Categories
ಸಿನಿ ಸುದ್ದಿ

ಪೆಪೆಯಲ್ಲಿ ಜೇನು ಕುರುಬ ಹಾಡು: ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ

ಪ್ರತಿ ಸಿನಿಮಾದಲ್ಲಿಯೂ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ.

ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್ ಅಡಿ ಚಿತ್ರ ಹಾಡೊಂದನ್ನು ಅನಾವರಣ ಮಾಡಿದೆ. ಪಿಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ.

ಜೇನು ಕುರುಬ ಬುಡಗಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ ಹಾಗೂ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ಈ ಹಾಡು ಸೂಕ್ತ ಉದಾಹರಣೆ.

ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮೂಡಿ ಬರ್ತಿರುವ ಪೆಪೆ ಒಂದು ರೀತಿ ಪರಿಪೂರ್ಣ ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಪೌಡರ್ ಟ್ರೇಲರ್ ಬಂತು: ಆ.23ಕ್ಕೆ ಪೌಡರ್ ಹಚ್ಕೊಳಿ

ಬಹು ನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” ಇದೀಗ ತನ್ನ ಟ್ರೇಲರ್ ಬಿಡುಗಡೆ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಚಿತ್ರ ತಂಡ ಇಂದು ಒರಾಯನ್ ಮಾಲ್ ನ ಪಿ.ವಿ‌.ಆರ್ ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಲ್ಲಿ ಬಿಡುಗಡೆ ಮಾಡಿದ ಟ್ರೇಲರ್ ತುಣುಕು ತನ್ನ ಅದ್ಭುತವಾದ ಕಾಮಿಡಿ ಟೈಮಿಂಗ್, ವಿಭಿನ್ನ ಕಥಾವಸ್ತು ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದೆ.

ಇಬ್ಬರು ಯುವಕರು ಒಂದು ನಿಗೂಢವಾದ “ಪೌಡರ್”‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ “ಪೌಡರ್”.‌ ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? “ಪೌಡರ್”‌ ಹಿಂದಿನ “ಪವರ್”‌ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೇ ಆಗಸ್ಟ್ 23ರಂದು ಚಿತ್ರಮಂದಿರಗಳಲ್ಲಿ ಸಿಗಲಿದೆ. ಈಗಾಗಲೇ ತನ್ನ ಟೀಸರ್‌ ಮೂಲಕ “ಪೌಡರ್”‌ ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ, ನಗು ದುಪ್ಪಟ್ಟುಗೊಳ್ಳಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಇನ್ನಿತರರು ನಟಿಸಿರುವ “ಪೌಡರ್” ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.

ಕೆ‌.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗವಾದ “ಪೌಡರ್” ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ‌. ಈ ಚಿತ್ರವು ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.

Categories
ಸಿನಿ ಸುದ್ದಿ

ಗೌರಿಗೆ ಸುದೀಪ್ ಸಾಥ್: ಟ್ರೇಲರ್ ಮೆಚ್ಚಿದ ಕಿಚ್ಚ

ಸಮರ್ಜಿತ್ ಲಂಕೇಶ್ ‌ಅಭಿನಯದ ಗೌರಿ ಆಗಸ್ಟ್ 15 ರಂದು ತೆರೆಗೆ ಬರಲಿದೆ. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸುದೆ

ಇಂದ್ರಜಿತ್‍ ಲಂಕೇಶ್ ನಿರ್ದೇಶನದಲ್ಲಿ ಸಮರ್ಜಿತ್ ಲಂಕೇಶ್‍ ನಾಯಕನಾಗಿ ನಟಿಸಿರುವ ‘ಗೌರಿ’ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ “ಗೌರಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ್‍ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ಹಿರಿಯ ವಕೀಲರಾದ ಶ್ಯಾಮ್ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು, ‘ಇಂದ್ರಜಿತ್‍ ಮತ್ತು ನಾನು ಹಳೆಯ ಸ್ನೇಹಿತರು. ಇಬ್ಬರೂ ಜೊತೆಗೆ ಬ್ಯಾಡ್ಮಿಂಟನ್‍ ಆಡುತ್ತಿದ್ದೆವು. ಲಂಕೇಶ್‍ ಅವರ ಮಗ ಅಂತ ಗೊತ್ತಿರಲಿಲ್ಲ. ಆದರೆ, ಬಹಳ ಚೆನ್ನಾಗಿ ಶಟಲ್‍ ಆಡೋರು. ‘ಟ್ರೇಲರ್ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಇವತ್ತು ಅವರಿಬ್ಬರಿಗೆ ಆಗುವಷ್ಟು ಸಂತೋಷ, ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗೋದಕ್ಕೆ ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್‍ ಅವರ ಯಶಸ್ಸೂ ಇದೆ’.

ಇನ್ನು ಸಾನ್ಯ ಅವರು ಉತ್ತಮ ನಟಿ ಅಷ್ಟೇ ಅಲ್ಲ ಒಳ್ಳೆಯ ಬರಹಗಾರ್ತಿ ಕೂಡ. ಅದು ನನಗೆ “ಬಿಗ್ ಬಾಸ್” ಸಮಯದಲ್ಲಿ ತಿಳಿಯಿತು. ಈ ಸಂಜೆಗಾಗಿ ಸಮರ್ಜಿತ್ ಮತ್ತು ಸಾನ್ಯಾ ಬಹಳ ಕಾತುರದಿಂದ ಕಾದಿರುತ್ತಾರೆ. ಬಿಡುಗಡೆಗಿಂತ ಇಂಥಹ ಸಂಜೆಗಳನ್ನು ನೀವು ಖುಷಿಪಡಿ. ಸಿನಿಮಾ ಬಿಡುಗಡೆಯಾದ ಮೇಲೆ ಜೀವನ ಇದೇ ತರಹ ಇರುವುದಿಲ್ಲ. ಅದು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಅದಕ್ಕೆ ಸಿದ್ದರಾಗಿರಿ’ ಎಂದರು.

ಸುದೀಪ್ ಹಾಗೂ ನನ್ನ ಗೆಳೆತನ ಎರಡು ದಶಕಗಳಿಗೂ ಮೀರಿದ್ದು. ಅವರ ಜೊತೆ ಶಟಲ್ ಆಡಿದ ದಿನಗಳು ಈಗಲೂ ಕಣ್ಣಮುಂದೆ ಇದೆ. ಹಿಂದೆ ನನ್ನ ನಿರ್ದೇಶನದ ಚಿತ್ರವೊಂದರಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರು ನನ್ನಿಂದ ಯಾವ ಸಂಭಾವನೆಯನ್ನು ಪಡೆದಿರಲಿಲ್ಲ. ಆಮೇಲೆ ನಾನು ಅವರಿಗೆ ಏನು ಕೊಡುವುದು? ಅವರ ಬಳಿ ಎಲ್ಲಾ ಇದೆ ಎಂದು ಕೊಂಡು, ಅವರ ಮಗಳಿಗೆ ವಿಶೇಷ ಉಡುಗೊರೆ ತೆಗೆದುಕೊಂಡು ಅವರ ಮನೆಗೆ ಹೋದೆ.

ಆದರೆ ಸುದೀಪ್ ಅವರು ಅದನ್ನು ನನಗೆ ಕೊಡಲು ಬಿಡಲಿಲ್ಲ. ಈ ರೀತಿ ನನಗೆ ಮೊದಲಿನಿಂದಲೂ ಅವರು ನನಗೆ ಸಪೋರ್ಟ್ ಮಾಡುತ್ತಾ ಬರುತ್ತಿದ್ದಾರೆ. ಇಂದು ನನ್ನ ಮಗನ ಮೊದಲ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಂದು ಕೂಡ ನನ್ನ ಬಳಿ ಅವರು ಯಾವ ಉಡುಗೊರೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಅವರಿಗಾಗಿ ಇಂಗ್ಲೆಂಡ್ ನಿಂದ ವಿಶೇಷ ಬ್ಯಾಟ್ ತರಿಸಿದ್ದೇನೆ ಇಂದ್ರಜಿತ್ ಲಂಕೇಶ್ ತಿಳಿಸಿದರು.

‘ಗೌರಿ’ ಚಿತ್ರದ ಟ್ರೇಲರ್ ಸುದೀಪ್ ಅವರು ಬಿಡುಗಡೆ ಮಾಡಿದಕ್ಕೆ ಸಂತಸ ವ್ಯಕ್ತಪಡಿಸಿದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅಯ್ಯರ್, ಆಗಸ್ಟ್ ಹದಿನೈದರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

“ಗೌರಿ” ಚಿತ್ರದ ಮೂಲಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ ‘ಗೌರಿ’ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ (ವಿಶೇಷ ಪಾತ್ರ), ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹಳಷ್ಟು ಜನ ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಪ್ರಯೋಗ ‘ಸಿ’ ಎಂಬ ಅದ್ಭುತ ಕಥಾ ವಸ್ತು: ಎ ಅಲ್ಲ ಬಿ ಅಲ್ಲ ಸಿ ಅಂದ್ರು ಕವಿರತ್ನ

ಸಿ..ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾ. ಚಂದನವನದಲ್ಲಿ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು ‘ಸಿ’ ಎನ್ನುವ ಒಂದೇ ಅಕ್ಷರದ ಟೈಟಲ್ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೆ ಜೊತೆಗೆ ಸಿ ಸಿನಿಮಾಗೆ ನಟ ಯೋಗಿ ಮತ್ತು ಖ್ಯಾತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬೆಂಬಲ ಕೂಡ ಸಿಕ್ಕಿದೆ‌.

ಅಂದಾಹಗೆ ‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ನಿರ್ದೇಶನದ ಜೊತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ವಿಶೇಷ ಎಂದರೆ ಈ ಹಾಡನ್ನು ಲೂಸ್ ಮಾದ ಖ್ಯಾತಿಯ ನಟ ಯೋಗಿ ರಿಲೀಸ್ ಮಾಡಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಯೋಗಿ ಹೊಸ ಸಿನಿಮಾ ತಂಡದ ಬೆನ್ನಿಗೆ ನಿಂತಿರುವುದು ಸಿ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡಿನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ.

‘ಸಿ’ ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಬಗ್ಗೆ ಇದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಗೋಲ್ಡ್ ಸಾಂಗ್ ಗೆ ಭರ್ಜರಿ ರೆಸ್ಪಾನ್ಸ್: ಆಗಸ್ಟ್ 15ಕ್ಕೆ ಕೃಷ್ಣಂ ಪ್ರಣಯ ಸಖಿ ರಿಲೀಸ್

ಸದ್ಯ ಗೋಲ್ಡನ್ ಸಾಂಗ್ ಸುದ್ದಿ. ಅರೇ ಇದೇನಪ್ಪ ಗೋಲ್ಡನ್ ಸಾಂಗ್? ಈ ಪ್ರಶ್ನೆ ಎದುರಾಗಬಹುದು. ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾ ಕೂಡ ನಿರೀಕ್ಷೆ ಹೆಚ್ಚಿಸಿದೆ.

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಸಂಗೀತ ನೀಡಿರುವ ಏಳು ಹಾಡುಗಳಿದೆ. ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿದೆ‌. ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ “ಕೃಷ್ಣಂ ಪ್ರಣಯ ಸಖಿ” ಪ್ರೇಕ್ಷಕರ ಮನ ತಲುಪಿದೆ. ನಿರೀಕ್ಷೆಗೂ ಮೀರಿ ಹಾಡುಗಳು ಹಿಟ್ ಅಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿರುವ ಆನಂದ್ ಆಡಿಯೋ ದವರು ಸಮಾರಂಭ ಆಯೋಜಿಸಿದ್ದರು. ಹಾಡುಗಳನ್ನು ಬರೆದಿರುವವರನ್ನು ಹಾಗೂ ಹಾಡಿದರವನ್ನು ಫಲಕ ನೀಡಿ ಸನ್ಮಾನಿಸಿದರು. ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಗೀತರಚನೆಕಾರ ನಿಶಾನ್ ರೈ ಅವರನ್ನು ಹಾಗೂ ಚಿತ್ರತಂಡದ ಸದಸ್ಯರನ್ನು ಆನಂದ್ ಆಡಿಯೋ ಶ್ಯಾಮ್ ಮತ್ತು ಆನಂದ್ ಆತ್ಮೀಯವಾಗಿ ಸನ್ಮಾನಿಸಿದರು. ನಂತರ ಚಿತ್ರತಂಡದವರು ಮಾತನಾಡಿದರು.

ಇಂದು ನಾಲ್ಕನೇ ಹಾಡು ಬಿಡುಗಡೆಯಾಗಿದೆ ಎಂದು ಮಾತನಾಡಿದ ನಾಯಕ ಗಣೇಶ್, ಈವರೆಗೂ ಬಿಡುಗಡೆಯಾಗಿರುವ ಮೂರು ಹಾಡುಗಳು ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ‌. ಹಾಗಾಗಿ ಈ ಸಮಾರಂಭವನ್ನು ಆನಂದ್ ಆಡಿಯೋದವರು ಆಯೋಜಿಸಿದ್ದಾರೆ‌. ಅವರಿಗೆ ಧನ್ಯವಾದಗಳು. ಇತ್ತೀಚೆಗೆ ಹಾಡುಗಳು ಹಿಟ್ ಆಗುವುದು ಬಹಳ ಕಡಿಮೆ. ಮೊದಲೆಲ್ಲಾ ಆಡಿಯೋ ಹಿಟ್‍ ಅಂತ ಕಾರ್ಯಕ್ರಮ ಮಾಡುತ್ತಿದ್ದೆವು. ಇತ್ತೀಚೆಗೆ ಆಗಿರಲಿಲ್ಲ. ಮೂರನೇ ಹಾಡು ಯಶಸ್ವಿಯಾದಾಗ ಯಾಕೆ ಇಂಥದ್ದೊಂದು ಕಾರ್ಯಕ್ರಮ ಮಾಡಬಾರದು ಎಂದು ಆನಂದ್ ಆಡಿಯೋದವರು ಹೇಳುತ್ತಿದ್ದರು.

ಆನಂದ್ ಆಡಿಯೋದವರ ಜೊತೆಗೆ ನನ್ನದು ಬಹಳ ದೊಡ್ಡ ಸಂಬಂಧ. ನನ್ನ ಚಿತ್ರಜೀವನದ ಯಶಸ್ಸಿಗೆ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಆ ಕ್ರೆಡಿಟ್‍ ಆನಂದ್‍ ಆಡಿಯೋದವರಿಗೂ ಸಲ್ಲಬೇಕು. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಡಬ್ಬಲ್‍ ದುಡ್ಡು ಕೊಟ್ಟು ಆನಂದ್ ಆಡಿಯೋದವರು ಕೊಂಡಿದ್ದಾರೆ. ಮುಂದಿನ ಚಿತ್ರಕ್ಕೆ ಇನ್ನೂ ಡಬ್ಬಲ್‍ ದುಡ್ಡು ಕೊಡಲಿ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರತಿಯೊಬ್ಬ ಗೀತರಚನೆಕಾರ, ಗಾಯಕರು ಎಲ್ಲರಿಗೂ ಧನ್ಯವಾದಗಳು. ಜಸ್ಕರಣ್ ಅವರು ವೇದಿಕೆ ಮೇಲೆ ನಿಂತು ಹಾಡಿದಾಗ ದೈವಿಕ ಭಾವನೆ ಮೂಡಿತು. ಇವರು ಯಾರೋ ನಮ್ಮ ತರಹದವರೇ ಅಂತನಿಸಿತು. ತುಂಬಾ ಚೆನ್ನಾಗಿ ಹಾಡಿದ್ದಾರೆ. ಅದರಲ್ಲೂ “ದ್ವಾಪರ” ಹಾಡಂತೂ ಸಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿದೆ. ರೀಲ್ಸ್ ಮಾಡುತ್ತಿರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಹಾಡುಗಳ ಯಶಸ್ಸಿನ ಹೆಚ್ಚಿನ ಭಾಗದ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಏಕೆಂದರೆ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಬಹಳ ಬ್ಯುಸಿ. ಅವರನ್ನು ಹಿಡಿಯೋದೇ ಕಷ್ಟ. ಮಧ್ಯಾಹ್ನದ ಊಟ ಆಯ್ತಾ ಎಂದು ಫೋನ್ ಮಾಡಿದರೆ, ರಾತ್ರಿ ವಾಪಸ್ಸು ಮಾಡುತ್ತಾರೆ. ಅಷ್ಟು ಬ್ಯುಸಿ. ಅವರಿಂದ ಇಷ್ಟು ಕೆಲಸ ತೆಗೆದಿದ್ದಾರೆ. ಒಂದೊಂದು ಹಾಡು ಸಹ ದೊಡ್ಡ ಹಿಟ್‍ ಆಗುತ್ತದೆ, ಆ ತರಹ ಮಾಡುತ್ತೀನಿ ಎಂದು ಹೇಳುತ್ತಿದ್ದರು. ಅದನ್ನು ನಿಜ ಮಾಡಿ ತೋರಿಸಿದ್ದಾರೆ ಎಂದರು.

ಅರ್ಜುನ್‍ ಜನ್ಯ ಅವರು ಮ್ಯಾಜಿಕಲ್‍ ಕಂಪೋಸರ್ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ಒಂದು ಸಂಗೀತಮಯ ಚಿತ್ರವಾಗಬೇಕು ಎಂಬ ಆಸೆ ನನಗಿತ್ತು. ಆದರೆ, ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ. ಅರ್ಜುನ್‍ ಬಹಳ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮಗೆ ಸಮಯ ಕೊಟ್ಟು ಈ ರೀತಿ ಜನಪ್ರಿಯ ಹಾಡುಗಳನ್ನು ಮಾಡಿಕೊಟ್ಟಿರುವುದು ಬಹಳ ಖುಷಿಯ ವಿಷಯ. ಚಿತ್ರದಲ್ಲಿ ಮೊದಲು ಒಂಬತ್ತು ಹಾಡುಗಳಿದ್ದವು. ಕೊನೆಗೆ ಕಡಿಮೆಯಾಗಿ, ಏಳು ಹಾಡುಗಳಿವೆ. ಎಲ್ಲಾ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ನನಗೆ ಮೊದಲ ದಿನದಿಂದಲೇ ಇತ್ತು. ಅದು ಪ್ರೂವ್‍ ಆಗಿದೆ. ಈ ವಿಷಯದಲ್ಲಿ ಅರ್ಜುನ್‍ ಜನ್ಯ ಅವರಿಗೆ ಧನ್ಯವಾದ ತಿಳಿಸಬೇಕು. ಈ ಹಾಡುಗಳನ್ನು ಪ್ರಮೋಟ್‍ ಮಾಡುತ್ತಿರುವ ಮತ್ತು ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರಕ್ಕೆ ಹಣ ಹೂಡಿದ ನಿರ್ಮಾಪಕ ಪ್ರಶಾಂತ್‍ ಅವರಿಗೆ ಧನ್ಯವಾದಗಳು. ಈ ಚಿತ್ರ ಪ್ರಮುಖವಾಗಿ ಆಗುವುದಕ್ಕೆ ಗಣೇಶ್‍ ಕಾರಣ. ಅವರು ನನ್ನ ಮೇಲೆ ನಂಬಿಕೆ ಇಟ್ಟರು. ನನ್ನ ಜಾನರ್ ನಿಂದ ಆಚೆ ಬಂದು ಚಿತ್ರ ಮಾಡುವುದಕ್ಕೆ ಪ್ರೋತ್ಸಾಹ ಕೊಟ್ಟರು. ಪ್ರತಿ ಹಂತದಲ್ಲೂ ತೊಡಗಿಸಿಕೊಂಡರು. ‘ದ್ವಾಪರ’ವರೆಗೂ ಬೇರೆಬೇರೆ ರೀತಿಯ ಹಾಡುಗಳಿದ್ದವು. ಇನ್ನು ಮುಂದಿನ ಒಂದು ವಾರದಲ್ಲಿ ಮೆಲೋಡಿ ಹಾಡುಗಳು ಬರಲಿವೆ. ಈ ಚಿತ್ರಕ್ಕೆ ಟ್ರೇಲರ್ ಅವಶ್ಯಕತೆ ಇರಲಿಲ್ಲ ಎಂದು ಒಂದು ವರ್ಷದ ಹಿಂದೆ ಅನಿಸಿತ್ತು. ಇದೊಂದು ಮ್ಯೂಸಿಕಲ್‍ ಚಿತ್ರವಾದ್ದರಿಂದ, ಈ ಚಿತ್ರವನ್ನು ಹಾಡುಗಳಿಂದ ಮಾತ್ರ ಪ್ರಮೋಟ್‍ ಮಾಡುವುದು ನನ್ನ ಆಸೆ. ಹಾಗಾಗಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಇದು ಈ ಚಿತ್ರಕ್ಕೆ ಮಾತ್ರ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.

ನಟಿ ಶರಣ್ಯ ಶೆಟ್ಟಿ, ಹಿರಿಯ ನಟ ರಾಮಕೃಷ್ಣ, ಕಾರ್ಯಕಾರಿ ನಿರ್ಮಾಪಕ ಶರತ್, ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಹಾಡು ಬರೆದಿರುವ ನಿಶಾನ್ ರೈ ಹಾಗೂ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಮತ್ತು ಆನಂದ್ ಹಾಡುಗಳು ಗೆದ್ದಿರುವ ಆನಂದವನ್ನು ಮಾತಿನ ಮೂಲಕ ಹಂಚಿಕೊಂಡರು.

Categories
ಸಿನಿ ಸುದ್ದಿ

ಈ ವಾರ ಅಡವಿಕಟ್ಟೆ ರಿಲೀಸ್: ಇದು ಅಭಿಜಿತ್ ಆಕರ್ಷಣೆಯ ಸಿನಿಮಾ

ಅಡವಿಕಟ್ಟೆ ಈ ವಾರ ರಿಲೀಸ್ ಆಗುತ್ತಿರೋ ಚಿತ್ರ. ಈ ಸಿನಿಮಾದಲ್ಲಿ ಅಭಿಜಿತ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಉಮ ಎಸ್ ನಿರ್ಮಿಸಿರುವ, ಸಂಜೀವ್ ಗಾವಂಡಿ ನಿರ್ದೇಶನದ, ಹಿರಿಯನಟ ಆಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ “ಅಡವಿಕಟ್ಟೆ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ‌ಹಾಗೂ ಹಾಡುಗಳು ಜನಪ್ರಿಯವಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರಾರ್ ಜಾನಾರ್ ನ ಈ ಚಿತ್ರಕ್ಕೆ ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ.

ಎಸ್ ಎನ್ ಈಶ್ವರ್ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ, ಆದಿ ಆದರ್ಶ್ ಸಂಕಲನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ಸಂಜೀವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಫ್ಯಾಮಿಲಿ ಸ್ಟಾರ್ ಅಭಿಜಿತ್, ನಾಗರಾಜು, ಶಾಂತಿ, ಯಶ್ ಶಂಕರ್, ಅನುಪ್ರೇಮ, ರವಿಚಂದ್ರನ್ ಆರ್, ಮಂಜುಳಾ ರೆಡ್ಡಿ “ಅಡವಿಕಟ್ಟೆ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಪೌಡರ್ ಹಚ್ಕೊಳಕೆ ರೆಡಿಯಾಗಿ: ಆಗಸ್ಟ್ 23ಕ್ಕೆ ರಿಲೀಸ್

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆಆರ್ ಜಿ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಪೌಂಡರ್. ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಆಗಸ್ಟ್ 15ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಅದಕ್ಕಾಗಿ ಚಿತ್ರತಂಡ ಭರದ ಪ್ರಚಾರ ಕಾರ್ಯ ಕೂಡ ನಡೆಸಿತ್ತು. ಆದರೆ ಈಗ ಪೌಡರ್ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಕನ್ನಡ ಸಿನಿಮಾಗಳ ಉಳಿವಿಗಾಗಿ ಕೆಆರ್ ಜಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಆಗಸ್ಟ್ 15ರಂದು ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಸೇರಿ ಹತ್ತರಿಂದ ಹದಿನೈದು ಸಿನಿಮಾ ಬಿಡುಗಡೆಯಾಗುತ್ತಿವೆ. ಹೀಗಾಗಿ ಕೆಆರ್ ಜಿ ನಿರ್ಮಾಣ ಸಂಸ್ಥೆ ಆಗಸ್ಟ್ 15ರ ಬದಲಿಗೆ ಆಗಸ್ಟ್ 23ಕ್ಕೆ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ. ಒಂದೇ ದಿನ ಸಾಕಷ್ಟು ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗಲಿದೆ. ಕಲೆಕ್ಷನ್ ಮೇಲೆಯೂ ಹೊಡೆತ ಬೀಳಲಿದೆ. ಮೊದಲೇ ಕನ್ನಡ ಚಿತ್ರರಂಗದ ಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಬಾಕ್ಸಾಫೀಸ್ ವಾರ್ ಬೇಡ ಎಂಬುದನ್ನು ಅರಿತ ಕೆಆರ್ ಜಿ ಸಂಸ್ಥಾಪಕಾರದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಪೌಡರ್ ರಿಲೀಸ್ ದಿನಾಂಕವನ್ನು ಮುಂಡೂಡಿದ್ದಾರೆ.

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ “ಪೌಡರ್” ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.

Categories
ಸಿನಿ ಸುದ್ದಿ

ಫೈರ್ ಫ್ಲೈ ಆಡಿಯೋ ಹಕ್ಕು ದಾಖಲೆ ಮೊತ್ತ!

ಫೈರ್ ಫ್ಲೈ’ ಮ್ಯೂಸಿಕಲ್ ಪಯಣಕ್ಕೆ ರೆಡಿನಾ..? ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಆಡಿಯೋ ಹಕ್ಕು

ಕನ್ನಡದ ಬಹುನಿರೀಕ್ಷಿತ ಸಿನಿಮಾ ಫೈರ್ ಫ್ಲೈ ಬಹಳ ವಿಶೇಷವಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಫೈರ್ ಫ್ಲೈ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ಫೈರ್ ಫ್ಲೈ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.

ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.

Categories
ಸಿನಿ ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ದ್ವಾಪರ‌ ದಾಟುತ ಹಾಡು ದಾಖಲೆ:

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್”, “ಚಿನ್ನಮ್ಮ” ಹಾಗೂ “ದ್ವಾಪರ ದಾಟುತ” ಮೂರು ಹಾಡುಗಳು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದು, “ಸರಿಗಮಪ” ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ “ದ್ವಾಪರ ದಾಟುತ” ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿ ಭಾರಿ ಟ್ರೆಂಡ್ ಹುಟ್ಟುಹಾಕಿದೆ.

ಯೂಟ್ಯೂಬ್ ನಲ್ಲಿ ಎಂಟು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿರುವ ಈ ಹಾಡು ಇನ್ಸ್ಟಾ ರೀಲ್ಸ್ ನಲ್ಲಿ 2 ನೇ ಸ್ಥಾನದಲ್ಲಿದೆ. ಟ್ವಿಟರ್ ನಲ್ಲೂ ಹೊಸ ದಾಖಲೆ ಬರೆದಿದೆ. ಟ್ವಿಟರ್ ಹಾಗೂ ಇನ್ಸ್ಟಾ ರೀಲ್ಸ್ ನಲ್ಲಿ ಈ ರೀತಿಯ ಜನಪ್ರಿಯತೆ ಸಿಗುತ್ತಿರುವ ಕನ್ನಡದ ಮೊದಲ ಹಾಡು ಇದಾಗಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಸಹ ಈವರೆಗೂ ನಾನು ಬರೆದಿರುವ ಹಾಡುಗಳಲ್ಲಿ ಇದು ನನ್ನ ಮೆಚ್ಚುಗೆಯ ಹಾಡು ಎನ್ನುತ್ತಾರೆ.

“ಮುಂಗಾರು ಮಳೆ” ಯ ನಂತರ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ ಎಂದು ನಾಯಕ ಗಣೇಶ್ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು‌ ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ‌. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Categories
ಸಿನಿ ಸುದ್ದಿ

ಪೆಪೆ ಸಿನಿಮಾಗೆ ಎ ಸರ್ಟಿಫಿಕೇಟ್: ಇದು ವಿನಯ್ ರಾಜಕುಮಾರ್ ಚಿತ್ರ

ಒಂದು ಸರಳ ಪ್ರೇಮಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಗಡ್‌ ಲುಕ್‌ ಅಬ್ಬರಿಸಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಚಿತ್ರ ಇದಾಗಿದ್ದು, ಇದುವರೆಗೂ ಈ ರೀತಿಯ ಪಾತ್ರದಲ್ಲಿ ವಿನಯ್ ಕಾಣಿಸಿಕೊಂಡಿಲ್ಲ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್‌ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

error: Content is protected !!