Categories
ಸಿನಿ ಸುದ್ದಿ

ಲಕ್ಕಿಮ್ಯಾನ್ ನೋಡಿದವರು ಪುನೀತ!

ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ

ರೇಟಿಂಗ್ 4/5

ಚಿತ್ರ: ಲಕ್ಕಿಮ್ಯಾನ್

ನಿರ್ದೇಶಕ: ನಾಗೇಂದ್ರ ಪ್ರಸಾದ್

ನಿರ್ಮಾಣ: ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್

ತಾರಾಗಣ: ಪುನೀತ್ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ, ರೋಷಣಿ, ರಂಗಾಯಣ ರಘು, ಸುಂದರ ರಾಜ್, ಸುಧಾ ಬೆಳವಾಡಿ ಸಾಧುಕೋಕಿಲ ಇತರರು…

ಗೊತ್ತಿಲ್ಲದೇ ಇರೋರನ್ನ ನಾನ್ ಮದುವೆ ಆಗಲ್ಲ… ಹೀಗಂತ ನಾಯಕ ಅರ್ಜುನ್ ಹೇಳ್ತಾನೆ. ಅ ಮಾತಿಗೆ ‘ ನಾವಿಬ್ರು ಮದ್ವೆ ಆಗಬಹುದಲ್ವ! ಹೀಗಂತ ನಾಯಕಿ ಅನು ಹೇಳ್ತಾಳೆ…

ಇವರಿಬ್ಬರ ಮಾತುಕತೆ ನಡೆಯೋ ಹೊತ್ತಿಗೆ, ಇಬ್ಬರಿಗೂ ಮದ್ವೆಯಾಗಿ, ಅದು ಈಗೋ ಹೆಚ್ಚಾಗಿ, ಜಗಳ ಶುರುವಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ ಅದು ಡೈವೋರ್ಸ್ ಹಂತಕ್ಕೂ ಹೋಗುತ್ತೆ! ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೆ ಕಥೆ.

ಇಷ್ಟು ಹೇಳಿದ ಮೇಲೆ ಎಲ್ಲಾ ಸಿನಿಮಾ ಕಥೆಯಲ್ಲೂ ಈ ವಿಷಯ ಕಾಮನ್ ಬಿಡಿ ಎಂಬ ಮಾತು ಎದುರಾದರೂ, ಇಲ್ಲಿನ ಕಥೆಯಲ್ಲಿ ಹೊಸತನವಿದೆ. ನಿರೂಪಣೆಯಲ್ಲಿ ವಿಶೇಷತೆ ಇದೆ. ತೋರಿಸಿರುವ ವಿಧಾನದಲ್ಲಿ ಸ್ಪಷ್ಟತೆ ಇದೆ. ಹಾಗಾಗಿ ಇದೊಂದು ಸ್ವಚ್ಛ ಮತ್ತು ಸ್ಪಷ್ಟತೆಯ ಸಿನಿಮಾ.

ಇಡೀ ಸಿನಿಮಾದಲ್ಲಿ ನಗುವಿದೆ,‌ಅದರ ಜೊತೆ ಜೊತೆಯಲ್ಲೇ ತಮಾಷೆಯೂ ಇದೆ, ಬೇಜವಾಬ್ದಾರಿತನದ ಹುಡುಗಾಟ ಇದೆ. ಇವೆಲ್ಲದರ ಜೊತೆಗೊಂದು ಭಾವುಕತೆಯೂ ತುಂಬಿದೆ. ಸಿನಿಮಾ‌ ನೋಡಿ ಆಚೆ ಬರುವ ಪ್ರತಿಯೊಬ್ಬರ ಮನದಲ್ಲಿ ದೇವರು ನೆಲೆಸುತ್ತಾನೆ! ಹೌದು, ಇಲ್ಲಿ ದೇವರು‌ ಮತ್ತು ಮಾನವನ ನಡುವಿನ ಆಹ್ಲಾದಕರ ಮಾತುಕತೆ ಇದೆ. ಅದು ಎಲ್ಲೋ ಒಂದು ಕಡೆ ತಮಾಷೆ‌ ಎನಿಸಿದರೂ, ಅಲ್ಲಲ್ಲಿ ಬದುಕಿನ‌ ವಾಸ್ತವತೆಯ ಪರಿಯನ್ನು ಹೇಳುತ್ತದೆ.

ನಿರ್ದೇಶಕ ನಾಗೇಂದ್ರಪ್ರಸಾದ್ ಅವರಿಗೆ ಇದು ಮೊದಲ ಸಿನಿಮಾ. ಆದರೂ ಅವರು ಎಲ್ಲೂ ಎಡವದೆ ಒಂದು‌ ನೀಟ್ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ದೊಡ್ಡ ಪವಾಡವಿದೆ. ಅದೇ ಆ ದೇವರು ಪವಾಡ. ತೆರೆ ಮೇಲೆ ನಿಜವಾಗಿಯೂ ನೋಡುಗರಿಗೆ ದೇವರು ಕಂಡಷ್ಟೇ ಅನುಭವ. ಅ ದೇವರ ಪವಾಡವೇ ಇಲ್ಲಿ ಹೈಲೆಟ್. ಆ ಪವಾಡ ತಿಳಿಯೋಕೆ ಸಿನಿಮಾ‌ ನೋಡಿ.

ಅಪ್ಪು ಎಂಬ ದೇವರು…

ಪುನೀತ್ ರಾಜ್ ಕುಮಾರ್ ಇಲ್ಲಿ ಸಾಕ್ಷಾತ್ ದೇವರಾಗಿಯೇ ಕಾಣಿಸಿಕೊಂಡಿದ್ದಾರೆ. ಪರದೆ ಮೇಲೆ ಅವರು ಕಾಣುತ್ತಿದ್ದಂತೆ ಖುಷಿಗೊಂದು, ದುಃಖಕ್ಕೊಂದು ಎರಡು ಕಣ್ಣುಗಳು ತುಂಬಿ ಹೋಗುತ್ತವೆ. ನೋಡುತ್ತಲೇ ಎದೆಭಾರವಾಗುತ್ತ ಹೋಗುತ್ತದೆ.

ದೇವರ ಪಾತ್ರದಲ್ಲಿ ಅಪ್ಪು ಅವರನ್ನು ನೋಡಿವರಿಗೆ ಪೂಜ್ಯಭಾವ. ಇಷ್ಟಕ್ಕೂ ಇಲ್ಲಿ ಲಕ್ಕಿಮ್ಯಾನ್ ಯಾರು? ಅದಕ್ಕೆ ಉತ್ತರ ಸಿನಿಮಾ ನೋಡಬೇಕು.

ಅಂದಹಾಗೆ, ಇದು ಓ‌ ಮೈ ಕಡವುಲೆ ತಮಿಳು ಸಿನಿಮಾ ಅವತರಣಿಕೆ. ಅದನ್ನಿಲ್ಲಿ ಯಥಾವತ್ತಾಗಿ ಮಾಡಿದರೂ, ಕನ್ನಡೀಕರಣಕ್ಕೆ ಎಲ್ಲೂ ಧಕ್ಕೆ ತಂದಿಲ್ಲ. ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನು ಇಲ್ಲಿ ಪುನೀತ್ ರಾಜಕುಮಾರ್ ಮಾಡಿದ್ದಾರೆ. ನಿಜಕ್ಕೂ ಪರದೆ‌ ಮೇಲೆ ಅವರು ಸಾಕ್ಷಾತ್ ದೇವರೇ ಎಂಬಂತೆ‌ ಬಿಂಬಿತವಾಗುತ್ತಾರೆ. ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಅಪ್ಪು ಮಿಂಚಿದ್ದಾರೆ. ಇಡೀ ಸಿನಿಮಾದ ತಾಕತ್ತೇ ಅವರು. ಅವರಿಂದಲೇ ಕಥೆಗೊಂದು ಅರ್ಥ.

ಇಷ್ಟಕ್ಕೂ ಕಥೆ ಏನು?

ಅನು (ಸಂಗೀತ ಶೃಂಗೇರಿ) ತನ್ನ ಬಾಲ್ಯದ ಗೆಳೆಯ ಅರ್ಜುನ್ (ಕೃಷ್ಣ) ಅವರನ್ನ ಮದ್ವೆ ಆಗು ಅಂತ ನೇರವಾಗಿ ಕೇಳುತ್ತಾಳೆ. ಆಗ ಅವನ ಮನಸ್ಸು ಆತನ ಮನಸ್ಸು ಎಲ್ಲೆಲ್ಲೋ ಓಡುತ್ತೆ. ಮನಸ್ಸೂ ಭ್ರಮಾಲೋಕಕ್ಕೆ ಹೋಗುತ್ತೆ. ವಾಸ್ತವ ಬೆರೆತ ಬದುಕಲ್ಲಿ ದೇವರ ಬಳಿ ಹೋಗ್ತಾನೆ. ಈ ವಿಷಯ ಸ್ವಲ್ಪ ಒಗ್ಗಲ್ಲ. ಆದರೂ ದೇವರಾಗಿ ಪುನೀತ್ ದರ್ಶನವಾದಾಗ ಮನಸ್ಸು ಒಪ್ಪದೇ ಇರದು. ದೇವರ ಜೊತೆ ಮಾನವನ ಮಾತುಕತೆ ತಮಾಷೆ ಎನಿಸಿದರೂ ಅದು ಪವಾಡವೂ ಹೌದೆಂಬ ಭಾಸ.

ಅರ್ಜುನ್ ತನ್ನ ಹೆಂಡತಿ ಅನು ಬಗ್ಗೆ ಇಲ್ಲದ ಕಲ್ಪನೆ ಮಾಡಿಕೊಂಡು‌ ಭೀತಿಗೊಂಡು ಡೈವೋರ್ಸ್ ಕೊಡಬೇಕೆಂದು‌ಕೊಂಡಾಗ ದೇವರ ಜೊತೆ ನಡೆಯೋ ಅದ್ಭುತ ಸನ್ನಿವೇಶಗಳೇ ಸಿನಿಮಾ ನೋಡಿಸಿಕೊಂಡು ಹೋಗುತ್ತವೆ. ಹೆಚ್ಚು ಹೇಳುವುದಕ್ಕಿಂತ ದೇವರು ಆ ಯುವಕನಿಗೆ ಹೇಗೆಲ್ಲಾ ಬುದ್ಧಿ ಹೇಳಿ ನಿಜ ಬದುಕಿನತ್ತ ಕೊಂಡೊಯ್ಯುತ್ತದೆ ಅನ್ನೋದೇ ವಿಶೇಷ.

ಇನ್ನು ಸಿನಿಮಾ ನೋಡುಗರಿಗೆ ಅದು
ಭ್ರಮೆಯೋ, ವಾಸ್ತವನಾ ಎಂಬ ಗೊಂದಲ ಇಲ್ಲ. ಅಷ್ಟೊಂದು ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇದಕ್ಕೆ ಕಾರಣ ಪುನೀತ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ.

ಯಾರ ನಟನೆ ಹೇಗೆ?

ಪುನೀತ್ ರಾಜ್‍ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ತೆರೆ ಮೇಲೆ ತಾನು‌ ದೇವರಂತೆಯೇ ಕಾಣುತ್ತಾರೆ ಕೂಡ. ಇಡೀ ಚಿತ್ರವನ್ನು ಆವರಿಸಿಕೊಂಡು‌ ನಗಿಸಿ, ಭಾವುಕರಾಗಿಸುತ್ತಾರೆ.
ಇನ್ನು, ಡಾರ್ಲಿಂಗ್ ಕೃಷ್ಣ ಎಂದಿಗಿಂತಲೂ ಹುಡುಗಾಟದ ಹುಡುಗನಾಗಿ ಇಷ್ಟವಾಗುತ್ತಾರೆ. ಸಂಗೀತ ಶೃಂಗೇರಿ, ರೋಷನಿ ಕೂಡ ಇಷ್ಟವಾಗುತ್ತಾರೆ. ರಂಗಾಯಣ ರಘು, ಸುಂದರರಾಜ್, ನಾಗಭೂಷಣ್, ಸುಧಾ ಬೆಳವಾಡಿ ಸೇರಿದಂತೆ ಇತರರು ಗಮನ ಸೆಳೆಯುತ್ತಾರೆ.

ಕೊನೆಯ ಹಾಡಲ್ಲಿ ಡಾ.ರಾಜಕುಮಾರ್ ಅವರನ್ನು ನೆನಪಿಸುವ ಹಾಡಲ್ಲಿ ಪ್ರಭುದೇವ ಹೆಜ್ಜೆ ಹಾಕುತ್ತಾರೆ. ಅವರೊಂದಿಗೆ ಅಪ್ಪು ಕೂಡ ಸ್ಟೆಪ್‌ ಹಾಕಿ ಖುಷಿಪಡಿಸುತ್ತಾರೆ. ಇದು ವಿನಾಕಾರಣ ಬರುವ ಹಾಡಲ್ಲ. ಕಥೆಗೆ ಪೂರಕವಾಗಿದೆ. ಅವರ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಅವರ ಸಂಗೀತದಲ್ಲಿ ಸ್ವಾದ ತುಂಬಿದೆ.

ಕೊನೆಮಾತು: ಒಟ್ಟಾರೆ ಸಿನಿಮಾ ನೋಡಿದವರು ‘ಪುನೀತ’ ರಾಗಿ ಹಾಗೊಮ್ಮೆ ಭಾವುಕರಾಗಿ ಹೊರಬರೋದು ದಿಟ.

Categories
ಸಿನಿ ಸುದ್ದಿ

ದಿ ಲಾಸ್ಟ್ ಕೇಸ್: ಹೊಸಬರ ಕಿರುಚಿತ್ರಕ್ಕೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಥ್…

ತಂತ್ರಜ್ಞಾನ ಮುಂದುವರೆದ ಹಾಗೆ ಜನರ ಆಲೋಚನೆ ಶಕ್ತಿಯು ಬೆಳೆಯುತ್ತಾ ಹೋಗುತ್ತಿದೆ.
ಎರಡು, ಮೂರು ಗಂಟೆಗಳಲ್ಲಿ ಹೇಳ ಬೇಕಾದ ವಿಷಯವನ್ನು ಇಪ್ಪತ್ತು, ಮೂವತ್ತು ನಿಮಿಷಗಳ ಕಿರುಚಿತ್ರಗಳಲ್ಲಿ ಮನತಟ್ಟುವಂತೆ ಹೇಳುವ ನಿರ್ದೇಶಕರು ಈಗ ಹೆಚ್ಚಾಗುತ್ತಿದ್ದಾರೆ.‌ ಅಂತಹ ಉತ್ತಮ ಕಿರುಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ.

ಸತ್ಯ ಹೆಗಡೆ ಸ್ಟುಡಿಯೋಸ್ ಅರ್ಪಿಸುವ, ಸೌಮ್ಯ ಚಂದ್ರಶೇಖರ್ ನಿರ್ಮಿಸಿರುವ ಹಾಗೂ ಪ್ರದೀಪ್ ಕೃಷ್ಣಮೂರ್ತಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ” ದಿ ಲಾಸ್ಟ್ ಕೇಸ್” ಕಿರುಚಿತ್ರದ ಪ್ರದರ್ಶನ ಹಾಗು ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ಎಲ್ಲಾ ಸಾಕ್ಷಿಗಿಂತ ಮನಸಾಕ್ಷಿಯೇ ದೊಡ್ಡದು ಎಂಬ ಅಂಶವನ್ನು ನಿರ್ದೇಶಕರು ಈ ಕಿರುಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ.

ನನಗೆ ಈ ಕಿರುಚಿತ್ರದ ಕಥೆ ಬಹಳ‌ ಮೆಚ್ಚುಗೆಯಾಯಿತು.‌ ಅಪರಾಧಿಯೊಬ್ಬ ನಾನೇ ಕೊಲೆಗಾರ ಎಂದು‌ ಹೇಳಿ ಪೊಲೀಸರ ಬಳಿ‌ ಶರಣಾಗುವ ವಿಷಯ ಬಹಳ ಮನಸ್ಸಿಗೆ ಹತ್ತಿರವಾಯಿತು. ಉತ್ತಮ ಕಿರುಚಿತ್ರ ನಿರ್ಮಿಸಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ಈ ಕಿರುಚಿತ್ರದಲ್ಲಿ ಅಭಿನಯಿಸಿರುವ ನಟ ರಮೇಶ್ ಪಂಡಿತ್.

ಈ ಕಿರುಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ನಿರ್ದೇಶಕ ಪ್ರದೀಪ್ ಕೃಷ್ಣಮೂರ್ತಿ ಧನ್ಯವಾದ ತಿಳಿಸಿದರು.

“ದಿ ಲಾಸ್ಟ್ ಕೇಸ್” ಕಿರುಚಿತ್ರ ಚೆನ್ನಾಗಿದೆ. ಈ ತಂಡದಿಂದ ಆದಷ್ಟು ಬೇಗ ಹಿರಿತೆರೆಯಲ್ಲಿ ನಾನು ಚಿತ್ರವನ್ನು ನಿರೀಕ್ಷಿಸುತ್ತೇನೆ ಎಂದರು ಸತ್ಯ ಹೆಗಡೆ.‌ ಕಿರುಚಿತ್ರ ತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು .

ಹಿರಿಯ ನಿರ್ದೇಶಕ ಚಿಂದೋಡಿ ಬಂಗಾರೇಶ್, ಸಾಹಿತಿ ಕವಿರಾಜ್ ಹಾಗೂ ಸಂಭಾಷಣೆಕಾರ ಮಾಸ್ತಿ ಮುಂತಾದ ಗಣ್ಯರು ಕಿರುಚಿತ್ರವನ್ನು ಶ್ಲಾಘಿಸಿದರು.

ವಾಸುದೇವ ಮೂರ್ತಿ ಕಥೆ ಬರೆದಿದ್ದು, ಗಿರೀಶ್ ಸಂಗೀತ ನೀಡಿದ್ದಾರೆ. ರಂಗನಾಥ್ ಛಾಯಾಗ್ರಹಣ ಹಾಗೂ ಉಜ್ವಲ್ ಸಂಕಲನ ಈ ಕಿರುಚಿತ್ರಕ್ಕಿದೆ.‌ ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಪುನೀತ್ ಬಾಬು, ಪ್ರದೀಪ್ ಅಂಚೆ “ದಿ‌ ಲಾಸ್ಟ್ ಕೇಸ್” ನಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ದೂರದರ್ಶನ ಈಗ ದರ್ಶನಕ್ಕೆ ಸಜ್ಜು! ಡಬ್ಬಿಂಗ್ ಮುಕ್ತಾಯ: ಶೀಘ್ರ ಬಿಡುಗಡೆಗೆ ರೆಡಿ…

ವಿಭಿನ್ನ ಕಥಾನಕದ ಸುಳಿವು ನೀಡಿರುವ ದೂರದರ್ಶನ ಸಿನಿಮಾ ಆರಂಭದಿಂದಲೂ ಬಹಳಷ್ಟು ಸದ್ದು ಮಾಡುತ್ತಿದ್ದು, ಇದೀಗ ಡಬ್ಬಿಂಗ್ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿದೆ. ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಯಾನಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರು ತಾರಾಗಣ ಸಿನಿಮಾದಲ್ಲಿದೆ.

ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾಗೆ ರಾಜೇಶ್ ಭಟ್ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಉಗ್ರಂ ಮಂಜು ಜವಾಬ್ದಾರಿ ಹೊತ್ತಿದ್ದಾರೆ.

ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ ಸಂಗೀತ, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿಜಿ ಸಂಭಾಷಣೆ ಸಿನಿಮಾಕ್ಕಿದೆ. ಸದ್ಯ ಮಾತು ಮುಗಿಸಿರುವ ಚಿತ್ರತಂಡ ಪ್ರಮೋಷನ್ ಗೆ ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ಮಾರ್ಚ್ 30ಕ್ಕೆ ಡಾಲಿಯ ಹೊಯ್ಸಳ ರಿಲೀಸ್: ಶ್ರೀರಾಮ ನವಮಿ ದಿನ ಧನಂಜಯನ ಹೊಸ‌ ಖದರ್‌ ನೋಡಿ…

ವಿಭಿನ್ನ‌ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಡಾಲಿ ಧನಂಜಯ ನಾಯಕರಾಗಿ ಅಭಿನಯಿಸುತ್ತಿರುವ, ಬಹು ನಿರೀಕ್ಷಿತ “ಹೊಯ್ಸಳ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಹೌದು ಈ ಸಿನಿಮಾ 2023 ರ ಮಾರ್ಚ್ 30 ರಂದು ರಿಲೀಸ್ ಆಗಲಿದೆ. ಅಂದು ಶ್ರೀ ರಾಮ ನವಮಿ ದಿನವೂ ಹೌದು.

ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಈಗ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತ ಅಯ್ಯಂಗಾರ್ ಈ ಚಿತ್ರದ ನಾಯಕಿ. ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜಯ್ ಕಿರಗಂದೂರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. “ರತ್ನನ ಪ್ರಪಂಚ” ದ ನಂತರ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಧನಂಜಯ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಚಿತ್ರ “ಹೊಯ್ಸಳ”.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದಾರೆ. ವಿಜಯ್ ನಾಗೇಂದ್ರ ಈ ಹಿಂದೆ ಗಣೇಶ್ ಅಭಿನಯದ “ಗೀತಾ” ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ “ಹೊಯ್ಸಳ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸರ್ಕಾರಿ ಶಾಲೆ ಸಮಸ್ಯೆ ಕುರಿತ ಸಾಂಗ್ ರಿಲೀಸ್: ಇದು ಕರುನಾಡ‌ ಶಾಲೆ‌ ಸಿನಿಮಾ‌ ಹಾಡು…

ಶಿಕ್ಷಣ ಖಾಸಗೀಕರಣವಾದ ಮೇಲಂತೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯಂತೂ ಅಧಪತನದತ್ತ ಸಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರು ಅದು ಯಶಸ್ಸು ಕಂಡಿಲ್ಲ. ಹೀಗಿದ್ಮೇಲೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿವರಿಸೋದು ಬೇಕಾಗಿಲ್ಲ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲಿರುವ ಪ್ರಯತ್ನಕ್ಕೆ ಕರುನಾಡ ಶಾಲೆ ಸಿನಿಮಾ ಕೈ ಹಾಕಿದೆ.

ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಚಿತ್ರತಂಡವು ಸಾಂಗ್ ಬಿಡುಗಡೆಗೊಳಿಸಿತು. ಸರ್ಕಾರಿ ಶಾಲೆಗಳ ಪ್ರಗತಿಗಾಗಿ ನಾಯಕ ಪಡುವ ಸಾಹಸವೆ ಚಿತ್ರದ ಪ್ರಮುಖ ಕಥಾವಸ್ತು.

ಬಾಲ್ಯದ ನೆನಪುಗಳನ್ನು ನೆನಪಿಸುವಂಥ ದೃಶ್ಯಗಳನ್ನು ಸಂಯೋಜಿಸಲಾಗಿರುವ ಗೀತೆಯೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿತು. ನಾಯಕನ ತಂದೆ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ಅಭಿನಯಿಸಿದ್ದು, ಆಯುರ್ ಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ರಿಯಾ ದೇವಾಡಿಗ, ರಾಜೀವ್ ಕೊಠಾರಿ, ರಘು ಪಾಂಡೇಶ್ವರ, ಸ್ಪೂರ್ತಿ ದೊಡ್ಮನೆ, ಸ್ಮಿತಾ, ಉಲ್ಲಾಸ್, ಮನೀಶ್, ನಾಗರಾಜ್ ಅಭಿನಯಿಸಿದ್ದಾರೆ.

ಜಿ.ಆರ್. ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಮುತ್ತಾರೀಫ್ ತೆಕ್ಕಟ್ಟೆಯವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನವಿದ್ದು, ದಿಲ್ ಶಾದ್ ಬಂಡವಾಳ ಹೂಡಿದ್ದಾರೆ. ಗಿರೀಶ್, ಯೋಗೇಂದ್ರ ಕನ್ನುಕೆರೆ, ಸಚಿನ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಆಕಾಶ್ ಪರ್ವರ ಸಂಗೀತ, ಆಯುರ್ ಸ್ವಾಮಿ ಸಾಹಿತ್ಯ – ಸಂಕಲನ, ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯನ, ಜಯರಾಮ್ ಆಲೂರು ಛಾಯಾಗ್ರಹಣ, ರಾಘವರ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಸೆಪ್ಟೆಂಬರ್ 9 ಕ್ಕೆ ಜನರ ಮುಂದೆ 9 ಸುಳ್ಳು ಕಥೆಗಳು!

ರಂಗಭೂಮಿಯಲ್ಲಿ ಹಲವು ವರ್ಷಗಳ ಅನುಭವವಿರುವ ಮಂಜುನಾಥ್ ಮುನಿಯಪ್ಪ ನಿರ್ಮಿಸಿ, ನಿರ್ದೇಶಿಸಿರುವ “9 ಸುಳ್ಳು ಕಥೆಗಳು” 9.9.22 ರಂದು ಬಿಡುಗಡೆಯಾಗುತ್ತಿದೆ.

ನಮ್ಮ ಚಿತ್ರದಲ್ಲಿ ನವರಸಗಳನ್ನು ಆಧರಿಸಿದ ಒಂಭತ್ತು ಕಥೆಗಳಿವೆ. ನೈಜ ಘಟನೆಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ಸೆಪ್ಟೆಂಬರ್ 9 ರಂದು ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಮುನಿಯಪ್ಪ.

ಸಾಕಷ್ಟು ರಂಗಭೂಮಿ ಕಲಾವಿದರ ಸಮಾಗಮದಲ್ಲಿ ಸಿದ್ದವಾಗಿರುವ ಚಿತ್ರವಿದು. ನಾನು ಈ ಚಿತ್ರದಲ್ಲಿ ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ವಿನಾಯಕ ಜೋಶಿ. ಚಿತ್ರದಲ್ಲಿ ಅಭಿನಯಿಸಿರುವ ಜಯಲಕ್ಷ್ಮಿ ಪಾಟೀಲ್ ಸಹ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತ ನಿರ್ದೇಶಕರಾದ ಪ್ರವೀಣ್ – ಪ್ರದೀಪ್, ಛಾಯಾಗ್ರಾಹಕ ಪರಮೇಶ್, ಹಾಡು ಬರೆದಿರುವ ಸತೀಶ್ ಬೆಲ್ಲೂರು ಹಾಗೂ ವಿಕ್ರಮ್ ವಸಿಷ್ಠ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು.

ರಿಷಬ್ ಶೆಟ್ಟಿ ಮೊದಲ ಬಾರಿಗೆ ಹಾಡಿರುವ ಕನ್ನಡದ ಕುರಿತಾದ ಹಾಡು ಈಗಾಗಲೇ ಬಾರಿ ಜನಪ್ರಿಯವಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟ್ರೇಲರ್ ಗೆ ಧ್ವನಿ ನೀಡಿರುವುದು ಈ ಚಿತ್ರದ ವಿಶೇಷಗಳಲ್ಲೊಂದು.

ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸುಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೋಮ್ ಸ್ಟೇ ನಿರ್ದೇಶಕನ ಹೊಸ ಚಿತ್ರಕ್ಕೆ ಚಾಲನೆ: ದಕ್ಷಿಣ ಕನ್ನಡ ಸೊಗಡಿನ ಕಥೆ ಇದು…

ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಸಂತೋಷ್ ಕೊಡಂಕೇರಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ “ಪ್ರೊಡಕ್ಷನ್ ನಂ 02” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಜರುಗಿತು.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ತೂಗುಸೇತುವೆಗಳ ಸರದಾರ ಪದ್ಮಶ್ರೀ ಶ್ರೀ ಗಿರೀಶ್ ಭಾರಧ್ವಾಜ್ ರವರು, ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಶ್ರೀಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಗೀತಾ ಭಾರತಿ ಭಟ್, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನ ಹಾಗೂ ದರ್ಶಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪಾವನಾ ಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುರಳಿಧರ್. ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತ ನಿರ್ದೇಶನ, ರಘು ಎಸ್. ಸಂಕಲನ, ಕಿರಣ್ ಕಾವೇರಪ್ಪ ಗೀತರಚನೆ ಹಾಗೂ ಪ್ರಸನ್ನ – ಕಲ್ಯಾಣ್ ರೆಡ್ಡಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಈ ಚಲನಚಿತ್ರವು ದಕ್ಷಿಣ ಕನ್ನಡದ ಸೊಗಡು, ಭಾಷೆ, ಸಂಸ್ಕೃತಿ ಹೊಂದಿದ್ದು, ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ತೋಡಿಕಾನ ಆಸುಪಾಸಿನಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ‌ ಎಂದು ನಿರ್ದೇಶಕರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ತಿಮ್ಮನ ಮೊಟ್ಟೆಗಳು: ಇದು ರಕ್ಷಿತ್ ತೀರ್ಥಹಳ್ಳಿ ಸಿನಿಮಾ

ಶಿವಮೊಗ್ಗ ಮೂಲದ ಆದರ್ಶ ಅಯ್ಯಂಗಾರ್, ಪ್ರಸ್ತುತ ಯು ಎಸ್ ಎ ನಿವಾಸಿ. ಈ ಮಣ್ಣಿನ ಮೇಲೆ ವಿಶೇಷ ಅಭಿಮಾನ ಹೊಂದಿರುವ ಆದರ್ಶ್ ಉತ್ತಮ ಗಾಯಕರು ಹೌದು. ಈಗಾಗಲೇ ಕೆಲವು ಆಲ್ಬಂ ವಿಡಿಯೋ ಸಾಂಗ್ ಗಳನ್ನು ಹಾಡಿ ನಿರ್ಮಾಣ ಮಾಡಿದ್ದಾರೆ.

ಒಂದೇ ವೇದಿಕೆಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆದರ್ಶ್ ಅಯ್ಯಂಗಾರ್ ಆಯೋಜಿಸಿದ್ದರು. ಶ್ರೀಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ “ಹೋಪ್” ವೀಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ಅವರ “ಕಾಡಿನ ನೆಂಟರು” ಪುಸ್ತಕ ಬಿಡುಗಡೆ ಹಾಗೂ “ತಿಮ್ಮನ ಮೊಟ್ಟೆಗಳು” ಚಿತ್ರದ ಪೋಸ್ಟರ್ ಬಿಡುಗಡೆ.

ಖ್ಯಾತ ಸಾಹಿತಿ ಹಾಗೂ ನಿರ್ದೇಶಕರಾದ ಕವಿರಾಜ್, ನಟ ಪ್ರವೀಣ್ ತೇಜ್, ಫ್ರೀಡಂ ಆಪ್ ನ‌ ಸಿ.ಎಸ್.ಸುಧೀರ್, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿ‌ ಆದರ್ಶ್ ಅಯ್ಯಂಗಾರ್ ಅವರ ಈ ನೂತನ ಪ್ರಯತ್ನಗಳಿಗೆ ಶುಭ ಕೋರಿದರು.

ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್ ಜೋಯಿಸ್ ಜೊತೆಗೂಡಿ ಕೆಲವು ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿದ್ದೆವು. ಈ ಹಾಡುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಈಗ ನಾನು ಆರಂಭಿಸಿರುವ ಶ್ರೀಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಮೊದಲ ಚಿತ್ರವಾಗಿ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆದರ್ಶ್ ಅಯ್ಯಂಗಾರ್.

ನಾನು 2016 ರಲ್ಲಿ ಅರಣ್ಯ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಕಥೆ ಹೊಂದಿದ್ದ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶನ ಮಾಡಿದ್ದೆ. ನಂತರ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಯ ಕುರಿತಾದ “ಎಂಥಾ ಕಥೆ ಮಾರಾಯ” ಎಂಬ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಿದೆ. ಈಗ ಮೂರನೇ ಚಿತ್ರವಾಗಿ ನನ್ನ “ಕಾಡಿನ ನೆಂಟರು” ಕಥಾಸಂಕಲನದ ಒಂದು ಕಥೆಯಾದ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ದೇಶಿಸಲಿದ್ದೇನೆ.

ನನ್ನ ಎಲ್ಲಾ ಚಿತ್ರಗಳಲ್ಲೂ ಪಶ್ಚಿಮ ಘಟ್ಟದ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತೆ. ಇಲ್ಲಿಯೂ ಸಹ ಹೊಸ ವಿಷಯವನ್ನು ಹೇಳ ಹೊರಟಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.

ಸಂಗೀತದ ಕುರಿತಾಗಿ ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಮಾತನಾಡಿದರು.

Categories
ಸಿನಿ ಸುದ್ದಿ

ನಾನ್ ರೌಡಿ ಅನ್ನುವ ಈ ಯುವಕ ರೌಡಿನಾ?

ಇತ್ತೀಚೆಗೆ ಹಲವಾರು ಹೊಸ ಜಾನರ್ ಚಿತ್ರಗಳು ತೆರೆಗೆ ಬರುತ್ತಿದ್ದು, ಅಂತಹ ಹಲವು ಸಿನಿಮಾಗಳ ಪೈಕಿ ಇದೀಗ ಪ್ರಶಾಂತ್ ಕೆ.ಶೆಟ್ಟಿ ಅವರ ನಿರ್ದೇಶನದ ನಾನ್‌ರೌಡಿ ಕೂಡ ಒಂದು. ಈ ಹಿಂದೆ ಮನಸಿನ ಪುಟದಲಿ ಹಾಗೂ ಬ್ರಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ಅವರ
ನಿರ್ದೇಶನ ಹಾಗೂ ನಿರ್ಮಾಣದ ಮೂರನೇ ಚಿತ್ರವಿದು. ಸೆ.9ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಪ್ರಶಾಂತ್ ಕೆ.ಶೆಟ್ಟಿ ಅವರೇ ನಾಯಕನಾಗಿ
ನಟಿಸಿದ್ದು, ಮುಂಬೈ ಮೂಲದ ತನುಶ್ರೀ ಚಟರ್ಜಿ ನಾಯಕಿಯಾಗಿ ಹಾಗೂ ಐಟಂ ಹಾಡಿನಲ್ಲಿ ಸಮೀರಾಖಾನ್ ಹೆಜ್ಜೆ ಹಾಕಿದ್ದಾರೆ.

ಚಿತ್ರದಲ್ಲಿ 6 ಹಾಡುಗಳಿದ್ದು, ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರು 5 ಹಾಡುಗಳಿಗೆ ಸಂಗೀತ, ಸಾಹಿತ್ಯ ರಚನೆಯ ಜೊತೆ ಅವರೇ ಒಂದು ಹಾಡಿಗೆ ದನಿಯಾಗಿದ್ದಾರೆ. ವಿನುಮನಸು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಹಿರಿಯ ಛಾಯಾಗ್ರಾಹಕ ಅಣಜಿ ನಾಗರಾಜ್ ಮಾತನಾಡಿ, ಚಿತ್ರದ ಪ್ರತಿ ಸೀನ್‌ಗೂ ತುಂಬಾ ವರ್ಕ್ ಮಾಡಿದ್ದೇವೆ. ಇಂಥ ಸಿನಿಮಾಗಳಿಗೆ ಮಾಧ್ಯಮದ ಸಹಕಾರ ಬೇಕು. ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಮನರಂಜನೆ ನೀಡುತ್ತದೆ ಎಂದು ಹೇಳಿದರು. ನಟ ಗಣೇಶರಾವ್ ಮಾತನಾಡಿ ಇದು ನನ್ನ 300ನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಒಬ್ಬ ಡಾನ್ಸ್ ಟೀಚರ್ ಪಾತ್ರ. ನಾಯಕ ಒಮ್ಮೆ ನನ್ನ ಜೊತೆ ಸ್ಕೂಟರ‍್ನಲ್ಲಿ ಹೋಗುವಾಗ ರೌಡಿಗಳ ಪೋಸ್ಟರ್ ನೋಡಿ ನಾನೂ ಯಾಕೆ ರೌಡಿಯಾಗಬಾರದು ಎಂದು ಕೇಳುತ್ತಾನೆ. ಮುಂದೆ ದೊಡ್ಡ ರೌಡಿಯನ್ನು ಹೊಡೆದು ಜೈಲಿಗೂ ಹೋಗುತ್ತಾನೆ ಎಂದು ಹೇಳಿದರು.

1500 ಚಿತ್ರಗಳಿಗೆ ಸ್ಟಂಟ್ ಮಾಡಿರುವ ಫಯಾಜ್‌ಖಾನ್ 3 ಸಾಹಸ ದೃಷ್ಯಗಳನ್ನು ಕಂಪೋಜ್ ಮಾಡಿದ್ದಾರೆ.
ಕೊನೆಯಲ್ಲಿ ಪ್ರಶಾಂತ್ ಶೆಟ್ಟಿ ಮಾತನಾಡಿ, ದಶಕದ ಹಿಂದೆ ಮನಸಿನಪುಟದಲಿ ಹಾಗೂ 5 ವರ್ಷಗಳ ಹಿಂದೆ ಬ್ರಾಂಡ್ ಎನ್ನುವ ಚಿತ್ರಗಳನ್ನು ಮಾಡಿದ್ದು, ಇದು 3ನೇ ಚಿತ್ರ.
ನನ್ನ ಸ್ನೇಹಿತ ಹೇಳಿದ ಕಂಟೆಂಟ್ ಇಟ್ಟುಕೊಂಡು ಈಚಿತ್ರ ಮಾಡಿದ್ದೇನೆ. ಸಾಧನೆ ಮಾಡಬೇಕೆಂದು ಹೃದಯದಲ್ಲಿ ನೂರಾರು ಕನಸುಗಳನ್ನು ಹೊತ್ತು ಹಳ್ಳಿಯಿಂದ
ಬೆಂಗಳೂರಿಗೆ ಬರುವ ನಾಯಕನ ಜೀವನ ಮುಂದೆ ಏನೆಲ್ಲ ತಿರುವುಗಳನ್ನು ಪಡೆದು ಸಾಗುತ್ತದೆ, ಆತ ಏಕೆ ರೌಡಿಯಾದ ಎನ್ನುವುದೇ ಈ ಚಿತ್ರದ ಮುಖ್ಯ ಅಂಶ.


ಬೆಂಗಳೂರು, ದಾವಣಗೆರೆ ಬಳಿಯ ಚನ್ನಗಿರಿ ಹಾಗೂ ಬಾಂಬೆಯಲ್ಲಿ ಚಿತ್ರೀಕರಿಸಿದ್ದೇವೆ.
ನಾನು, ಗುರುರಾಜ ಹೊಸಕೋಟೆ ಹಾಗೂ ಅಣಜಿ ನಾಗರಾಜ್ ಸೇರಿ ತುಂಬಾ ಚರ್ಚೆಮಾಡಿ ಈ ಸಿನಿಮಾ ಆರಂಭಿಸಿದೆವು. ನಮ್ಮ ಚಿತ್ರದ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದು, ಈಗಾಗಲೇ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಕಂಪ್ಲೀಟ್ ಮಾಸ್ ಸಿನಿಮಾ ಅಲ್ಲ, ಕಲ್ಟ್ ಸಿನಿಮಾ ಎಂದು ಹೇಳಿದರು. ಮೌಲ್ಯಚೇತನ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಈ ವಾರ ಪುನೀತ್-ಪ್ರಭುದೇವಾ ಸಂಗಮದ ಲಕ್ಕಿಮ್ಯಾನ್ ತೆರೆಗೆ…

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವಾ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ “ಲಕ್ಕಿ ಮ್ಯಾನ್” ಚಿತ್ರ ಈ ಶುಕ್ರವಾರ(ಸೆ.9) ರಾಜ್ಯಾದ್ಯಂತ ಅಲ್ಲದೆ ದೇಶ- ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ತೆರೆಕಾಣಲಿದೆ. ತನ್ನ ಕೊನೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಭಗವಾನ್ ಮಹಾವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷ.

ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಹ ಮೆಚ್ಚಿಕೊಂಡಿದ್ದು, ಯಾವುದೇ ಕಟ್ಸ್ ಇಲ್ಲದೆ ‘ಯು’ ಪ್ರಮಾಣಪತ್ರ ನೀಡಿದ್ದಾರೆ. ಕಾಕತಾಳೀಯ ಎನ್ನುವಂತೆ ಹಿಂದೆ ಡಾ.ರಾಜ್ ಕುಮಾರ್ ಹಾಗೂ ಪುನೀತ್ ಅಭಿನಯಿಸಿದ್ದ ಭಕ್ತಪ್ರಹ್ಲಾದ ಚಿತ್ರವೂ ಸಹ ಸೆ.೯ರಂದೇ ತೆರೆಕಂಡಿತ್ತು.

ಅಣ್ಣಾವ್ರ ಮೇಲೆ ರಚಿಸಲಾಗಿರುವ ಪುನೀತ್ -ಪ್ರಭುದೇವಾ ಅಭಿನಯದ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮೊದಲ ಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಆಕ್ಷನ್‌ಕಟ್ ಹೇಳಿದ್ದಾರೆ. ತಮಿಳಿನ ಓಮೈ ಕಡವುಲೆ ಚಿತ್ರದ ರೀಮೇಕ್ ಆದ ಲಕ್ಕಿಮ್ಯಾನ್ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್‌ರಾಜ್, ಸುಧಾ ಬೆಳವಾಡಿ, ಮಾಳವಿಕಾ ನಟಿಸಿದ್ದಾರೆ.

ಪಿ.ಆರ್.ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ೨ ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ, ಧನಂಜಯ ರಂಜನ್ ಅವರ ಸಾಹಿತ್ಯವಿದೆ, ಜೀವಾಶಂಕರ್ ಅವರ ಛಾಯಾಗ್ರಹಣ, ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ
ರಘುನಂದನ್ ಕಾನಡ್ಕ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

error: Content is protected !!