ಚಿತ್ರ: ಸಿಂಹರೂಪಿಣಿ
ನಿರ್ದೇಶನ ಕಿನ್ನಾಳ್ ರಾಜ್
ನಿರ್ಮಾಣ: ಕೆ.ಎಂ.ನಂಜುಂಡೇಶ್ವರ
ತಾರಾಗಣ: ಯಶ್ ಶೆಟ್ಟಿ, ಅಂಕಿತಾಗೌಡ, ದಿವ್ಯಾ ಆಲೂರು, ಸುಮನ್, ದೀನಾ, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ಹರೀಶ್ ರಾಯ್, ನೀನಾಸಂ ಅಶ್ವಥ್ ಇತರರು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಭಕ್ತಿಪ್ರಧಾನ ಸಿನಿಮಾಗಳು ಬಂದಿವೆ. ಆ ಪೈಕಿ ಎಲ್ಲೋ ಬೆರಳೆಣಿಕೆ ಚಿತ್ರಗಳು ಮಾತ್ರ ನೋಡುಗರ ಮನಸಲ್ಲಿ ಬೇರೂರಿವೆ. ಆ ಸಾಲಿಗೆ ಸಿಂಹರೂಪಿಣಿ ಸಿನಿಮಾ ಕೂಡ ಸೇರಲಿದೆ ಅಂತ ಮುಲಾಜಿಲ್ಲದೆ ಹೇಳಬಹುದು. ಇದೊಂದು ಭಕ್ತಿಪ್ರಧಾನ ಸಿನಿಮಾ ಆಗಿದ್ದರೂ, ಇಲ್ಲಿ ಕಮರ್ಷಿಯಲ್ ಅಂಶಗಳಿಗೇನೂ ಕೊರತೆ ಇಲ್ಲ. ದೇವರು ಅಂದಮೇಲೆ ದುಷ್ಟ ಶಕ್ತಿಗಳಿರಲೇಬೇಕು. ಅದೇ ಕಾನ್ಸೆಪ್ಟ್ ಹೊತ್ತು ಬಂದಿರುವ ಈ ಸಿನಿಮಾ ನೋಡುಗರನ್ನು ಭಕ್ತಿಪರವಶರನ್ನಾಗಿಸುತ್ತೆ. ಕಾರಣ, ಕಥೆ ಹಾಗು ನಿರ್ದೇಶಕರ ನಿರೂಪಣೆ ಮತ್ತು ತೆರೆಮೇಲೆ ರಾರಾಜಿಸಿರುವ ಮಾರಮ್ಮ!
ಭೂಮಿಗೆ ದೇವಾನುದೇವತೆಗಳು ಬಂದಿದ್ದಕ್ಕೆ ಕಾರಣವಿದೆ. ಯಾವೆಲ್ಲ ದೇವತೆಗಳು ಎಲ್ಲೆಲ್ಲಿ ಯಾವ ಕಾರಣಕ್ಕೆ ನೆಲೆ ಕಂಡುಕೊಂಡವು ಅನ್ನುವುದನ್ನಿಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ. ದುಷ್ಟರು ಇದ್ದಕಡೆ ದೇವಿಯೂ ಇರ್ತಾಳೆ. ಕಾಲ ಕಾಲಕ್ಕೆ ಸತ್ಯಾ ಸತ್ಯತೆ ತಿಳಿಸುವುದಕ್ಕಾಗಿಯೇ ಭೂಮಿಗೆ ಕಾಲಿಟ್ಟ ಮಾರಮ್ಮನ ಕಥೆ ಇಲ್ಲಿ ನೋಡುಗರನ್ನು ಸೆಳೆಯುತ್ತೆ. ಮೊದಲರ್ಧ ಮಾರಮ್ಮ ದೇವಿ ನೆಲೆ ಕಂಡುಕೊಂಡ ಗ್ರಾಮವೊಂದರಲ್ಲಿ ನಡೆಯುವ ದ್ವೇಷ, ಪ್ರೀತಿ, ಗೆಳೆತನ ಇತ್ಯಾದಿಯನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಸಿನಿಮಾ ನೋಡುಗರಿಗೆ ಮಾರಮ್ಮನ ಮೇಲಿರುವ ಭಕ್ತಿ ಮತ್ತು ಗೌರವ ಮತ್ತಷ್ಟು ಹೆಚ್ಚುವಂತೆ ಮಾಡಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದೊಂದು ಭಕ್ತಪ್ರಧಾನ ಸಿನಿಮಾ ಆಗಿದ್ದರೂ, ಇಲ್ಲಿ ಸಣ್ಣದ್ದೊಂದು ಸಂದೇಶವಿದೆ. ಕಲ್ಮಶ ಮನಸ್ಸಿನ ಮನುಷ್ಯರನ್ನು ಸಂಹರಿಸುವ ಮಾರಿಯಾಗಿ ಮಾರಮ್ಮನ ಅವತಾರ ಇಲ್ಲಿ ಹೈಲೆಟ್.
ಗ್ರಾಮೀಣ ಸೊಗಡಿನಲ್ಲೇ ಸಾಗುವ ಈ ಚಿತ್ರದಲ್ಲಿ ಭಕ್ತರು, ಭಕ್ತಿಯೇ ಮುಖ್ಯ ಆಕರ್ಷಣೆ. ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಪವಾಡಗಳು ಸಹಜ. ಇಲ್ಲೂ ಅಂತಹ ಅದ್ಭುತ ಪವಾಡಗಳು ನೋಡೋಕೆ ಕಾಣಸಿಗುತ್ತವೆ. ಎಲ್ಲೂ ಕೂಡ ವಿನಾಕಾರಣದ ದೃಶ್ಯಗಳಿಗೆ ಇಲ್ಲಿ ಆಸ್ಪದ ನೀಡಿಲ್ಲ. ಅನಗತ್ಯ ಎನಿಸುವ ಮಾತುಗಳಿಲ್ಲ. ನೋಡುಗರಲ್ಲಿ ಮಾರಮ್ಮನ ಮೇಲಿನ ಭಕ್ತಿ ಇನ್ನಷ್ಟು ಹೆಚ್ಚಾಗುವಂತಹ ಅಂಶಗಳೇ ಇಲ್ಲಿವೆ. ಮಾರಮ್ಮನ ನೆಲೆ, ಆಕೆಯ ಪವಾಡ, ಶಕ್ತಿ ಮತ್ತು ನಂಬಿದ ಭಕ್ತರನ್ನು ಕಾಪಾಡುವ ಗುಣಗಳ ಮೂಲಕ ಮೊದಲರ್ಧ ಮುಗಿಯುತ್ತೆ. ದ್ವಿತಿಯಾರ್ಧದಲ್ಲಿ ದುಷ್ಟರ ಸಂಹಾರಕ್ಕೆ ಮಾರಮ್ಮ ಏನೆಲ್ಲಾ ಅವತಾರ ತಾಳುತ್ತಾಳೆ ಅನ್ನೋದು ಸಸ್ಪೆನ್ಸ್. ಕ್ಲೈಮ್ಯಾಕ್ಸ್ ಸಿನಿಮಾದ ಮತ್ತೊಂದು ಹೈಲೆಟ್. ನೋಡುಗರಿಗೆ ಮಾರಮ್ಮನ ಮೇಲಿರುವ ಭಕ್ತಿ ಮತ್ತಷ್ಟು ಹೆಚ್ಚುತ್ತೆ. ನೋಡುಗರಿಗೆ ಎಲ್ಲೂ ಸಹನೆ ಕೆಡದಂತೆ ನಿರೂಪಿಸಿರುವ ನಿರ್ದೇಶಕರ ಜಾಣತನ ಮೆಚ್ಚಬೇಕು. ಹೊಡಿ ಬಡಿ ಕಡಿ ಸಿನಿಮಾಗಳ ನಡುವೆ ಹೀಗೊಂದು ಭಕ್ತಿ ಪ್ರಧಾನ ಸಿನಿಮಾ ನಿಜಕ್ಕೂ ಗಮನಸೆಳೆಯುತ್ತೆ.
ಕಥೆ ಇಷ್ಟು…
ಅದೊಂದು ಹಳ್ಳಿ. ಅಲ್ಲೇ ನೆಲೆಸುವ ಮಾರಮ್ಮನಿಗೆ ಊರ ಜನರು ಭಕ್ತಿಯಿಂದ ಪೂಜಿಸುತ್ತಾರೆ. ಊರು ಅಂದಮೇಲೆ ಒಳ್ಳೆಯವರು, ಕೆಟ್ಟವರು ಇರೋದು ಸಹಜ. ಇಲ್ಲೂ ದುಷ್ಟ ಜನರ ಆರ್ಭಟವಿದೆ. ನಾಯಕನಿಗೆ ಮಾರಮ್ಮನ ಮೇಲೆ ಎಲ್ಲಿಲ್ಲದ ಭಕ್ತಿ ಮತ್ತು ನಂಬಿಕೆ. ಊರ ಜನರ ನಂಬಿಕೆ ಸುಳ್ಳು ಮಾಡದ ಮಾರಮ್ಮ ಸದಾ ಅಭಯಳಾಗಿರುತ್ತಾಳೆ. ಅಂತಹ ಊರಲ್ಲೊಬ್ಬ ದುಷ್ಟ ಗೌಡ. ಅವನ ಮಗಳ ಮೇಲೆ ನಾಯಕನಿಗೆ ಪ್ರೀತಿ. ಆದರೆ, ದುಷ್ಟ ಗೌಡನಿಗೆ ಇಷ್ಟವಿಲ್ಲ. ಇಬ್ಬರನ್ನು ದೂರ ಮಾಡಬೇಕೆಂದು ಸಂಚು ರೂಪಿಸೋ ಗೌಡರ ಗ್ಯಾಂಗ್ ಮೇಲೆ ಮಾರಮ್ಮನ ಕೋಪ. ಇಲ್ಲಿ ದುಷ್ಟ ಗೌಡನ ಸಂಚೊಂದು ನಡೆಯುತ್ತೆ. ದುಷ್ಟರನ್ನು ಬಗ್ಗುಬಡಿಯೋ ನಾಯಕನಿಗೆ ಮಾರಮ್ಮನ ಆಭಯವಿರುತ್ತೆ. ಆ ಊರ ಜನರ ವಿರುದ್ಧ ದುಷ್ಟ ರೂಪಿಸುವ ಸಂಚು ಏನು? ಮಾರಮ್ಮನ ಶಪಥವೇನು? ಇಲ್ಲಿ ದುಷ್ಟ ಶಕ್ತಿ ವಿರುದ್ಧ ಮಾರಮ್ಮನ ಶಾಪ ಎಂಥದ್ದು ಎಂಬುದನ್ನು ತಿಳಿಯಬೇಕಾದರೆ ಒಂದೊಮ್ಮೆ ಭಕ್ತಿ ಪ್ರಧಾನ ಸಿನಿಮಾ ನೋಡಬಹುದು.
ಯಾರು ಹೇಗೆ?
ಭಕ್ತಿ ಪ್ರಧಾನ ಸಿನಿಮಾ ಆಗಿರುವುದರಿಂದ ಇಲ್ಲಿ ಎಲ್ಲರೂ ಅಷ್ಟೇ ಅಚ್ಚುಕಟ್ಟಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ ಅವರ ನಟನೆ ಎಂದಿಗಿಂತ ಚೆನ್ನಾಗಿದೆ. ಅವರ ಪಾತ್ರ ಕೂಡ ವಿಭಿನ್ನ. ಅಂಕಿತಾಗೌಡ ಅವರು ಇರುವಷ್ಟು ಕಾಲ ಚಂದವಾಗಿ ಕಾಣುತ್ತಾರೆ. ಪ್ರೇಯಸಿಯಾಗಿ ಇಷ್ಟವಾಗುತ್ತಾರೆ. ದಿನೇಶ್ ಮಂಗಳೂರು ಪಾತ್ರ ವಿಶೇಷವಾಗಿದೆ. ನೀನಾಸಂ ಅಶ್ವಥ್ ಇಲ್ಲಿ ವಿಶೇಷ ಎನಿಸುತ್ತಾರೆ. ಅವರಿಲ್ಲಿ ಗಮನಸೆಳೆಯುತ್ತಾರೆ. ದಿವ್ಯಾ ಆಲೂರು, ಸುಮನ್, ದೀನಾ, ವಿಜಯ್ ಚೆಂಡೂರ್, ಹರೀಶ್ ರಾಯ್ ಇತರರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕಾಶ್ ಪರ್ವ ಸಂಗೀತದ ಎರಡು ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತವೂ ಪೂರಕವಾಗಿದೆ. ಕಿರಣ್ ಕ್ಯಾಮೆರಾ ಕೈಚಳಕದಲ್ಲಿ ಮಾರಮ್ಮನ ಅವತಾರಕ್ಕೆ ಜೈ ಎನ್ನಬಹುದು.