ಹೊಸಬರ ಲವ್ ಶುರು ಗುರು: ಅಕ್ಟೋಬರ್ 6ಕ್ಕೆ ಚಿತ್ರ ರಿಲೀಸ್

ಅಪ್ಪಟ ಕನ್ನಡ ಪ್ರತಿಭೆಗಳಿಗೆ ಅವಕಾಶ ನೀಡಿ ತೆಗೆದಿರುವ ಲವ್‌ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು, ಪ್ರಾಮಿಸಿಂಗ್‌ ಆಗಿದೆ. ಲವ್‌ ಚಿತ್ರವನ್ನು ಅಕ್ಟೋಬರ್‌ 6ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮಹೇಶ ಸಿ ಅಮ್ಮಳ್ಳಿದೊಡ್ಡಿ ಲವ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ಮಹೇಶ ಓ ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದು, ಈಗ ಪ್ರೇಮಕಥೆ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ನಿರ್ದೇಶಕರಾದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಮಾತನಾಡಿ, ನಮ್ಮ ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗ್ತಿದೆ. ಬಿ ಕೆ ಗಂಗಾಧರ್ ಅವರು ಲವ್ ಸಿನಿಮಾ ವಿತರಣೆ ಮಾಡಿದ್ದು, ಎಲ್ಲಾ ಮಲ್ಟಿಫ್ಲೆಕ್ಸ್ ನಲ್ಲಿ ರಿಲೀಸ್ ಮಾಡಿದ್ದು, 30ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗ್ತಿದೆ ಎಂದರು.

ನಾಯಕಿ ವೃಷ ಪಾಟೀಲ ಮಾತನಾಡಿ, ಇದೇ ಅಕ್ಟೋಬರ್ 6ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಸ್ವಲ್ಪ ಭಯ ಇದೆ. ಮೊದಲ ಬಾರಿಗೆ ನಾನು ನಾಯಕಿಯಾಗಿ ನಟಿಸಿದ ಚಿತ್ರ ರಿಲೀಸ್ ಆಗ್ತಿದೆ. ಖುಷಿ ಜೊತೆಗೆ ಭಯನೂ ಇದೆ. ನಾನು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು.

ನಾಯಕ ಪ್ರಜಯ್ ಜಯರಾಮ್ ಮಾತನಾಡಿ, ಸಿನಿಮಾ ಮಾಡಬೇಕು ಎಂದು ಹೊರಟಾಗ ಇಲ್ಲಿ ತನಕ ಬರುತ್ತದೆ ಎಂದು ಗೊತ್ತಿರಲಿಲ್ಲ. ಯಾಕಂದ್ರೆ ಹೊಸಬರ ಸಿನಿಮಾ. ಏನಾಗುತ್ತದೆ ಎಂಬ ಭಯ ಇತ್ತು. ಈಗ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಹಿಂದೂ ಮುಸ್ಲಿಂ ಪ್ರೇಮಕಥೆ ಜೊತೆಗೆ ಮತ್ತೊಂದು ಪ್ರೇಮಕಥೆ ಸಿನಿಮಾದಲ್ಲಿದೆ ಎಂದರು.

ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ.

ಶ್ರೀಕಾಲ ಭೈರವೇಶ್ವರ ಮೂವೀ‌ ಮೇಕರ್ಸ್ ನಡಿ ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

ನೈಜ ಘಟನೆಯ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಅಕ್ಟೋಬರ್‌ 6ಕ್ಕೆ ಲವ್ ಸಿನಿಮಾ ತೆರೆಗೆ ಬರ್ತಿದ್ದು, ಪೊಗರು ಸಿನಿಮಾ ನಿರ್ಮಿಸಿದ್ದ ಬಿಕೆ ಗಂಗಾಧರ್ ರಾಜ್ಯಾದ್ಯಂತ ಚಿತ್ರ ವಿತರಣೆ ಮಾಡಲಿದ್ದಾರೆ.
.

Related Posts

error: Content is protected !!