Categories
ಸಿನಿ ಸುದ್ದಿ

ಪ್ರಪಂಚದಲ್ಲಿ ಝೀರೋ ಪರ್ಸೆಂಟ್ ಲವ್! ರೊಮ್ಯಾಂಟಿಕ್ ಥ್ರಿಲ್ಲರ್ ರಿಲೀಸ್ ಗೆ ರೆಡಿ

ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಪ್ರೆಸೆಂಟ್ ಪ್ರಪಂಚ 0% ಲವ್” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ನಿರ್ದೇಶಕನಿಗೆ ತನ್ನ ಚಿತ್ರವೇ ಸರ್ವಸ್ವ. ನಮ್ಮ ಚಿತ್ರದ ನಿರ್ದೇಶಕ ಅಭಿರಾಮ್ ಎ ಅವರಿಗೂ ಈ ಚಿತ್ರದ ಬಗ್ಗೆ ಅಪಾರ ಪ್ರೀತಿ. ಆದರೆ ವಿಧಿ, ಚಿತ್ರ ಬಿಡುಗಡೆಗೆ ಮುನ್ನವೇ ನಿರ್ದೇಶಕ ಅಭಿರಾಮ್ ಹಾಗೂ ನಾಯಕ ಅರ್ಜುನ್ ಮಂಜುನಾಥ್ ಇಬ್ಬರನ್ನು ಬಲಿ ತೆಗೆದುಕೊಂಡಿದೆ.
ಅವರಿಬ್ಬರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ್ದು ನಡೆದು ಹೋಯಿತು.

ಆನಂತರ ದ್ವಿತೀಯ ನಾಯಕ ಯಶಸ್ ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ನಿರ್ಮಾಪಕ ಕೃಷ್ಣಮೂರ್ತಿ ಕೆ.ಎಲ್.
ಈ ಚಿತ್ರವನ್ನು ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಇಬ್ಬರು ಸೇರಿ ನಿರ್ಮಿಸಿದ್ದಾರೆ. ನಾಗರಾಜ್ ಹೊಸಳ್ಳಿ ಹಾಗೂ ದೇವರಾಜ್ ಅವರ ಸಹ ನಿರ್ಮಾಣವೂ ಇದೆ.

“ಪ್ರೆಸೆಂಟ್ ಪ್ರಪಂಚ”ದಲ್ಲಿ ಎಲ್ಲದಕ್ಕಿಂತ ಪ್ರೀತಿನೇ ಮುಖ್ಯ ಎಂಬುದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ೦% ಪ್ರೀತಿ ಎಂದು ಕೊಂಡು ಬಂದರೆ, ಹೋಗುವಾಗ 100% ಪ್ರೀತಿ ಹೊತ್ತಿಕೊಂಡು ಹೋಗುವುದು ಖಚಿತ. ನಾಯಕ ಹಾಗೂ ನಿರ್ದೇಶಕರ ನಿಧನದಿಂದ ನಮ್ಮ ತಂಡಕ್ಕೆ ತುಂಬಾ ಆಘಾತವಾಗಿತ್ತು. ಆದರೆ ಈ ಚಿತ್ರ ಅವರಿಬ್ಬರ ಕನಸಿನ ಕೂಸು. ಚಿತ್ರವನ್ನು ಪೂರ್ತಿ ಮಾಡಿ, ತೆರೆಗೆ ತರೋಣ ಎಂದು ನಾನು, ನಿರ್ಮಾಪಕರಿಗೆ ಹೇಳಿದೆ. ನನ್ನ ಹಾಗೂ ನಮ್ಮ ತಂಡದ ಕೋರಿಕೆಗೆ ಸ್ಪಂದಿಸಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ದ್ವಿತೀಯ ನಾಯಕ ಯಶಸ್ ಅಭಿ.

ಮದುವೆಯಾದ ಮೇಲೆ ಗಂಡ – ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ವಿಚ್ಛೇದನದ ತನಕ ಹೋಗಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಾಯಕಿ ಸಂಭ್ರಮ ಶ್ರೀ.

ನಟರಾದ ಗೋವಿಂದೇ ಗೌಡ, ಕುರಿ ಸುನೀಲ್ ಹಾಗೂ ಸಂಗೀತ ನಿರ್ದೇಶಕ ರವಿತೇಜಸ್ ಚಿತ್ರದ ಕುರಿತು ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಸಾಹಿತಿ ಹಾಗೂ ನಿರ್ದೇಶಕ ರಾಮ್ ನಾರಾಯಣ್ ಮುಂತಾದ ಗಣ್ಯರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

Categories
ಸಿನಿ ಸುದ್ದಿ

ಕ್ರೀಂ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ: ಕ್ರೀಂ ಅಂದರೆ ಕಾಳಿ ಮಾತೆ ಆರಾಧಿಸುವ ಬೀಜಾಕ್ಷರಿ ಮಂತ್ರ!

ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾಪ್ರಧಾನ ಚಿತ್ರ “ಕ್ರೀಂ”. ಸಂಯುಕ್ತ ಹೆಗಡೆ ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣಸಾಗರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್‌ ಅವರು ಸೇರಿದಂತೆ ಸಾಕಷ್ಟು ಜನ ಸಹಕಾರ ನೀಡಿದ್ದಾರೆ. ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ.

ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

“ಕ್ರೀಂ” ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ.
ದೇಶದಲ್ಲಿ ಪ್ರತಿ ತಿಂಗಳು ೪೦೦ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ, ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್.

ಈ ಸಿನಿಮಾಗಾಗಿ ನಾನು 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ.
ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ.

ಚಿತ್ರ ಚೆನ್ನಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕ ದೇವೇಂದ್ರ ಧನ್ಯವಾದ ತಿಳಿಸಿದರು.

ನಟ ರೋಷನ್ ಸಹ “ಕ್ರೀಂ” ಚಿತ್ರದ ಕುರಿತಂತೆ ಮಾತನಾಡಿದರು.

Categories
ಸಿನಿ ಸುದ್ದಿ

ನನಗೆ ಸನ್ಮಾನ ಹೊಗಳಿಕೆ ಮುಜುಗರ: ಸುಧಾಮೂರ್ತಿ ; ಪದ್ಮಭೂಷಣ ಪ್ರಶಸ್ತಿ ವಿಜೇತೆಗೆ ಆತ್ಮೀಯ ಸನ್ಮಾನ

ಸರಳತೆ, ಸಹಾಯ, ಸಮಾಜಸೇವೆಗೆ ಇನ್ನೊಂದು ಹೆಸರು ಸುಧಾಮೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ಫೋಸಿಸ್ ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿಯವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು.


ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿಯವರ ನೇತೃತ್ವದಲ್ಲಿ, `ಸುಧಾಮೂರ್ತಿಯವರ ಆತ್ಮೀಯ ಗೆಳೆಯರ ಬಳಗ’ ಸನ್ಮಾನಿಸಿದೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ‘ನನಗೆ ಸನ್ಮಾನ ಹೊಗಳಿಕೆ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿಯವರು ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ, ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ.

ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ಆದನೆಂದರೆ, ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ.

ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ, ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು.

ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿಯವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

Categories
ಸಿನಿ ಸುದ್ದಿ

ಇದು ರವಿಚಂದ್ರನ್ ಜಡ್ಜ್ ಮೆಂಟ್! ಹೊಸ ಸಿನಿಮಾ ಶುರು…

ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಆಕ್ಸಿಡೆಂಟ್”, ” ಲಾಸ್ಟ್‌ ಬಸ್” , “ಅಮೃತ ಅಪಾರ್ಟ್‌ಮೆಂಟ್ಸ್” ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ “ದ ಜಡ್ಜ್ ಮೆಂಟ್” ಚಿತ್ರ ನಿರ್ಮಾಣವಾಗುತ್ತಿದೆ.

ಇದೊಂದು ಲೀಗಲ್ ಸಿಸ್ಟಮ್ ಕುರಿತಾದ ಚಿತ್ರ. ಇದೇ ಏಪ್ರಿಲ್ 24ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ (ನಾಡಗೌಡ) ಮಾಹಿತಿ ನೀಡಿದರು.

ನಿರ್ದೇಶಕರು “ಆಕ್ಸಿಡೆಂಟ್” ಮಾಡಿ “ಲಾಸ್ಟ್ ಬಸ್” ಹತ್ತಿ “ಅಮೃತ ಅಪಾರ್ಟ್‌ಮೆಂಟ್ಸ್” ಗೆ ಹೋಗಿ ಈಗ “ಜಡ್ಜ್ ಮೆಂಟ್” ನೀಡಲು ಬಂದಿದ್ದಾರೆ. ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ನಾವೆಲ್ಲ ಸದ್ಯದಲ್ಲೇ ಮತ್ತೊಂದು “ಜಡ್ಜ್ ಮೆಂಟ್” ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ “ದ ಜಡ್ಜ್ ಮೆಂಟ್” ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಾಗಾಭರಣ ಹಾರೈಸಿದರು.

ದಿಗಂತ್, ಧನ್ಯ, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ ಮುಂತಾದವರು “ದ ಜಡ್ಜ್ ಮೆಂಟ್” ಕುರಿತು ಮಾತನಾಡಿದರು.

ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ‌.

Categories
ಸಿನಿ ಸುದ್ದಿ

ಮಾತಿಗೆ ನಿಂತ ಸೂತ್ರಧಾರಿ

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ‌. ಚಂದನ್ ಶೆಟ್ಟಿ ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡ್ಯಾಶ್ ಸಾಂಗ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಭಾರತದಲ್ಲಿ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಇವೆಂಟ್ ಗಳನ್ನು ನಡೆಸುತ್ತಿರುವ ನವರಸನ್, ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಸೂತ್ರಧಾರಿ” ಇವರ ನಿರ್ಮಾಣದ ಐದನೇ ಚಿತ್ರ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.

ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ‌. ಸಂಜನಾ ಆನಂದ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Categories
ಸಿನಿ ಸುದ್ದಿ

ಇದು ಜಗ್ಗೇಶ್ ಸ್ಟೋರ್ಸ್ ಕಣ್ರೀ: ಟ್ರೇಲರ್ ಗೆ ಭರಪೂರ ಮೆಚ್ಚುಗೆ

“ಕೆ.ಜಿ.ಎಫ್”, ” ಕಾಂತಾರ”ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರ ನಿರ್ಮಾಣದ, “ರಾಜಕುಮಾರ” ದಂತಹ ಯಶಸ್ವಿ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸಿರುವ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಬಿಡುಗಡೆಯಾದ ತಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಏಪ್ರಿಲ್ 28 ರಂದು ತೆರೆಗೆ ಬರಲಿದೆ.

ಸದಭಿರುಚಿಯ ಚಿತ್ರಗಳ ನಿರ್ದೇಶಕರೆಂದೆ ಖ್ಯಾತರಾಗಿರುವ ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕಥೆ, ಚಿತ್ರಕಥೆಯನ್ನು ಅವರೆ ಬರೆದಿದ್ದಾರೆ. ಕೌಟುಂಬಿಕ ಹಾಗೂ ಕಾಮಿಡಿ ಜಾನರ್ ನ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಮೂಲಕ “ರಾಘವೇಂದ್ರ ಸ್ಟೋರ್ಸ್” ಸದ್ದು ಮಾಡಿದೆ.

ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ , ದೀಪು ಎಸ್ ಕುಮಾರ್ ಸಂಕಲನ ಹಾಗೂ ವುಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಯೋಗಿ ಜಿ ರಾಜ್ ವಸ್ತ್ರ ವಿನ್ಯಾಸ ಕೂಡ ಮಾಡಿದ್ದಾರೆ.

ನಾಯಕ ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ ಮುಂತಾದವರು “ರಾಘವೇಂದ್ರ ಸ್ಟೋರ್ಸ್” ನಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಹೀಗೊಂದು ರವಿಕೆ ಪ್ರಸಂಗ! ಟೀಸರ್ ರಿಲೀಸ್ ಆಯ್ತು

ಹೆಣ್ಣು ಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ.
ಅಂತಹ ರವಿಕೆಯ ಕುರಿತಾದ ” ರವಿಕೆ ಪ್ರಸಂಗ” ಎಂಬ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.


ನಮ್ಮ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ನನ್ನ ಪತ್ನಿ ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. “ಬ್ರಹ್ಮ ಗಂಟು” ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುನನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ “ರವಿಕೆ ಪ್ರಸಂಗ” ಚಿತ್ರದ ಮೊದಲ ಪ್ರತಿ ಸದ್ಯದಲ್ಲೇ ಬರಲಿದೆ. ವಿಭಿನ್ನ ಕಥೆಯ ಈ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದು ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಕೊಡೆಂಕೆರಿ ಮಾಹಿತಿ ನೀಡಿದರು.

ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜೊತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ” .

ಸಂಭಾಷಣೆ ಮಂಗಳೂರು ಕನ್ನಡದಲ್ಲಿರುತ್ತದೆ. ಎಲ್ಲರ ಮನಸ್ಸಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಚಿತ್ರ ಪ್ರಿಯವಾಗಲಿದೆ ಎಂದರು ನಾಯಕಿ ಗೀತಾಭಾರತಿ ಭಟ್.

ನಾನು ಇಪ್ಪತ್ತೈದು ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ನನ್ನ ಮನಸ್ಸಿಗೆ ಹತ್ತಿತವಾದ ಚಿತ್ರಗಳು ಕೆಲವು ಮಾತ್ರ ಅದರಲ್ಲಿ ಈ ಚಿತ್ರ ಕೂಡ ಒಂದು ಎಂದರು ನಟಿ ಪದ್ಮಜಾರಾವ್.

ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್, ಛಾಯಾಗ್ರಹಕ ಮುರಳಿಧರ್ ಎನ್, ಸಂಗೀತ ನಿರ್ದೇಶಕ ವಿನಯ್ ಶರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಸ್ಕ್ಯಾಮ್ ಹಿಂದೆ ದತ್ತಣ್ಣ! ಬಂತು ಟೀಸರ್

ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕುರಿತಾದ “SCAM (1770)” ಚಿತ್ರದ ಟೀಸರ್ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಹಿರಿಯ ನಟ ದತ್ತಣ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ‌ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗ 92 ಅಂಕ ಪಡೆದರೆ ಅವರೆ ಮೊದಲು. ಈಗ 99 ಬಂದರೂ ಸಾಕಾಗುವುದಿಲ್ಲ ಎನ್ನುತ್ತಾರೆ. ಶಿಕ್ಷಣದ ವ್ಯವಸ್ಥೆಯಲ್ಲಿ ನಡೆಯುತ್ತಿರುವ “scam” ಬಗ್ಗೆ ಈ ಚಿತ್ರ ಬರುತ್ತಿದೆ‌ . ಚಿತ್ರ ಯಶಸ್ವಿಯಾಗಲಿ ಎಂದು ದತ್ತಣ್ಣ ಹಾರೈಸಿದರು.

ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಿದು. ನಾನು ಕೂಡ ಶಿಕ್ಷಣ ವ್ಯವಸ್ಥೆ ಕುರಿತಾದ ಎಷ್ಟೋ ಕೇಸ್ ಗಳನ್ನು ತೆಗೆದುಕೊಂಡಿದ್ದೇನೆ. ನಾವಿಬ್ಬರು ಸೇರಿ ಬರೆದ ಕಥೆ ನಿರ್ಮಾಪಕರಿಗೆ ಇಷ್ಟವಾಯಿತು ಎಂದು ಇಂದು ನಟೇಶ್(ವೈದ್ಯೆ) ಹಾಗೂ ನೇತ್ರಾವತಿ (ಅಡ್ವೊಕೇಟ್)ತಿಳಿಸಿದರು.

ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ SCAM (1770). ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಿದು. ಟೀಸರ್ ಬಿಡುಗಡೆ ಮಾಡಿಕೊಟ್ಟ ದತ್ತಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ವಿಕಾಸ್ ಪುಷ್ಪಗಿರಿ.

ಡಿ.ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡಿರುವ ದೇವರಾಜ್ ಅವರು ಚಿತ್ರದ ಮಾತನಾಡಿದರು.

ನಾಯಕ ರಂಜನ್(“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಚಿತ್ರದ ಖ್ಯಾತಿ), ನಿಶ್ಚಿತ, ಹರಿಣಿ, ನಾರಾಯಣಸ್ವಾಮಿ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ನಿರ್ದೇಶಕರ ಜೊತೆಗೂಡಿ ಚಿತ್ರಕಥೆ ಬರೆಯುತ್ತಿರುವ ಶಂಕರ್ ರಾಮನ್ ಮುಂತಾದ ಚಿತ್ರತಂಡದ ಸದಸ್ಯರು “SCAM (1770)” ಚಿತ್ರದ ಕುರಿತು ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಬಿಸಿಲು ಕುದುರೆ ಏರಿ ಬರುವ ಹೃದಯ ಶಿವ! ಏಪ್ರಿಲ್ 21ಕ್ಕೆ ರಿಲೀಸ್

” ಮಂಡ್ಯ”, “ಮುಂಗಾರು ಮಳೆ”,
“ಗಾಳಿಪಟ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡು‌ ಬರೆದಿರುವ ಸಾಹಿತಿ ಹೃದಯಶಿವ ನಿರ್ದೇಶನದ “ಬಿಸಿಲು ಕುದುರೆ” ಚಿತ್ರ ಇದೇ ಏಪ್ರಿಲ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕನ್ನಡ ಚಿತ್ರರಂಗದೊಂದಿಗೆ ನನಗೆ ಎರಡು ದಶಕಗಳ ನಂಟು. ಕನ್ನಡದ ಹಲವು ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಹೋದಾಗ ಕಾಡಂಚಿನ ರೈತನ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ. ಇಮ್ತಿಯಾಜ್ ಸುಲ್ತಾನ್ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ಸ್ ಗಳು ಸುಮಧುರವಾಗಿ ಮೂಡಿಬಂದಿವೆ. ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಹಾಡಿದ್ದಾರೆ.


ಸಂಪತ್ ಮೈತ್ರೇಯ, ಸುನೀತಾ, ಕರಿಸುಬ್ಬು, ಮಳವಳ್ಳಿ ಸಾಯಿಕೃಷ್ಣ, ವಿಕ್ಟರಿ ವಾಸು, ಜೊಸೈಮನ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಇದೇ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಹೃದಯಶಿವ ತಿಳಿಸಿದರು.

ತುಂಬಾ ಒಳ್ಳೆಯ ಪಾತ್ರ ನಿರ್ವಹಿಸಿರುವ ತೃಪ್ತಿ ಇದೆ ಎಂದರು ನಟ ಸಂಪತ್ ಮೈತ್ರೇಯ.

ಚಿತ್ರದಲ್ಲಿ ನಟಿಸಿರುವ ಸುನೀತಾ, ಕರಿಸುಬ್ಬು, ಜೊಸೈಮನ್, ವಿಕ್ಟರಿ ವಾಸು, ವೆಂಕಟೇಶ್, ಭಾಸ್ಕರ್ ಸೂರ್ಯ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಹಕ ನಾಗಾರ್ಜುನ್. ಡಿ ಹಾಗೂ ಸಂಕಲನಕಾರ ಬಿ.ಎಸ್ ಕೆಂಪರಾಜು “ಬಿಸಿಲು ಕುದುರೆ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಸೈಂಧವ್ ಸಿನಿಮಾಗೆ ಕನ್ನಡ ಬೆಡಗಿ ನಾಯಕಿ : ದಗ್ಗುಭಾಟಿ ನಟನೆಯ ‘ಸೈಂಧವ್’ಗೆ ಶ್ರದ್ದಾ ಶ್ರೀನಾಥ್ ನಾಯಕಿ

ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ದಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ವಿಕ್ಟರಿ ವೆಂಕಟೇಶ್ ಗೆ ಶ್ರದ್ದಾ ನಾಯಕಿ
ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್ ನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಗೆ ಕನ್ನಡತಿ ಶ್ರದ್ದಾ ಶ್ರೀನಾಥ್ ಎಂಟ್ರಿ ಕೊಟ್ಟಿದ್ದಾರೆ. ವಿಕ್ಟರಿಗೆ ವೆಂಕಟೇಶ್ ಗೆ ಜೋಡಿಯಾಗಿ ನಟಿಸ್ತಿರುವ ಮೂಗುತಿ ಸುಂದರಿಯ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಸೈಂಧವ್ ಸಿನಿಮಾದಲ್ಲಿ ಶ್ರದ್ದಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅವರ ಫಸ್ಟ್ ಲುಕ್ ನೋಡುಗರ ಗಮನಸೆಳೆಯುತ್ತಿದೆ. ಸೀರೆಯುಟ್ಟು ಹೋಮ್ಲಿ ಲುಕ್ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನದ ಪ್ರದರ್ಶಿಸಿದ್ದ ಶ್ರದ್ದಾ ಶ್ರೀನಾಥ್, ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಗಮನಸೆಳೆಯಲಿದ್ದಾರೆ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇತರ ಪಾತ್ರವರ್ಗ ರಿವೀಲ್ ಮಾಡಲಿರುವ ಚಿತ್ರತಂಡ, ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

error: Content is protected !!