ಪೆದ್ರೊ ಹಿಂದೆ ಶಿರಸಿ ಹುಡುಗ: ಹೊಸ ಪ್ರತಿಭೆಗೆ ರಿಷಭ್ ಶೆಟ್ಟಿ ಸಾಥ್

ಶಿರಸಿ ಮೂಲದ ನಟೇಶ್ ಹೆಗಡೆ ಮಾಡಿದ ಕೆಲವು ಕಿರುಚಿತ್ರಗಳು ಜನಪ್ರಿಯವಾಗಿದೆ. ಇವರ ಒಂದು ಕಿರುಚಿತ್ರ ವೀಕ್ಷಿಸಿದ ರಾಜ್ ಬಿ‌ ಶೆಟ್ಟಿ, ನಟೇಶ್ ಅವರನ್ನು ಸಂಪರ್ಕಿಸುತ್ತಾರೆ. ನಟೇಶ್ ಅವರ ಪ್ರತಿಭೆ ಬಗ್ಗೆ ರಿಷಭ್ ಶೆಟ್ಟಿ ಅವರ ಬಳಿ ಹೇಳಿದಾಗ, ರಿಷಭ್ ” ಪೆದ್ರೊ”ಚಿತ್ರ‌ ನಿರ್ಮಾಣಕ್ಕೆ ಮುಂದಾಗುತ್ತಾರೆ.

ಈ ಚಿತ್ರ ನಿರ್ಮಾಣವಾಗಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಸದ್ಯದಲ್ಲೇ ಕರ್ನಾಟಕದ ಚಿತ್ರಮಂದಿರಗಳಲ್ಲೂ “ಪೆದ್ರೊ” ಬಿಡುಗಡೆಯಾಗಲಿದೆ.

ಇತ್ತೀಚೆಗೆ ಈ‌ ಚಿತ್ರದ ಟ್ರೇಲರ್ ಅನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿದರು.

ನಾನು “ಪೆದ್ರೊ” ಚಿತ್ರ ನೋಡಿ ಬೆರಗಾದೆ. ಇತ್ತೀಚೆಗೆ ದೂರವಾಗಿರುವ ಸಿನಿಮಾ ಭಾಷೆಯನ್ನು ಈ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ.‌‌ ಮಾಮೂಲಿ ತರಹ‌ ಅಲ್ಲದೆ ಬೇರೆಯದೇ ರೀತಿಯ ಸಿನಿಮಾ ಮಾಡಬೇಕು. ಆ ರೀತಿ ಕನ್ನಡದಲ್ಲಿ “ತಿಥಿ” ಹಾಗೂ “ಹರಿಕಥಾ ಪ್ರಸಂಗ” ಚಿತ್ರಗಳು ನನಗೆ ಹಿಡಿಸಿದ್ದವು. ಈಗ ಆ ಸಾಲಿಗೆ “ಪೆದ್ರೊ” ಸೇರಿದೆ. ರಿಷಭ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯ ದಾಗಲಿ ಎಂದು ಗಿರೀಶ್ ಕಾಸರವಳ್ಳಿ ಹಾರೈಸಿದರು.

ನನ್ನ ಪ್ರಕಾರ ಕಮರ್ಷಿಯಲ್ ಸಿನಿಮಾ, ಅವಾರ್ಡ್ ಸಿನಿಮಾ ಎಂಬುದು ಇಲ್ಲ. ಸಿನಿಮಾ ಅಂದರೆ ಸಿನಿಮಾ ಅಷ್ಟೇ. ವಿಭಾಗಗಳನ್ನು ನಾವು ಮಾಡಿಕೊಂಡಿದ್ದೇವೆ. ನಾನು ಇಷ್ಟಪಡುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು ಬಹಳ ಸಂತೋಷವಾಗಿದೆ. ಅವರ ಮಾರ್ಗದರ್ಶನ ನಮಗೆ‌ ಮುಖ್ಯ. ನಟೇಶ್ ತುಂಬಾ ಚೆನ್ನಾಗಿ ನಿರ್ದೇಶನ‌ ಮಾಡಿದ್ದಾರೆ. ಸಾಮಾನ್ಯವಾಗಿ ತಂದೆ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ. ಆದರೆ ನಮ್ಮ ಚಿತ್ರದಲ್ಲಿ ಮಗ , ತಂದೆಯನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿದ್ದಾರೆ. ನಟೇಶ್ ಹೆಗಡೆ ಅವರ ತಂದೆ ಗೋಪಾಲ್ ಹೆಗಡೆ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ರಿಷಭ್ ಶೆಟ್ಟಿ.

ನಮ್ಮ ಚಿತ್ರ ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಆದರೆ ಇಲ್ಲಿನವರಿಗೆ ಈ ಚಿತ್ರ ತಲುಪಬೇಕು. ಅದರ ಮೊದಲ ಹೆಜ್ಜೆಯಾಗಿ ಟ್ರೇಲರ್ ಬಿಡುಗಡೆ ಮಾಡಿದ್ದೀವಿ. ನನ್ನ ಕಥೆ ಇಷ್ಟಪಟ್ಟು ಹಣ ಹಾಕಿದ ರಿಷಭ್ ಶೆಟ್ಟಿ ಅವರಿಗೆ, ರಿಷಭ್ ರನ್ನು ಪರಿಚಯಿಸಿದ ರಾಜ್ ಶೆಟ್ಟಿ ಅವರಿಗೆ , ಚಿತ್ರದಲ್ಲಿ ನಟಿಸಿರುವ ನನ್ನ ತಂದೆ ಗೋಪಾಲ್ ಹೆಗಡೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಿರೀಶ್ ಕಾಸರವಳ್ಳಿ ಸರ್ ಅವರಿಗೆ ಅನಂತ ಧನ್ಯವಾದ ತಿಳಿಸಿದರು ನಿರ್ದೇಶಕ ನಟೇಶ್ ಹೆಗಡೆ.

ಈ ಹುಡುಗನನ್ನು ಫೇಸ್ ಬುಕ್ ಮೂಲಕ ಹುಡುಕಿ, ನಿನ್ನ ಕಿರುಚಿತ್ರವೊಂದನ್ನು ಕಳುಹಿಸು ಎಂದೆ. ಆತನ ಕಿರುಚಿತ್ರ ನೋಡಿ ಸಂತೋಷ ಪಟ್ಟೆ. ರಿಷಭ್ ಗೆ ಈತನನ್ನು ಪರಿಚಯಿಸಿದೆ. ಈಗ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಈ ಹುಡುಗನಿಗೆ ಹಾಗೂ ತಂಡಕ್ಕೆ ನಿಮ್ಮ ಬೆಂಬಲವಿರಲಿ ಎಂದರು ರಾಜ್ ಬಿ ಶೆಟ್ಟಿ.

ಚಿತ್ರದಲ್ಲಿ ನಟಿಸಿರುವ ರಾಮಕೃಷ್ಣ ಭಟ್ ಹಾಗೂ ಸೌಂಡ್‌ ಡಿಸೈನರ್ ಶ್ರೇಯಾಂಕ್ ಸಹ ತಮ್ಮ ಅನುಭವ ಹಂಚಿಕೊಂಡರು.

Related Posts

error: Content is protected !!