ತಿಲಕ್ ಅಭಿನಯದ “H/34 ಪಲ್ಲವಿ ಟಾಕೀಸ್” ಚಿತ್ರದ “ಬರೆವೆ ಬರೆವೆ ಒಲವ ಕವನ…” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ(ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಜೂನ್ ಎರಡನೇ ವಾರದಲ್ಲಿ ಓ ಟಿ ಟಿ ಫ್ಲಾಟ್ ಫಾರಂ ಮೂಲಕ ಚಿತ್ರ ಬಿಡುಗಡೆಯಾಗಲಿದ್ದು, ಕಾಲಭೈರವ ಆರ್ಟ್ಸ್ ಬ್ಯಾನರ್ ನಲ್ಲಿ ಮಂಜುನಾಥ್ ಕೆ, ಹಾಗು ರವಿಕಿರಣ್ ಎಂ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ನಿರ್ದೇಶಿಸಿದ್ದಾರೆ.
ಈ ಹಿಂದೆ “6 ನೇ ಮೈಲಿ” ಚಿತ್ರವನ್ನು ನಿರ್ದೇಶಿಸಿದ್ದ, ಶ್ರೀನಿವಾಸ್ ಚಿಕ್ಕಣ್ಣ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರರ್ ಹಾಗು ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ.
ತಿಲಕ್ ಅವರಿಗೆ ನಾಯಕಿಯಾಗಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದಾರೆ. ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತಕುಮಾರ್, ಪದ್ಮಜಾರಾವ್, ಕುರಿ ಪ್ರತಾಪ್, ವಿಶ್ವ, ಅಮೃತ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
‘ಲವ್ ಮಿ ಆರ್ ಹೇಟ್ ಮಿ… ಕಿಸ್ ಮಿ ಆರ್ ಕಿಲ್ ಮಿ…. ಓ ಡಾರ್ಲಿಂಗ್ ಪ್ಲೀಸ್ ಡು ಸಂಥಿಂಗ್ ಟು ಮಿ….’
ಅರೇ, ಇದೇನಪ್ಪಾ ಡಾ.ರಾಜಕುಮಾರ್ ಅಭಿನಯದ ‘ಶಂಕರ್ ಗುರು’ ಹಾಡಲ್ವಾ ಅನ್ನೋ ಅಚ್ಚರಿ ಆಗಬಹುದು. ಇಷ್ಟಕ್ಕೂ ಇಲ್ಲಿ ಹೇಳಹೊರಟಿರೋದ ಸಿನಿಮಾ ಬಗ್ಗೆ.
ಹೌದು, ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರದ ಹೆಸರಿದು. ‘ಲವ್ ಮಿ ಆರ್ ಹೇಟ್ ಮಿ’ ಈ ಮೂಲಕ ಹೊಸ ಕಥಾಹಂದರದ ಸಿನಿಮಾಗೆ ಸಜ್ಜಾಗಿದ್ದಾರೆ ಕೃಷ್ಣ.
ಈ ಸಿನಿಮಾಗೆ ದೀಪಕ್ ಗಂಗಾಧರ್ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತವಿದೆ. ಕೆ.ಎಮ್.ಪ್ರಕಾಶ್ ಅವರ ಸಂಕಲನವಿದೆ. ಸದ್ಯ ಶುಕ್ರವಾರ ಚಿತ್ರದ ಶೀರ್ಷಿಕೆ ರಿಲೀಸ್ ಆಗಿದೆ.
ಸಿನಿಮಾ ಯಾವಾಗ ಶುರು, ಕಥೆ ಏನು, ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
‘ಅದೆಲ್ಲಿತ್ತೋ ಏನೋ, ಈ ಕೊರೊನಾ ಸಂಬಂಧಗಳ ನಡುವೆಯೇ ದೊಡ್ಡ ಕಂದಕ ಸೃಷ್ಟಿಸಿದೆ. ಕೊರೊನಾ ಪಾಸಿಟಿವ್ ಅಂದಾಕ್ಷಣ, ಅಪ್ಪ, ಅಮ್ಮ, ಮಕ್ಕಳು ಎನ್ನದೇ ಮಾರು ದೂರ ಹೋಗಿ ನಿಲ್ಲುವಂತಹ ಅಮಾನವೀಯ ಘಟನೆಗಳು ಕಣ್ಣೆದುರೆ ನಡೆದು ಹೋಗಿವೆ. ಇದಕ್ಕೆ ಮುಖ್ಯ ಕಾರಣ ಜೀವ ಭಯ. ಕೊರೊನಾ ಪಾಸಿಟಿವ್ ಬಂದವರನ್ನು ಮುಟ್ಟಿದರೆ, ಅವರ ಹತ್ತಿರ ಹೋದರೆ ಆ ಕಾಯಿಲೆ ಬೇರೆಯವರೆಗೂ ಬರುತ್ತೆ ಅಂತ ಆರಂಭದಿಂದ ದೊಡ್ಡ ಸುದ್ದಿ ಆಗಿದ್ದು, ನಾನಾ ಅವಾಂತರಗಳನ್ನು ಸೃಷ್ಟಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಎಷ್ಟೋ ಜನ ಬೀದಿ ಹೆಣ ಆಗಿ ಹೋಗಿದ್ದಾರೆ. ಇಂತಹ ಅಮಾನವೀಯ ಘಟನೆಗಳ ನಡುವೆ ಇತರರಿಗೂ ಸ್ಪೂರ್ತಿಯಾಗಬಲ್ಲಂತಹ ಘಟನೆಗೆ ಕನ್ನಡದ ನಟ ದುನಿಯಾ ವಿಜಯ್ ಸಾಕ್ಷಿಯಾಗಿದ್ದಾರೆ.
ಹೌದು, ಆ ಘಟನೆ ಏನು ಅಂತ ಅವರದೇ ಮಾತುಗಳು ಇಲ್ಲಿವೆ ಕೇಳಿ…
ಓವರ್ ಟು ದುನಿಯಾ ವಿಜಯ್…
‘ಸುಮಾರು ಒಂದು ತಿಂಗಳಿಂದ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮನುಷ್ಯ ಯಾವಾಗಲೂ ಪಾಸಿಟಿವ್ ಆಗಿರಬೇಕು ಅಂತಾರೆ. ನಾನು ಜೀವನದಲ್ಲಿ ಇರೋದು ಯಾವಾಗಲೂ ಹಾಗೇನೆ.ಆದರೆ ಒಂದು ದಿನ ನನ್ನ ಜನ್ಮದಾತರಿಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದೆ ಎಂದಾಗ ಒಂದು ಕ್ಷಣ ನಲುಗಿದೆ. ಮತ್ತೆ ಮರುಕ್ಷಣ ಕಾರ್ಯಶೀಲನಾದೆ. ಬಿಯು ನಂಬರ್ ಬರೋವರೆಗೂ ನಮ್ಮ ತಂದೆ ತಾಯಿಗೆ ಬೆಡ್ ಸಿಗಲ್ಲ ಎಂಬ ವಿಷಯ ನನಗೆ ತಿಳಿಯಿತು. ನನ್ನ ತಂದೆಗೆ 80 ವರ್ಷ ವಯಸ್ಸು, ನನ್ನ ತಾಯಿಗೆ 76 ವರ್ಷ. ಈಗಾಗಲೇ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಯೋಚಿಸಿಕೊಂಡು ಕೋರುವ ಸಮಯ ಇದಲ್ಲ ಎಂದು ತಿಳಿದ ನಾನು, ನನ್ನ ಆತ್ಮೀಯ ವೈದ್ಯ ವಿದ್ಯಾನಂದ ರನ್ನು ಸಂಪರ್ಕಿಸಿದೆ. ಆಗ ಅವರು ಬೆಡ್ ಗೆ ಕಾಯದೆ ಟ್ರೀಟ್ಮೆಂಟ್ ಆರಂಭಿಸಲು ಹೇಳಿದರು.
ಅಂದು ಡಾಕ್ಟರ್ ಜೊತೆ ಸಾಯಂಕಾಲ ಮಾತನಾಡಿ ನಂತರ ರಾತ್ರಿ ಒಬ್ಬನೇ ಯೋಚಿಸುತ್ತಾ ಕುಳಿತಾಗ ‘ನಿಮ್ಮ ತಂದೆ-ತಾಯಿಗೆ ಬಂದಿರುವ ಕೊರೊನಾ, ಅವರನ್ನು ಆರೈಕೆ ಮಾಡುವ ಸಮಯದಲ್ಲಿ ನಿನಗೂ ಬಂದು ಸಾಯುವೆನೆಂಬ ಭಯವೇ’ ಎಂಬ ಪ್ರಶ್ನೆಯನ್ನು ನನ್ನ ಆತ್ಮಸಾಕ್ಷಿ ನನ್ನ ಮುಂದಿಟ್ಟಿತು. ಮರುಕ್ಷಣದಲ್ಲೇ ನನ್ನ ಆತ್ಮಸಾಕ್ಷಿಗೆ ನನ್ನ ಉತ್ತರ ನಗುವಾಗಿತ್ತು. ಅವರೇ ನೀಡಿದ ಈ ಜನ್ಮ ಅವರ ಆರೈಕೆ ಸಂದರ್ಭದಲ್ಲಿ ಹೋದರೆ ಅದಕ್ಕಿಂತ ಅದೃಷ್ಟ ಇನ್ನೇನಿದೆ ಎಂದುಕೊಂಡು. ಸುಮಾರು 15 ಗಂಟೆಗಳ ನಂತರ. ಅಂದರೆ ಮರುದಿನ ಬೆಳಗ್ಗೆ 9 ರ ಮುಂಜಾನೆಗೆ ಒಂದು ಆಟೋದಲ್ಲಿ ಆಕ್ಸಿಜನ್, ಮೆಡಿಸಿನ್ ಜತೆ ಈಶ್ವರ್ ಎಂಬ ಆರೋಗ್ಯ ಶುಶ್ರೂಷಕ ಬಂದು ಇಳಿದರು. ನಾನು ನನ್ನ ಮಗ ಮತ್ತು ಕೀರ್ತಿ ಮೂರು ಜನ ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕ್ರೂರಿ ಕೊರೊನಾ ಜೊತೆ ಸೆಣೆಸಾಡಲು ನಿಂತೆವು. ಮಾನಸಿಕವಾಗಿ ನಾನು ನಂಬಿದ ಗುರುಗಳು ನನ್ನ ಜತೆಯಲ್ಲಿದ್ದರೆ, ದೈಹಿಕವಾಗಿ ನಮ್ಮ ಜೊತೆ ಆರೋಗ್ಯ ಶುಶ್ರೂಷಕ ಈಶ್ವರ್ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರ್ಧಗಂಟೆ ಬಂದು ಹೋಗುತ್ತಿದ್ದರು.
ನಮ್ಮ ತಂದೆ ಈಗಾಗಲೇ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಈ ಕೊರೊನಾ ಅವರನ್ನು ತುಂಬಾ ಬಳಲುವಂತೆ ಮಾಡಿತು. ನಮ್ಮ ತಾಯಿ ಎರಡು ಮೂರು ದಿನದಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ಈ ನಡುವೆ ಪ್ರತಿ ದಿನ ವಿಡಿಯೋ ಕಾಲ್ ಮೂಲಕ ವೈದ್ಯರು ಚಿಕಿತ್ಸೆಯನ್ನು ಹೇಳುತ್ತಿದ್ದರು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅದರ ಜತೆಗೆ ಪ್ರತಿ ದಿನ ಬರುತ್ತಿದ್ದ ಈಶ್ವರ ನಮ್ಮಗಳ ಪಾಲಿಗೆ ನಿಜವಾದ ಈಶ್ವರನೆ ಆದ. ನಮ್ಮ ತಂದೆಯ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಯಾವ ಮಟ್ಟಿಗೆ ಎಂದರೆ ನನ್ನ ಆತ್ಮೀಯರು ಫೋನ್ ಮಾಡಿದಾಗ ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗುತ್ತಾರೆ ಏನು ಎಂಬ ಅನುಮಾನ ಕಾಡುತ್ತಿದೆ ಎಂದು ಸ್ವತಃ ನಾನೇ ಹೇಳಿದ್ದುಂಟು. ಆ ಕಾರಣಕ್ಕೆ ಅವರ ಜತೆ ಕಳೆಯುತ್ತಿರುವ ಕೊನೆಯ ಕ್ಷಣಗಳು ನೆನಪಿನಲ್ಲಿ ಉಳಿಯಲಿ ಎಂಬ ಉದ್ದೇಶದಿಂದ ವಿಡಿಯೋ ಮಾಡಲು ಪ್ರಾರಂಭಿಸಿದೆವು. ಇದರ ಮಧ್ಯೆ ನಾನು ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಮೊದಲು ನನ್ನ ತಾಯಿ ಚೇತರಿಸಿಕೊಂಡು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾದರು.
‘ ನೀನು ಹೆದರಬೇಡ. ಚೇತರಿಸಿಕೊಂಡ ನಂತರ ನನ್ನಮ್ಮ ನನ್ನನ್ನು ಕರೆದು ‘ ನಮಗೆ ಯಾರಿಗೂ ಸಿಗದ ಯೋಗ ನಿನಗೆ ಸಿಕ್ಕಿದೆ. ನಿನ್ನನ್ನು ಪ್ರೀತಿಸುವವರು ಇರುವವರೆಗೂ, ಅವರ ಆಶೀರ್ವಾದ, ಆರೈಕೆ ನಿನ್ನನ್ನು ಕಾಯುತ್ತದೆ’ ಎಂದು ಹೇಳಿದರು. ನಿಜವಾಗಲೂ ನಮ್ಮ ತಾಯಿ ಹೇಳಿದಂತೆ ಆಯಿತು. ನಿಮ್ಮಗಳ ಆಶೀರ್ವಾದ ಮತ್ತು ದೈವ ಬಲದಿಂದ ನಮ್ಮ ಮನೆಯಲ್ಲಿ ಚಮತ್ಕಾರ ನಡೆಯಿತು. ನಮ್ಮ ತಂದೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಾ ಬಂದರು. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದಿಷ್ಟೆ. ಕೊರೊನಾ ಬಂತು ಎಂದು ಧೃತಿಗೆಡಬೇಡಿ, ತಂದೆ-ತಾಯಿಯರನ್ನು ಕೈ ಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆ ತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ ಇಂತಿ ನಿಮ್ಮ ವಿಜಯ್ .
ನಟ ದುನಿಯಾ ವಿಜಯ್ ಇದಿಷ್ಟು ಮಾತನ್ನು ಬಲವಾದ ಕಾರಣಕ್ಕಾಗಿಯೇ ಹಂಚಿಕೊಂಡಿದ್ದಾರೆ. ಕೊರೊನಾ ಪಾಸಿಟಿವ್ ಅಂದಾಕ್ಷಣ, ಮನೆಯವರೇ ಸೋಂಕಿತರನ್ನು ಒಂಥರ ನಿಕೃಷ್ಟವಾಗಿ ನೋಡಿಕೊಳ್ಳುವ ಘಟನೆಗಳು ನಡೆದಿವೆ. ವಯಸ್ಸಾದವರಂತೂ ದಾರಿ ಕಾಣದೆ ಎಷ್ಟೋ ಜನ ಹಾಸಿಗೆಯಲ್ಲಿ ಕಣ್ಣು ಮುಚ್ಚಿದ್ದಾರೆ. ಹಾಗೆ ನೋಡಿದರೆ ಸರಿಯಾದ ಆರೈಕೆ ಸಿಕ್ಕರೆ ಕೊರೊನಾ ಗೆಲ್ಲುವುದು ಸುಲಭವಿದೆ.
ಅದನ್ನೀಗ ನಟ ದುನಿಯಾ ವಿಜಯ್ ಮಾಡಿ ತೋರಿಸಿದ್ದಾರೆ. ಅದು ಇತರರಿಗೂ ಸ್ಪೂರ್ತಿ ಆಗಲಿ ಅಂತ ಇದನ್ನು ಹಂಚಿಕೊಂಡಿದ್ದಾರೆ. ಅವರ ಆಶಯದಂತೆ ಇದು ಇತರರಿಗೂ ಸ್ಪೂರ್ತಿ ಆಗಲಿ.
ಸಿನಿಮಾ ಜತೆಗೆ ‘ಉತ್ತಮ ಪ್ರಜಾಕೀಯ’ ಪಕ್ಷದ ಮೂಲಕ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ನಟ ಉಪೇಂದ್ರ ಸಾಮಾಜಿಕ ಜಾಲ ತಾಣದಲ್ಲೂ ಅಷ್ಟೇ ಸಕ್ರಿಯವಾಗಿದ್ದಾರೆನ್ನುವುದು ನಿಮಗೂ ಗೊತ್ತು. ರಾಜಕೀಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆ ಅವರು ಹೆಚ್ಚಾಗಿ ಸೋಷಲ್ ಮೀಡಿಯಾದಲ್ಲಿಯೇ ರಿಯಾಕ್ಟ್ ಮಾಡುತ್ತಾ ಬರುತ್ತಿದ್ದಾರೆ. ಆ ಮಟ್ಟಿಗೆ ಸೋಷಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕನ್ನಡದ ಸ್ಟಾರ್ ನಟರ ಪೈಕಿ ಅವರು ಒಬ್ಬರು. ಇದೀಗ ರಿಯಲ್ ಸ್ಟಾರ್ ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮತ್ತೊಂದು ಸಾಧನೆ ಮೂಲಕ ಸುದ್ದಿಯಲ್ಲಿದ್ದಾರೆ. ಈಗಾಗಲೇ ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಖ್ಯಾತಿ ನಟ ಕಿಚ್ಚ ಸುದೀಪ್ ಅವರದ್ದು. ಅದು ಬಿಟ್ಟರೆ ಈಗ ಎರಡನೇ ಸ್ಥಾನ ಉಪೇಂದ್ರ ಅವರದ್ದು. ಸುದೀಪ್ ಅವರಿಗೆ ಟ್ವಿಟ್ಟರ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈಗ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಉಪೇಂದ್ರ ಅವರಿಗೆ 1 ಮಿಲಿಯನ್ ಫಾಲೋವರ್ಸ್.
ಇನ್ನು ರಾಜ್ಯದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅವರಿಗೆ ಟ್ವಿಟ್ಟರ್ ನಲ್ಲಿ 879 ಕೆ ಫಾಲೋವರ್ಸ್ ಇದ್ದಾರೆನ್ನುವುದು ಅಚ್ಚರಿ.
ನಟ ಉಪೇಂದ್ರ ಟ್ವಿಟ್ಟರ್ ನಲ್ಲಿ ದಿಢೀರ್ ಈ ಮಟ್ಟದಲ್ಲಿ ಫಾಲೋವರ್ಸ್ ಹೊಂದಿರುವುದಕ್ಕೂ ಕಾರಣವಿದೆ. ಅವರೀಗ ಬರೀ ನಟರು ಮಾತ್ರವಲ್ಲ, ರಾಜಕಾರಣಿಯೂ ಹೌದು. ತಮ್ಮದೇ ‘ಉತ್ತಮ ಪ್ರಜಾಕೀಯ’ ಪಕ್ಷದ ಮೂಲಕ ಸದಾ ಚಟುವಟಿಕೆಗಳಲ್ಲಿರುತ್ತಾರೆ. ಅದು ಕೂಡ ಅವರ ಜನಪ್ರಿಯತೆ ಹೆಚ್ಚಾಗುವಂತೆ ಮಾಡಿದೆ.
ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಆರ್.ಚಂದ್ರು, ಸಿನಿಮಾ ಚಟುವಟಿಕೆಗಳ ಆಚೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ. ನಟ ಉಪೇಂದ್ರ ಅವರ ಸಹಯೋಗದೊಂದಿಗೆ ಈಗ ಸಿನಿಮಾ ರಂಗದ ಮಾಧ್ಯಮದ ಮಿತ್ರರಿಗೆ ಫುಡ್ ಕಿಟ್, ತರಕಾರಿ ವಿತೆಇಸಿ ಮಾನವೀಯತೆ ಮೆರೆದಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದ್ದು, ತಮ್ಮಿಂದ ಸಾಧ್ಯವಾದಷ್ಟು ಸಹಾಯವಾಗುವ ಉದ್ದೇಶ ಹೊಂದಿದ್ದಾರೆ.
ಆರ್.ಚಂದ್ರು
ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಊರಿನ ತೋಟದ ಮನೆಯಲ್ಲಿದ್ದ ನಿರ್ದೇಶಕ ಆರ್. ಚಂದ್ರು, ಅಲ್ಲಿಂದಲೇ ತಮ್ಮದೇ ತೋಟ ಹಾಗೂ ಅಕ್ಕಪಕ್ಕದ ರೈತರು ಬೆಳೆದ ತರಕಾರಿಗಳನ್ನು ಖರೀದಿ ಮಾಡುವ ಮೂಲಕ ಅವುಗಳನ್ನು ಸಂಕಷ್ದಟದಲ್ಲಿರುವವರಿಗೆ ವಿತರಣೆ ಮಾಡಿದ್ದಾರೆ. ಇದಕ್ಕೆ ನಟ ಉಪೇಂದ್ರ ಕೂಡ ಸಾಥ್ ನೀಡಿದ್ದಾರೆ. ಈಗಾಗಲೇ ಉಪೇಂದ್ರ ಅವರು ತಮ್ಮ ʼಉತ್ತಮ ಪ್ರಜಾಕೀಯʼ ಪಕ್ಷದ ಮೂಲಕ ಕನ್ನಡ ಚಿತ್ರರಂಗ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಹಾಗೆಯೇ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನೊಂದ ರೈತರಿಂದ ತರಕಾರಿ ಖರೀದಿ ಮಾಡುವ ಮೂಲಕ ರೈತರಿಗೂ ತಮ್ಮದೇ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಈಗ ನಿರ್ದೇಶಕ ಆರ್. ಚಂದ್ರು ಜತೆಗೆ ಸೇರಿಕೊಂಡು ಸಿನಿಮಾ ಪತ್ರಕರ್ತರ ನೆರವಿಗೆ ಧಾವಿಸಿರುವುದು ವಿಶೇಷ.
ʼ ಇದು ದಾನ, ನೆರವು, ಸಹಾಯ ಎನ್ನುವುದಕ್ಕಿಂತ ಇದೊಂದು ಮನುಷ್ಯತ್ವದ ಕೆಲಸ. ನಾವೇನೆ ಆಗಿದ್ದರೂ, ಮೊದಲು ಮನುಷ್ಯರಾಗಿರಬೇಕು. ನಟ ಉಪೇಂದ್ರ ಅವರು ನಂಗೆ ವಿಚಾರದಲ್ಲಿ ಸ್ಪೂರ್ತಿ. ಅವರು ಮೊನ್ನೆಯಷ್ಟೇ ನಂಗೆ ಕಾಲ್ ಮಾಡಿ, ಚಂದ್ರು ಕೊರೊನಾ ಎರಡನೇ ಅಲೆಯಲ್ಲಿ ತುಂಬಾ ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ನಮ್ಮಿಂದಾದ ಏನಾದರೂ ಸಹಾಯ ಮಾಡ್ಬೇಕು. ನಮ್ಮ ಕೆಲಸಕ್ಕೆ ನೀವು ಕೈಜೋಡಿಸಿದ್ರೆ ಚೆನ್ನಾಗಿರುತ್ತೆ ಅಂದಾಕ್ಷಣವೇ ಸರ್, ನೀವು ಕೇಳಬೇಕಿಲ್ಲ ಮಾಡೋಣ ಅಂತ ಹೇಳಿ ಊರಿನಿಂದ ಹೊರಟು ಬಂದೆ. ಇಲ್ಲಿಗೆ ಬಂದಾಗ ನಂಗೆ ತಕ್ಷಣಕ್ಕೆ ಅನಿಸಿದ್ದು ನಮ್ಮೊಂದಿಗೆ ಸದಾ ಸಿನಿಮಾ ರಂಗಕ್ಕೆ ಕೆಲಸ ಮಾಡುವ ಮಾಧ್ಯಮ ಮಿತ್ರರ ಸಂಕಷ್ಟ. ಅವರಿಗೆ ನನ್ನಿಂದಾದ ಸಹಾಯ ಮಾಡುವೆ ಅಂದೆ. ಇಲ್ಲಿ ನಾನು ನೆಪ ಮಾತ್ರ. ದೇವರು ನಮಗೆ ಕೊಡುವ ಶಕ್ತಿ ಕೊಟ್ಟಾಗ ಅದನ್ನು ಕಷ್ಟದಲ್ಲಿದ್ದವರಿಗೆ ನೀಡಬೇಕುʼ ಎನ್ನುತ್ತಾರೆ ನಿರ್ದೇಶಕ ಆರ್ .ಚಂದ್ರು.
ಕನ್ನಡ ಚಿತ್ರರಂಗದ ಯಶಸ್ವಿ ಯುವ ನಿರ್ದೇಶಕ ಆರ್. ಚಂದ್ರು, ಅವರೇ ಹೇಳುವ ಹಾಗೆ ಉದಾರವಾದಿ. ದೊಡ್ಡ ಸಕ್ಸಸ್ ನಡುವೆಯೇ ಸರಳಜೀವಿ. ನಿರ್ದೇಶನದ ಆಚೆ ನಿರ್ಮಾಪಕರಾಗಿಯೂ ದೊಡ್ಡ ಗೆಲವು ಕಂಡಾಗಲೂ ಪ್ರತಿಯೊಬ್ಬರ ಜತೆಗೂ ಒಳ್ಳೆಯ ಸ್ನೇಹ ಇಟ್ಟುಕೊಂಡ ಅಪರೂಪ ಮನುಷ್ಯ. ಕಷ್ಟ ಅಂದಾಗ ಎಲ್ಲರಿಗೂ ನೆರವಾಗಿದ್ದಾರೆ. ಅದು ಸಿನಿಮಾ ರಂಗದಲ್ಲಿನ ಅನೇಕರಿಗೂ ಗೊತ್ತಿದೆ. ಸದ್ಯಕ್ಕೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಉಪೇಂದ್ರ ಅಭಿನಯದಲ್ಲಿ ‘ಕಬ್ಜ’ ದಂತಹ ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣದ ಒತ್ತಡದಲ್ಲಿದ್ದರೂ, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಾರೆ. ಕೊರೊನಾ ಮೊದಲ ಅಲೆ ಶುರುವಾಗಿ ಆಗಲೂ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ತಮ್ಮಿಂದಾದ ಸಹಾಯ ಮಾಡಿದ್ದರು. ಈಗಲೂ ಅದೇ ಕೆಲಸ ಮುಂದುವರೆಸಿದ್ದಾರೆ. ಇದೆಲ್ಲ ಯಾಕೆ? ಹೀಗೆ ?
ʼ ನಂಗೆ ಕಷ್ಟ ಅಂತ ಅಂದವರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಬಾಲ್ಯದಿಂದಲೂ ಅನಿಸುತ್ತಿತ್ತು. ಆಗ ಜೇಬಲ್ಲಿ ದುಡಿರಲಿಲ್ಲ. ಈಗ ಇದೆ. ಹಾಗಂತ ದಾನ ಶೂರ ಕರ್ಣ ಅಲ್ಲ, ದೊಡ್ಡ ಶ್ರೀಮಂತನೂ ಅಲ್ಲ. ನಾನು ಕೂಡ ನಿಮ್ಮ ಹಾಗೆಯೇ ಸಾಮಾನ್ಯ. ಆದರೆ, ನನಗೆ ಊಟಕ್ಕೆ ಆಗಿ, ಇತತರಿಗೂ ಸಹಾಯ ಮಾಡಬಹುದಾಷ್ಟು ಶಕ್ತಿ ನಾನು ನಂಬಿದ ದೇವರಿಂದ ಸಿಕ್ಕಿದೆ. ಅದರಲ್ಲಿಯೇ ಈಗ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದೇನೆ. ಇದರಲ್ಲಿ ಒಂಥರ ಖುಷಿ ಇದೆ. ನೆಮ್ಮದಿ ಇದೆ. ಹಾಗೆ ನೋಡಿದರೆ ಇದು, ಒಂದ್ರೀತಿ ಉಪೇಂದ್ರ ಅವರ ಕೊಡುಗೆಯೂ ಹೌದು. ಒಂದ್ಸಲ ಮಡಿಕೇರಿಯಲ್ಲಿ ಪ್ರವಾಹ ಬಂದಾಗ ಒಂದು ರಾತ್ರಿ ಸುಮಾರು ಎರಡು ಗಂಟೆಗೆ ಉಪೇಂದ್ರ ಅವರು ನಂಗೆ ಕಾಲ್ ಮಾಡಿದ್ರು. ಅವತ್ತು ಅವರು ನೊಂದವರ ಪರವಾಗಿ ಮಿಡಿದ ಕಳ ಕಳಿ ನನ್ನನ್ನು ಬಡಿದೆಬ್ಬಿಸಿತು. ಅಲ್ಲಿಂದ ಜನರ ಕಷ್ಟಕ್ಕೆ ಒಂದಷ್ಟು ದುಡಿಮೆಯನ್ನು ಮೀಸಲಾಗಿಡಬೇಕೆಂದು ನಿರ್ಧರಿಸಿದೆʼ ಎನ್ನುತ್ತಾರೆ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು.
ಅದೇನೆ ಇರಲಿ, ಸಂಕಷ್ಟದ ಸಮಯದಲ್ಲೂ ಹಲವರ ಸಹಾಯಕ್ಕೆ ನಿಂತ ನಿರ್ದೇಶಕ ಆರ್. ಚಂದ್ರು ಅವರಿಗೆ ಒಳ್ಳೆಯದಾಗಲಿ ಎನ್ನುವುದು ನೀಡಲಿ ಎನ್ನುವುದು ‘ಸಿನಿಲಹರಿ’ ಆಶಯ.
ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನ ಯಶೋಧರ ಚರಿತೆ’ಯನ್ನು ಆಧರಿಸಿ ಮರು ವ್ಯಾಖ್ಯಾನದ ಮೂಲಕ ಮರು ಸೃಷ್ಟಿರೂಪದಲ್ಲಿ ನಿರ್ಮಾಣಗೊಂಡಅಮೃತ ಮತಿ’ ಕನ್ನಡ ಚಿತ್ರಕ್ಕೆ ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅಪಾರ ಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೆ ಹತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಇತ್ತೀಚೆಗೆ ಜರುಗಿದ ಲಾಸ್ ಏಂಜಲೀಸ್ ಸನ್ ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದ,ಅಮೃತಮತಿ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಜೊತೆಗೆ ಚಿತ್ರಕತೆ (ಸ್ಕ್ರಿಪ್ಟ್) ರಚನೆಗಾಗಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ’ಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಲಭ್ಯವಾಗಿತ್ತು. ನಾಯಕಿ ಪಾತ್ರದ ಹರಿಪ್ರಿಯ ಅವರು ಎರಡು ಚಿತ್ರೋತ್ಸವಗಳಲ್ಲಿ ಅತ್ಯುತ್ತಮನಟಿ’ ಪ್ರಶಸ್ತಿ ಪಡೆದಿದ್ದರು.
“ನಾನು ನಿರ್ದೇಶಿಸಿದ ಕೆಲವು ಚಿತ್ರಗಳು ಉತ್ತಮ ಚಿತ್ರ ಪ್ರಶಸ್ತಿ ಪಡೆದಿವೆ. ನನಗೆ ನಿರ್ದೇಶನಕ್ಕಾಗಿ ನೀಡುವ ರಾಜ್ಯದ ಉನ್ನತ ಮನ್ನಣೆಯಾದ ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಬಂದಿದೆ. ನಾನು ರಚಿಸಿದ ಕತೆ, ಗೀತೆ, ಸಂಭಾಷಣೆಗಳಿಗೂ ಪ್ರಶಸ್ತಿಗಳು ಲಭ್ಯವಾಗಿವೆ. ಆದರೆ ಇಲ್ಲಿಯವರೆಗೆ ನಾನು ರಚಿಸಿದ ಚಿತ್ರಕತೆಗೆ (ಸ್ಕ್ರಿಪ್ಟ್) ಒಂದೂ ಪ್ರಶಸ್ತಿ ಬಂದಿರಲಿಲ್ಲ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಚಿತ್ರಕತೆಗಾಗಿ ನನಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದನ್ನು ನಮ್ಮ ಚಿತ್ರತಂಡಕ್ಕೆ ಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನು ಗೌರವಿಸುತ್ತೇನೆ' ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.
ಅಮೃತಮತಿ’ ಚಿತ್ರವು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯ ಪುಟ್ಟಣ್ಣನವರಿಂದ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಹರಿಪ್ರಿಯ, ಕಿಶೋರ್, ತಿಲಕ್, ಸುಂದರರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾರಾವ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾಗರಾಜ್ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ನಿರ್ದೇಶನವಿದೆ. ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನು ಪಡೆದಿದ್ದು ಕೊರೊನಾ ಕಡಿಮೆಯಾದ ಮೇಲೆ ‘ಅಮೃತಮತಿ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕೊವಿಡ್ -19 ಲಾಕ್ ಡೌನ್ ಹಿನ್ನಲೆಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕೋವಿಡ್ ಲಾಕ್ ಡೌನ್ ಗೆ ಕನ್ನಡ ಚಿತ್ರೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರರಂಗದ ಲಕ್ಷಾಂತರ ಕಾರ್ಮಿಕರು ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರ ಕುಟುಂಬ ಇಂದು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ತಕ್ಷಣವೇ ಚಿತ್ರೋದ್ಯಮದ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ. 2020ರ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿತ್ರೋದ್ಯಮದ 6000ಕುಟುಂಬಗಳಿಗೆ ತಲಾ 3000 ರು. ಮೌಲ್ಯದ ದಿನಸಿ ಪಡಿತರ ರಿಲೆಯನ್ಸ್ ಕೂಪನ್ ಅನ್ನು ಸರ್ಕಾರದ ವತಿಯಿಂದ ನೀಡಿದ್ದನ್ನು ಚಿತ್ರರಂಗ ಸ್ಮರಿಸುತ್ತದೆ. ಅಂತೆಯೇ ಇಂದಿನ ಸಂಕಷ್ಟದ ಸಮಯದಲ್ಲೂ ಕನಿಷ್ಟ ತಲಾ₹ 5000 ಮೌಲ್ಯದ ಆಹಾರ ಪಡಿತರ ಕೂಪನ್ ಹಾಗೂ ಇತರೆ ವಿಶೇಷ ನೆರವನ್ನು ನೀಡಿದಲ್ಲಿ ಚಿತ್ರೋದ್ಯಮಕ್ಕೆ ಕನಿಷ್ಟ ಆಸರೆ ಆದಂತಾಗುತ್ತದೆ ಎಂದು ಅವರು ಕೋರಿದ್ದಾರೆ. ನಿಯೋಗದಲ್ಲಿದ್ದ ಚಲನಚಿತ್ರ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರು, ಚಿತ್ರೋದ್ಯಮ ಸಾಕಷ್ಟು ಮಂದಿನ ಕೋವಿಡ್ ಲಸಿಕೆ ಪಡೆದಿಲ್ಲ. ಕೆಲವರು ವಯಸ್ಸಿನ ಕಾರಣ ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಲಸಿಕೆ ಮೊದಲು ಡೋಸ್ ಪಡೆದಿರುವುದಿಲ್ಲ. ಆದ್ದರಿಂದ ಚಿತ್ರೋದ್ಯಮವನ್ನು ಆದ್ಯತೆ ಎಂದು ಪರಿಗಣಿಸಿ ಕೋವಿಡ್ ಲಸಿಕೆಯನ್ನು ಹಾಕಲು ಪ್ರತ್ಯೇಕವಾದ ವ್ಯವಸ್ಥೆ ಮಾಡುವಂತೆ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.
ಮನವಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೊದಲ ಹಂತದ ಪ್ಯಾಕೇಜ್ ನಲ್ಲಿ ಕೆಲವರು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು ಮುಂದಿನ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿರುವುದಾಗಿ ಪುರಾಣಿಕ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ಕೋವಿಡ್ ಸಂದರ್ಭದಲ್ಲಿ ಸಾಧ್ಯವಿಲ್ಲದಿರುವುದರಿಂದ ಅಕಾಡೆಮಿಯೊಂದಿಗೆ ಸಹಕರಿಸಿದ ಚಿತ್ರೋದ್ಯಮದ ಎಲ್ಲ ವಿಭಾಗದ ಸಂಘಟನೆಗಳಿಗೆ, ವಿಶೇಷವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ನಿರ್ಮಾಪಕ ಸಂಘದ ಅಧ್ಯಕ್ಷರಿಗೆ ಸುನೀಲ್ ಪುರಾಣಿಕ್ ಧನ್ಯವಾದ ತಿಳಿಸಿದ್ದಾರೆ.
‘ದಿಯಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ ಕಿರುತೆರೆ ನಟ ದೀಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು ‘ಅಣಿ ಮುತ್ತುಗಳು’.
ಹೌದು, ಮೂಲ ತೆಲುಗಿನಲ್ಲಿ ಸಿದ್ಧವಾಗಿರುವ ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿದ್ದು, ಟಾಲಿವುಡ್ನ ಮೊದಲ ಪ್ರಾಜೆಕ್ಟ್ನಲ್ಲಿ ವಿಶೇಷವಾದ ಪಾತ್ರವನ್ನು ನಿರ್ವಹಿಸಿದ್ದಾರೆ ದೀಕ್ಷಿತ್. ಚಿತ್ರಮಂದಿರ ಸ್ಟುಡಿಯೋಸ್ ಬ್ಯಾನರ್ನಲ್ಲಿ ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿರುವ ‘ಅಣಿ ಮುತ್ತುಗಳು’ ಚಿತ್ರವನ್ನು ಅಭಿಷೇಕ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಮೂಗ, ಕಿವುಡ ಮತ್ತು ಕುರುಡ ಈ ಮೂವರ ಹಿನ್ನೆಲೆಯಲ್ಲಿ ಇಡೀ ಚಿತ್ರ ಸಾಗಲಿದ್ದು, ಇದರಲ್ಲಿ ಮೂಗನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಕಿವುಡನ ಪಾತ್ರದಲ್ಲಿ ಶ್ರೀನಿವಾಸ್ ರೆಡ್ಡಿ, ಕುರುಡನ ಪಾತ್ರದಲ್ಲಿ ಅಚ್ಯುತ್ ರಾಮ್’ರಾವ್ ನಟಿಸಿದ್ದಾರೆ.
ಕಾಮಿಡಿ ಜತೆಗೆ ರೋಚಕ ತಿರುವುಗಳುಳ್ಳ ಸಸ್ಪೆನ್ಸ್ ಕಥಾಹದರ ಈ ಚಿತ್ರದ್ದು. ಪೊಲೀಸ್ ತನಿಖೆ, ಕೊಲೆ, ಹುಡುಕಾಟ ಇದೆಲ್ಲದರ ನಡುವೆ ಮುದ್ದಾದ ಪ್ರೇಮ ಕಹಾನಿಯೂ ಸಿನಿಮಾದಲ್ಲಿದೆ. ಕಿವಿ ಕೇಳಿಸದ, ಮಾತು ಬಾರದ ಮತ್ತು ಕಣ್ಣು ಕಾಣದ ಮೂವರು ಈ ಚಿತ್ರದಲ್ಲಿ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದು, ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ನಟಿ ಶ್ವೇತಾ ವರ್ಮಾ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನುಳಿದಂತೆ ಅಪ್ಪಾರ್ಲ ಸಾಯಿ ಕಲ್ಯಾಣ್ ಕಥೆ, ಚಿತ್ರಕಥೆ ಬರೆದರೆ, ಗರುಡವೇಗ ಅಂಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುರೇಶ್ ಬೊಬ್ಲಿ ಸಂಗೀತ ನೀಡಿದ್ದಾರೆ. ಅಚ್ಯುತ್ ರಾಮಾರಾವ್ ನಿರ್ಮಾಣ ಮಾಡಿದ್ದು, ತೇಝ ಚೀಪುರುಪಲ್ಲಿ, ರವೀಂದ್ರ ರೆಡ್ಡಿ ಅಡ್ಡುಲ ಸಹ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರತಂಡ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದು, ಇನ್ನೇನು ಲಾಕ್ಡೌನ್ ಸಡಿಲವಾಗಿ, ಸಿನಿಮಾ ಬಿಡುಗಡೆಗೆ ಅವಕಾಶ ಸಿಗುತ್ತಿದ್ದಂತೆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರಲಿದೆ.
ಪೀಪಲ್ ಫಾರ್ ಪೀಪಲ್ ತಂಡ ಮತ್ತೆ ತನ್ನ ಕೆಲಸ ಶುರುವಿಟ್ಟುಕೊಂಡಿದೆ. ಕಳೆದ ವರ್ಷ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಕೊಡಗು ಭಾಗದ ಜನ ಮಳೆಗೆ ತತ್ತರಿಸಿದ್ದಾಗ, ಉತ್ತರ ಕರ್ನಾಟಕ ಭಾಗದ ಮಂದಿ ನೆರೆಗೆ ರೋಸಿ ಹೋಗಿದ್ದಾಗ, ಕೋವಿಡ್ ಸಮಸ್ಯೆಗೆ ನಲುಗಿ ಕಂಗಾಲಾದಂತಹ ಜನರ ಪರವಾಗಿ ನಿಂತು, ಒಂದಷ್ಟು ನೊಂದ ಜೀವಗಳಿಗೆ ಸಹಾಯ ಹಸ್ತ ಚಾಚಿತ್ತು. ಈಗ ಕೊರೊನಾ ಎರಡನೇ ಅಲೆಗೆ ಬೆಚ್ಚಿ ಬಿದ್ದಿರುವ ಶ್ರಮಿಕರ ಹಸಿವು ಅರಿತು ತನ್ನ ಕೈಲಾದ ಸೇವೆ ಮಾಡಲು ನಿಂತಿದೆ.
ಪೀಪಲ್ ಫಾರ್ ಪೀಪಲ್ ತಂಡದ ಚಕ್ರವರ್ತಿ ಚಂದ್ರಚೂಡ್ , ತಮ್ಮ ತಂಡ ಕಟ್ಟಿಕೊಂಡು ಈಗಾಗಲೇ ರಸ್ತೆಗಿಳಿದಿದ್ದಾರೆ. ಆ ಕುರಿತು ಒಂದು ಬರಹವನ್ನು ಹಂಚಿಕೊಂಡಿದ್ದಾರೆ. ಅದು ಅವರದೇ ಮಾತಲ್ಲಿ ಕೇಳಿ.
ಓವರ್ ಟು ಚಕ್ರವರ್ತಿ….
‘ಸಿದ್ಧಗಂಗಾ ಶ್ರೀಗಳು ಮತ್ತು ದಾದಾ ವಿಷ್ಣು ಅವರ ಆಶೀರ್ವಾದ ಬೇಡುವ ಮೂಲಕ ‘ಪೀಪಲ್ ಫಾರ್ ಪೀಪಲ್’ ತಂಡ ಮತ್ತಷ್ಟು ಚುರುಕುಗೊಂಡಿದೆ. ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ, ರೇಷನ್, ಆಹಾರ ಎಂಥಹದೇ ಕ್ಲಿಷ್ಟಕರ ಸಮಸ್ಯೆ ಇರಲಿ, ಕರೆಮಾಡಿ ಪೀ’ಪಲ್ ಫಾರ್ ಪೀಪಲ್’ ತಂಡದ ಭೀಮರು ಬರುತ್ತಾರೆ.
ಸರಕಾರವೇ ಲಾಬಿ ಮಾಡುತ್ತಿದೆಯಾ? ಕೊನೆಗೂ ಕೈ ಚೆಲ್ಲಿ ಜೀವ ಹೋಗುವ ಸ್ಥಿತಿಯಾ? ಆಸ್ಪತ್ರೆಗಳ ಹಣದಾಹವಾ? ಕರೆ ಮಾಡಿ ಸ್ವತಹ ನಾನೇ ಬರುತ್ತೇನೆ. ಮಾನವರು ಒಂದಾದರೆ ಈ ಮಹಾಮಾರಿಯದು ಯಾವ ಲೆಕ್ಕ ? ಇಲ್ಲಿಯ ತನಕ ಆಸ್ಪತ್ರೆ ಸೇವೆಯಲ್ಲಿದ್ದವರು ನಾವು ಈಗ ಬಡವರಿದ್ದಲ್ಲಿಗೇ ನಡೆಯುತ್ತಿದ್ದೇವೆ. ಜಗತ್ತಿನ ಕಟ್ಟ ಕಡೆಯ ಮನುಷ್ಯ ಇರುವ ತನಕ ಯಾವ ಮತ್ತೊಬ್ಬ ಮನುಷ್ಯನೂ ಅಸಹಾಯಕನಲ್ಲ… ನಮ್ಮ ಜೊತೆ ಕಲಾವಿದೆ ಪ್ರಿಯಾಂಕ ತಿಮ್ಮೇಶ್ ಕೋಣನಕುಂಟೆ, ಚುಂಚನ್ ಘಟ್ಟ, ಗಣಪತಿ ಪುರದ ಬಡ ಜೀವಗಳ ಹಸಿವಿಗೆ 100 ಕೆಜಿ ಅಕ್ಕಿ ಕೊಡುವ ಮೂಲಕ ಸಾಂಕೇತಿಕವಾಗಿ ನಮ್ಮ ಕೈ ಜೋಡಿಸಿದ್ದಾರೆ.
ಈ ಚಿತ್ರಗಳು, ವಿಡಿಯೋ, ಹೆಸರುಗಳನ್ನು ಪ್ರಸ್ತಾಪಿಸುವುದು ಪ್ರಚಾರಕ್ಕಲ್ಲ, ಕೊಡಗು, ಸುನಾಮಿ, ಉತ್ತರ ಕರ್ನಾಟಕದ ನೆರೆ ಕೊವಿಡ್ ಮುಂತಾದ ಪ್ರಕೃತಿ ವಿಕೋಪಗಳಲ್ಲಿ ಅಸಹಾಯಕರ ಜೊತೆ ನಿಂತು ಬಡಿದಾಡಿದವರು ನಾವು. ಜೀವ ಪರ ಸರಪಳಿ ಹಿರಿದಾಗಲಿ. ಅಸಹಾಯಕ ಜೀವಗಳನ್ನು ಪ್ರೇಮದಿಂದ ಸಲಹೋಣ ಎಂಬ ಆಶಯದೊಂದಿಗೆ ಕಳುಹಿಸುತ್ತಿದ್ದೇವೆ.
ಕೊರೊನಾ ಸಂಕಷ್ಟದಿಂದ ಚಿತ್ರೋದ್ಯಮ ಕೂಡ ರಂಗು ಕಳೆದುಕೊಂಡಿದೆ. ಇಲ್ಲಿ ದುಡಿಯುವ ಅದೆಷ್ಟೋ ಮನಸ್ಸುಗಳು ಕಂಗಾಲಾಗಿವೆ. ಕಳೆದ ಒಂದು ವರ್ಷದಿಂದಲೂ ಕಾಡುತ್ತಿರುವ ಈ ಸೋಂಕಿನಿಂದ ಕನ್ನಡ ಚಿತ್ರರಂಗದ ಅನೇಕ ಕಾರ್ಮಿಕರು ತತ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರೇಜಿಸ್ಟಾರ್ ಪುತ್ರ ಮನುರಂಜನ್ ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಿದ್ದಾರೆ.
ಸದ್ಯದ ಪರಿಸ್ಥಿ ಅರಿತ ಮನುರಂಜನ್, ತಾವು ಅಭಿನಯಿಸಿರುವ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಕೆಲಸ ಮಾಡಿ ಕಳೆದಒಂದು ವರ್ಷದ ಈ ಪ್ರಾಜೆಕ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.
ಈ ಸಿನಿಮಾಗೆ ತನುಮನ ಅರ್ಪಿಸಿದ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿರುವ ಅವರು, ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಮನುರಂಜನ್ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕಿದ್ದಾರೆ. ಈ ಮೂಲಕ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದಿದ್ದಾರೆ ಮನುರಂಜನ್.