Categories
ಸಿನಿ ಸುದ್ದಿ

ಕಮಲ್‌ -ಮಣಿರತ್ನಂ ಜೋಡಿಯ ʼಥಗ್‌ ಲೈಫ್‌ʼ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್

ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಥಗ್‌ ಲೈಫ್.‌ ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಸಿಂಬು, ಮಣಿರತ್ನಂ, ಅಭಿರಾಮಿ, ಅಶೋಕ್ ಸೆಲ್ವನ್, ತ್ರಿಷಾ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.

ಥಗ್‌ ಲೈಫ್‌ ಚಿತ್ರದ ಜಿಂಗುಚ್ಚಾ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಕಮಲ್, ಸಿಂಬು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮದುವೆ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಕಮಲ್‌ ಹಾಸನ್‌ ಸಾಹಿತ್ಯ ಒದಗಿಸಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ‌. ಚೆನ್ನೈನಲ್ಲಿ ನಡೆದ ಪ್ಯಾ‌ನ್ ಇಂಡಿಯಾದ ಪ್ರೆಸ್ ಮೀಟ್ ವೇದಿಕೆಯಲ್ಲಿ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಆರ್. ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದ ತಾರಾಗಣ ಕಮಲ್ ಹಾಸನ್, ಸಿಲಂಬರಸನ್ ಟಿಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮತ್ತಿತರ ನಟರನ್ನು ಒಳಗೊಂಡಿದೆ. ಈ ಬಹು ನಿರೀಕ್ಷಿತ ಚಿತ್ರಕ್ಕೆ ದಿಗ್ಗಜ ಎ.ಆರ್. ರೆಹಮಾನ್ ಅವರ ಸಂಗೀತವಿದೆ.

ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಈ ಚಿತ್ರಕ್ಕಿದೆ. ಥಗ್‌ ಲೈಫ್‌ ಚಿತ್ರದ ಒಟಿಟಿ ಹಕ್ಕು ನೆಟ್‌ ಫ್ಲಿಕ್ಸ್‌ ಪಾಲಾಗಿದ್ದು, ಆಡಿಯೋ ಹಕ್ಕನ್ನು ಸರೆಗಮ ತನ್ನದಾಗಿಸಿಕೊಂಡಿದೆ.

ವಿತರಣಾ ಪಾಲುದಾರರು
ಥಗ್ಸ್‌ ಲೈಫ್‌ ಸಿನಿಮಾವನ್ನು ತಮಿಳುನಾಡಿನಲ್ಲಿ ರೆಡ್ ಜೈಂಟ್ ಮೂವೀಸ್ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಓವರ್‌ ಸೀಸ್‌ ನಲ್ಲಿ ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ಎಪಿ ಇಂಟರ್‌ನ್ಯಾಷನಲ್ ವಿತರಣೆ ಮಾಡುತ್ತಿದ್ದು, ಉತ್ತರ ಭಾರತದಲ್ಲಿ ಪೆನ್ ಮರುಧರ್ ಸಿನಿ ಎಂಟರ್‌ಟೈನ್‌ಮೆಂಟ್, ಆಂಧ್ರಪ್ರದೇಶ ಮತ್ತು ತೆಲಂಗಾಣನಲ್ಲಿ ಶ್ರೇಷ್ಠ್ ಮೂವೀಸ್ ಹಾಗೂ ಫೈವ್ ಸ್ಟಾರ್ ಸೆಂಥಿಲ್ ಕರ್ನಾಟಕದಲ್ಲಿ ಕಮಲ್‌ ಹಾಸನ್ ಚಿತ್ರ ವಿತರಣೆ ಮಾಡಲಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಯುದ್ಧ ಗೆದ್ದ ಅಜೇಯ!

ಚಿತ್ರ: ಯುದ್ಧಕಾಂಡ
ನಿರ್ಮಾಣ: ಅಜೇಯ್ ರಾವ್
ನಿರ್ದೇಶನ: ಪವನ್ ಭಟ್
ತಾರಾಗಣ: ಅಜೇಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ.ಎಸ್.ನಾಗಾಭರಣ, ರಾಧ್ಯ, ಸುಪ್ರಿತಾ ಇತರರು.

ಅಜೇಯ್ ರಾವ್ ಈ ಸಿನಿಮಾ ಬಗ್ಗೆ ತುಂಬಾನೇ ವಿಶ್ವಾಸದಿಂದ ಹೇಳಿಕೊಂಡಿದ್ದರು. ಅಷ್ಟೇ ಯಾಕೆ, ಇಡೀ ದೇಶ, ಜಗತ್ತು ನೋಡುವಂತಹ ಸಿನಿಮಾ ಇದಾಗಬೇಕು. ರಾಷ್ಟ್ರಪತಿಗಳೂ ಕೂಡ ನೋಡುವಂತಹ ಚಿತ್ರವಿದು ಅಂತ ಹೇಳಿದ್ದರು. ಅವರು ಹಾಗೆ ಹೇಳಿಕೊಂಡಿದ್ದು ಕೇಳಿದ ಅನೇಕರಿಗೆ ಕುತೂಹಲ, ನಿರೀಕ್ಷೆ ಇತ್ತು. ಸಿನಿಮಾ ನೋಡಿದ ಮೇಲೆ ನಿಜವಾಗಿಯೂ ಅಜೇಯ್ ರಾವ್ ಹೇಳಿದ ಮಾತು ನಿಜ ಅನಿಸಿದ್ದು ಹೌದು. ಅಜೇಯ್ ರಾವ್ ತಮ್ಮ ಹೀರೋಯಿಸಂ ಬಿಟ್ಟು ಅದರಾಚೆ ಬಂದು ಮಾಡಿರುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು. ಅದಕ್ಕೆ ಕಾರಣ, ಸಿನಿಮಾದ ಕಥೆ. ಇದು ಸುಮ್ಮನೆ ನೋಡಿಸಿಕೊಂಡು ಹೋಗುವ ಸಿನಿಮಾ ಅಲ್ಲ, ಹೊರಬಂದ ಮೇಲೂ ಮತ್ತೆ ಮತ್ತೆ ನೋಡಬೇಕೆನಿಸುವ, ಪದೇ ಪದೇ ಕಾಡುವ ಸಿನಿಮಾ. ಅದಕ್ಕೆ ಕಾರಣ ಮತ್ತದೇ ಕಥೆ ಮತ್ತು ನಿರೂಪಣೆಯ ಶೈಲಿ.

ಕಥೆ ತುಂಬಾನೆ ಸಿಂಪಲ್. ಆದರೆ, ಅದನ್ನು ನಿರೂಪಿಸಿರುವ ರೀತಿ ಮಾತ್ರ ಎಲ್ಲರ ಮನಸ್ಸನ್ನು ಗೆಲ್ಲುವಂತಿದೆ. ನಿರ್ದೇಶಕರ ಕಥೆಯ ಎಳೆ ಚೆನ್ನಾಗಿದೆ. ಹಾಗಂತ, ಈ ರೀತಿಯ ಕಥೆ ಎಲ್ಲೂ ಬಂದಿಲ್ಲ ಅಂತವಲ್ಲ. ಈ ಹಿಂದೆ ಹೆಣ್ಣು ಮಕ್ಕಳ ಮೇಲೆ, ಚಿಕ್ಕ ಹುಡುಗಿಯರ ಮೇಲೆ ಆದಂತಹ ದೌರ್ಜನ್ಯ ಮತ್ತು ಅತ್ಯಾಚಾರ ಕುರಿತ ವಿಷಯಗಳನ್ನಿಟ್ಟುಕೊಂಡು ಸಿನಿಮಾಗಳು ಬಂದಿವೆ. ಇದೂ ಕೂಡ ಆ ಸಾಲಿನ ಸಿನಿಮಾ ಆಗಿದ್ದರೂ, ಇಲ್ಲೊಂದಷ್ಟು ವಿಶೇಷತೆ ಇದೆ. ಅದೇ ಸಿನಿಮಾದ ಹೈಲೆಟ್. ಆ ವಿಶೇಷತೆ ಏನು ಅಂತ ತಿಳಿಯುವ ಕುತೂಹಲವಿದ್ದರೆ, ಒಂದೊಮ್ಮೆ ಮಿಸ್ ಮಾಡದೆ ಸಿನಿಮಾ ನೋಡಬೇಕು.

ಸಿನಿಮಾದ ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಎಲ್ಲೂ ಬೋರ್ ಎನಿಸುವ ವಿಷಯಗಳಿಲ್ಲ. ತಮಾಷೆಯಾಗಿ, ನಗಿಸುತ್ತಲೇ ಸಾಗುವ ಕಥೆ, ದ್ವಿತಿಯಾರ್ಧ ತಿರುವೊಂದನ್ನು ಪಡೆಯುತ್ತೆ. ಅದೇ ಸಿನಿಮಾದ ಮುಖ್ಯ ಘಟ್ಟ ಎನ್ನಬಹುದು. ಇಡೀ ಸಿನಿಮಾದಲ್ಲಿ ನೋವಿದೆ, ಸಂಕಟವಿದೆ, ಭಾವನೆಗಳಿವೆ, ಸ್ವಾಭಿಮಾನವಿದೆ, ರೋಷವಿದೆ, ಹಠವಿದೆ, ಭಾವುಕತೆಯೂ ತುಂಬಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಅನ್ನೋದು ಎದ್ದು ಕಾಣುತ್ತೆ. ಇದೊಂದೇ ಕಾರಣಕ್ಕೆ ಯುದ್ಧಕಾಂಡ ಕಾಡುವ ಮತ್ತು ನೋಡುವ ಸಿನಿಮಾ ಆಗಿ ಹೊರಬಂದಿದೆ.

ಸಿನಿಮಾ ಮನರಂಜನೆ ನಿಜ. ಆದರೆ, ಅಲ್ಲೊಂದಷ್ಟು ಸಂದೇಶವಿರದಿದ್ದರೆ ಹೇಗೆ. ಅಂಥದ್ದೊಂದು ಸಂದೇಶ ಇಲ್ಲಿದೆ. ಬರೀ ನೋಡಿ ತಿಳಿಯೋ ಸಂದೇಶವಲ್ಲವದು. ಅದನ್ನು ಪಾಲಿಸಬೇಕಾದ ಧರ್ಮವೂ ಹೌದು ಎಂಬುದನ್ನಿಲ್ಲಿ ಸಾರಿ ಸಾರಿ ಹೇಳಲಾಗಿದೆ. ಇಷ್ಟಕ್ಕೂ ಅಜೇಯ್ ರಾವ್ ಅವರು ಇಂಥದ್ದೊಂದು ಕಂಟೆಂಟ್ ಆಯ್ಕೆ ಮಾಡಿಕೊಂಡು ಎಲ್ಲಿ ಎಡವಟ್ಟು ಮಾಡಿಕೊಳ್ತಾರೋ ಅನ್ನೋ ಮಾತುಗಳು ಕೇಳಿಬಂದಿದ್ದವು. ತಮ್ಮ ಯುದ್ಧಕಾಂಡ ಮೇಲೆ ವಿಶ್ವಾಸ,ಒಲವು ತುಂಬಿದ್ದರಿಂದಲೇ ಅವರು ಸಿನಿಮಾ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ ಅಂತಾನೇ ಹೇಳಬಹುದು.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಒಂದನೇ ಕ್ಲಾಸ್ ಓದುವ ಮುಗ್ಧ ಹುಡುಗಿಯೊಬ್ಬಳು ಶಾಲೆಯಿಂದ ನೇರ ಮನೆಗೆ ಬಾರದೆ ಮಿಸ್ ಆಗ್ತಾಳೆ. ಮನೆಗೆ ಬಾರದ ಮಗಳನ್ನು ಹುಡುಕಿ ಹೊರಡುವ ತಾಯಿಗೆ ಆತಂಕ. ಅತ್ತ ಮಗಳು ಎಲ್ಲಿ ಹೋದಳು, ಏನಾಯಿತು ಎಂಬ ಅನುಮಾನ. ಇವೆಲ್ಲದರ ನಡುವೆ ಅಲ್ಲೊಂದು ಪೈಶಾಚಿಕ ಕೃತ್ಯ ನಡೆದು ಹೋಗಿರುತ್ತೆ. ಕೊನೆಗೆ ಆ ವಿಷಯ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿಂದ ಕೋರ್ಟ್ ಮೆಟ್ಟಿಲೂ ಏರುತ್ತೆ. ಆ ಕೋರ್ಟ್ ಒಳಗೆ ನಡೆಯುವ ಡ್ರಾಮಾ ಸಿನಿಮಾದ ಹೈಲೆಟ್. ಆ ಹುಡುಗಿಗೆ ಏನಾಯ್ತು, ಹುಡುಗಿಯ ತಾಯಿ ಏನು ಮಾಡ್ತಾಳೆ. ಅವರಿಬ್ಬರ ಪರ ಕೋರ್ಟ್ ಒಳಗೆ ವಾದಿಸುವ ಲಾಯರ್ ಆ ಕೇಸನ್ನು ಗೆಲ್ಲುತ್ತಾನಾ? ಇಲ್ಲವಾ ಅನ್ನೋದೇ ಕಥೆ.

ಇಲ್ಲಿ ಕೋರ್ಟ್ ಡ್ರಾಮಾ ಆಗಿರುವುದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಎಲ್ಲೋ ಒಂದು ಕಡೆ ನೋಡುಗರನ್ನು ಭಾವುಕತೆಗೆ ದೂಡುತ್ತೆ. ಸಿನಿಮಾ ನೋಡಿ ಹೊರಬರುವ ಜನರ ಎದೆ ಭಾರ ಎನಿಸುತ್ತೆ. ಹೆಣ್ಣು ಹೆತ್ತ ಪೋಷಕರು ಈ ಸಿನಿಮಾ ನೋಡಲೇಬೇಕೆನಿಸೋದು ಸುಳ್ಳಲ್ಲ. ಅಷ್ಟೊಂದು ಕ್ಲಾರಿಟಿಯಿಂದ, ಅಷ್ಟೊಂದು ಪ್ರಾಮಾಣಿಕತೆಯಿಂದ ಮಾಡಿರುವ ಸಿನಿಮಾ ಅಂತ ಗೊತ್ತಾಗುತ್ತೆ. ಸಿನಿಮಾದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಚಿತ್ರಕಥೆಯಲ್ಲೂ ಕಾಣಬಹುದು. ಸ್ಕ್ರೀನ್ ಪ್ಲೇನಲ್ಲಿ ಬಿಗಿ ಹಿಡಿತವಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ. ಇಡೀ ತಂಡದ ಪ್ರಯತ್ನ ಸಾರ್ಥಕ ಎನಿಸುತ್ತೆ.

ಇನ್ನು, ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಆದ್ಯತೆ ಇದೆ. ಹಾಡು ಸದ್ದು ಮಾಡದಿದ್ದರೂ, ಇಲ್ಲಿ ಪ್ರತಿಯೊಂದು ದೃಶ್ಯದಲ್ಲಿ ಕೇಳಿಬರುವ ಹಿನ್ನೆಲೆ ಸಂಗೀತ ಹೆಚ್ಚು ಸೌಂಡು ಮಾಡುತ್ತೆ. ಅದಕ್ಕೆ ಅದರದೇ ಆದ ತೂಕವಿದೆ. ಆ ಕಾರಣಕ್ಕೂ ಸಿನಿಮಾ ಮನಸ್ಸಿಗೆ ತಟ್ಟುತ್ತೆ. ಇನ್ನು, ಸಿನಿಮಾ ವೇಗಕ್ಕೆ ಸಂಕಲನ ಕೂಡ ಹೆಗಲು ಕೊಟ್ಟಿದೆ. ಕೋರ್ಟ್ ಡ್ರಾಮಾ ಹೈಲೆಟ್ ಆಗಿರುವುದರಿಂದ ಪ್ರತಿಯೊಂದು ಪರಿಕರ ಕೂಡ ಗಮನಸೆಳೆಯುತ್ತೆ. ಕಲಾನಿರ್ದೇಶನದ ಅಂಶವೂ ಇಲ್ಲಿ ಮಾತಾಡುತ್ತೆ. ಉಳಿದಂತೆ ಸಿನಿಮಾದ ದ್ವಿತಿಯಾರ್ಧ ಸೀಟಿನಂಚಿಗೆ ಕುಳಿತು ನೋಡುವಂತಹ ಕೌತುಕ ಹೆಚ್ಚಿಸುತ್ತೆ. ಅದೇ ಸಿನಿಮಾಗಿರುವ ತಾಕತ್ತು.

ಅಜೇಯ್ ರಾವ್ ಇಲ್ಲಿ ಎಂದಿಗಿಂತಲೂ ಚೆನ್ನಾಗಿ ಕಾಣುತ್ತಾರೆ. ಲವ್ವರ್ ಬಾಯ್ ಮೂಲಕ ಇಷ್ಟವಾಗಿದ್ದ ಅವರಿಲ್ಲಿ, ಒಬ್ಬ ಸ್ವಾಭಿಮಾನಿ ವಕೀಲನಾಗಿ, ಮಾನವೀಯ ಗುಣವಿಳ್ಳ ವ್ಯಕ್ತಿಯಾಗಿ ಭಾವುಕತೆ ಹೆಚ್ಚಿಸುವಲ್ಲಿ ಕಾರಣರಾಗುತ್ತಾರೆ. ಯಾವುದೇ ಫೈಟ್ ಇಲ್ಲ. ಆದರೆ, ಕೋರ್ಟ್ ಒಳಗೆ ವಾದಿಸುವ ಮಾತಿನ ಫೈಟ್ ಇಡೀ ಸಿನಿಮಾವನ್ನು ಹಿಡಿದಿಟ್ಟುಕೊಳ್ಳುವಂತಿದೆ. ಇನ್ನು ತಾಯಿ ಪಾತ್ರದಲ್ಲಿ ಅರ್ಚನಾ ಜೋಯಿಸ್ ಮಿಂಚಿದ್ದಾರೆ. ನಟನೆ ಮೂಲಕ ಅಳಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಾತ್ರವೇ ತಾವಾಗಿ ಜೀವಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ಅಭಿನಯವಂತೂ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತೆ. ಅವರ ನಟನೆ, ಹಾವಭಾವ ಎಲ್ಲವೂ ಚಪ್ಪಾಳೆ ಗಿಟ್ಟಿಸುವಂತಿದೆ. ಉಳಿದಂತೆ ನಾಗಾಭರಣ ಅವರೂ ಇಲ್ಲಿ ಹೈಲೆಟ್. ರಾಧ್ಯಾ, ಸುಪ್ರಿತಾ ಕೂಡ ತಮ್ಮ ಮಾತ್ರಕ್ಕೆ ಮೋಸ ಮಾಡಿಲ್ಲ. ಕ್ಯಾಮೆರಾ ಕೈಚಳಕ ಯುದ್ಧಕಾಂಡದ ರೋಚಕತೆಗೆ ಸಾಕ್ಷಿಯಾಗಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ರವಿ ಬಸ್ರೂರು ತಂಡದ ಸುಂದರ ಇತಿಹಾಸ!

ಚಿತ್ರ: ವೀರ ಚಂದ್ರಹಾಸ
ಪರಿಶ್ರಮ: ರವಿ ಬಸ್ರೂರು ಮತ್ತು ತಂಡ
ತಾರಾಗಣ: ಶಿಥಿಲ್ ಶೆಟ್ಟಿ ಐರ್ ಬೈಲ್, ಪ್ರಸನ್ನ ಶೆಟ್ಟಿಗಾರ್, ಮಂದಾರ್ತಿ, ನಾಗಶ್ರೀ, ಉದಯ್ ಕಡಬಾಳ್, ಶಿವರಾಜಕುಮಾರ್, ನವೀನ್ ಶೆಟ್ಟಿ ಇತರರು.

ಯಕ್ಷಗಾನದ ವೇಷಭೂಷಣವೇ ಚಂದ. ಅದರಲ್ಲೂ ಕರಾವಳಿ ಭಾಗದಲ್ಲಿ ಮಾತ್ರ ಕಂಡುಬರುವ ಯಕ್ಷಗಾನದ ಕಲೆ ಎಲ್ಲೆಡೆಯೂ ವಿಸ್ತಾರವಾಗಬೇಕು ಎಂಬ ಉದ್ದೇಶದಿಂದ ರವಿ ಬಸ್ರೂರು ಮತ್ತು ತಂಡ ಒಳ್ಳೆಯ ಕಥೆಯನ್ನು ತೆರೆಮೇಲೆ ಅನಾವರಣಗೊಳಿಸಿದೆ.

ಇಂತಹ ಅಪರೂಪದ ಪ್ರಯತ್ನ ಮೆಚ್ಚಲೇಬೇಕು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಬರುವ ಹಾಡಲ್ಲಿ ಯಕ್ಷಗಾನದ ಕುಣಿತ ಬಳಸಲಾಗುತ್ತಿತ್ತು. ಕರಾವಳಿ ಭಾಗದಲ್ಲಿ ನಿರಂತರವಾಗಿ ಯಕ್ಷಗಾನದ ಪ್ರಸಂಗಗಳು ನಡೆಯುತ್ತವೆ. ಆದರೆ ಮೊದಲ‌ ಸಲ ತೆರೆಗೆ ಯಕ್ಷಗಾನ ಮೂಲಕ ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸ ಕಥೆಯನ್ನು ತರಲಾಗಿದೆ. ಯಕ್ಷಗಾನಕ್ಕೆ ಸಿನಿಮಾ ಸ್ಪರ್ಶ ನೀಡಿರುವುದು ಖುಷಿಯ ಸಂಗತಿ.

ಇಂತಹ ಪ್ರಯೋಗ ಅಪರೂಪ. ಇತಿಹಾಸದ ಕಥೆಯನ್ನು ತೆರೆಗೆ ತರುವುದು ಸುಲಭವಲ್ಲ. ರವಿ ಬಸ್ರೂರು ಮತ್ತು ತಂಡ ಆ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ಮಾಡಿದೆ. ಇದು ನಿಜಕ್ಕೂ ದಾಖಲೆಯಾಗಿ ಉಳಿಯಬಲ್ಲ ಚಿತ್ರ.

ಇದು ಪೌರಾಣಿಕ ಕಥೆ ಇರುವಂತಹ ರೂಪಕ. ಅದನ್ನು ಸಿನಿಮಾಗೆ ಅಳವಡಿಸಿರುವ ರವಿ ಬಸ್ರೂರು ಅವರ ಜಾಣತನ ಮತ್ತು ಪರಿಶ್ರಮ ಮೆಚ್ಚಬೇಕು.

ಅಂದಹಾಗೆ ಕಥೆ ಬಗ್ಗೆ ಹೇಳುವುದಾದರೆ, ಅನಾಥ ಬಾಲಕನೊಬ್ಬ ಹೇಗೆ ವೀರ ಚಂದ್ರಹಾಸನಾಗಿ ಬೆಳೆಯುತ್ತಾನೆ. ನಂತರ ಅವನ ಶೌರ್ಯದ ಕಥೆ ಹೇಗೆಲ್ಲಾ ಇರುತ್ತೆ ಅನ್ನೋದೇ ಕಥೆ. ಅದನ್ನು ಅಷ್ಟೇ ರೋಚಕವಾಗಿ ಚಿತ್ರಿಸಲಾಗಿದೆ.

ಒಂದು ಕಥೆಗೆ ಹೊಸ ರೂಪ ಕೊಟ್ಟು, ತದೇಕಚಿತ್ತದಿಂದ ನೋಡುವಂತೆ ಮಾಡಿರುವ ರವಿ ಬಸ್ರೂರು ತಂಡದ ಕೆಲಸ ಒಪ್ಪಬೇಕು.

ಇಲ್ಲಿ ಹೆಚ್ಚಾಗಿ ವಿಎಫ್ ಎಕ್ಸ್ , ಗ್ರಾಫಿಕ್ಸ್ ಬಳಸಲಾಗಿದೆ. ಅದೇ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಕಥೆಯಲ್ಲಿ ಬರುವ ರಾಜರ ಸಂಸ್ಥಾನಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇದೊಂದು ರೀತಿ ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಬಹುತೇಕ ಗ್ರಾಫಿಕ್ಸ್ ಜೊತೆ ಅಲ್ಲಲ್ಲಿ ಸೆಟ್ ಹಾಕಿ ಹಿಸ ಕಲ್ಪನೆಯ ಲೋಕವನ್ನೇ ಸೃಷ್ಟಿಸಲಾಗಿದೆ.

ಇನ್ನು ಸಿನಿಮಾದ ಮೊದಲರ್ಧ ನಿಧಾನವಾಗಿ ಸಾಗುತ್ತೆ.‌ದ್ವಿತಿಯಾರ್ಧ ಬೇರೆ ಆಯಾಮ ಪಡೆದುಕೊಳ್ಳುತ್ತೆ. ಸಿನಿಮಾದ ವೇಗಕ್ಕೆ ಚಿತ್ರಕಥೆ ಮುಖ್ಯವೆನಿಸಿದೆ. ಇನ್ನು ಸಂಗೀತ ಸಿನಿಮಾದ ಜೀವಾಳ. ಅದೇ ಈ ಸಿನಿಮಾದ ಶಕ್ತಿ ಎನ್ನಬಹುದು. ಇನ್ನು ನಿರೂಪಣೆ ಕೂಡ ನೋಡಿಸಿಕೊಂಡು‌ ಹೋಗುವಂತೆ ಮಾಡುವ ಮೂಲಕ ಸುಂದರ ಇತಿಹಾಸವನ್ನು ಕಟ್ಟಿಕೊಡಲಾಗಿದೆ.

ಇಡೀ ಸಿನಿಮಾ ಯಕ್ಷಗಾನದ ವೇಷಭೂಷಣದಲ್ಲಿ ಸೊಗಸಾಗಿ ಮೂಡಿಬಂದಿದೆ. ಅದ್ಭುತ ಕಲಾವಿದರ ದನಿಯಲ್ಲಿ ಬರುವ ಪದ್ಯಗಳು ಸಿನಿಮಾದ ರೋಚಕತೆಗೆ ಸಾಕ್ಷಿ. ಚಿತ್ರಕಥೆಗೂ ಆ ದನಿಯ ಹಾಡುಗಳು ವೇಗ ಹೆಚ್ಚಿಸಿವೆ.
ಮುಖ್ಯವಾಗಿ ಕಾಳಿಂಗ ನಾವಡ ಅವರ ದನಿ ಕೂಡ ಪದ್ಯವೊಂದರಲ್ಲಿದೆ. ಅದನ್ನೂ ಇಲ್ಲಿ ಬಳಸುವ ಮೂಲಕ ಗೌರವಿಸಲಾಗಿದೆ. ಯಕ್ಷಗಾನ ಅಂದರೆ ಹೆಚ್ಚು‌ ಕುಣಿತ. ಅದಕ್ಕೆ ಇಲ್ಲಿ ಅಷ್ಟಾಗಿ ಜಾಗವಿಲ್ಲ. ಕಥೆ ಹೆಚ್ಚು ಕುತೂಹಲ ಕೆರಳಿಸುತ್ತಾ ಹೋಗುತ್ತೆ.
ಯಕ್ಷಗಾನದ ಕುಣಿತ ಇಲ್ಲವೆಂಬ ಸಣ್ಣ ಬೇಸರ ಬಿಟ್ಟರೆ ಬೇರೆ ಯಾವ ದೋಷವೂ ಇಲ್ಲಿಲ್ಲ.

ಚಂದ್ರಹಾಸ ಮತ್ತು ವಿಷಯೆ ಅವರ ಮದುವೆ ಪ್ರಸಂಗ ಕೊಂಚ ಬೋರು ಎನಿಸುತ್ತೆ. ಉಳಿದಂತೆ ಸಿನಿಮಾ ಕಥೆ ಹೊಸತನ್ನೇ ಸೃಷ್ಟಿಸಿದೆ.

ಮುಖ್ಯವಾಗಿ ಇಲ್ಲಿ ಸಂಭಾಷಣೆ ಹೈಲೆಟ್. ರವೀಂದ್ರ ದೇವಾಡಿಗ ಹಾಗು ಶ್ರೀಧರ ಅವರ ಹಾಸ್ಯ ಮಾತುಗಳ ಬರಹ ನಗೆ ಬುಗ್ಗೆ ಎಬ್ಬಿಸುತ್ತವೆ.

ಕಿರಣ್ ಕುಮಾರ ಅವರ ಕ್ಯಾಮರಾ ಕೈಚಳಕ ಕೆಲಸ ಮಾಡಿದೆ. ಕಲಾ ನಿರ್ದೇಶಕ ಪ್ರಭು ಬಡಿಗೇರ್ ಕೆಲಸ ಗಮನ ಸೆಳೆಯುತ್ತೆ.

ಇನ್ನು ಇಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಏನೆಂದರೆ ಎ ಐ ತಂತ್ರಜ್ಞಾನ. ಆ ಮೂಲಕ ಯಕ್ಷಗಾನ ವೇಷದಲ್ಲಿ ಪುನೀತ್ ರಾಜಕುಮಾರ್ ದೃಶ್ಯ ಸೊಗಸಾಗಿದೆ. ಸಿಂಗನಲ್ಲೂರು ಸಂಸ್ಥಾನದ ರಾಜನಾಗಿ ರಾಜಕುಮಾರ್ ಅವರನ್ನು ಸೃಷ್ಟಿಸಿರುವುದು ವಿಶೇಷ ಎನಿಸುತ್ತೆ.

ಸಿಂಗನಲ್ಲೂರು ಸಂಸ್ಥಾನದ ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿ ಪಾತ್ರದಲ್ಲಿ ಶಿವರಾಜಕುಮಾರ್ ಕೂಡ ಇಷ್ಟವಾಗುತ್ತಾರೆ. ದುಷ್ಟಬುದ್ಧಿ ಪಾತ್ರದ ಮೂಲಕ ಪ್ರಸನ್ನ ಶೆಟ್ಟಿಗಾರ್ ಗಮನ ಸೆಳೆಯುತ್ತಾರೆ. ಚಂದ್ರಹಾಸನಾಗಿ ಶಿಥಿಲ್ ಶೆಟ್ಟಿ ಚಪ್ಪಾಳೆ ಗಿಟ್ಟಿಸುತ್ತಾರೆ. ಉಳಿದಂತೆ ಇಲ್ಲಿನ ಕ್ಲೈಮ್ಯಾಕ್ಸ್ ನಲ್ಲಿ ಸಮುದ್ರ ಸೇನನಾಗಿ ಚಂದನ್ ಶೆಟ್ಟಿ, ಗರುಡಾಕ್ಷನಾಗಿ ಗರುಡರಾಮ್ ಪಾತ್ರಗಳೂ ಬರುತ್ತವೆ. ಈ ಕಥೆ ಮುಂದಿನ ಭಾಗಕ್ಕೂ ವಿಸ್ತರಿಸಲಾಗಿದೆ.

ಕೊನೆ ಮಾತು: ಇಂತಹ ಪ್ರಯೋಗದ ಸಿನಿಮಾಗೆ ಮೆಚ್ಚುಗೆ ಕೊಡಬೇಕು. ದಾಖಲೆಯಾಗಿ ಉಳಿಯುವಂತಹ ಪ್ರಯತ್ನ ಹೆಚ್ಚಾಗಬೇಕೆಂಬುದು ಸಿನಿಮಾ ನೋಡಿ ಹೊರಬಂದವರ ಮಾತು.

Categories
ಸಿನಿ ಸುದ್ದಿ

ಫೈರ್ ಫ್ಲೈ ಟ್ರೇಲರ್ ಬಂತು: ಇದು ನಿವೇದಿತಾ ನಿರ್ಮಾಣದ ಚಿತ್ರ

ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಗೊತ್ತಾ ಫೈರ್ ಫ್ಲೈ ಟ್ರೇಲರ್?

ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ ಸಿನಿಮಾ ಟೀಸರ್‌ ಹಾಗೂ ಹಾಡುಗಳ ಮೂಲಕ ಈಗಾಗಲೇ ಇಂಡಸ್ಟ್ರೀಯಲ್ಲಿ ಬಜ್‌ ಕ್ರಿಯೇಟ್‌ ಮಾಡಿದೆ. ಅಣ್ಣಾವ್ರ ಜನ್ಮದಿನ ಅಂದ್ರೆ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ನಿನ್ನೆ ಶಿವಣ್ಣನ ನಿವಾಸದಲ್ಲಿ ಟ್ರೇಲರ್‌ ಬಿಡುಗಡೆ ಕಾರ್ಯ್ರಕಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೈರ್‌ ಫ್ಲೈ ಇಡೀ ತಂಡ ಹಾಗೂ ಶಿವಣ್ಣ ದಂಪತಿ ಭಾಗಿಯಾಗಿ ಹೊಸಪ್ರತಿಭೆಗಳ ಕನಸಿಗೆ ಬೆನ್ನುತಟ್ಟಿದ್ದಾರೆ.

ಟ್ರೇಲರ್‌ ಬಿಡುಗಡೆ ಬಳಿಕ ಶಿವಣ್ಣ ಮಾತನಾಡಿ, ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್‌, ಡ್ಯುಯೇಟ್‌ ಸಾಂಗ್‌ ಮಾಡಬಹುದು. ಆದರೆ ಫೈರ್‌ ಫ್ಲೈ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರ. ವಂಶಿ ಒಳ್ಳೆ ಕಥೆ ಮಾಡಿದ್ದಾರೆ.

ಒಳ್ಳೆ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್‌ ಸಂಗೀತ ಬಗ್ಗೆ ಮಾತನಾಡುವ ಆಗಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು. ಹೊಸ ಅಲೆ ಬರಬೇಕು ಎಂಬ ಉದ್ದೇಶದಿಂದ ನನ್ನ ಆಸೆ. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಕರೆದುಕೊಂಡು ಹೋಗಬೇಕು. ಸಿನಿಮಾ ಹೇಗೆ ಹೋಗುತ್ತದೆ. ಬಿಡುತ್ತದೆ ಅದು ಎರಡನೇಯದ್ದು. ಆದರೆ ನಮ್ಮ ಪ್ರಯತ್ನ ಇರಬೇಕು. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್‌ ಆಗಿ ತೋರಿಸಿದ್ದಾರೆ.

ಗೀತಾ ಶಿವರಾಜ್‌ ಕುಮಾರ್‌ ಮಾತನಾಡಿ, ಹೊಸ ತಂಡ ಹೊಸ ಪ್ರಯತ್ನ ಮಾಡಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು. ಈ ಚಿತ್ರವನ್ನು ಕುಮಾರ್‌ ಅವರು ಡಿಸ್ಟ್ರೀಬ್ಯೂಟ್‌ ಮಾಡುತ್ತಿದ್ದಾರೆ. ಅದಕ್ಕೆ ತುಂಬಾ ಧನ್ಯವಾದ. ವಂಶಿ ಹೇಳಿದ ಕಥೆ ಕೇಳಿ ಅವಳಿಗೆ ಅವರ ತಂದೆಗೂ ಇಷ್ಟವಾಯ್ತು. ಅದು ಈಗ ಇಲ್ಲಿವರೆಗೂ ಬಂದು ನಿಂತಿದೆ.

ನಿರ್ಮಾಪಕಿ ನಿವೇದಿತಾ ಶಿವರಾ ಕುಮಾರ್‌, ಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ನಾವು ಅದಕ್ಕೆ ಒಳ್ಳೆ ಸಿನಿಮಾ ಕೊಟ್ಟರೆ ಖಂಡಿತ ಬರುತ್ತಾರೆ. ಏಪ್ರಿಲ್ 24 ಸಿನಿಮಾ ರಿಲೀಸ್‌ ಆಗುತ್ತಿದೆ. ಎಲ್ಲರೂ ಥಿಯೇಟರ್‌ ನಲ್ಲಿಯೇ ಫೈರ್‌ ಫ್ಲೈ ಸಿನಿಮಾ ನೋಡಿ ಎಂದರು.

ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್‌ ಫ್ಲೈ ಸಿನಿಮಾದಲ್ಲಿ ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. . ಜಯ್ ರಾಮ್ ಚಿತ್ರದ ಸಹ-ನಿರ್ದೇಶಕ. ಅಭಿಲಾಷ್ ಕಳತ್ತಿ ಅವರ ಕ್ಯಾಮರಾ ವರ್ಕ್, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರಕ್ಕಿದೆ.

ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್‌ ಫ್ಲೈ ಸಿನಿಮಾ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ. ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಆದರೆ, ಕಿಂಗ್ಸ್ ಅನ್ನೋದು ಇಲ್ಲಿ ಶಿವಣ್ಣನಿಗೆ ಸೂಟೇಬಲ್ ಆಗಿದೆ. ಶಿವಣ್ಣ ಕಿಂಗ್ ಅಲ್ವೇ? ಅದಕ್ಕೇನೆ ಈ ಹೆಸರು ಇಟ್ಟಂತೇನೆ ಇದೆ. ಆದರೆ, ಶಿವಣ್ಣ ಇಂತಹ ರೋಲ್ ಯಾಕೆ ಮಾಡಿದ್ರು ಅನ್ನೋದನ್ನು ನೀವು ಥಿಯೇಟರ್‌ ನಲ್ಲಿಯೇ ನೋಡಬೇಕು.

Categories
ಸಿನಿ ಸುದ್ದಿ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ದನ್ ನಿಧನ

ಕನ್ನಡ ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ಧನ್ (76) ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ.

ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.

800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ಧನ್ ನಟಿಸಿದ್ದರು. . ರಂಗಭೂಮಿ, ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದರು.

ಕಲಾವಿದರಾಗಿದ್ದ ಅವರು ಆರ್ಥಿಕವಾಗಿ ಅಷ್ಟೇನೂ ಸದೃಢರಾಗಿರಲಿಲ್ಲ.

ಅವರ ಹೆಸರ ಮುಂದೆ ಬ್ಯಾಂಕ್ ಹೆಸರಿತ್ತು. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಏನೂ ಇರುತಗತಿರಲಿಲ್ಲ ಅಂತ ಹಿಂದೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಆರಂಭದಲ್ಲಿ ಬ್ಯಾಂಕ್ ಕೆಲಸದಲ್ಲಿದ್ದರು. ಅದರ ಹೊಯೆಯಲ್ಲೇ ಜನಾರ್ಧನ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಅವಕಾಶಗಳು ಹೆಚ್ಚಾದಾಗ ಅನಿವಾರ್ಯವಾಗಿ ಬ್ಯಾಂಕ್ ಕೆಲಸ ಬಿಡುವಂತಾಯಿತು. 90ರ ದಶಕದ ಆರಂಭದಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಜನಾರ್ಧನ್ 11 ವರ್ಷಗಳ ಬಳಿಕ ಕೆಲಸ ಬಿಟ್ಟು ಸಂಪೂರ್ಣವಾಗಿ ಸಿನಿಮಾಗಳಲ್ಲಿ ನಿರತರಾಗಿದ್ದರು.

ಆಗ ಜನಾರ್ಧನ್ ಎಂಬ ಹೆಸರಿನ ಸಾಕಷ್ಟು ಜನ ಆಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ವಿಭಿನ್ನವಾಗಿರಲಿ, ಗುರುತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಂಡಿದ್ದರು.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ಅನಿರುದ್ಧ್ ಮ್ಯೂಸಿಕ್ ಜಾತ್ರೆ: ಕೆವಿಎನ್ ನಡೆಸುವ ಸಂಗೀತ ಸಂಜೆಯ ಟಿಕೆಟ್ ಸೋಲ್ಡ್ ಔಟ್

60 ನಿಮಿಷ 16 ಸಾವಿರ ಟಿಕೆಟ್ ಸೋಲ್ಡ್ ಔಟ್…ಮೇ.31ಕ್ಕೆ ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಜೆ!

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ.
ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದೆ. ಅದೂ ಕೂಡ ನಮ್ಮ ಬೆಂಗಳೂರಿಗೆ. ಅನಿರುದ್ಧ್ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮ್ಯೂಸಿಕ್ ಜಾತ್ರೆ ಮಾಡಲು ರೆಡಿಯಾಗಿದ್ದಾರೆ.


ಮೇ 31ರಂದು ಟೆರಾಫಾರ್ಮ್ ಅರೇನಾದಲ್ಲಿ ನಡೆಯುವ ಮ್ಯೂಸಿಕ್ ಕನ್ಸರ್ಟ್ ಈಗಾಗಲೇ ಬೃಹತ್ ದಾಖಲೆ ಕ್ರಿಯೇಟ್ ಮಾಡಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ನ್ನು ಕೆವಿಎನ್ ಸಂಸ್ಥೆ ಪ್ರಸ್ತುಪಡಿಸಿದೆ. ವಿಶೇಷ ಅಂದರೆ ʼಅನಿರುದ್ಧ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್ಗಳು ಕೇವಲ 60 ನಿಮಿಷದಲ್ಲೇ ಮಾರಾಟವಾಗಿದೆ ʼ ಅಂತ ಕೆವಿಎನ್ ಸಂಸ್ಥೆ ನಿರ್ಮಾತೃ ವೆಂಕಟ ಕೆ ನಾರಾಯಣ ಖಚಿತಪಡಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಜೆಗೆ ಕಾದಿದ್ದ ಸಿಲಿಕಾನ್ ಸಿಟಿಯ ಮಂದಿ, ವೇಗವಾಗಿ ಟಿಕೆಟ್ಸ್ಗಳನ್ನು ಖರೀದಿಸಿದ್ದಾರೆ. ಬೀಸ್ಟ್ ಮ್ಯೂಸಿಕ್ ಮೂಡ್ ಗೆ ಸಿಲಿಕಾನ್ ಸಿಟಿ ಮಂದಿ ಯಾವ ರೀತಿ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ.

ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಸರ್ಪ್ರೈಸ್ಗಳು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ.

Categories
ಸಿನಿ ಸುದ್ದಿ

ಜೀ ವಾಹಿನಿ ಹೊಸ ಸಾಹಸ: ಅಯ್ಯನ ಮನೆ ಮಿನಿ ವೆಬ್ ಸೀರೀಸ್ ಶುರು

25ರಿಂದ ʼಅಯ್ಯನ ಮನೆʼಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್! ಇದು ರಮೇಶ್ ಇಂದಿರಾ ನಿರ್ದೇಶನದ ಸೀರೀಸ್

ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದು ZEE5. ಹಲವು ಸೂಪರ್ ಹಿಟ್ ಸಿನಿಮಾಗಳು ಈ ಒಟಿಟಿ ಫ್ಲಾರ್ಟ್ ನಲ್ಲಿ ಲಭ್ಯವಿದೆ. ಇದೀಗ ZEE5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಕನ್ನಡ ಸಿನಿಮಾಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ನ್ನು ಪರಿಚಯಿಸಿದೆ. ZEE5 ನಿಂದ ಬರ್ತಿರುವ ಮೊದಲ ಕನ್ನಡ ಮಿನಿ ವೆಬ್ ಸೀರೀಸ್ ನ್ನು ಖ್ಯಾತ ನಿರ್ದೇಶಕ ಹಾಗೂ ಕಲಾವಿದರ ರಮೇಶ್ ಇಂದಿರಾ ನಿರ್ಮಾಣ ಮಾಡಿದ್ದಾರೆ. ಆ ಸೀರೀಸ್ ಗೆ ಅಯ್ಯನ ಮನೆ ಎಂದು ಟೈಟಲ್ ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ.

ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ʼಅಯ್ಯನ ಮನೆʼ ವೆಬ್ ಸೀರೀಸ್ ಗೆ ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಘರ್ಷಿಸುವ ಕಥೆಯನ್ನೊಳಗೊಂಡಿದ್ದು, ಇದೇ ತಿಂಗಳ 25ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.


ಚಿಕ್ಕಮಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರೀ ಕಥೆಯೊಳಗೊಂಡಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಎಕ್ಸೈಟ್ ಆಗುವಂತೆ ಮಾಡುತ್ತದೆ. ಈಗಾಗಲೇ ಹಲವು ಹಿಟ್ ಚಿತ್ರ ಕೊಟ್ಟುರುವ ರಮೇಶ್ ಇಂದಿರಾ ಹೊಸ ಬಗೆಯ ಕಥೆಯ ಮೂಲಕ ಒಟಿಟಿ ಪ್ರೇಕ್ಷಕರನ್ನು ತಲುಪಲಿದ್ದಾರೆ.

ಅಯ್ಯನ ಮನೆ ವೆಬ್ ಸೀರೀಸ್ ಬಗ್ಗೆ ನಿರ್ದೇಶಕರಾದ ರಮೇಶ್ ಇಂದಿರಾ ಮಾತನಾಡಿ, ಅಯ್ಯನ ಮನೆ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಫ್ಯಾಮಿಲಿ ಕಥೆಯೊನ್ನೊಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ಅಯ್ಯನ ಮನೆ ವೆಬ್ ಸರಣಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರುವಂತೆ ಮಾಡುತ್ತದೆ ಎಂದರು.

ಜಾಜಿ ಪಾತ್ರ ಮಾಡಿರುವ ಖುಷಿ ರವಿ ಮಾತನಾಡಿ, ಮುಗ್ದತೆ, ಗಂಡನ ಪ್ರೀತಿಯ ಹೆಂಡತಿ, ಸಂಪ್ರದಾಯಕ್ಕೆ ನಡೆದುಕೊಳ್ಳುವ ಹೆಣ್ಣು ಮಗಳಾಗಿ ನಟಿಸಿದ್ದೇನೆ. ಇದೊಂದು ಎಮೋಷನ್ ಪಯಣ. ಜೊತೆಗೆ ಅನೇಕ ರಹಸ್ಯಗಳ ಕಥಾಹಂದರ. ನಾನು ವೆಬ್ ಸರಣಿ ನೋಡಲು ಕಾತರಳಾಗಿದ್ದೇನೆ ಎಂದು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ವರ್ಣವೇದಂ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಹಾಡಿಗೆ ಸೋನು ನಿಗಂ ದನಿ

ತಮ್ಮ ಅಮೋಘ ಕಂಠಸಿರಿಯಿಂದ ವಿಶ್ವದಾದ್ಯಂತ ಹೆಸರು ಮಾಡಿರುವ ಜನಪ್ರಿಯ ಗಾಯಕ ಸೋನು ನಿಗಂ, “ನಾನು ಮತ್ತು ಗುಂಡ” ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ವರ್ಣವೇದಂ”‌ ಚಿತ್ರಕ್ಕಾಗಿ ” ಓ ವೇದ ಓ ವೇದ” ಎಂಬ ಸುಂದರ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಗಗನ್ ಭಡೇರಿಯಾ ಸಂಗೀತ ನೀಡಿರುವ ಈ ಹಾಡನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರೆ ಬರೆದಿದ್ದಾರೆ. ಇತ್ತೀಚಿಗೆ ಈ ಹಾಡಿನ ಧ್ವನಿಮುದ್ರಣ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣವಾಗಲಿದೆ. ಭೂಷಣ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಶ್ರೀನಿವಾಸ್ ತಿಮ್ಮಯ್ಯ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭೀಮೇಶ್, ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ಗೋಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಲರ್ ಮಾಫಿಯಾ ಕುರಿತಾದ ಕಥಾಹಂದರ ಹೊಂದಿರುವ ಕಾರಣ ಈ ಚಿತ್ರಕ್ಕೆ “ವರ್ಣವೇದಂ” ಎಂದು ಶೀರ್ಷಿಕೆ ಇಡಲಾಗಿದೆ.

ಚಿತ್ರದಲ್ಲಿ ನಾಯಕಿಯ ಹೆಸರು ವರ್ಣ ಹಾಗೂ ನಾಯಕನ ಹೆಸರು ವೇದ ಎಂದು ಹೇಳಿದ್ದಾರೆ‌. ನೈಋತ್ಯ ಹಾಗೂ ಪ್ರತೀಕ್ಷ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹೆಸರಾಂತ ಕಲಾವಿದರ ತಾರಾಬಳಗವಿರುವ “ವರ್ಣವೇದಂ” ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣವಿದೆ.

ಗಗನ್ ಭಡೇರಿಯಾ ಸಂಗೀತ ಸಂಯೋನೆಯಲ್ಲಿ ಆರು ಸುಮಧುರ ಹಾಡುಗಳು ಚಿತ್ರದಲ್ಲಿದ್ದು, ಸೋನು ನಿಗಂ ಸೇರಿದಂತೆ ಜನಪ್ರಿಯ ಗಾಯಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಗ್ಲೋಬಲ್’ ಲೆವೆಲಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ: .ಪಾಕಿಸ್ತಾನ ಪ್ರವಾಸ ಮಾಡಿದ ಮೊದಲ ಯೂಟ್ಯೂಬರ್!

ಇದು ಸೋಷಿಯಲ್ ಮೀಡಿಯಾ ಜಮಾನ..ಮನೆ ಮನೆಯಲ್ಲಿಯೂ ಯೂಟ್ಯೂಬ್ ಗಳ ಹಂಗಾಮ. ಇಂತಹ ಕಾಲಘಟ್ಟದಲ್ಲಿ ಯೂಟ್ಯೂಬರ್ ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ ಮಾಡಿದ್ದಾರೆ.

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಪಾಕಿಸ್ತಾನದಲ್ಲಿ ಸುತ್ತಿ ವಿಡಿಯೋ ಮಾಡಿದ ಮೊದಲ ಯೂಟ್ಯೂಬರ್ ಎಂಬ ಖ್ಯಾತಿ ಗ್ಲೋಬಲ್ ಕನ್ನಡಿಗ ರಾಮ್ ಗೆ ಸಿಕ್ಕಿದೆ. ಇನ್ನೂ ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.

ಫೆಬ್ರವರಿ 2025 ಭಾರತದ ಅತ್ತಾರಿ ಗಡಿಯಿಂದ ಪಾಕಿಸ್ತಾನದ ಅಫೀಷಿಯಲ್ ವೀಸಾ ಒಂದಿಗೆ ಪಾಕಿಸ್ತಾನದ ವಾಗಾ ಗಡಿಯ ಕಡೆಗೆ ಕಾಲಿಟ್ಟು ಅಲ್ಲಿಂದ 22 kms ದೂರದಲ್ಲಿ ಇರುವ ಲಾಹೊರ್ ನಗರಕ್ಕೆ ತಲುಪಿದೆ. ಅಂದಿನ ಸಂಜೆ ಸಿಖ್ ಸಮುದಾಯದ ದೇರಾ ಸಹಿಬ್ ಗುರುದ್ವಾರವನ್ನು ಅನ್ವೇಷಸಿ ನಂತರ ಲಾಹೋರ್ ನಗರದ ಸುಪ್ರಸಿದ್ಧ ಫುಡ್ ಸ್ಟ್ರೀಟ್ ಸುತ್ತಾಡಿ, ಅಲ್ಲಿಂದ ಬಹಳ ವಿಶೇಷವಾದ ಹವೇಲಿ ರೆಸ್ಟುರೆಂಟ್ ನಲ್ಲಿ ಬಾದ್ಶಾಹಿ ಮಸೀದಿಯ ವ್ಯೂ ನಲ್ಲಿ ಕುಳಿತು ರಾತ್ರಿಯ ಉಪಹಾರ ಮಾಡಿದೆ.

ಎರಡೇನೆಯ ದಿನ ಲಾಹೋರ್ ನ ಗಲ್ಲಿ ಗಳನ್ನು ಸುತ್ತಿ ಅಲ್ಲಿನ ಲೋಕಲ್ ಜೀವನವನ್ನು ಗಮನಿಸಿದ್ದು. ಅಂದು ಚಾಂಪಿಯನ್ಸ್ ಟ್ರೋಫಿ ಭಾರತದ ಹಾಗು ಪಾಕಿಸ್ತಾನದ ಪಂದ್ಯ ಎಂಜಾಯ್ ಮಾಡಿ, ಅಂದಿನ ದಿನ ಅಲ್ಲಿನ ಲೋಕಲ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಅವರ ಜೊತೆ ಮಾತಾಡಿದ್ದು ವಿಶೇಷವಾಗಿತ್ತು.

ನಮ್ಮ ಜೊತೆಯಲ್ಲಿ ಲಾಹೋರ್ ಪೊಲೀಸ್ ನ 24/7 ಬಂದೋಬಸ್ತ್ ಇರುತಿತ್ತು, ಪೊಲೀಸ್ ಕೈಯಲ್ಲಿ ಎಕೆ 47 ಬಂದೂಕು, ಪ್ರತಿ ಊರಿನ ಬದಲಾವಣೆಯ ದಿನ ಅಲ್ಲಿನ ಲೋಕಲ್ ಪೊಲೀಸ್ ಸ್ಟೇಷನ್ ಹೋಗಿ ನಾನು ರಿಜಿಸ್ಟರ್ ಮಾಡಬೇಕಾದದ್ದು ಕಡ್ಡಾಯವಾಗಿತ್ತು. ಲಾಹೋರ್ ನ ರಂಗಲೀಲಾ ಆಟೋದಲ್ಲಿ ಓಡಾಡಿದ್ದು ಮರೆಯಲಾರದ ಅನುಭವ. ಪಾಕಿಸ್ತಾನದ ಸರ್ವೇ ಸಾಮಾನ್ಯ ಜನರು ತುಂಬಾ ಖುಷಿಯಾಗಿದ್ದರು. ನಾನು ಭಾರತೀಯ ಅಂತ ತಿಳಿದಮೇಲೆ. ಒಬ್ಬರು ಕೂಡಾ ಕೋಪ ಆವೇಶ ತೋರಿಸಲಿಲ್ಲ.

ಪಾಕಿಸ್ತಾನದ katasraj ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದು ನೆನಪಿನಲ್ಲಿ ಉಳಿಯುವಂತಹದ್ದು. ಅಲ್ಲಿ ಭಗವಾನ್ ಕೃಷ್ಣ ಸ್ಥಾಪಿಸಿರುವ ಶಿವಲಿಂಗಕ್ಕೆ ಕರ್ನಾಟಕದ ಪಂಚೆ ಸಿಲ್ಕ್ ಶರ್ಟ್ ಹಾಕಿ ಗ್ಲೋಬಲ್ ಕನ್ನಡಿಗ ಪೂಜೆ ಮಾಡಿದ್ದು ಬಹಳ ವಿಶೇಷ. ಅಲ್ಲಿ ಶ್ರೀ ರಾಮನ ದೇವಸ್ಥಾನ, ಹನುಮಂತನ ದೇವಸ್ಥಾನ ಕೂಡಾ ಭೇಟಿ ನೀಡಿ ಆಶೀರ್ವಾದ ಪಡೆದಿದ್ದು ವಿಶೇಷ.


ನಂತರ ಹೋಗಿದ್ದು ಒಂದು ಪಾಕಿಸ್ತಾನಿ ಹಳ್ಳಿಗೆ, ಅಲ್ಲಿನ ಜನರ ನಿತ್ಯ ಜೀವನ, ವ್ಯಾಪಾರ ವಹಿವಾಟು ತಿಳಿದು ಅವರ ಜೀವನ ಶೈಲಿ ಅರಿತಿದ್ದು ವಿಶೇಷ . ನಂತರ ಹೋಗಿದ್ದು ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಬಾದ್ ಗೆ, ಅಲ್ಲಿಯ ಮೆಲೋಡಿ ಮಾರುಕಟ್ಟೆ, ಲೋಕಲ್ ಸ್ಟ್ರೀಟ್ ಫುಡ್, ಅಲ್ಲಿನ ಉಡುಪುಗಳ ಅಂಗಡಿ ಹಾಗೆ ಅಲ್ಲಿನ ಪ್ರಸಿದ್ಧವಾದ ಹಿಲ್ ಸ್ಟೇಷನ್ ಆದ daman- e – koh ಗೆ ಮಳೆಯಲ್ಲಿ ಛತ್ರಿ ಹಿಡಿದು ಭೇಟಿ ನೀಡಿ ಅಲ್ಲಿ ಬಂದ ಲೋಕಲ್ ಜನರ ಜೊತೆ ಮಾತಾಡಿ ಅವರ ಅಭಿಪ್ರಾಯ ಅರಿತಿದ್ದು ಚೆನ್ನಾಗಿ ಇತ್ತು.

ಅಲ್ಲಿನವರು ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಉಂಟು. ಇಸ್ಲಾಮಬಾದ್ ನ ಹಣ್ಣು ತರಕಾರಿಗಳ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ದರಗಳನ್ನು ಅರಿತಿದ್ದು, ಲಾಹೋರ್ ನ ಐತಿಹಾಸಿಕ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿನ ರುಚಿಯಾದ ಲೋಕಲ್ ಚಿಕನ್ ಬಿರಿಯಾನಿಯನ್ನು ಸೇವಿಸಿದ್ದು ಅದ್ಭುತವಾಗಿತ್ತು. ಒಟ್ಟು 7 ದಿನಗಳ ಪ್ರವಾಸ, ಯಾವುದೇ ರೀತಿ ಅಹಿತಕರ ಘಟನೆ ಜರುಗದೆ ಮುಕ್ತ ಮನಸ್ಸಿನಿಂದ ಪಾಕಿಸ್ತಾನ್ ದೇಶವನ್ನ ಸುತ್ತಾಡಿದ್ದು ಸದಾ ಮನಸಿನಲ್ಲಿ ಹಾಗು ಗ್ಲೋಬಲ್ ಕನ್ನಡಿಗನ ವಿಡಿಯೋಗಲ್ಲಿ ಸದಾ ನೆನಪಿನಲ್ಲಿ ಉಳಿಯುವುದು.

Categories
ಸಿನಿ ಸುದ್ದಿ

ʼಅಜ್ಞಾತವಾಸಿʼ ಏಪ್ರಿಲ್ 11ಕ್ಕೆ ರಿಲೀಸ್: ಇದು ರಂಗಾಯಣ ರಘು ಚಿತ್ರ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಜ್ಞಾತವಾಸಿ ಸಿನಿಮಾ ಕೂಡ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ. ಆದರೆ ಈ ಚಿತ್ರ ಬೇರೆಯದ್ದೇ ಕಂಟೆಂಟ್ ಹೊಂದಿದೆ ಅನ್ನೋದನ್ನು ಟ್ರೇಲರ್ ಹೇಳುತ್ತಿದೆ. ಅಜ್ಞಾತವಾಸಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆಯುತ್ತಿದೆ.

ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮಾತನಾಡಿ, ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವಿ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ. ಗುಲ್ಟು ಬಳಿಕ ಏನೂ ಮಾಡಬೇಕು ಅಂದುಕೊಂಡಾಗ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು. ಹೇಮಂತ್ ಅವರಿಗೆ ಕಥೆ ಹೇಳಿದ ಅವರಿಗೆ ಇಷ್ಟವಾಯ್ತು. ಏಪ್ರಿಲ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರೂ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಹೇಮಂತ್ ಎಂ ರಾವ್ ಮಾತನಾಡಿ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ಬಳಿಕ ನಾನು ರಕ್ಷಿತ್ ಮಾತಾಡಿಕೊಳ್ಳುತ್ತಿದ್ದೇವು. ಈ ರೀತಿ ಸಿನಿಮಾ ಮಾಡಲು ಯಾಕೆ ಇಷ್ಟು ಒದ್ದಾಟ ಮಾಡಬೇಕು. ಅವತ್ತು ನಾವಿಬ್ಬರು ಈ ರೀತಿಯ ಒಳ್ಳೆ ಕಥೆಗೆ ಬಂಡವಾಳ ಹಾಕಲು ತೀರ್ಮಾನ ಮಾಡಿಕೊಂಡಿದ್ದೇವು. ಅದರಂತೆ ಅಜ್ಞಾತವಾಸಿ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಒಳ್ಳೆ ಸಿನಿಮಾ ಮೇಕರ್. ನಮ್ಮ ಇಂಡಸ್ಟ್ರೀಯ ಬ್ರೈಟ್ ಫಿಲ್ಮಂ ಮೇಕರ್. ರಘು ಸರ್ ಸೇರಿದಂತೆ ಇಡಿ ತಂಡ ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಜನರನ್ನು ನಂಬಿ ಈ ರೀತಿ ಸಿನಿಮಾ ಮಾಡಿದ್ದೇವೆ. ನೀವು ಈ ಚಿತ್ರಗಳಿಗೆ ಬೆಂಬಲ ಕೊಡಿ ಎಂದು ತಿಳಿಸಿದರು.

ರಂಗಾಯಣ ರಘು ಮಾತನಾಡಿ, ಒಬ್ಬರಿಗೊಬ್ಬರು ನಿರ್ದೇಶಕರು ಬೆಳೆಯಲಿ ಎಂದು ಈ ರೀತಿ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ವಿಚಾರ. ಜನಾರ್ಧನ್ ಕಥೆ ಹೇಳಿದಾಗ ಎಲ್ಲಾ ಪಾತ್ರಗಳ ಮೇಲೆ ಹೊಟ್ಟೆ ಕಿಚ್ಚು ಬಂದಿತ್ತು. ಅಷ್ಟೂ ಚೆನ್ನಾಗಿವೆ ಪಾತ್ರಗಳು. ಇದು ಮರ್ಡರ್ ಮಿಸ್ಟ್ರಿ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈ ಚಿತ್ರವನ್ನು ಜನಾರ್ಧನ್ ಹೇಮಂತ್ ಸೇರಿಸುತ್ತಾರೆ. ಆ ರೀತಿ ಕೆಲಸವನ್ನು ಎಲ್ಲರೂ ಮಾಡಿದ್ದಾರೆ. ಇದೊಂದು ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದು ತಿಳಿಸಿದರು.

2 ನಿಮಿಷ 6 ಸೆಕೆಂಡ್ ಇರುವ ಅಜ್ಞಾತವಾಸಿ ಟ್ರೇಲರ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮಲೆನಾಡಿ ಸೊಬಗಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಕಥೆ ರಣರೋಚಕವಾಗಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಕಟ್ಟಿಕೊಟ್ಟಿದ್ದಾರೆ. ಇನ್ನೂ ಎಂದಿನಂತೆ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಟ್ರೇಲರ್ ನಲ್ಲಿಒ ಗಮನಸೆಳೆಯುತ್ತಾರೆ. ಚರಣ್ ರಾಜ್ ಸಂಗೀತ, ಹಾಗೂ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಟ್ರೇಲರ್ ಅಂದವನ್ನು ಹೆಚ್ಚಿಸಿದೆ.

ಅಜ್ಞಾತವಾಸಿ ಚಿತ್ರಕ್ಕೆ ‘ಗುಳ್ಟು’ ಸಾರಥಿ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

error: Content is protected !!