ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “F0R REGN”. (ಫಾರ್ ರಿಜಿಸ್ಟ್ರೇಷನ್) ಚಿತ್ರದ ಚಿತ್ರೀಕರಣ ಹಾಡೊಂದರ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದೆ. ಅಂಡರ್ ವಾಟರ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ ” “ಮೋಕೊ ಬೋಟ್” ಕ್ಯಾಮರಾ ಬಳಸಲಾಗಿದೆ. ನನಗೆ ತಿಳಿದ ಕನ್ನಡ ಚಿತ್ರರಂಗದಲ್ಲಿ ಹಾಡೊಂದರ ಚಿತ್ರೀಕರಣಕ್ಕಾಗಿ ಈ ಕ್ಯಾಮೆರಾ ಬಳಸಿರುವುದು ಇದೇ ಮೊದಲು ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್.
ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಈ ಹಾಡನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಹಾಡಿನಲ್ಲಿ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯಿಸಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರ(2023 ರ ಫೆಬ್ರವರಿ 10) ತೆರೆಗೆ ಬರುತ್ತಿದೆ.
ನಿಶ್ಚಲ್ ಫಿಲಂಸ್ ಮೂಲಕ ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.
ಕನ್ನಡದಲ್ಲಿ ಈಗ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಿದೆ. ಹೊಸ ಬಗೆಯ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಆ ಸಾಲಿಗೆ ‘ವಿಚಾರಣೆ’ ಎಂಬ ಚಿತ್ರವೂ ಸೇರಿದೆ. ಹೌದು, ಡಿಸೆಂಬರ್ 2 ರಂದು ಬನ್ನೇರಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು.
ಯಶ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ ಅವರು, ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ ಎಫ್ ಐ ಆರ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಇನ್ನು ಈ ಚಿತ್ರವನ್ನು ಎನ್. ಅಕುಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಮೂಲತಃ ನೃತ್ಯ ನಿರ್ದೇಶಕರು. ಈ ಚಿತ್ರದ ಮೂಲಕ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ನಿರ್ದೇಶಕ ಅಕುಲ್ ಅವರು ಇದಕ್ಕೂ ಮೊದಲು160 ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ ‘ವಿಚಾರಣೆ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಚಾರಣೆ ಸಿನಿಮಾ ಕುರಿತು ಹೇಳುವ ನಿರ್ದೇಶಕ ಅಕುಲ್, ‘ ಒಂದು ಘಟನೆಯಲ್ಲಿ ಅಮಾಯಕನೊಬ್ಬ ಪೊಲೀಸರ ಕೈ ಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ.
ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್. ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ. ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ.
ಚಿತ್ರದಲ್ಲಿ ಪ್ರೀತಿ, ದೌರ್ಜನ್ಯ, ಎಮೋಷನಲ್ ಅಂಶಗಳೂ ಇವೆ. ಇನ್ನು ಇದರೊಂದಿಗೆ ಚಿತ್ರದಲ್ಲಿ ಕಾಮಿಡಿ ಹಾಗು ಸೆಂಟಿಮೆಂಟ್ ಕೂಡ ಇದೆ. ನಾಲ್ಕು ಭರ್ಜರಿ ಫೈಟ್ಸ್ ಮತ್ತು ಮೂರು ಹಾಡುಗಳಿವೆ. ಕನ್ನಡದಲ್ಲಿ ಈಗ ತೆರೆಗೆ ಬರುತ್ತಿರುವ ವಿಭಿನ್ನ ಕಥಾವಸ್ತು ಇರುವ ಸಿನಿಮಾಗಳ ಸಾಲಿಗೆ ಈ ಸಿನಿಮಾದ ಕಥೆಯು ಇದೆ ಎಂಬುದು ನಿರ್ದೇಶಕರ ಮಾತು.
ಚಿತ್ರಕ್ಕೆ ಮಡೆನೂರು ಮನು ಹೀರೋ. ಜಾನು ನಾಯಕಿ. ಇವರಿಗೆ ಇದು ಮೊದಲ ಅನುಭವ. ಉಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಇತರರು ಇದ್ದಾರೆ.
ಚಿತ್ರಕ್ಕೆ ಜಿ.ವಿ.ರಮೇಶ್ ಅವರ ಛಾಯಾಗ್ರಹಣವಿದೆ. ಸತೀಶ್ ಬಾಬು ಅವರು ಸಂಗೀತ ನೀಡುತ್ತಿದ್ದಾರೆ.
ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿರುವ ಈ ಸಮಯದಲ್ಲಿ ವಿಭಿನ್ನ ಕಥೆಯುಳ್ಳ ಅನೇಕ ಹೊಸ ಚಿತ್ರಗಳು ಆರಂಭವಾಗುತ್ತಿವೆ. ಆ ಸಾಲಿಗೆ ಈಗ ಹೊಸಬರ ವರ್ಣಂ ಸಿನಿಮಾವೂ ಸೇರಿದೆ.
ವರ್ಣಂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇತ್ತೀಚೆಗೆ ಮುಹೂರ್ತ ಸಮಾರಂಭ ತುಮಕೂರಿನ ಶೆಟ್ಟಿಹಳ್ಳಿ ಶ್ತೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಸೌಭಾಗ್ಯಮ್ಮ(ನಿರ್ಮಾಪಕರ ತಾಯಿ) ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರು.
ಏಂಜಲ್ ಫಿಲಂಸ್ ಬ್ಯಾನರ್ ನಲ್ಲಿ ಆರ್. ಜಗದೀಶ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಅರುಣ್ ರಾಜ ನಿರ್ದೇಶಿಸುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಚಿತ್ರ. ಚೈತ್ರಾ ಅನಂತಾಡಿ ಕಥೆ ಬರೆದರೆ, ಮಂಜುನಾಥ್ಚಿ ಕೋಟಿಕೆರೆ ಚಿತ್ರಕಥೆ ಬರೆದಿದ್ದಾರೆ.
ಪ್ರದೀಪ್ ವಿ ಬಂಗಾರಪೇಟೆ ಛಾಯಾಗ್ರಹಣವಿದೆ. ಕೀರ್ತಿರಾಜ್ ಹಿನ್ನೆಲೆ ಸಂಗೀತ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪವನ್ ಎನ್. ಈ ಚಿತ್ರದ ಸಹ ನಿರ್ಮಾಪಕರು.
ಮನು ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೇಘನ “ವರ್ಣಂ” ಚಿತ್ರದ ನಾಯಕಿ. ಎಂ.ಕೆ.ಮಠ, ರಿತಿಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಎರಡು ಭರ್ಜರಿ ಸಾಹಸ ಸನ್ನಿವೇಶಗಳು ಹಾಗೂ ಎರಡು ಹಾಡುಗಳು “ವರ್ಣಂ” ಚಿತ್ರದಲ್ಲಿದೆ. ಡಿಸೆಂಬರ್ 8 ರಿಂದ ತುಮಕೂರು, ಹೊನ್ನಾವರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.
ಪರಭಾಷೆಯ ಸಿನಿಮಾಗಳನ್ನು ಮನಸಾರೆ ಒಪ್ಪಿ-ಅಪ್ಪಿಕೊಂಡ ಈ ನೆಲದ ಪ್ರೇಕ್ಷಕನಿಗೆ ಈಗೀಗಂತೂ ನಮ್ಮ ತವರು ಭಾಷೆಯ ಸಿನಿಮಾಗಳ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಬರುತ್ತಿರುವ ತರಹೇವಾರಿ ಕಥಾಹಂದರದ ಸಿನಿಮಾಗಳು. ಅದರಲ್ಲೂ ಹೊಸಬರು ಹೊಸತನ ಇಟ್ಟುಕೊಂಡು ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ ಬೆಳವಣಿಗೆ ಜೋರಾಗಿದೆ. ಪರಭಾಷೆ ಮೇಕರ್ಸ್ ಬಗ್ಗೆ ಮಾತಾಡುತ್ತಿದ್ದ ನಮ್ಮ ಮಂದಿ ನಮ್ಮವರ ಕ್ರಿಯೇಟಿವ್ ಬಗ್ಗೆ ಗುಣಗಾನ ಮಾಡುವಂತಾಗಿದೆ. ಆ ಸಾಲಿಗೆ ‘ಧರಣಿ ಮಂಡಲ ಮಧ್ಯೆದೊಳಗೆ’ ಸಿನಿಮಾ ತಂಡವು ಸೇರಿದೆ. ಈ ವಾರ ತೆರೆ ಕಂಡಿರುವ ಈ ಚಿತ್ರ ನೋಡುಗರ ನಿರೀಕ್ಷೆ ಹುಸಿಗೊಳಿಸಿಲ್ಲ. ತಮ್ಮ ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದಂತೆ, ನಿರ್ದೇಶಕ ಶ್ರೀಧರ್ ಶಿಕಾರಿಪುರ ಮೊದಲ ಸಿನಿಮಾದಲ್ಲೇ ತಾನೊಬ್ಬ ಪ್ರತಿಭಾವಂತ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ…
‘ ಆದಿ ಚಿತ್ರದ ಕಥಾನಾಯಕ. ಅವನಿಗೆ ಬಾಕ್ಸಿಂಗ್ ಅಂದರೆ ಅಚ್ಚುಮೆಚ್ಚು. ಅದರಲ್ಲೇ ಸಾಧಿಸೋ ಆಸೆ. ಶ್ರೇಯಾ ಚಿತ್ರದ ಕಥಾ ನಾಯಕಿ. ಕೆಲ ಬಲವಾದ ಕಾರಣಗಳಿಗೆ ಬೇಸತ್ತು ಡ್ರಗ್ಸ್ ದಾಸಿಯಾದ ಮುಗ್ಧ ಹುಡುಗಿ. ಅಪ್ಪ-ಅಮ್ಮನಿಂದ ದೂರವಾಗಿ ಪ್ರೀತಿಸಿ ಮದ್ವೆಯಾಗಿ ಒದ್ದಾಡುವ ಅಲ್ಲೊಬ್ಬ ಮಗ. ಪ್ರೀತಿಯೇ ಸಿಗಲಿಲ್ಲವೆಂದು ಸಾಯೋಕೆ ಸಜ್ಜಾದ ಇನ್ನೊಬ್ಬ ಭಗ್ನಪ್ರೇಮಿ. ಒಂದು ಕಡೆ ಡ್ರಗ್ಸ್ ದಂಧೆ ಜೊತೆ ಹುಡುಗಿಯರ ಮಾರಾಟ ನಡೆಸೋ ದಂಧೆಕೋರ… ಇವೆಲ್ಲದರ ಮಿಶ್ರಣ ಪಾಕ ಈ ಧರಣಿಯ ಮಧ್ಯೆ ಸೇರಿದೆ. ಅಲ್ಲಿಗೆ ಇದೊಂದು ಹೈಪರ್ ಲಿಂಕ್ ಶೈಲಿಯ ಕ್ರೈಮ್ ಸ್ಟೋರಿ ಅನ್ನೋದು ಪಕ್ಕಾ. ಹಾಗಂತ ಈ ಚಿತ್ರ ಒಂದೇ ಏಟಿಗೆ ಅರ್ಥವಾಗೋದು ತುಸು ಕಷ್ಟ. ಆದರೆ, ನಿರ್ದೇಶಕರ ಜಾಣತನ ಇಲ್ಲಿ ಮೆಚ್ಚಲೇಬೇಕು. ಎಲ್ಲೂ, ಯಾವುದನ್ನೂ ಗಲಿಬಿಲಿ ಮಾಡದೆ, ಒಂದು ಪ್ರೀತಿ ತುಂಬಿದ ಕ್ರೈಂ ಸ್ಟೋರಿಯನ್ನು ನಯವಾಗಿ ಕಟ್ಟಿಕೊಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಭರವಸೆಯ ನಿರ್ದೇಶಕರಾಗಿದ್ದಾರೆ. ಅಷ್ಟರ ಮಟ್ಟಿಗೆ ಒಂದೊಳ್ಳೆಯ ಥ್ರಿಲ್ಲಿಂಗ್ ಸಿನಿಮಾ ಮುಂದಿಟ್ಟಿದ್ದಾರೆ.
ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾ ನೋಡುಗರಿಗೆ ಒಂದಷ್ಟು ಟ್ವಿಸ್ಟು-ಟೆಸ್ಟುಗಳ ಮಧ್ಯೆ ಥ್ರಿಲ್ ನೀಡುತ್ತದೆ. ಬೊಗಸೆಯಷ್ಟು ಪ್ರೀತಿ, ಹಿಡಿಯಷ್ಟು ಪಾಪ, ಪಶ್ಚಾತ್ತಾಪಗಳ ಸುತ್ತ ಸಾಗುವ ಕಥೆಯಲ್ಲಿ ಎದೆ ಭಾರವೆನಿಸೋ ದೃಶ್ಯಗಳೂ ಇವೆ. ಅಲ್ಲಲ್ಲಿ ಭಾವುಕತೆಯೂ ಇಣುಕಿ ನೋಡುತ್ತದೆ. ಜೀವ-ಭಾವ ಮಿಡಿತದ ಸಂದೇಶವೂ ಇಲ್ಲಿದೆ. ಮೊದಲೇ ಹೇಳಿದಂತೆ ಇದೊಂದು ನಾಲ್ಕೈದು ಆಯಾಮಗಳಲ್ಲಿ ಸಾಗುವ ಕಥೆ. ಆ ಎಲ್ಲಾ ಆಯಾಮದ ಕಥೆಯ ಅಂತಿಮ ಮಾತ್ರ ಒಂದೇ ಕಡೆ ಸಲ್ಲುತ್ತದೆ. ಅದೇ ಸಿನಿಮಾದ ಸ್ಪೆಷಲ್. ಆ ಸ್ಪೆಷಲ್ ಏನೆಂದು ತಿಳಿಯಬೇಕಾದರೆ ಮಿಸ್ ಮಾಡದೆ ಈ ಧರಣಿಯೊಳು ಮಿಂದೆದ್ದು ಬರಲಡ್ಡಿಯಿಲ್ಲ.
ಏನೆಲ್ಲಾ ಉಂಟು?
ಇಲ್ಲಿ ಪ್ರೀತಿ ಇದೆ, ಗೆಳೆತನವಿದೆ, ವಾತ್ಸಲ್ಯವಿದೆ, ಮುಗ್ಧತೆಯಿದೆ, ಅಸಹಾಯಕತೆ ಇದೆ, ಅನುಕಂಪವಿದೆ, ಅನಿವಾರ್ಯತೆವಿದೆ, ಎಲ್ಲಕ್ಕೂ ಮಿಗಿಲಾಗಿ ಮಾನವೀಯತೆಯ ಗುಣ ಹೆಚ್ಚಿದೆ. ಆ ಕಾರಣಕ್ಕೆ ಚಿತ್ರ ನೋಡುಗರಿಗೆ ಆಪ್ತವೆನಿಸುತ್ತೆ. ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರಿಗೆ ಏನು ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ತೋರಿಸಬೇಕೆಂಬುದರ ಅರಿವಿದೆ. ಅದು ಇಲ್ಲಿ ಮೇಳೈಸಿರುವುದರಿಂದ ಸಿನಿಮಾ ಆರಂಭದಿಂದ ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಕಥೆ ಬಗ್ಗೆಯಾಗಲಿ,ಚಿತ್ರಕಥೆಯಾಗಲಿ, ನಿರೂಪಣೆ ಕುರಿತಾಗಲಿ ತಕರಾರಿಲ್ಲ. ಕೆಲವು ಕಡೆ ಬೇಡದ ಅಂಶಗಳನ್ನು ಕೈ ಬಿಟ್ಟಿದ್ದರೆ, ಲ್ಯಾಗ್ ಎಂಬ ಮಾತನ್ನು ಪಕ್ಕಕ್ಕಿಡಬಹುದಿತ್ತು. ಮೊದಲರ್ಧ ಕೊಂಚ ಲ್ಯಾಗ್ ಎನಿಸುತ್ತಾದರೂ, ಅಲ್ಲಲ್ಲಿ ತೂರಿ ಬರುವ ಕಾಮಿಡಿ ಟ್ರ್ಯಾಕ್ ಹಾಗು ಹಾಡುಗಳು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಕೂಡ ಕುತೂಹಲ ಜೊತೆಗೆ ಸೀಟಿನಂಚಿನತ್ತ ಕೂರುವಂತೆ ಮಾಡುತ್ತದೆ. ಒಟ್ಟಾರೆ, ರೋಚಕತೆಯೊಂದಿಗೆ ಸಾಗುವ ಧರಣಿ ಮಧ್ಯೆ ಚೂರು ಪಾರು ಮಿಸ್ಟೇಕ್ ಎದ್ದು ಕಾಣುತ್ತವೆ. ಆ ಮಿಸ್ಟೇಕ್ ಬದಿಗೊತ್ತಲು ಸಿನಿಮಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಸುಳ್ಳಲ್ಲ. ಸಿನಿಮಾದ ಮತ್ತೊಂದು ತಾಕತ್ತು ಅಂದರೆ, ಹಿನ್ನೆಲೆ ಸಂಗೀತ ಮತ್ತು ಅದಕ್ಕೆ ಸಾಥ್ ನೀಡಿರೋ ಸಂಕಲನ ಕೆಲಸ. ಇವೆರೆಡು ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ.
ಕಥೆ ಏನು?
ಬಾಕ್ಸಿಂಗ್ ಕನಸಿನ ಬೆನ್ನತ್ತಿದ ಹುಡುಗನೊಬ್ಬನ ಲೈಫಲ್ಲಿ ಪ್ರೀತಿ ಹುಟ್ಟುತ್ತೆ. ಅವನು ಪ್ರೀತಿಸೋ ಹುಡುಗಿ ಡ್ರಗ್ಸ್ ದಾಸಿ. ಘಟನೆಯೊಂದರಲ್ಲಿ ಅವಳ ಕಿಡ್ನ್ಯಾಪ್ ಆಗುತ್ತೆ. ಅವಳನ್ನು ಕಾಪಾಡಲು ಹೋಗುವ ಹುಡುಗನ ಮುಂದೆ ಒಂದಷ್ಟು ಸವಾಲುಗಳ ರಾಶಿ. ಅವೆಲ್ಲವನ್ನೂ ದಾಟಿ ಹೋಗುವ ಮಧ್ಯೆ ನೂರೆಂಟು ವಿಘ್ನ. ನಾಲ್ಕೈದು ಆಯಾಮಗಳಲ್ಲಿ ಸಾಗೋ ಕಥೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಇಲ್ಲಿ ಹೇಳುವುದಕ್ಕಿಂತ ಒಂದೊಮ್ಮೆ ಧರಣಿಯೊಳು ಸುತ್ತಿ ಬಂದರೆ ಆ ಸಮಸ್ಯೆ ಏನೆಂಬುದರ ಅರಿವಾಗುತ್ತೆ.
ಒಂದೇ ಸಲ ಐದು ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತದೆ. ಅವೆಲ್ಲವೂ ಬೇರೆ ಬೇರೆ ಕಥೆಗಳಾದರೂ, ಅಂತಿಮದಲ್ಲಿ ಒಂದೇ ಜಾಡಿಗೆ ಸೇರುತ್ತವೆ. ಪ್ರತಿ ಟ್ರ್ಯಾಕ್ ಕೂಡ ಕುತೂಹಲದಲ್ಲೇ ಸಾಗುತ್ತೆ. ಚಿತ್ರದ ವಿಶೇಷ ಅಂದರೆ, ಬಿಗಿಯಾದ ನಿರೂಪಣೆ. ಕೆಲವು ಕಡೆ ನಿರೂಪಣೆ ಎಲ್ಲೆಲ್ಲೋ ಸಾಗುತ್ತಿದೆ ಅಂದುಕೊಳ್ಳುತ್ತಿದ್ದಂತೆ, ಕಾಮಿಡಿ ಟ್ರ್ಯಾಕ್ ಸಹಬದಿಗೆ ತರುತ್ತದೆ. ಹೊಸತನ ಮತ್ತು ಥ್ರಿಲ್ ಬಯಸುವವರಿಗೆ ಚಿತ್ರ ಮೋಸ ಮಾಡಲ್ಲ.
ಯಾರು ಹೇಗೆ?
ನಾಯಕ ನವೀನ್ ಶಂಕರ್ ಕೆಲ ವರ್ಷಗಳ ಬಳಿಕ ಸ್ಕ್ರೀನ್ ಮೇಲೆ ಬಂದರೂ, ಇಲ್ಲಿ ಗಮನ ಸೆಳೆಯುತ್ತಾರೆ. ಒಬ್ಬ ಪ್ರೇಮಿಯಾಗಿ ಇಷ್ಟವಾಗುತ್ತಾರೆ, ನಟನೆ ಮತ್ತು ಫೈಟ್ ಎರಡರಲ್ಲೂ ಸೈ. ಇನ್ನು, ನಾಯಕಿ ಐಶಾನಿ ಶೆಟ್ಟಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಡ್ರಗ್ಸ್ ವ್ಯಸನಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯಶ್ ಶೆಟ್ಟಿ ಇಲ್ಲಿ ಎಂದಿಗಿಂತಲೂ ಸ್ಪೆಷಲ್ ಎನಿಸುತ್ತಾರೆ. ಪೇಚೆಗೆ ಸಿಲುಕಿದ ಮುಗ್ಧನಾಗಿ ಗಮನ ಸೆಳೆಯುತ್ತಾರೆ. ಸಿದ್ದು ಮೂಲಿಮನಿ ಕೂಡ ಪಕ್ಕಾ ಲೋಕಲ್ ಹುಡುಗನಾಗಿ ಇಷ್ಟವಾಗುತ್ತಾರೆ. ಉಳಿದಂತೆ ರಾಜ್ ಬಲವಾಡಿ, ಮಹಾಂತೇಶ್ ಬಡಿಗೇರ್, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ, ಗಣೇಶ್ ರಾವ್ ಇತರರು ಇಲ್ಲಿ ಸೈ ಎನಿಸಿಕೊಂಡಿದ್ದಾರೆ.
ರೋಣದ ಬಕ್ಕೇಶ್ ಹಾಗು ಕಾರ್ತಿಕ್ ಚೆನ್ನೋಜಿರಾವ್ ಅವರ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದು. ಸಿನಿಮಾ ವೇಗ ಹೆಚ್ಚಿಸಿರೋದೆ ಸಂಗೀತ. ಇನ್ನು, ಅದಕ್ಕೆ ತಕ್ಕಂತೆ ಉಜ್ವಲ್ ಚಂದ್ರ ಅವರ ಕತ್ತರಿ ಪ್ರಯೋಗ ಕೂಡ ಮಾತಾಡುವಂತಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ಕೈಚಳಕದಲ್ಲಿ ಧರಣಿಯೊಳಗಿನ ಕೊಳಕು- ಬೆಳಕು- ಸರಕು ಅಂದವಾಗಿದೆ.
‘ಕಬ್ಜ’ ಚಿತ್ರ ಶುರುವಾದಾಗಿಂದಲೂ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ನಿರೀಕ್ಷೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಸಕ್ಸಸ್ ಫುಲ್ ಸಿನಿಮಾ ಕೊಡುವ ಮೂಲಕ ಬೇಡಿಕೆಯ ನಿರ್ದೇಶಕರ ಸಾಲಲ್ಲಿರುವ ಆರ್.ಚಂದ್ರು ಈಗ ತಮ್ಮ ಕಬ್ಜ ಸಿನಿಮಾ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈ ಸಿನಿಮಾ ಲೇಟೆಸ್ಟ್ ಸುದ್ದಿ ಅಂದರೆ, ಹಿಂದಿ ಅವತರಣಿಕೆ ಹಕ್ಕುಗಳು ಬಾಲಿವುಡ್ ನ ಪ್ರತಿಷ್ಠಿತ ಅನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ತೆಕ್ಕೆಗೆ ಬಿದ್ದಿದೆ. ಹಿಂದಿ ಟೀಸರ್ ರಿಲೀಸ್ ಆಗಿದ್ದು, ಸಾಕಷ್ಟು ಸೌಂಡ್ ಮಾಡಿದೆ
ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.
‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಹೇಳುವಂತೆ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದಿದ್ದಾರೆ.
ಚಿತ್ರದ ಬಗ್ಗೆ ನಾಯಕ ನಟ ಉಪೇಂದ್ರ ಅವರಿಗೂ ನಂಬಿಕೆ ಇದೆ. ‘ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ ಸಹ ಈ ಕುರಿತು ಮಾತನಾಡಿದ್ದು ಹೀಗೆ. ‘ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ’ ಎಂದಿದ್ದಾರೆ.
‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ.
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಬೆಳಗ್ಗಿನಿಂದ ಸಂಜೆಯ ತನಕ ಇಡೀ ದಿನ ಏನೆಲ್ಲಾ ಮಾಡಬೇಕೆಂಬ ದಿನಚರಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಡಿಸಿಕೊಂಡಿರುತ್ತಾರೆ. ಆದರೆ ಏನಿದು ” ಹೊಸ ದಿನಚರಿ”? ಈ ಪ್ರಶ್ನೆಗೆ ಉತ್ತರ ಡಿಸೆಂಬರ್ 9 ರಂದು ಸಿಗಲಿದೆ. ಹೌದು ಚಿತ್ರ ಕರ್ನಾಟಕದಾದ್ಯಂತ ಅಂದು ಬಿಡುಗಡೆಯಾಗಲಿದೆ.
ನಾನು ಈ ಹಿಂದೆ “ಆಯನ” ಎಂಬ ಚಿತ್ರ ನಿರ್ದೇಶಿಸಿದ್ದೆ. ಈಗ “ಹೊಸ ದಿನಚರಿ” ಚಿತ್ರವನ್ನು ನಿರ್ಮಾಣ ಮಾಡಿದ್ದೀನಿ. ನನ್ನ ಮಿತ್ರರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಈ ಚಿತ್ರವನ್ನು ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ ಜಂಟಿಯಾಗಿ ನಿರ್ದೇಶಿಸಿದ್ದಾರೆ.
ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದಿರುವ ಈ ಹುಡುಗರ ಹೊಸ ಪ್ರಯತ್ನವೇ ಈ “ಹೊಸ ದಿನಚರಿ”. ಡಿಸೆಂಬರ್ 9 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗಂಗಾಧರ್ ಸಾಲಿಮಠ.
ನಮ್ಮ ಸಂಸ್ಥೆಯ ಮೊದಲ ಪ್ರಯತ್ನ ” ಹೊಸ ದಿನಚರಿ”. ಹಿಂದಿಯಲ್ಲಿ ನಾವು ಮೂವರು ಸೇರಿ ವೆಬ್ ಸೀರಿಸ್ ಕೂಡ ನಿರ್ಮಿಸುತ್ತಿದ್ದೇವೆ. ಮತ್ತೊಂದು ಚಿತ್ರವನ್ನು ಮುಂದಿನ ವರ್ಷ ಕನ್ನಡ ಹಾಗೂ ಹಿಂದಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ತಮ್ಮ ಸಂಸ್ಥೆಯ ನೂತನ ಯೋಜನೆಗಳ ಕುರಿತು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಹ ಚೌರಾಸಿಯಾ ಮಾಹಿತಿ ನೀಡಿದರು.
ನಮ್ಮ ಚಿತ್ರದಲ್ಲಿ ಪ್ರೀತಿ ನಾಲ್ಕು ಆಯಾಮಗಳಲ್ಲಿ ಸಾಗುತ್ತದೆ. ಎಲ್ಲರ ಜೀವನದಲ್ಲೂ ಪ್ರೀತಿ ಇರುತ್ತದೆ. ಆದರೆ ಅದು ಕೊನೆಯ ತನಕ ಉಳಿಯುತ್ತದಾ? ಹಾಗಾದರೆ ಕೊನೆ ತನಕ ನಮ್ಮ ಜೊತೆ ಇರುವವರು ಯಾರು? ಎಂಬದೇ “ಹೊಸ ದಿನಚರಿಯ ಕಥಾಸಾರಾಂಶ ಎಂದರು ಜಂಟಿ ನಿರ್ದೇಶಕರಾದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ.
ಹೊಸ ತಂಡದ ಜೊತೆ ಸಿನಿಮಾ ಮಾಡಿದ್ದ ಖುಷಿ ಇದೆ. ” ಹೊಸ ದಿನಚರಿ” ಚೆನ್ನಾಗಿದೆ. ನೋಡಿ ಹಾರೈಸಿ ಎನ್ನುತ್ತಾರೆ ಹಿರಿಯ ಕಲಾವಿದರಾದ ಬಾಬ ಹಿರಣ್ಣಯ್ಯ ಹಾಗೂ ಅರುಣಾ ಬಾಲರಾಜ್.
ನಾಯಕಿ ಶ್ರೀಪ್ರಿಯ ಅವರಿಗೆ ಇಲ್ಲಿ ವಿಶೇಷ ಪಾತ್ರವಿದೆಯಂತೆ. ಒಂದೊಂದು ಕಥೆಯಲ್ಲೂ ವಿಭಿನ್ನತೆ ಇದೆ. ಒಂದಷ್ಟು ಸಂದೇಶವೂ ಇಲ್ಲಿದೆ. ಇದೊಂದು ಹೊಸ ಬಗೆಯ ಸಿನಿಮಾ ಅಂದರು ಶ್ರೀ ಪ್ರಿಯ.
ಚಿತ್ರದಲ್ಲಿ ಅಭಿನಯಿಸಿರುವ ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ರಾಕಿ ಸೇರಿದಂತೆ ಅನೇಕ ತಂತ್ರಜ್ಞರು “ಹೊಸ ದಿನಚರಿ” ಯ ಬಗ್ಗೆ ಮಾತನಾಡಿದರು.
ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇಂದು ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.
ಇದು ನನ್ನ ಮೊದಲ ಸಿನಿಮಾ. ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.
ಡಾಲಿ ಧನಂಜಯ್ ಮಾತನಾಡಿ, ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತೆ ಎಂದು ನಾನು ಹಿಂದೆಯೇ ಹೇಳಿದ್ದೆ. ಉಮೇಶ್ ಕೆ ಕೃಪ ‘ಟಗರು ಪಲ್ಯ’ ಕಥೆ ಎಳೆ ಹೇಳಿದಾಗ ತುಂಬಾ ಖುಷಿ ಆಯ್ತು. ಅದ್ಭುತವಾದ ರೈಟರ್. ಸೆಟ್ ಹುಡುಗ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕನಾಗುತ್ತಿದ್ದಾರೆ. ಬಡ ಕುಟುಂಬದಿಂದ ಬಂದು ನಿರ್ದೇಶಕನಾಗುತ್ತಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ಗಿಫ್ಟ್ ಆಗೋ ಎಲ್ಲಾ ಲಕ್ಷಣಗಳು ಅವರಲ್ಲಿದೆ. ನಮ್ಮ ಬ್ಯಾನರ್ ನಿಂದ ಒಳ್ಳೆಯ ನಿರ್ದೇಶಕರು ಬರಲಿ ಎಂದು ಈ ಸಿನಿಮಾ ಆರಂಭಿಸಿದ್ವಿ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಡೀ ಕಥೆ ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಎಮೋಶನಲ್ ಎಂಟಟೈನ್ಮೆಂಟ್ ಸಿನಿಮಾವಿದು. ನಾಗಭೂಷಣ್ ಈಗಾಗಲೇ ಇಕ್ಕಟ್, ಹನಿಮೂನ್, ಬಡವ ರಾಸ್ಕಲ್ ಸಿನಿಮಾದಲ್ಲಿ ತಮ್ಮ ಪ್ರತಿಭೆ ಪ್ರೂವ್ ಮಾಡಿದ್ದಾರೆ. ಪ್ರೇಮ್ ಸರ್ ಮಗಳನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದೇವೆ. ತುಂಬಾ ದೊಡ್ಡ ಜವಾಬ್ದಾರಿ ಇದು. ಕನ್ನಡ ಚಿತ್ರರಂಗದ ಮಹಾಲಕ್ಷ್ಮೀ ಆಗಿ ಅಮೃತ ಬೆಳಗಲಿ ಎಂದು ಧನಂಜಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನೆನಪಿರಲಿ ಪ್ರೇಮ್ ಮಾತನಾಡಿ, ನನ್ನ ಮಗಳಿಗೆ ಒಳ್ಳೆ ಕಥೆ ಬಂದಿದೆ ಸಿನಿಮಾದಲ್ಲಿ ಆಕ್ಟ್ ಮಾಡ್ತಿಯ ಎಂದು ಕೇಳಿದೆ ಇಷ್ಟು ದಿನ ಮಾಡಲ್ಲ ಅಂತಿದ್ದವಳು ಒಂದೇ ಸರಿ ಒಕೆ ಅಂದ್ಲು. ಕಥೆ ಓದಿದೆ ನನಗೂ ಹಾಗೂ ಮಗಳಿಗೂ ತುಂಬಾ ಇಷ್ಟವಾಯ್ತು ಒಕೆ ಅಂದ್ವಿ. ಡಾಲಿ ಪ್ರೊಡಕ್ಷನ್ ಮಾಡ್ತಿದ್ದಾನೆ ಎಂದು ಗೊತ್ತಾಗಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೆ ನಮ್ಮನ್ನು ಬೆಳೆಸಿದ್ದೀರಾ ನನ್ನ ಮಗಳಿಗೂ ಪ್ರೋತ್ಸಾಹ ನೀಡಿ ಎಂದು ಪ್ರೇಮ್ ಸಂತಸ ಹಂಚಿಕೊಂಡರು.
ಇದು ನನಗೆ ದೊಡ್ಡ ಜವಾಬ್ದಾರಿ ಖಂಡಿತಾ ನಾನು ಪ್ರೂವ್ ಮಾಡ್ತೇನೆ. ಕಥೆ ಹಾಗೂ ಇದ್ರಲ್ಲಿರೋ ಮೆಸೇಜ್ ತುಂಬಾ ಇಷ್ಟ ಆಯ್ತು ಆದ್ರಿಂದ ಒಪ್ಪಿಕೊಂಡೆ. ಅವಕಾಶ ಕೊಟ್ಟಿದ್ದಕ್ಕೆ ಧನಂಜಯ್ ಸರ್ ಗೆ ಧನ್ಯವಾದಗಳು. ಆಕ್ಟಿಂಗ್ ಫೀಲ್ಡ್ ಗೆ ಬರ್ತಿನಿ ಅಂತ ಯೋಚನೆ ಮಾಡಿರಲಿಲ್ಲ. ಈ ಸಿನಿಮಾ ಕಥೆ ಬಂದಾಗ ಅಪ್ಪ ನನಗೆ ಒಂದೇ ಮಾತು ಹೇಳಿದ್ದು ಕಲಿಬೇಕು ಅಂತ ಇಂಟ್ರಸ್ಟ್ ಇದ್ರೆ ಯಾವುದು ಬೇಕಾದ್ರು ಸಾಧ್ಯ ಎಂದು ಆದ್ರಿಂದ ಒಪ್ಪಿಕೊಂಡೆ. ಖಂಡಿತಾ ನನ್ನ ಬೆಸ್ಟ್ ಈ ಸಿನಿಮಾಗೆ ನೀಡುತ್ತೇನೆ ಎಂದು ಅಮೃತ ಪ್ರೇಮ್ ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.
ನಾಯಕ ನಾಗಭೂಷಣ್ ಮಾತನಾಡಿ, ನನ್ನ ಊರ ಹೆಸರು ಟಗರು ಪುರ ಎಂದು ಕಾಕತಾಳೀಯವೇನೋ ಎಂಬಂತೆ ನನ್ನ ಸಿನಿಮಾ ಹೆಸರು ಟಗರು ಪಲ್ಯ ಎಂದು ತುಂಬಾ ಖುಷಿ ಆಯ್ತು. ಈ ಕಾಲಘಟ್ಟಕ್ಕೆ ‘ಟಗರು ಪಲ್ಯ’ ತುಂಬಾ ರಿಲೆವೆಂಟ್ ಆಗಿದೆ. ಹಳ್ಳಿಯಲ್ಲಿ ಇರುವ ನಂಬಿಕೆ, ಆಚರಣೆ ಸುತ್ತ ನಡೆಯೋ ಕಥೆ ಇದು. ಈ ಸಿನಿಮಾ ಭಾಗವಾಗಿರೋದು ತುಂಬಾ ಖುಷಿ ಇದೆ ಎಂದರು.
ಟಗರು ಪಲ್ಯಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನವಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಸಡಗರ ರಾಘವೇಂದ್ರ ನಿರ್ದೇಶನದ ಆಪರೇಷನ್ ಲಂಡನ್ ಕೆಫೆ ಚಿತ್ರ ತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಅದಕ್ಕೂ ಮೊದಲು ಮರಾಠಿ ಮೂಲದ ಮತ್ತೊಬ್ಬ ಸ್ಟಾರ್ ಕಲಾವಿದ ವಿರಾಟ್ ಮಡಕೆಯ ಮಾಸ್ ಲುಕ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರದ ಒಂದೊಂದೇ ಮಗ್ಗುಲನ್ನು ಹಂತ ಹಂತವಾಗಿ ಚಿತ್ರ ಪ್ರೇಮಿಗಳಿಗೆ ಪರಿಚಯಿಸುತ್ತಿದ್ದಾರೆ.
ಈ ಚಿತ್ರ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದ್ದು ಚಿತ್ರ ರಸಿಕರಿಗೆ ಇಷ್ಟವಾಗುವ ರೀತಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎನ್ನುವುದು ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ತನ್ನ ಮೊದಲನೇ ಚಿತ್ರ ಜಿಲ್ಕಾ ನಂತರ ಕವೀಶ್ ಶೆಟ್ಟಿ ಸಂಪೂರ್ಣ ಮಾಸ್ ಶೈಲಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಈ ಚಿತ್ರದ ಇನ್ನೊಂದು ಹೈಲೈಟ್ ಮೇಘಾ ಶೆಟ್ಟಿ.
ತಮ್ಮ ಸಹಜ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಮೇಘಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದಲ್ಲಿ ಬಜಾರಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ತುಂಬಾ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡಕೆ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಉಡುಪಿ ಚಿಕ್ಕಮಗಳೂರು ಸುತ್ತಮುತ್ತ ಭಟ್ಕಳ ಕಳಸ ಕಾಡು ಮತ್ತು ಬೆಂಗಳೂರು ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು ಇನ್ನು ಕೆಲವೇ ದಿನಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸಜ್ಜಾಗುತ್ತಿದೆ. ವಿಜಯ್ ಕುಮಾರ್ ಶೆಟ್ಟಿ ಹವರಾಲ್ ದೀಪಕ್ ರಾಣೆ ರಮೇಶ್ ಕೊಠಾರಿ ಮತ್ತು ವಿಜಯ್ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಮೇಲಿನ ಅಪಾರ ಕನಸೊತ್ತು ಹೊಸಬರ ಚಿತ್ರತಂಡವೊಂದು ಸ್ಯಾಂಡಲ್ ವುಡ್ ಅಂಗಳಕ್ಕೆ ಮೊದಲ ಹೆಜ್ಜೆ ಇಟ್ಟಿದೆ. ಇವರ ಮೊದಲ ಕನಸು, ಪರಿಶ್ರಮ, ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಆ ಚಿತ್ರವೇ ‘ಥಗ್ಸ್ ಆಫ್ ರಾಮಘಡ’. ಈ ಚಿತ್ರದ ಫಸ್ಟ್ ಲುಕ್ ಭಟ್ರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇಂಟ್ರಸ್ಟಿಂಗ್ ಎನಿಸೋ ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರಕ್ಕೆ ಕಾರ್ತಿಕ್ ಮಾರಲಭಾವಿ ಆಕ್ಷನ್ ಕಟ್ ಹೇಳಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಸಿನಿಮಾ ಮೇಲಿನ ಅಪಾರ ಪ್ಯಾಶನ್ ಬಣ್ಣದ ಲೋಕಕ್ಕೆ ಕರೆ ತಂದು ನಿಲ್ಲಿಸಿದೆ. ಆದ್ರಿಂದಲೇ ಕೆಲಸಕ್ಕೆ ಗುಡ್ ಬೈ ಹೇಳಿ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಮೂಲತಃ ಯಾದಗಿರಿಯವರಾದ ಕಾರ್ತಿಕ್ ಮಾರಲಭಾವಿ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ.
ಸುರಪುರ, ವಿಜಯಪುರ, ಶಹಪುರ, ತಾಳಿಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ತಂಡ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರೋ ಚಿತ್ರತಂಡ ಇನ್ಮುಂದೆ ಸಿನಿಮಾದ ಒಂದೊಂದೇ ಸ್ಯಾಂಪಲ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆಯಲು ತಯಾರಿ ಮಾಡಿಕೊಂಡಿದೆ.
ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ವಿಶಾಲ್ ಪಾಟೀಲ್, ರವಿ ಸಾಲಿಯನ್, ರಾಘವೇಂದ್ರ, ಭೀಷ್ಮ, ಲೋಕೇಶ್ ಗೌಡ, ಟೈಗರ್ ಗಂಗ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್.ವೈ.ಎಸ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ
‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಉಡಾಳ್ ಬಾಬು ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಮೋದ್ ‘ಬಾಂಡ್ ರವಿ’ಯಾಗಿ ಹೊಸ ಅವತಾರ ತಾಳಿದ್ದಾರೆ. ಪ್ರಮೋದ್ ಸಿನಿ ಕೆರಿಯರ್ ನ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಮಾಸ್ ಟೀಸರ್ ಹಾಗೂ ಹಾಡಿನ ಮೂಲಕ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 9ರಂದು ‘ಬಾಂಡ್ ರವಿ’ ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾನೆ.
‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ’, ‘ಪ್ರೀಮಿಯರ್ ಪದ್ಮಿನಿ’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಬಾಂಡ್ ರವಿ ಮೂಲಕ ಮಾಸ್ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಆಕ್ಷನ್ ಲವ್ ಸ್ಟೋರಿ ಒಳಗೊಂಡ ಈ ಚಿತ್ರಕ್ಕೆ ಪ್ರಜ್ವಲ್ ಎಸ್.ಪಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಡಿಸೆಂಬರ್ 9ರಂದು ತೆರೆ ಕಾಣುತ್ತಿದೆ.
ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ವಿಜಯ ಪ್ರಕಾಶ್ ದನಿಯಾಗಿರುವ ‘ಮಜ ಮಜ ಮಾಡು ಬಾ’, ಜಯಂತ್ ಕಾಯ್ಕಿಣಿ ಸಾಹಿತ್ಯದ ಸೋನು ನಿಗಂ ದನಿಯಾಗಿರುವ ರೋಮ್ಯಾಂಟಿಕ್ ಸಾಂಗ್ ‘ಸಹಜ ಸಖಿ’ ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಗೆದ್ದಿವೆ.
ನರಸಿಂಹಮೂರ್ತಿ. ವಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.