Categories
ಸಿನಿ ಸುದ್ದಿ

ನಾಚಿ ಎಂಬ ನಿಧಿ ಹುಡುಕಾಟದ ಕಥೆಯ ಬೆನ್ನೇರಿ…

ನಾಚಿ.. ಇದು ಹೊಸಬರ ಚಿತ್ರ. ಸಚಿತ್ ಫಿಲಂಸ್ ಬ್ಯಾನರ್ ನಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ನಿರ್ಮಾಣ, ಶಶಾಂಕ್ ರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿದೆ. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಪವನ್ ಶೌರ್ಯ, ನಾಚಿ ಚಿತ್ರದ ಹೀರೋ. ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತು, ನಂತರ ಯುಗಯುಗಗಳೇ ಸಾಗಲಿ, ಉಡ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಗೂಳಿಹಟ್ಟಿ, ಹನಿ ಹನಿ ಇಬ್ಬನಿ, ಹಾಲುತುಪ್ಪ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ರಾಜ್ `ನಾಚಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ

ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅಕ್ಟೋಬರ್ 29ರಂದು ಅದ್ದೂರಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ತೆರಳುವ ಯೋಜನೆ ಚಿತ್ರತಂಡದ್ದಾಗಿತ್ತು. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಸರಳವಾಗಿ ಪೂಜೆ ನೆರವೇರಿಸಿಕೊಂಡು ಚಿತ್ರೀಕರಣ ಆರಂಭಿಸಲಾಗಿತ್ತು. ಸದ್ಯ ನಾಚಿ ಚಿತ್ರ ಸರಿಸುಮಾರು ಮೂವತ್ತೈದು ದಿನಗಳ ಚಿತ್ರೀಕರಣ ನಡೆಸಿದೆ. ಇನ್ನೂ ಇಪ್ಪತ್ತೈದು ದಿನಗಳ ಶೂಟಿಂಗ್ ಬಾಕಿ ಇದೆ. ಈ ಮಧ್ಯೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಮುಹೂರ್ತ ಕಾರ್ಯಕ್ರಮ ನಡೆಸುವ ಮೂಲಕ ಮತ್ತೊಮ್ಮೆ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ತಾತ ಮೊಮ್ಮಗಳ ಸುತ್ತ ಪ್ರಧಾನವಾಗಿ ಬೆಸೆದುಕೊಂಡ ಕತೆ ʻನಾಚಿʼ ಚಿತ್ರದ್ದು. ನಚಿತಾ ಎನ್ನುವುದು ಆಕೆಯ ಹೆಸರು. ಎಲ್ಲರೂ ಪ್ರೀತಿಯಿಂದ ʻನಾಚಿʼ ಎಂದು ಕರೆಯುತ್ತಿರುತ್ತಾರೆ. ಪುರಾತತ್ವ ವಿಭಾಗದ ಅಂತಿಮ ವರ್ಷದಲ್ಲಿ ಓದುತ್ತಿರುತ್ತಾಳೆ. ಅದೊಮ್ಮೆ ಮಲೆನಾಡಿನ ಪ್ರದೇಶವೊಂದರಲ್ಲಿ ಪ್ರಾಚ್ಯವಸ್ತುಗಳ ಸಂಶೋಧನೆಗೆಂದು ಹೋದಾಗ ಅದು ತನ್ನದೇ ಪೂರ್ವಜರ ಮನೆ ಎಂದು ಗೊತ್ತಾಗುತ್ತದೆ. ಇದರ ಜೊತೆ ನಿಧಿಯ ಕತೆ ಕೂಡಾ ತೆರೆದುಕೊಳ್ಳುತ್ತದೆ. ಇತಿಹಾಸ, ವಿಜ್ಞಾನ, ಲವ್, ಕಾಮಿಡಿ, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಆಕ್ಷನ್ ಕೂಡಾ ಕತೆಯಲ್ಲಿ ಬೆಸೆದುಕೊಂಡಿದೆ. ಅಂತಿಮವಾಗಿ ʻಸೈನ್ಸ್ ಬಿಯಾಂಡ್ ಸೆನ್ಸ್ʼ ಎನ್ನುವ ಸಿದ್ದಾಂತವನ್ನು ಮಂಡಿಸುವ ಉದ್ದೇಶ ʻನಾಚಿʼ ಚಿತ್ರದ್ದು.

ಮಲೆನಾಡಿನ ಸುಂದರ ತಾಣಗಳಲ್ಲಿ ʻನಾಚಿʼಗಾಗಿ ಚಿತ್ರೀಕರಣ ನಡೆಸಲಾಗಿದೆ. ಯಕ್ಷಗಾನ, ಭೂತಕೋಲಾಗಳ ದೃಶ್ಯಗಳನ್ನು ನೈಜವಾಗಿ ಸೆರೆ ಹಿಡಿಯಲಾಗಿದೆ. ನಾಲ್ಕು ಫೈಟ್, ಮೂರು ಹಾಡು, ಒಂದು ಬಿಟ್ ಸಾಂಗ್ ಕೂಡಾ ʻನಾಚಿʼ ಚಿತ್ರದಲ್ಲಿರಲಿದೆ.
ತೆಲುಗಿನಲ್ಲಿ ಸುಮಾಋು ಹದಿನೈದು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ಮೌರ್ಯಾನಿ. ಕನ್ನಡ ಸಿನಿಮಾದಲ್ಲಿ ನಟಿಸುವ ಬಯಕೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಲವಾರು ಕತೆಗಳನ್ನು ಕೇಳಿದ್ದರಂತೆ. ಕಡೆಗೆ ಶಶಾಂಕರ್ ರಾಜ್ ಅವರು ಹೇಳಿದ ಸಬ್ಜೆಕ್ಟ್ ಇಷ್ಟವಾದ ಕಾರಣಕ್ಕೆ ನಟಿಸಲು ಒಪ್ಪಿದ್ದಾಗಿ ಮೌರ್ಯಾನಿ ಹೇಳಿಕೊಂಡರು.

ಪವನ್ ಶೌರ್ಯ ಮತ್ತು ಮಾರ್ಯಾನಿ ಅವರ ಜೊತೆಗೆ ಆರ್ಯಭಟ ಜಾಗ್ವಾರ್, ಕ್ರಿಷ್, ಪ್ರಿಯಾ ಶೆಟ್ಟಿ, ಶ್ರೇಯಾ ಶೆಟ್ಟಿ, ನೀನಾಸಂ ನಂಜಪ್ಪ, ಖಳನಟನಾಗಿ ಪ್ರಶಾಂತ್, ಮನೀಶ್ ಸೇರಿದಂತೆ ಇತರರು ʻನಾಚಿʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ರಂಗಭೂಮಿ, ಕಿರುತೆರೆಗಳಲ್ಲಿ ಸಾಕಷ್ಟು ದುಡಿದಿರುವ ಎಸ್.ಎಲ್. ಎನ್ ಸ್ವಾಮಿ ತಾತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ್ ಗೌಡ ನಿರ್ಮಿಸುತ್ತಿರುವ ಐದನೇ ಚಿತ್ರವಿದು.

Categories
ಸಿನಿ ಸುದ್ದಿ

ಆರ್ ಜಿ ವಿ ಶಿಷ್ಯನ ಸ್ಟಾಕರ್ ಸಿನಿಮಾದ ಹೀರೋ ಇವರೇ…


ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಐದಾರು ವರ್ಷಗಳ‌ ಕಾಲ ಪಳಗಿರುವ ಅಪ್ಪಟ ಪ್ರತಿಭಾನ್ವಿತ ನಿರ್ದೇಶಕ ಕಿಶೋರ್ ಭಾರ್ಗವ್, ನಿರ್ದೇಶಿಸಿರುವ ಸ್ಟಾಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮೂಲತಃ ತೆಲುಗಿನವರಾದ ರಾಮ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ತೆಲುಗಿನವರಾದ್ರೂ ಕನ್ನಡ ಮೇಲಿನ ಇವರ ಅಭಿಮಾನ ಕನ್ನಡ ಚಿತ್ರರಂಗದತ್ತ ಕರೆದುಕೊಂಡು ಬಂದಿದೆ. ಹೀಗಾಗಿ ತಾವು ಮೊದಲ ಸಿನಿಮಾವನ್ನು ಕನ್ನಡದಲ್ಲಿಯೇ ನಟಿಸ್ಬೇಕು ಅನ್ನೋ ಇಚ್ಛೆಯಿಂದ ರಾಮ್ ಸ್ಟಾಕರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅರವಿಂದ್ ಎಂಬ ಪವರ್ ಫುಲ್ ಪಾತ್ರ ಮಾಡಿರುವ ರಾಮ್ ಲುಕ್ ರಿವೀಲ್ ಆಗಿದೆ. ಗೈಯಲ್ಲಿ ಗನ್ ಹಿಡಿದು, ದ್ವೇಷ ತುಂಬಿರುವ ಕಣ್ಣುಗಳಿಂದ ಖಡಕ್ ಲುಕ್ ನಲ್ಲಿ ಮಿಂಚಿರುವ ರಾಮ್ ಗೆಟಪ್ ಸೂಪರ್ ಆಗಿದೆ.

ಬೆಳದಿಂಗಳ ಬಾಲೆ ಸುಮನ್ ನರ್ಗಕರ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ಸ್ಟಾಕರ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.

ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ನಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ.

ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿರಲಿದೆ. ಸದ್ಯ ಸ್ಟಾಕರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಬಿಡುಗಡೆಗೆ ಎದುರು ನೋಡುತ್ತಿದೆ.

Categories
ಸಿನಿ ಸುದ್ದಿ

ವರದನಿಗೆ ಶ್ರೀಮುರಳಿ ಶುಭ ಹಾರೈಕೆ; ಲಿರಿಕಲ್ ಹಾಡು ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್…

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ನಂದೀಶ್ ಅವರು ಬರೆದಿರುವ “ಓಂ ಹರಿ ಹರಿ ಓಂ” ಎಂಬ ಹಾಡನ್ನು “ಸರಿಗಮಪ” ಖ್ಯಾತಿಯ ಅಶ್ವಿನ್ ಶರ್ಮ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ.

ಉದಯಪ್ರಕಾಶ್ ನಿರ್ದೇಶನ ಹಾಗೂ ಪ್ರದೀಪ್ ವರ್ಮ ಸಂಗೀತ ನೀಡಿರುವ ಈ ಹಾಡನ್ನು ಅಶ್ವಿನ್ ಶರ್ಮ ಸೊಗಸಾಗಿ ಹಾಡಿದ್ದಾರೆ. ವಿನೋದ್ ಪ್ರಭಾಕರ್ ಅವರು ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಒಟ್ಟಾರೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶ್ರೀಮುರಳಿ ಹಾರೈಸಿದ್ದಾರೆ.

ಜನವರಿ 28 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಕೊರೋನ ಕಾರಣದಿಂದ ಚಿತ್ರಮಂದಿರಗಳಲ್ಲಿ ಐವತ್ತರಷ್ಟು ಭರ್ತಿಗೆ ಮಾತ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಾಗಾಗಿ ನೂರರಷ್ಟು ಭರ್ತಿಗೆ ಒಪ್ಪಿಗೆ ಸಿಕ್ಕ ಕೂಡಲೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎನ್ನುತ್ತಾರೆ ಉದಯಪ್ರಕಾಶ್.

“ರಾಬರ್ಟ್” ಚಿತ್ರದ ನಂತರ ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌.

ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಬಿಸಿಲನಾಡು ‘ಸಜ್ಜನ್’ಎಂಬ ಹೊಸ ಪ್ರತಿಭೆ; ‘ಫೋರ್ ವಾಲ್ಸ್’ ನಿರ್ದೇಶಕರ ಸಿನಿಯಾನದ ನೋಟ

ನಟನೆ ಅನ್ನೋದು ಕೆಲವರಿಗೆ ರಕ್ತದಲ್ಲೇ ಇರುತ್ತೇ… ಮತ್ತೆ ಕೆಲವರಿಗೆ ರಕ್ತಗತವಾಗಿ ಬರುತ್ತೇ.. ನಾವೀಗ ಹೇಳ್ತಾ ಇರೋದು ರಕ್ತಗತವಾಗಿ ಕಲೆಯನ್ನು ಮೈಗೂಡಿಸಿಕೊಂಡು.. ಸಿನಿಮಾ ಲೋಕದಲ್ಲಿ ಸವಾರಿ ಮಾಡುತ್ತಿರುವ.. ಸಿನಿಮಾ ಕನಸುಗಳನ್ನು ಕಾಣುತ್ತಿರುವ ಪ್ರತಿಭಾನ್ವಿತ ನಿರ್ದೇಶಕ ಸಂಗಮೇಶ ಎಸ್ ಸಜ್ಜನರ್ ಅವರ ಬಗ್ಗೆ. ಮೂಲತಃ ಬಿಸಿಲನಗರಿ ರಾಯಚೂರಿನವರಾದ ಸಜ್ಜನ್ ಅವರ ತಂದೆ ನಾಟಕ‌ ನಿರ್ದೇಶಕರಾಗಿ ಚಾಪೂ ಮೂಡಿಸಿದವರು. ಅವರ ದೊಡ್ಡಪ್ಪ ನಟನೆಯಲ್ಲಿ ನಿಪೂಣರು‌. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಂತಹ ದಿ ಗ್ರೇಟ್ ಡೈರೆಕ್ಟರ್ ಸಜ್ಜನ್ ಅವರ ದೊಡ್ಡಪ್ಪನಿಗೆ ನಟಿಸುವ ಅವಕಾಶದ ಕರೆ ನೀಡಿದ್ದರು ಅಂದ್ರೆ ಅವರ ಕಲಾಕೌಶಲ್ಯತೆ ಬಗ್ಗೆ ಹೇಳೋದೇ ಬೇಡ. ಇಂತಹ ಕುಟುಂಬದಿಂದ ಬಂದ ಸಜ್ಜನ್ ಎಂಕಾಮ್ ಮುಗಿಸಿಕೊಂಡು, ಸಿನಿಮಾ ರಂಗದತ್ತ ಮುಖ ಮಾಡಿದರು. ಆಗಲೇ ಮಂತ್ರ ಎಂಬ ವಿಶೇಷ ಬಗೆಯ ಸಿನಿಮಾ ಜನ್ಮ ತಾಳಿದ್ದು.ಮಂತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಅದೃಷ್ಟ ಪರೀಕ್ಷೆಗಳಿದ ಸಜ್ಜನ್ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು, ನಿರ್ಮಾಪಕರ ಬಂಡವಾಳಕ್ಕೆ ತಕ್ಕ ಲಾಭ, ಪ್ರೇಕ್ಷಕ ಬಯಸಿದಂತ ಸಿನಿಮಾ ನೀಡಿ, ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಕಂಡರು.

ಆದರೆ ಮಂತ್ರ ಸಿನಿಮಾ ಬಿಡುಗಡೆಯ ನಂತರ ಅವರಿಗೆ ಪತ್ರಿಕೋದ್ಯಮ ಕೈಬೀಸಿ ಕರೆದಿತ್ತು, ವಾಹಿನಿಯೊಂದರಲ್ಲಿ ಮೂರು ವರ್ಷಗಳ ಕಾಲ ಜವಾರಿ ನ್ಯೂಸ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿನಿರೂಪಕ,ವರದಿಗಾರನಾಗಿ ಸೇವೆ ಸಲ್ಲಿಸಿದ ಸಜ್ಜನ್ ಗೆ ಸಿನಿಮಾ ರಂಗ ಮತ್ತೆ ಕೈ ಬೀಸಿ ಕರೆಯಿತು. ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿರುವ ಸಜ್ಜನ್ ಕೆಲವು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದುಬಂದ ಈ ಪ್ರತಿಭೆ. ಸದ್ಯ ಸಜ್ಜನ್ ಫೋರ್ ವಾಲ್ಸ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಬೇಸ್ಡ್ ಸಿನಿಮಾಗಳ ಸವಿಯನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಎಂಬ ಉದ್ದೇಶದಿಂದ ಫೋರ್ ವಾಲ್ಸ್’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಸಜ್ಜನ್ ಅವರದ್ದೇ. ಹಲವು ವಿಶೇಷತೆಗಳಿಂದ ಕೂಡಿರುವ ಫೋರ್ ವಾಲ್ಸ್ ಸಿನಿಮಾದ ಸ್ಯಾಂಪಲ್ಸ್ ನೋಡಿ ಗಾಂಧಿನಗರದ ಮಂದಿ‌ ಮೆಚ್ಚಿಕೊಂಡಿದ್ದಾರೆ.

ತಂದೆ ಮಗನ ಬಾಂದವ್ಯದ ಸುತ್ತ ಹೆಣೆಯಲಾದ ಫೋರ್ ವಾಲ್ಸ್ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮೂರು ಶೇಡ್ ನಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಡಾ. ಪವಿತ್ರಾ ಬಣ್ಣ ಹಚ್ಚಿದ್ದು, ದತ್ತಣ್ಣ, ಡಾ.ಜಾನ್ವಿ ಜ್ಯೋತಿ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ ತಾರಾಬಳಗದಲ್ಲಿದ್ದಾರೆ. ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿಡಿಆರ್ ಕ್ಯಾಮೆರಾ ವರ್ಕ್, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಕೋಟೆನಾಡು ಚಿತ್ರದುರ್ಗದವರಾವರಾದ ಟಿ ವಿಶ್ವನಾಥ್ ನಾಯಕ್
ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇದ್ದು. ಕಲಾವಿದರಾಗಿ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸ್ವತಂತ್ರ ನಿರ್ಮಾಪಕರಾಗಿ ‘ಫೋರ್ ವಾಲ್ಸ್’ ಚಿತ್ರವನ್ನು ಎಸ್.ವಿ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ.

ಫೋರ್ ವಾಲ್ಸ್ ಸಿನಿಮಾದ ಜೊತೆಗೆ
ಮೃತ್ಯುಂಜಯ ಎಂಬ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿರುವ ಸಜ್ಜನ್ ಬಯೋಪಿಕ್ ವೊಂದನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಕಮರ್ಷಿಯಲ್ ಸಿನಿಮಾಗಳ‌ ನಡುವೆ ಕಂಟೆಂಟ್ ಸಿನಿಮಾಗಳ ತಾಕತ್ತು ಏನು ಅನ್ನೋದನ್ನು ಸಾರಿ ಹೇಳಲು ಸಜ್ಜನ್ ಅವರಂತಹ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕು.

Categories
ಸಿನಿ ಸುದ್ದಿ

ನೈಜ ಘಟನೆ ಹಿಂದೆ ಹೊರಟ ಮಂಸೋರೆ! 19 20 21ರ ಮಹತ್ವ ಸಾರಲಿದ್ದಾರೆ ನಿರ್ದೇಶಕ

ನಿರ್ದೇಶಕ ಮಂಸೋರೆ 1978 ಆಕ್ಟ್ ಸಿನಿಮಾ ಬಳಿಕ ಯಾ ಸಿನಿಮಾ ಮಾಡ್ತಾರೆ ಎಂಬ ಪ್ರಶ್ನೆ ಇತ್ತು. ಅದಾದ ಬಳಿಕ ದೊಡ್ಡ ಬಜೆಟ್ ಸಿನಿಮಾ ‘ಅಬ್ಬಕ್ಕ’ ಮಾಡ್ತಾರೆ ಅನ್ನೋ ಸುದ್ದಿಯೂ ಇತ್ತು. ಆದರೆ ಆ ಸಿನಿಮಾ ಶುರುವಿಗೆ ತಡವಾಯ್ತು. ಅದಕ್ಕೆ ಕೊರೊನಾ ಅಡ್ಡಿಯಾಯ್ತು. ಅದು ಮಂಸೋರೆ ಅವರ ಕನಸು. ಇಂದಲ್ಲ ನಾಳೆ ಅದು ನನಸಾಗುತ್ತೆ. ಇದರ ಮಧ್ಯೆ ಅವರು ‘ದಿ ಕ್ರಿಟಿಕ್’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ. ಸದ್ಯ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈಗ ಮಂಸೋರೆ 19 20 21 ಈ ನಂಬರ್ ಇಟ್ಟುಕೊಂಡು ಹೊರಟಿದ್ದಾರೆ. ಇದು ಅವರ ಹೊಸ ಚಿತ್ರದ ಹೆಸರು. ಈ ನಂಬರ್ ನಲ್ಲಿ ಅಂಥಾ ವಿಶೇಷತೆ ಏನು? ಸಿನಿಮಾ ಬರೋವರೆಗೆ ಕಾಯಬೇಕು. ಮಂಸೋರೆ ತಮ್ಮ ಹೊಸ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.

ಓವರ್ ಟು ಮಂಸೋರೆ..

‘ನಾವು ಈ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದ ನನ್ನ ಬಹು ವರ್ಷಗಳ ಕನಸು ‘ಅಬ್ಬಕ್ಕ’ ಸಿನಿಮಾ ಮಾಡುವ ಯೋಜನೆಯನ್ನು ಕೊರೊನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ.
ಮುಂದೆ?


ಉತ್ತರ – “19.20.21
ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು, ಸಿನಿಮಾನೇ ನಮ್ಮ ಜೀವನ. ಸಿನಿಮಾ ಕನಸು ಕಾಣದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ನಮಗೇ ಅಸಾಧ್ಯ. ಹಾಗಾಗಿ, ‘ಅಬ್ಬಕ್ಕ’ ಯೋಜನೆಯ ಕನಸಿನ ಜೊತೆ ಜೊತೆಗೆ ಈ ಕೊರೊನಾ ಕಾಲದಲ್ಲಿ, ವರ್ಷ ಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಬಹಳ ಕಷ್ಟವೆನಿಸಿದರೂ, ಆ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು.
ಅದರ ಫಲವೇ ಈಗ ಹೊಸ ಸಿನಿಮಾ, ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತ.

ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿ ಬಂದಿದೆ.‌ ಈ ವರ್ಷವೇ ಸಿನಿಮಾನ ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. “ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು…” ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು.. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಕುರಿತಾಗಿ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ. ನಿಮ್ಮ ಪ್ರೀತಿಯ ಹಾರೈಕೆ ಮತ್ತು ಬೆಂಬಲದ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ…

ಮಂಸೋರೆ

Categories
ಸಿನಿ ಸುದ್ದಿ

ಇನಾಮ್ದಾರ್‌ ಎಂಬ ಜನಾಂಗೀಯ ಘರ್ಷಣೆ ಸುತ್ತುವ ಕಥೆ…

ಕೆಲವು ವರ್ಷಗಳ ಹಿಂದೆ ” ಕತ್ತಲೆಕೋಣೆ” ಎಂಬ ಚಿತ್ರ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ, ಈಗ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾದ ಹೆಸರು “ಇನಾಮ್ದಾರ್”. ಇದೊಂದು ಜನಾಂಗೀಯ ಘರ್ಷಣೆ ಸುತ್ತ ಸುತ್ತುವ ಸ್ಟೋರಿ…

ತಮ್ಮ ಸಿನಿಮಾ ಕುರಿತು ನಿರ್ದೇಶಕ ಸಂದೇಶ್‌ ಶೆಟ್ಟಿ ಅಜ್ರಿ ಹೇಳಿದ್ದು ಹೀಗೆ… “ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ‌ಹಾಗೂ ಕಪ್ಪು – ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ‌ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿ‌ಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ. ಡಬ್ಬಲ್ ಸ್ಕ್ರೀನ್ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿವೆ. ಅದಕ್ಕೆ ಅದರದೇ ಆದ ಕಥೆಯೂ ಇದೆ. ನಾವು ಆಯ್ಕೆ ಮಾಡಿಕೊಂಡಿರುವ
” ಇನಾಮ್ದಾರ್ ” ಶಿವಾಜಿ ಮಹಾರಾಜರ ಮಗ ಶಂಭು ಮಾಹಾರಾಜರ ವಂಶಸ್ಥರದು. ಈ ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ‌ಅಡಿಬರಹ ಕೂಡ ಇದೆ ಎಂದು ವಿವರ ಕೊಡುತ್ತಾರೆ ಅವರು.

ರಂಜನ್ ಛತ್ರಪತಿ ಎಂಬ ಹೊಸ ಪ್ರತಿಭೆ ನಾಯಕನಾಗಿ ನಟಿಸುತ್ತಿದ್ದು, ಭೂಮಿ ಶೆಟ್ಟಿ, ಎಸ್ತರ್ ನರೋನ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಂ.ಕೆ.ಮಠ, ರಘು ಪಾಂಡೇಶ್ವರ್ ಮುಂತಾದವರು ಇದ್ದಾರೆ. ಒಳ್ಳೆಯ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಪ್ಸೆ ಗುಡ್ಡ ಪ್ರದೇಶದಲ್ಲಿ ಈಗಾಗಲೇ ಕಲಾ ನಿರ್ದೇಕರು ಗುಡಿಸಿಲಿನ ಸೆಟ್ ಹಾಕುತ್ತಿದ್ದಾರೆ. ಫೆಬ್ರವರಿ ಮಧ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.

ಎಲ್ಲರಂತೆ ಈ ಚಿತ್ರದ ಹೀರೋ ರಂಜನ್‌ ಛತ್ರಪತಿ ಕೂಡ ಇಲ್ಲಿಗೆ ಹಲವು ಆಸೆ ಹೊತ್ತು ಬಂದರಂತೆ. ಅವರು ಇಲ್ಲಿಗೆ ಹಲವು ವರ್ಷಗಳ ಹಿಂದೆ ನಟನಾಗಬೇಕೆಂದು ಸಾಕಷ್ಟು ಕನಸು ಹೊತ್ತು ಬಂದಿದ್ದರು. ಆದರೆ, ಮೋಸ ಹೋಗಿದ್ದೇ ಹೆಚ್ಚು. ಸಾಕಷ್ಟು ಅವಮಾನ, ಅನುಭವದ ನಂತರ ಈಗ ಸಮಯ ಕೂಡಿ ಬಂದಿದೆ ಎನ್ನುವ ಅವರು, ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಿದ್ದೇನೆ. ಅವಕಾಶ ಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಥ್ಯಾಂಕ್ಸ್‌ ಅಂದರು ರಂಜನ್ ಛತ್ರಪತಿ.

ನಾಯಕಿ ಭೂಮಿಶೆಟ್ಟಿ ಅವರಿಗೆ, ಸಂದೇಶ್ ಅವರು ಹೇಳಿದ ತಕ್ಷಣ ಈ ಪಾತ್ರದಲ್ಲಿ ಅಭಿನಯಿಸಬೇಕೆಂಬ ಆಸೆಯಾಯಿತಂತೆ. ನಾನು ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ ಅನ್ನುತ್ತಾರೆ ಭೂಮಿ ಶೆಟ್ಟಿ. ಛಾಯಾಗ್ರಹಣ ಮಾಡುತ್ತಿರುವ ಸುನೀಲ್ ನರಸಿಂಹಮೂರ್ತಿ, ಸಂಗೀತ ನೀಡುತ್ತಿರುವ ರಾಕಿ ಸೋನು, ಸಂಕಲನಕಾರ ಶಿವರಾಜ್ ಮೇಹು ಮಾತನಾಡಿದರು.

Categories
ಸಿನಿ ಸುದ್ದಿ

ಜಲಿಯನ್‌ ವಾಲಾಬಾಗ್!‌ ಇದು ಕರ್ನಾಟಕದ್ದು!!

ಈಗಂತೂ ಸಿನಿಮಾ ನಿರ್ದೇಶಿಸುವ ಅಥವಾ ಸಿನಿಮಾದಲ್ಲಿ ಹೀರೋ ಆಗುವ ಕನಸು ಕಟ್ಟಿಕೊಂಡವರಿಗೆ ಕಿರುಚಿತ್ರಗಳು ಒಂದು ರೀತಿ ಒಳ್ಳೆಯ ವೇದಿಕೆ ಇದ್ದಂತೆ. ಅಂತಹ ವೇದಿಕೆ ಮೂಲಕ ಈಗಾಗಲೇ ಹಲವಾರು ಪ್ರತಿಭಾವಂತರು ಬಂದಿದ್ದಾರೆ. ಆ ಸಾಲಿಗೆ ಈಗ ಇಲ್ಲೊಂದು ತಂಡ ಬಂದಿದೆ. ಅಂಥದ್ದೊಂದು ಪ್ರಯತ್ನಕ್ಕೆ ವಾಗೀಶ್‌ ಆರ್.ಕಟ್ಟಿ ಕೂಡ ಸಾಕ್ಷಿಯಾಗಿದ್ದಾರೆ.

ತಮ್ಮ ಕಿರುಚಿತ್ರ ಮೂಲಕ ಮಾತಿಗಿಳಿದ ವಾಗೀಶ್‌ ಆರ್.ಕಟ್ಟಿ, “ನಾನು ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್. ಗೌರಿಬಿದನೂರು ನನ್ನೂರು. ನಮ್ಮೂರಿನ ಬಳಿ ವಿದುರಾಶ್ವಥ ಎಂಬ ಪುರಾಣ ಪ್ರಸಿದ್ದವಾದ ಹಳ್ಳಿಯಿದೆ. ಇದು ಪುರಾಣ ಪ್ರಸಿದ್ಧವೂ ಹೌದು. ಇತಿಹಾಸ ಪ್ರಸಿದ್ದವೂ ಹೌದು.‌ ಏಕೆಂದರೆ 1938ರಲ್ಲಿ ಈ ಊರಿನಲ್ಲಿ ಸ್ವತಂತ್ರಕ್ಕಾಗಿ ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ‌. ಇದನ್ನು “ಸೌತ್ ಇಂಡಿಯಾ ಜಲಿಯನ್ ವಾಲಾಬಾಗ್” ಎನ್ನಬಹುದು. ಈ ವಿಷಯದ ಬಗ್ಗೆ ಮೂವತ್ತೈದು ನಿಮಿಷಗಳ ಕಿರುಚಿತ್ರ ಮಾಡಿದ್ದೇನೆ. ನಾನು ಈ ವಿಷಯವನ್ನು ನಮ್ಮೂರಿನ ಪುಟ್ಡಸ್ವಾಮಿ ಗೌಡರ ಮುಂದೆ ಹೇಳಿದಾಗ , ಒಳ್ಳೆಯ ಪ್ರಯತ್ನ ಮಾಡು. ಈ ವಿಷಯ ವಿಶ್ವದಾದ್ಯಂತ ತಿಳಿಯಲಿ. ನಾನು ನಿರ್ಮಾಣ ಮಾಡುತ್ತೇನೆ ಎಂದರು.‌ ಹಿರಿಯ ನಟರಾದ ಶ್ರೀನಿವಾಸಮೂರ್ತಿ ಹಾಗೂ ಶೋಭ ರಾಜ್ ಅವರನ್ನು ಬಿಟ್ಟು ಬೇರೆ ಎಲ್ಲಾ ಹೊಸಬರೆ. ಸುಮಾರು ನೂರು ಜನ ಹೊಸ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಎಲ್ಲರು ತರಬೇತಿ ಪಡೆದು ಅಭಿನಯಿಸಿದ್ದಾರೆ. ಇದೇ ಗಣರಾಜ್ಯೋತ್ಸವದ ದಿನ ಸಂಜೆ 6 ಗಂಟೆಗೆ ನಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು ವಾಗೀಶ್ ಆರ್ ಕಟ್ಟಿ.

ನಮ್ಮೂರಿನ ಸ್ವತಂತ್ರ ಸಂಗ್ರಾಮದ ವಿಷಯ ಎಲ್ಲರಿಗೂ ತಿಳಿಸುವ ಪ್ರಯತ್ನಕ್ಕೆ ಬೆಂಬಲ ನೀಡಿದ್ದೀನಿ.‌ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ನಿರ್ಮಾಪಕ ಪುಟ್ಡಸ್ವಾಮಿ ಗೌಡ.

ಇಂತಹ ಕಿರುಚಿತ್ರದಲ್ಲಿ ಅಭಿನಯಿಸಿದ್ದು ಸಂತಸ ತಂದಿದೆ. ವಾಗೀಶ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿನಯಿಸಿರುವ ಎಲ್ಲಾ ಹೊಸ ಕಲಾವಿದರ ಕನ್ನಡ ಉಚ್ಛಾರಣೆ ಚೆನ್ನಾಗಿದೆ ಎಂದರು ನಟ ಶ್ರೀನಿವಾಸಮೂರ್ತಿ.

ಈ ಕೊರೊನಾ ಬಂದ ಮೇಲಂತೂ ಮಕ್ಕಳಿಗೆ ಮೊಬೈಲೇ ಪ್ರಪಂಚ. ಬೇರೇನು ಬೇಡ. ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಇಂತಹ ವಿಷಯ ತಿಳಿಸುವುದು ಅವಶ್ಯಕ.‌ ಈ ಕಥೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಮಸ್ತ ಕನ್ನಡಿಗರ ಪರವಾಗಿ ವಾಗೀಶ್ ಕಟ್ಟಿ ಅವರಿಗೆ ಹಾಗೂ ನಿರ್ಮಾಪಕರಿಗೆ ಅಭಿನಂದನೆ ತಿಳಿಸುತ್ತೇನೆ. ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ. ನಿಮ್ಮಿಂದ ಇಂತಹ ಉತ್ತಮ ಚಿತ್ರಗಳು ಹೆಚ್ಚು ಬರಲಿ ಎಂದು ಹಾರೈಸಿದರು ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ.

ಸಂಗೀತ ನೀಡಿರುವ ಶ್ರೀ ಸುರೇಶ್ , ಹಾಡು ಹಾಡಿರುವ ಪಂಡಿತ್ ರವೀಂದ್ರ ಸೊರಗಾವಿ ಹಾಗೂ ಛಾಯಾಗ್ರಹಕ ಕೆ.ಎಸ್.ಚಂದ್ರಶೇಖರ್ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಕ್ಯಾಮೆರಾಮೆನ್‌ ಸತ್ಯಹೆಗಡೆ ಈಗ ನಿರ್ಮಾಪಕ! ಸತ್ಯಹೆಗಡೆ ಸ್ಟುಡಿಯೋಸ್‌ ಮೂಲಕ ಎರಡು ಕಿರುಚಿತ್ರ ನಿರ್ಮಾಣ…

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಛಾಯಾಗ್ರಾಹಕರು ನಿರ್ಮಾಪಕರಾಗಿರುವ ಉದಾಹರಣೆಗಳಿವೆ. ಆ ಸಾಲಿಗೆ ಈಗ ಸತ್ಯಹೆಗಡೆ ಕೂಡ ಸೇರಿದ್ದಾರೆ. ಹೌದು, ಇಷ್ಟು ವರ್ಷಗಳ ಕಾಲ ಯಶಸ್ವಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಸತ್ಯಹೆಗಡೆ ಈಗ ತಮ್ಮದೇ ಆದ ಸತ್ಯಹೆಗಡೆ ಸ್ಟುಡಿಯೋಸ್‌ ಕಟ್ಟಿಕೊಂಡು ಆ ಮೂಲಕ ಎರಡು ಕಿರುಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ….

ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಹಾಗೂ ಮಂಸೋರೆ ನಿರ್ದೇಶನದ “ದಿ ಕ್ರಿಟಿಕ್” ಎಂಬ ಎರಡು ಕಿರುಚಿತ್ರಗಳನ್ನು ಸತ್ಯ ಹೆಗಡೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರಗಳ ಪ್ರದರ್ಶನ ಏರ್ಪಪಡಿಸಿ, ಒಂದಷ್ಟು ಅನಿಸಿಕೆ ಹಂಚಿಕೊಂಡರು ಸತ್ಯಹೆಗಡೆ. ಅಭಿಷೇಕ್ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್” ಕಿರುಚಿತ್ರದಲ್ಲಿ ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಕುರಿತಂತೆ ಅಭಿಷೇಕ್‌ ಕಾಸರಗೋಡು ಹೇಳಿದ್ದಿಷ್ಟು. ” ನನಗೆ ಅವಕಾಶ ನೀಡಿದ ಸತ್ಯ ಹೆಗಡೆ ಅವರಿಗೆ ಧನ್ಯವಾದ. ನಾನು ಈ ಕಿರುಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ತೋರಿಸಿದ್ದೆ. ಚೆನ್ನಾಗಿದೆ ಎಂದು ಪೋಸ್ಟರ್ ಮೇಲೆ ಸಹಿ ಮಾಡಿ ಕೊಟ್ಟಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಅಭಿಷೇಕ್ ಕಾಸರಗೋಡು. ಈ ಕಿರುಚಿತ್ರದಲ್ಲಿ ನಟಿಸಿರುವ ಗೌತಮಿ ಮಾತನಾಡಿ, “ಈ ಕಥೆ ಬಗ್ಗೆ ಹೇಳೋದಾದರೆ, ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಪಾತ್ರ ನನ್ನದು. ಅಭಿಷೇಕ್ ಅವರು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಸತ್ಯ ಹೆಗಡೆ ಸರ್ ಅವರಿಗೆ ಧನ್ಯವಾದ ಎಂದರು ಗೌತಮಿ.

ಇನ್ನು ಮಂಸೋರೆ ನಿರ್ದೇಶನದಲ್ಲಿ ನಿರ್ದೇಶಕ ಮತ್ತು ನಟ ಟಿ.ಎಸ್ ನಾಗಾಭರಣ ಹಾಗೂ ವೈ.ಜಿ.ಉಮಾ ನಟಿಸಿರುವ “ದಿ ಕ್ರಿಟಿಕ್” ಕಿರುಚಿತ್ರದ ಪ್ರದರ್ಶನ ಕೂಡ ನಡೆಯಿತು. ಪ್ರದರ್ಶನ ಬಳಿಕ ನಿರ್ದೇಶಕ ಮಂಸೋರೆ ಮಾತನಾಡಿ, “ಕಳೆದ ಲಾಕ್ ಡೌನ್ ವೇಳೆ ಮಾಡಿದ ಕಿರುಚಿತ್ರವಿದು. ಸಂಚಾರಿ ವಿಜಯ್ ಸಾವಿನಿಂದ ಡಿಪ್ರೆಶನ್ ಗೆ ಹೋಗಿದ್ದ ನನಗೆ, ಸತ್ಯ ಹೆಗಡೆ ಕಿರುಚಿತ್ರ ಮಾಡಲು ಪ್ರೇರೇಪಿಸಿದರು. ಇದು ಬಶೀರ್ ಅವರ ಕಥೆ. ರೊನಾಡ ಬಕ್ಕೇಶ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣವಿದೆ. ವೀರೇಂದ್ರ ಮಲ್ಲಣ್ಣ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಶ್ರೀನಿವಾಸ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಅಂದರು ಮಂಸೋರೆ.

ದಿ ಕ್ರಿಟಿಕ್‌ ಕಿರುಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ನಾಗಾಭರಣ ಮಾತನಾಡಿ, “ಕೊರೊನಾ ಈ ಕಾಲಘಟ್ಟದಲ್ಲಿ ಒಬ್ಬರನೊಬ್ಬರು ಭೇಟಿಯಾಗುವುದೇ ವಿರಳ. ಸಿನಿಮಾವನ್ನೇ ಉಸಿರೆಂದು ಜೀವಿಸುತ್ತಿರುವ ಎಷ್ಟೋ ಮನಸ್ಸುಗಳನ್ನು ಇಂದು ನೋಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಮೊದಲು ಧನ್ಯವಾದ. ಪ್ರದರ್ಶನವಾದ ಎರಡು ಕಿರುಚಿತ್ರಗಳು ಚೆನ್ನಾಗಿವೆ. ಕಡಿಮೆ ಅವಧಿಯಲ್ಲಿ ದೊಡ್ಡ ವಿಷಯ ಹೇಳುವ ಪ್ರಯತ್ನ ಇಬ್ಬರೂ ಯುವ ನಿರ್ದೇಶಕರು ಮಾಡಿದ್ದಾರೆ. ಮಂಸೋರೆ ನನ್ನನ್ನು ಭೇಟಿಯಾಗಲು ಬಂದಾಗ ನಿಮ್ಮ ಆಫೀಸ್ ನಲ್ಲಿ ಚಿತ್ರೀಕರಣ ಎಂದರು‌. ಆ ನಂತರ ಮಂಡ್ಯದ ಬಳಿಯ ಅಂಕೇಗೌಡರ ಜ್ಞಾನ ಪ್ರತಿಷ್ಠಾನದಲ್ಲಿ ಎಂದಾಗ ಸಂತೋಷವಾಯಿತು. ಎರಡು ತಂಡಕ್ಕೂ ಒಳ್ಳೆಯದಾಗಲಿ ಎಂದರು ನಾಗಾಭರಣ.

ಉಮ ಅವರು ಸಹ ತಮ್ಮ ಅಭಿನಯದ ಅನುಭವ ಹಂಚಿಕೊಂಡರು. ಸ್ಮಾಲ್ ಇಸ್ ಬ್ಯೂಟಿ ಫುಲ್ ಎಂಬ ಮಾತಿದೆ. ಆ ದೃಷ್ಟಿಯಲ್ಲಿ ಈ ಎರಡು ಚಿತ್ರಗಳು ಸುಂದರವಾಗಿಯೂ ಇದೆ. ಅರ್ಥಪೂರ್ಣವಾಗಿಯೂ ಇದೆ. ಎರಡು ತಂಡಕ್ಕೂ ಶುಭವಾಗಲಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದರು. ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ಶುಭ ಕೋರಿದರು.

ಪ್ರತಿಭಾವಂತ ಹೊಸ ತಂಡಕ್ಕೆ ನಮ್ಮ ಸತ್ಯ ಸ್ಟುಡಿಯೋಸ್ ಮೂಲಕ ವೇದಿಕೆ ಕಲ್ಪಿಸಿಕೊಡುತ್ತೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು. ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಕಿರುಚಿತ್ರ ಪ್ರದರ್ಶನ ‌ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ ಸತ್ಯ ಹೆಗಡೆ, ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

Categories
ಸಿನಿ ಸುದ್ದಿ

ಸಿನಿಮಾ ಮಂದಿಗೆ ಮದ್ವೆ ಮೇಲೆ ನಂಬಿಕೆನೇ ಇಲ್ಲವೇ? ತಮಿಳು ನಟ ಧನುಷ್- ಐಶ್ವರ್ಯ ವಿಚ್ಚೇದನ!

ಸಿನಿಮಾ ಜಗತ್ತಿನಲ್ಲಿ ಮತ್ತೊಂದು ಮದುವೆ ವಿಚ್ಛೇದನಗೊಂಡಿದೆ. ಹೌದು ಇತ್ತೀಚೆಗಷ್ಟೇ ಸಮಂತ, ನಾಗಚೈತನ್ಯ ವಿವಾಹ ವಿಚ್ಚೇದನ ಆಗಿತ್ತು. ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯ ಮತ್ತು ಖ್ಯಾತ ನಟ ಧನುಷ್ ಅವರ ವಿವಾಹ ವಿಚ್ಛೇದನವಾಗಿದೆ. ಈ ಸಂಬಂಧ ಐಶ್ವರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಾನು ನಿನ್ನ ಜೀವ ನೀನು ನನ್ನ ಜೀವ. ನಾನು ಪ್ರೌಡ್ ವೈಫ್. ಹೀಗೆ ಹೇಳಿದ ರಜನಿಕಾಂತ್ ಪುತ್ರಿ ಐಶ್ವರ್ಯ ಗಂಡ ಧನುಷ್ ರಿಂದ ದೂರವಾಗಿದ್ದಾರೆ. ನನ್ನ ದಾರಿ ನನಗೆ ನಿನ್ನದಾರಿ ನಿನಗೆ ಅಂತಲೇ ವಿಚ್ಛೇದನ ಪಡೆದಿದ್ದಾರೆ.

ಕಳೆದ 18 ವರ್ಷದ ಆ ಜೀವನ ಎಲ್ಲವೂ ಸುಳ್ಳೆ..? ಗೆಳೆಯರಾಗಿದ್ದೇವು. ಒಳ್ಳೆ ಪೋಷಕರಾಗಿಯೇ ಜೀವನ ಮಾಡಿದ್ದೇವೆ. ಮತ್ತೇನೂ ಬೇಕಿಲ್ಲ. ಆದರೂ ಈಗ ನಮ್ಮನ ನಾವು ಪ್ರತೇಕವಾಗಿ ಅರ್ಥ ಮಾಡಿಕೊಂಡು ಬೆಟರ್ ಆಗಲು ಡಿವೈಡ್ ಆಗಿದ್ದೇವೆ.

ನಾನು ಮತ್ತು ಐಶ್ವರ್ಯ ದೂರ ಆಗಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ಗೌರವ ಕೊಡಿ. ನಮ್ಮ ಖಾಸಗಿ ಬದುಕಿಗೆ ತೊಂದರೇ ಕೊಡಬೇಡಿ ಅಂತ ಧನುಷ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರಹ ಹಂಚಿಕೊಂಡಿದ್ದಾರೆ.

ಇವರಿಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಬೇರೆ ಆಗುವಂತಹ ಬಲವಾದ ಕಾರಣ ಗೊತ್ತಿಲ್ಲ. ಎಲ್ಲವೂ ಚೆನ್ನಾಗಿದ್ದ ಮೇಲೆ ಸಪರೇಟ್ ಯಾಕೆ ಆಗಿಬಿಟ್ಟರು ಅನ್ನುವುದಕ್ಕೆ ಸದ್ಯ ಉತ್ತರವಿಲ್ಲ.

ಸೆಲಿಬ್ರಿಟಿಗಳು ಮಾದರಿ. ಆದರೆ ಅವರೇ ಹೀಗೆ ಮಾಡಿದರೆ ಏನರ್ಥ? ಅವರ ಬದುಕು ಅವರಿಷ್ಟ. ಆದರೆ, ನಾಲ್ಕು ಮಂದಿಗೆ ಮಾದರುಯಾದವರು ಹಿಂಗೆ ಮಾಡಿಕೊಂಡರೆ ಏನರ್ಥ ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತಿದೆ.
ಸಿನಿಮಾ ನಟ, ನಟಿಯರನ್ನ ಜನರು ಫಾಲೋ ಮಾಡ್ತಾರೆ. ಧನುಷ್ ಮತ್ತು ಐಶ್ವರ್ಯರನ್ನ ಸಹ ಅಲ್ಲಿನ ಫ್ಯಾನ್ಸ್ ಅನುಸರಿಸುತ್ತಿದ್ದರು. ಈಗ ಇವರ ಬದುಕು ಬೇರೆಯಾಗಿದೆ.

ಅಷ್ಟಕ್ಕೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಮತ್ತು ಅಳಿಯನ ಜೀವನ ಸರಿ ಮಾಡಬಹುದಿತ್ತು. ಅದು ಅವರಿಗೂ ಸಾಧ್ಯವಾಗಲಿಲ್ಕವೇ ? ಈ ಪ್ರಶ್ನೆ ಎಲ್ಲರ ಮುಂದಿದೆ. ಮೊದಲಿಂದಲೂ ಜನರಿಗೆ ಈ ಸಿನಿಮಾದವರ ದಾಂಪತ್ಯ ಜೀವನ ಇಷ್ಟೆ ಬಿಡಿ ಎಂಬ ಮಾತಿತ್ತು. ಅದಕ್ಕೆ ಈ ಪ್ರಕರಣವೂ ಸಾಕ್ಷಿಯಾದಂತಿದೆ.

Categories
ಸಿನಿ ಸುದ್ದಿ

ನಿಖಿಲ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್! ಜ.21ಕ್ಕೆ ಹೊಸ ಸಿನಿಮಾ ಟೈಟಲ್ , ಫಸ್ಟ್ ಲುಕ್ ರಿಲೀಸ್

ಸ್ಯಾಂಡಲ್ ವುಡ್ ಯುವರಾಜ.. ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ಜನವರಿ 22 ರಂದು ಹುಟ್ಟು ಹಬ್ಬದ ಸಂಭ್ರಮ. ರೈಡರ್ ಬರ್ತ್ ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗುತ್ತಿರುವ ನಿಖಿಲ್ ನಟನೆಯ ಐದನೇ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಿಂದ ಸಜ್ಜಾಗಿದೆ. ಸಂಕ್ರಾಂತಿ ಮುಗಿಸಿ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದ ಯುವರಾಜನ ಹೊಸ ಸಿನಿಮಾಗೆ ಮಂಜು ಅಥರ್ವ ಆಕ್ಷನ್ ಕಟ್ ಹೇಳಿದ್ದಾರೆ.


ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮಂಜು, ತಮಿಳಿನ ಕದಿರನ್ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ನಿಖಿಲ್ ಹಾಗೂ ಮಂಜು ಅಥರ್ವ ಸಹಯೋಗದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಿಖಿಲ್ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯಕ್ಕೆ ಚಿತ್ರದ ಎಲ್ಲಾ ಪಾತ್ರಗಳು ಫೈನಲ್ ಆಗಿಲ್ಲ. ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ. ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರ ತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ಹೊರ ಬೀಳಲಿದೆ.

error: Content is protected !!