ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ತಂಡ ಹೊಸ ಬಗೆಯ ಸಿನಿಮಾಗಳು ಬರುತ್ತಲೇ ಇವೆ. ಆ ಸಾಲಿಗೆ ಮಾರಕಾಸ್ತ್ರ ಸಿನಿಮಾ ಕೂಡ ಸೇರಿದೆ. ಶ್ರಾವ್ಯ ಕಂಬೈನ್ಸ್ ಬ್ಯಾನರ್ ನಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿರುವ “ಮಾರಕಾಸ್ತ್ರ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದೆ.
ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ “ಮಾರಕಾಸ್ತ್ರ” ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ “ದೇಶದ ರಕ್ಷಣೆಗಾಗಿ” ಎಂಬ ಅಡಿಬರಹವಿದೆ. ನಾನು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಮೊದಲ ಚಿತ್ರ. ಕಥೆ ಕೇಳಿ ಇಷ್ಟಪಟ್ಟು ಅವಕಾಶ ನೀಡಿರುವ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾರ್ಚ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.
ಚಿತ್ರದಲ್ಲಿ ಆರು ಹಾಡುಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಮೂರು ಹಾಡುಗಳನ್ನು ನಮ್ಮ ಚಿತ್ರದ ನಿರ್ಮಾಪಕರಾದ ನಟರಾಜ್ (ಕೋಮಲ ಅವರ ಪತಿ) ಹಾಡಿದ್ದಾರೆ. ದೇಶಭಕ್ತಿ ಕುರಿತಾದ ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಇಂದು ನೀವು ನೋಡಿದ್ದೀರಿ. ನಿಮಗೆ ಮೆಚ್ಚುಗೆಯಾಗಿದೆ ಅಂದುಕೊಳ್ಳುತ್ತೇನೆ ಎಂದರು ಸಂಗೀತ ನಿರ್ದೇಶಕ ಮಿರಾಕಲ್ ಮಂಜು.
ನಿರ್ದೇಶಕರು ನನಗೆ ಕಥೆ ಹೇಳಿದಾಗ ಈ ಚಿತ್ರದಲ್ಲಿ ನಟಿಸಲೇಬೇಕೆಂದು ಆಸೆಯಾಯಿತು. ನಾನು ಹಿಂದೆ ಛಾಯಾ ಎಂಬ ಚಿತ್ರದಲ್ಲಿ ನಟಿಸಿದ್ದೆ. ಇದು ಎರಡನೇ ಚಿತ್ರ. ಈ ಸಂದರ್ಭದಲ್ಲಿ ನಾನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲರು ನನಗೆ ಅವರ ರೀತಿ ಕಾಣುವೆ. ಅವರನ್ನೇ ಅನುಕರಣೆ ಮಾಡುತ್ತೀಯಾ ಎನ್ನುತ್ತಾರೆ. ಆದರೆ ನನಗೆ ಹಾಗೆ ಅನಿಸುವುದಿಲ್ಲ. ಇದೆಲ್ಲ ಸಹಜ ಎನ್ನುತ್ತಾರೆ ನಾಯಕ ಆನಂದ್ ಆರ್ಯ.
ನನ್ನದು ಇದು ಮೊದಲ ಚಿತ್ರ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಎಂದರು ಮಾಧುರ್ಯ
ನಾನು ತುಮಕೂರು ಜಿಲ್ಲೆಯ ಕೊರಟಗೆರೆಯವನು. ಇದು ನನಗೆ ಮೊದಲ ಸಿನಿಮಾ ಕಾರ್ಯಕ್ರಮ. ನಿರ್ದೇಶಕರು ಹೇಳಿದ ಈ ಕಥೆಯಲ್ಲಿ ನಮ್ಮ ದೇಶ ರಕ್ಷಣೆಯ ಹಲವು ಅಂಶಗಳಿದೆ. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ಸಿಕ್ಕಿಂ, ದಾರ್ಜಲಿಂಗ್ ಮುಂತಾದ ಕಡೆ ಹೆಚ್ಚಿನ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಆರು ಹಾಡುಗಳ ಪೈಕಿ ಮೂರು ಹಾಡುಗಳನ್ನು ನಾನೇ ಹಾಡಿದ್ದೀನಿ. ಅವಕಾಶ ಕೊಟ್ಟ ಸಂಗೀತ ನಿರ್ದೇಶಕರಿಗೆ ಧನ್ಯವಾದ ಎಂದರು ನಿರ್ಮಾಪಕ ನಟರಾಜ್. ಚಿತ್ರದಲ್ಲಿ ನಟಿಸುತ್ತಿರುವ ಶಿವಪ್ರಸಾದ್ ಹಾಗೂ ಪುರುಷೋತ್ತಮ ತಮ್ಮ ಅನುಭವ ಹಂಚಿಕೊಂಡರು.