ಚಿತ್ರ ವಿಮರ್ಶೆ – ವಿಜಯ್ ಭರಮಸಾಗರ
ರೇಟಿಂಗ್ 4/5
ಚಿತ್ರ: ಲಕ್ಕಿಮ್ಯಾನ್
ನಿರ್ದೇಶಕ: ನಾಗೇಂದ್ರ ಪ್ರಸಾದ್
ನಿರ್ಮಾಣ: ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್
ತಾರಾಗಣ: ಪುನೀತ್ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ, ರೋಷಣಿ, ರಂಗಾಯಣ ರಘು, ಸುಂದರ ರಾಜ್, ಸುಧಾ ಬೆಳವಾಡಿ ಸಾಧುಕೋಕಿಲ ಇತರರು…
‘ಗೊತ್ತಿಲ್ಲದೇ ಇರೋರನ್ನ ನಾನ್ ಮದುವೆ ಆಗಲ್ಲ… ಹೀಗಂತ ನಾಯಕ ಅರ್ಜುನ್ ಹೇಳ್ತಾನೆ. ಅ ಮಾತಿಗೆ ‘ ನಾವಿಬ್ರು ಮದ್ವೆ ಆಗಬಹುದಲ್ವ! ಹೀಗಂತ ನಾಯಕಿ ಅನು ಹೇಳ್ತಾಳೆ…
ಇವರಿಬ್ಬರ ಮಾತುಕತೆ ನಡೆಯೋ ಹೊತ್ತಿಗೆ, ಇಬ್ಬರಿಗೂ ಮದ್ವೆಯಾಗಿ, ಅದು ಈಗೋ ಹೆಚ್ಚಾಗಿ, ಜಗಳ ಶುರುವಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೆ ಅದು ಡೈವೋರ್ಸ್ ಹಂತಕ್ಕೂ ಹೋಗುತ್ತೆ! ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೆ ಕಥೆ.
ಇಷ್ಟು ಹೇಳಿದ ಮೇಲೆ ಎಲ್ಲಾ ಸಿನಿಮಾ ಕಥೆಯಲ್ಲೂ ಈ ವಿಷಯ ಕಾಮನ್ ಬಿಡಿ ಎಂಬ ಮಾತು ಎದುರಾದರೂ, ಇಲ್ಲಿನ ಕಥೆಯಲ್ಲಿ ಹೊಸತನವಿದೆ. ನಿರೂಪಣೆಯಲ್ಲಿ ವಿಶೇಷತೆ ಇದೆ. ತೋರಿಸಿರುವ ವಿಧಾನದಲ್ಲಿ ಸ್ಪಷ್ಟತೆ ಇದೆ. ಹಾಗಾಗಿ ಇದೊಂದು ಸ್ವಚ್ಛ ಮತ್ತು ಸ್ಪಷ್ಟತೆಯ ಸಿನಿಮಾ.
ಇಡೀ ಸಿನಿಮಾದಲ್ಲಿ ನಗುವಿದೆ,ಅದರ ಜೊತೆ ಜೊತೆಯಲ್ಲೇ ತಮಾಷೆಯೂ ಇದೆ, ಬೇಜವಾಬ್ದಾರಿತನದ ಹುಡುಗಾಟ ಇದೆ. ಇವೆಲ್ಲದರ ಜೊತೆಗೊಂದು ಭಾವುಕತೆಯೂ ತುಂಬಿದೆ. ಸಿನಿಮಾ ನೋಡಿ ಆಚೆ ಬರುವ ಪ್ರತಿಯೊಬ್ಬರ ಮನದಲ್ಲಿ ದೇವರು ನೆಲೆಸುತ್ತಾನೆ! ಹೌದು, ಇಲ್ಲಿ ದೇವರು ಮತ್ತು ಮಾನವನ ನಡುವಿನ ಆಹ್ಲಾದಕರ ಮಾತುಕತೆ ಇದೆ. ಅದು ಎಲ್ಲೋ ಒಂದು ಕಡೆ ತಮಾಷೆ ಎನಿಸಿದರೂ, ಅಲ್ಲಲ್ಲಿ ಬದುಕಿನ ವಾಸ್ತವತೆಯ ಪರಿಯನ್ನು ಹೇಳುತ್ತದೆ.
ನಿರ್ದೇಶಕ ನಾಗೇಂದ್ರಪ್ರಸಾದ್ ಅವರಿಗೆ ಇದು ಮೊದಲ ಸಿನಿಮಾ. ಆದರೂ ಅವರು ಎಲ್ಲೂ ಎಡವದೆ ಒಂದು ನೀಟ್ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ದೊಡ್ಡ ಪವಾಡವಿದೆ. ಅದೇ ಆ ದೇವರು ಪವಾಡ. ತೆರೆ ಮೇಲೆ ನಿಜವಾಗಿಯೂ ನೋಡುಗರಿಗೆ ದೇವರು ಕಂಡಷ್ಟೇ ಅನುಭವ. ಅ ದೇವರ ಪವಾಡವೇ ಇಲ್ಲಿ ಹೈಲೆಟ್. ಆ ಪವಾಡ ತಿಳಿಯೋಕೆ ಸಿನಿಮಾ ನೋಡಿ.
ಅಪ್ಪು ಎಂಬ ದೇವರು…
ಪುನೀತ್ ರಾಜ್ ಕುಮಾರ್ ಇಲ್ಲಿ ಸಾಕ್ಷಾತ್ ದೇವರಾಗಿಯೇ ಕಾಣಿಸಿಕೊಂಡಿದ್ದಾರೆ. ಪರದೆ ಮೇಲೆ ಅವರು ಕಾಣುತ್ತಿದ್ದಂತೆ ಖುಷಿಗೊಂದು, ದುಃಖಕ್ಕೊಂದು ಎರಡು ಕಣ್ಣುಗಳು ತುಂಬಿ ಹೋಗುತ್ತವೆ. ನೋಡುತ್ತಲೇ ಎದೆಭಾರವಾಗುತ್ತ ಹೋಗುತ್ತದೆ.
ದೇವರ ಪಾತ್ರದಲ್ಲಿ ಅಪ್ಪು ಅವರನ್ನು ನೋಡಿವರಿಗೆ ಪೂಜ್ಯಭಾವ. ಇಷ್ಟಕ್ಕೂ ಇಲ್ಲಿ ಲಕ್ಕಿಮ್ಯಾನ್ ಯಾರು? ಅದಕ್ಕೆ ಉತ್ತರ ಸಿನಿಮಾ ನೋಡಬೇಕು.
ಅಂದಹಾಗೆ, ಇದು ಓ ಮೈ ಕಡವುಲೆ ತಮಿಳು ಸಿನಿಮಾ ಅವತರಣಿಕೆ. ಅದನ್ನಿಲ್ಲಿ ಯಥಾವತ್ತಾಗಿ ಮಾಡಿದರೂ, ಕನ್ನಡೀಕರಣಕ್ಕೆ ಎಲ್ಲೂ ಧಕ್ಕೆ ತಂದಿಲ್ಲ. ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನು ಇಲ್ಲಿ ಪುನೀತ್ ರಾಜಕುಮಾರ್ ಮಾಡಿದ್ದಾರೆ. ನಿಜಕ್ಕೂ ಪರದೆ ಮೇಲೆ ಅವರು ಸಾಕ್ಷಾತ್ ದೇವರೇ ಎಂಬಂತೆ ಬಿಂಬಿತವಾಗುತ್ತಾರೆ. ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಅಪ್ಪು ಮಿಂಚಿದ್ದಾರೆ. ಇಡೀ ಸಿನಿಮಾದ ತಾಕತ್ತೇ ಅವರು. ಅವರಿಂದಲೇ ಕಥೆಗೊಂದು ಅರ್ಥ.
ಇಷ್ಟಕ್ಕೂ ಕಥೆ ಏನು?
ಅನು (ಸಂಗೀತ ಶೃಂಗೇರಿ) ತನ್ನ ಬಾಲ್ಯದ ಗೆಳೆಯ ಅರ್ಜುನ್ (ಕೃಷ್ಣ) ಅವರನ್ನ ಮದ್ವೆ ಆಗು ಅಂತ ನೇರವಾಗಿ ಕೇಳುತ್ತಾಳೆ. ಆಗ ಅವನ ಮನಸ್ಸು ಆತನ ಮನಸ್ಸು ಎಲ್ಲೆಲ್ಲೋ ಓಡುತ್ತೆ. ಮನಸ್ಸೂ ಭ್ರಮಾಲೋಕಕ್ಕೆ ಹೋಗುತ್ತೆ. ವಾಸ್ತವ ಬೆರೆತ ಬದುಕಲ್ಲಿ ದೇವರ ಬಳಿ ಹೋಗ್ತಾನೆ. ಈ ವಿಷಯ ಸ್ವಲ್ಪ ಒಗ್ಗಲ್ಲ. ಆದರೂ ದೇವರಾಗಿ ಪುನೀತ್ ದರ್ಶನವಾದಾಗ ಮನಸ್ಸು ಒಪ್ಪದೇ ಇರದು. ದೇವರ ಜೊತೆ ಮಾನವನ ಮಾತುಕತೆ ತಮಾಷೆ ಎನಿಸಿದರೂ ಅದು ಪವಾಡವೂ ಹೌದೆಂಬ ಭಾಸ.
ಅರ್ಜುನ್ ತನ್ನ ಹೆಂಡತಿ ಅನು ಬಗ್ಗೆ ಇಲ್ಲದ ಕಲ್ಪನೆ ಮಾಡಿಕೊಂಡು ಭೀತಿಗೊಂಡು ಡೈವೋರ್ಸ್ ಕೊಡಬೇಕೆಂದುಕೊಂಡಾಗ ದೇವರ ಜೊತೆ ನಡೆಯೋ ಅದ್ಭುತ ಸನ್ನಿವೇಶಗಳೇ ಸಿನಿಮಾ ನೋಡಿಸಿಕೊಂಡು ಹೋಗುತ್ತವೆ. ಹೆಚ್ಚು ಹೇಳುವುದಕ್ಕಿಂತ ದೇವರು ಆ ಯುವಕನಿಗೆ ಹೇಗೆಲ್ಲಾ ಬುದ್ಧಿ ಹೇಳಿ ನಿಜ ಬದುಕಿನತ್ತ ಕೊಂಡೊಯ್ಯುತ್ತದೆ ಅನ್ನೋದೇ ವಿಶೇಷ.
ಇನ್ನು ಸಿನಿಮಾ ನೋಡುಗರಿಗೆ ಅದು
ಭ್ರಮೆಯೋ, ವಾಸ್ತವನಾ ಎಂಬ ಗೊಂದಲ ಇಲ್ಲ. ಅಷ್ಟೊಂದು ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇದಕ್ಕೆ ಕಾರಣ ಪುನೀತ್ ಅವರು ಇಡೀ ಸಿನಿಮಾ ಆವರಿಸಿಕೊಳ್ಳುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ.
ಯಾರ ನಟನೆ ಹೇಗೆ?
ಪುನೀತ್ ರಾಜ್‍ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ತೆರೆ ಮೇಲೆ ತಾನು ದೇವರಂತೆಯೇ ಕಾಣುತ್ತಾರೆ ಕೂಡ. ಇಡೀ ಚಿತ್ರವನ್ನು ಆವರಿಸಿಕೊಂಡು ನಗಿಸಿ, ಭಾವುಕರಾಗಿಸುತ್ತಾರೆ.
ಇನ್ನು, ಡಾರ್ಲಿಂಗ್ ಕೃಷ್ಣ ಎಂದಿಗಿಂತಲೂ ಹುಡುಗಾಟದ ಹುಡುಗನಾಗಿ ಇಷ್ಟವಾಗುತ್ತಾರೆ. ಸಂಗೀತ ಶೃಂಗೇರಿ, ರೋಷನಿ ಕೂಡ ಇಷ್ಟವಾಗುತ್ತಾರೆ. ರಂಗಾಯಣ ರಘು, ಸುಂದರರಾಜ್, ನಾಗಭೂಷಣ್, ಸುಧಾ ಬೆಳವಾಡಿ ಸೇರಿದಂತೆ ಇತರರು ಗಮನ ಸೆಳೆಯುತ್ತಾರೆ.
ಕೊನೆಯ ಹಾಡಲ್ಲಿ ಡಾ.ರಾಜಕುಮಾರ್ ಅವರನ್ನು ನೆನಪಿಸುವ ಹಾಡಲ್ಲಿ ಪ್ರಭುದೇವ ಹೆಜ್ಜೆ ಹಾಕುತ್ತಾರೆ. ಅವರೊಂದಿಗೆ ಅಪ್ಪು ಕೂಡ ಸ್ಟೆಪ್ ಹಾಕಿ ಖುಷಿಪಡಿಸುತ್ತಾರೆ. ಇದು ವಿನಾಕಾರಣ ಬರುವ ಹಾಡಲ್ಲ. ಕಥೆಗೆ ಪೂರಕವಾಗಿದೆ. ಅವರ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಅವರ ಸಂಗೀತದಲ್ಲಿ ಸ್ವಾದ ತುಂಬಿದೆ.
ಕೊನೆಮಾತು: ಒಟ್ಟಾರೆ ಸಿನಿಮಾ ನೋಡಿದವರು ‘ಪುನೀತ’ ರಾಗಿ ಹಾಗೊಮ್ಮೆ ಭಾವುಕರಾಗಿ ಹೊರಬರೋದು ದಿಟ.