Categories
ಸಿನಿ ಸುದ್ದಿ

ಫಾರೆಸ್ಟ್ ಒಳಹೊಕ್ಕ ಬ್ರಹ್ಮಚಾರಿ ನಿರ್ದೇಶಕ: ಇದು ರಂಗಾಯಣ ರಘು- ಚಿಕ್ಕಣ್ಣ ಚಿತ್ರ

ಕನ್ನಡದಲ್ಲಿ ‌ಸದ್ದಿಲ್ಲದೇ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ರೂಪಗೊಳ್ಳುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಕಾಂಬೋದಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ನಾಲ್ಕು ಜನ ತಾರೆಯರನ್ನು ಒಂದೇ ಫ್ರೇಮ್ ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬ್ಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳ‌ ಸಾರಥಿ ಚಂದ್ರ ಮೋಹನ್.

ಚಂದ್ರ ಮೋಹನ್ ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್ ಅಡ್ವೆಂಚರ್‌ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ.

ಚಿಕ್ಕಣ್ಣ, ಅನೀಶ್ , ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದ ಆಧಾರ ಸ್ತಂಭಗಳು. ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೇ ಕಾಂತರಾಜು ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಫಾರೆಸ್ಟ್ ಸಿನಿಮಾಗೆ ವಿ. ರವಿಶಂಕರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡವೀಗ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ.

Categories
ಸಿನಿ ಸುದ್ದಿ

ಏಪ್ರಿಲ್ 19ಕ್ಕೆ ರಾಜು ದಿ ಲೆಜೆಂಡ್ ಸುಗಮ‌ ಸಂಗೀತ ಸಂಜೆ

ತಮ್ಮ ಅಮೋಘ ಗಾಯನದಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ “ರಾಜು ದಿ ಲೆಜೆಂಡ್” ಎಂಬ ಹೆಸರಿನಲ್ಲಿ ಏಪ್ರಿಲ್ 19 ರಂದು ಕೋಣನ ಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ ರಾವ್, ಪ್ರವೀಣ್ & ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ಈ ಕುರಿತು ಸ್ನೇಹಿತರಾದ ಖ್ಯಾತ ಡ್ರಮ್ಮರ್ ಮಂಜುನಾಥ್ ಸತ್ಯಶೀಲ್ ಅವರ ಬಳಿ ಹೇಳಿದೆ. ಅವರ ಯೋಚನೆ ಕೂಡ ಇದೇ ಆಗಿತ್ತು. ನಾವಿಬ್ಬರು ಈ ಸಮಾರಂಭವನ್ನು ಆಯೋಜಿಸಲು ಮುಂದಾದೆವು. ಈ ಕುರಿತು ಎಲ್ಲರೊಡನೆ ಚರ್ಚಿಸಿದಾಗ ರಾಜು ಅನಂತಸ್ವಾಮಿ ಅವರ ಹತ್ತಿರದ ಒಡನಾಡಿಗಳು ಹಾಗೂ ಅವರ ಶಿಷ್ಯರು ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ‌ಶ್ರೀನಿವಾಸ ಜಿ ಕಪ್ಪಣ್ಣ ಹಾಗೂ ಪ್ರವೀಣ್ ಡಿ ರಾವ್ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆಯಲಿದೆ.

ಏಪ್ರಿಲ್ 19 ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ “ರಾಜು ದಿ ಲೆಜೆಂಡ್” ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ನಡೆಯಲಿದೆ. ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನ ಸುಪ್ರಸಿದ್ದ ಗಾಯಕ, ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಷುಯಲ್ಸ್ ಪ್ರದರ್ಶನವಾಗುತ್ತದೆ.

ಮೊದಲು ಈ ಸಮಾರಂಭವನ್ನು ಸಣ್ಣ ಮಟ್ಟದಲ್ಲಿ ಮಾಡಬೇಕೆಂದುಕೊಂಡೆವು. ಈಗ ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ದೊಡ್ಡ ಆಡಿಟೋರಿಯಂನಲ್ಲಿ ಈ ಸಮಾರಂಭ ನಡೆಯಲಿದೆ. ಈ ಸಂಗೀತ ಸಂಜೆ ಯಶಸ್ವಿಯಾಗಲು ಜನರ ಸಹಕಾರ ಅಗತ್ಯ. ರಾಜು ಅನಂತಸ್ವಾಮಿ ಅವರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಈ ಮೂಲಕ ವಿನಂತಿ ಮಾಡುತ್ತೇವೆ‌. ಟಿಕೇಟ್ ಬೆಲೆ ಕೇವಲ 299 ರೂಪಾಯಿಗೆ ನಿಗದಿ ಮಾಡಲಾಗಿದ್ದು, ಬುಕ್ ಮೈ ಶೋ‌ನಲ್ಲಿ ಟಿಕೇಟ್ ಗಳು ದೊರೆಯಲಿದೆ ಎಂದು ಗಾಯಕಿ ಅನನ್ಯ ಭಟ್ ತಿಳಿಸಿದರು.

ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ಅವರ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಏಪ್ರಿಲ್ 19, ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಅದೇ ದಿನ “ರಾಜು ದಿ ಲೆಜೆಂಡ್” ಎಂಬ ಕಾರ್ಯಕ್ರಮ ಮಾಡಲು ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದ್ದೆವು. ನಂತರ ನಮ್ಮೊಂದಿಗೆ ರಾಜು ಅನಂತಸ್ವಾಮಿ ಅವರ ಒಡನಾಡಿಗಳು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಜೊತೆಯಾದರು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ “ರಾಜು ದಿ ಲೆಜೆಂಡ್” ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು(ಕೋರಸ್) ಹಾಗೂ ವಾದ್ಯಗಾರರು ಉಪಸ್ಥಿತರಿರುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ‌. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ ಎಂದು ಕಾರ್ಯಕ್ರಮದ ಬಗ್ಗೆ ಮಂಜುನಾಥ್ ಸತ್ಯಶೀಲ್ (ಡ್ರಮ್ಮರ್) ಮಾಹಿತಿ ನೀಡಿದರು.

ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, “ರಾಜು ದಿ ಲೆಜೆಂಡ್” ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಸಹ ಸಮಾರಂಭದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಉತ್ತರಕಾಂಡ ಸೇರಿದ ಚೈತ್ರ ಆಚಾರ್

ಚೈತ್ರ ಆಚಾರ್”ಉತ್ತರಕಾಂಡ” ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. “ಲಚ್ಚಿ” ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ನಟಿ ಚೈತ್ರ ಆಚಾರ್.


“ಉತ್ತರಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ ಹಾಗೂ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

Categories
ಸಿನಿ ಸುದ್ದಿ

ಕರುನಾಡ ಕುಳ್ಳ ಕಣ್ಮರೆ: ಹಿರಿಯ ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಇನ್ನು ನೆನಪು ಮಾತ್ರ…

ಹಿರಿಯ ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ, ಏಪ್ರಿಲ್ 16ರ ಬೆಳಿಗ್ಗೆ ಎದ್ದು ಕಾಫಿ ಕುಡಿದು, ಸುಸ್ತಾಗುತ್ತೆ ಎಂದು ಹೇಳಿದ ಅವರು ನಿದ್ದೆಗೆ ಜಾರಿದ್ದರು. ಆದರೆ ದ್ವಾರಕೀಶ್ ಅವರು ಮಲಗಿದ್ದಾಗಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಂಗಲೆ ಶಾಮರಾವ್ ದ್ವಾರಕನಾಥ್ ಅವರ ಮೂಲ ಹೆಸರು. ಅವರು ಐವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1942 ಆಗಸ್ಟ್ 19ರಂದು ಬಂಗಲೆ ಶಾಮರಾವ್ ಮತ್ತು ಜಯಮ್ಮ ದಂಪತಿಗೆ ಹುಣಸೂರಿನಲ್ಲಿ ದ್ವಾರಕೀಶ್ ಜನಿಸಿದ್ದರು. ಅವರು ಮೈಸೂರಿನ ಇಟ್ಟಿಗೆಗೂಡಲ್ಲಿ ಬೆಳೆದು, ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ನಿರ್ದೇಶಕರಾಗಿ ಜನಪ್ರಿಯಗೊಂಡವರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಕಷ್ಟಪಟ್ಟು ಬೆಳೆದಿದ್ದರು.

ವಿಷ್ಣು ವರ್ಧನ್‌ಗೆ ಅವರ ಆಪ್ತಮಿತ್ರನಾಗಿದ್ದ ಅವರು ಬಹುತೇಕ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು.
ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಜೋಡಿಯಾಗಿ ನಟಿಸಿ, ದಾಖಲೆ ಬರೆದಿದ್ದರು.

ಈ ಮೊದಲು ಹಲವು ಬಾರಿ ದ್ವಾರಕೀಶ್ ಸಾವಿನ ಸುದ್ದಿ ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಫೇಕ್ ಎಂದು ಸ್ನತಃ ದ್ವಾರಕೀಶ್ ಅವರೇ ವೀಡಿಯೋ ಮೂಲಕ ಸ್ಪಷ್ಟಪಡಿಸಿದ್ದರು. ಆದರೆ , ಏಪ್ರಿಲ್ 16ರ ಬೆಳಗ್ಗೆ ದ್ವಾರಕೀಶ್ ಕುಟುಂಬಸ್ಥರೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಗುಂಮ್ಟಿ ಎಂಬ ಕುಡುಬಿ ಜನ ಜೀವನ ಚಿತ್ರ: ಕಡಲ ಕಥೆಯ ಸಿನಿಮಾ ಶೀರ್ಷಿಕೆ ಅನಾವರಣ

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ಈ ಬಾರಿ ಮತ್ತೊಂದು ಅಂಥದ್ದೇ ಕಂಟೆಂಟ್ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ.

ಹೌದು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಮ್ಮ ಮೂರನೇ ಸಿನಿಮಾಕ್ಕೆ ‘ಗುಂಮ್ಟಿ’ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಸಂದೇಶ್ ಶೆಟ್ಟಿ ತೆರೆಮೇಲೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ‘ಡಬಲ್ ರೋಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ!

ಇನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಲು ಹೊರಟಿದೆ ಚಿತ್ರತಂಡ.

ಈಗಾಗಲೇ ಸದ್ದಿಲ್ಲದೆ ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರತಂಡ ‘ಗುಂಮ್ಟಿ’ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ.

ಇದೀಗ ‘ಗುಂಮ್ಟಿ’ ಸಿನಿಮಾದ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಎರಡು-ಮೂರು ತಿಂಗಳಿನಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಇನ್ನು ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಸಂದೇಶ್ ಶೆಟ್ಟಿ ಆಜ್ರಿ ಅವರಿಗೆ ವೈಷ್ಣವಿ ನಾಡಿಗ್ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗುಂಮ್ಟಿ’ ಸಿನಿಮಾ ಅನೀಶ್ ಡಿಸೋಜಾ ಕ್ಯಾಮರದ ಕೈಚಳಕದಲ್ಲಿ ಮೂಡಿ ಬಂದಿದ್ದು, ಸಿನಿಮಾಕ್ಕೆ ಮೋಹನ್ ಸಂಗೀತ ಸಂಯೋಜಿಸಿದ್ದಾರೆ.

‘ಗುಂಮ್ಟಿ’ ಸಿನಿಮಾಕ್ಕೆ ಶಿವರಾಜ್ ಮೇಹು ಸಂಕಲನವಿದೆ. ‘ಯುಗಾದಿ’ ಹಬ್ಬದ ಸಂದರ್ಭದಲ್ಲಿ ‘ಗುಂಮ್ಟಿ’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ಗುಂಮ್ಟಿ’ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Categories
ಸಿನಿ ಸುದ್ದಿ

ಜೀ5 ಒಟಿಟಿಯಲ್ಲಿ ‘ಗಾಮಿ’ ಸ್ಟ್ರೀಮಿಂಗ್ :ವಿಶ್ವಕ್ ಸೇನ್ ಚಿತ್ರ ಮೆಚ್ಚಿದ ಪ್ರೇಕ್ಷಕ

ಮಾರ್ಚ್‌ 8ರಂದು ತೆರೆಕಂಡಿರುವ ವಿಶ್ವಕ್‌ ಸೇನ್‌ ನಟನೆಯ ತೆಲುಗು ಚಿತ್ರ “ಗಾಮಿ’ ಓಟಿಟಿಯತ್ತ ಹೆಜ್ಜೆ ಹಾಕಿದ್ದು, ಏ.12ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಿದೆ. ಗಾಮಿ ಸಿನಿಮಾಗೆ ವಿದ್ಯಾರ್ಧ ಕಾಗಿತಾ ನಿರ್ದೇಶನವಿದೆ.

ವಿದ್ಯಾರ್ಧ ಕಾಗಿತಾ ಇವರ ಚೊಚ್ಚಲ ಪ್ರಯತ್ನ. ವಿಶ್ವಕ್‌ ಸೇನ್‌ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್‌ ಸಮದ್‌, ಹರಿಕಾ ಪೇಡಾಡ, ಶಾಂತಿ ರಾವ್‌, ಮಯಾಂಕ್‌ ಪರಾಕ್‌ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್‌ ಸಂಕಲನ, ನರೇಶ್‌ ಕುಮಾರನ್‌ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್‌ ಶಬರೀಶ್‌ ಚಿತ್ರಕ್ಕೆ ಹಣ ಹಾಕಿದ್ದಾರೆ.

Categories
ಸಿನಿ ಸುದ್ದಿ

ಕೋಟಿ ಟೀಸರ್ ಬಂತು: ಇದು ಡಾಲಿ ಧನಂಜಯ ಚಿತ್ರ; ಜಿಯೋ ಸ್ಟುಡಿಯೋ ಸಿನಿಮಾ ಜೂನ್ 14ಕ್ಕೆ ರಿಲೀಸ್

ಜಿಯೋ ಸ್ಟುಡಿಯೋಸ್ ನಿರ್ಮಾಣದ ಕೋಟಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಟ ಧನಂಜಯ ಈ ಸಿನಿಮಾ ನಾಯಕರಾಗಿದ್ದು ಪರಮ್ ಇದನ್ನು ನಿರ್ದೇಶಿಸಿದ್ದಾರೆ.

ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ ೩೭೦, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ಕೊಟ್ಟಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆ ʼ ಎಂದು ಪಾತ್ರದ ಬಗ್ಗೆ ಮಾತಾಡುತ್ತಾರೆ ಧನಂಜಯ.

“ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ.

ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್. ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

‘ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆʼ ಎನ್ನುತ್ತಾರೆ ಜಿಯೋ ಸ್ಟುಡಿಯೋಸ್ ನ ಕನ್ನಡದ ಮುಖ್ಯಸ್ಥರೂ ಆಗಿರುವ ಪರಮ್.

ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ. ‘ಸಪ್ತ ಸಾಗರದಾಚೆʼ ಸಿನಿಮಾದ ನಂತರ ಜನರಿಗೆ ಹೆಚ್ಚು ಪರಿಚಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದಾರೆ. ಕೋಟಿ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ.

ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಐದು ಹಾಡುಗಳಿವೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಒಂದು ಹಾಡನ್ನು ಸ್ವತಃ ವಾಸುಕಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ‘ಕೋಟಿ’ ಸಿನಿಮಾದ ಮುಖ್ಯ ಭಾಗವಾಗಿದ್ದು, ಆ ಹೊಣೆಯನ್ನು ‘777ಚಾರ್ಲಿ’ ಮತ್ತು ʼ೨೦೧೮ʼ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ನೊಬಿನ್ ಪೌಲ್ ಹೊತ್ತಿದ್ದಾರೆ. ಅವರು ಸಂಗೀತ ಸಂಯೋಜನೆಯ ಮಲಯಾಳಮ್ ಚಿತ್ರ ʼ೨೦೧೮ʼ ಆಸ್ಕರ್ ಪ್ರಶಸ್ತಿಗೆ ಈ ವರ್ಷ ಭಾರತದ ಅಧಿಕೃತ ಆಯ್ಕೆ ಆಗಿತ್ತು.

ಇದರ ಸಂಕಲನದ ಜವಾಬ್ದಾರಿಯನ್ನು ಹೊತ್ತಿರುವುದು ಕನ್ನಡದ ಪ್ರತಿಭಾವಂತ ಯುವ ಸಂಕಲನಕಾರ, ಛಾಯಾಗ್ರಾಹಕ ಪ್ರತೀಕ್ ಶೆಟ್ಟಿ. ಈಗಾಗಲೇ ʼಕಾಂತಾರʼ ʼ೭೭೭ಚಾರ್ಲಿʼ ಸಂಕಲನದ ಮೂಲಕ ಹೆಸರು ಗಳಿಸಿರುವ ಇವರು “ಗಂಧದ ಗುಡಿʼ ಸಾಕ್ಷ್ಯ ಚಿತ್ರಕ್ಕೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಟೆಲಿವಿಷನ್ ಪ್ರಯಾಣದಲ್ಲಿ ಪರಮ್ ಅವರಿಗೆ ಜೋಡಿಯಾಗಿದ್ದ ಅರುಣ್ ಬ್ರಹ್ಮನ್ ‘ಕೋಟಿ’ ಸಿನಿಮಾದ ಸಿನಿಮಾಟೋಗ್ರಾಫರ್ ಆಗಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೇಂಕಟೇಶ್ ಬೇರೆ ಬೇರೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೋಟಿ ಸಿನಿಮಾದ ಟೀಸರ್ ಬಿಡುಗಡೆಯಾಗಿ ಈಗ ಕುತೂಹಲ ಹೆಚ್ಚಾಗಿದೆ. ಸಹಜವಾಗಿ ಇದ್ದುಬಿಡುವುದರ ಮೂಲಕ ಹೇಗೆ ಪಾತ್ರವೇ ಆಗಿಬಿಡಬಹುದು ಎನ್ನುವುದರ ಝಲಕ್ಕನ್ನು ಧನಂಜಯ ತೋರಿಸಿದ್ದರೆ ರಮೇಶ್ ಇಂದಿರಾ ಒಬ್ಬ ಪ್ರಭಾವಶಾಲಿ ಖಳನಟ ಆಗುವ ಭರವಸೆ ಹುಟ್ಟಿಸಿದ್ದಾರೆ. ಜೂನ್ 14 ರಂದು ಕೋಟಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಾಂಗರೂ ಇದು ಆದಿತ್ಯ ಚಿತ್ರ: ಮೇ 3ಕ್ಕೆ ರಿಲೀಸ್

ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಹಿರಿಯ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ.

ನಾವು ಆರು ಜನ ಸ್ನೇಹಿತರು. ನಾವೆಲ್ಲಾ ಸಣ್ಣ ಕೈಗಾರಿಕೋದ್ಯಮಿಗಳು. ಪೀಣ್ಯದಲ್ಲಿ ನಮ್ಮ ಫ್ಯಾಕ್ಟರಿ ಇದೆ. ಸಿನಿಮಾ ರಂಗ ನಮಗೆ ಹೊಸತು. ಸ್ನೇಹಿತರ ಮೂಲಕ ಪರಿಚಿತರಾದ ನಿರ್ದೇಶಕ ಕಿಶೋರ್ ಅವರು ಈ ಚಿತ್ರದ ಕಥೆ ಹೇಳಿದ ರೀತಿ ನಮಗೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆವು. ನಟ ಆದಿತ್ಯ ಹಾಗೂ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಮೇ 3 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ಆರು ಜನ ನಿರ್ಮಾಪಕರ ಪರವಾಗಿ ಚೆನ್ನಕೇಶವ ಬಿ ಸಿ ಮಾತನಾಡಿದರು.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.‌ ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್ ಗಾಗಿಯೇ ಮಾಡಿರುವ ಕಥೆ ಇದು. ಇನ್ನು ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾಸಾರಾಂಶ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ‌. ನಾಯಕ ಆದಿತ್ಯ, ನಾಯಕಿ ರಂಜನಿ ರಾಘವನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ. ಸಾಧುಕೋಕಿಲರ ಸಂಗೀತ ನಿರ್ದೇಶನ ಹಾಗೂ ಉದಯಲೀಲಾ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರು ನಿರ್ದೇಶಕ ಕಿಶೋರ್ ಮೇಗಳಮನೆ.

ನಿರ್ದೇಶಕ ಕಿಶೋರ್ ಅವರು ಕಥೆ ಕೇಳಿ ಎಂದರು. ನಾನು ಸರಿ ಎಂದೆ. ಆನಂತರ ಕೇಳುವುದು ಬೇಡ ಸರ್ ಸಿನಿಮಾನೇ ತೋರಿಸುತ್ತೇನೆ ಎಂದರು. ನನಗೆ ಆಶ್ಚರ್ಯವಾಯಿತು. ಚಿತ್ರದ ಕಥೆಯನ್ನು ಅನಿಮೇಶನ್ ಮೂಲಕ ತೋರಿಸಿದ ಪ್ರಥಮ ನಿರ್ದೇಶಕ ಇವರೆ ಇರಬಹುದು. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರ ಸೇರಿದಂತೆ ಎಲ್ಲಾ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎನ್ನುತ್ತಾರೆ ಆದಿತ್ಯ.

ನಾನು ಈ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದು ನಾನು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರ ಎಂದರು ನಾಯಕಿ ರಂಜನಿ ರಾಘವನ್.

ಚಿತ್ರದಲ್ಲಿ ನಟಿಸಿರುವ ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಮುಂತಾದವರು “ಕಾಂಗರೂ” ಚಿತ್ರದ ಕುರಿತು ಮಾತನಾಡಿದರು. .

Categories
ಸಿನಿ ಸುದ್ದಿ

ಏಪ್ರಿಲ್ 19ಕ್ಕೆ ಪುಕ್ಸಟ್ಟೆ ಪೈಸ ಬಿಡುಗಡೆ: ಇದು ಕಾಸಿನ ಹಿಂದೆ ಬಿದ್ದವರ ಕಥೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾ ಇದೇ ಏ. 19 ರಂದು ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಈಗಾಗಲೇ ‘ಪುಕ್ಸಟ್ಟೆ ಪೈಸ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ.

‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದಲ್ಲಿ ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಉಮೇಶ್, ಗಜಾ, ಮಂಜೇಗೌಡ, ಥಾಮಸ್, ಸೂರ್ಯ, ಸಂತು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾತಿಗಿಳಿದ ನಿರ್ಮಾಪಕ ಕಂ ನಿರ್ದೇಶಕ ಮಧುಸೂಧನ ಎ. ಎಸ್., ‘ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾ. ಕೆಲ ವರ್ಷಗಳ ಹಿಂದೆ ನಡೆದ ಹಣದ ಹಗರಣ ಮತ್ತು ನಮ್ಮ ನಡುವೆಯೇ ಅಲ್ಲಲ್ಲಿ ನಡೆದಿರುವ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.

‘ಪುಕ್ಸಟ್ಟೆ ಪೈಸ’ ಸಿನಿಮಾದ ಟೈಟಲ್ಲೇ ಹೇಳುವಂತೆ ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು.

‘ಸಿನಿಮಾದಲ್ಲಿ ಎಲ್ಲ ಥರದ ಆಡಿಯನ್ಸ್ ಗೂ ಬೇಕಾದ ಅಂಶಗಳಿವೆ. ಕಾಮಿಡಿ, ಥ್ರಿಲ್ಲರ್ ಜೊತೆಗೆ ಒಂದು ಒಳ್ಳೆಯ ಸಂದೇಶವಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಕಲಾವಿದರಾದ ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್, ಗಜಾ, ಉಮೇಶ್, ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಮತ್ತಿತರರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಪುಕ್ಸಟ್ಟೆ ಪೈಸ’ ಸಿನಿಮಾದ ಮೂರು ಹಾಡುಗಳಿಗೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಮಯೂರ್ ಆರ್. ಶೆಟ್ಟಿ, ವೇಲ್ ಮುರುಗನ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ಬೆಂಗಳೂರು, ಮಂಗಳೂರು, ಹಾಸನ, ಹೊಳೆನರಸೀಪುರ ಸುತ್ತಮುತ್ತ ‘ಪುಕ್ಸಟ್ಟೆ ಪೈಸ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ‘ಪುಕ್ಸಟ್ಟೆ ಪೈಸ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದೆ. ‘ಪುಕ್ಸಟ್ಟೆ ಪೈಸ’ ಸಿನಿಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ಏ. 19ಕ್ಕೆ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ಮೆಡಿಕಲ್ ಸೀಟು ವಂಚನೆಯ ರೋಚ’ಕಥೆ’

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ನಿರ್ದೇಶಕ: ವಿಕಾಸ್ ಪುಷ್ಪಗಿರಿ

ನಿರ್ಮಾಪಕ: ದೇವರಾಜ್

ತಾರಾಗಣ: ರಂಜನ್, ನಿಶ್ಚಿತ, ಬಿ.ಸುರೇಶ, ರಘುಶಿವಮೊಗ್ಗ, ಹರಿಣಿ, ಪ್ರಶಾಂತ್, ಸಂದೀಪ್ ಇತರರು.

ಈ ಪ್ರಪಂಚದಲ್ಲಿ ಹೊಗಳೋರು ಇರ್ತಾರೆ. ತೆಗಳೋರು ಇರ್ತಾರೆ.
ನಮಗೆ ಸೀದಾ ಕಾಣಿಸೋದು, ಅವರಿಗೆ ಉಲ್ಟಾ ಕಾಣಿಸುತ್ತೆ…’

ಈ ಸಿನಿಮಾದ ಹೈಲೆಟ್ ಆಗಿರುವ ಟಿ ಅಲಿಯಾಸ್ ತಿಮ್ಮೇಗೌಡ (ಹೀರೋ ರಂಜನ್) ಈ ಡೈಲಾಗ್ ಹೇಳುವ ಹೊತ್ತಿಗೆ , ಅವನು ಎನ್ಇಇಟಿ ಎಕ್ಸಾಮ್ ಬರೆದು ಇಷ್ಟಪಟ್ಟ ಕಾಲೇಜಿನಲ್ಲಿ ಮೆಡಿಕಲ್ ಸೀಟು ಪಡೆದು ತಾನೊಬ್ಬ ಡಾಕ್ಟರ್ ಆಗಿ ಇದ್ದೂರಲ್ಲೇ ಸೇವೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುತ್ತಾನೆ. ಆದರೆ ಅವನ ಕನಸುಗಳೆಲ್ಲಾ ನನಸಾಗುತ್ತ, ಇಲ್ಲವೋ ಅನ್ನೋದೇ ಈ ಸ್ಕ್ಯಾಮ್ 1770 ಸಿನಿಮಾದ ಸಾರಾಂಶ.

ವಂಚನೆ ಪ್ರಕರಣಗಳು ದಿನ‌ ನಿತ್ಯ ನಮ್ಮ ಬದುಕಲ್ಲಿ ನಡೆಯುತ್ತಲೇ ಇವೆ. ವಂಚನೆಗೊಳಗಾಗುತ್ತಿದ್ದರೂ ಎಷ್ಟೋ ಸಲ ಗೊತ್ತಾಗೋದೇ ಇಲ್ಲ. ಅಂಥದ್ದೊಂದು ಗಂಭೀರ ವಿಷಯ ಇಟ್ಟುಕೊಂಡು ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರು ಚಂದದ ಕಥೆ ಇಟ್ಟುಕೊಂಡು ಅಂದವಾಗಿ ನಿರೂಪಿಸಿದ್ದಾರೆ. ಇದು ಸ್ಟಾರ್ ಸಿನಿಮಾ ಅಲ್ಲದಿದ್ದರೂ ಸ್ಟಾರ್ ವ್ಯಾಲ್ಯು ಇರುವ ಸ್ಟೋರಿ ಸಿನಿಮಾ. ಹಾಗಾಗಿ ಇದು ಎಲ್ಲಾ ವರ್ಗದವರಿಗೂ ರುಚಿಸುವ, ಎಚ್ಚೆತ್ತುಕೊಳ್ಳುವ ಚಿತ್ರ ಅನ್ನೋದನ್ನು ಮುಲಾಜಿಲ್ಲದೆ ಹೇಳಬಹುದು.

ಶಿಕ್ಷಣ ಅನ್ನೋದು ಈಗ ಗಗನ ಕುಸುಮ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಬಲು ಕಷ್ಟ. ಎಷ್ಟೇ ಬುದ್ಧಿವಂತರಿದ್ದರೂ, ನೀಟ್ ಎಕ್ಸಾಮ್ ಪಾಸ್ ಆದರೂ ಪ್ರತಿಷ್ಟಿತ ಕಾಲೇಜುಗಳಲ್ಲಿ ಮೆಡಿಕಲ್ ಸೀಟು ಪಡೆಯೋದು ಕಷ್ಟ. ಸಿಕ್ಕರೂ ಒಂದಷ್ಟು ಸಮಸ್ಯೆ ಮೂಲಕ ಕೈ ತಪ್ಪುವ ಉದಾಹರಣೆ ಹೆಚ್ಚು. ಅಂತಹ ವಂಚನೆ ಹೇಗೆಲ್ಲಾ ನಡೆಯುತ್ತೆ ಅನ್ನೋದು ಸಿನಿಮಾದ ಥಾಟ್. ಅದನ್ನೇ ಇಲ್ಲಿ ನಿರ್ದೇಶಕರು ಮನ ಮುಟ್ಟುವಂತೆ ನಿರೂಪಿಸಿದ್ದಾರೆ. ಮುಖ್ಯವಾಗಿ ಇದು ಸ್ಟುಡೆಂಟ್ಸ್ ಜೊತೆಗೆ ಪೋಷಕರು ನೋಡಲೇಬೇಕಾದ ಸಿನಿಮಾ. ವಾಸ್ತವ ಅಂಶ ಇಲ್ಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಸಮಾಜದಲ್ಲಿ ಈಗ ನಡೆಯುವ ವಸ್ತುಸ್ಥಿತಿಯನ್ನು ನಿರ್ದೇಶಕರು ಬಿಂಬಿಸಿದ್ದಾರೆ. ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜುಗಳ ವಂಚನೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಮೊದಲರ್ಧ ಜಾಲಿಯಾಗಿ ಸಾಗುವ ಚಿತ್ರ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಇದೆಲ್ಲವೂ ಹೀಗಿದೆಯಾ ಅನ್ನುವಷ್ಟರ ಮಟ್ಟಿಗೆ ಕಾಡುತ್ತೆ. ಅಷ್ಟೇ ಅಲ್ಲ, ಎಚ್ಚೆತ್ತುಕೊಳ್ಳುವಂತೆಯೂ ಮಾಡುತ್ತೆ.

ಸಿನಿಮಾದ ಕಥೆಯ ಎಳೆ ಚೆನ್ನಾಗಿದೆ. ಎಲ್ಲೂ ನೀರಸವಾಗದ ನಿರೂಪಣೆ ಇಷ್ಟವಾಗುತ್ತೆ. ಕಮರ್ಷಿಯಲ್ ರೂಪ ಕೊಟ್ಟು, ನೋಡಿಸಿಕೊಂಡು ಹೋಗುವಂತೆ ಮಾಡಿರುವ ನಿರ್ದೇಶಕರ ಜಾಣತನ ಒಪ್ಪಬೇಕು.

ಕಥೆ ಇಷ್ಟು…

ಟಿ (ರಂಜನ್) ನೀಟ್ ಬರೆದು ಮೆಡಿಕಲ್ ಸೀಟು ಪಡೆಯಬೇಕೆಂಬ ಹಂಬಲದವನು. ಆದರೆ, ತಾನು ಇಷ್ಟ ಪಡುವ ಕಾಲೇಜಿನಲ್ಲೇ ಸೀಟು ಪಡೆಯಬೇಕೆಂಬ ಆಸೆ ನಿರಾಸೆಯಾಗುತ್ತೆ. ಮೆಡಿಕಲ್ ಸೀಟು ಕೋಟಾದಡಿ ಸಿಗುತ್ತೆ ಎಂಬ ಆಸೆ ಕೈ ತಪ್ಪುತ್ತೆ. ಅದು ತಪ್ಪಿದ್ದಲ್ಲ. ತಪ್ಪಿಸಿದ್ದು. ಅನ್ನೋ ಸತ್ಯ ಗೊತ್ತಾಗುತ್ತೆ. ಅವನಂತೆಯೇ ಒಂದಷ್ಟು ಪ್ರತಿಭಾವಂತರಿಗೂ ಇದೇ ಸಮಸ್ಯೆ ಎದುರಾಗುತ್ತೆ. ಸೀಟು ಅವರಿಂದ ಹೇಗೆ ತಪ್ಪುತ್ತೆ ಆ ನೋವು ಹೇಗೆ ಬಲಿ ಪಡೆಯುತ್ತೆ ಅನ್ನೋದೇ ಇಂಟ್ರೆಸ್ಟಿಂಗ್ ಕಥೆ.

ಖಾಸಗಿ ಶಾಲೆಗಳ ವಂಚನೆ ಬಯಲಿಗೆಳೆಯೋ ಕಥೆ ನೋಡುಗರಲ್ಲಿ ಹೀಗೂ ಉಂಟಾ ಎನಿಸದೇ ಇರದು. ಎಷ್ಟೋ ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಸಾಲ ಮಾಡಿ ಮೆಡಿಕಲ್ ಓದಿಸಿ ಡಾಕ್ಟರ್ ಮಾಡುವ ಆಸೆ ಇಟ್ಟುಕೊಂಡೇ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ಇಲ್ಲಿ ನೀಟ್ ಆಗಿ ಪ್ರೆಸೆಂಟ್ ಮಾಡಲಾಗಿದೆ. ಒಟ್ಟಾರೆ, ಶಿಕ್ಷಣ ದಂಧೆ ಅಂಶ ಇಲ್ಲಿ ಹೈಲೆಟ್.

ಯಾರು ಹೇಗೆ?

ಇಲ್ಲಿ ಟಿ ಪಾತ್ರದ ಮೂಲಕ ರಂಜನ್‌ ಗಮನ ಸೆಳೆಯುವುದರ ಜೊತೆ ಇಷ್ಟವಾಗುತ್ತಾರೆ. ಅಷ್ಟೇ ಅಲ್ಲ, ಡ್ಯಾನ್ಸ್ ಫೈಟಲ್ಲೂ ಓಕೆ ಎನಿಸುತ್ತಾರೆ. ಬಾಡಿ ಲಾಂಗ್ವೇಜ್ ಇನ್ನಷ್ಟು ತಿದ್ದಿಕೊಳ್ಳಬೇಕು. ಉಳಿದಂತೆ ಓಕೆ.
ನಿಶ್ಚಿತ ಸಿಕ್ಕ ಪಾತ್ರಕ್ಕೆ‌ ಮೋಸ‌ ಮಾಡಿಲ್ಲ.
ರಿಪೋರ್ಟರ್ ಆಗಿ ರಂಜನ್ ಅಣ್ಣನಾಗಿ ರಘು ಶಿವಮೊಗ್ಗ ಫೋಕಸ್ ಆಗಿದ್ದಾರೆ. ಅತ್ತಿಗೆಯಾಗಿ‌ ಹರಿಣಿ ಪಾತ್ರ ಚೆನ್ನಾಗಿ‌ ನಿರ್ವಹಿಸಿದ್ದಾರೆ. ಬಿ.ಸುರೇಶ ಖಾಸಗಿ ಕಾಲೇಜಿನ ವಂಚಕರಾಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಪ್ರಶಾಂತ್, ಸಂದೀಪ್, ನಾರಾಯಣ ಸ್ವಾಮಿ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ಈ ಸ್ಕ್ಯಾಮ್ ನಮ್ಮ ನಡುವೆಯೇ ಹೇಗೆಲ್ಲಾ ನಡೆಯುತ್ತೆ ಎಂಬುದು ಅಚ್ಚುಕಟ್ಟಾಗಿ ಮೂಡಿಬಂದಿದೆ.

error: Content is protected !!