ರೈತ ನೀನೇ ಭಗವಂತ, ನೀನೇ ಶ್ರೀಮಂತ ! ಹೀಗೊಂದು ಶ್ರೀಮಂತಭರಿತ ಚಿತ್ರ!!

ಎಲ್ಲರೂ ಬರೀ ಬಾಯಿ ಮಾತಲ್ಲೇ ರೈತ ರೈತ ಅಂತ ಹೇಳೋದಷ್ಟೆ. ಆದರೆ, ರೈತನ ನಿಜವಾದ ನೋವು, ಸಂಕಷ್ಟಗಳಿಗೆ ಸ್ಪಂದಿಸುವ ಗುಣವಂತರ ಸಂಖ್ಯೆ ತೀರಾ ಕಡಿಮೆ. ಹಣ ಇದ್ದ ಮಾತ್ರಕ್ಕೆ ಅವರನ್ನು ಶ್ರೀಮಂತರು ಅಂತ ಕರೆಯಬೇಕಾ? ಹಣ ಇರೋರೆಲ್ಲರೂ ಶ್ರೀಮಂತರೆನಾ? ರೈತರೂ ಕೂಡ ಶ್ರೀಮಂತರೇ! ಹೀಗಂತ ಹೊಸ ತಂಡವೊಂದು ರೈತರನ್ನು ನಿಜವಾದ ಶ್ರೀಮಂತ ಎಂದು ಬಣ್ಣಿಸಿದೆ. ಆ ಕುರಿತಾಗಿಯೇ’ ಶ್ರೀಮಂತ ಸಿನಿಮಾ ಮಾಡಿದೆ. ಈಗಾಗಲೇ ತೆರೆಗೆ ಅಪ್ಪಳಿಸಲು ಸಜ್ಜಾದ ಶ್ರೀಮಂತ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ…

ಹೌದು, ನಿಜ ಅರ್ಥದಲ್ಲಿ ರೈತರೂ ಶ್ರೀಮಂತರು. ಈ ಹಿಂದೆ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ‘ಬಂಗಾರದ ಮನುಷ್ಯ’ ಸಿನಿಮಾದಲ್ಲೇ ರೈತರ ಮಹತ್ವ ಸಾರುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಇಲ್ಲೇಕೆ ರೈತರ ವಿಷಯ ಅನ್ನೋ ಪ್ರಶ್ನೆ ಕಾಡಬಹುದು. ಅದಕ್ಕೆ ಕಾರಣ ‘ಶ್ರೀಮಂತ’.

ಹೌದು, ಶ್ರೀಮಂತ ಇದು ಅಪ್ಪಟ ದೇಸಿ ಸಿನಿಮಾ. ಅದರಲ್ಲೂ ರೈತರ ಬದುಕಿನ ಚಿತ್ರಣ ಇರುವ ಅರ್ಥಪೂರ್ಣ ಕಥಾಹಂದರದ ಚಿತ್ರ. ಈ ಚಿತ್ರದ ಕಥೆ ರೈತರ ಸುತ್ತವೇ ತಿರುಗಲಿದೆ. ಕಥೆಗೆ ಪೂರಕವಾಗಿ ಶ್ರೀಮಂತ ಶೀರ್ಷಿಕೆ ಇಡಲಾಗಿದೆ.

ರೈತನಾದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಈ ಸಿನಿಮಾದ ಆಕರ್ಷಣೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಸೋನುಸೂದ್, ಈಗ ಶ್ರೀಮಂತ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೈತರಾಗಿ ಅವರಿಲ್ಲಿ ಯಾರ ವಿರುದ್ಧ ಹೋರಾಡುತ್ತಾರೆ, ರೈತರ ಬವಣೆ, ಕಷ್ಟಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಅನ್ನೋದು ಹೈಲೈಟ್.

ಈ ಸಿನಿಮಾಗೆ ಹಾಸನ್ ರಮೇಶ್ ನಿರ್ದೇಶಕರು. ಈ ಚಿತ್ರದಲ್ಲಿ ರೈತನೇ ನಿಜವಾದ ಶ್ರೀಮಂತ ಎಂದು ಹೇಳಹೊರಟಿದ್ದಾರೆ.

ನಾವು ಎಷ್ಟೇ ಮುಂದುವರಿದರೂ ರೈತನ ಕೊಡುಗೆ ನಮಗೆ ಬಹಳ ಮುಖ್ಯ ಎಂಬ ಸಂದೇಶದ ಜೊತೆ ರೈತನ ಬದುಕು, ಬವಣೆಗಳೊಂದಿಗೆ ಸ್ನೇಹ, ಪ್ರೀತಿ, ಬಾಂಧವ್ಯದ ಕಥೆ ಹೇಳುವ ಚಿತ್ರವಿದು. ನಾರಾಯಣಪ್ಪ, ಸಂಜಯ್‌ಬಾಬು ಹಾಗೂ ಹಾಸನ್ ರಮೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ನಾದ ಬ್ರಹ್ಮ ಹಂಸಲೇಖ ಅವರಿಲ್ಲಿ ಎಂಟು ಅರ್ಥಪೂರ್ಣ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಎಸ್. ಪಿ. ಬಿ. ಅವರು ಹಾಡಿರುವ ಕೊನೆಯ ಹಾಡು ಈ ಚಿತ್ರದಲ್ಲಿದೆ ಎಂಬುದು ವಿಶೇಷ.

ಇನ್ನು, ಯುವ ನಟ ಕ್ರಾಂತಿ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ , ವೈಷ್ಣವಿ ಚಂದ್ರನ್ ಮೆನನ್ ಇದ್ದಾರೆ. ಅಲ್ಲದೆ ನಟ ಚರಣರಾಜ್ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ನಿರ್ದೇಶಕ ಹಾಸನ್ ರಮೇಶ್ ಹೇಳೋದು ಹೀಗೆ…
ಹಣ ಇರುವವರು ಮಾತ್ರವೇ ಶ್ರೀಮಂತರಲ್ಲ. ನಿಜವಾದ ಆರ್ಥದಲ್ಲಿ ಶ್ರೀಮಂತ ಎಂದರೆ ರೈತ. ರೈತ ಒಂದು ವ್ಯಕ್ತಿಯಲ್ಲ, ಶಕ್ತಿ. ಆತನದು ಸಂಭ್ರಮದ ಬದುಕು ಎಂದು ಶ್ರೀಮಂತ ಚಿತ್ರದ ಮೂಲಕ ಹೇಳಹೊರಟಿದ್ದೇವೆ.

ದೇಶದಲ್ಲಿ ಶೇ.80ರಷ್ಟು ರೈತರಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಚಿತ್ರದಲ್ಲಿ ಎಲ್ಲ ಮನರಂಜನಾತ್ಮಕ ಅಂಶಗಳಿವೆ. ನಾಯಕಿ ಹಳ್ಳಿಯಲ್ಲೂ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. 8 ಹಾಡುಗಳ ಜೊತೆ ಒಗಟು, ಗಾದೆಗಳೂ ಚಿತ್ರದಲ್ಲಿವೆ ಎಂಬುದು ವಿಶೇಷ ಎನ್ನುತ್ತಾರೆ ಅವರು.

ನಟಿ ಕಲ್ಯಾಣಿ ಇಲ್ಲಿ ನಾಯಕನ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ ಇತರರು ಇದ್ದಾರೆ. ಕೆ.ಎಂ.ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಅವರು ಕ್ಯಾಮೆರಾ ಹಿಡಿದಿದ್ದಾರೆ. ಮಾಸ್ ಮಾದ ಸಾಹಸವಿದೆ. ಮದನ್ ಹರಿಣಿ, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಈಗಾಗಲೇ ಭರ್ಜರಿ ಪ್ರಚಾರದಲ್ಲಿರುವ ಸಿನಿಮಾ ಏಪ್ರಿಲ್ ನಲ್ಲಿ ರಿಲೀಸ್ ಗ್ರ್ಯಾಂಡ್ ಆಗಿ ಆಗುತ್ತಿದೆ.

Related Posts

error: Content is protected !!