ಚಿತ್ರ: ಸಿದ್ಲಿಂಗು 2
ನಿರ್ದೇಶನ: ವಿಜಯಪ್ರಸಾದ್
ನಿರ್ಮಾಣ: ಶ್ರೀ ಹರಿ, ರಾಜು ಶೇರಿಗಾರ್
ತಾರಾಗಣ: ಲೂಸ್ ಮಾದ ಯೋಗಿ, ಸೋನು ಗೌಡ, ಬಿ ಸುರೇಶ, ಸುಮನ್ ರಂಗನಾಥ್, ಪದ್ಮಜಾ ರಾವ್, ಸೀತಾ ಕೋಟೆ, ಮಂಜುನಾಥ್ ಹೆಗಡೆ ಇತರರು.
ಮಂಗಳ ಅಂದರೆ ಜೀವ. ಜೀವನೇ ಇರದ ಮುಖ ಹೇಗೆ ನೋಡಲಿ…
ಸಿದ್ಲಿಂಗು ಈ ರೀತಿ ಹೇಳುವ ಮೂಲಕ ಕಥೆ ಶುರುವಾಗುತ್ತೆ. ನೋಡುಗರು ಈ ಸಿದ್ಲಿಂಗು ಮೇಲೆ ನಿರೀಕ್ಷೆ ಇಟ್ಟುಕೊಂಡು ಬಂದರೆ ಮೋಸ ಆಗಲ್ಲ. ಈ ಬಾರಿ ನಿರ್ದೇಶಕರ ಮೂಲ ಆಶಯ ತಲುಪಿದೆ. ಸಿದ್ಲಿಂಗು ಚಿತ್ರದಲ್ಲಿ ನಿರ್ದೇಶಕರು ಇಷ್ಟವಾಗಿದ್ದರು. ಆದರೆ, ಒಂದಷ್ಟು ಡಬ್ಬಲ್ ಮೀನಿಂಗ್ ಮಾತುಗಳಿಂದ ಅದು ಬೇಕಿತ್ತಾ ಎಂಬ ಪ್ರಶ್ನೆಗೂ ಕಾರಣರಾಗಿದ್ದರು. ಆದರೆ, ಸಿದ್ಲಿಂಗು 2 ಸಿನಿಮಾದಲ್ಲಿ ವಿಜಯ ಪ್ರಸಾದ್ ಅವರು ಸಂಪೂರ್ಣ ಬದಲಾಗಿದ್ದಾರೆ ಅಂತಾನೇ ಹೇಳಬಹುದು. ಅದಕ್ಕೆ ಕಾರಣ, ಅವರು ಮುಂದುವರೆಸಿರುವ ಗಟ್ಟಿ ಕಥೆ. ಕಟ್ಟಿಕೊಟ್ಟಿರುವ ಚಿತ್ರಣ. ಮಾತುಗಳಲ್ಲಿರುವ ಹಿಡಿತ. ಹಾಗಾಗಿ ಒಂದೊಳ್ಳೆಯ ಸಿನಿಮಾ ಕೊಡಬೇಕೆಂಬ ಅವರ ಆಶಯ ಇಲ್ಲಿ ಈಡೇರಿದಂತಿದೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದು ಅವರ ಚಿತ್ರಕಥೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲೂ ತಮಾಷೆ ಇದೆ, ಹೇರಳ ಮಾತುಗಳೂ ಇವೆ. ಆದರೆ, ಅವ್ಯಾವು ಅಪಾರ್ಥ ತರುವುದಿಲ್ಲ. ಅಶ್ಲೀಲ ಎನಿಸುವುದಿಲ್ಲ. ಡಬ್ಬಲ್ ಮೀನಿಂಗ್ ಅಲ್ಲೇ ಅಲ್ಲ. ಆದರೂ, ಪಾತ್ರಗಳ ಮೂಲಕ ಹೊರಬರುವ ಮಾತುಗಳಲ್ಲಿ ನಗುವಿದೆ. ಅಲ್ಲಲ್ಲಿ ಅಪಹಾಸ್ಯವೂ ಇದೆ. ಹಾಗಾಗಿ ಈ ಚಿತ್ರ ನೋಡುಗರಿಗೆ ಸಂಪೂರ್ಣ ರುಚಿಸುತ್ತೆ. ಇಲ್ಲೂ ವಿಶಾಲು, ಮಿಣಿ ಮಿಣಿ, ಮುಕುಂದರಾಯ, ಅಮವಾಸ್ಯೆ ಆನಂದ ಹೀಗೆ ಒಂದಷ್ಟು ವಿಶೇಷ ಎನಿಸುವ ಪಾತ್ರಗಳು ಗಮನಸೆಳೆಯುತ್ತವೆ. ಅಲ್ಲಿ ಮಂಗಳಾ ಟೀಚರ್ ಇದ್ದರು. ಇಲ್ಲಿ ನಿವೇದಿತಾ ಎಂಬ ಹೊಸ ಟೀಚರ್ ಬಂದಿದ್ದಾರೆ. ಇಲ್ಲೂ ಅವರ ಕನಸಿನ ಕಾರು ಇದೆ. ಆದರೆ, ಈ ಸಲ ಆ ಕಾರು ತಮ್ಮದಾಗಿಸಿಕೊಳ್ತಾರ ಸಿದ್ಲಿಂಗು ಅನ್ನುವ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.
ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ಸಿನಿಮಾದಲ್ಲಿ ಮಜವೆನಿಸುವ ದೃಶ್ಯಗಳಿವೆ. ಡೈಲಾಗ್ ಇವೆ. ತರಹೇವಾರಿ ಪಾತ್ರಗಳೂ ಇವೆ. ಇಲ್ಲಿ ಮೈಸೂರನ್ನು ಸೊಗಸಾಗಿ ತೋರಿಸಿರುವ ಪ್ರಯತ್ನ ಸಫಲವಾಗಿದೆ. ಎಲ್ಲೂ ಬೋರ್ ಎನಿಸದೆ, ಡೈಲಾಗ್ ಮೂಲಕವೇ ಹೂರಣ ತಿಂದಷ್ಟೇ ಖುಷಿಪಡಿಸಿದ್ದಾರೆ ನಿರ್ದೇಶಕರು. ಆದರೆ, ಸಿನಿಮಾದಲ್ಲಿ ಹಾಡುಗಳು ಗುನುಗುವಂತಿಲ್ಲ. ಇಲ್ಲಿ ಅನೂಪ್ ಸೀಳಿನ್ ಅವರು ಹೆಚ್ಚು ಗಮನಸೆಳೆದಿಲ್ಲ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಹೆಚ್ಚು ಒತ್ತು ಕೊಡಬಹುದಿತ್ತು. ನಿರ್ದೇಶಕರು ಇಲ್ಲಿ ಒಂದು ಜಾಣತನ ಮೆರೆದಿದ್ದಾರೆ. ಅದೇನೆಂದರೆ, ಪ್ರತಿ ಪಾತ್ರಗಳಲ್ಲೂ ಆಗಾಗ ಒಂದಷ್ಟು ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟಿಗರು ಬಂದು ಹೋಗುತ್ತಾರೆ. ಇಲ್ಲಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಶಿವಣ್ಣ, ಪೂಜಾಗಾಂಧಿ, ರಮ್ಯಾ, ಟೈಗರ್ ಪ್ರಭಾಕರ್, ಮುನಿರತ್ನ, ಪಬ್ಲಿಕ್ ಟಿವಿ ರಂಗಣ್ಣ ಹೀಗೆ ಒಂದಷ್ಟು ಖ್ಯಾತನಾಮರ ಹೆಸರುಗಳು ಬಂದು ಹೋಗುತ್ತವೆ. ಸಂದರ್ಭಕ್ಕೆ ನಗುವನ್ನೂ ತರಿಸುತ್ತವೆ. ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು ಕೆಲವು ಕಡೆ ಎಮೋಷನಲ್ ಕೂಡ ಇದೆ. ಪ್ರೀತಿಯ ಜೊತೆ, ಭಾವುಕತೆ ಎನಿಸುವ ದೃಶ್ಯಗಳಿವೆ. ಅದು ಸಿನಿಮಾದ ಮತ್ತೊಂದು ಪ್ಲಸ್ ಎನ್ನಬಹುದು.
ಸಿನಿಮಾ ಕಥೆ ಸರಳವಾಗಿದೆ. ಎಲ್ಲೂ ಅದ್ಧೂರಿತನ ಎಂಬುದಿಲ್ಲ. ನೀಟ್ ಆಗಿ ನೋಡಿಸಿಕೊಂಡು ಹೋಗುವ ಸಿನಿಮಾ ಇದು. ವಿನಾಕಾರಣ ದೃಶ್ಯಗಳಿಲ್ಲ. ಅನಗತ್ಯ ಕಿರಿ ಕಿರಿ ಎನಿಸುವ ಮಾತುಗಳಿಲ್ಲ. ಆದರೆ, ಭಾವುಕತೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತು. ಅದಿ್ಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಸಿನಿಮಾದಲ್ಲಿ ಹುಡುಕಿದರೆ ಸಣ್ಣಪುಟ್ಟ ಮೈನಸ್ ಅಂಶಗಳಿವೆಯಾದರೂ, ಪ್ರತೀ ದೃಶ್ಯಗಳಲ್ಲಿ ಹಾಸ್ಯ ಹಿಡಿದಿಟ್ಟುಕೊಂಡಿರುವುದರಿಂದ ಅವೆಲ್ಲವೂ ಮಾಯವಾಗುತ್ತವೆ. ಒಟ್ಟಾರೆ, ಒಂದು ನೀಟ್ ಸಿನಿಮಾ ಇದಾಗಿದ್ದು, ಕೊಟ್ಟ ಕಾಸಿಗೆ ಮೋಸ ಆಗಲ್ಲ.
ಯೋಗಿ ಇಲ್ಲಿ ನಿಜಕ್ಕೂ ಹೈಲೆಟ್ ಆಗಿದ್ದಾರೆ. ಮೊದಲ ಸಿದ್ಲಿಂಗು ಸಿನಿಮಾದಲ್ಲಿ ಅವರ ತುಂಟತನ ಜಾಸ್ತಿ ಇತ್ತು. ಪೋಲಿ ಎನಿಸುವ ಮಾತುಗಳಿದ್ದವು. ಆದರೆ, ಇಲ್ಲಿ ಅದು ಕಮ್ಮಿ. ಒಂದಷ್ಟು ಪ್ರಬುದ್ಧರಾಗಿದ್ದಾರೆ. ಆ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ. ಸೋನು ಗೌಡ ಅವರಿಲ್ಲಿ ನಿವೇದಿತಾ ಟೀಚರ್ ಆಗಿ ಇಷ್ಟವಾಗುತ್ತಾರೆ. ಸಿದ್ಲಿಂಗು ಕನಸಿಗೆ ಬಣ್ಣ ತುಂಬುವ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ಬಿ.ಸುರೇಶ ಅವರ ಎಂದಿನ ಗತ್ತಿನ ನಟನೆ ಇಲ್ಲೂ ಮುಂದುವರೆದಿದೆ. ಮುಖ್ಯವಾಗಿ ಇಲ್ಲಿ ಪದ್ಮಜಾರಾವ್ ಗಮನಸೆಳೆದಿದ್ದಾರೆ. ಸುಮನ್ ರಂಗನಾಥ್ ಇಲ್ಲೂ ಇದ್ದಾರೆ. ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಮಂಜುನಾಥ್ ಹೆಗಡೆ ನಟನೆ ಇಲ್ಲಿ ಆಕರ್ಷಣೆ ಎನಿಸುತ್ತೆ. ಮಹಾಂತೇಶ್ ಹಿರೇಮಠ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ನಿರ್ದೇಶಕರೂ ಇದ್ದಾರೆ. ಅದನ್ನು ಸಿನಿಮಾದಲ್ಲೇ ನೋಡಿ ಜೈ ಎನ್ನಬೇಕು.