Categories
ಟಾಲಿವುಡ್ ಸಿನಿ ಸುದ್ದಿ

ಎರಡನೇ ಮದ್ವೆಗೆ ಸಜ್ಜಾದ ದಿಯಾ!

ಬಾಲಿವುಡ್‌ ನಟಿ ದಿಯಾ ಮಿರ್ಝಾ ಎರಡು ವರ್ಷದ ಹಿಂದೆ ಸಾಹಿಲ್‌ ಸಾಂಘ ಅವರಿಂದ ವಿಚ್ಛೇದನ ಪಡೆದಿದ್ದರು. ಐದು ವರ್ಷಗಳ ಅವರ ದಾಂಪತ್ಯ ಬದುಕು ಕೊನೆಗೊಂಡಿತ್ತು. ಆನಂತರ ಅವರು ಉದ್ಯಮಿ ವೈಭವ್ ರೇಖಿ ಅವರೊಡನೆ ಕಾಣಿಸಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಡೇಟಿಂಗ್‌ ನಂತರ ಇದೀಗ ಇಬ್ಬರೂ ವಿವಾಹವಾಗುತ್ತಿದ್ದಾರೆ. ದಿಯಾ ಮದುವೆ ವಿಷಯವನ್ನು ಬಹಿರಂಗಪಡಿಸಿಲ್ಲ.

ಫೆಬ್ರವರಿ 15ರಂದು ಅವರ ವಿವಾಹ ಎಂದು ನಿಗಧಿಯಾಗಿದ್ದು, ಕುಟುಂಬದವರು ಹಾಗೂ ಸ್ನೇಹಿತರಷ್ಟೇ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. “ಸಮಾರಂಭ ತೀರಾ ಸರಳವಾಗಿ ನಡೆಯಲಿದ್ದು, ಕುಟುಂಬದ ಆಪ್ತರಷ್ಟೇ ಇರುತ್ತಾರೆ” ಎಂದು ದಿಯಾ ಆಪ್ತರು ಹೇಳುತ್ತಿದ್ದಾರೆ.

ಕಳೆದ ವರ್ಷ ‘ಥಪ್ಪಡ್‌’ ಹಿಂದಿ ಚಿತ್ರದಲ್ಲಿ ನಟಿಸಿದ್ದ ದಿಯಾ ಸದ್ಯ ‘ವೈಲ್ಡ್ ಡಾಗ್‌’ ತೆಲುಗು ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗಾರ್ಜುನ, ಸಯ್ಯಾಮಿ ಖೇರ್ ಮತ್ತು ಅತುಲ್ ಕುಲಕರ್ಣಿ ಚಿತ್ರದ ಇತರೆ ಪ್ರಮುಖ ತಾರೆಯರು.

Categories
ಟಾಲಿವುಡ್

ಶಂಕರ್ ನಿರ್ದೇಶನದಲ್ಲಿ ರಾಮ್‌ ಚರಣ್‌ ತೇಜಾ! ಇದು ಪ್ಯಾನ್ ಇಂಡಿಯಾ ಸಿನಿಮಾ

ಇದೀಗ ಅಧಿಕೃತ! ದಕ್ಷಿಣದ ಸ್ಟಾರ್ ಡೈರೆಕ್ಟರ್‌ ಶಂಕರ್ ನಿರ್ದೇಶನದಲ್ಲಿ ತೆಲುಗು ಸ್ಟಾರ್ ಹೀರೋ ರಾಮ್‌ ಚರಣ್‌ ತೇಜಾ ನಟಿಸಲಿದ್ದಾರೆ ಎನ್ನುವ ವಂದತಿ ಇತ್ತು. ಇದೀಗ ಅಧಿಕೃತ ಘೋಷಣೆ ಹೊರಬಿದ್ದಿದೆ. ಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಮ್ ಚರಣ್‌ ನಟಿಸಲಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಇತರೆ ಮಾಹಿತಿ ಹೊರಬೀಳಲಿದೆ. ದಿಲ್ ರಾಜು ಮತ್ತು ಶಿರೀಸ್‌ ಚಿತ್ರ ನಿರ್ಮಿಸಲಿದ್ದು, ಇದು ಶಂಕರ್‌ ನಿರ್ದೇಶನದಲ್ಲಿ ಮೊದಲ ತೆಲುಗು ಸಿನಿಮಾ.

ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ. ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ಚಿತ್ರಕ್ಕೆ ಮ್ಯೂಸಿಕಲ್ ಸೆನ್ಸೇಷನ್ ಎ.ಆರ್.ರೆಹಮಾನ್‌ ಅವರು ಸಂಗೀತ ಸಂಯೋಜಿಸುವ ಸಾಧ್ಯತೆಗಳಿವೆ. ಈ ಹಿಂದೆ ಶಂಕರ್‌ ನಿರ್ದೇಶನದ ಹಲವು ಚಿತ್ರಗಳಿಗೆ ರೆಹಮಾನ್ ಸಂಗೀತ ಸಂಯೋಜಿಸಿದ್ದು, ರಾಚ್ ಚರಣ್‌ ಚಿತ್ರಕ್ಕೂ ಅವರು ಬರುವ ಸಂಭವ ಹೆಚ್ಚಿದೆ. ನಾಳೆ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಮೂಲಗಳು ಹೇಳುತ್ತವೆ.

ಜಂಟಲ್‌ಮ್ಯಾನ್‌, ಶಿವಾಜಿ, ಅನಿಯನ್‌, ಎಂಧಿರನ್‌ನಂತಹ ಸೂಪರ್‌ಹಿಟ್ ಚಿತ್ರಗಳ ನಿರ್ದೇಶಕ ಶಂಕರ್ ‘ಸೈನ್ಸ್‌-ಫಿಕ್ಷನ್‌’ ಮಾದರಿಯ ಸ್ಪೆಷಲಿಸ್ಟ್‌! ಈಗ ರಾಮ್‌ ಚರಣ್‌ಗೆ ಹೇಗೆ ಕತೆ ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು. ಈ ಪ್ಯಾನ್‌ ಇಂಡಿಯಾ ಚಿತ್ರದೊಂದಿಗೆ ತಮ್ಮ ಮಾರುಕಟ್ಟೆ, ಜನಪ್ರಿಯತೆ ವಿಸ್ತರಿಸಿಕೊಳ್ಳುವ ಇರಾದೆ ರಾಚ್ ಚರಣ್‌ರದ್ದು. ಸದ್ಯ ಶಂಕರ್‌ ‘ಇಂಡಿಯನ್‌ 2’ ತಮಿಳು ಸಿನಿಮಾ ಚಿತ್ರೀಕರಣದಲ್ಲಿದ್ದು, ಇದು ಮುಗಿದ ನಂತರ ರಾಮ್ ಚರಣ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

Categories
ಟಾಲಿವುಡ್

ಆಫ್ರಿಕಾದಲ್ಲಿ ರಾಜ್‌ಮೌಳಿ-ಮಹೇಶ್ ಬಾಬು ಸಿನಿಮಾ!  ‘ಆರ್‌ಆರ್‌ಆರ್‌’ ನಂತರ ಸೆಟ್ಟೇರಲಿದೆ ಮೆಗಾ ಪ್ರಾಜೆಕ್ಟ್‌  


ರಾಜ್‌ಮೌಳಿ ಸದ್ಯ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟನೆಯ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಇದಾದ ನಂತರ ಅವರು ಮಹೇಶ್ ಬಾಬು ಸಿನಿಮಾ ಕೈಗೆತ್ತಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಜ್‌ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸುತ್ತಿದ್ದು, ಇದಕ್ಕೆ ದಟ್ಟ ಕಾಡಿನ ಹಿನ್ನೆಲೆಯ ಬ್ಯಾಕ್‌ಡ್ರಾಪ್‌ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ರಾಜ್‌ಮೌಳಿ ಯೋಚಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಚಿತ್ರ ಸೆಟ್ಟೇರಲಿದ್ದು, ಈ ಚಿತ್ರದೊಂದಿಗೆ ಪ್ಯಾನ್‌ ಇಂಡಿಯಾ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾರೆ ಮಹೇಶ್ ಬಾಬು.

ದಟ್ಟ ಕಾನನದಲ್ಲಿ ನಡೆಯುವ ಆಕ್ಷನ್‌-ಥ್ರಿಲ್ಲರ್ ಚಿತ್ರಕ್ಕಾಗಿ ಸೂಕ್ತ ತಯಾರಿ ನಡೆದಿದೆ. ಪೀರಿಯಡ್‌ ಸಿನಿಮಾಗಳ ನಂತರ ರಾಜ್‌ಮೌಳಿ ಮತ್ತು ವಿಜಯೇಂದ್ರ ಪ್ರಸಾದ್ ಅವರು ಹೊಸ ರೀತಿಯ ಕತೆ ಮಾಡಲು ಹವಣಿಸುತ್ತಿದ್ದಾರೆ. ಮಹೇಶ್ ಬಾಬು ಚಿತ್ರದೊಂದಿಗೆ ಇದನ್ನು ಸಾಕಾರಗೊಳಿಸುವುದು ಅವರ ಉದ್ದೇಶ. ಭಾರತೀಯ ಸಿನಿಮಾಗಳಲ್ಲಿ ಹಿಂದೆಂದೂ ಚಿತ್ರಿಸದ ಆಫ್ರಿಕಾ ಕಾಡುಗಳಲ್ಲಿ ಸಿನಿಮಾ ಮಾಡುವುದು ರಾಜ್‌ಮೌಳಿ ಯೋಜನೆ. ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಶುರಾಮ್ ಪೆಟ್ಲಾ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬುಗೆ ಕೀರ್ತಿ ಸುರೇಶ್ ನಾಯಕಿ.

Categories
ಟಾಲಿವುಡ್

ಅಮೇಜಾನ್ ಪ್ರೈಂನಲ್ಲಿ  ನಾನಿ ಸಿನಿಮಾ‌ ಸೆಪ್ಟೆಂಬರ್‌ ೫ ಕ್ಕೆ ಜಾಗತಿಕ ರಿಲೀಸ್

ನಾನಿ

ತೆಲುಗು ನಟ ನಾನಿ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಿ’ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 5ರಿಂದ ಜಾಗತಿಕ ಪ್ರದರ್ಶನ ಕಾಣುತ್ತಿದೆ.

ಮೋಹನಾ ಕೃಷ್ಣ ಇಂದ್ರಗಂಟಿಯವರು ಕಥೆ-ಚಿತ್ರಕಥೆ ಬರೆದು, ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾನಿ ಜೊತೆ ಸುಧೀರ್ ಬಾಬು, ನಿವೇತಾ ಥಾಮಸ್ ಮತ್ತು ಆದಿತಿ ರಾವ್ ಹೈದರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೊರೊನಾ ವೈರಸ್ ಕಾರಣದಿಂದ ದೇಶಾದ್ಯಂತ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, 150ಕ್ಕೂ ಅಧಿಕ ದಿನಗಳು ಕಳೆದಿದೆ. ಇದುವರೆಗೂ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ, ಸ್ಟಾರ್ ನಟರು ಆನ್‌ಲೈನ್ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.

‘ವಿ’ ಚಿತ್ರದ ಜಾಗತಿಕ ಪ್ರದರ್ಶನದ ಬಗ್ಗೆ ನನಗೆ ಬಹಳ ಸಂತೋಷವಿದೆ. ಇದು ನನ್ನ 25ನೇ ಚಿತ್ರವಾಗಿದೆ. ಇಷ್ಟು ದಿನ ನನ್ನ ಸಿನಿಮಾ ನೋಡಲು ನೀವೆಲ್ಲ ಚಿತ್ರಮಂದಿರಕ್ಕೆ ಬರುತ್ತಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಲು ನಾನೇ ನಿಮ್ಮ ಮನೆಗೆ ಆಗಮಿಸುತ್ತಿದ್ದೇನೆ” ಎಂದು ನಾನಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

‘ವೈಯಕ್ತಿಕವಾಗಿ ನನಗೆ ಆಕ್ಷನ್ ಥ್ರಿಲ್ಲರ್ ಗಳನ್ನು ನೋಡಲು ಇಷ್ಟವಾಗುತ್ತದೆ, ‘ವಿ’ ಅದೇ ರೀತಿಯ ಚಿತ್ರವಾಗಿದ್ದು, ರೋಮಾಂಚನ, ಡ್ರಾಮಾ ಮತ್ತು ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಸುಧೀರ್ ಬಾಬು ಮತ್ತು ನನ್ನ ನಡುವಿನ ಇಲಿ-ಬೆಕ್ಕಿನ ಆಟವು ನೋಡಗರಿಗೆ ಭರಪೂರ ರಂಜನೆ ನೀಡಲಿದೆ’ ಎಂದು ನಾನಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರೈಂ ಸದಸ್ಯರು ವಿ ಚಿತ್ರವನ್ನು ಎಲ್ಲಿಯಾದರೂ, ಯಾವ ಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ನೋಡಬಹುದು.ಭಾರತದಲ್ಲಿ ಪ್ರೈಂ ವೀಡಿಯೊ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ