟ್ಸ್” ಮತ್ತು “ಇಟ್ಸ್ ಮೈ ಪಾರ್ಟಿ”ಯಲ್ಲಿನ ಪಾತ್ರಕ್ಕಾಗಿ ರಾಬರ್ಟ್ಸ್ ಸನ್‍ಡಾನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಮೆಚ್ಚುಗೆಯನ್ನು ಪಡೆದರು. ಆಸ್ಟಿನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಮತ್ತು ಅದೇ ವರ್ಷ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ರಾಬರ್ಟ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.


ದಿ ಡಾರ್ಕ್ ನೈಟ್, ಫೈನಲ್ ಅನಾಲಿಸಿಸ್, ಮತ್ತು ಪಾಲ್ ಥೋಮನ್ ಆಂಡರ್ಸನ್ ಅವರ ಇನ್ಹೆರೆಂಟ್ ವೈಸ್ ಫಾರ್ ವಾರ್ನರ್ ಬ್ರದರ್ಸ್, ಮಿಲೇನಿಯಮ್ ಫಿಲ್ಮ್ಸ್ ಲವ್ಲೇಸ್ ಮತ್ತು ದಿ ಎಕ್ಸ್‍ಪೆಂಡಬಲ್ಸ್ ಫಾರ್ ಲಯನ್ಸ್‍ಗೇಟ್‍ನಲ್ಲಿನ ಅವರ ಪಾತ್ರಗಳು ಇತರ ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿವೆ.
ವಾರ್ನರ್ ಬ್ರದರ್ಸ್ ಜರ್ಮನಿ ನಿರ್ಮಾಣದ “ಹೆಡ್ ಫುಲ್ ಆಫ್ ಹನಿ”ಯಲ್ಲಿ ರಾಬರ್ಟ್ಸ್, “ಮ್ಯಾಟ್ ದಿಲ್ಲನ್” ಅವರ ವೈದ್ಯರ ಪಾತ್ರ ಮಾಡಿದ್ದಾರೆ.

“ಮೈ ಹೀರೋ” ಚಿತ್ರಕ್ಕೆ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ ಅವರ ಸಂಕಲನ ‘ಮೈ ಹೀರೋ” ಚಿತ್ರಕ್ಕಿದೆ. ಜಿಲಾಲಿ ರೆಜ್ ಕಲ್ಲಾಹ್, ಮಾಸ್ಟರ್ ವೇದಿಕ್, ಎರಿಕ್ ರಾಬರ್ಟ್ಸ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಭಗೀರಥನಿಗೆ ಚಾಲನೆ

ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ನಿರ್ಮಿಸುತ್ತಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ “ಭಗೀರಥ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ‌ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಸಿರಿ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಕ್ಯಾಮೆರಾ ಚಾಲನೆ ಮಾಡಿದರು.

ನಾನು 2005 ರಲ್ಲಿ “ಬಾಯ್ ಫ್ರೆಂಡ್” ಮೂಲಕ ನನ್ನ ಚಿತ್ರರಂಗದ ಜರ್ನಿ ಆರಂಭವಾಯಿತು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ನಿರ್ದೇಶಿಸಿದ್ದೇನೆ. ಈಗ “ಭಗೀರಥ” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯಾವುದಾದರೂ ಒಂದು ಕೆಲಸವನ್ನು ಬಿಡದೆ ಸಾಧಿಸುವುದನ್ನು “ಭಗೀರಥ” ಪ್ರಯತ್ನ ಎನ್ನುತ್ತಾರೆ. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ‌. ಇಂದು ಮುಹೂರ್ತ ಸಮಾರಂಭ ನೆರವೇರಿದೆ. ಹತ್ತನೇ ತಾರೀಖಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಒಂದೇ ಹಂತದಲ್ಲಿ ನಡೆಯಲಿದೆ. ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಬಾಲ ರಾಜವಾಡಿ, ಸುರಭಿ ರವಿ, ನಯನ, ನಿಖಿತ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಮಠಾಧಿಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥೆ ಮೆಚ್ಚಿ, ರಮೇಶ್ ಹಾಗೂ ಭೈರಪ್ಪ ಮೈಸೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದರು‌.

“ಜಮಾನ” ಚಿತ್ರದಲ್ಲಿ ನಟಿಸಿದ್ದೆ ಎಂದು ಮಾತು ಆರಂಭಿಸಿದ ಜಯಪ್ರಕಾಶ್, ಈಗ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.

ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ನಾಯಕಿ ಚಂದನ ರಾಘವೇಂದ್ರ ತಿಳಿಸಿದರು‌.

ನಾನು ನಿರ್ದೇಶನ ಮಾಡಿರುವುದು ಹೆಚ್ಚು. ಅಭಿನಯಿಸಿರುವುದು ಕಡಿಮೆ. ನಿರ್ದೇಶಕರು ಮಠಾಧಿಪತಿ ಪಾತ್ರವನ್ನು ನೀವೇ ಮಾಡಬೇಕೆಂದರು ಮಾಡುತ್ತಿದ್ದೇನೆ ಎಂದು ಸಾಯಿಪ್ರಕಾಶ್ ಹೇಳಿದರು.

ನಿರ್ಮಾಪಕರಾದ ರಮೇಶ್ ಹಾಗೂ ಭೈರಪ್ಪ ಮೈಸೂರು ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು.‌ ಚಿತ್ರದಲ್ಲಿ ನಟಿಸುತ್ತಿರುವ ನಯನ ಹಾಗೂ ಚೇತನ್ ತಮ್ಮ ಪಾತ್ರದ ಕುರಿತು ಮಾತನಾಡಿದರು.

ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಜನಾರ್ದನ್ ಅವರ ಜೊತೆ ಇದು ಮೊದಲ ಚಿತ್ರ. ಮಾಧ್ಯಮ ಹಾಗೂ ಉದ್ಯಮದ ನಡುವೆ “ಭಗೀರಥ” ಚಿತ್ರದ ಕಥೆ ಸಾಗುತ್ತದೆ ಎನ್ನುತ್ತಾರೆ ಸಂಭಾಷಣೆಕಾರ ಜೆ.ಎಂ.ಪ್ರಹ್ಲಾದ್.

ಪ್ರದೀಪ್ ವರ್ಮ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸೂರಿ ಚಿತ್ತೂರು ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ “ಭಗೀರಥ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ವಿಜಯ್ ಸೂರ್ಯ ಈಗ ವೀರಪುತ್ರ! ಅಗ್ನಿಸಾಕ್ಷಿ ಹೀರೋನ ಫಸ್ಟ್ ಲುಕ್

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆ ಮನ ಗೆದ್ದಿದ್ದ ವಿಜಯ್ ಸೂರ್ಯ ವೀರಪುತ್ರನಾಗಿದ್ದಾರೆ. ಅಂದರೆ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ವೀರಪುತ್ರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಡಗ್ ಅವತಾರದಲ್ಲಿ ಚಾಕಲೇಟ್ ಹೀರೋ ಕಾಣಿಸಿಕೊಂಡಿದ್ದಾರೆ.

ಡಾ.ದೇವರಾಜ್.ಎಸ್ ವೀರಪುತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್ ಸಪ್ಲಿಮೆಂಟರಿ ಎಂಬ ಚಿತ್ರ ನಿರ್ದೇಶಿಸಿದ್ದರು. ಮೆಡಿಕಲ್ ಮಾಫಿಯಾ ಹಾಗೂ ಫ್ಯಾಮಿಲಿ ರಿವೇಂಜ್ ಕಥಾಹಂದರ ಹೊಂದಿರುವ ವೀರಪುತ್ರ ಸಿನಿಮಾಗೆ ದೇವರಾಜ್ ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂಪ್ಲಿಮೆಂಟರಿ, ಧೀರಸಾಮ್ರಾಟ್ ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ.

ಸ್ಟೈಲೀಶ್ ಸ್ಟಾರ್ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ ನಟಿಸುತ್ತಿದ್ದು, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ವೀರಪುತ್ರ ಚಿತ್ರಕ್ಕಿದೆ. ಬೆಂಗಳೂರು, ಹೈದ್ರಾಬಾದ್ ನಲ್ಲಿ 60ರಷ್ಟು ಶೂಟಿಂಗ್ ನಡೆಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಿನ ತಿಂಗಳಿನಿಂದ ಕಿಕ್ ಸ್ಟಾರ್ಟ್ ಸಿಗಲಿದೆ. ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲಿಯೇ ಚಿತ್ರತಂಡ ಮತ್ತಷ್ಟು ಅಪ್ ಡೇಟ್ ಕೊಡಲಿದೆ.

ಇಷ್ಟಕಾಮ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದ ವಿಜಯ್ ಸೂರ್ಯ ಸದ್ಯ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ವೀರಪುತ್ರನಾಗಿ ಮತ್ತೆ ಬೆಳ್ಳಿಪರದೆಯಲ್ಲಿ ಮಿನುಗಲು ಸಜ್ಜಾಗ್ತಿದ್ದಾರೆ.

error: Content is protected !!