ಬೆಳಗ್ಗಿನಿಂದ ಸಂಜೆಯ ತನಕ ಇಡೀ ದಿನ ಏನೆಲ್ಲಾ ಮಾಡಬೇಕೆಂಬ ದಿನಚರಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಡಿಸಿಕೊಂಡಿರುತ್ತಾರೆ. ಆದರೆ ಏನಿದು ” ಹೊಸ ದಿನಚರಿ”? ಈ ಪ್ರಶ್ನೆಗೆ ಉತ್ತರ ಡಿಸೆಂಬರ್ 9 ರಂದು ಸಿಗಲಿದೆ. ಹೌದು ಚಿತ್ರ ಕರ್ನಾಟಕದಾದ್ಯಂತ ಅಂದು ಬಿಡುಗಡೆಯಾಗಲಿದೆ.
ನಾನು ಈ ಹಿಂದೆ “ಆಯನ” ಎಂಬ ಚಿತ್ರ ನಿರ್ದೇಶಿಸಿದ್ದೆ. ಈಗ “ಹೊಸ ದಿನಚರಿ” ಚಿತ್ರವನ್ನು ನಿರ್ಮಾಣ ಮಾಡಿದ್ದೀನಿ. ನನ್ನ ಮಿತ್ರರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಈ ಚಿತ್ರವನ್ನು ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ ಜಂಟಿಯಾಗಿ ನಿರ್ದೇಶಿಸಿದ್ದಾರೆ.
ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದಿರುವ ಈ ಹುಡುಗರ ಹೊಸ ಪ್ರಯತ್ನವೇ ಈ “ಹೊಸ ದಿನಚರಿ”. ಡಿಸೆಂಬರ್ 9 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಗಂಗಾಧರ್ ಸಾಲಿಮಠ.
ನಮ್ಮ ಸಂಸ್ಥೆಯ ಮೊದಲ ಪ್ರಯತ್ನ ” ಹೊಸ ದಿನಚರಿ”. ಹಿಂದಿಯಲ್ಲಿ ನಾವು ಮೂವರು ಸೇರಿ ವೆಬ್ ಸೀರಿಸ್ ಕೂಡ ನಿರ್ಮಿಸುತ್ತಿದ್ದೇವೆ. ಮತ್ತೊಂದು ಚಿತ್ರವನ್ನು ಮುಂದಿನ ವರ್ಷ ಕನ್ನಡ ಹಾಗೂ ಹಿಂದಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ತಮ್ಮ ಸಂಸ್ಥೆಯ ನೂತನ ಯೋಜನೆಗಳ ಕುರಿತು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಹ ಚೌರಾಸಿಯಾ ಮಾಹಿತಿ ನೀಡಿದರು.
ನಮ್ಮ ಚಿತ್ರದಲ್ಲಿ ಪ್ರೀತಿ ನಾಲ್ಕು ಆಯಾಮಗಳಲ್ಲಿ ಸಾಗುತ್ತದೆ. ಎಲ್ಲರ ಜೀವನದಲ್ಲೂ ಪ್ರೀತಿ ಇರುತ್ತದೆ. ಆದರೆ ಅದು ಕೊನೆಯ ತನಕ ಉಳಿಯುತ್ತದಾ? ಹಾಗಾದರೆ ಕೊನೆ ತನಕ ನಮ್ಮ ಜೊತೆ ಇರುವವರು ಯಾರು? ಎಂಬದೇ “ಹೊಸ ದಿನಚರಿಯ ಕಥಾಸಾರಾಂಶ ಎಂದರು ಜಂಟಿ ನಿರ್ದೇಶಕರಾದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ.
ಹೊಸ ತಂಡದ ಜೊತೆ ಸಿನಿಮಾ ಮಾಡಿದ್ದ ಖುಷಿ ಇದೆ. ” ಹೊಸ ದಿನಚರಿ” ಚೆನ್ನಾಗಿದೆ. ನೋಡಿ ಹಾರೈಸಿ ಎನ್ನುತ್ತಾರೆ ಹಿರಿಯ ಕಲಾವಿದರಾದ ಬಾಬ ಹಿರಣ್ಣಯ್ಯ ಹಾಗೂ ಅರುಣಾ ಬಾಲರಾಜ್.
ನಾಯಕಿ ಶ್ರೀಪ್ರಿಯ ಅವರಿಗೆ ಇಲ್ಲಿ ವಿಶೇಷ ಪಾತ್ರವಿದೆಯಂತೆ. ಒಂದೊಂದು ಕಥೆಯಲ್ಲೂ ವಿಭಿನ್ನತೆ ಇದೆ. ಒಂದಷ್ಟು ಸಂದೇಶವೂ ಇಲ್ಲಿದೆ. ಇದೊಂದು ಹೊಸ ಬಗೆಯ ಸಿನಿಮಾ ಅಂದರು ಶ್ರೀ ಪ್ರಿಯ.
ಚಿತ್ರದಲ್ಲಿ ಅಭಿನಯಿಸಿರುವ ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ರಾಕಿ ಸೇರಿದಂತೆ ಅನೇಕ ತಂತ್ರಜ್ಞರು “ಹೊಸ ದಿನಚರಿ” ಯ ಬಗ್ಗೆ ಮಾತನಾಡಿದರು.