ಗುರು ದೇಶಪಾಂಡೆ ನಿರ್ಮಾಣದ ಹೊಸ ಸಿನಿಮಾಗೆ ಚಾಲನೆ: ಗಿರಿರಾಜ್ ನಿರ್ದೇಶನದ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ಶುರು

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ “ಪ್ರೊಡಕ್ಷನ್ ನಂ 4” ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಪೂಜೆ ನಾಗರಭಾವಿಯ ಲೂಪ್ ಸ್ಟುಡಿಯೋಸ್ ನಲ್ಲಿ ನೆರವೇರಿದೆ. “ಜಟ್ಟ”, “ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಕನ್ನಡದ ಹೆಸರಾಂತ ನಿರ್ದೇಶಕ ಬಿ.ಜೆ.ಭರತ್ ಸಂಗೀತ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಹಿಂದೆ ಸಾಂಗ್ ರೆಕಾರ್ಡಿಂಗ್ ಪೂಜೆ ಎಂದರೆ ಒಂದು ಸಡಗರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರಿರಾಜ್, ಈಗ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಮತ್ತೆ ಸಾಂಗ್ ರೆಕಾರ್ಡಿಂಗ್ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇಂದು ಒಳ್ಳೆಯ ದಿವಸ ಎಂದು ಪೂಜೆ ಆರಂಭಿಸಿದ್ದೇವೆ. ಈ ಸಿನಿಮಾ ಈ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುತ್ತದೆ. ಮರೆಯಾಗುತ್ತಿರುವ ಸಂಸ್ಕೃತಿಯ ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಸಾಂಗ್ ರೆಕಾರ್ಡಿಂಗ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು.

ಇದು ಜಿ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ನಾಲ್ಕನೇಯ ಚಿತ್ರ. ನಮ್ಮ ಜಿ ಅಕಾಡೆಮಿ ಮೂಲಕ ಸಾಕಷ್ಟು ಮಕ್ಕಳಿಗೆ ನಟನಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹತ್ತು ಬ್ಯಾಚ್ ಗಳು ಯಶಸ್ವಿಯಾಗಿ ಪೂರ್ಣವಾಗಿದೆ. ಮಕ್ಕಳಿಗೆ ಬರೀ ನಟನೆ ಕಲಿಸಿಕೊಟ್ಟು ಕಳುಹಿಸಿದರೆ ಸಾಲದು. ಅವರಿಗೆ ಸೂಕ್ತ ವೇದಿಕೆ ಕೂಡ ಕಲ್ಪಿಸಿಕೊಡಬೇಕು. ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಮಕ್ಕಳಿಗೆ. ಆ ಸಲುವಾಗಿ ನಮ್ಮ ಈ ಚಿತ್ರದಲ್ಲಿ ನಮ್ಮ ಜಿ ಅಕಾಡೆಮಿಯ 15ಕ್ಕೂ ಅಧಿಕ ಮಕ್ಕಳು ನಟಿಸಲಿದ್ದಾರೆ. ಕನ್ನಡದ ಹೆಸರಾಂತ ನಟರು ಈ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ.

ಈ ಕುರಿತು ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ. ಕನ್ನಡದಲ್ಲಿ ಕಮರ್ಷಿಯಲ್ ಹಾಗೂ ಪ್ರಶಸ್ತಿ ಚಿತ್ರಗಳು ಎಂಬ ಎರಡು ವಿಭಾಗಗಳಿದೆ. ಬೇರೆ ಕಡೆ ಆ ರೀತಿ ಇಲ್ಲ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಜನರು ನೋಡುತ್ತಾರೆ. ಆಗ ಅದು ಎರಡು ವಿಭಾಗಗಳನ್ನೊಳಗೊಂಡ ಒಂದೇ ಚಿತ್ರವಾಗುತ್ತದೆ. ನಮ್ಮ ಚಿತ್ರ ಕೂಡ ಅದೇ ರೀತಿ ಇರಲಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.

ಇಂದಿನಿಂದ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದರು ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

error: Content is protected !!