ನಿರ್ದೇಶಕ ಆರ್. ಚಂದ್ರು ಅವರ ಮಾನವೀಯ ಕಹಾನಿ ; ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಿದ ಕಬ್ಜ ಟೀಮ್‌

ಕನ್ನಡ ಚಿತ್ರರಂಗದ ಸ್ಟಾರ್‌ ನಿರ್ದೇಶಕ ಆರ್‌.ಚಂದ್ರು, ಸಿನಿಮಾ ಚಟುವಟಿಕೆಗಳ ಆಚೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ. ನಟ ಉಪೇಂದ್ರ ಅವರ ಸಹಯೋಗದೊಂದಿಗೆ ಈಗ ಸಿನಿಮಾ ರಂಗದ ಮಾಧ್ಯಮದ ಮಿತ್ರರಿಗೆ ಫುಡ್‌ ಕಿಟ್‌, ತರಕಾರಿ ವಿತೆಇಸಿ ಮಾನವೀಯತೆ ಮೆರೆದಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದ್ದು, ತಮ್ಮಿಂದ ಸಾಧ್ಯವಾದಷ್ಟು ಸಹಾಯವಾಗುವ ಉದ್ದೇಶ ಹೊಂದಿದ್ದಾರೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ತಮ್ಮ ಊರಿನ ತೋಟದ ಮನೆಯಲ್ಲಿದ್ದ ನಿರ್ದೇಶಕ ಆರ್. ಚಂದ್ರು, ಅಲ್ಲಿಂದಲೇ ತಮ್ಮದೇ ತೋಟ ಹಾಗೂ ಅಕ್ಕಪಕ್ಕದ ರೈತರು ಬೆಳೆದ ತರಕಾರಿಗಳನ್ನು ಖರೀದಿ ಮಾಡುವ ಮೂಲಕ ಅವುಗಳನ್ನು ಸಂಕಷ್ದಟದಲ್ಲಿರುವವರಿಗೆ ವಿತರಣೆ ಮಾಡಿದ್ದಾರೆ. ಇದಕ್ಕೆ ನಟ ಉಪೇಂದ್ರ ಕೂಡ ಸಾಥ್‌ ನೀಡಿದ್ದಾರೆ. ಈಗಾಗಲೇ ಉಪೇಂದ್ರ ಅವರು ತಮ್ಮ ʼಉತ್ತಮ ಪ್ರಜಾಕೀಯʼ ಪಕ್ಷದ ಮೂಲಕ ಕನ್ನಡ ಚಿತ್ರರಂಗ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆ ಮಾಡಿದ್ದಾರೆ. ಹಾಗೆಯೇ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನೊಂದ ರೈತರಿಂದ ತರಕಾರಿ ಖರೀದಿ ಮಾಡುವ ಮೂಲಕ ರೈತರಿಗೂ ತಮ್ಮದೇ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಈಗ ನಿರ್ದೇಶಕ ಆರ್. ಚಂದ್ರು ಜತೆಗೆ ಸೇರಿಕೊಂಡು ಸಿನಿಮಾ ಪತ್ರಕರ್ತರ ನೆರವಿಗೆ ಧಾವಿಸಿರುವುದು ವಿಶೇಷ.

ʼ ಇದು ದಾನ, ನೆರವು, ಸಹಾಯ ಎನ್ನುವುದಕ್ಕಿಂತ ಇದೊಂದು ಮನುಷ್ಯತ್ವದ ಕೆಲಸ. ನಾವೇನೆ ಆಗಿದ್ದರೂ, ಮೊದಲು ಮನುಷ್ಯರಾಗಿರಬೇಕು. ನಟ ಉಪೇಂದ್ರ ಅವರು ನಂಗೆ ವಿಚಾರದಲ್ಲಿ ಸ್ಪೂರ್ತಿ. ಅವರು ಮೊನ್ನೆಯಷ್ಟೇ ನಂಗೆ ಕಾಲ್‌ ಮಾಡಿ, ಚಂದ್ರು ಕೊರೊನಾ ಎರಡನೇ ಅಲೆಯಲ್ಲಿ ತುಂಬಾ ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ನಮ್ಮಿಂದಾದ ಏನಾದರೂ ಸಹಾಯ ಮಾಡ್ಬೇಕು. ನಮ್ಮ ಕೆಲಸಕ್ಕೆ ನೀವು ಕೈಜೋಡಿಸಿದ್ರೆ ಚೆನ್ನಾಗಿರುತ್ತೆ ಅಂದಾಕ್ಷಣವೇ ಸರ್‌, ನೀವು ಕೇಳಬೇಕಿಲ್ಲ ಮಾಡೋಣ ಅಂತ ಹೇಳಿ ಊರಿನಿಂದ ಹೊರಟು ಬಂದೆ. ಇಲ್ಲಿಗೆ ಬಂದಾಗ ನಂಗೆ ತಕ್ಷಣಕ್ಕೆ ಅನಿಸಿದ್ದು ನಮ್ಮೊಂದಿಗೆ ಸದಾ ಸಿನಿಮಾ ರಂಗಕ್ಕೆ ಕೆಲಸ ಮಾಡುವ ಮಾಧ್ಯಮ ಮಿತ್ರರ ಸಂಕಷ್ಟ. ಅವರಿಗೆ ನನ್ನಿಂದಾದ ಸಹಾಯ ಮಾಡುವೆ ಅಂದೆ. ಇಲ್ಲಿ ನಾನು ನೆಪ ಮಾತ್ರ. ದೇವರು ನಮಗೆ ಕೊಡುವ ಶಕ್ತಿ ಕೊಟ್ಟಾಗ ಅದನ್ನು ಕಷ್ಟದಲ್ಲಿದ್ದವರಿಗೆ ನೀಡಬೇಕುʼ ಎನ್ನುತ್ತಾರೆ ನಿರ್ದೇಶಕ ಆರ್‌ .ಚಂದ್ರು.

ಕನ್ನಡ ಚಿತ್ರರಂಗದ ಯಶಸ್ವಿ ಯುವ ನಿರ್ದೇಶಕ ಆರ್‌. ಚಂದ್ರು, ಅವರೇ ಹೇಳುವ ಹಾಗೆ ಉದಾರವಾದಿ. ದೊಡ್ಡ ಸಕ್ಸಸ್‌ ನಡುವೆಯೇ ಸರಳಜೀವಿ. ನಿರ್ದೇಶನದ ಆಚೆ ನಿರ್ಮಾಪಕರಾಗಿಯೂ ದೊಡ್ಡ ಗೆಲವು ಕಂಡಾಗಲೂ ಪ್ರತಿಯೊಬ್ಬರ ಜತೆಗೂ ಒಳ್ಳೆಯ ಸ್ನೇಹ ಇಟ್ಟುಕೊಂಡ ಅಪರೂಪ ಮನುಷ್ಯ. ಕಷ್ಟ ಅಂದಾಗ ಎಲ್ಲರಿಗೂ ನೆರವಾಗಿದ್ದಾರೆ. ಅದು ಸಿನಿಮಾ ರಂಗದಲ್ಲಿನ ಅನೇಕರಿಗೂ ಗೊತ್ತಿದೆ. ಸದ್ಯಕ್ಕೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಉಪೇಂದ್ರ ಅಭಿನಯದಲ್ಲಿ ‘ಕಬ್ಜ’ ದಂತಹ ಬಿಗ್‌ ಬಜೆಟ್‌ ನ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣದ ಒತ್ತಡದಲ್ಲಿದ್ದರೂ, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಾರೆ. ಕೊರೊನಾ ಮೊದಲ ಅಲೆ ಶುರುವಾಗಿ ಆಗಲೂ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ತಮ್ಮಿಂದಾದ ಸಹಾಯ ಮಾಡಿದ್ದರು. ಈಗಲೂ ಅದೇ ಕೆಲಸ ಮುಂದುವರೆಸಿದ್ದಾರೆ. ಇದೆಲ್ಲ ಯಾಕೆ? ಹೀಗೆ ?

ʼ ನಂಗೆ ಕಷ್ಟ ಅಂತ ಅಂದವರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಬಾಲ್ಯದಿಂದಲೂ ಅನಿಸುತ್ತಿತ್ತು. ಆಗ ಜೇಬಲ್ಲಿ ದುಡಿರಲಿಲ್ಲ. ಈಗ ಇದೆ. ಹಾಗಂತ ದಾನ ಶೂರ ಕರ್ಣ ಅಲ್ಲ, ದೊಡ್ಡ ಶ್ರೀಮಂತನೂ ಅಲ್ಲ. ನಾನು ಕೂಡ ನಿಮ್ಮ ಹಾಗೆಯೇ ಸಾಮಾನ್ಯ. ಆದರೆ, ನನಗೆ ಊಟಕ್ಕೆ ಆಗಿ, ಇತತರಿಗೂ ಸಹಾಯ ಮಾಡಬಹುದಾಷ್ಟು ಶಕ್ತಿ ನಾನು ನಂಬಿದ ದೇವರಿಂದ ಸಿಕ್ಕಿದೆ. ಅದರಲ್ಲಿಯೇ ಈಗ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದೇನೆ. ಇದರಲ್ಲಿ ಒಂಥರ ಖುಷಿ ಇದೆ. ನೆಮ್ಮದಿ ಇದೆ. ಹಾಗೆ ನೋಡಿದರೆ ಇದು, ಒಂದ್ರೀತಿ ಉಪೇಂದ್ರ ಅವರ ಕೊಡುಗೆಯೂ ಹೌದು. ಒಂದ್ಸಲ ಮಡಿಕೇರಿಯಲ್ಲಿ ಪ್ರವಾಹ ಬಂದಾಗ ಒಂದು ರಾತ್ರಿ ಸುಮಾರು ಎರಡು ಗಂಟೆಗೆ ಉಪೇಂದ್ರ ಅವರು ನಂಗೆ ಕಾಲ್‌ ಮಾಡಿದ್ರು. ಅವತ್ತು ಅವರು ನೊಂದವರ ಪರವಾಗಿ ಮಿಡಿದ ಕಳ ಕಳಿ ನನ್ನನ್ನು ಬಡಿದೆಬ್ಬಿಸಿತು. ಅಲ್ಲಿಂದ ಜನರ ಕಷ್ಟಕ್ಕೆ ಒಂದಷ್ಟು ದುಡಿಮೆಯನ್ನು ಮೀಸಲಾಗಿಡಬೇಕೆಂದು ನಿರ್ಧರಿಸಿದೆʼ ಎನ್ನುತ್ತಾರೆ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು.

ಅದೇನೆ ಇರಲಿ, ಸಂಕಷ್ಟದ ಸಮಯದಲ್ಲೂ ಹಲವರ ಸಹಾಯಕ್ಕೆ ನಿಂತ ನಿರ್ದೇಶಕ ಆರ್. ಚಂದ್ರು ಅವರಿಗೆ ಒಳ್ಳೆಯದಾಗಲಿ ಎನ್ನುವುದು ನೀಡಲಿ ಎನ್ನುವುದು ‘ಸಿನಿಲಹರಿ’ ಆಶಯ.

Related Posts

error: Content is protected !!