Categories
ಸಿನಿ ಸುದ್ದಿ

ರಂಗಸಮುದ್ರ ಟ್ರೇಲರ್ ಬಂತು: ಜನವರಿ 12ಕ್ಕೆ ಸಿನಿಮಾ ರಿಲೀಸ್

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ “ರಂಗ ಸಮುದ್ರ” ಚಿತ್ರದ ಟ್ರೇಲರ್ ಅನ್ನು ರಾಘವೇಂದ್ರ ರಾಜಕುಮಾರ್ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಇಂತಹ ಕಥಾವಸ್ತು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ಮೊದಲ ಸೆಲ್ಯೂಟ್. ಇನ್ನು ರಂಗಾಯಣ ರಘು ಅವರ ಅಭಿನಯ ನಿಜಕ್ಕೂ ಅದ್ಭುತ. ಇಂತಹ ಚಿತ್ರದಲ್ಲಿ ನಾನು ಅಭಿನಯಿಸಿರುವುದು ನನ್ನ ಭಾಗ್ಯ. ಈ ಚಿತ್ರ ಯಶಸ್ವಿಯಾಗಲಿ. ನಾನು ಸದಾ ಅವರ ಜೊತೆಗಿರುತ್ತೇನೆ ಎಂದರು.

ರಾಜಕುಮಾರ್ ಅಸ್ಕಿ ಅವರು ಹೇಳಿದ ಕಥೆ ಇಷ್ಟವಾಯಿತು. ತಕ್ಷಣ ಒಪ್ಪಿಕೊಂಡೆ. ಜನಪದ ಸೊಗಡಿನ ಈ ಸಿನಿಮಾ ಚಿತ್ರೀಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅದ್ಭುತ ಸ್ಥಳಗಳಲ್ಲಿ ನಡೆದಿದೆ. ಪುನೀತ್ ರಾಜಕುಮಾರ್ ಅವರು ಈ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಆಗಲಿಲ್ಲ. ಈಗ ಅದೇ ಮನೆಯ ರಾಘವೇಂದ್ರ ರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ 12 ನೇ ತಾರೀಖು ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ನಟ ರಂಗಾಯಣ ರಘು ತಿಳಿಸಿದರು.

“ರಂಗ ಸಮುದ್ರ” ಎಂದರೆ ಊರಿನ ಹೆಸರು. ಈ ಕಥೆಯನ್ನು ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಮುಂದೆ ಹೇಳಿದಾಗ ಅವರು, ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸದರೆ ಚೆನ್ನಾಗಿರುತ್ತದೆ ಎಂದರು. ನನಗೂ ಅವರ ಬಳಿ ಈ ಪಾತ್ರ ಮಾಡಿಸಬೇಕೆಂಬ ಆಸೆಯಿತ್ತು. ನಮ್ಮ ಆಸೆಯನ್ನು ಅಭಿನಯಿಸಲು ಒಪ್ಪಿಗೆ ನೀಡಿ ನಮ್ಮ ಆಸೆ ಈಡೇರಿಸಿದರು. ಈ ಚಿತ್ರವನ್ನು ಮೊದಲು ನೋಡಿದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಚಿತ್ರವನ್ನು ನೋಡಿ, ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ(ಅತಿಥಿ ಪಾತ್ರದಲ್ಲಿ) ನಟಿಸುವುದಾಗಿ ಹೇಳಿದ್ದರು. ಆದರೆ ವಿಧಿಯಾಟದಿಂದ ಅದು ಆಗಲಿಲ್ಲ. ಕಲಾವಿದರ ಹಾಗೂ ತಂತ್ರಜ್ಞರ ಸಹಾಕರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ರಾಜಕುಮಾರ್ ಅಸ್ಕಿ ಹೇಳಿದರು.

ನಾನು ಹಾಸನ ಜಿಲ್ಲೆಯ ಕೊಣನೂರಿನವನು. ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತ. ಸಿನಿಮಾ ರಂಗ ಹೊಸತು. ರಾಜಕುಮಾರ್ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಜನವರಿ 12 ರಂದು ಸಂಕ್ರಾಂತಿ ಸಮಯದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ಬೇರೆ ಭಾಷೆಗಳ ಚಿತ್ರಗಳು ಬರುತ್ತಿದೆ. ಕನ್ನಡದಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ನಮ್ಮ ಚಿತ್ರ ಮಾತ್ರ ಅಂದು ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಹೊಯ್ಸಳ ಕೊಣನೂರು ತಿಳಿಸಿದರು.

ಚಿತ್ರದಲ್ಲಿ ಐದು ಹಾಡುಗಳಿವೆ. ವಾಗೀಶ್ ಚನ್ನಗಿರಿ ಹಾಡುಗಳನ್ನು ಬರೆದಿದ್ದಾರೆ. ಕೈಲಾಶ್ ಖೇರ್, ವಿಜಯ ಪ್ರಸಾದ್, ಕೀರವಾಣಿ, ಸಂಚಿತ್ ಹೆಗಡೆ ಹಾಗೂ ನಾನು ಹಾಡಿದ್ದೇವೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ದೇಸಿ ಮೋಹನ್ ಮಾಹಿತಿ ನೀಡಿದರು.

ಗೀತರಚನೆಕಾರ ಹಾಗೂ ಚಿತ್ರದ ಉಸ್ತುವಾರಿ ಹೊತ್ತಿರುವ ವಾಗೀಶ್ ಚನ್ನಗಿರಿ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು “ರಂಗ ಸಮುದ್ರ” ದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ದಿಲ್ ಖುಷ್ ಮೊದಲ ಹಾಡು ಜನವರಿ ಮೂರಕ್ಕೆ ರಿಲೀಸ್

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಮೊದಲ ಹಾಡು ಜನವರಿ 3 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಮೋದ್ ಜಯ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಗೂ ಸ್ಪರ್ಷ ಹಾಡಿದ್ದಾರೆ.

ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಮೊದಲ ಹಾಡಿನ ಕುರಿತಾದ ಪ್ರೋಮೊ ಬಿಡುಗಡೆಯಾಗಿದ್ದು ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ “ದಿಲ್ ಖುಷ್” ಚಿತ್ರವನ್ನು ಪ್ರಮೋದ್ ಜಯ ನಿರ್ದೇಶಿಸಿದ್ದಾರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಿಂಪಲ್ ಸುನಿ ಅವರ ಬಳಿ ಕಾರ್ಯ ನಿರ್ವಹಿಸಿರುವ ಪ್ರಮೋದ್ ಜಯ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.


ಐದು ಸುಮಧುರ ಹಾಡುಗಳಿದ್ದು, ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ನಿರ್ದೇಶನವಿದೆ. ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.

ರಂಜಿತ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸ್ಪಂದನ ಸೋಮಣ್ಣ “ದಿಲ್ ಖುಷ್ ” ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಒಂದು ಸರಳ ಪ್ರೇಮಕಥೆ ಮೊದಲ ಹಾಡು ಬಂತು: ನೀನ್ಯಾರಲೆ ಎಂದು ಗುನುಗಿದ ವಿನಯ್ ರಾಜ್ ಕುಮಾರ್

ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್‌ ಮಲಿಕ್‌ ಧ್ವನಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.

ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ್ ಪುರುಷ’ ಬಳಿಕ ಸುನಿ ‘ಗತವೈಭವ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ ‘ಒಂದು ಸರಳ ಪ್ರೇಮಕಥೆ’ ಶುರು ಮಾಡಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ ಈ ಸಿನಿಮಾಗೆ ಮೈಸೂರು ರಮೇಶ್‌ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಬಿಸಿ ಬಿಸಿ ಐಸ್ ಕ್ರೀಮ್: ಇದು ಕಹಿ ನಿರ್ದೇಶಕರ ಚಿತ್ರ

ಕನ್ನಡ ಚಿತ್ರರಂಗ ಈಗ ಹೊಸ ಜೋಶ್ ನಿಂದ 2024ಕ್ಕೆ ಹಾಯ್ ಹೇಳಿದೆ. ಹೊಸ ವರ್ಷದ ಸುಸಂದರ್ಭದಲ್ಲಿ ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ‘ಬಿಸಿ-ಬಿಸಿ Ice-Cream’ ಕಥೆ ಹೇಳೋದಿಕ್ಕೆ ಸಿದ್ದವಾಗ್ತಿದ್ದಾರೆ ಅರವಿಂದ್ ಶಾಸ್ತ್ರಿ.

ಈ ಹಿಂದೆ ಕಹಿ, ಅಳಿದು ಉಳಿದವರು ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರೀ ‘ಬಿಸಿ-ಬಿಸಿ Ice-Cream’ಗೆ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೊಸ ವರ್ಷಕ್ಕೆ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡ, ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ.

ಐಸ್ ಕ್ರೀಂ ಬಿಸಿ ಬಿಸಿಯಾಗಿರುತ್ತಾ..? ನೋ ಚಾನ್ಸ್..ಸಿನಿಮಾದ ಕಥೆಗೆ ಸೂಕ್ತ ಎನ್ನುವ ಕಾರಣಕ್ಕೆ ಅರವಿಂದ್ ಈ ಟೈಟಲ್ ಫಿಕ್ಸ್ ಮಾಡಿದ್ದಾರೆ. ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್-ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

4 ವರ್ಷದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರೀ, ಒಂದೊಳ್ಳೆ ಫ್ರೆಶ್ ಕಥೆ ಮೂಲಕ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಚಿತ್ರಕ್ಕಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ನಡಿ ಅಕ್ಷರ ಭಾರಧ್ವಾಜ್ ‘ಬಿಸಿ-ಬಿಸಿ Ice-Cream’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ ಕಹಳೆ ಮೊಳಗಿಸಿದೆ.

Categories
ಸಿನಿ ಸುದ್ದಿ

ಇಟಲಿಯಲ್ಲಿ ಗಣೇಶ್ ಹಾಡು ಕುಣಿತ! ಹೊಸ ವರ್ಷಕ್ಕೆ ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ಬಂತು

ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇಟಲಿ ಮತ್ತು ಮಾಲ್ಟಾದಲ್ಲಿ ನಡೆಯಲಿದೆ. ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕ ನಾಯರ್ ಹಾಗೂ ಶರಣ್ಯ ಶೆಟ್ಟಿ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ. ಹಾಡುಗಳ ಚಿತ್ರೀಕರಣಕ್ಕಾಗಿ ಮೂವತ್ತು ಜನರ ತಂಡ ಇಟಲಿಗೆ ಪ್ರಯಾಣ ಬೆಳಸಲಿದೆ. ಹೊಸವರ್ಷ ಆರಂಭದ ಸಂದರ್ಭದಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.

ಯಶಸ್ವಿ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ.

“ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಮ್ಯಾಟ್ನಿ ಸಾಂಗ್: ನೀನಾಸಂ ಸತೀಶ್ ನಟನೆ ಸಿನಿಮಾಗೆ ಡಾಲಿ ಸಾಥ್

ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಚಿತ್ರದ ನಂತರ ನಟಿಸಿರುವ ಚಿತ್ರ “ಮ್ಯಾಟ್ನಿ”. ಬಹು ನಿರೀಕ್ಷಿತ ಈ ಚಿತ್ರದ ” ಬಾರೋ ಬಾರೋ ಬಾಟಲ್ ತಾರೋ” ಎಂಬ ಹಾಡು ನ್ಯೂ ಇಯರ್ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ. ಯುವಪೀಳಿಗೆಗೆ ಹೇಳಿಮಾಡಿಸಿದಂತಿರುವ ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ನಿರ್ಮಿಸಿರುವ, ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಮ್ಯಾಟ್ನಿ” ಚಿತ್ರಕ್ಕಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. .

Categories
ಸಿನಿ ಸುದ್ದಿ

ಶಿವಣ್ಣನ ಹೊಸ ಸಿನಿಮಾಗೆ ದಿನಕರ್ ತೂಗುದೀಪ ನಿರ್ದೇಶಕ

ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸ ವರ್ಷಕ್ಕೆ ಘೋಷಣೆಯಾಗಿದೆ. ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ.

ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ದಿನಕರ್ ತೂಗುದೀಪ ಅವರ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಈ ಚಿತ್ರದ ಕುರಿತು ಅಭಿಮಾನಿ ವಲಯದಲ್ಲಿ ಹಾಗೂ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ.

Categories
ಸಿನಿ ಸುದ್ದಿ

ಜನವರಿಗೆ ಅಲೆಕ್ಸಾ ರಿಲೀಸ್: ಇದು ಅದಿತಿ ಪ್ರಭುದೇವ ಅಭಿನಯದ ಚಿತ್ರ

ವಿ.ಚಂದ್ರು ನಿರ್ಮಾಣದ, ಜೀವ ನಿರ್ದೇಶನದ ಹಾಗೂ ಅದಿತಿ ಪ್ರಭುದೇವ ನಾಯಕಿಯಾಗಿ, ಪವನ್ ತೇಜ್ ನಾಯಕನಾಗಿ ನಟಿಸಿರುವ “ಅಲೆಕ್ಸಾ” ಚಿತ್ರ ಜನವರಿ 26 ಗಣರಾಜ್ಯೋತ್ಸವದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು “ಅಲೆಕ್ಸಾ” ಚಿತ್ರವನ್ನು ಡಿಸೆಂಬರ್ 29 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ “ಕಾಟೇರ” ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ನಮ್ಮ ಚಿತ್ರದ ಬಿಡುಗಡೆಯನ್ನು ಜನವರಿ 26ಕ್ಕೆ ಮುಂದೂಡಿರುವುದಾಗಿ ನಿರ್ದೇಶಕ ಜೀವ ತಿಳಿಸಿದ್ದಾರೆ.

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ.ಚಂದ್ರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾ||ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದಿದ್ದು, ಎ.ಪಿ.ಒ ಸಂಗೀತ ನೀಡಿದ್ದಾರೆ. ಸಾಯಿಸತೀಶ್ ಛಾಯಾಗ್ರಹಣ, ಉಮೇಶ್ ಸಂಕಲನ, ಚಂದ್ರು, ರಾಮು, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಅದಿತಿ ಪ್ರಭುದೇವ ವಿಶೇಷ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ತೇಜ್ ನಾಯಕನಾಗಿ ಅಭಿನಯಿಸಿದ್ದಾರೆ‌. ನಾಗಿಣಿ ಧಾರಾವಾಹಿ ಖ್ಯಾತಿಯ ನಾಗಾರ್ಜುನ್, ಮೇಘಾಶ್ರೀ, ಹನುಮಂತೇಗೌಡ, ಚಂದ್ರಕಲಾ ಮೋಹನ್, ಮಿಮಿಕ್ರಿ ಗೋಪಿ,
ಮೈಸೂರು ಮಲ್ಲೇಶ್ ಹಾಗೂ ಮನಮೋಹನ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಶೆಫ್ ಚಿದಂಬರನ ಜೊತೆ ಚಲ ರೆಚೆಲ್ ಡೇವಿಡ್

“ಲವ್ ಮಾಕ್ಟೇಲ್” ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ರೆಚೆಲ್ ಡೇವಿಡ್. ರೆಚೆಲ್ ಅವರು ಎಂ.ಆನಂದರಾಜ್ ನಿರ್ದೇಶನದ ಹಾಗೂ ಅನಿರುದ್ದ್ ಜತಕರ್ ನಾಯಕನಾಗಿ ನಟಿಸಿರುವ ” ಶೆಫ್ ಚಿದಂಬರ” ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ “ಅನು” ಎಂಬ ಪಾತ್ರದಲ್ಲಿ ರೆಚೆಲ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ‌. ರೆಚೆಲ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಇತ್ತೀಚಿಗೆ ಚಿತ್ರತಂಡ ಬಿಡುಗಡೆ ಮಾಡಿದೆ.

ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ “ಶೆಫ್ ಚಿದಂಬರ” ಸದ್ಯದಲ್ಲೇ ತೆರೆಯ ಮೇಲೆ ರಾರಾಜಿಸಲಿದ್ದಾನೆ. ಈಗಾಗಲೇ ಪೋಸ್ಟರ್, ಕ್ಯಾರೆಕ್ಟರ್ ಟೀಸರ್ ಮೂಲಕ ಮನೆಮಾತಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು “chef ಚಿದಂಬರ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಬಿಗ್ ಬಾಸ್ ಹುಡುಗಿ ಶೃತಿ ಪ್ರಕಾಶ್ ಅಭಿನಯದ ಫ್ರೈಡೆ ಚಿತ್ರ ಶುರು: ಇದು ಹೊಸ ದಿನಚರಿ ನಿರ್ದೇಶಕರ ಸಿನಿಮಾ

ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಹಾಗೂ “ಮೇಡ್ ಇನ್ ಬೆಂಗಳೂರು” ಚಿತ್ರದ ನಾಯಕ ಮಧುಸೂದನ್ ಗೋವಿಂದ್ ನಾಯಕ – ನಾಯಕಿಯಾಗಿ ನಟಿಸುತ್ತಿರುವ “ಫ್ರೈಡೆ” ಚಿತ್ರಕ್ಕೆ ಚಾಲನೆ ಸಿಕ್ಕಿದೆ. Dees films ಸಂಸ್ಥೆ Shoolin media ಸಂಸ್ಥೆ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಹಿಂದೆ “ಹೊಸ ದಿನಚರಿ” ಚಿತ್ರವನ್ನು ನಿರ್ದೇಶಿಸಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Dees films ಸಂಸ್ಥೆ ನಿರ್ಮಾಣದ ನಾಲ್ಕನೇ ಚಿತ್ರ ಹಾಗೂ Dees films ಸಂಸ್ಥೆ, shoolin media ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಎರಡನೇ ಚಿತ್ರ “ಫ್ರೈಡೆ”. ಈ ಹಿಂದೆ “ಆಯನ”, ” ಹೊಸ ದಿನಚರಿ ” ಹಾಗೂ ” ಗ್ರೇ ಗೇಮ್ಸ್” ಚಿತ್ರಗಳನ್ನು ನಿರ್ಮಾಣ ಮಾಡಿದ್ದೆವು. ಇದು ನಾಲ್ಕನೇ ಚಿತ್ರ. “ಆಯನ” ಹಾಗೂ “ಗ್ರೇ ಗೇಮ್ಸ್” ಚಿತ್ರಗಳನ್ನು ನಾನೇ ನಿರ್ದೇಶಿಸಿದ್ದೇನೆ‌. “ಫ್ರೈಡೆ” ಚಿತ್ರವನ್ನು “ಹೊಸ ದಿನಚರಿ” ಚಿತ್ರದ ನಿರ್ದೇಶಕರಾದ ಕೀರ್ತಿ ಹಾಗೂ ವೈಶಾಖ್ ನಿರ್ದೇಶಿಸುತ್ತಿದ್ದಾರೆ. ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ನಿರ್ಮಾಪಕರು. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಇರಾದೆ ಇದೆ ಎಂದರು ಕ್ರಿಯೇಟಿವ್ ನಿರ್ಮಾಪಕರಾದ ಗಂಗಾಧರ್ ಸಾಲಿಮಠ.

ಸಿನಿಮಾದವರಿಗೆ “ಫ್ರೈಡೆ” ಎಂದರೆ ವಿಶೇಷ. ನಮಗೂ ಹಾಗೆ. ಏಕೆಂದರೆ ನಮ್ಮ ಚಿತ್ರದ ಹೆಸರು “ಫ್ರೈಡೆ”. ಚಿತ್ರ ಬಿಡುಗಡೆಯಾಗುವುದು ” ಫ್ರೈಡೆ “. ಆ “ಫ್ರೈಡೆ”ಗೂ ನಮ್ಮ ಚಿತ್ರಕ್ಕೂ ನಂಟಿದೆ. “ಫ್ರೈಡೆ” ಬಿಡುಗಡೆಯಾದ ಹೊಸ ಚಿತ್ರವನ್ನು ನೋಡಲು ಹೋಗಿದ್ದ ದಂಪತಿ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಗುತ್ತದೆ.

ಅದೇ ಚಿತ್ರದ ಕಥಾಹಂದರ. ಮಧುಸೂದನ್ ಗೋವಿಂದ್, ಶೃತಿ ಪ್ರಕಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ‌. ನಾನು ಕಥೆ ರಚಿಸಿದ್ದು. ಚಿತ್ರಕಥೆಯನ್ನು ನಾನು ಹಾಗೂ ಕೀರ್ತಿ ಶೇಖರ್ ಬರೆದಿದ್ದೇವೆ. ಜನವರಿ ಮೊದಲವಾರದಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ನಿರ್ದೇಶಕರಲ್ಲೊಬ್ಬರಾದ ವೈಶಾಖ್ ಪುಷ್ಪಲತ.

ಮತ್ತೊಬ್ಬ ನಿರ್ದೇಶಕರಾದ ಕೀರ್ತಿ ಶೇಖರ್ ಮಾತನಾಡಿ, “ಫ್ರೈಡೆ” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮೂರು ಹಾಡುಗಳಿದೆ. ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದರು.

ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಮಧುಸೂದನ್ ಗೋವಿಂದ್, ಶೃತಿ ಪ್ರಕಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ಸಹ “ಫ್ರೈಡೆ” ಚಿತ್ರದ ಕುರಿತು ಮಾತನಾಡಿದರು.

error: Content is protected !!