Categories
ಸಿನಿ ಸುದ್ದಿ

ಖುಷಿಯ ಬರ್ತ್ ಡೇಗೆ ಸಖತ್ ಪೋಸ್ಟರ್ ಬಂತು: ಫುಲ್ ಮೀಲ್ಸ್ ಶೂಟಿಂಗ್ ಮುಗೀತು ; ಪುಲ್ ರೀಲ್ಸ್ ನೋಡೋದಷ್ಟೆ ಬಾಕಿ

ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ಫುಲ್ ಮೀಲ್ಸ್ ಚಿತ್ರದ ನಾಯಕಿ ಖುಷಿ ರವಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬರ್ತ್ ಡೇ ಫೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಶಾಸ್ತ್ರ ಮುಗಿಸಿದ ಚಿತ್ರತಂಡ, ಚಿತ್ರೀಕರಣದ ಕೊನೆಯ ದಿನ, ಖುಷಿ ರವಿ ಅವರನ್ನು ನೆನಪಿಸಿಕೊಂಡ ತಕ್ಷಣ ಯಾವ ತಿನ್ನುವ ಪದಾರ್ಥ ನೆನಪಾಗುತ್ತದೆ ಎಂಬ ವಿಭಿನ್ನ ಪ್ರಶ್ನೆಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ, ಆ ವೀಡಿಯೋವನ್ನು ಖುಷಿ ರವಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಚಿತ್ರದ ಮತ್ತೋರ್ವ ನಾಯಕಿ ತೇಜಸ್ವಿನಿ ಶರ್ಮ ಈ ವೀಡಿಯೋದ ರುವಾರಿಯಾಗಿದ್ದು, ತನ್ನ ಸಹನಟಿ ಮತ್ತು ಸ್ನೇಹಿತೆಗೆ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ‘ಫುಲ್ ಮೀಲ್ಸ್’ ನಲ್ಲಿ ಖುಷಿ ರವಿ ‘ಪೂಜಾ’ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ಇದುವರೆಗಿನ ಅವರ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ರೀತಿಯ ಪಾತ್ರ ಇದಾಗಿದ್ದು, ಜನರು ಪಾತ್ರವನ್ನು ಖಂಡಿತ ಇಷ್ಟಪಡುತ್ತಾರೆಂಬ ವಿಶ್ವಾಸವನ್ನು ಹೊಂದಿದ್ದಾರೆ. ಯುವ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ.

Categories
ಸಿನಿ ಸುದ್ದಿ

ಕಿರಣ್ ರಾಜ್ ಮೇಘ ಸಂದೇಶ: ಟೀಸರ್ ಬಂತು

ಕನ್ನಡತಿ” ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ “ಮೇಘ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ “ಮೇಘ” ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು “ಮೇಘ” ನನ್ನ ಮೊದಲ ನಿರ್ದೇಶನದ ಚಿತ್ರ. “ಮೇಘ” ಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದ ಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ “ಮೇಘ” ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ.

ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನನಗೆ ಸಿನಿಮಾ ರಂಗ ಹೊಸತು. ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಹಾಗೂ ತ್ರಿವಿಕ್ರಮ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ಯತೀಶ್ ಹೆಚ್ ಆರ್ ಹೇಳಿದರು.

ನಾನು ಈವರೆಗೂ ಮಾಡಿರದ ಪಾತ್ರದಲ್ಲಿ “ಮೇಘ” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್ ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಕಿರಣ್ ರಾಜ್.

ಈ ಚಿತ್ರದ ವಿಶೇಷವೆಂದರೆ ನನ್ನ ಹಾಗೂ ನಾಯಕ ಇಬ್ಬರ ಹೆಸರು “ಮೇಘ” ಎಂದು. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕಿ ಕಾಜಲ್ ಕುಂದರ್.

ಚಿತ್ರದ ಛಾಯಾಗ್ರಾಹಕ & ಸಂಕಲನಕಾರ ಗೌತಮ್ ನಾಯಕ್, ನಟಿ ಶ್ರೀವಿದ್ಯ ಹಾಗೂ ತ್ರಿವಿಕ್ರಮ ಸಾಫಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಜಸ್ಟ್ ಪಾಸ್ ಹುಡುಗರಿಗೆ ಶಾಸಕ ಪ್ರದೀಪ್ ಈಶ್ವರ್ ಹಿತವಚನ: ಸಾಂಗ್ ರಿಲೀಸ್ ಆಯ್ತು

ಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರು ಹಾಗೂ ಪರಿಶ್ರಮ ಅಕಾಡೆಮಿಯ ಸ್ಥಾಪಕರು ಆದ ಪ್ರದೀಪ್ ಈಶ್ವರ್, ರಾಯ್ಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದ ಹಾಗೂ ಶ್ರೀ, ಪ್ರಣತಿ ನಾಯಕ-ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಹಾಡನ್ನು ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಜೊತೆಗೂಡಿ ಬಿಡುಗಡೆ ಮಾಡಿದರು. ಕವಿರಾಜ್ ಬರೆದಿರುವ, ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ “ಟೈಮಿಗೇ ಟೈಮೇನೇ ದುಶ್ಮನ್” ಎಂಬ ಯುವಕರಿಗೆ ಪ್ರಿಯವಾಗುವ ಈ ಗೀತೆ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ.

ಪ್ರಪಂಚದಲ್ಲಿ ಹೆಚ್ಚು ಅಂಕ ಬಂದವರಿಗೆ ಸಾಕಷ್ಟು ಕಾಲೇಜುಗಳಿದೆ. ಆದರೆ “ಜಸ್ಟ್ ಪಾಸ್” ಆದವರಿಗಾಗಿಯೇ ನಮ್ಮ ಚಿತ್ರದಲ್ಲಿ ಕಾಲೇಜು ತೆರೆಯಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟೀಸರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಈ ಹಾಡನ್ನು ನಾನು ಇಷ್ಟಪಡುವ ಬರಹಗಾರರಾದ ವಿಶ್ವೇಶ್ವರ ಭಟ್ ಹಾಗೂ ಶಾಸಕರಾದ ಪ್ರದೀಪ್ ಈಶ್ವರ್ ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ.

ಏಕೆಂದರೆ ಪರಿಶ್ರಮ ಅಕಾಡೆಮಿಯ ಮೂಲಕ ಪ್ರದೀಪ್ ಈಶ್ವರ್ ಅವರು ಸಹ ಸಾಕಷ್ಟು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳನ್ನು ಫಸ್ಟ್ ಕ್ಲಾಸ್ ಬರುವ ಹಾಗೆ ಮಾಡುತ್ತಿದ್ದಾರೆ. ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ್ದು ನಿಜಕ್ಕೂ ಹೆಮ್ಮೆ ಎಂದು ತಿಳಿಸಿದ ನಿರ್ದೇಶಕ ಕೆ.ಎಂ.ರಘು, ಪ್ರದೀಪ್ ಈಶ್ವರ್ ತಮ್ಮ “ಪರಿಶ್ರಮ” ಪುಸ್ತಕದಲ್ಲಿ ಬರೆದುಕೊಂಡಿರುವ ಜೀವನದ ಕುರಿತಾದ ನಾಲ್ಕು ಅರ್ಥಗರ್ಭಿತ ಸಾಲುಗಳನ್ನು ವಾಚಿಸಿದರು.

ಪ್ರದೀಪ್ ಈಶ್ವರ್ ಹಾಗೂ ವಿಶ್ವೇಶ್ವರ ಭಟ್ ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ್ದಾರೆ ಅವರಿಗೆ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಕೆ.ವಿ.ಶಶಿಧರ್.

ನಮ್ಮ ದೇಶದ ಅತೀ ಹೆಚ್ಚು ಶ್ರೀಮಂತರೆಲ್ಲಾ “ಜಸ್ಟ್ ಪಾಸ್” ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚು ಅಂಕ ಪಡೆದಿರುವವರೆ ಎಂದು ಮಾತನಾಡಿದ ವಿಶ್ವೇಶ್ವರ ಭಟ್ ಅವರು ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ. ಚಿತ್ರದ ಹೆಸರು “ಜಸ್ಟ್ ಪಾಸ್” ಅಷ್ಟೇ. ಆದರೆ ಗಳಿಕೆಯಲ್ಲಿ “ಫಸ್ಟ್ ಕ್ಲಾಸ್” ಆಗಲಿ ಎಂದು ಹಾರೈಸಿದರು.

ನಿಜವಾಗಲೂ ನಮ್ಮ ದೇಶದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರೆ ಅದು “ಜಸ್ಟ್ ಪಾಸ್” ಆದರಿಂದ ಮಾತ್ರ. ಉದಾಹರಣೆಗೆ ನಾನೇ. ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟ ನಾನು, ಇಂದು “ಪರಿಶ್ರಮ” ಅಕಾಡೆಮಿ ಸ್ಥಾಪಿಸಿ ಐನ್ನೂರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದೇನೆ. ವರ್ಷಕ್ಕೆ ಸಾಕಷ್ಟು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ವೈದ್ಯರಾಗುತ್ತಿದ್ದಾರೆ. ಹಾಗಂತ ನೀವು rank ಬರಬೇಡಿ ಎಂದು ಹೇಳುತ್ತಿಲ್ಲ. ಆದರೆ “ಜಸ್ಟ್ ಪಾಸ್” ಆದೆ ಅಂತ ಬೇಜಾರು ಮಾಡಿಕೊಳ್ಳಬೇಡಿ. ನನಗೆ ತಿಳಿದ ಹಾಗೆ ಈ ಚಿತ್ರದ ಕಥೆಯೂ ಇದೇ ರೀತಿ ಇರಬಹುದು. “ಜಸ್ಟ್ ಪಾಸ್” ಚಿತ್ರ ಚೆನ್ನಾಗಿ ಓಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ತಮ್ಮದೇ ಮಾತಿನ ಶೈಲಿಯಲ್ಲಿ ಚಿತ್ರತಂಡಕ್ಕೆ ಶುಭ ಕೋರಿದರು ‌.

ನಾಯಕ ಶ್ರೀ, ನಾಯಕಿ ಪ್ರಣತಿ, ನಟ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್ ಮುಂತಾದ ಚಿತ್ರತಂಡದ ಸದಸ್ಯರು “ಜಸ್ಟ್ ಪಾಸ್” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಕೆಟಿಎಂ ಎಂಬ ಸೋಜಿಗದ ಚಿತ್ರ: ದೀಕ್ಷಿತ್ ಸಿನಿಮಾದ ಮೆಲೋಡಿ ಸಾಂಗ್ ಬಂತು

‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ‘ಕೆಟಿಎಂ’ ಸಿನಿಮಾ ಟೀಸರ್ ನಿಂದಲೇ ಭಾರೀ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೆಲೋಡಿ ಹಾಡು ಅನಾವರಣಗೊಂಡಿದೆ. ಸೋಜಿಗ ಎಂಬ ಸಾಂಗ್ ಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಚೇತನ್ ರಾವ್ ಮ್ಯೂಸಿಕ್ ಶ್ರಮ ಹಾಡಿಗಿದೆ. ದೀಕ್ಷಿತ್ ಹಾಗೂ ಕಾಜಲ್ ಕುಂದರ್ ಸೋಜಿಗ ಸಿಂಗಿಂಗ್ ಧಮಾಕದಲ್ಲಿ ಮಿಂಚಿದ್ದಾರೆ.

‘ಅಥರ್ವ’ ಸಿನಿಮಾ ಖ್ಯಾತಿಯ ಅರುಣ್, ಈ ‘ಕೆಟಿಎಂ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅರುಣ್ ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಮೊದಲ ಹಂತವಾಗಿ ಇಂಟ್ರಸ್ಟಿಂಗ್ ಟೀಸರ್ ಬಿಡುಗಡೆ ಮಾಡಿತ್ತು. ಸ್ಯಾಂಡಲ್ವುಡ್ನ 50 ಮಂದಿ ಸೆಲೆಬ್ರಿಟಿಗಳು ‘ಕೆಟಿಎಂ’ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದರು.

ನವಿರಾದ ಪ್ರೇಮ್ ಕಹಾನಿ ಒಳಗೊಂಡಿರುವ ‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಕ್ಷಿತ್, ನಾಲ್ಕು ಶೇಡ್ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ದೀಕ್ಷಿತ್ ಜೋಡಿಯಾಗಿ ಕಾಜಲ್ ಕುಂದರ್ ಹಾಗೂ ಸಂಜನಾ ನಟಿಸಿದ್ದಾರೆ. ಇವರನ್ನು ಹೊರತುಪಡಿಸಿ ಚಿತ್ರದಲ್ಲಿ ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

‘ಕೆಟಿಎಂ’ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

Categories
ಸಿನಿ ಸುದ್ದಿ

ಅಪ್ಪಾ ಐ ಲವ್ ಯೂ ಇದು ನೆಪಿರಲಿ ಚಿತ್ರ : ಫಸ್ಟ್ ಲುಕ್ ರಿಲೀಸ್ ಮಾಡಿದ ಧ್ರುವ ಸರ್ಜಾ

ಕೆ ಆರ್ ಎಸ್ ಪ್ರೊಡಕ್ಷನ್ಸ್ ನ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಪ್ಪಾ ಐ ಲವ್ ಯೂ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ.

ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಅಪ್ಪಾ ಐ ಲವ್ ಯೂ ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ಸುನಿ ಸಿಂಪಲ್ ಸ್ಟೋರಿಗೆ ಗೋಲ್ಡನ್ ಟಚ್: ಸರಳ ಪ್ರೇಮಕಥೆ ಗುನು ಗುನುಗಿದ ವಿನಯ್

ಸಿಂಪಲ್ ಸುನಿ ನಿರ್ದೇಶಿಸಿ ವಿನಯ್ ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿರುವ ಎಂಎಂ ಲೆಗಸಿಯಲ್ಲಿ ಗುನುಗುನುಗು ಎಂಬ ಮೆಲೋಡಿ ಮಸ್ತಿಯನ್ನು ಗೋಲ್ಡನ್ ಸ್ಟಾರ್ ಗಣೇಶ್ ರಿಲೀಸ್ ಮಾಡಿ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಸಿನಿಮಾಗೆ ಸಾಥ್ ನೀಡಿದರು.

ಹಾಡು ಬಿಡುಗಡೆ ಮಾತನಾಡಿದ ಗಣೇಶ್, ಹಾಡು ಬಹಳ ಚೆನ್ನಾಗಿದೆ. ಆ ಹುಕ್ ಲೈನ್ ಬಹಳ ಇಷ್ಟವಾಯಿತು. ಗುನು ಗುನುಗು ಅಂತಾ. ನನಗೆ ಈ ರೀತಿ ಸಾಂಗ್ ಕೇಳಲು ಬಹಳ ಇಷ್ಟ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ವಿನಯ್ ಹಾಗೂ ಹೀರೋಯಿನ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ಅದು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೇಡ್ ಸುನಿ. ಕಥೆ ಮಾಡುವ ವಿಚಾರದಲ್ಲಿ ಕಂಪ್ಲಿಕೇಷನ್ ಇದೆ. ಸುನಿ ಕಥೆ ಹೇಳಬೇಕಾದರೆ ಸಿಂಪಲ್ ಆಗಿ ಹೇಳ್ತಾರೆ. ಸುನಿ ಅವರ ಜೊತೆ ನನ್ನ ದೊಡ್ಡ ಜರ್ನಿ ಇದೆ. ಚಮಕ್ ಆದ್ಮೇಲೆ ಸಿಕ್ತಾ ಇದ್ದೇವು. ಯಾವುದಾದರೂ ಲೈನ್ ಬಂದರೆ ಹೇಳುವವರು. ಮೂರ್ನಾಲ್ಕು ಲೈನ್ ಹೇಳಿದಾಗ ಗೊತ್ತಾಯ್ತು ಸಿಂಪಲ್ ಸುನಿ ಅಲ್ಲ ಕಂಪ್ಲಿಕೇಟೆಡ್ ಸುನಿ. ಒಂದ್ ಒಂದು ಸಾರಿಗೆ ಒಂದೊಂದು ಐಡಿಯಾ ತರುತ್ತಾರೆ. ಅದೇ ತರ ಈ ಸಿನಿಮಾ ಕೂಡ ವಿಭಿನ್ನವಾಗಿ ಇರುತ್ತದೆ ಅಂದುಕೊಂಡಿದ್ದೇನೆ. ಸುನಿಯ ಡೈಲಾಗ್, ಬರವಣಿಗೆ ಶೈಲಿ ನಾನು ದೊಡ್ಡ ಅಭಿಮಾನಿ. ಯಾವ ನಿರ್ದೇಶಕನಿಗೆ ಬರವಣಿಗೆ, ಭಾಷೆ ಹಿಡಿತ ಇರುತ್ತದೆಯೋ ಆತನಿಗೆ ತುಂಬಾ ಚೆನ್ನಾಗಿ ಹೊಳೆಯುತ್ತದೆ ಎಲ್ಲಾ. ನಮ್ಮ ಭಾಷೆ, ಅಕ್ಷರ, ವ್ಯಾಕರಣ ಮೇಲೆ ಹಿಡಿತ ಇರುವ ನಿರ್ದೇಶಕರಲ್ಲಿ ಒಬ್ಬರು ಸುನಿ ಎಂದರು.

ನಟ ವಿಜಯ್ ರಾಜ್ ಕುಮಾರ್ ಮಾತನಾಡಿ, ಗುನು ಗುನುಗು ತುಂಬಾ ಇಷ್ಟವಾದ ಹಾಡು. ವೀರ್ ಸಮರ್ಥ್ ಅವರು ತುಂಬಾ ಚೆನ್ನಾಗಿ ಮ್ಯೂಸಿಕ್ ಮಾಡಿದ್ದಾರೆ. ಸಚಿನ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಇದೊಂದೇ ಕೊರಿಯೋಗ್ರಾಫ್ ಸಾಂಗ್ ಈ ಚಿತ್ರದಲ್ಲಿ ಇರುವುದು. ಇಡೀ ಟೀಂಗೆ ಧನ್ಯವಾದ. ಈ ಬಾರಿ ಫೈಟ್ ಇಲ್ಲ ಬರೀ ಪ್ರೀತಿ. ಒಂದು ಸರಳ ಪ್ರೇಮಕಥೆ ನೋಡಿ. ನೆಕ್ಸ್ಟ್ ಆಕ್ಷನ್ ನೋಡಿ.‌ನನ್ನದು ಅತಿಷಯ ಎಂಬ ಪಾತ್ರ. ಚಿಕ್ಕಪೇಟೆಯಲ್ಲಿ ಇಡೀ ಕುಟುಂಬ ಕಥೆ. ಈ ಕಥೆಯನ್ನು ಸುನಿ ಅವರು ತುಂಬಾ ಸರಳವಾಗಿ ಹೇಳಿದ್ದಾರೆ ಎಂದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಿರ್ಮಾಪಕರಾದ ರಮೇಶ್ ಸರ್ ಸಿನಿಮಾಗೆ ಏನೂ ಬೇಕು ಎಲ್ಲಾ ಕೊಟ್ಟಿದ್ದಾರೆ‌. ಪಾತ್ರಕ್ಕೆ ಏನೂ ಬೇಕು ಎಲ್ಲವನ್ನೂ ವಿನಯ್ ಅವರು ಕಲಿತ್ತಿದ್ದಾರೆ. ಸ್ವಾದಿಷ್ಟ, ಮಲ್ಲಿಕಾ ಇಬ್ಬರು ಅದ್ಭುತವಾಗಿ ನಟಿಸಿದ್ದಾರೆ. ಸಚಿನ್ ಅದ್ಭುತವಾಗಿ ಹಾಡು ಬರೆದಿದ್ದಾನೆ. ವೀರ ಸಮರ್ಥ್ ಸರ್ ಫರ್ಪೆಕ್ಟ್ ಟೈಮ್ ಗೆ ಡಿಲಿವರಿ ಮಾಡುವವರು. ಯಾವಾಗಲೂ ಕೀ ಬೋರ್ಡ್ ಮುಂದೆ ಕುಳಿತಿರುತ್ತಾರೆ. ಸಿನಿಮಾ ನೋಡಿದ ನಂತರ ಅವರ ಸ್ಟ್ರೇಂಥ್ ಏನೂ ಅನ್ನೋದು ಗೊತ್ತಾಗುತ್ತದೆ ಎಂದರು.

ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ಸುನಿ ಸರ್ ನನ್ನ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ರಮೇಶ್ ಸರ್ ಅಂತಾ ಪ್ರೊಡ್ಯೂಸರ್ ಎಲ್ಲಾ ಆರ್ಟಿಸ್ಟ್ ಗೆ ಸಿಗಬೇಕು. ತುಂಬಾ ಫ್ರೆಂಡ್ಲಿ. ವಿನಯ್ ಅವರ ಬಗ್ಗೆ ತುಂಬಾ ಹೇಳಬೇಕಿದೆ. ಮುಂದಿನ ಇವೆಂಟ್ ನಲ್ಲಿ ಒಂದೊಂದಾಗಿ ಹೇಳುತ್ತೇ‌ನೆ. ನನಗೆ ಒಳ್ಳೆ ಕೋ ಆರ್ಟಿಸ್ಟ್. ನಿಮ್ಮ ಜೊತೆ ನಟಿಸಲು ಮತ್ತಷ್ಟು ಅವಕಾಶಗಳು ಸಿಗಲಿ. ಟೆಕ್ನಿಷಿಯನ್ಸ್ ತುಂಬಾ ಫ್ರೆಂಡ್ಲಿಯಾಗಿ ಟ್ರೀಟ್ ಮಾಡಿದರು. ಇದು ನನ್ನ ಎರಡನೇ ಮೂವೀ. ಅನುರಾಧಾ ಪಾತ್ರ ನಿಮಗೆ ಇಷ್ಟ ಆಗುತ್ತದೆ ಎಂದರು.

ಮಲ್ಲಿಕಾ ಸಿಂಗ್ ಮಾತನಾಡಿ, ಈ ಅದ್ಭುತ ಪ್ರಾಜೆಕ್ಟ್ ಭಾಗವಾಗಿದ್ದಕ್ಕೆ ಖುಷಿ ಇದೆ. ಮೊದಲು ಈ ಪ್ರಾಜೆಕ್ಟ್ ನಲ್ಲಿ ನಟಿಸುವಾಗ ಭಯವಾಗಿತ್ತು. ಆ ನಂತರ ಎಲ್ಲಾ ಸುಲಭವಾಗಿ ಆಯ್ತು. ನಿಮಗೆ ಈ ಚಿತ್ರ ಇಷ್ಟವಾಗುತ್ತದೆ ಎಂದರು.

ಗುನುಗುನುಗು ಹಾಡಿಗೆ ಸಚಿನ್ ಸಂಘೈ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದ್ದು,
ಕೇಶವ್ ಆನಂದ್ ಧ್ವನಿಯಾಗಿದ್ದಾರೆ.
ವಿನಯ್ ರಾಜ್ ಕುಮಾರ್ ಹಾಗೂ ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಸ್ಪೆಷಲ್ ರೋಲ್ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆದವರು. ಇದೀಗ ಅವರು ‘ಒಂದು ಸರಳ ಪ್ರೇಮಕಥೆ’ ಹೇಳೋದಿಕ್ಕೆ ಬರ್ತಿದ್ದಾರೆ. ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳ 8ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ರಣಾಕ್ಷ ತಂಡಕ್ಕೆ ನಾಗೇಂದ್ರ ಪ್ರಸಾದ್ ಸಾಥ್: ಆಡಿಯೋ ಟೀಸರ್ ರಿಲೀಸ್

ಯುವ ಪ್ರತಿಭೆಗಗಳ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ “ರಣಾಕ್ಷ”. ಈ ಚಿತ್ರದ ಹಾಡುಗಳು ಹಾಗೂ ಟೀಸರ್ ನ್ನು ಸಾಹಿತಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ನಾಗೇಂದ್ರ ಪ್ರಸಾದ್ ಹೇಳಿದ್ದಿಷ್ಟು.

ನಿರ್ದೇಶಕ ರಾಘವ ನನಗೆ ಬಹಳ ವರ್ಷದ ಗೆಳೆಯರು , ನಾನು ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಕೊಂಡು ಇಲ್ಲಿಗೆ ಬಂದಿರಲಿಲ್ಲ , ಆದರೆ ಟೀಸರ್ ಹಾಗೂ ಹಾಡುಗಳನ್ನು ನೋಡಿದ ಮೇಲೆ ತಂಡದ ಶ್ರಮ ಕಾಣುತ್ತದೆ. ಈ ರಣಾಕ್ಷ ಟೈಟಲ್ಲೇ ಸ್ಟ್ರಾಂಗ್ ಇದೆ. ಮೊದಲೆಲ್ಲಾ ಸಿನಿಮಾಗಳು ಹೆಚ್ಚು ಇರಲಿಲ್ಲ , ಹಾಡುಗಳು ಕೂಡ ಕಮ್ಮಿ ಇತ್ತು , ಪದೇ ಪದೇ ಅದೇ ಹಾಡನ್ನು ಆಕಾಶವಾಣಿ ಹಾಗೂ ಸಮಾರಂಭಗಳಲ್ಲಿ ಕೇಳಿದಾಗ ಸದಾ ನೆನಪಿಗೆ ಬರುತ್ತಿತ್ತು , ಈಗ ವರ್ಷಕ್ಕೆ ಸುಮಾರು 300 ಚಿತ್ರಗಳು ಬರುತ್ತಿವೆ. ಇನ್ನು ಎಷ್ಟು ಹಾಡುಗಳು ಬಂದಿರಬೇಕು ಯೋಚಿಸಿ. ಅದರಲ್ಲೂ ಈ ಚಿತ್ರದ ಹಾಡುಗಳು ನೋಡಿದಾಗ ಬಹಳ ಖುಷಿ ಎನಿಸಿತು.

ಯಾಕೆಂದರೆ ನೋಡಿದ ಮೂರು ಹಾಡುಗಳು ಹೊಸತನದ ಸದ್ದನ್ನ ಮೂಡಿಸುತ್ತದೆ. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಕೆಲಸ ಸೊಗಸಾಗಿದೆ. ಅದೇ ರೀತಿ ಗಾಯಕರಿಗೂ ಕೂಡ ಉತ್ತಮ ಭವಿಷ್ಯವಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವ ರಘು, ನಾಯಕಿಯರಾದ ರಕ್ಷಾ ಹಾಗೂ ರೋಹಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮೋಹನ್ ರಾವ್ ನಾಲ್ವಡೆ, ರಮೇಶ್ ಗೌಡ , ಗಿರೀಶ್ ಗೌಡ, ಲಕ್ಷ್ಮಣ್ ಪಡಿಮನಿ ಸೇರಿದಂತೆ ಎಲ್ಲರೂ ಚಿತ್ರತಂಡದಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರಾಘವ ಮಾತನಾಡಿ, “ರಣಾಕ್ಷ” ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ, ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಒಳಗೊಂಡ ಚಿತ್ರ , ಯಾವುದೇ ಮಂತ್ರ , ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ.. ಏನು.. ಎಂಬುದನ್ನು ಚಿತ್ರದಲ್ಲಿ ನೋಡಬೇಕು, ಬಹಳ ಶ್ರಮವಹಿಸಿ ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು. ನಿರ್ಮಾಪಕ ರಾಮು ಮಾತನಾಡುತ್ತಾ ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಯಾಕೆಂದರೆ ಒಂದು ಚಿತ್ರ ಮಾಡಿದರೆ ನಮಗೊಂದು ಹೆಸರು ಬರುತ್ತೆ ಅಂತ, ಈ ಚಿತ್ರವನ್ನು ನೋಡಿ ನೀವೆಲ್ಲ‌ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ ಎಂದರು.

ಕಾಮಿಡಿ ಕಿಲಾಡಿ ಮೂಲಕ ಜನರ ಗಮನವನ್ನು ಸೆಳೆದ ಪ್ರತಿಭೆ ನಾಯಕ ಸೀರುಂಡೆ ರಘು ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕ್ಯಾಮೆರಾ ಟ್ರೈಪಾಡ್ ಹಿಡಿದುಕೊಂಡು ಬಂದವನು , ನಂತರ ಕಾಮಿಡಿ ಕಿಲಾಡಿಯಲ್ಲಿ ಕಾಣಿಸಿಕೊಂಡೆ , ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಹೀರೋ ಅನ್ನುವುದಕ್ಕಿಂತ ಕಥಾ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಮೊದಲ ಬಾರಿಗೆ ಲೀಡ್ ರೋಲ್ ಮಾಡ್ತಿರುವೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ನನಗೆ ಅವಕಾಶ ನೀಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು. ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ. ಬೇರೆ ಪಾತ್ರಗಳನ್ನು ಮಾಡುವುದಿಲ್ಲ ಎಂದು ಭಾವಿಸಿ ಕೆಲವೊಂದು ಅವಕಾಶಗಳು ದೂರವಾಗಿತ್ತು , ನಾನೊಬ್ಬ ಕಲಾವಿದ. ಯಾವ ಪಾತ್ರವಾದ್ರು ಮಾಡುವುದಷ್ಟೇ ನನ್ನ ಕೆಲಸ. ಮೊದಲ ಬಾರಿಗೆ ಕಾಮಿಡಿ ಬಿಟ್ಟು ಕ್ಲಾಸ್ ಹಾಗೂ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದು ಕೇಳಿಕೊಂಡರು.

ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು. ಮತ್ತೊಬ್ಬ ನಟಿ ರೋಹಿ ಮಾತನಾಡಿ, ಅವಕಾಶ ಕೊಟ್ಟ ನಿರ್ಮಾಪಕ , ನಿರ್ದೇಶಕರಿಗೆ ಧನ್ಯವಾದಗಳು ನಮ್ಮ ಚಿತ್ರ ನೋಡಿ ಎಂದು ಕೇಳಿಕೊಂಡರು.

ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡುತ್ತಾ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿದ್ದು , ಬಹಳ ವಿಭಿನ್ನವಾಗಿ ಸಾಂಗ್ ಕಂಪೋಸ್ ಮಾಡಿದ್ದೇವೆ. ಒಂದೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದೆ. ಗಾಯಕರು ಕೂಡ ಬಹಳ ಸೊಗಸಾಗಿ ಹಾಡಿದ್ದಾರೆ ಎಂದರು.

ಚಿತ್ರದ ಛಾಯಾಗ್ರಹಕ ದೀಪಕ್ ಕುಮಾರ್ ಮಾತನಾಡಿ, ನನಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಜಾನಿ ಮಾಸ್ಟರ್ ಮೂಲಕ , ಬಹಳ ಕಷ್ಟಪಟ್ಟು ಈ ಚಿತ್ರವನ್ನು ಚಿತ್ರೀಕರಣ ಮಾಡಿದ್ದೇವೆ ಎಂದರು. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ , ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿದ್ದು, ಚಿತ್ರವೀಗ ಸೆನ್ಸರ್ ಹಂತಕ್ಕೆ ಹೋಗಿದೆ, ಅತಿ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ಮೂಡಿಬರಲಿದೆ.

Categories
ಸಿನಿ ಸುದ್ದಿ

ರಂಗು ತುಂಬೋ ಸಮಯ: ಜನವರಿ 19ಕ್ಕೆ ರಂಗಸಮುದ್ರ ರಿಲೀಸ್

ಸಿನಿಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದ ಬಹು ನಿರೀಕ್ಷಿತ ರೆಟ್ರೋ ಮೂವಿ “ರಂಗಸಮುದ್ರ” ಭರ್ಜರಿ ತಯಾರಿಯೊಂದಿಗೆ ಕರ್ನಾಟಕದಾದ್ಯಂತ ಬೆಳ್ಳಿ ತೆರೆಯ ಮೇಲೆ ಸಮುದ್ರದ ಅಲೆಯಂತೆ ಭೋರ್ಗರೆದು ಅಪ್ಪಳಿಸಿ ಜನವರಿ 19 ರಂದು ತೆರೆಕಾಣಲು ಸಿದ್ದವಾಗಿದೆ.

ಒಬ್ಬ ನಿರ್ದೇಶಕ ತಲೆಕೆಡಿಸ್ಕೊಂಡು ನಿಂತ್ರೆ…ಎಂಥಹ ಅದ್ಭುತವನ್ನೇ ಮಾಡಬಹುದು ಅನ್ನೋದಿಕ್ಕೆ ಈ ಚಿತ್ರವೇ ಸಾಕ್ಷಿ

” ಹೀರೋ ಇಲ್ಲದೆ ಕಥೇಯೆ ಹೀರೋ ಆಗಿರುವ ಈ ಚಿತ್ರದಲ್ಲಿ..ಪ್ರತಿ ಕಲಾವಿದರು ಕೂಡಾ ಈ ಚಿತ್ರಕ್ಕೆ ತುಂಬಾ ನಿಷ್ಠೆಯಿಂದ ತಮ್ಮನ್ನು ತೊಡಗಿಸಿಕೊಂಡಿರುವುದು ಟ್ರೇಲರ್ ನಲ್ಲೆ ಎದ್ದು ಕಾಣುತ್ತೆ”

“ಆ ಮೇಕಿಂಗ್ ಆ ಸಂಭಾಷಣೆ ಆ ನಟನೆಗಳು…..ಅಬ್ಬಬ್ಬಬ್ಬಾ ನೀವು ಹಿಂದೆ ಇನ್ಯಾವ ಸಿನಿಮಾದಲ್ಲೂ ನೋಡಿರೋಕೆ ಸಾಧ್ಯನೆ ಇಲ್ಲ”

“ಇಂತಹ ಒಂದು ಕಥೆಯೆ ಹೀರೋ ಆಗಿರುವ ಚಿತ್ರ…ಅದ್ರಲ್ಲೂ ನಮ್ಮ ಕನ್ನಡದ ಚಿತ್ರ ಸೋಲೋದು ಸೈಡಿಗಿರಲಿ ತಲೆ ಕೂಡಾ ತಗ್ಗಿಸಬಾರದು”

ಈ ರೀತಿ ರಂಗಸಮುದ್ರದ ಬಗ್ಗೆ ವಿಶ್ಲೇಶಿಸಿದ್ದು ಪ್ರೀಮಿಯರ್ ಶೋ ನೋಡಿದ ಹಿರಿಯ ಪತ್ರಕರ್ತರು ಹಾಗೂ ಸ್ಯಾಂಡಲ್ವುಡ್ ನ ಸೆಲೆಬ್ರೆಟಿಗಳು.

ಹೌದು ಸ್ಯಾಂಡಲ್‌ವುಡ್‌ನಲ್ಲಿ ಬಹಳ ದಿನಗಳ‌ ನಂತರ ಬಹುನಿರೀಕ್ಷಿತ ರೆಟ್ರೋ ಸಿನಿಮಾವೊಂದು ತಯಾರಾಗಿದೆ ಅದುವೆ ರಂಗಸಮುದ್ರ ಇದೇ ತಿಂಗಳು ತೆರೆಮೇಲೆ ಬರುವುದಕ್ಕೆ ರೆಡಿಯಾಗಿದೆ. ಇದೊಂದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾವಾಗುವುದರ ಜೊತೆಗೆ ದಕ್ಷಿಣ ಕನ್ನಡ ಭಾಷೆಯ ಜುಗಲ್ ಬಂದಿ ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದ್ದಂತಹ ಕಥೆಯನ್ನೆ ಆದರಸಿ ಸಿನಿಮಾ ಮಾಡಲಾಗಿದೆ. ಶಿಕ್ಷಣ ವಂಚಿತರಾಗಿ ಬಹಳ ಹಿಂದುಳಿದಿರುವ ಪ್ರದೇಶಗಳ ಸ್ಥಿತಿ-ಗತಿಯನ್ನು ಇಲ್ಲಿ ಅನಾವರಣ ಮಾಡಿ ತಿಳಿ ಹೇಳುವ ಕಾರ್ಯವನ್ನು ಈ ಸಿನಿಮಾದಿಂದ ಮಾಡಲಾಗುತ್ತಿದೆ.


ಈ ಚಿತ್ರ ಮೂಹೂರ್ತವಾಗಿ ನಾಲ್ಕು ವರ್ಷಗಳೇ ಆಗಿದೆ ಸತತ ಎರಡು ವರ್ಷ ಇಡೀ ವಿಶ್ವವೇ ಒಳಗಾದ ಕೋವಿಡ್ ಇಂದಾಗಿ ಸಿನಿಮಾ ಚಿತ್ರಿಕರಣ ತಡವಾಯಿತು…ತಡವಾದರು ಕೂಡ ಒಳ್ಳೆಯದೆ ಆಯಿತು ಸಿನಿಮಾಗೆ ಇನ್ನಷ್ಟು ಮಹತ್ವ ಸೇರಿಸಲು ಸಮಯ ಸಿಕ್ಕಿತು ಹಾಗಾಗಿ ಇನ್ನಷ್ಟು ಕ್ವಾಲಿಟಿ ಕೂಡ ಸಿಕ್ಕಿತು ಎನ್ನುತ್ತಾರೆ ನಿರ್ಧೇಶಕರು.
ಇನ್ನು ಮುಂದುವರಿದು ನೋಡುವುದಾದರೆ ದಕ್ಷಿಣ ಭಾರತದ ಮಹಾ ದಿಗ್ಗಜರೇ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ, ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಇನ್ನು ಹಲವಾರು ಮಂದಿ ಚಿತ್ರಕ್ಕೆ ಜೀವ ತುಂಬಿದ್ದಾರೆ.


ಈ ಚಿತ್ರದ ಹಾಡುಗಳಿಗೆ ಮುಖ್ಯವಾಗಿ ಎಂ.ಎಂ ಕೀರವಾಣಿ, ಕೈಲಾಶ್ ಕೇರ್. ವಿಜಯ್ ಪ್ರಕಾಶ್ ಸಂಚಿತ್ ಹೆಗ್ಡೆ ನವೀನ್ ಸಜ್ಜು ಚಿತ್ರದ ಸಂಗೀತ ನಿರ್ದೇಶಕ ದೇಸಿ ಮೋಹನ್ ಅಂತ ಘಟಾನುಘಟಿ ಹಾಡುಗಾರರೆ ಧನಿಯಾಗಿದ್ದರೆ.ಹಾಗೂ ಹಿನ್ನಲೆ ಸಂಗೀತದ ನಿರ್ವಹಣೆಯನ್ನು ಡೇನಿಯಲ್ ಕಿರಣ್ ಅವರು ಹೊತ್ತಿದ್ದು ಬಹಳ ಅಧ್ಬುತವಾಗಿ ನೀಡಿದ್ದಾರೆ..ಚಿತ್ರದ ಸಂಕಲವನ್ನು ಕೆ.ಜಿ.ಎಫ್ ಶ್ರೀಕಾಂತ್ ತಮ್ಮದೆ ಆದ ವಿಶಿಷ್ಟ ವಾದ ಬ್ರಾಂಡ್ ರೀತಿ ಮಾಡಿದ್ದಾರೆ.
ಆರ್.ಗಿರಿಯವರ ಛಾಯಾಗ್ರಹಣವಿದೆ.

ರಾಜ್‌ಕುಮಾ‌ರ್ ಅಸ್ಕಿ ಸಿನಿಮಾದ ಕಥೆ ಬರೆದು ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಈ ಕಥೆ ಹುಟ್ಟಿಕೊಂಡಿದ್ದೆ ಒಂದು ಕ್ರೇಜಿ ಮೂಮೆಂಟ್ ಎಂದು ಹೇಳುವ ನಿರ್ದೇಶಕರು ಈ ಸಿನಿಮಾ ಮಾಡುವಾಗ ಸಾಕಷ್ಟು ರಿಸರ್ಚ್ ಮಾಡಿದ್ದೀವಿ. ಹತ್ತು ಸಿನಿಮಾ ಮಾಡುವ ಬದಲು ಒಂದು ಸಿನಿಮಾ ಮಾಡಿದರು ಪ್ರೇಕ್ಷಕರ ಮನಸ್ಸಲ್ಲಿ ಅದು ಉಳಿಯಬೇಕು. ಕೆಲವೊಂದು ವಿಚಾರಕ್ಕೆ ಕೆಲವೊಮ್ಮೆ ಕಾಂಪ್ರಮೈಸ್ ಆಗಬೇಕಾಗುತ್ತದೆ ಆದರೆ ನಮ್ಮ ನಿರ್ಮಾಪಕರಾದ ಹೊಯ್ಸಳ ಕೊಣನೂರು ಅವರು ಯಾವುದಕ್ಕೂ ಕಾಂಪ್ರಮೈಸ್ ಆಗುವುದು ಬೇಡಾ ಹಾಗೊಮ್ಮೆ ಆಗುವುದಾದರೆ ಮತ್ತು ಏನೆ ಕೇಳುವುದಿದ್ದರು ಈಗಲೇ ಕೇಳಿ ಆಮೇಲೆ ಈ ಪಾತ್ರ ಅವರು ಮಾಡಬೇಕಿತ್ತು, ಆ ಹಾಡು ಅವರು ಹಾಡಬೇಕಿತ್ತು ಎಂಬಾ ನಿರಾಸೆ ನಿಮಗೆ ಬೇಡಾ ಯಾರು ಬೇಕೋ ಅವರನ್ನೆ ಕರೆತರುತ್ತೇನೆ ಎಂದು ಭರವಸೆ ನೀಡಿದರು. ನಮ್ಮ‌ಮನವಿಗೆ ಭರವಸೆ ನೀಡಿದ ನಿರ್ಮಾಪಕರು ನುಡಿದಂತಯೆ ಬೇಕಾಗಿರುವ ಅಮೂಲ್ಯ ತಾರೆಗಳನ್ನೆ ನೀಡಿದ್ದಾರೆ ಎಂದು ನಿರ್ಮಾಪಕರ ಬಗೆಗಿನ ಮಾತುಗಳನ್ನು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನಿರ್ದೇಶಕ, ನಿರ್ಮಾಪಕರಿಗೆ ಬೇಸರ ಆಗಿದ್ದು ಅಪ್ಪು ನಿಧನ. ಎಲ್ಲವೂ ಫೈನಲ್ ಆಗಿತ್ತು. ಆದರೆ ಅದೇ ಸಮಯಕ್ಕೆ ವಿಧಿ ಅಪ್ಪು ಜೀವನದ ಜೊತೆಗೆ ಆಟವಾಡಿ ಆಗಿತ್ತು. ಈ ಬಗ್ಗೆ ಬೇಸರ ಮಾಡಿಕೊಂಡ ನಿರ್ದೇಶಕ ರಾಜ್‌ಕುಮಾರ್ ಆಸ್ಕಿ. ‘ಈ ಸಿನಿಮಾದಲ್ಲಿ ಅಪ್ಪು ಸರ್‌ಗಾಗಿಯೇ ಬರೆದ ಒಂದು ಪಾತ್ರ ಇದೆ. ಐ.ಎ.ಎಸ್ ಆಫೀಸರ್ ಆಗಿ, ಇಡೀ ಸಿನಿಮಾದ ಜರ್ನಿಯಲ್ಲಿ ಅವರು ಇದ್ದರು. ಅವರನ್ನ ಭೇಟಿ ಮಾಡಿ ಕಥೆಯನ್ನು ಹೇಳಿದ್ದೆವು. ಆ ದುರ್ಘಟನೆ ನಡೆಯುವುದಕ್ಕೂ ಹಿಂದಿನ ದಿನ ಫೈನಲ್ ಕೂಡ ಮಾಡಿದ್ದರು. ಜೇಮ್ಸ್ ಸಿನಿಮಾ ಮುಗಿಯುತ್ತೆ. ನವೆಂಬರ್ 5-6ಕ್ಕೆ ಫಿಕ್ಸ್ ಮಾಡಿಕೊಳ್ಳಿ ಎಂದು ಫೈನಲ್ ಕೂಡ ಆಗಿತ್ತು. ಕಥೆಯೆಲ್ಲಾ ಪತ್ನಿ ಅಶ್ವಿನಿ ಅವರ ಸಮೇತವಾಗಿ ಒಕೆ ಎಂದಿದ್ದರು. ಅಷ್ಟೇ ಅಲ್ಲಾ ಆ ಸಿನಿಮಾವನ್ನು ನಾವೇ ತೆಗೆದುಕೊಳ್ಳಬಹುದಾ ಎಂದು ವಿಶ್ವಾಸದಲ್ಲಿ ಕೇಳಿದ್ದರು ಎನ್ನುತ್ತಾರೆ ನಿರ್ಮಾಪಕ ಹೊಯ್ಸಳ ಕೊಣನೂರು.

ರಂಗಸಮುದ್ರ ಸಿನಿಮಾ ಜನವರಿ 19ನೇ ತಾರೀಖಿನಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಚಿನ್ನಾರಿ ಮುತ್ತನ ಹೊಸ ಕೇಸ್: ಜನವರಿ 26ಕ್ಕೆ ಕೇಸ್ ಆಫ್ ಕೊಂಡಾಣ ರಿಲೀಸ್

ವಿಜಯ ರಾಘವೇಂದ್ರ , ಭಾವನಾ ಮೆನನ್‌ ನಟನೆಯ “ಕೇಸ್‌ ಆಫ್ ಕೊಂಡಾಣ’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ದೇವಿಪ್ರಸಾದ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ ‘ಸೀತಾರಾಮ್‌ ಬಿನೋಯ್‌’ ಎಂಬ ಚಿತ್ರ ಮಾಡಿದ್ದ ಇವರು ಈಗ ಹೈಪರ್‌ ಲಿಂಕ್‌ ಕಥೆ ಇರುವ ಇನ್ವೆಸ್ಟಿಗೇಷನ್‌ ಜಾನರ್‌ನ ಚಿತ್ರವನ್ನು ಮಾಡಿದ್ದಾರೆ. ಚಿತ್ರ ಜನವರಿ 26ರಂದು ತೆರೆಕಾಣಲಿದೆ.

ಈ ವೇಳೆ ಮಾತನಾಡಿದ ಬರಹಗಾರ ಹಾಗು ಸಂಭಾಷಣೆಕಾರ ಆಗಿರುಗ ಜೋಗಿ, ಹೊಸ ಹುಡುಗರ ಜೊತೆ ನಮಗೆ ಕಲಿಯುವುದು ಇರುತ್ತದೆ. ಹೇಳಿದ ಕಥೆ ಬಹಳ ಚೆನ್ನಾಗಿತ್ತು. ಈ ಕಥೆ ನಡೆಯವುದು ಸಂಜೆ ಶುರುವಾಗಿ ರಾತ್ರಿ ನಡೆಯುತ್ತದೆ. ಬೆಳಗ್ಗೆ ಮುಗಿಯುತ್ತದೆ. ಕೊಂಡಾಣ ಇರುವುದು ದೇವಿಪ್ರಸಾದ್ ಮನಸ್ಸಿನಲ್ಲಿ. ಪ್ರತಿ ಪಾತ್ರ ದ್ರೋಹ ಮತ್ತು ದ್ರೋಹ ಕಂಡುಹಿಡಿಯುವ ಪಾತ್ರ. ಡೈಲಾಗ್ ರೈಟರ್ ಆಗಿ ನನ್ನ ಬಹಳಷ್ಟು ತಿದ್ದಿದ್ದಾರೆ. ಸಿನಿಮಾ ಪ್ರೀತಿಯಿಂದ ಬಂದ ಹುಡುಗರು ಅದ್ಭುತ ಸೆಟ್ ನಲ್ಲಿ ಶೂಟ್ ಮಾಡಿದ್ದಾರೆ. ಈ ರೀತಿ ನಿರ್ದೇಶಕರು ಹಾಗೂ ನಿರ್ಮಾಪಕರು ಬೇಕು ಎಂದರು.

ನಿರ್ಮಾಪಕ ಸಾತ್ವಿಕ್ ಹೆಬ್ಬಾರ್, ಸೀತಾರಾಮ್ ಬಿನೋಯ್ ಮಾಡಿದ್ದು ಅನಿವಾರ್ಯದಿಂದ. ಡೈರೆಕ್ಟನ್ ವಿಭಾಗದಲ್ಲಿ ನಾನು ದೇವಿ ಪ್ರಸಾದ್ ಕೆಲಸ ಮಾಡುತ್ತಿದ್ದೇವು. ಸ್ವಾತಂತ್ರ್ಯವಾಗಿ ಸಿನಿಮಾ ಮಾಡಲು ಹೊರಟಾಗ ಆಗಿದ್ದು ಸೀತಾರಾಮ್ ಬಿನೋಯ್. ಈ ಚಿತ್ರಕ್ಕೆ ಜನ ಮೆಚ್ಚುಗೆ ಸಿಕ್ಕಿತ್ತು. ಇನ್ನೊಂದು ಹೆಜ್ಜೆ ಇಟ್ಟಾಗ ಆಗಿದ್ದು ಕೇಸ್ ಆಫ್ ಕೊಂಡಾಣ ಎಂದರು.

ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಜೋಗಿ ಸರ್ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಹೆಮ್ಮೆ ಇದೆ. ವಿಜಯ್ ಸರ್ ಸೆಕೆಂಡ್ ಅವಕಾಶ ಕೊಟ್ಟರು. ಕಥೆ ಕೇಳಿ ಒಕೆ ಎಂದರು. ಸೀತಾರಾಮ್ ಬಿನೋಯ್ ತರ ಚಿತ್ರ ಅಲ್ಲಾ. ಇದು ಮೂರು ನಾಲ್ಕು ಸ್ಟೋರಿ ಮೇಲೆ ಕಥೆ ಸಾಗುತ್ತದೆ. ಇದು ಐಮ್ಯಾಜಿನರಿ ಕಥೆ..ಹೈಪರ್ ಲಿಂಕ್ ಸಿನಿಮಾ ಎಂದರು.

ವಿಜಯ್ ರಾಘವೇಂದ್ರ ಮಾತನಾಡಿ, ಹೊಸಬರ ತಂಡ ತಾಳ್ಮೆಯಿಂದ ಕಾದು ಸಂಭಾಷಣೆ ಕೊಟ್ಟಿದ್ದಾರೆ. ಜೋಗಿ ಸರ್ ಅವರಿಗೆ ಧನ್ಯವಾದ. ಸೀತಾರಾಮ್ ಬಿನೋಯ್ ಆದ ಮೇಲೆ ಇನ್ನೊಂದು ಹಂತ ಬೆಳೆಯಬೇಕು. ಬೆಳವಣಿಗೆ ಕಾಣಬೇಕು. ಕಥೆ ರೂಪದಲ್ಲಿ ಅಥವಾ ಅದನ್ನು ಪ್ರೆಸೆಂಟ್ ಮಾಡುವ ರೀತಿ ಬೆಳವಣಿಗೆಯನ್ನು ಕಥೆ ರೂಪದಲ್ಲಿ ತಂದಿದ್ದರು. ಕೇಸ್ ಕೊಂಡಾಣ ಶೇಖಡಾ 80 ರಿಂದ 90 ರಾತ್ರಿ ಶೂಟ್
ಕೆಲಸದ ಬಗ್ಗೆ ಸಮಾಧಾನವಿದೆ.


ಆಕ್ಷನ್, ಎಮೋಷನ್ ಎಲ್ಲಾ ಒಟ್ಟಿಗೆ ಸಾಗುತ್ತದೆ. ದೇವಿ ಪ್ರಸಾದ್ ಕ್ಲಾರಿಟಿ ಇದೆ. ಒಬ್ಬ ನಟನಾಗಿ ನಾನು ಬಹಳಷ್ಟು ಕಲಿತ್ತಿದ್ದೇನೆ. ತುಂಬಾ ಖುಷಿ ಖುಷಿಯಿಂದ ಕೆಲಸ ಮಾಡಿದ್ದೇವೆ. ನಮ್ಮ ಸಿನಿಮಾದ ಕಂಟೆಂಟ್ ಹಾಗೂ ಡೇಟ್ ಮೇಲೆ ನಂಬಿಕೆ ಇದೆ ಎಂದರು.

ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಕಥೆಯನ್ನು ಎಣೆಯಲಾಗಿದೆ. ಹೈಪರ್‌ಲಿಂಕ್ ನಿರೂಪಣೆಯನ್ನು ಹೊಂದಿರುವ ಕೇಸ್ ಆಫ್ ಕೊಂಡಾಣದಲ್ಲಿ ಖುಷಿ ರವಿ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎಮೋಷನ್, ಕ್ರೈಂ, ಆಕ್ಷನ್, ಇರುವುದರ ಜೊತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ.

ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವ ಜಿತ್ ರಾವ್ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿಯವರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಯವರು ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕೇಸ್ ಆಫ್ ಕೊಂಡಾಣ ಗಣರಾಜ್ಯ ದಿನದಂದು ಪ್ರೇಕ್ಷಕರ ಎದುರು ಬರಲಿದೆ.

Categories
ಸಿನಿ ಸುದ್ದಿ

ಬ್ಯಾಚುಲರ್ ಪಾರ್ಟಿ ಬಲು ಜೋರು ಗುರು: ಸಖತ್ ಮೋಡಿ ಮಾಡಿದ ಟ್ರೇಲರ್; ಜನವರಿ 26ಕ್ಕೆ ರಿಲೀಸ್

ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ, ಅಭಿಜಿತ್ ಮಹೇಶ್ ನಿರ್ದೇಶನದ, ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಬ್ಯಾಚುಲರ್ ಪಾರ್ಟಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪಂಚಿಂಗ್ ಡೈಲಾಗ್ ಗಳ ಮೂಲಕ ಟ್ರೇಲರ್ ಎಲ್ಲರನ್ನೂ ಮೋಡಿ ಮಾಡುತ್ತಿದೆ‌.

ನಾನು ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನಗೆ ಅಭಿಜಿತ್ ಮಹೇಶ್ ಪರಿಚಯವಾದರು. “ಕಿರಿಕ್ ಪಾರ್ಟಿ”, ” ಅವನೇ ಶ್ರೀಮನ್ನಾರಾಯಣ” ಚಿತ್ರಗಳಲ್ಲಿ ಒನ್ ಲೈನ್ ಪಂಚಿಂಗ್ ಡೈಲಾಗ್ ಗಳು ಅಭಿಜಿತ್ ಅವರ ಕೊಡುಗೆ. ಅಂತಹ ಅದ್ಭುತ ಪ್ರತಿಭೆ ಅವರು. ಆಗಿನಿಂದಲೂ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನೂ ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ ಜನವರಿ 26 ಬಿಡುಗಡೆಯಾಗುತ್ತಿದೆ . ನೋಡಿ ಹಾರೈಸಿ ಎಂದರು ನಿರ್ಮಾಪಕ ರಕ್ಷಿತ್ ಶೆಟ್ಟಿ.

ಲಾಕ್ ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿದ್ದು ಎಂದು ಮಾತನಾಡಿದ ನಿರ್ದೇಶಕ ಅಭಿಜಿತ್ ಮಹೇಶ್, ಇದೊಂದು ಪಕ್ಕಾ ಎಂಟರ್ ಟೈನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ನಿರ್ದೇಶನ ಮಾಡಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು.

ನನ್ನ ಪಾತ್ರ ರಿಷಭ್ ಶೆಟ್ಟಿ ಅವರು ಮಾಡಬೇಕಿತ್ತು. ಅವರು “ಕಾಂತಾರ”ದಲ್ಲಿ ಬ್ಯುಸಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ ಹದಿನೈದು ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಖುಷಿಯಾಗಿದೆ ಎಂದರು ಲೂಸ್ ಮಾದ ಯೋಗಿ.

ಪರಂವಃ ಸ್ಟುಡಿಯೋಸ್ ನಲ್ಲಿ ನನ್ನದು ಇದು ಎರಡನೇ ಚಿತ್ರ. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಅಭಿಜಿತ್ ಮಹೇಶ್ ಅವರ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರೀಕರಣದ ಸಮಯ ತುಂಬಾ ಸಂತಸಮಯವಾಗಿತ್ತು ಎಂದರು ದಿಗಂತ್.

ಈ ಚಿತ್ರಕ್ಕೆ ಬೆಂಗಳೂರು ಅಷ್ಟೇ ಅಲ್ಲದೆ, ಥೈಲ್ಯಾಂಡ್, ಬ್ಯಾಂಕಾಕ್ ನಲ್ಲೂ ಹೆಚ್ಚಿನ ಚಿತ್ರೀಕರಣವಾಗಿದೆ. ನಾನು, ಯೋಗಿ ಹಾಗೂ ದಿಗಂತ್ ಅಲ್ಲಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ಇಬ್ಬರು ಒಳ್ಳೆಯ ನಟರು. ಅಭಿಜಿತ್ ಅವರು ಪ್ರತಿಭಾವಂತ ನಿರ್ದೇಶಕ. ಎಲ್ಲರೂ ” ಬ್ಯಾಚುಲರ್ ಪಾರ್ಟಿ ” ನೋಡಿ. ಪ್ರೋತ್ಸಾಹ ನೀಡಿ ಎಂದು ನಟ ಅಚ್ಯುತ ಕುಮಾರ್ ತಿಳಿಸಿದರು.

ಸಂಗೀತ ನಿರ್ದೇಶಕ ಅರ್ಜುನ್ ರಾಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಕಾಸ್ಟ್ಯೂಮ್ ಡಿಸೈನರ್ ಅರುಂಧತಿ ಹಾಗೂ ಪರಂವಃ ಸಂಸ್ಥೆಯ ಸಿ ಇ ಓ ಶ್ರೀನಿ ಶೆಟ್ಟಿ “ಬ್ಯಾಚುಲರ್ ಪಾರ್ಟಿ” ಚಿತ್ರದ ಕುರಿತು ಮಾತನಾಡಿದರು.

error: Content is protected !!