Categories
ಸಿನಿ ಸುದ್ದಿ

ಅನ್ ಲಾಕ್ ರಾಘವನಿಗೆ ಮಾತುಕತೆ: ಪಿ ಆರ್ ಕೆ ಸ್ಟುಡಿಯೋದಲ್ಲಿ ಡಬ್ಬಿಂಗ್ ಶುರು…

ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಚಲನಚಿತ್ರದ ಡಬ್ಬಿಂಗ್ ಪಿ.ಆರ್.ಕೆ. ಆಡಿಯೋ ಸ್ಟುಡಿಯೋದಲ್ಲಿ ಆರಂಭವಾಗಿದೆ. ಈ ಸಿನಿಮಾದ ನಾಯಕಿ ರೇಚಲ್ ಡೇವಿಡ್ ತಮ್ಮ ಪಾತ್ರಕ್ಕಾಗಿ ಕನ್ನಡ ಪದಗಳ ಉಚ್ಛಾರಣೆಯನ್ನು ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿರುವುದು ವಿಶೇಷ. ತನ್ನ ಈ ಪ್ರಯತ್ನಕ್ಕೆ ಅನ್ಲಾಕ್ ರಾಘವ ಚಲನಚಿತ್ರ ತಂಡ ತುಂಬಾ ಸಹಕಾರ ನೀಡುತ್ತಿದೆ ಎಂದು ನಾಯಕಿ ರೇಚಲ್ ಡೇವಿಡ್ ಹರ್ಷ ವ್ಯಕ್ತಪಡಿಸಿದ್ದಾರೆ.

ಅನ್ ಲಾಕ್ ರಾಘವ ಚಿತ್ರತಂಡ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ 60 ದಿನಗಳ ಕಾಲ ಸಿನಿಮಾ ಶೂಟಿಂಗ್ ನಡೆಸಿದೆ. ಅನ್ ಲಾಕ್ ರಾಘವದಲ್ಲಿ ಚಿತ್ರ ಸಿನಿಗೀತೆ ಪ್ರೇಮಿಗಳಿಗಾಗಿಯೇ ಕುಣಿಸಿ-ತಣಿಸುವ ಮೂರು ಹಾಡುಗಳ ರಸದೌತಣವಿದ್ದರೆ, ಆ್ಯಕ್ಷನ್ ಪ್ರಿಯರಿಗಾಗಿ ಬರೋಬ್ಬರಿ ನಾಲ್ಕು ವಿಭಿನ್ನ ಫೈಟ್ ಗಳ ಸಖತ್ ಮನರಂಜನೆಯಿದೆ ಎಂದು ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ. ಜೊತೆಗೆ “ನಿರ್ದೇಶಕ, ಫೈಟ್ ಮಾಸ್ಟರ್, ನೃತ್ಯ ನಿರ್ದೇಶಕರು ಮೂವರೂ ಒಂದು ವಿಶೇಷ ಗೀತೆಯನ್ನು ವಿಭಿನ್ನವಾಗಿ ಒಟ್ಟಾಗಿ ಸಂಯೋಜಿಸಿದ್ದು, ಅದ್ಭುತವಾಗಿ ಮೂಡಿಬಂದಿದೆ” ಎಂದೂ ಕೂಡ ಹೇಳಿದ್ದಾರೆ.

ಇತ್ತೀಚಿಗಷ್ಟೇ ಯುಗಾದಿ ಹಬ್ಬದ ವಿಶೇಷವಾಗಿ ‘ಅನ್ ಲಾಕ್ ರಾಘವ’ ಚಿತ್ರತಂಡ ಬಿಡುಗಡೆ ಮಾಡಿದ್ದ ಸಿನಿಮಾದ ಎರಡನೆಯ ಪೋಸ್ಟರ್ ಕೂಡ ವೈರಲ್ ಆಗಿದೆ. ‘ಅನ್ಲಾಕ್ ರಾಘವ’ ಸಿನಿಮಾವನ್ನು, ಇದೇ ವರ್ಷ ಜುಲೈ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದೆ.

ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ದೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Categories
ಸಿನಿ ಸುದ್ದಿ

ಎಲ್ರ ಕಾಲೆಳೆಯೋಕೆ ಬಂದ್ರು ರಾಗಿಣಿ! ಸಿನಿಮಾ ಪ್ರಮೋಷನ್ ಹಾಡಿಗೆ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ ತುಪ್ಪದ ಹುಡುಗಿ

ಉಷಾ ಗೋವಿಂದರಾಜು ನಿರ್ಮಾಣದ, ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಪ್ರಮೋಷನ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಅವರ ಜೊತೆ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರೆ ಈ ಹಾಡನ್ನು ಬರೆದಿದ್ದು, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಮಾತ್ರ ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಈ ಚಿತ್ರದ ಸಂಗೀತ ನಿರ್ದೇಶಕರು.

ನಾನು “ಕೆಂಪೇಗೌಡ” ಚಿತ್ರದಿಂದಲೂ ರಾಗಿಣಿ ಅವರ ಅಭಿಮಾನಿ. ಈಗ ಅವರ ಜೊತೆ ಹಾಡೊಂದರಲ್ಲಿ ನಟಿಸಿರುವುದು ಸಂತೋಷವಾಗಿದೆ. ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲಲ್ಲಿದೆ. ಇದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ.

ಈ ಹಾಡು ಚೆನ್ನಾಗಿದೆ. ಚಂದನ್ ಶೆಟ್ಟಿ ಪ್ರತಿಭಾವಂತ. ಅವರು ಸಂಗೀತ ನೀಡಿ, ಹಾಡುವ ಹಾಡುಗಳು ನನಗೆ ಇಷ್ಟ‌. ಬಹಳ ದಿನಗಳಿಂದ ಅವರ ಜೊತೆ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಈಗ ಈ ಚಿತ್ರದ ಪ್ರಮೋಷನ್ ಸಾಂಗ್ ನಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ ಎಂದು ತಿಳಿಸಿದ ನಟಿ ರಾಗಿಣಿ ದ್ವಿವೇದಿ, ಚಿತ್ರಕ್ಕೆ ಶುಭ ಕೋರಿದರು.

ಇದು 80/90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಗೋವಿಂದರಾಜು ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ಧನ್ಯವಾದ. ಸದ್ಯದಲ್ಲೇ ನಿಮ್ಮ ಮುಂದೆ ಬರುತ್ತೇವೆ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ತಿಳಿಸಿದರು.

ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈ ಹಾಡು ಹಾಗೂ ಚಿತ್ರ ನೋಡಿ ಸಂತೋಷವಾಗಿದೆ. ನಾವು ಅಂದಕೊಂಡದಿಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಿರ್ಮಾಪಕ ಗೋವಿಂದರಾಜು.

ನಾಯಕಿ ಅರ್ಚನಾ ಕೊಟ್ಟಿಗೆ ಚಿತ್ರದಲ್ಲಿ ನಟಿಸಿರುವ ರಜನಿಕಾಂತ್, ರಾಕೇಶ್ ಪೂಜಾರಿ, ಕಥೆ ಬರೆದಿರುವ ರಾಜ್ ಗುರು, ಛಾಯಾಗ್ರಹಕ ವಿಶ್ವಜಿತ್ ರಾವ್ ಚಿತ್ರದ ಕುರಿತು ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿದ್ದ ಚಿತ್ರರಂಗದ ಗಣ್ಯರು ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಯೋಗಿ ಸಿನಿಮಾಗೆ ಡಾಲಿ ಶುಭಾಶಯ: ರೋಜಿ ಚಿತ್ರದ ಶೀರ್ಷಿಕೆ ರಿಲೀಸ್ ಮಾಡಿದ ಧನಂಜಯ

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ.
ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

” ಹೆಡ್ ಬುಷ್” ಚಿತ್ರದ ನಂತರ ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ.

ಯೋಗಿ ನನ್ನ ಆತ್ಮೀಯ ಗೆಳೆಯ. “ರೋಜಿ” ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ “ಹೆಡ್ ಬುಷ್” ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.

ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.

ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ “ರೋಜಿ” ಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ “ರೋಜಿ”. ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ.

ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.

ನಿರ್ಮಾಪಕ ಡಿ.ವೈ.ರಾಜೇಶ್ ಆಗಮಿಸಿದ ಗಣ್ಯರಿಗೆ ಧನ್ಯವಾದ ಹೇಳಿದರು.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಡಿಂಪಲ್ ಬೆಡಗಿ: ದಿಲ್ ಮಾರ್ ಸಿನಿಮಾಗೆ ಹಯಾತಿ ನಾಯಕಿ

ಕೆಜಿಎಫ್ ರೈಟರ್ ಚಂದ್ರಮೌಳಿ ಡೈರೆಕ್ಟರ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದಿಲ್ ಮಾರ್ ಸಿನಿಮಾ ಮೂಲಕ ಚೊಚ್ಚಲ ಬಾರಿ ಅವರು ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರವಿತೇಜಾ ನಟನೆಯ ಕಿಲಾಡಿ ಚಿತ್ರದಲ್ಲಿ ನಟಿಸಿದ್ದ ಬೋಲ್ಡ್ ಬ್ಯೂಟಿ ಡಿಂಪಲ್ ಹಯಾತಿ ನಾಯಕಿಯಾಗಿ ನಟಿಸಿದ್ದಾರೆ. ಹೀರೋಯಿನ್ ಆಗಿ ಡಿಂಪಲ್ ಗೆ ಇದು ಮೊದಲ ಚಿತ್ರವಾಗಿದ್ದು, ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯುವ ಪ್ರತಿಭೆ ರಾಮ್ ನಾಯಕನಾಗಿ ಬಣ್ಣ ಹಚ್ಚಿದ್ದು, ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಲನ್ ಆಗಿ ಘರ್ಜಿಸಿದ್ದಾರೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರ್ತಿರುವ ದಿಲ್ ಮಾರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಹಾಡು ಬಿಡುಗಡೆಯಾಗಲಿದೆ. ಇದಾದಾ ಬಳಿಕ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಕ್ಕೆ ಸಂಗೀತ ನೀಡಿದ್ದು, ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಬಂಡವಾಳ ಹೂಡಿರುವ ದಿಲ್ ಮಾರ್ ಮೇ ಕೊನೆಯ ವಾರ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ಬಂತು ‘ಪುಷ್ಪ-2’ ಟ್ರೇಲರ್: ಪುಷ್ಪರಾಜನ ಅಬ್ಬರ ಹೀಗಿದೆ!

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಟ್ರೇಲರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಟೀಸರ್ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡ್ತಿದೆ. ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಗಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಎಷ್ಟು ದಿನವಾದ್ರೂ ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಟ್ಟಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವ ಪುಷ್ಪರಾಜನ ಖದರ್.. ಕಾಡಲ್ಲಿ ಪ್ರಾಣಿಗಳು ಎರಡೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತಾ ಅರ್ಥ..ಹುಲಿನೇ ಎರಡೆಜ್ಜೆ ಹಿಂದಿ ಇಟ್ರೆ ಪುಷ್ಪ ಬಂದಿದ್ದಾನೆಂಬ ಬೆಂಕಿ ಡೈಲಾಗ್ ಮೂಲಕ ಅಲ್ಲು ಅರ್ಜುನ್ ದರ್ಶನವಾಗುತ್ತದೆ.

ಟ್ರೇಲರ್ ರಿಲೀಸ್ ಗೂ ಮೊದಲು ರಿವೀಲ್ ಆಗಿದ್ದ ಪುಷ್ಪ ಪಾರ್ಟ್-2 ಗ್ಲಿಂಪ್ಸ್ ಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಕಥಾನಕನೇ ನಾಪತ್ತೆಯಾಗಿದ್ದಾನೆ. ಹಾಗಿದ್ರೆ ಪುಷ್ಪರಾಜ್ ಎಲ್ಲಿ ಹೋದ ಅನ್ನೋ ಕ್ಯೂರಿಯಾಸಿಟಿಗೆ ಟ್ರೇಲರ್ ನಲ್ಲಿ ಉತ್ತರ ಸಿಕ್ಕಿದೆ. ಈ ಬಾರಿ ಸುಕುಮಾರ್ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುವ ಸೂಚನೆ ಸಿಕ್ಕಿದೆ. ಮತ್ತೊಮ್ಮೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಜೋಡಿ ಬಾಕ್ಸಾಫೀಸ್ ಶೇಕ್ ಮಾಡೋದು ಪಕ್ಕ ಅಂತಿದೆ ಟಾಲಿವುಡ್.. ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.

ಕಳೆದ ವರ್ಷದ ವಿಶ್ವಾದ್ಯಂತ ತೆರೆಗೆ ಬಂದ ಪುಷ್ಪ ಸಿನಿಮಾ 400 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿ ಬೊಬ್ಬಿರಿದ್ದರು. ಅಲ್ಲು ಆಕ್ಟಿಂಗ್, ಸುಕುಮಾರ್ ಟೀಕಿಂಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಬೆಳ್ಳಿಪರದೆಯಲ್ಲಿ ಅಖಂಡ ಗೆಲುವು ಕಂಡ ಪುಷ್ಪ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಿದೆ. ಪುಷ್ಪ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತಕದ ನಡುವೆ ಪುಷ್ಪ-2 ಅಂಗಳದಿಂದ ಹೊರ ಬಂದ ಟ್ರೇಲರ್ ಧಮಾಕ ಎಬ್ಬಿಸಿದೆ.

Categories
ಸಿನಿ ಸುದ್ದಿ

ಉಸಿರೇ ಉಸಿರೇ ಅಂದ್ರು ಕಿಚ್ಚ! ರಾಜೀವ್ ಸಿನಿಮಾಗೆ ಸಾಥ್ ಕೊಟ್ಟ ಸುದೀಪ್

ಸುದೀಪ್ ಒಂದಷ್ಟು ಪ್ರೀತಿ ಪಾತ್ರರಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಸಿನಿಮಾ ಪ್ರಚಾರ ಇರಬಹುದು, ಅತಿಥಿ ಪಾತ್ರವೇ ಇರಬಹುದು. ಹೀಗೆ ಒಂದಲ್ಲ ಒಂದು ವಿಷಯಗಳಲ್ಲಿ ಸಾಥ್ ಕೊಡುತ್ತಿದ್ದಾರೆ. ಅದರಲ್ಲೂ ತಮ್ಮ ಜೊತೆ ವರ್ಷಗಳ ಕಾಲ ಇದ್ದವರ ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೆ ಹೇಗೆ? ಹೌದು, ಸುದೀಪ್ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಕುರಿತ ಒಂದು ಸುದ್ದಿ ಇದು…

ಎನ್. ಗೊಂಬೆ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ ಎಂ ವಿಜಯ್ ನಿರ್ದೇಶನದ “ಉಸಿರೇ ಉಸಿರೇ” ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.
ಸದ್ಯ ಈಗಾಗಲೇ “ಉಸಿರೇ ಉಸಿರೇ” ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣನಡೆಯುತ್ತಿದೆ.

ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

“ಬಿಗ್ ಬಾಸ್” ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ,ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಿಚ್ಚ ಸುದೀಪ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಬಿ ಕೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನ “ಉಸಿರೇ ಉಸಿರೇ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ತಮ್ಮನ ಸಿನಿಮಾಗೆ ಜಗ್ಗೇಶ್ ಸಾಥ್: ಉಂಡೆನಾಮ ಟ್ರೇಲರ್ ರಿಲೀಸ್; ಏಪ್ರಿಲ್ 14 ಚಿತ್ರ ಬಿಡುಗಡೆ

ಬಹಳ ವರ್ಷಗಳ ನಂತರ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಉಂಡೆನಾಮ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್ , ಬಹಳ ವರ್ಷಗಳ ನಂತರ ನಟಿಸಿರುವ ಚಿತ್ರವಿದು. “ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ ಇವನ ಹಾಗೆ ನಾನು ಕಾಮಿಡಿ ಕಲಿಯಬೇಕು” ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್ ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ.
ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಜಗ್ಗೇಶ್ ಹಾರೈಸಿದರು.

ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಏಪ್ರಿಲ್ 14 ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ನಾಯಕ ಕೋಮಲ್ ಕುಮಾರ್.

ಮೊದಲ ಲಾಕ್ ಡೌನ್ ನಲ್ಲಿ ಕಥೆ ಬರೆದೆ. ಆನಂತರ ನಿರ್ಮಾಪಕ ನಂದಕಿಶೋರ್ ಅವರ ಬಳಿ ಕಥೆ ಹೇಳಿದಾಗ, ಅವರು ಈ ಚಿತ್ರವನ್ನು ಕೋಮಲ್ ಅವರು ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ. ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ. ಸಹಕಾರ ನೀಡಿದ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನನ್ನ ಅಭಿನಂದನೆ ಎಂದರು ನಿರ್ದೇಶಕ ಕೆ.ಎಲ್ ರಾಜಶೇಖರ್.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಅವರಿಗೆ ಧನ್ಯವಾದ. ಇಡೀ ತಂಡದ ಶ್ರಮದಿಂದ “ಉಂಡೆನಾಮ” ಚಿತ್ರ ಚೆನ್ನಾಗಿ ಬಂದಿದೆ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕರಾದ ಟಿ.ಆರ್ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್.

ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ತಬಲನಾಣಿ, ಅಪೂರ್ವ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ರೈತ ನೀನೇ ಭಗವಂತ, ನೀನೇ ಶ್ರೀಮಂತ ! ಹೀಗೊಂದು ಶ್ರೀಮಂತಭರಿತ ಚಿತ್ರ!!

ಎಲ್ಲರೂ ಬರೀ ಬಾಯಿ ಮಾತಲ್ಲೇ ರೈತ ರೈತ ಅಂತ ಹೇಳೋದಷ್ಟೆ. ಆದರೆ, ರೈತನ ನಿಜವಾದ ನೋವು, ಸಂಕಷ್ಟಗಳಿಗೆ ಸ್ಪಂದಿಸುವ ಗುಣವಂತರ ಸಂಖ್ಯೆ ತೀರಾ ಕಡಿಮೆ. ಹಣ ಇದ್ದ ಮಾತ್ರಕ್ಕೆ ಅವರನ್ನು ಶ್ರೀಮಂತರು ಅಂತ ಕರೆಯಬೇಕಾ? ಹಣ ಇರೋರೆಲ್ಲರೂ ಶ್ರೀಮಂತರೆನಾ? ರೈತರೂ ಕೂಡ ಶ್ರೀಮಂತರೇ! ಹೀಗಂತ ಹೊಸ ತಂಡವೊಂದು ರೈತರನ್ನು ನಿಜವಾದ ಶ್ರೀಮಂತ ಎಂದು ಬಣ್ಣಿಸಿದೆ. ಆ ಕುರಿತಾಗಿಯೇ’ ಶ್ರೀಮಂತ ಸಿನಿಮಾ ಮಾಡಿದೆ. ಈಗಾಗಲೇ ತೆರೆಗೆ ಅಪ್ಪಳಿಸಲು ಸಜ್ಜಾದ ಶ್ರೀಮಂತ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ…

ಹೌದು, ನಿಜ ಅರ್ಥದಲ್ಲಿ ರೈತರೂ ಶ್ರೀಮಂತರು. ಈ ಹಿಂದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ‘ಬಂಗಾರದ ಮನುಷ್ಯ’ ಸಿನಿಮಾದಲ್ಲೇ ರೈತರ ಮಹತ್ವ ಸಾರುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಇಲ್ಲೇಕೆ ರೈತರ ವಿಷಯ ಅನ್ನೋ ಪ್ರಶ್ನೆ ಕಾಡಬಹುದು. ಅದಕ್ಕೆ ಕಾರಣ ‘ಶ್ರೀಮಂತ’.

ಹೌದು, ಶ್ರೀಮಂತ ಇದು ಅಪ್ಪಟ ದೇಸಿ ಸಿನಿಮಾ. ಅದರಲ್ಲೂ ರೈತರ ಬದುಕಿನ ಚಿತ್ರಣ ಇರುವ ಅರ್ಥಪೂರ್ಣ ಕಥಾಹಂದರದ ಚಿತ್ರ. ಈ ಚಿತ್ರದ ಕಥೆ ರೈತರ ಸುತ್ತವೇ ತಿರುಗಲಿದೆ. ಕಥೆಗೆ ಪೂರಕವಾಗಿ ಶ್ರೀಮಂತ ಶೀರ್ಷಿಕೆ ಇಡಲಾಗಿದೆ.

ರೈತನಾದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಈ ಸಿನಿಮಾದ ಆಕರ್ಷಣೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಸೋನುಸೂದ್, ಈಗ ಶ್ರೀಮಂತ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೈತರಾಗಿ ಅವರಿಲ್ಲಿ ಯಾರ ವಿರುದ್ಧ ಹೋರಾಡುತ್ತಾರೆ, ರೈತರ ಬವಣೆ, ಕಷ್ಟಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಅನ್ನೋದು ಹೈಲೈಟ್.

ಈ ಸಿನಿಮಾಗೆ ಹಾಸನ್ ರಮೇಶ್ ನಿರ್ದೇಶಕರು. ಈ ಚಿತ್ರದಲ್ಲಿ ರೈತನೇ ನಿಜವಾದ ಶ್ರೀಮಂತ ಎಂದು ಹೇಳಹೊರಟಿದ್ದಾರೆ.

ನಾವು ಎಷ್ಟೇ ಮುಂದುವರಿದರೂ ರೈತನ ಕೊಡುಗೆ ನಮಗೆ ಬಹಳ ಮುಖ್ಯ ಎಂಬ ಸಂದೇಶದ ಜೊತೆ ರೈತನ ಬದುಕು, ಬವಣೆಗಳೊಂದಿಗೆ ಸ್ನೇಹ, ಪ್ರೀತಿ, ಬಾಂಧವ್ಯದ ಕಥೆ ಹೇಳುವ ಚಿತ್ರವಿದು. ನಾರಾಯಣಪ್ಪ, ಸಂಜಯ್‌ಬಾಬು ಹಾಗೂ ಹಾಸನ್ ರಮೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ನಾದ ಬ್ರಹ್ಮ ಹಂಸಲೇಖ ಅವರಿಲ್ಲಿ ಎಂಟು ಅರ್ಥಪೂರ್ಣ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಎಸ್. ಪಿ. ಬಿ. ಅವರು ಹಾಡಿರುವ ಕೊನೆಯ ಹಾಡು ಈ ಚಿತ್ರದಲ್ಲಿದೆ ಎಂಬುದು ವಿಶೇಷ.

ಇನ್ನು, ಯುವ ನಟ ಕ್ರಾಂತಿ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ , ವೈಷ್ಣವಿ ಚಂದ್ರನ್ ಮೆನನ್ ಇದ್ದಾರೆ. ಅಲ್ಲದೆ ನಟ ಚರಣರಾಜ್ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ನಿರ್ದೇಶಕ ಹಾಸನ್ ರಮೇಶ್ ಹೇಳೋದು ಹೀಗೆ…
ಹಣ ಇರುವವರು ಮಾತ್ರವೇ ಶ್ರೀಮಂತರಲ್ಲ. ನಿಜವಾದ ಆರ್ಥದಲ್ಲಿ ಶ್ರೀಮಂತ ಎಂದರೆ ರೈತ. ರೈತ ಒಂದು ವ್ಯಕ್ತಿಯಲ್ಲ, ಶಕ್ತಿ. ಆತನದು ಸಂಭ್ರಮದ ಬದುಕು ಎಂದು ಶ್ರೀಮಂತ ಚಿತ್ರದ ಮೂಲಕ ಹೇಳಹೊರಟಿದ್ದೇವೆ.

ದೇಶದಲ್ಲಿ ಶೇ.80ರಷ್ಟು ರೈತರಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಚಿತ್ರದಲ್ಲಿ ಎಲ್ಲ ಮನರಂಜನಾತ್ಮಕ ಅಂಶಗಳಿವೆ. ನಾಯಕಿ ಹಳ್ಳಿಯಲ್ಲೂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. 8 ಹಾಡುಗಳ ಜೊತೆ ಒಗಟು, ಗಾದೆಗಳೂ ಚಿತ್ರದಲ್ಲಿವೆ ಎಂಬುದು ವಿಶೇಷ ಎನ್ನುತ್ತಾರೆ ಅವರು.

ನಟಿ ಕಲ್ಯಾಣಿ ಇಲ್ಲಿ ನಾಯಕನ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ ಇತರರು ಇದ್ದಾರೆ. ಕೆ.ಎಂ.ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಅವರು ಕ್ಯಾಮೆರಾ ಹಿಡಿದಿದ್ದಾರೆ. ಮಾಸ್ ಮಾದ ಸಾಹಸವಿದೆ. ಮದನ್ ಹರಿಣಿ, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಈಗಾಗಲೇ ಭರ್ಜರಿ ಪ್ರಚಾರದಲ್ಲಿರುವ ಸಿನಿಮಾ ಏಪ್ರಿಲ್ ನಲ್ಲಿ ರಿಲೀಸ್ ಗ್ರ್ಯಾಂಡ್ ಆಗಿ ಆಗುತ್ತಿದೆ.

Categories
ಸಿನಿ ಸುದ್ದಿ

ಸಚಿವರ ಮುಂದೆ ಮಾಜರ್! ಹೊಸಬರ ಮಾಜರ್ ಹಾಡು ರಿಲೀಸ್

ಗೀತರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ ನಿರ್ದೇಶನದ “ಮಾಜರ್” ಚಿತ್ರದ ಹಾಡುಗಳನ್ನು ಸಚಿವ ಕೆ‌.ಗೋಪಾಲಯ್ಯ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. A2 music ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ “ಮಾಜರ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ.

ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ನೀಡುವ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಬರೀ ಇಷ್ಟೇ ಅಲ್ಲ. ಲವ್ ಸ್ಟೋರಿ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ಹೇಳಿದರು.

ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಆಸೆಯಿತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಿದ್ದೇನೆ ಎಂದರು ನಿರ್ಮಾಪಕ ಮುರುಗನಂದನ್.

ಹಾಡುಗಳ ಬಗ್ಗೆ ಎ.ಟಿ.ರವೀಶ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್ ಹಾಗೂ ನೃತ್ಯ ನಿರ್ದೇಶಕರಾದ ಸೈ ಗೀತ, ವಾಸ್ತು ನಾಗ “ಮಾಜರ್” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಬರಗೂರು ರಾಮಚಂದ್ರಪ್ಪರ ಚಿಣ್ಣರ ಚಂದ್ರ: ಬರಗೂರು ಮೊಮ್ಮಗ ಆಕಾಂಕ್ಷ್ ಬರಗೂರು ಹೀರೋ!

ಬರಗೂರು ರಾಮಚಂದ್ರಪ್ಪನವರು ಮಕ್ಕಳ ಚಿತ್ರವೊಂದನ್ನು ಸದ್ದಿಲ್ಲದೆ ಸಿದ್ಧ ಮಾಡಿದ್ದಾರೆ. ತಮ್ಮ ರಚನೆಯ ‘ಅಡಗೂಲಜ್ಜಿ’ ಎಂಬ ಕಾದಂಬರಿ ಆಧರಿಸಿದ ಈ ಚಿತ್ರಕ್ಕೆ ‘ಚಿಣ್ಣರ ಚಂದ್ರ’ ಎಂದು ಹೆಸರಿಡಲಾಗಿದೆ. ಬರಗೂರರ ಮೊಮ್ಮಗ ಆಕಾಂಕ್ಷ್
ಬರಗೂರ್ ಈ ಹಿಂದೆ ಬಯಲಾಟದ ಭೀಮಣ್ಣ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಪುಟ್ಟ ಪಾತ್ರ ವಹಿಸಿದ್ದು ‘ಚಿಣ್ಣರ ಚಂದ್ರ’ದಲ್ಲಿ ನಾಯಕ.


ಆಕಾಂಕ್ಷ್ ಬರಗೂರ್ ಜೊತೆಗೆ ಈಶಾನ್ ಪಾಟೀಲ್, ನಿಕ್ಷೇಪ್, ಅಭಿನವ್ ನಾಗ್, ಶಡ್ಜಹೆಗ್ಡೆ ಇತರೆ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಂದರರಾಜ್,
ರೇಖಾ, ರಾಧಾ ರಾಮಚಂದ್ರ ಅವರಲ್ಲದೆ ರಾಘವ್, ಸುಂದರರಾಜ ಅರಸು, ಹಂಸ, ವೆಂಕಟರಾಜು, ಗೋವಿಂದರಾಜು, ವತ್ಸಲಾ ಮೋಹನ್, ರಾಜಪ್ಪ ದಳವಾಯಿಯವರು ಕಾಣಿಸಿಕೊಂಡಿದ್ದಾರೆ.


‘ಚಿಣ್ಣರ ಚಂದ್ರ’ ಚಿತ್ರ ಪ್ರಮುಖವಾಗಿ ಮಕ್ಕಳಿಗೆ ಅಗತ್ಯವಾದ ಉತ್ತಮ ಶಿಕ್ಷಣ, ಕ್ರೀಡೆ ಮುಂತಾದ ಆಶಯಗಳ ಜೊತೆಗೆ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುತ್ತದೆ. ಈ ಸಿನಿಮಾದಲ್ಲಿ ಅಡಗೂಲಜ್ಜಿಯ ಪಾತ್ರದ ಮೂಲಕ
ಮಕ್ಕಳಿಗೆ ಜನಪದ ಕತೆಗಳ ಪರಿಚಯವಾಗುತ್ತದೆ.

ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಧಕ್ಕೆ ಬರುತ್ತದೆಯೆಂದುಕೊಂಡಾಗ
ಅಡಗೂಲಜ್ಜಿಯು ಸಿನಿಮಾ ಕತೆಗಳನ್ನೇ ಜನಪದ ಕತೆಗಳನ್ನಾಗಿಸಿ ಮಕ್ಕಳು ಮತ್ತು ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಕಥನದ ಮಹತ್ವದ ಜೊತೆಗೆ
ಜಾನಪದವು ಆಧುನಿಕ ರೂಪ ಪಡೆಯುವ ಹೊಸ ವಿಧಾನವನ್ನು ನಿರೂಪಿಸಲಾಗಿದೆ. ಜಾನಪದಕ್ಕೆ ಅಂತ್ಯವಿಲ್ಲವೆಂದು ಧ್ವನಿಸಲಾಗಿದೆ. ಸಿನಿಮಾ ಕೂಡ
ಒಂದು ಜಾನಪದವಾಗುವುದನ್ನು ಸಾಂಕೇತಿಕವಾಗಿ ಹೇಳಲಾಗಿದೆ.

ಮಕ್ಕಳು ಈಈ ಹಿನ್ನೆಲೆಯಲ್ಲಿ ಉತ್ತಮ ಅಭಿರುಚಿಯ ಸಿನಿಮಾಗಳಿಗಾಗಿ ಒತ್ತಾಯಿಸಿ ನೈತಿಕ
ಮೌಲ್ಯವನ್ನು ಮೆರೆಯುತ್ತಾರೆ. ಹೀಗೆ ಶಿಕ್ಷಣ, ಸಿನಿಮಾ, ಜನಪದ
ಕಥನಗಳೊಂದಾದ ವಿಶಿಷ್ಟತೆಯನ್ನು ಈ ಸಿನಿಮಾದಲ್ಲಿ ಕಾಣಬಹುದು.
‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಗೋವಿಂದರಾಜ್ ಅಲಿಯಾಸ್ ಜಿಗಣಿ ರಾಜಶೇಖರ್
ಅವರು ನಿರ್ಮಾಣ ಮಾಡಿದ್ದು, ಬರಗೂರರು ಚಿತ್ರಕತೆ, ಸಂಭಾಷಣೆ, ಗೀತರಚನೆ
ಮಾಡಿ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ
ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

error: Content is protected !!