ರಣಾಕ್ಷ ತಂಡಕ್ಕೆ ನಾಗೇಂದ್ರ ಪ್ರಸಾದ್ ಸಾಥ್: ಆಡಿಯೋ ಟೀಸರ್ ರಿಲೀಸ್

ಯುವ ಪ್ರತಿಭೆಗಗಳ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ “ರಣಾಕ್ಷ”. ಈ ಚಿತ್ರದ ಹಾಡುಗಳು ಹಾಗೂ ಟೀಸರ್ ನ್ನು ಸಾಹಿತಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ನಾಗೇಂದ್ರ ಪ್ರಸಾದ್ ಹೇಳಿದ್ದಿಷ್ಟು.

ನಿರ್ದೇಶಕ ರಾಘವ ನನಗೆ ಬಹಳ ವರ್ಷದ ಗೆಳೆಯರು , ನಾನು ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಕೊಂಡು ಇಲ್ಲಿಗೆ ಬಂದಿರಲಿಲ್ಲ , ಆದರೆ ಟೀಸರ್ ಹಾಗೂ ಹಾಡುಗಳನ್ನು ನೋಡಿದ ಮೇಲೆ ತಂಡದ ಶ್ರಮ ಕಾಣುತ್ತದೆ. ಈ ರಣಾಕ್ಷ ಟೈಟಲ್ಲೇ ಸ್ಟ್ರಾಂಗ್ ಇದೆ. ಮೊದಲೆಲ್ಲಾ ಸಿನಿಮಾಗಳು ಹೆಚ್ಚು ಇರಲಿಲ್ಲ , ಹಾಡುಗಳು ಕೂಡ ಕಮ್ಮಿ ಇತ್ತು , ಪದೇ ಪದೇ ಅದೇ ಹಾಡನ್ನು ಆಕಾಶವಾಣಿ ಹಾಗೂ ಸಮಾರಂಭಗಳಲ್ಲಿ ಕೇಳಿದಾಗ ಸದಾ ನೆನಪಿಗೆ ಬರುತ್ತಿತ್ತು , ಈಗ ವರ್ಷಕ್ಕೆ ಸುಮಾರು 300 ಚಿತ್ರಗಳು ಬರುತ್ತಿವೆ. ಇನ್ನು ಎಷ್ಟು ಹಾಡುಗಳು ಬಂದಿರಬೇಕು ಯೋಚಿಸಿ. ಅದರಲ್ಲೂ ಈ ಚಿತ್ರದ ಹಾಡುಗಳು ನೋಡಿದಾಗ ಬಹಳ ಖುಷಿ ಎನಿಸಿತು.

ಯಾಕೆಂದರೆ ನೋಡಿದ ಮೂರು ಹಾಡುಗಳು ಹೊಸತನದ ಸದ್ದನ್ನ ಮೂಡಿಸುತ್ತದೆ. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಕೆಲಸ ಸೊಗಸಾಗಿದೆ. ಅದೇ ರೀತಿ ಗಾಯಕರಿಗೂ ಕೂಡ ಉತ್ತಮ ಭವಿಷ್ಯವಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವ ರಘು, ನಾಯಕಿಯರಾದ ರಕ್ಷಾ ಹಾಗೂ ರೋಹಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮೋಹನ್ ರಾವ್ ನಾಲ್ವಡೆ, ರಮೇಶ್ ಗೌಡ , ಗಿರೀಶ್ ಗೌಡ, ಲಕ್ಷ್ಮಣ್ ಪಡಿಮನಿ ಸೇರಿದಂತೆ ಎಲ್ಲರೂ ಚಿತ್ರತಂಡದಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರಾಘವ ಮಾತನಾಡಿ, “ರಣಾಕ್ಷ” ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ, ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಒಳಗೊಂಡ ಚಿತ್ರ , ಯಾವುದೇ ಮಂತ್ರ , ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ.. ಏನು.. ಎಂಬುದನ್ನು ಚಿತ್ರದಲ್ಲಿ ನೋಡಬೇಕು, ಬಹಳ ಶ್ರಮವಹಿಸಿ ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು. ನಿರ್ಮಾಪಕ ರಾಮು ಮಾತನಾಡುತ್ತಾ ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಯಾಕೆಂದರೆ ಒಂದು ಚಿತ್ರ ಮಾಡಿದರೆ ನಮಗೊಂದು ಹೆಸರು ಬರುತ್ತೆ ಅಂತ, ಈ ಚಿತ್ರವನ್ನು ನೋಡಿ ನೀವೆಲ್ಲ‌ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ ಎಂದರು.

ಕಾಮಿಡಿ ಕಿಲಾಡಿ ಮೂಲಕ ಜನರ ಗಮನವನ್ನು ಸೆಳೆದ ಪ್ರತಿಭೆ ನಾಯಕ ಸೀರುಂಡೆ ರಘು ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕ್ಯಾಮೆರಾ ಟ್ರೈಪಾಡ್ ಹಿಡಿದುಕೊಂಡು ಬಂದವನು , ನಂತರ ಕಾಮಿಡಿ ಕಿಲಾಡಿಯಲ್ಲಿ ಕಾಣಿಸಿಕೊಂಡೆ , ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಹೀರೋ ಅನ್ನುವುದಕ್ಕಿಂತ ಕಥಾ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಮೊದಲ ಬಾರಿಗೆ ಲೀಡ್ ರೋಲ್ ಮಾಡ್ತಿರುವೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ನನಗೆ ಅವಕಾಶ ನೀಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು. ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ. ಬೇರೆ ಪಾತ್ರಗಳನ್ನು ಮಾಡುವುದಿಲ್ಲ ಎಂದು ಭಾವಿಸಿ ಕೆಲವೊಂದು ಅವಕಾಶಗಳು ದೂರವಾಗಿತ್ತು , ನಾನೊಬ್ಬ ಕಲಾವಿದ. ಯಾವ ಪಾತ್ರವಾದ್ರು ಮಾಡುವುದಷ್ಟೇ ನನ್ನ ಕೆಲಸ. ಮೊದಲ ಬಾರಿಗೆ ಕಾಮಿಡಿ ಬಿಟ್ಟು ಕ್ಲಾಸ್ ಹಾಗೂ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದು ಕೇಳಿಕೊಂಡರು.

ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು. ಮತ್ತೊಬ್ಬ ನಟಿ ರೋಹಿ ಮಾತನಾಡಿ, ಅವಕಾಶ ಕೊಟ್ಟ ನಿರ್ಮಾಪಕ , ನಿರ್ದೇಶಕರಿಗೆ ಧನ್ಯವಾದಗಳು ನಮ್ಮ ಚಿತ್ರ ನೋಡಿ ಎಂದು ಕೇಳಿಕೊಂಡರು.

ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡುತ್ತಾ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿದ್ದು , ಬಹಳ ವಿಭಿನ್ನವಾಗಿ ಸಾಂಗ್ ಕಂಪೋಸ್ ಮಾಡಿದ್ದೇವೆ. ಒಂದೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದೆ. ಗಾಯಕರು ಕೂಡ ಬಹಳ ಸೊಗಸಾಗಿ ಹಾಡಿದ್ದಾರೆ ಎಂದರು.

ಚಿತ್ರದ ಛಾಯಾಗ್ರಹಕ ದೀಪಕ್ ಕುಮಾರ್ ಮಾತನಾಡಿ, ನನಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಜಾನಿ ಮಾಸ್ಟರ್ ಮೂಲಕ , ಬಹಳ ಕಷ್ಟಪಟ್ಟು ಈ ಚಿತ್ರವನ್ನು ಚಿತ್ರೀಕರಣ ಮಾಡಿದ್ದೇವೆ ಎಂದರು. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ , ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿದ್ದು, ಚಿತ್ರವೀಗ ಸೆನ್ಸರ್ ಹಂತಕ್ಕೆ ಹೋಗಿದೆ, ಅತಿ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ಮೂಡಿಬರಲಿದೆ.

Related Posts

error: Content is protected !!