Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಅರುಣನ ಪ್ರೇಮ ಅಮರ!

ರೇಟಿಂಗ್: 3/5

ನಿರ್ದೇಶನ: ಪ್ರವೀಣ್ ಕುಮಾರ್ ಜಿ.
ನಿರ್ಮಾಣ: ಒಲವು ಸಿನಿಮಾ
ತಾರಾಗಣ: ಹರಿ‌ಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ ಕಡೂರು ,ರಾಜ್ ಬಲವಾಡಿ ಇತರರು.

ಮಾಮ ಇನ್ನೊಂದ್ ಜೋಡಿ ಓಡಿಸಿದ್ರೆ, ಇಪ್ಪತೈದು ಆಗ್ತಾವೆ. ಆಮೇಲೆ ಪಾರ್ಟಿ ಮಾಡುಮ..’ ಈ ಡೈಲಾಗ್ ಬರುವ ಹೊತ್ತಿಗೆ , ಆ ಊರಿನ‌ ಪ್ರೇಮಿಗಳನ್ನು ರಾತ್ರೋ ರಾತ್ರಿ ಹೀರೋ‌ ಮತ್ತು ಆತನ ಗೆಳೆಯರೆಲ್ಲ ಊರಿಂದ ಕಳಿಸ್ತಾರೆ. ಅಲ್ಲಿಂದ ಶುರುವಾಗುವ ಕಥೆ ಕ್ಲೈಮ್ಯಾಕ್ಸ್ ವರೆಗು ಸುಮ್ಮನೆ ನೋಡಿಸಿಕೊಂಡು‌ ಹೋಗುತ್ತೆ.

ಇದು ಬಹುತೇಕ ಹೊಸಬರ ಚಿತ್ರ. ಹಾಗಾಗಿ ಒಂದಷ್ಟು‌ ಹೊಸತನವೂ ಇದೆ. ವಿಶೇಷ ಅಂದರೆ ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ, ಕಥೆಯೇ ಹೀರೋ. ವಿನಾಕಾರಣ ಬಿಲ್ಡಪ್ಸ್ ಇಲ್ಲ. ಅನಗತ್ಯ ದೃಶ್ಯಗಳಿಲ್ಲ. ಉತ್ತರ ಕರ್ನಾಟಕ ಭಾಷೆಯ ಸೊಗಡು ಸಿನಿಮಾದ ವೇಗ ಹಚ್ಚಿಸಿದೆ.
ಒಂದೇ ಮಾತಲ್ಲಿ ಹೇಳುವುದಾದರೆ ಇದು ನಮ್ಮ ನಡುವಿನ ಕಥೆಯ ಚಿತ್ರಣ. ಗ್ರಾಮೀಣ್ಯ ಭಾಷೆಯ ಸಿನಿಮಾ ನೋಡುಗರಿಗೆ ಆಪ್ತತೆ ಎನಿಸುತ್ತೆ.

ಸಿನಿಮಾ ನೋಡುಗರಿಗೆ ಅವರ ಶಾಲಾ ದಿನಗಳು ನೆನಪಾಗುತ್ತವೆ. ಅವರ ಹಳೆಯ ಲವ್ವರ್ ಹಾಗೊಮ್ಮೆ ಕಣ್ಮುಂದೆ ಹಾದು ಹೋಗುತ್ತಾಳೆ.
ಬಹುತೇಕ ಹೊಸ ಪ್ರತಿಭೆಗಳ ಅನಾವರಣ ಈ ಸಿನಿಮಾ ಮೂಲಕ ಆಗಿದೆ.

ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ , ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ಭಾವುಕತೆ ಹೆಚ್ಚಿಸುತ್ತೆ. ಎದೆ ಭಾರವಾಗಿಸುತ್ತೆ. ಒಟ್ಟಾರೆ ಭಾವನೆಗಳು ಗರಿಗೆದರಿ ಮಜವೆನಿಸೋ ನೆನಪುಗಳನ್ನು ಮರುಕಳಿಸುವ ಸಿನಿಮಾ ಎನಿಸುತ್ತೆ.

ಕಥೆ ತೀರ ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಈ ರೀತಿಯ ಎಳೆ ಬಂದಿದೆಯಾದರೂ, ಇಲ್ಲಿ ಚಿತ್ರಕಥೆಯಲ್ಲಿ ಚುರುಕುತನವಿದೆ. ಬಿಗಿ ಹಿಡಿತವಿದೆ. ಕೆಲವು ಕಡೆ ಮಾತುಗಳು, ದೃಶ್ಯಗಳು ಬೇಕಿರಲಿಲ್ಲ ಅನಿಸಿದರೂ ಮುಂದೇನಾಗುತ್ತೆ ಅನ್ನೋ ಕುತೂಹಲ ನೋಡುವಂತೆ ಮಾಡುತ್ತೆ.

ಸಿನಿಮಾದಲ್ಲಿ ಎಲ್ಲಾ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ. ತಮಾಷೆಯ ಸಿನಿಮಾ ಅನಿಸಿದರೂ ನೋಡ ನೋಡುತ್ತಲೇ ಗಂಭೀರತೆ ಪಡೆದುಕೊಳ್ಳುತ್ತೆ.

ಸಿನಿಮಾದ ವೇಗಕ್ಕೆ ಡೈಲಾಗ್ ಗಳು ಸಾಥ್ ಕೊಟ್ಟರೆ, ಹಿನ್ನೆಲೆ‌ ಸಂಗೀತ ಕೂಡ ಮುದ ಕೊಡುತ್ತೆ. ಹೊಸಬರಲ್ಲಿ ಹೊಸತು ಇದೆ ಅನ್ನೋದಕ್ಕೆ ಈ ಸಿನಿಮಾದ ಕಂಟೆಂಟ್ ಮತ್ತು ಸಿಂಪಲ್ ಮೇಕಿಂಗ್ ಕಾರಣವಾಗುತ್ತೆ. ಒಂದು‌ ಸಿಂಪಲ್ ಕಥೆ ಹೀಗೂ ಅನಾವರಣಗೊಳ್ಳುತ್ತೆ ಅನ್ನೋದಕ್ಕೆ ಇದು ಸಾಕ್ಷಿ. ಹೊಸಬರ ಪ್ರಯತ್ನ ಇಲ್ಲಿ ಸಾರ್ಥಕ ಎನಿಸುತ್ತೆ.

ಇಲ್ಲೂ ಕೆಲವು ದೋಷಗಳಿವೆ. ಅವನ್ನು ಬದಿಗೊತ್ತಿ ಸಿನಿಮಾ ನೋಡಿದರೆ ರುಚಿಸುತ್ತೆ. ಹೊಡಿ, ಬಡಿ ಗನ್ನು‌ ,ಮಚ್ಚು ಲಾಂಗ್ ಗಳ ಮಧ್ಯೆ ಒಂದು ನೀಟ್ ಸಿನಿಮಾ ಕಟ್ಟಿಕೊಡಲಾಗಿದೆ. ಅದೇ ಸಿನಿಮಾದ ಪ್ಲಸ್.

ಇಲ್ಲಿ ಹೀರೋಗೆ ಯಾವುದೇ ಬಿಲ್ಡಪ್ ಇಲ್ಲ. ನಮ್ಮ ನಡುವಿನ ಹುಡುಗನ ಕಥೆ ಅನಿಸುತ್ತೆ. ಪ್ರತಿ ಪಾತ್ರಗಳೂ ನಮ್ಮ ಪರಿಸರದ ಪಾತ್ರಗಳು ಅನಿಸುತ್ತವೆ ಅಷ್ಟರ ಮಟ್ಟಿಗೆ ನಿರ್ದೇಶಕರ ಜಾಣತನ ಪ್ರದರ್ಶನವಾಗಿದೆ.

ಕಥೆ ಏನು?

ಅರುಣ ತನ್ನ ಶಾಲಾ ದಿನಗಳಲ್ಲಿ ಕಾವ್ಯ ಎನ್ನುವ ಒಬ್ಬ ಹುಡುಗಿಯನ್ನು ಇಷ್ಟಪಟ್ಟಿರುತ್ತಾನೆ. ಕೊನೆಗೆ ಅವನ ತಂದೆ ವರ್ಗಾವಣೆಯಾದ ಬಳಿಕ ಆ ಊರು ತೊರೆದು ಹೋಗುತ್ತಾನೆ. ಮದ್ವೆ‌ ವಯಸ್ಸಿಗೆ ಬಂದಾಗ ಮನೆಯವರು ತೋರಿಸಿದ ಯಾವ ಹುಡುಗಿಯನ್ನು ಒಪ್ಪಲ್ಲ. ಕಾರಣ ಶಾಲಾ ದಿನದಲ್ಲಿ ಇಷ್ಟ ಪಟ್ಟ ಹುಡುಗಿಯೇ ಬೇಕು ಅನ್ನೋದು. ಹಾಗಾದರೆ ಆ ಹುಡುಗಿ ಸಿಕ್ತಾಳ, ಮದ್ವೆ ಅಗ್ತಾನಾ ? ಈ ಮಧ್ಯೆ ಒಂದಷ್ಟು ಟ್ವಿಸ್ಟು. ಈ ಕುತೂಹಲ ಇದ್ದರೆ ಮಿಸ್ ಮಾಡದೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಸಾಕಷ್ಟು ತಿರುವುಗಳಿವೆ ಅವೇ ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.

ಯಾರು ಹೇಗೆ?

ಸಿನಿಮಾದಲ್ಲಿ ಹರಿಶರ್ವ ಗಮನ ಸೆಳೆದಿದ್ದಾರೆ. ಅಮಾಯಕ ಪಾತ್ರ ಎನಿಸಿದರೂ ತಮ್ಮೊಳಗಿನ ಭಾವುಕತೆ ಹೊರಹಾಕುವ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ಹೊಡೆದಾಟವಿರದ ಹಾರಾಟವಿರದ ಕಥೆಗೆ ಸೈ ಅಂದಿದ್ದಾರೆ. ನೀಟ್ ಅಭಿನಯದ ಮೂಲಕ ಹರಿಶರ್ವ ಇಷ್ಟ ಆಗ್ತಾರೆ. ಹರಿಶರ್ವ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸರಳವೆನಿಸಿದರೂ ಆಪ್ತ ಪಾತ್ರವಾಗಿ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ ಒಳ್ಳೆ ಕಥೆ ಮೂಲಕ ಬಂದರೆ ಅವರು ನೆಲೆ ಊರಬಹುದು.

ದೀಪಿಕಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಧರ್ಮಣ್ಣ ಕಡೂರು ಸಿನಿಮಾದ ಹೈಲೆಟ್. ಗೆಳೆಯನ ಪಾತ್ರದಲ್ಲಿ ಜೀವಿಸಿದ್ದಾರೆ. ಅವರಿಗೂ ಇಲ್ಲೊಂದು ಹಾಡಿದೆ, ಹುಡುಗಿಯೂ ಇದ್ದಾಳೆ. ನೈಜ ಅಭಿನಯ ಖುಷಿಕೊಡುತ್ತೆ. ರಾಜ್ ಬಲವಾಡಿ ತಂದೆಯಾಗಿ ಇಷ್ಟವಾಗುತ್ತಾರೆ. ಉಳಿದ ಹೊಸ ಪಾತ್ರಗಳು ಸಹಜವಾಗಿವೆ. ಇಲ್ಲಿ ವಿಶೇಷವಾಗಿ ಮಂಜಮ್ಮ ಜೋಗತಿ ಕಾಣಿಸಿಕೊಂಡಿದ್ದಾರೆ.

ನನ್ನ ನೆರಳಿಂದು ನನ್ನೇ ಕೇಳುತ್ತಿದೆ ನೀನು ಯಾರೆಂದು ಮತ್ತು ಬಾ ಮಗ ಬಾ ಮಗ ಹಾಡು ಗುನುಗುವಂತಿವೆ. ಕ್ಯಾಮರ ಕೈಚಳಕದಲ್ಲಿ ಇನ್ನಷ್ಟು ಹೊಳಪು ಬೇಕಿತ್ತು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಹೊಸತನದ ವಿಹಂಗಮ ನೋಟ!

ರೇಟಿಂಗ್: 3/5

ಚಿತ್ರ: ಫೈರ್ ಫ್ಲೈ
ನಿರ್ದೇಶನ: ವಂಶಿ ಕೃಷ್ಣ
ನಿರ್ಮಾಣ: ನಿವೇದಿತಾ ಶಿವರಾಜಕುಮಾರ್
ತಾರಾಗಣ: ವಂಶಿಕೃಷ್ಣ, ರಚನಾ ಇಂದರ್, ಅಚ್ಯುತ್ ಕುಮಾರ್, ಸುಧಾರಾಣಿ, ಮೂಗು ಸುರೇಶ್, ನೀನಾನಸಂ ಆನಂದ್ ಇತರರು.

ವಿದೇಶದಲ್ಲಿ ಓದಿಕೊಂಡ ನಾಯಕ , ಓದು ಮುಗಿದ ನಂತೆ ಇಂಡಿಯಾಗೆ ಮರಳುತ್ತಾನೆ. ಅವನಿಗೆ ಇಂಡಿಯಾದಲ್ಲೊಂದು ಸಮಸ್ಯೆ ಎದುರಾಗುತ್ತೆ. ಆ ಸಮಸ್ಯೆಯಿಂದ ಹೊರ ಬರೋಕೆ ಅವನು ಪಡುವ ಪಾಡೇ ಈ ಚಿತ್ರದ ಒನ್ ಲೈನ್.

ಇಲ್ಲಿ ಕಥೆ ತೀರಾ ಸಿಂಪಲ್. ಆದರೆ ಅದರ ಚಿತ್ರಕಥೆಗೊಂದು ವೇಗ ಕಲ್ಪಿಸಿಕೊಟ್ಟು ಸಿನಿಮಾವನ್ನು ನೋಡಿಸಿಕೊಂಡು‌ ಹೋಗುವಂತಹ ಜಾಣತನವನ್ನು ನಿರ್ದೇಶಕರು ಮೆರೆದಿದ್ದಾರೆ.

‘ಫೈರ್ ಫ್ಲೈ’ ಅಂದಾಕ್ಷಣ ಏನದು ಅನ್ನೋ ಪ್ರಶ್ನೆ ಸಹಜ. ಶೀರ್ಷಿಕೆಯ ಆರ್ಥ ಮಿಂಚುಹುಳು ಅಂತ ಅರ್ಥೈಸಿಕೊಳ್ಳಬಹುದು. ಬೆಳಕಿಗೂ ಮೀರಿದ ಬೆಳಕೊಂದನ್ನು ತೋರಿಸುವ ಪ್ರಯತ್ನಕ್ಕೆ ಆ ಹೆಸರು. ಹಾಗಾದರೆ ಆ ಬೆಳಕು ಇಲ್ಲಿ ಕಾಣುತ್ತಾ ಎಂಬ ಪ್ರಶ್ನೆಗೆ ಸಿನಿಮಾ ನೋಡುವುದೇ ಉತ್ತರ.

ಅಂದಹಾಗೆ ಇದು ನಟ ಕಮ್ ನಿರ್ದೇಶಕ ವಂಶಿ ಕೃಷ್ಣ ಅವರಿಗೆ ಮೊದಲ ಪ್ರಯತ್ನ.
ಮೊದಲೇ ಹೇಳಿದಂತೆ ಕಥೆ ಸರಳ. ಈಗಿನ ಯೂಥ್ ಎದುರಿಸುವ ಒಂದಷ್ಟು ಅಂಶಗಳು ಇಲ್ಲಿವೆ. ಅವೇ ಸಿನಿಮಾದ ಹೈಲೆಟ್.

ಕಥೆಯಲ್ಲಿ ಒಂದಷ್ಟು ಏರಿಳಿತಗಳಿವೆ. ಅವೇ ಸಿನಿಮಾದ ಮಜವೆನಿಸುವ ಅಂಶ. ಇಲ್ಲಿ ಹಾಸ್ಯವಿದೆ, ಭಾವುಕತೆ ಇದೆ, ಸಣ್ಣದ್ದೊಂದು ಸಂದೇಶವಿದೆ. ತೊಳಲಾಟವಿದೆ, ಅಲ್ಲಲ್ಲಿ ಬೇಸರದ ವಿಷಯವೂ ಇದೆ. ಆಗಾಗ ಸ್ವಲ್ಪ ತಮಾಷೆಯೂ ಇದೆ. ಆ ಬಗ್ಗೆ ಕುತೂಹಲವಿದ್ದರೆ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಈಗಿನ ಕಾಲದ ಯೂಥ್ ಅನೇಕ ಸಮಸ್ಯೆ ಎದುರಿಸುತ್ತಾರೆ. ಉದಾಹರಣೆಗೆ ಒಂಟಿತನ ಕಾಡಬಹುದು, ನಿದ್ದೆ ಬರದ ರಾತ್ರಿಗಳನ್ನು ಎದುರಿಸಬಹುದು. ಕೆಲವು ವಿಷಯಗಳಿಗೆ ಬೇಸತ್ತು ಖಿನ್ನತೆಗೂ ಜಾರಬಹುದು. ಈ ವಿಷಯ ಸಿನಿಮಾದ ಗಮನಾರ್ಹ ಅಂಶ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿರುವ ಪ್ರತಿ ಪಾತ್ರಗಳು ನೋಡುಗರನ್ನು ಖುಷಿಪಡಿಸುತ್ತವೆ. ಆಗಾಗ ಗಂಭೀರತೆಗೂ ದೂಡುತ್ತವೆ.

ಸಿನಿಮಾದ ನಿರೂಪಣೆ ಖುಷಿಕೊಡುತ್ತೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಹಿಡಿತ ಇದ್ದಿದ್ದರೆ ಮತ್ತಷ್ಟು ರುಚಿಸುತ್ತಿತ್ತು. ಮೊದಲರ್ಧ ಜಾಲಿಯಾಗುವ ಸಿನಿಮಾ, ದ್ವಿತಿಯಾರ್ಧ ಗಂಭೀರತೆ ಪಡೆಯುತ್ತೆ. ವಾಸ್ತವ ಅಂಶಗಳನ್ನೂ ತೆರೆದಿಡುತ್ತೆ.

ಸಿನಿಮಾಲ್ಲಿ ಅನೇಕ ಬದಲಾವಣೆ ಕಾಣಬಹುದು. ಮೇಕಿಂಗ್, ನಿರೂಪಣಾ ಶೈಲಿ, ತೋರಿಸಿರುವ ವಿಧಾನ ಇವೆಲ್ಲದ್ದರಲ್ಲೂ ಕೊಂಚ ಹೊಸತನ್ನ ಕಾಣಬಹುದು. ಹಾಗಾಗಿ ಹೊಸ ನಿರ್ದೇಶಕರ ಪ್ರಯತ್ನ ತಂಡದ ಶ್ರಮ ಸಾರ್ಥಕ ಎನ್ನಬಹುದು.

ಮೇಕಿಂಗ್ ಕಡೆ ಗಮನ ಕೊಟ್ಟಷ್ಟು ಇನ್ನಷ್ಟು ಇಡೀ ಸ್ಕ್ರಿಪ್ಟ್ ಬಗ್ಗೆ ಗಮನಿಸಿದ್ದರೆ, ಇನ್ನೂ ಅಂದವಾಗುತ್ತಿತ್ತು. ಆದರೆ, ಕೆಲವು ಸನ್ನಿವೇಶಗಳು ಸಣ್ಣಪುಟ್ಟ ಮಿಸ್ಟೇಕ್ ಗಳನ್ನು ಬದಿಗೊತ್ತಿ ಸುಮ್ಮನೆ ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿವೆ.

ನಿರ್ದೇಶಕರು ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಆ ಪ್ರಯತ್ನ ಕೈ ಬಿಡಲಾಗಿದೆ. ಹಾಗಾಗಿ ಅವಧಿ ಜಾಸ್ತಿ ಏನೋ ಅಂತನಿಸುತ್ತದೆ.

ಇನ್ನು ತಾಂತ್ರಿಕವಾಗಿ ಚಿತ್ರ ಸೊಗಸಾಗಿದೆ. ಮುಖ್ಯವಾಗಿ ಇಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಕೆಲಸ. ಒಂದು ಹಾಡು ಗುನುಗುವಂತಿದೆ. ಬಿಟ್ಟರೆ ಹಿನ್ನೆಲೆ ಸಂಗೀತ ಸಿನಿಮಾದ ವೇಗಕ್ಕೆ ಹೆಗಲು ನೀಡಿದೆ. ಅಭಿಷೇಕ್ ಕಳತ್ತಿ ಅವರ ಕ್ಯಾಮೆರಾ ಕೈಚಳಕವೂ ಸಿನಿಮಾವನ್ನ ಅಂದಗಾಣಿಸಿದೆ.

ಯಾರು ಹೇಗೆ?

ಇಡೀ ಸಿನಿಮಾದಲ್ಲಿ ವಂಶಿ ಹೈಲೆಟ್. ವಿಕ್ಕಿ ಪಾತ್ರದ ಮೂಲಕ ಲವಲವಿಕೆಯಿಂದ ಗಮನಸೆಳೆಯುತ್ತಾರೆ. ತಮ್ಮ ಬಾಡಿ ಲಾಂಗ್ವೇಜ್ ನಲ್ಲಿ ಇನ್ನಷ್ಟು ತಿದ್ದಿಕೊಳ್ಳುವ ಅಗತ್ಯವಿದೆ. ಮೊದಲ ಪ್ರಯತ್ನವಾದ್ದರಿಂದ ಅವರ ಕೆಲ ಮಿಸ್ಟೇಕ್ ಕೈ ಬಿಡಬಹುದು. ಕನ್ನಡಕ್ಕೆ ಒಬ್ಬ ನಿರ್ದೇಶಕ ಮತ್ತು ನಟನನ್ನು ನಿರೀಕ್ಷಿಸಬಹುದು.

ರಚನಾ ಇಂದರ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಅವರದಿಲ್ಲಿ ವಿಶೇಷ ಗುಣವುಳ್ಳ ಪಾತ್ರ. ಅಚ್ಯುತ್ ಹಾಗು ಸುಧಾರಾಣಿ ಪಾತ್ರಗಳು ಗಮನ ಸೆಳೆಯುತ್ತವೆ.
ಆನಂದ್ ಮತ್ತು ಮೂಗು ಸುರೇಶ್‌ ಅವರ ಪಾತ್ರಗಳು ನೆನಪಲ್ಲುಳಿಯುವಂತಿವೆ.

ಹೊಸಬಗೆಯ ಕಥೆ, ಹೊಸತನದ ಮೇಕಿಂಗ್, ಹೊಸ ಪ್ರತಿಭೆಗಳ ಮ್ಯಾಜಿಕ್ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು. ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.

Categories
ಸಿನಿ ಸುದ್ದಿ

ಪೊರಕೆ ಹಿಡಿದ ಯುವರಾಜ್ ಕುಮಾರ್: ಎಕ್ಕ ಟೀಸರ್ ಸಖತ್ ಗುರು

ಕನ್ನಡ ಚಿತ್ರರಂಗದ ಭರವಸೆ ನಾಯಕ ಯುವರಾಜ್‌ ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಯುವ ಟೀಸರ್‌ ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್‌ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್‌ ಆಗಿಯೇ ಟೀಸರ್‌ ರಿಲೀಸ್‌ ಆಗಿದೆ.

1 ನಿಮಿಷ 9 ಸೆಕೆಂಡ್‌ ಇರುವ ಯುವ ಟೀಸರ್‌ ಸೈಕ್‌ ಆಗಿದೆ. ಹೊಸ ಅವತಾರದಲ್ಲಿ ಯುವರಾಜ್‌ ಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಮಗು-ಮೃಗ ಅಂತಾ ಮಸ್ತ್‌ ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.

ಯುವ ಆಕ್ಟಿಂಗ್‌, ರೋಹಿತ್‌ ಪದಕಿ ಟೇಕಿಂಗ್‌, ಚರಣ್‌ ರಾಜ್‌ ಮ್ಯೂಸಿಕ್‌ ಕಿಕ್‌ ಟೀಸರ್‌ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಯುವ ಟೈಟಲ್‌ ಟ್ರ್ಯಾಕ್‌ ಚಿಂದಿ ಉಡಾಯಿಸಿದ್ದು, ಈಗ ಟೀಸರ್‌ ಸರದಿ ಅಂತಾ ಫ್ಯಾನ್ಸ್‌ ಖುಷಿಪಡುತ್ತಿದ್ದಾರೆ.

ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವರಾಜ್‌ಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍ ಕುಮಾರ್ ಸಂಕಲನ ಒದಗಿಸಿದ್ದಾರೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಜೂನ್-6 ರಂದು ಎಕ್ಕ ಸಿನಿಮಾ ತೆರೆಗೆ ಎಂಟ್ರಿ ಕೊಡುತ್ತಿದೆ.

Categories
ಸಿನಿ ಸುದ್ದಿ

ರಾಜಕುಮಾರ್ ಹುಟ್ಟುಹಬ್ಬಕ್ಕೆ ಶಿವರಾಜಕುಮಾರ್ ಹೊಸ ಚಿತ್ರ ಅನೌನ್ಸ್

ಏಪ್ರಿಲ್ 24 ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ.

ಇತ್ತೀಚೆಗೆ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಬಾಲಾಜಿ ಮಾಧವನ್ ಹಾಗೂ ನಿರ್ಮಾಪಕರಾದ ಸಾಗರ್ , ಕೃಷ್ಣಕುಮಾರ್ ಮತ್ತು ಸೂರಜ್ ಶರ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದ ಕಥೆ ಕೇಳಿ ಶಿವಣ್ಣ ಸಂತಸಗೊಂಡಿದ್ದಾರೆ.

ಸದ್ಯದಲ್ಲೇ ಶೀರ್ಷಿಕೆಯನ್ನು ಅದ್ದೂರಿಯಾಗಿ ಅನಾವರಣಗೊಳಿಸುವ ಸಿದ್ದತೆ ನಡೆಸಿರುವ ನಿರ್ಮಾಪಕರು ಆ ಸಮಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜಕುಮಾರ್ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

Categories
ಸಿನಿ ಸುದ್ದಿ

ಅಮರ ಪ್ರೇಮಿ ಅರುಣ್ ಬರ್ತಾ ಇದಾನೆ ಜಾಗ ಕೊಡಿ!

ಈ ವಾರ ತೆರೆಗೆ ಬಳ್ಳಾರಿ ಭಾಗದ ಪ್ರೇಮ ಕಥಾಹಂದರ ಇರುವ “ಅಮರ ಪ್ರೇಮಿ ಅರುಣ್” ಸಿನಿಮಾ ಬಿಡುಗಡೆ ಆಗುತ್ತಿದೆ. ಬಹುತೇಕ ಹೊಸಬರ ತಂಡದ ಶ್ರಮ ಈ ಸಿನಿಮಾದಲ್ಲಿದೆ. ಹಲವು ವಿಶೇಷ ಗುಣ ಹೊಂದಿರುವ ಈ ಚಿತ್ರ ನೋಡುಗರಿಗೆ ಹೂರಣದ ರುಚಿಯನ್ನೇ ಉಣಬಡಿಸುತ್ತೆ

ಒಲವು ಸಿನಿಮಾ ಲಾಂಛನದಲ್ಲಿ ಒಲವಿನ ಗೆಳೆಯರು ಒಂದಿಷ್ಟು ಜನ ಸೇರಿ ಒಲವಿನಿಂದ ನಿರ್ಮಾಣ ಮಾಡಿರುವ ಹಾಗೂ ಪ್ರವೀಣ್ ಕುಮಾರ್ ಜಿ ಬರವಣಿಗೆ ಹಾಗೂ ನಿರ್ದೇಶನದ ” ಅಮರ ಪ್ರೇಮಿ ಅರುಣ್” ಚಿತ್ರ ಈ ವಾರ(ಏಪ್ರಿಲ್ 25) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬಳ್ಳಾರಿ ಭಾಗದ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಹರಿಶರ್ವ ಅಭಿನಯಿಸಿದ್ದಾರೆ. ನಾಯಕಿಯಾಗಿ ದೀಪಿಕಾ ಆರಾಧ್ಯ ಇದ್ದಾರೆ. ಧರ್ಮಣ್ಣ ಕಡೂರು, ಕ್ರಿತಿ ಭಟ್, ಮಹೇಶ್ ಬಂಗ್, ಅರ್ಚನಾ ಕೊಟ್ಟಿಗೆ, ರಂಜಿತಾ ಪುಟ್ಟಸ್ವಾಮಿ, ಮಂಜಮ್ಮ ಜೋಗತಿ, ರಾಧ ರಾಮಚಂದ್ರ, ಬಲ‌ ರಾಜವಾಡಿ ಹೀಗೆ ಅನುಭವಿ ಕಲಾವಿದರ ದೊಡ್ಡ ದಂಡೆ ಈ ಚಿತ್ರದಲ್ಲಿದೆ. ಬಳ್ಳಾರಿ ಆಸುಪಾಸಿನಲ್ಲೇ ಚಿತ್ರೀಕರಣ ನಡೆದಿರುವ ಈ ಚಿತ್ರದ ಸಂಭಾಷಣೆ ಕೂಡ ಅಲ್ಲಿನ ಸೊಗಡಿನಲ್ಲೇ ಇರುತ್ತದೆ.

ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ಪ್ರವೀಣ್ ಕುಮಾರ್ ಅವರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ.

ಪ್ರವೀಣ್ ಎಸ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮಂಡ್ಯ ಮಂಜು ಕಾರ್ಯ ನಿರ್ವಹಿಸಿದ್ದಾರೆ.

Categories
ಸಿನಿ ಸುದ್ದಿ

ಸುರುಳಿ ಇದು ಹೇಮಂತ್ ರಾವ್ ನಿರ್ಮಾಣದ ಕಿರುಚಿತ್ರ; ಎಲ್ಲರ ಮನಮುಟ್ಟೋ ಕಥೆ

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ‌ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ಮಾಣದ ಚೊಚ್ಚಲ ಸಿನಿಮಾ ಅಜ್ಞಾತವಾಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಇದೀಗ ಸುರುಳಿ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮದೇ ದಾಕ್ಷಾಯಿಣಿ ಟಾಕೀಸ್ ನಡಿ ನಿರ್ಮಾಣಗೊಂಡಿರುವ ಈ ಕಿರುಚಿತ್ರ ಮನಮುಟ್ಟುವ ಕಥೆಯನ್ನೊಳಗೊಂಡಿದೆ. ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ 33 ನಿಮಿಷದ ಕಿರುಚಿತ್ರ ಮಾನವೀಯತೆಯನ್ನು ತೆರೆದಿಟ್ಟಿದೆ.

ಯುವ ಸಿನಿಮೋತ್ಸಾಹಿಗಳ ಕನಸಿಗೆ ಹೇಮಂತ್ ರಾವ್ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಡಿ ನಿರ್ಮಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ನಡಿ ವಿಭಿನ್ನ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿದ್ದು, ಅದರ ಭಾಗವಾಗಿ ರೂಪಗೊಂಡಿರುವ ಪ್ರಯತ್ನವೇ ಸುರುಳಿ ಕಿರುಚಿತ್ರ.

ಇತ್ತೀಚೆಗೆ ಈ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡ ಮೊದಲ ಚಿತ್ರ ಅಜ್ಞಾತವಾಸಿ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಒಂದೊಳ್ಳೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ಬೆನ್ನಲ್ಲೀಗ ಸುರುಳಿ ಕಿರುಚಿತ್ರವನ್ನು ನಿರ್ಮಿಸಿ, ಬಿಡುಗಡೆ‌ ಮಾಡಿದ್ದಾರೆ. ಸುರುಳಿ ಶಾರ್ಟ್ ಮೂವೀ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸುರುಳಿ ಕಿರುಚಿತ್ರಕ್ಕೆ ಮನು ಅನುರಾಮ್ ಸಾರಥಿ. ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ಪೊರೇಟ್ ಕೆಲಸ ಮಾಡಿಕೊಂಡೇ ಸಿನಿಮಾ ಗೀಳು ಬೆಳೆಸಿಕೊಂಡಿರುವ ಮನು ಅನುರಾಮ್ ಅವರು ಈಗಾಗಲೇ ಸಾಕಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರಗಳು ಸಾಕಷ್ಟು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿವೆ. ಕಿರುಚಿತ್ರ ಸಿನಿಮೋತ್ಸವದಲ್ಲಿ ಹೇಮಂತ್ ರಾವ್ ಹಾಗೂ ಮನು ಅನುರಾಮ್ ಅವರ ಪರಿಚವಾಗುತ್ತದೆ. ಅವರ ಕಿರುಚಿತ್ರ ಇಷ್ಟಪಟ್ಟಿದ್ದ ಹೇಮಂತ್ ಇಂದು ಮನು ಅನುರಾಮ್ ನಿರ್ದೇಶನದ ಸುರುಳಿಗೆ ಜೊತೆಯಾಗಿ ನಿಂತಿದ್ದಾರೆ.

ವಿಶೇಷ ಎಂದರೆ ಸುರುಳಿಗೆ ಸಂಗೀತ ಒದಗಿಸಿರುವುದು ಚರಣ್ ರಾಜ್. ಒಂದೊಳ್ಳೆ ಅದ್ಭುತ ಮ್ಯೂಸಿಕ್ ನ್ನು ಈ ಕಿರು ಚಿತ್ರಕ್ಕೆ ಅವರು ಕೊಟ್ಟಿದ್ದಾರೆ . ಹರ್ಷಿಲ್ ಕೌಶಿಕ್, ನಿಧಿ ಹೆಗ್ಡೆ ಹಾಗೂ ವಂಶಿಧಾರ್ ಭೋಗರಾಜು ಶಾರ್ಟ್ ಮೂವೀಯಲ್ಲಿ ಅಭಿನಯಿಸಿದ್ದಾರೆ. ಅಮಲ್ ಅಂಬಿಕಾ ರಾಜೇಂದ್ರನ್ ಛಾಯಾಗ್ರಹಣ, ಸ್ಯಾಮ್ ವೆಂಕಟ್ ಹಾಗೂ ವರುಣ್ ಗೋಲಿ ಸಂಕಲನ ಕಿರುಚಿತ್ರಕ್ಕಿದೆ.

ನಮ್ಮ ಜೀವನದಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳು ನಮಗೆ ಗೊತ್ತಿಲ್ಲದೇ ಬೇರೆಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ಸುಳಿವು ನಮಗೆ ಇರುವುದಿಲ್ಲ. ಅಂತಹ ಕಥೆಯನ್ನು ಮನು ಅನುರಾಮ್ ಅಚ್ಚುಕಟ್ಟಾಗಿ ದೃಶ್ಯರೂಪಕ್ಕಿಳಿಸಿದ್ದು, ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಫೈರ್‌ ಫ್ಲೈ ಸಿನಿಮಾಗೆ ಧ್ರುವ ಸರ್ಜಾ ಸಾಥ್; ಹುಷಾರು ಲೇ ಹುಷಾರು ಎಂದ ಆಕ್ಷನ್ ಪ್ರಿನ್ಸ್

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು,ಪ್ರಚಾರ ಬಿರುಸಿನಿಂದ ಸಾಗಿದೆ. ಅದರ ಭಾಗವಾಗಿ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಫೈರ್‌ ಫ್ಲೈ ಸಿನಿಮಾದ ಹುಷಾರು ಲೇ ಹುಷಾರು ಎಂಬ ಹಾಡನ್ನು ರಿಲೀಸ್‌ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಹಾಡು ಇದಾಗಿದೆ. ಈ ಗೀತೆಯಲ್ಲಿಅಣ್ಣಾವ್ರ ಸಿನಿಮಾಗಳ ಡೈಲಾಗ್‌ ಗಳನ್ನು ಬಳಸಿರುವುದು ಮತ್ತೊಂದು ವಿಶೇಷ. ಧನಂಜಯ್‌ ರಂಜನ್‌ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ದೀಪಕ್ ಬ್ಲೂ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಹಾಡಿಗೆ ಧ್ವನಿಯಾಗಿದ್ದು, ಚರಣ್‌ ರಾಜ್‌ ಮಸ್ತ್‌ ಟ್ಯೂನ್‌ ಹಾಕಿದ್ದಾರೆ.

ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್‌ ಫ್ಲೈ ಸಿನಿಮಾವನ್ನು ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್‌ ಫ್ಲೈ ಸಿನಿಮಾ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ.

ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಮಂಗಳಾಪುರಂನಲ್ಲಿ ರಿಷಿ: ಹೊಸ ಸಿನಿಮಾ ಒಪ್ಪಿಕೊಂಡ ಹೀರೋ

ನಟ ರಿಷಿ ಸದಾ ವಿಭಿನ್ನ ಕಥೆಗಳನ್ನ ಆಯ್ಕೆ ಮಾಡಿಕೊಂಡು‌ ಪ್ರೇಕ್ಷಕರ ಮುಂದೆ ಬರೋ ಕಲಾವಿದ. ಸದ್ಯ ಸಾಲು‌ಸಾಲು‌ ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ರಿಷಿ ಮಂಗಳೂರು ಮೂಲದ ತಂಡದ ಜೊತೆಗೆ ಹೊಸ‌ ‌ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ . ಈ ಹಿಂದೆ ತುಳು ಚಿತ್ರರಂಗದಲ್ಲಿ ಉಮಿಲ್ ಹಾಗೂ ದೊಂಬರಾಟ ಸಿನಿಮಾ‌ ಮಾಡಿ ಸಕ್ಸಸ್ ಕಂಡಿರೋ ರಂಜಿತ್ ರಾಜ್ ಸುವರ್ಣ ರಿಷಿ ನಟನೆಯ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಿಷಿ ಅಭಿನಯಿಸುತ್ತಿರೋ ಹೊಸ ಚಿತ್ರಕ್ಕೆ ಮಂಗಳಾಪುರಂ ಎಂದು‌ ಹೆಸರಿಟ್ಟಿದ್ದು ಸದ್ಯ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಸಿನಿಮಾತಂಡ ..ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು‌ ಕಾಶಿನಾಥ್ ಅಭಿನಯ‌ಮಾಡುತ್ತಿದ್ದು ಇದೇ ಮೊದಲ ಬಾರಿಗೆ ಅಭಿಮನ್ಯು‌‌ ಹಾಗೂ ರಿಷಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ..

ಮಂಗಳಾಪುರಂ ಸಿನಿಮಾ ಒಂದು ಊರಿನಲ್ಲಿ ನಡೆಯೋ ಮರ್ಡರ್ ಮಿಸ್ಟ್ರಿ ಕಥೆ .ನಂಬಿಕೆ – ಮೂಡನಂಬಿಕೆ, ಕೈವಾಡ ಹಾಗೂ ಪವಾಡ ವಿಚಾರದ ಮೇಲೆ ಕಥೆ ಸಾಗಲಿದೆ ..ಇನ್ನು ಈ ಸಿನಿಮಾಗೆ ವಿದ್ವಾನ್||ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ‌,ರಾಮ್ ಪ್ರಸಾದ್ ಬಂಡವಾಳ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಜೂನ್ ನಲ್ಲಿ ಚಿತ್ರೀಕರಣ ‌ಶುರು‌ಮಾಡಲಿದೆ . ಕಾರ್ಕಳ, ತೀರ್ಥಹಳ್ಳಿ‌, ಮಡಿಕೆರಿ ,ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ನಡೆಯಲಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಸಿನಿಮಾಗೆ ಇರಲಿದ್ದು ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಲಿದ್ದಾರೆ ..ಸದ್ಯ ಇಂಟ್ರೆಸ್ಟಿಂಗ್ ಆಗಿರೋ ಫಸ್ಟ್ ಲುಕ್ ರಿವಿಲ್ ಮಾಡಿರೋ ತಂಡ ಆದಷ್ಟು ಬೇಗ‌ಶೂಟಿಂಗ್ ಮುಗ್ಸಿ ಪ್ರೇಕ್ಷಕೆ ಮುಂದೆ ಬರೋ ಕಾತುರದಲ್ಲಿದೆ .

Categories
ಸಿನಿ ಸುದ್ದಿ

ಸೂತ್ರಧಾರಿ ಟೈಟಲ್ ಸಾಂಗ್ ರಿಲೀಸ್

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳ 1800ಕ್ಕೂ ಅಧಿಕ ಚಿತ್ರಗಳ ಇವೆಂಟ್ ಗಳನ್ನು ಆಯೋಜಿಸಿರುವ, ಅಷ್ಟೇ ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣದ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ಗಾಯನದ ಮೂಲಕ ಜನಮನ ಗೆದ್ದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ.

.ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರು ಈ ಸಮಾರಂಭವನ್ನು ಆಯೋಜಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಮ್ಮ ಪ್ರೋತ್ಸಾಹ ಭರಿತ ಮಾತುಗಳ ಮೂಲಕ “ಸೂತ್ರಧಾರಿ” ಚಿತ್ರಕ್ಕೆ ಯಶಸ್ಸನ್ನು ಕೋರಿದರು.

ವಿಜಯ್ ಈಶ್ವರ್ ಅವರು ಬರೆದಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೆ ಹಾಡಿದ್ದಾರೆ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಅರ್ಥಗರ್ಭಿತ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ‌ “ಸೂತ್ರಧಾರಿ” ಸಿನಿಮಾ ಆರಂಭವಾದಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇನ್ನೂ ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ನವರಸನ್.

ನಾನು ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ 9 ನೇ ತಾರೀಖು ಅವರ ಆಸೆ ಈಡೇರುತ್ತಿದೆ. ನಾನು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜನಾ ಆನಂದ್, ತಬಲ ನಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ವಿಜಯ್ ಈಶ್ವರ್ ಅವರು ಬರೆದು ನಾನೇ ಹಾಡಿ ಸಂಗೀತವನ್ನೂ ನೀಡಿರುವ ಚಿತ್ರದ ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದೆ. “ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ.‌ ಈ ಚಿತ್ರದಲ್ಲಿ ನಾನು ನಾಯಕನಾಗಿ‌ ನಟಿಸಲು ನವರಸನ್ ಅವರೆ ಮುಖ್ಯ ಕಾರಣ ಅವರಿಗೆ ವಿಶೇಷ ಧನ್ಯವಾದ ಎಂದರು ಚಂದನ್‌ ಶೆಟ್ಟಿ.

ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು “ಸೂತ್ರಧಾರಿ” ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ʼಸ್ಪಾರ್ಕ್‌ʼ ಪೋಸ್ಟರ್‌ ವಿವಾದಕ್ಕೆ ತೆರೆ: ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ನಿರ್ದೇಶಕ!

ಸ್ಪಾರ್ಕ್‌ ಸಿನಿಮಾ ಪೋಸ್ಟರ್‌ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಪಾರ್ಕ್‌ ಚಿತ್ರ ತಂಡದಿಂದ ನಿನ್ನೆ ಪೋಸ್ಟರ್‌ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್‌ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್‌ ವಿರುದ್ಧ ನಟಿ, ನಿರ್ಮಾಪಕಿ ಶೃತಿ ನಾಯ್ಡು ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಚಿತ್ರದ ನಿರ್ದೇಶಕರು ರಮೇಶ್‌ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ.

ಸ್ಪಾರ್ಕ್‌ ಸಿನಿಮಾಗೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರಿಗೆ ಮೊದಲ ಅನುಭವ. ಹೀಗಾಗಿ ಸಣ್ಣದೊಂದು ತಪ್ಪು ನಡೆದು ಹೋಗಿದೆ. ಆ ತಪ್ಪನ್ನು ಈಗ ತಿದ್ದಿಕೊಂಡಿದ್ದಾರೆ. “ರಮೇಶ್‌ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದು, ನಿಮ್ಮಿಂದ ಪರ್ಮಿಷನ್‌ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್‌ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಆದರೆ ಅದು ಮಿಸ್‌ ಕಮ್ಯೂನಿಕೇಷನ್‌ ಆಗಿದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ. ಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ ಮಾಡಿ. ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ ಎಂದು ರಮೇಶ್‌ ಇಂದಿರಾ ಹೇಳಿದ್ದಾರೆ.

ಏನಿದು ವಿವಾದ?
ಪ್ರೇಮ್‌ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪೋಸ್ಟರ್‌ ನಲ್ಲಿ, ಒಬ್ಬ ರಾಜಕಾರಣಿಯ ಚಿತ್ರವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ನೀಡುವ ಚಿತ್ರವಿತ್ತು. ಆ ರಾಜಕಾರಣಿಯ ಖ್ಯಾತ ಕಲಾವಿದ ಕಂ ನಿರ್ದೇಶಕ ರಮೇಶ್ ಇಂದಿರಾ ಅವರದ್ದು. ಪೋಸ್ಟರ್‌ ರಮೇಶ್ ಇಂದಿರಾ ಅವರ ಚಿತ್ರ ‘ಭೀಮಾ’ ಸಿನಿಮಾದ್ದಾಗಿತ್ತು. ಹೀಗಾಗಿ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಚಿತ್ರತಂಡ ಹಾಗೂ ಪ್ರೇಮ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಅನುಮಪತಿ ಪಡೆಯದೇ ರಮೇಶ್‌ ಇಂದಿರಾ ಪರವಾಗಿ ಕಾನೂನು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಇದೀಗ ಈ ವಿವಾದವು ತಿಳಿಕೊಂಡಿದೆ.

ಸ್ಪಾರ್ಕ್‌ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಪತ್ರಕರ್ತನ ರೋಲ್‌ ಪ್ಲೇ ಮಾಡುತ್ತಿದ್ದು, ರಚನಾ ಇಂದರ್‌ ನಾಯಕಿಯಾಗಿ ಸಾಥ್‌ ಕೊಡುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ‌ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ಸ್ಪಾರ್ಕ್‌ ಶೂಟಿಂಗ್‌ ಭರದಿಂದ ಸಾಗುತ್ತಿದೆ.

error: Content is protected !!