ಧರಣಿಯೊಳು ಪಾಪ‌ ಪ್ರಜ್ಞೆ-ಪಶ್ಚಾತ್ತಾಪ! ಹೊಸಬರ ಮಧ್ಯೆದೊಳಗೆ ಮನಸ್ಸು ಮೆಚ್ಚುಗೆ…

ಚಿತ್ರ ವಿಮರ್ಶೆ : ವಿಜಯ್ ಭರಮಸಾಗರ

ರೇಟಿಂಗ್ – 4/5

ಚಿತ್ರ : ಧರಣಿ ಮಂಡಲ ಮಧ್ಯದೊಳಗೆ
ನಿರ್ದೇಶಕ : ಶ್ರೀಧರ್ ಶಿಕಾರಿಪುರ
ನಿರ್ಮಾಣ : ಓಂಕಾರ್ ಆರ್ಯ

ಸಹ ನಿರ್ಮಾಣ: ವೀರೇಂದ್ರ ಕಾಂಚನ್, ಗೌತಮಿ ರೆಡ್ಡಿ.
ತಾರಾಗಣ: ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ರಾಜ್ ಬಲವಾಡಿ, ಸಿದ್ದು ಮೂಲಿಮನಿ, ಮಹಾಂತೇಶ್ ಬಡಿಗೇರ್,
ಪ್ರಕಾಶ್ ತುಮ್ಮಿನಾಡು, ಓಂಕಾರ್ ಆರ್ಯ, ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಇತರರು.

ಪರಭಾಷೆಯ ಸಿನಿಮಾಗಳನ್ನು ಮನಸಾರೆ ಒಪ್ಪಿ-ಅಪ್ಪಿಕೊಂಡ ಈ ನೆಲದ ಪ್ರೇಕ್ಷಕನಿಗೆ ಈಗೀಗಂತೂ ನಮ್ಮ ತವರು ಭಾಷೆಯ ಸಿನಿಮಾಗಳ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಬರುತ್ತಿರುವ ತರಹೇವಾರಿ ಕಥಾಹಂದರದ ಸಿನಿಮಾಗಳು. ಅದರಲ್ಲೂ ಹೊಸಬರು ಹೊಸತನ ಇಟ್ಟುಕೊಂಡು ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ ಬೆಳವಣಿಗೆ ಜೋರಾಗಿದೆ. ಪರಭಾಷೆ ಮೇಕರ್ಸ್ ಬಗ್ಗೆ ಮಾತಾಡುತ್ತಿದ್ದ ನಮ್ಮ ಮಂದಿ ನಮ್ಮವರ ಕ್ರಿಯೇಟಿವ್ ಬಗ್ಗೆ ಗುಣಗಾನ ಮಾಡುವಂತಾಗಿದೆ. ಆ ಸಾಲಿಗೆ ‘ಧರಣಿ ಮಂಡಲ ಮಧ್ಯೆದೊಳಗೆ’ ಸಿನಿಮಾ ತಂಡವು ಸೇರಿದೆ. ಈ ವಾರ ತೆರೆ ಕಂಡಿರುವ ಈ ಚಿತ್ರ ನೋಡುಗರ ನಿರೀಕ್ಷೆ ಹುಸಿಗೊಳಿಸಿಲ್ಲ. ತಮ್ಮ ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದಂತೆ, ನಿರ್ದೇಶಕ ಶ್ರೀಧರ್ ಶಿಕಾರಿಪುರ ಮೊದಲ ಸಿನಿಮಾದಲ್ಲೇ ತಾನೊಬ್ಬ ಪ್ರತಿಭಾವಂತ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ…

‘ ಆದಿ ಚಿತ್ರದ ಕಥಾನಾಯಕ. ಅವನಿಗೆ ಬಾಕ್ಸಿಂಗ್ ಅಂದರೆ ಅಚ್ಚುಮೆಚ್ಚು. ಅದರಲ್ಲೇ ಸಾಧಿಸೋ ಆಸೆ. ಶ್ರೇಯಾ ಚಿತ್ರದ ಕಥಾ ನಾಯಕಿ. ಕೆಲ ಬಲವಾದ ಕಾರಣಗಳಿಗೆ ಬೇಸತ್ತು ಡ್ರಗ್ಸ್ ದಾಸಿಯಾದ ಮುಗ್ಧ ಹುಡುಗಿ. ಅಪ್ಪ-ಅಮ್ಮನಿಂದ ದೂರವಾಗಿ ಪ್ರೀತಿಸಿ ಮದ್ವೆಯಾಗಿ ಒದ್ದಾಡುವ ಅಲ್ಲೊಬ್ಬ ಮಗ. ಪ್ರೀತಿಯೇ ಸಿಗಲಿಲ್ಲವೆಂದು ಸಾಯೋಕೆ ಸಜ್ಜಾದ ಇನ್ನೊಬ್ಬ ಭಗ್ನಪ್ರೇಮಿ. ಒಂದು ಕಡೆ ಡ್ರಗ್ಸ್ ದಂಧೆ ಜೊತೆ ಹುಡುಗಿಯರ ಮಾರಾಟ ನಡೆಸೋ ದಂಧೆಕೋರ… ಇವೆಲ್ಲದರ ಮಿಶ್ರಣ ಪಾಕ ಈ ಧರಣಿಯ ಮಧ್ಯೆ ಸೇರಿದೆ. ಅಲ್ಲಿಗೆ ಇದೊಂದು ಹೈಪರ್ ಲಿಂಕ್ ಶೈಲಿಯ ಕ್ರೈಮ್ ಸ್ಟೋರಿ ಅನ್ನೋದು ಪಕ್ಕಾ. ಹಾಗಂತ ಈ ಚಿತ್ರ ಒಂದೇ ಏಟಿಗೆ ಅರ್ಥವಾಗೋದು ತುಸು ಕಷ್ಟ. ಆದರೆ, ನಿರ್ದೇಶಕರ ಜಾಣತನ ಇಲ್ಲಿ ಮೆಚ್ಚಲೇಬೇಕು. ಎಲ್ಲೂ, ಯಾವುದನ್ನೂ ಗಲಿಬಿಲಿ ಮಾಡದೆ, ಒಂದು ಪ್ರೀತಿ ತುಂಬಿದ ಕ್ರೈಂ ಸ್ಟೋರಿಯನ್ನು ನಯವಾಗಿ ಕಟ್ಟಿಕೊಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಭರವಸೆಯ ನಿರ್ದೇಶಕರಾಗಿದ್ದಾರೆ. ಅಷ್ಟರ ಮಟ್ಟಿಗೆ ಒಂದೊಳ್ಳೆಯ ಥ್ರಿಲ್ಲಿಂಗ್ ಸಿನಿಮಾ ಮುಂದಿಟ್ಟಿದ್ದಾರೆ.

ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾ ನೋಡುಗರಿಗೆ ಒಂದಷ್ಟು ಟ್ವಿಸ್ಟು-ಟೆಸ್ಟುಗಳ ಮಧ್ಯೆ ಥ್ರಿಲ್ ನೀಡುತ್ತದೆ. ಬೊಗಸೆಯಷ್ಟು ಪ್ರೀತಿ, ಹಿಡಿಯಷ್ಟು ಪಾಪ, ಪಶ್ಚಾತ್ತಾಪಗಳ ಸುತ್ತ ಸಾಗುವ ಕಥೆಯಲ್ಲಿ ಎದೆ ಭಾರವೆನಿಸೋ ದೃಶ್ಯಗಳೂ ಇವೆ. ಅಲ್ಲಲ್ಲಿ ಭಾವುಕತೆಯೂ ಇಣುಕಿ ನೋಡುತ್ತದೆ. ಜೀವ-ಭಾವ ಮಿಡಿತದ ಸಂದೇಶವೂ ಇಲ್ಲಿದೆ. ಮೊದಲೇ ಹೇಳಿದಂತೆ ಇದೊಂದು ನಾಲ್ಕೈದು ಆಯಾಮಗಳಲ್ಲಿ ಸಾಗುವ ಕಥೆ. ಆ ಎಲ್ಲಾ ಆಯಾಮದ ಕಥೆಯ ಅಂತಿಮ ಮಾತ್ರ ಒಂದೇ ಕಡೆ ಸಲ್ಲುತ್ತದೆ. ಅದೇ ಸಿನಿಮಾದ ಸ್ಪೆಷಲ್. ಆ ಸ್ಪೆಷಲ್ ಏನೆಂದು ತಿಳಿಯಬೇಕಾದರೆ ಮಿಸ್ ಮಾಡದೆ ಈ ಧರಣಿಯೊಳು ಮಿಂದೆದ್ದು ಬರಲಡ್ಡಿಯಿಲ್ಲ.

ಏನೆಲ್ಲಾ ಉಂಟು?

ಇಲ್ಲಿ ಪ್ರೀತಿ ಇದೆ, ಗೆಳೆತನವಿದೆ, ವಾತ್ಸಲ್ಯವಿದೆ, ಮುಗ್ಧತೆಯಿದೆ, ಅಸಹಾಯಕತೆ ಇದೆ, ಅನುಕಂಪವಿದೆ, ಅನಿವಾರ್ಯತೆವಿದೆ, ಎಲ್ಲಕ್ಕೂ ಮಿಗಿಲಾಗಿ ಮಾನವೀಯತೆಯ ಗುಣ ಹೆಚ್ಚಿದೆ. ಆ ಕಾರಣಕ್ಕೆ ಚಿತ್ರ ನೋಡುಗರಿಗೆ ಆಪ್ತವೆನಿಸುತ್ತೆ. ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರಿಗೆ ಏನು ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ತೋರಿಸಬೇಕೆಂಬುದರ ಅರಿವಿದೆ. ಅದು ಇಲ್ಲಿ ಮೇಳೈಸಿರುವುದರಿಂದ ಸಿನಿಮಾ ಆರಂಭದಿಂದ ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತೆ.
ಇಲ್ಲಿ ಕಥೆ ಬಗ್ಗೆಯಾಗಲಿ,ಚಿತ್ರಕಥೆಯಾಗಲಿ, ನಿರೂಪಣೆ ಕುರಿತಾಗಲಿ ತಕರಾರಿಲ್ಲ. ಕೆಲವು ಕಡೆ ಬೇಡದ ಅಂಶಗಳನ್ನು ಕೈ ಬಿಟ್ಟಿದ್ದರೆ, ಲ್ಯಾಗ್ ಎಂಬ ಮಾತನ್ನು ಪಕ್ಕಕ್ಕಿಡಬಹುದಿತ್ತು. ಮೊದಲರ್ಧ ಕೊಂಚ ಲ್ಯಾಗ್ ಎನಿಸುತ್ತಾದರೂ, ಅಲ್ಲಲ್ಲಿ ತೂರಿ ಬರುವ ಕಾಮಿಡಿ ಟ್ರ್ಯಾಕ್ ಹಾಗು ಹಾಡುಗಳು ಸುಮ್ಮನೆ‌ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಕೂಡ ಕುತೂಹಲ ಜೊತೆಗೆ ಸೀಟಿನಂಚಿನತ್ತ ಕೂರುವಂತೆ ಮಾಡುತ್ತದೆ. ಒಟ್ಟಾರೆ, ರೋಚಕತೆಯೊಂದಿಗೆ ಸಾಗುವ ಧರಣಿ ಮಧ್ಯೆ ಚೂರು ಪಾರು ಮಿಸ್ಟೇಕ್ ಎದ್ದು ಕಾಣುತ್ತವೆ. ಆ ಮಿಸ್ಟೇಕ್ ಬದಿಗೊತ್ತಲು ಸಿನಿಮಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಸುಳ್ಳಲ್ಲ. ಸಿನಿಮಾದ ಮತ್ತೊಂದು ತಾಕತ್ತು ಅಂದರೆ, ಹಿನ್ನೆಲೆ ಸಂಗೀತ ಮತ್ತು ಅದಕ್ಕೆ ಸಾಥ್ ನೀಡಿರೋ ಸಂಕಲನ ಕೆಲಸ. ಇವೆರೆಡು ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ.

ಕಥೆ ಏನು?

ಬಾಕ್ಸಿಂಗ್ ಕನಸಿನ ಬೆನ್ನತ್ತಿದ ಹುಡುಗನೊಬ್ಬನ ಲೈಫಲ್ಲಿ ಪ್ರೀತಿ ಹುಟ್ಟುತ್ತೆ. ಅವನು ಪ್ರೀತಿಸೋ ಹುಡುಗಿ ಡ್ರಗ್ಸ್ ದಾಸಿ. ಘಟನೆಯೊಂದರಲ್ಲಿ ಅವಳ ಕಿಡ್ನ್ಯಾಪ್ ಆಗುತ್ತೆ. ಅವಳನ್ನು ಕಾಪಾಡಲು ಹೋಗುವ ಹುಡುಗನ ಮುಂದೆ ಒಂದಷ್ಟು ಸವಾಲುಗಳ ರಾಶಿ. ಅವೆಲ್ಲವನ್ನೂ ದಾಟಿ ಹೋಗುವ ಮಧ್ಯೆ ನೂರೆಂಟು ವಿಘ್ನ. ನಾಲ್ಕೈದು ಆಯಾಮಗಳಲ್ಲಿ ಸಾಗೋ ಕಥೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಇಲ್ಲಿ ಹೇಳುವುದಕ್ಕಿಂತ ಒಂದೊಮ್ಮೆ ಧರಣಿಯೊಳು ಸುತ್ತಿ ಬಂದರೆ ಆ ಸಮಸ್ಯೆ ಏನೆಂಬುದರ ಅರಿವಾಗುತ್ತೆ.

ಒಂದೇ ಸಲ ಐದು ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತದೆ. ಅವೆಲ್ಲವೂ ಬೇರೆ ಬೇರೆ ಕಥೆಗಳಾದರೂ, ಅಂತಿಮದಲ್ಲಿ ಒಂದೇ ಜಾಡಿಗೆ ಸೇರುತ್ತವೆ. ಪ್ರತಿ ಟ್ರ್ಯಾಕ್ ಕೂಡ ಕುತೂಹಲದಲ್ಲೇ ಸಾಗುತ್ತೆ. ಚಿತ್ರದ ವಿಶೇಷ ಅಂದರೆ, ಬಿಗಿಯಾದ ನಿರೂಪಣೆ. ಕೆಲವು ಕಡೆ ನಿರೂಪಣೆ ಎಲ್ಲೆಲ್ಲೋ ಸಾಗುತ್ತಿದೆ ಅಂದುಕೊಳ್ಳುತ್ತಿದ್ದಂತೆ, ಕಾಮಿಡಿ ಟ್ರ್ಯಾಕ್ ಸಹಬದಿಗೆ ತರುತ್ತದೆ.
ಹೊಸತನ ಮತ್ತು ಥ್ರಿಲ್ ಬಯಸುವವರಿಗೆ ಚಿತ್ರ ಮೋಸ ಮಾಡಲ್ಲ.

ಯಾರು ಹೇಗೆ?

ನಾಯಕ ನವೀನ್ ಶಂಕರ್ ಕೆಲ ವರ್ಷಗಳ ಬಳಿಕ ಸ್ಕ್ರೀನ್ ಮೇಲೆ ಬಂದರೂ, ಇಲ್ಲಿ ಗಮನ ಸೆಳೆಯುತ್ತಾರೆ. ಒಬ್ಬ ಪ್ರೇಮಿಯಾಗಿ ಇಷ್ಟವಾಗುತ್ತಾರೆ, ನಟನೆ ಮತ್ತು ಫೈಟ್ ಎರಡರಲ್ಲೂ ಸೈ. ಇನ್ನು, ನಾಯಕಿ ಐಶಾನಿ ಶೆಟ್ಟಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಡ್ರಗ್ಸ್ ವ್ಯಸನಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯಶ್ ಶೆಟ್ಟಿ ಇಲ್ಲಿ ಎಂದಿಗಿಂತಲೂ ಸ್ಪೆಷಲ್ ಎನಿಸುತ್ತಾರೆ. ಪೇಚೆಗೆ ಸಿಲುಕಿದ ಮುಗ್ಧನಾಗಿ ಗಮನ ಸೆಳೆಯುತ್ತಾರೆ. ಸಿದ್ದು ಮೂಲಿಮನಿ ಕೂಡ ಪಕ್ಕಾ ಲೋಕಲ್ ಹುಡುಗನಾಗಿ ಇಷ್ಟವಾಗುತ್ತಾರೆ. ಉಳಿದಂತೆ ರಾಜ್ ಬಲವಾಡಿ, ಮಹಾಂತೇಶ್ ಬಡಿಗೇರ್,
ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ, ಗಣೇಶ್ ರಾವ್ ಇತರರು ಇಲ್ಲಿ ಸೈ ಎನಿಸಿಕೊಂಡಿದ್ದಾರೆ.

ರೋಣದ ಬಕ್ಕೇಶ್ ಹಾಗು ಕಾರ್ತಿಕ್ ಚೆನ್ನೋಜಿರಾವ್ ಅವರ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದು. ಸಿನಿಮಾ ವೇಗ ಹೆಚ್ಚಿಸಿರೋದೆ ಸಂಗೀತ. ಇನ್ನು, ಅದಕ್ಕೆ‌ ತಕ್ಕಂತೆ ಉಜ್ವಲ್ ಚಂದ್ರ ಅವರ ಕತ್ತರಿ ಪ್ರಯೋಗ ಕೂಡ ಮಾತಾಡುವಂತಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ಕೈಚಳಕದಲ್ಲಿ ಧರಣಿಯೊಳಗಿನ ಕೊಳಕು- ಬೆಳಕು- ಸರಕು ಅಂದವಾಗಿದೆ.

Related Posts

error: Content is protected !!