Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಭಗವಾನ್ ನಿಧನ: ರಾಜಕುಮಾರ್ ಗೆ ಹೆಚ್ಚು ಚಿತ್ರ ನಿರ್ದೇಶಿಸಿದ್ದ ಹೆಗ್ಗಳಿಕೆ…

ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (95) ಅವರು ಸೋಮವಾರ ಮುಂಜಾನೆ 6.15ಕ್ಕೆ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ‌ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.

ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗ ಹಾಗು ಅಭಿಮಾನಿಗಳನ್ನು ಬಿಟ್ಟು ಭಗವಾನ್ ಅಗಲಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದೊರೈ – ಭಗವಾನ್‌ ಕನ್ನಡದ ಮಹತ್ವದ ಚಿತ್ರನಿರ್ದೇಶಕ ಜೋಡಿ. ದೊರೈ ಜೊತೆಗೂಡಿ ಭಗವಾನ್‌ ಅವರು ಎರಡು ತಮಿಳು ಚಿತ್ರಗಳು ಸೇರಿದಂತೆ 32 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಮಾಂಗಲ್ಯ ಬಂಧನ’ ಮತ್ತು ‘ಆಡುವ ಗೊಂಬೆ’ ಭಗವಾನ್‌ ಒಬ್ಬರೇ ನಿರ್ದೇಶಿಸಿದ ಸಿನಿಮಾಗಳು.

ಟೀವಿ ಧಾರಾವಾಹಿ ಹಾಗೂ ಸಾಕ್ಷ್ಯ ಚಿತ್ರಗಳ ನಿರ್ದೇಶನವನ್ನೂ ಮಾಡಿದ್ದಾರೆ. ‘ಮಂಗಳ ಸೂತ್ರ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಭಗವಾನ್‌ ‘ಬೆಂಗಳೂರು ಮೈಲ್‌’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.

Categories
ಸಿನಿ ಸುದ್ದಿ

ತತ್ಸಮ ತದ್ಭವ ಪೋಸ್ಟರ್ ಬಂತು: ನೂರಾರು ನಟ ನಟಿಯರು ಏಕಕಾಲಕ್ಕೆ ರಿಲೀಸ್ ಮಾಡಿದ ಪೋಸ್ಟರ್ ಇದು!

ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ “ತತ್ಸಮ ತದ್ಭವ”ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ

ನಿರ್ದೇಶಕ ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ವಿಶೇಷವೆಂದರೆ, ಫೆಬ್ರವರಿ 19 ರಂದು “ತತ್ಸಮ ತದ್ಭವ” ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನೂರಕ್ಕೂ ಹೆಚ್ಚು ನಟನಟಿಯರು ತಮ್ಮ ಸಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ. ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ.

ಚಿತ್ರದ ಸುಮಧುರ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ, ನಿಖಿತ ಪ್ರಿಯ ವಸ್ತ್ರವಿನ್ಯಾಸ ಹಾಗೂ ಸಂತೋಷ್ ಪಂಚಾಲ್ ಕಲಾ ನಿರ್ದೇಶನವಿರುವ “ತತ್ಸಮ ತದ್ಭವ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

19.20.21 ಟ್ರೇಲರ್ ಗೆ ಭರಪೂರ ಮೆಚ್ಚುಗೆ: ಮಾರ್ಚ್ 3ಕ್ಕೆ ಮಂಸೋರೆ ಚಿತ್ರ ದರ್ಶನ…

ನಿರ್ದೇಶಕ ಮಂಸೋರೆ ‘19.20.21’ ಸಿನಿಮಾ ಮೂಲಕ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದ್ದಾರೆ. ಟೀಸರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಕುತೂಹಲ ಭರಿತ ಟ್ರೇಲರ್ ಬಿಡುಗಡೆ ಮಾಡಿದೆ. ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಾಗೂ ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಮಂಸೋರೆ ಮಾತನಾಡಿ, ನೈಜ ಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಒಂಭತ್ತು ವರ್ಷದಿಂದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದ್ದೇನೆ. 2021ರಲ್ಲಿ ಘಟನೆಗೆ ಸಂಬಂಧಿಸಿದ ತೀರ್ಪು ಬಂದ ಮೇಲೆ ಸಿನಿಮಾ ಮಾಡಲು ನಿರ್ಧರಿಸಿದ್ವಿ. ನಾನು, ವೀರೇಂದ್ರ ಮಲ್ಲಣ್ಣ ಮತ್ತು ಸಂತೋಷ್ ಮೂರು ಜನ ಈ ಘಟನೆಗೆ ಸಂಬಂಧಿಸಿದ ಮಾಹಿತ ಕಲೆ ಹಾಕಿ ಸ್ಕ್ರಿಪ್ಟ್ ಮಾಡಿದ್ದೇವೆ. ಸಮುದಾಯದ ಒಬ್ಬ ಹುಡುಗನ ಹೋರಾಟದ ಕಥೆ ಇದು. ನಿರ್ಮಾಪಕರಾದ ದೇವರಾಜ್ ಹಾಗೂ ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಕಥೆ ಕೇಳಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಕೊಂಡ್ರು. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದರು.

ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಮಾತನಾಡಿ ಚಿತ್ರದ ಸ್ಕ್ರಿಪ್ಟ್ ತುಂಬಾ ಇಷ್ಟ ಆಯ್ತು. ರೆಗ್ಯೂಲರ್ ಸಿನಿಮಾ ಬಿಟ್ಟು ನೈಜ ಘಟನೆ ಆಧಾರಿತ ಹಾಗೂ ಪ್ರಯೋಗಾತ್ಮಕ ಸಿನಿಮಾ ಮಾಡೋಣ ಎಂದು ನಿರ್ಧರಿಸಿದ್ವಿ. ಒಂದೊಳ್ಳೆ ಕಥೆಗೆ, ಚಿತ್ರತಂಡಕ್ಕೆ ಸಪೋರ್ಟ್ ಆಗಿ ಇದ್ದೇನೆ ಎಂದು ತಿಳಿಸಿದರು.

ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಈ ಚಿತ್ರದ ಟ್ರೇಲರ್ ನೋಡಿದ ಮೇಲೆ ಸಮಾಜಕ್ಕೆ, ಸರ್ಕಾರಕ್ಕೆ, ವ್ಯವಸ್ಥೆಗೆ ಬೇಕಾಗಿರುವ ಸಿನಿಮಾವನ್ನು ಮಂಸೋರೆ ಹಾಗೂ ಅವರ ತಂಡ ನೀಡಿದೆ ಎನ್ನಿಸುತ್ತೆ. ಮಂಸೋರೆ ಅವರ ಬರವಣಿಗೆ, ಮಾಡುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿವೆ. ಯುವ ಸಮೂಹಕ್ಕೆ, ಪ್ರಜ್ಞಾವಂತರಿಗೆ ಹಾಗೂ ಸಮಾಜದಲ್ಲಿ ಘಾತುಕ ಶಕ್ತಿಗಳಾಗಿ ಕೆಲಸ ಮಾಡಲು ಹೊರಡುತ್ತಿರುವವರು ಈ ಸಿನಿಮಾ ನೋಡಿದ ಮೇಲೆ ವಾಪಾಸ್ಸು ಸಾಮಾಜಿಕ ನ್ಯಾಯದ ಪರವಾಗಿ ಬರುದ ಸಾಧ್ಯತೆ ತುಂಬಾ ಇದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡಕ್ಕೆ ಬೆಂಬಲ ನೀಡಿ ಎಂದರು.

ನಾದಬ್ರಹ್ಮ ಹಂಸಲೇಖ ಮಾತನಾಡಿ ಸಂವಿಧಾನದ ಹಿನ್ನೆಲೆ ಇಟ್ಟುಕೊಂಡು ಟೈಟಲ್ ಇಟ್ಟಿರೋದು ಭಾರತೀಯ ಚಿತ್ರರಂಗದಲ್ಲಿ ಇದೆ ಮೊದಲು. ಇತ್ತೀಚೆಗೆ ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಮುಂದೆ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ಎಂಬ ಪ್ರಚಂಡ ಮಾಧ್ಯಮದ ಮೂಲಕ ಮಂಸೋರೆ ‘19.20.21’ ಚಿತ್ರದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದ್ದಾರೆ. ಇದೇ ರೀತಿಯ ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಂಸೋರೆ ಮಾಡಲಿ ಎಂದು ನಿರ್ದೇಶಕರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಒಂದಂಕೆ ಕಾಡಲ್ಲಿ ಸಸ್ಪೆನ್ಸ್ ಕಥೆ! ಮಾರ್ಚ್ 3ಕ್ಕೆ ಥ್ರಿಲ್ಲರ್ ಸಿನಿಮಾ ರಿಲೀಸ್…

ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಒಂದಂಕೆ ಕಾಡು’ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಟ್ರೇಲರ್, ಹಾಡುಗಳ ಮೂಲಕ ಗಮನ ಸೆಳೆದಿದೆ.

ನಿರ್ದೇಶಕ ರಾಮಚಂದ್ರ ವೈದ್ಯ ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗಿನಲ್ಲಿ ‘ಅನಗನಗಾ ಒಕ ಅಡವಿ’ ಹೆಸರಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ‘ಒಂದಂಕೆ ಕಾಡು’ ಎಂದು ಟೈಟಲ್ ಇಡಲು ಕಾರಣವಿದೆ. ಉತ್ತರ ಕನ್ನಡದಲ್ಲಿ ವಿಶಿಷ್ಟ ಕಾಡಿದೆ. ಮರಗಳ ಬೇರು ನೆಲದ ಒಳಗೆ ಹೋಗುತ್ತದೆ ಆದ್ರೆ ಈ ಭಾಗದ ಕಾಡಲ್ಲಿ ಎಲ್ಲಾ ಮರದ ಬೇರುಗಳು ಕನ್ನಡದ ಒಂದಂಕೆ ಹಾಗೆ ಇರುತ್ತೆ ಅದಕ್ಕೆ ಒಂದಂಕೆ ಕಾಡು ಎಂದು ಇಡಲಾಗಿದೆ. ಕಾಡಿನ ಮಧ್ಯೆ ಚಿತ್ರೀಕರಣ ನಡೆಸಲಾಗಿದೆ. ಕಾರವಾರ, ದಾಂಡೇಲಿ, ಶಿರಸಿ, ಯಲ್ಲಾಪುರ, ಗೋವಾ ಬಾರ್ಡರ್ ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ ಎಂದರು.

ನಾಯಕ ನಟ ರಥರ್ವ ಮಾತನಾಡಿ, ಚಿತ್ರದಲ್ಲಿ ರಿಷಿ ಪಾತ್ರದಲ್ಲಿ ನಟಿಸಿದ್ದೇನೆ. ರಿಷಿ ಬೆಂಗಳೂರು ಹುಡುಗ. ಕೆಲಸ ಹಾಗೂ ಹೆಂಡ್ತಿ ಇಷ್ಟೇ ಅವನಿಗೆ ಜೀವನ. ಹೀಗಿರುವಾಗ ಇಬ್ಬರು ಒಂದಂಕೆ ಕಾಡಿಗೆ ವೆಕೇಶನ್ ಹೋಗುತ್ತಾರೆ. ಆ ಕಾಡಿನಲ್ಲಿ ಏನೇನು ಸಮಸ್ಯೆ ಎದುರಿಸುತ್ತಾರೆ, ಅದನ್ನೆಲ್ಲ ಹೇಗೆ ಫೇಸ್ ಮಾಡ್ತಾರೆ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದು ನನ್ನ ಮೊದಲ ಸಿನಿಮಾ. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದರು.

ನಾಯಕಿ ಸೋನಿ ಮಾತನಾಡಿ, ನಾನು ಮೂಲತಃ ಮೈಸೂರಿನವಳು. ರಂಗಭೂಮಿ ಕಲಾವಿದೆ. ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಚಿತ್ರದಲ್ಲಿ ನಂದಿನಿ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ಅನುಭವ ಈ ಸಿನಿಮಾ ನೀಡಿದೆ. ನನಗೆ ಈ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂತಸ ಹಂಚಿಕೊಂಡರು.

ಗಣೇಶ್ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿದ್ದು, ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಿನ್ನೆಲೆ ಗಾಯನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೂರದರ್ಶನ ಟ್ರೇಲರ್ ಬಂತು: ಮಾರ್ಚ್ 3ಕ್ಕೆ ಚಿತ್ರ ದರ್ಶನ…

ಸುಕೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದೂರದರ್ಶನ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಮಾರ್ಚ್ 3ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಅಯಾನ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ನಾಯಕ ಪೃಥ್ವಿ ಅಂಬರ್ ಮಾತನಾಡಿ, ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರ ಆಗುತ್ತೆ. ಒಂದು ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಎಲ್ಲರಿಗೂ ನೀಡುತ್ತೆ. ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದೂರದರ್ಶನ ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕಿ ಅಯಾನ, ಈ ಸಿನಿಮಾ ನಮ್ಮ ನಿರ್ದೇಶಕರ ಡ್ರೀಮ್ ಪ್ರಾಜೆಕ್ಟ್. ಈ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದಕ್ಕೆ ತುಂಬಾ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ಮೈತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿಂಪಲ್ ಹುಡುಗಿ ಪಾತ್ರ. ಲವ್ ಸ್ಟೋರಿ ಕೂಡ ಇದೆ. ಎಲ್ಲಾ ಕಲಾವಿದರೊಂದಿಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದರು.

ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಈ ಸಿನಿಮಾ ಈ ಮಟ್ಟಿಗೆ ಬಂದು ನಿಂತಿದೆ ಅಂದರೆ ಕಾರಣ ನಮ್ಮ ನಿರ್ಮಾಪಕರು. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತೆ. ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ರಾಜೇಶ್ ಭಟ್ ಮಾತನಾಡಿ, ಈ ಸಿನಿಮಾ ಕೇವಲ ನನ್ನೊಬ್ಬನಿಂದ ಆಗಿಲ್ಲ. ತಾಂತ್ರಿಕ ವರ್ಗ, ಕಲಾವಿದರ ಸಹಕಾರ ಇವರೆಲ್ಲರಿಂದ ಈ ಸಿನಿಮಾ ಆಗಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ಜೊತೆ ಕೆಲಸ ಮಾಡಿದ್ದು ತುಂಬಾ ಹೆಮ್ಮೆ ಎನಿಸುತ್ತೆ. ಎಲ್ಲರ ಸಪೋರ್ಟ್ ಸಿನಿಮಾ ಮೇಲೆ ಇರಲಿ ಎಂದರು.

ಉಗ್ರಂ ಮಂಜು ಮಾತನಾಡಿ, ಇಡೀ ತಂಡ ಶ್ರಮ ಹಾಗೂ ಪ್ರೀತಿಯಿಂದ ಮಾಡಿರುವ ಸಿನಿಮಾ ‘ದೂರದರ್ಶನ’. ಚಿತ್ರದಲ್ಲಿ ಕಿಟ್ಟಿ ಎಂಬ ಪಾತ್ರ ಮಾಡಿದ್ದೇನೆ. 80.90ರ ದಶಕದಲ್ಲಿ ನೋಡುವ ಸ್ನೇಹ, ದ್ವೇಷ ಜೊತೆಗೆ ಕುಟುಂಬದ ಕನಸನ್ನು ನೆರವೇರಿಸುವ ಹುಡುಗನ ಪಾತ್ರ. ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದ ಸಹಕಾರದಿಂದ ಈ ಚಿತ್ರ ಈ ಮಟ್ಟಿಗೆ ಬಂದಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ನನಗೆ ಕಥೆ ಹೇಳುವಾಗ ಏನು ಪ್ರಾಮಿಸ್ ಮಾಡಿದ್ದರೋ ಹಾಗೆಯೇ ಸಿನಿಮಾ ಮೂಡಿ ಬಂದಿದೆ. ಅವರ ಎಫರ್ಟ್ ನೋಡಿ ಹೆಮ್ಮೆ ಎನಿಸುತ್ತೆ. ಮಾರ್ಚ್ 3ರಂದು ಎಲ್ಲರೂ ಸಿನಿಮಾ ನೋಡಿ ನಮ್ಮ ತಂಡವನ್ನು ಪ್ರೋತ್ಸಾಹಿಸಿ ಎಂದರು.

ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ರಾಜೇಶ್ ಭಟ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಉಗ್ರಂ ಮಂಜು ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ. ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿ ಜಿ ಸಂಭಾಷಣೆ, ವಾಸುಕಿ ವೈಭವ ಸಂಗೀತ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸಿನಿ ಬಜಾರ್ ಎಂಬ ಡಿಜಿಟಲ್ ಥಿಯೇಟರ್! ಇದು ನಿರ್ಮಾಪಕ ಸ್ನೇಹಿ ಓಟಿಟಿ…

ತಂತ್ರಜ್ಞಾನ ಮುಂದುವರಿದ ಹಾಗೆ ಜೀವನ‌ಶೈಲಿ ಕೂಡ ಬದಲಾಗುತ್ತಿದೆ. ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇಂತಹುದೇ ವಿಶೇಷ ತಂತ್ರಜ್ಞಾನವುಳ್ಳ “ಸಿನಿಬಜಾರ್” ಎಂಬ ಓಟಿಟಿ ಬಿಡುಗಡೆಯಾಗಿದ್ದು, ಈ ಓಟಿಟಿ ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನರು ತಮ್ಮ ನೆಚ್ಚಿನ ಸಿನಿಮಾಗಳನ್ನು ತಾವು ಇದ್ದಲ್ಲಿಯೇ ನೋಡಬಹುದು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿಗೆ “ಸಿನಿಬಜಾರ್” ಓಟಿಟಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

“ಸಿನಿಬಜಾರ್” ಓಟಿಟಿಯಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳು ವಿಶ್ವದ 177 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿವೆ. ಹೀಗಾಗಿ ಇದು ಪ್ಯಾನ್ ವರ್ಲ್ಡ್. ಈ ಆಪ್ ಮೂಲಕ ಪ್ರಪಂಚದೆಲ್ಲೆಡೆ ಇರುವ ಸಿನಿ ಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಬಹುದು. ಟಿವಿ, ಮೊಬೈಲ್, ಇಂಟರ್ ನೆಟ್ ಹಾಗೂ ವೆಬ್ ಸೈಟ್ ನಲ್ಲಿ ಈ ಆಪ್ ದೊರಕುತ್ತದೆ. No ads & no subscription ಇಲ್ಲದೆ ಕೋಟ್ಯಾಂತರ ಜನರು ಏಕಕಾಲಕ್ಕೆ ಚಿತ್ರಗಳನ್ನು ನೋಡಬಹುದು.


ಟಿಕೆಟ್ ಬೆಲೆ ಕೂಡ 10 ರಿಂದ 25 ರೂಪಾಯಿ ಒಳಗೆ ಇರುತ್ತದೆ. ಈ ಆಪ್ ನಿರ್ಮಾಪಕರುಗಳಿಗೆ ಹೆಚ್ಚಿನ ಆದಾಯದಾಯಕವಾಗಿರುತ್ತದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಈ ಆಪ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರುತ್ತದೆ. ಆಸಕ್ತಿಯಿರುವ ನಿರ್ಮಾಪಕರು ನೇರವಾಗಿ ಕೂಡ ಈ ಆಪ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಬಹುದು. ಸ್ಕ್ಯಾನ್ ಮಾಡುವ ಮೂಲಕ ಚಿತ್ರಗಳನ್ನು ವೀಕ್ಷಿಸಬಹುದು ಎಂದು ಮುಖ್ಯಸ್ಥ ಭಾಸ್ಕರ್ ವೆಂಕಟೇಶ್ ಮಾಹಿತಿ ನೀಡಿದರು.

ನನಗೆ ಭಾಸ್ಕರ್ ವೆಂಕಟೇಶ್ ಅವರು ಲಾಕ್ ಡೌನ್ ಸಮಯದಲ್ಲಿ ಈ ಓಟಿಟಿ ಬಗ್ಗೆ ಹೇಳಿದರು. ಅವರು ಹೇಳಿದ ಹಾಗೆ ಇದರಿಂದ ನಿರ್ಮಾಪಕರಿಗೆ ಅನುಕೂಲವಾಗಬಹುದು ಎಂದು ನನಗೂ ಅನಿಸಿತು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ “ಸಿನಿಬಜಾರ್” ಗೆ ಶುಭ ಕೋರಿದರು.
ಆಪ್ ಡೆವಲಪ್ ಮಾಡಿರುವ ತಂತ್ರಜ್ಞರು ಸಹ ಹೆಚ್ಚಿನ ಮಾಹಿತಿ ನೀಡಿದರು.

ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ “ಭಾಗ್ಯವಂತರು” ಈ ಓಟಿಟಿಯ ಮೊದಲ ಚಿತ್ರವಾಗಿ ಬರಲಿದೆ. “ಪಂಪ”, ” ಕಾಕ್ಟೈಲ್ “, “ಗುರ್ಬಿ” ಮುಂತಾದ ಚಿತ್ರಗಳ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಈ ಆಪ್ ನ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆಯಾ ಸಿನಿಮಾಗೆ ಸಂಬಂಧಿಸಿದ ಪ್ರಮುಖರು ಈ ಆಪ್ ನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Categories
ಸಿನಿ ಸುದ್ದಿ

ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ “ಕಬ್ಜ” ಚಿತ್ರದಿಂದ ಗೀತ ನಮನ…

ಗಣ್ಯರ ಸಮ್ಮುಖದಲ್ಲಿ, ಚೆನ್ನೈ ನಗರದಲ್ಲಿ ಅದ್ದೂರಿಯಾಗಿ ಕಬ್ಜ ಸಿನಿಮಾದ “ನಮಾಮಿ ನಮಾಮಿ” ಹಾಡು ರಿಲೀಸ್…

ಇಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ “ನಮಾಮಿ ನಮಾಮಿ” ಎಂಬ ಸುಮಧುರ ಗೀತೆ ಬಿಡುಗಡೆಯಾಗಿದೆ.

ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆದಿದೆ. ಸಾಕಷ್ಟು ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್ ಚಂದ್ರು, “ಕಬ್ಜ” ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ.
ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

“ಕಬ್ಜ” ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಟಿ ಶ್ರೇಯಾ ಶರಣ್.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ “ಕಬ್ಜ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.


ಪ್ರಪಂಚದಾದ್ಯಂತ ಅಭಿಮಾನಿಗಳು ಕಾಯುತ್ತಿರುವ “ಕಬ್ಜ” ಚಿತ್ರ ಮಾರ್ಚ್ 17 ರಂದು(ಪನೀತ್ ರಾಜಕುಮಾರ್ ಜನ್ಮದಿನದಂದು) ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಾಡು-ಮೇಡು ಅಲೆದ ಜೂಲಿಯೆಟ್! ಬೃಂದಾ ಆಚಾರ್ಯ ಚಿತ್ರ ಫೆ.24ಕ್ಕೆ ರಿಲೀಸ್…

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಉತ್ತಮ ಕಂಟೆಂಟ್ ವುಳ್ಳ “ಜೂಲಿಯೆಟ್‌ 2” ಚಿತ್ರ ಸಹ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. ಬೃಂದಾ ಆಚಾರ್ಯ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

“ಜೂಲಿಯೆಟ್ 2” ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣು ಮಗಳೊಬ್ಬಳು ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ ಎಂಬುದು ಕಥೆ. ಸಾಮಾನ್ಯವಾಗಿ “ಜೂಲಿಯೆಟ್‌” ಎಂದಾಕ್ಷಣ ಪ್ರೇಮಕಥೆ ಅಂದುಕೊಳ್ಳುವುದು ವಾಡಿಕೆ. ಆದರೆ ಇದು ಲವ್ ಸ್ಟೋರಿ ಅಲ್ಲ‌. ಇಲ್ಲಿ ರೋಮಿಯೋ ಇರುವುದಿಲ್ಲ.
ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ. ಎಂಬುದನ್ನು ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ನಮ್ಮ ಚಿತ್ರ ಜನರ ಮನ ತಲುಪಿದೆ. ಅಪ್ಪ – ಮಗಳ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ ಇದು ನನ್ನ ಪ್ರಥಮ ಚಿತ್ರ. ನೋಡಿ ಹಾರೈಸಿ ಎಂದರು ನಿರ್ದೇಶಕ ವಿರಾಟ್ ಬಿ ಗೌಡ.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಇದೊಂದು ವಿಭಿನ್ನ ಕಥೆ. ಮಹಿಳೆ ಅಬಲೆಯಲ್ಲ. ಸಬಲೆ. ಎಂದು ನಿರ್ದೇಶಕರು ಹೇಳ ಹೊರಟ್ಟಿದ್ದಾರೆ‌. ತಂದೆ – ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯುತ್ತದೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ. ಎಲ್ಲರೂ ಕಷ್ಟಪಟ್ಟು ಚಿತ್ರ‌ ಮಾಡಿದ್ದೇವೆ ಎಂದು ಲ ಬೃಂದಾ ಆಚಾರ್ಯ ಹೇಳುತ್ತಾರೆ.

ಶ್ರೀಕಾಂತ್ ಹಾಗೂ ರಾಯ್ ಅವರು ತಮ್ಮ ಪಾತ್ರದ ಅನುಭವ ಹಂಚಿಕೊಂಡರು.

ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣವಿದೆ.

ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಫೆಬ್ರವರಿ 24ಕ್ಕೆ ಸೌತ್ ಇಂಡಿಯನ್ ಹೀರೋನ ಸಖತ್ ಎಂಟ್ರಿ! ಹೊಸ ಹೀರೋ ಬರ್ತಾರೆ ದಾರಿ ಬಿಡಿ…

ಕನ್ನಡದಲ್ಲೀಗ ಹೊಸ ಬಗೆಯ ಅದರಲ್ಲೂ ನಿರೀಕ್ಷೆ ಹೆಚ್ಚಿಸುವ ಸಿನಿಮಾಗಳದ್ದೇ ಸುದ್ದಿ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಬೆಳೆದು ನಿಂತಿದೆ. ಇಲ್ಲಿ ತರಹೇವಾರಿ ಸಿನಿಮಾಗಳು ಬರುತ್ತಲೇ ಇವೆ. ಆ ಸಾಲಿಗೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ ಕೂಡ ಸೇರಿದೆ. ಹೌದು, ಈ ಸಿನಿಮಾ ಸದ್ಯ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ನಿರ್ದೇಶಕ ನರೇಶ್ ಕುಮಾರ್ ಎಚ್.ಎನ್.ಹೊಸಳ್ಳಿ. ಆ ನಿರೀಕ್ಷೆಗೆ ಕಾರಣ, ಈ ಹಿಂದೆ “ಫಸ್ಟ್ ರ‍್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನರೇಶ್‌ಕುಮಾರ್ ಹೆಚ್.ಎನ್. ಹೊಸಳ್ಳಿ ಈ “ಸೌತ್ ಇಂಡಿಯನ್ ಹೀರೋ’ನನ್ನು ಕರೆತರಲು ಅಣಿಯಾಗಿದ್ದಾರೆ. ಫೆಬ್ರವರಿ 24ಕ್ಕೆ ರಾಜ್ಯಾದ್ಯಂತ ಸೌತ್ ಇಂಡಿಯನ್ ಹೀರೋನ ಹವಾ ಶುರುವಾಗಲಿದೆ.

ಅಂದಹಾಗೆ, ಈ ಬಾರಿ ನರೇಶ್ ಕುಮಾರ್ ಅವರು,
ನಿರ್ದೇಶನದ ಜೊತೆ ಅವರ ಪತ್ನಿ ಶಿಲ್ಪಾ ಅವರ ಜೊತೆ ಸೇರಿ ಚಿತ್ರ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಕಿರುತೆರೆ ನಟ ಸಾರ್ಥಕ್ ಹೀರೋ. ಅವರಿಗೆ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಾಯಕಿಯರು.

ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ಜೋರು ಸುದ್ದಿಯಾಗಿದೆ.
ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ‘ಸೌತ್ ಇಂಡಿಯನ್ ಹೀರೋ’ ಚಿತ್ರದ ಬಗ್ಗೆ ನರೇಶ್ ಕುಮಾರ್ ಅವರಿಗೆ ಸಾಕಷ್ಟು ಭರವಸೆ ಇದೆ. ಆ ಕುರಿತು ಅವರು ಹೇಳುವುದಿಷ್ಟು.

ಇದು ನನ್ನ ನಿರ್ದೇಶನದ 4ನೇ ಚಿತ್ರ. ಪ್ರಾಮಾಣಿಕ ಪ್ರಯತ್ನ ಮೂಲಕ ಈ ಸಿನಿಮಾ ಕಟ್ಟಿದ್ದೇವೆ. ಇಲ್ಲಿ ನಾಯಕ ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣರಾವ್. ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಾಗ ಏನೆಲ್ಲ ಸಂಕಷ್ಟಕ್ಕೆ ಸಿಲುಕುತ್ತಾನೆ. ಆಮೇಲೆ ಅದರಿಂದ ಹೊರ ಬರುತ್ತಾನಾ ಇಲ್ಲವಾ ಅನ್ನೋದು ಸಾರಾಂಶ.

ಇಲ್ಲಿ ಹೀರೋಗೆ ಮೂರು ಶೇಡ್ ಇವೆ. ಹಳ್ಳಿ ಬ್ಯಾಕ್‌ಡ್ರಾಪ್, ಸಿಟಿ ಹಿನ್ನೆಲೆ ಕೂಡ ಇಲ್ಲಿದೆ. ಈ ಎರಡರ ನಡುವೆ ವಿಶೇಷ ಗುಣ ಇರುವ ಪಾತ್ರವೂ ಇದೆ. ಇಮೇಜ್ ಇಲ್ಲದ ಒಬ್ಬ ಯುವಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅಂತ ತೋರಿಸುವ ಪ್ರಯತ್ನ ಇಲ್ಲಿದೆ ಎನ್ನುತ್ತಾರೆ ನರೇಶ್ ಕುಮಾರ್.

ಇನ್ನು, ಹೀರೋ ಸಾರ್ಥಕ್ ‘ಅವನು ಮತ್ತು ಶ್ರಾವಣಿ’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಹೇಳುವಂತೆ, ‘ ಇದೊಂದು ವಿಭಿನ್ನ ಪಾತ್ರ. ಒಬ್ಬ ಸ್ಟಾರ್ ನಟನ ಪರ್ಸನಲ್ ಲೈಫ್ ಹೇಗಿರುತ್ತೆ, ಎಲ್ಲಾ ವಿಷಯಗಳನ್ನು ಲಾಜಿಕ್‌ನಲ್ಲಿ ನೋಡುವ ಅವನು ಸಿನಿಮಾಗೆ ಬಂದಾಗ ಏನಾಗುತ್ತದೆ ಎನ್ನುವುದು ಕಥೆಯ ತಿರುಳು ಅನ್ನುತ್ತಾರೆ ಅವರು.

ನಾಯಕಿ ಕಾಶಿಮಾ ಅವರಿಗೆ ಇಲ್ಲಿ ಹಳ್ಳಿ ಶಿಕ್ಷಕಿ ಪಾತ್ರವಂತೆ. ಮಾನಸಿ ಎಂಬ ಪಾತ್ರ ಮಾಡುತಗತಿರುವ ಅವರು, ಉತ್ತರ ಕರ್ನಾಟಕ ಭಾಷೆ ಮಾತಾಡಿದ್ದಾರಂತೆ.

ಇನ್ನು ಚಿತ್ರಕ್ಕೆ ಶಿಲ್ಪಾ ನಿರ್ಮಾಪಕಿ. ಅವರು, ‘ ಮನರಂಜನೆ ಉದ್ದೇಶ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರಂತೆ.
ಚಿತ್ರದಲ್ಲಿ ನಿರ್ದೇಶಕರಾಗಿ ವಿಜಯ್ ಚೆಂಡೂರು ನಟಿಸಿದ್ದರೆ, ಅಮಿತ್, ಅಶ್ವಿನ್ ಕೊಡಂಗಿ, ಅಶ್ವಿನ್‌ರಾವ್ ಪಲ್ಲಕ್ಕಿ ಇತರರು ಕೂಡ ಚಿತ್ರದ ಭಾಗವಾಗಿದ್ದಾರೆ.

ಸಂಗೀತ ನಿರ್ದೇಶಕ ಹರ್ಷವರ್ಧನ್ ಸಿನಿಮಾಗೆ 5 ಹಾಡುಗಳನ್ನು ಕೊಟ್ಟಿದ್ದಾರಂತೆ. ಇನ್ನು ಘಮ ಘಮ ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡು ಸೊಗಸಾಗಿದೆಯಂತೆ.

ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಕ್ಯಾಮೆರಾ ಕೈಚಳಕವಿದೆ. ನರೇಶಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ಮಾರ್ಟಿನ್ ಟೀಸರ್ ಕಾಣಲು ಧ್ರುವ ಫ್ಯಾನ್ಸ್ ಕಾತರ! ಫೆ.23 ರಂದು ಟೀಸರ್ ರಿಲೀಸ್: ಭರ್ಜರಿ ಆಕ್ಷನ್ ಮಾಡಿಸಿದ ಭಲೇ ಅರ್ಜುನ…

ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್. ಎ.ಪಿ. ಅರ್ಜುನ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ವಾಸವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಉದಯ್ ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ 9ನೇ ಚಿತ್ರವಿದು. ಮಾರ್ಟಿನ್ ಚಿತ್ರದ ಪ್ಯಾನ್ ಇಂಡಿಯಾ ಟೀಸರ್ ಇದೇ ಫೆ.23ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ನಿರ್ಮಾಪಕ ಉದಯ್ ಕೆ.ಮೆಹ್ತಾ ಮಾತನಾಡಿ, ಕಳೆದ ಆಗಸ್ಟ್ 15ಕ್ಕೆ ನಮ್ಮ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರವನ್ನು ಆರಂಭಿಸಿದೆವು. ಈಗಾಗಲೇ ಚಿತ್ರದ ಟಾಕಿ ಪೋರ್ಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಫೆ.23ರಂದು ವಿಐಪಿ ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ವೀರೇಶ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ, ಚಿತ್ರಮಂದಿರದಲ್ಲಿ ಹೆವಿ ಕ್ರೌಡ್ ಆಗಬಾರದೆಂಬ ಉದ್ದೇಶ ನಮ್ಮದು. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ. ಅಲ್ಲದೆ ಅದೇ ದಿನ ಸಂಜೆ ತಮ್ಮ ಮೊಬೈಲ್‌ಗಳಲ್ಲೇ ಅಭಿಮಾನಿಗಳು ಮಾರ್ಟಿನ್ ಟೀಸರ್ ನೋಡಬಹುದು. ಅಲ್ಲದೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿರುವುದರಿಂದ ಬೇರೆ ಭಾಷೆಗಳ ಮಾದ್ಯಮದವರನ್ನು ಆಹ್ವಾನಿಸಿ ಪ್ಯಾನ್ ಇಂಡಿಯಾ ಪ್ರೆಸ್‌ಮೀಟ್ ಮಾಡುತ್ತಿದ್ದೇವೆ. ಆರಂಭದಲ್ಲಿ ನಮ್ಮ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತೆ ಅಂದುಕೊಂಡಿರಲಿಲ್ಲ, ಬರ ಬರುತ್ತಾ ದೊಡ್ಡದಾಗುತ್ತಾ ಹೋಯಿತು ಎಂದು ಹೇಳಿದರು.


ನಿರ್ದೇಶಕ ಎಪಿ. ಅರ್ಜುನ್ ಮಾತನಾಡಿ, ಮಾರ್ಟಿನ್ ನಮ್ಮ ಕನ್ನಡದ ಸಿನಿಮಾ. ಮೊದಲು ನಮ್ಮವರ ಜೊತೆ ಮಾಹಿತಿ ಹಂಚಿಕೊಂಡು ನಂತರ ಬೇರೆಯವರ ಮುಂದೆ ಹೋಗುತ್ತಿದ್ದೇವೆ. ಇದು ಎಲ್ಲಾ ಕಡೆಗೂ ಸಲ್ಲುವ ಯೂನಿವರ್ಸಲ್ ಕಥೆಯಾಗಿದ್ದರಿಂದ, ಬೇರೆ ಬೇರೆ ಭಾಷೆಗಳಲ್ಲಿ ನಿರ್ಮಿಸಿದ್ದೇವೆ, ಕಳೆದ 2021ರ ಸೆಪ್ಟೆಂಬರ್‌ನಲ್ಲಿ ಚಿತ್ರ ಆರಂಭವಾಯಿತು, ಇಷ್ಟುದಿನ, ಈ ಮಟ್ಟದಲ್ಲಿ ಆಗುತ್ತೆ ಅಂದ್ಕೊಂಡಿರಲಿಲ್ಲ, ಹೈದರಾಬಾದ್‌ ನಲ್ಲಿ ಸೆಟ್ ಹಾಕಿ 45 ದಿನ ಶೂಟ್ ಮಾಡಿದೆವು. ವೈಜಾಕ್‌ನಲ್ಲಿ ಚೇಸ್‌ಸೀನ್ 20ದಿನಗಳವರೆಗೆ ಆಯಿತು, ಜೊತೆಗೆ ಆಗಾಗ ಬರುತ್ತಿದ್ದ ಮಳೆಯಿಂದಲೂ ತಡವಾಯಿತು, ಇನ್ನು ಕಾಶ್ಮೀರದಲ್ಲಿ 25 ದಿನ ಅಲ್ಲದೆ ಮುಂಬೈನಲ್ಲಿ ಚೇಸಿಂಗ್ ಸೀನ್ ಚಿತ್ರೀಕರಣ ಮಾಡಿಕೊಂಡು ಬಂದೆವು. ಒಂದೊಂದು ಕಡೆ ಶೂಟ್ ಮಾಡಿಕೊಂಡು ಬಂದಾಗಲೂ ಒಂದಷ್ಟು ದಿನ ಗ್ಯಾಪ್ ಬೇಕಾಯಿತು.

ಚಿತ್ರದಲ್ಲಿ ದ್ರುವ ಅವರಿಗೆ ತುಂಬಾ ಗೆಟಪ್ ಇದೆ, ನನ್ನ ಕೆರಿಯರ್‌ನಲ್ಲೇ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ 52 ದಿನ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಿದ್ದೇವೆ. ರಾಮ್ ಲಕ್ಷ್ಮಣ್ ಆಕ್ಷನ್ ಹಾಗೂ ರವಿವರ್ಮಾ ಚೇಸಿಂಗ್ ಸೀನ್ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಪರೀಕ್ಷೆಗಳು, ಐಪಿಎಲ್, ಚುನಾವಣೆ ಮುಗಿದ ನಂತರ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.


ಧ್ರುವ ಮಾತನಾಡಿ, 23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ನಮ್ಮ ಚಿತ್ರದ ಟೀಸರ್ ರಿಲೀಸಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ಈವರೆಗೆ ಮಾಡಿದ್ದಕ್ಕಿಂತ ಬೇರೆ ಥರನೇ ಇದೆ. ಇಡೀ ಸಿನಿಮಾದಲ್ಲಿ ತುಂಬಾ ಕಡಿಮೆ ಡೈಲಾಗ್ ಇದ್ದು, ಆಕ್ಷನ್ ಸೀನ್ ಜಾಸ್ತಿ ಇರುತ್ತದೆ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಕ್ಯಾಮೆರಾ ವರ್ಕ್ ಬಗ್ಗೆ ಮಾಹಿತಿ ನೀಡಿದರು.


ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಮಣಿ ಶರ್ಮಾ ಅವರ ಸಂಗೀತ ಸಂಯೋಜನೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಕಾಶ್ಮೀರದ ಮೈನಸ್ 7 ಡಿಗ್ರೀ ತಾಪಮಾನ ಇರುವ ಲೊಕೇಶನ್‌ಗಳಲ್ಲಿ ಆಕ್ಷನ್‌ ಸೀನ್ ಚಿತ್ರೀಕರಿಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದ ಹೈಲೈಟ್.

error: Content is protected !!