Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಯುರೋಪಿಯನ್ ಚೆಲುವೆ! ಬೆಂಗಳೂರು 69 ಸಿನಿಮಾ ಸ್ಪರ್ಶಿಸಿದ ಮಾಡೆಲ್ ಗ್ರೇಸಿಲಾ ಪಿಶ್ನರ್…

ಕನ್ನಡ ಸಿನಿಮಾರಂಗಕ್ಕೆ ವಿದೇಶಿ ಚೆಲುವೆಯರ ಆಗಮನ ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾಗಳಲ್ಲಿ ವಿದೇಶಿ ನಟ ನಟಿಯರ ಆಗಮನವಾಗಿದೆ. ಆ ಸಾಲಿಗೆ ಈಗ ಯುರೋಪಿಯನ್ ಮಾಡೆಲ್ ಗ್ರೇಸಿಲಾ ಪಿಶ್ನರ್ ಕೂಡ ಸೇರಿದ್ದಾರೆ

“ಬೆಂಗಳೂರು 69′ ಈ ಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
ಝಾಕಿರ್‌ಹುಸೇನ್ ಕರೀಂ ಖಾನ್, ದುಬೈ ಮೂಲದ ಕನ್ನಡಿಗ ಎನ್ಆರ್ ಐ ( NRI) ಮತ್ತು ಅವರ ಪತ್ನಿ ಗುಲ್ಜಾರ್ ಚಿತ್ರದ ನಿರ್ಮಾಪಕರು. ಬೆಂಗಳೂರು 69′, “ಟಗರು” ಖ್ಯಾತಿಯ ಅನಿತಾ ಭಟ್, 2015 ರ ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಮತ್ತು ತೆಲುಗು ನಟ “ಚತ್ರಪತಿ” ಶಫಿ ನಟಿಸಿದ್ದಾರೆ, ಫೆಬ್ರವರಿ 10 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಕ್ರಾಂತಿ ಚೈತನ್ಯ ನಿರ್ದೇಶನದ ಕ್ರೈಮ್ ಥ್ರಿಲ್ಲರ್.

ಗ್ರೇಸಿಲಾ ಪಿಶ್ನರ್ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ಮಾಡಿರುವ ನಿರ್ಮಾಪಕ ಝಾಕಿರ್‌ ಹುಸೇನ್ ಕರೀಂ ಖಾನ್, ಅಸಾಧಾರಣ ಹಾಡಿನ ಚಿತ್ರೀಕರಣಕ್ಕಾಗಿ ಗ್ರೇಸಿಲಾ ಪಿಶ್ನರ್ ಹೆಸರಾಂತ ಯುರೋಪಿಯನ್ ಮಾಡೆಲ್, ಲ್ಯಾಟಿನ್ ಅಮೇರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಕರೆತಂದಿದ್ದಾರೆ.

ಅಮೇರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ, ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿಯ ಬಳಿಯ ರೆಡ್‌ಜೋನ್‌ನಂತ ಎರಿಯಾಗಳ್ಲಿ ಗ್ರೇಸಿಲಾ ಪಿಶ್ನರ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಗ್ರೇಸಿಲಾ ಪಿಶ್ನರ್ ಅಂತರಾಷ್ಟ್ರೀಯ ಮೆಚ್ಚುಗೆ ಪಡೆದ ಚಲನಚಿತ್ರ “ಸಿಟಿ ಆಫ್ ಗಾಡ್” ನಲ್ಲಿ ನಟಿಸಬೇಕಿತ್ತು ಆದರೆ ಅವರು ವೈಯಕ್ತಿಕ ಕಾರಣಗಳಿಗಾಗಿ ಪ್ರಸ್ತಾಪವನ್ನು ತಿರಸ್ಕರಿಸಿದರು .

ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ , ವಿಕ್ರಮ್ ಮತ್ತು ಚಂದನಾ ಸಂಗೀತ ಮತ್ತು ಸಂಕಲನವನ್ನು ಅಕ್ಷಯ್ ಪಿ ರಾವ್ ಸಂಯೋಜಿಸಿದ್ದಾರೆ , ಸಂಭಾಷಣೆಯನ್ನು ಪಿಎನ್ ವೈ ಪ್ರಸಾದ್ ಮತ್ತು ಜಯದೇವ್ ಮೋಹನ್ ಬರೆದಿದ್ದಾರೆ.

Categories
ಸಿನಿ ಸುದ್ದಿ

ಥಗ್ಸ್ ಆಫ್ ರಾಮಘಡಗೆ ಜೈ ಎಂದ ಪ್ರೇಕ್ಷಕ: ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ

ಕಳೆದ ವಾರ ಬಿಡುಗಡೆಯಾದ ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬಂದ ‘ಥಗ್ಸ್ ಆಫ್ ರಾಮಘಡ’ ಸಿನಿಮಾ ಪ್ರೇಕ್ಷಕ ಮಹಾ ಪ್ರಭುಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು, ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರ್ತಿರುವ ಉತ್ತಮ ವಿಮರ್ಶೆ ಹಾಗೂ ಪ್ರತಿಕ್ರಿಯೆ ಕಂಡು ಚಿತ್ರತಂಡ ಕೂಡ ಖುಷಿಯಾಗಿದೆ.

ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಮೂಡಿಸಿದ್ದ ‘ಥಗ್ಸ್ ಆಫ್ ರಾಮಘಡ’ ಚಿತ್ರ ಕಾರ್ತಿಕ್ ಮಾರಲಭಾವಿ ನಿರ್ದೇಶನದ ಮೊದಲ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಜನವರಿ 6ರಂದು ಪ್ರೇಕ್ಷಕರೆದುರು ಬಂದ ಈ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ನೈಜ ಘಟನೆಗೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಜೊತೆ ತೆರೆ ಮೇಲೆ ಬಂದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಮೊದಲ ವಾರ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಹೆಚ್ಚಿಸಿದ್ದು, ಎರಡನೇ ವಾರದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕನ್ನಡ ಚಿತ್ರರಂಗ ಈಗ ಶೈನ್ ! ಆದರೆ… ಸಂಕ್ರಾಂತಿಗೆ ಇಲ್ಲ ನಮ್ ಸ್ಟಾರ್ ಸಂಭ್ರಮ!!ಕನ್ನಡಕ್ಕಿಲ್ಲ ಶೋ ಸಡಗರ…

ಕನ್ನಡ ಸಿನಿಮಾ ಅಂದರೆ ಈಗ ಇಡೀ ಭಾರತವೇ ಹಾಗೊಮ್ಮೆ ತಿರುಗಿ ನೋಡುತ್ತಿದೆ. ಅಸಕ್ಕೊಂದೇ ಕಾರಣ, ಸದಭಿರುಚಿಯ ಸಿನಿಮಾಗಳು ಅವುಗಳ ಗುಣಮಟ್ಟ. ಆದರೆ, ಸೂಕ್ಷ್ಮವಾಗಿ ಒಂದು ವಿಷಯ ಗಮನಿಸಲೇಬೇಕು. ಇಲ್ಲಿ, ದೇಶದೆಲ್ಲೆಡೆ ಸದ್ದು ಮಾಡಿರುವ ಸಿನಿಮಾಗಳು ಬಂದಿವೆ. ಆದರೆ ಏನು ಪ್ರಯೋಜನ ? ಅಂದರೆ, ಸಂಕ್ರಾಂತಿಗೆ ಪರಭಾಷಿಗರದ್ದೇ ಸಮ್ ಕ್ರಾಂತಿ ಆಗುತ್ತಿದೆ. ಅವರ ಸಂಭ್ರಮ ನಮ್ಮಲಿಲ್ಲ. ವಿಷಯವಿಷ್ಟೆ, ಸಂಕ್ರಾಂತಿ ಹಬ್ಬಕ್ಕೆ ಒಂದಷ್ಟು ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ನಮ್ಮಲ್ಲಿ ಮಾತ್ರ ಹೇಳಿಕೊಳ್ಳುವಂತಹ ಸಿನಿಮಾಗಳು ಸಂಕ್ರಾಂತಿಗೆ ಬರುತ್ತಿಲ್ಲ. ಇದು ವಿಪರ್ಯಾಸ.

ಇತ್ತೀಚೆಗಿನ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಗಮನಿಸಿದರೆ ನಾವು ಯಾರಿಗೇನೂ ಕಮ್ಮಿ ಇಲ್ಲ. ಆದರೂ, ಸಂಕ್ರಾಂತಿ ಬಂತೆಂದರೆ, ಇಲ್ಲಿ ರಿಲೀಸ್ ಆಗುವ ಕನ್ನಡ‌ ಸಿನಿಮಾಗಳಿಗೆ ಥಿಯೇಟರ್ ಸಿಗೋದು ಕಷ್ಟ. ಹಿಂದಿನಿಂದಲೂ ಈ ಸಮಸ್ಯೆ ಇದೆ.

ಜನವರಿ 11(ನಾಳೆ) ಬೆಂಗಳೂರಿನ
ಚಿತ್ರ ಮಂದಿರಗಳ್ಲಿ ಇರುವ ಕನ್ನಡ ಹಾಗೂ ಅನ್ಯ ಭಾಷೆ ಚಿತ್ರಗಳ ಒಟ್ಟು ಪ್ರದರ್ಶನ ಬಗ್ಗೆ ಹೇಳುವುದಾದರೆ,
ತಮಿಳಿನ ಎರಡು ಬಿಗ್ ಬಜೆಟ್ ಸಿನಿಮಾಗಳಿವೆ. ಒಂದು ವಾರಿಸು, ಇನ್ನೊಂದು ತುನಿವು. ಈ ಪೈಕಿ ವಾರಿಸು 760 ಪ್ರದರ್ಶನಗಳನ್ನು ಕಾಣುತ್ತಿದೆ. ತುನಿವು 525 ಶೋ ಕಾಣುತ್ತಿದೆ.

ಆದರೆ, ಕನ್ನಡ ಸಿನಿಮಾಗಳು ಮಾತ್ರ ಪ್ರದರ್ಶನದಿಂದ ಹಿಂದೆ ಸರಿದಿವೆ. ವೇದ 36 ಶೋ ಮಾತ್ರ ಕಂಡರೆ, ಮಿಸ್ಟರ್ ಬ್ಯಾಚ್ಯಲರ್ 16 ಪ್ರದರ್ಶನ ಮಾತ್ರ. ಇನ್ನು, ಸ್ಪೂಕಿ ಕಾಲೇಜ್ 12 ಪ್ರದರ್ಶನ, ಪದವಿ ಪೂರ್ವ 1, ಕಾಂತಾರ 1, ಕಾಕ್ಟೈಲ್’ 4, ಥಗ್ಸ್ ಅಫ್ ರಾಮಘಡ 2, ಮಿಸ್ ನಂದಿನಿ 1, ಮರೆಯದೆ ಕ್ಷಮಿಸು 2, ನಾನು ಅದು ಮತ್ತು ಸರೋಜ 1, ಮೇಡ್ ಇನ್ ಬೆಂಗಳೂರು 1 ಪ್ರದರ್ಶನವಿದೆ.

ಇನ್ನು ಇತ್ತೀಚೆಗೆ ರಿಲೀಸ್ ಆದ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಐದೇ ದಿನದಲ್ಲಿ ಇಲ್ಲವಾಯಿತು. ಕನಿಷ್ಟ ಪಕ್ಷ ಒಂದೊಳ್ಳೆಯ ಪ್ರಯೋಗಾತ್ಮಕ ಸಿನಿಮಾಗೆ ಪ್ರದರ್ಶಿಸುವ ಅವಕಾಶ ಕೊಡಬಹುದಿತ್ತು. ಅದು ಮಲ್ಟಿಪ್ಲೆಕ್ಸ್ ನಲ್ಲೇ ಉಳಿಯಲು ಬಿಡಲಿಲ್ಲ.

ಅದೇನೆ ಇರಲಿ, . ಕನ್ನಡ ಚಿತ್ರರಂಗ ಈಗ ಸುಸ್ಥಿತಿಯಲ್ಲಿದೆ. ನೂರಾರು, ಸಾವಿರಾರು ಕೋಟಿ ವಹಿವಾಟಾಗಿರುವ ಸಿನಿಮಾಗಳು ಇಲ್ಲಿನ ಹೆಮ್ಮೆ. ಅಷ್ಟೇ ಯಾಕೆ, ಆಸ್ಕರ್ ಪ್ರಶಸ್ತಿ ನಾಮಾಂಕಿತರ ಪಟ್ಟಿಯಲ್ಲಿ ಸೇರ್ಪೇಡೆಯಾಗುತ್ತಿವೆ ಎಂಬುದೂ ಕೂಡ ದೊಡ್ಡ ವಿಷಯ.


ಇಲ್ಲಿ ಕನಸಿನ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲ, ಅಂತಹ ಚಿತ್ರಗಳಿಗೆ ಅದ್ಭುತ ಪ್ರಚಾರವೂ ಅಷ್ಟೇ ಮುಖ್ಯ. ಸಂಕ್ರಾಂತಿಗೆ ಇಲ್ಲಿನ ಒಬ್ಬ ದೊಡ್ಡ ಸ್ಟಾರ್ ಚಿತ್ರ ಬಿಡುಗಡೆ ಆಗಿದ್ದರೆ ಬೇರೆ ಭಾಷೆಯ ಸಿನಿಮಾಗಳಿಗೆ ಸಿಕ್ಕಷ್ಟೇ ಶೋ ಸಿಗುತ್ತಿತ್ತು. ಇದು ಹಬ್ಬದ ಸಂಭ್ರಮ. ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ನಮ್ಮವರದೇ ಮಿಸ್ಟೇಕ್. ಹೀಗಾಗಿ ಇಲ್ಲಿನ ವಿತರಕರಾಗಲಿ, ಪ್ರದರ್ಶಕರಾಗಲಿ ಏನು ಮಾಡುತ್ತಾರೆ?

ಅಂತಿಮವಾಗಿ ಇಲ್ಲಿ ಸಿನಿಮಾ ಅನ್ನೋದು ಒಂದು ವ್ಯಾಪಾರ ಅಷ್ಟೇ‌. ಬೇಡಿಕೆ ಎಲ್ಲಿರುತ್ತೋ ಅಲ್ಲಿ ವ್ಯಾಪಾರ ಸಹಜ.

ಹೊಸ ಕ್ರಾಂತಿಗೆ ಸಂಕ್ರಾಂತಿ ಸಾಕಿತ್ತು. ಸರಿಯಾಗಿ ಈ ಸಂಕ್ರಾಂತಿಯನ್ನ ಕ್ರಾಂತಿ ಆವರಿಸಿಕೊಂಡಿದ್ದರೆ, ನಿಜಕ್ಕೂ ಕನ್ನಡದ. ಅಷ್ಟೂ ಥಿಯೇಟರ್ ಗಳಲ್ಲಿ ಹೊಸ ‘ಕ್ರಾಂತಿ’ಯ ದರ್ಶನವಾಗುತ್ತಿತ್ತು.

Categories
ಸಿನಿ ಸುದ್ದಿ

ಇದು ರಾಗಿಣಿಯ ಮೊದಲ ಹಾರರ್ ಬಾಲಿವುಡ್ ಸಿನಿಮಾ: ಲಂಡನ್ ಶೂಟಿಂಗ್ ಮುಗಿಸಿ ಬಂದ ತುಪ್ಪದ ಬೆಡಗಿ…

ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರ. ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು ‘ವಾಕ್ರೋ ಹೌಸ್’.

ನಾನು ಇಲ್ಲಿ ಲಂಡನ್ ಬೇಸ್ ಬುಕ್ ರೈಟರ್ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಜನ ಒಳ್ಳೆಯ ಕಲಾವಿದರಿದ್ದಾರೆ. ಇದು ನನ್ನ ಮೊದಲ ಹಿಂದಿ ಹಾರರ್ ಸಿನಿಮಾ. ಒಳ್ಳೆಯ ಕಥೆ, ಪಾತ್ರ ಇದ್ದ್ದುದರಿಂದ ಖುಷಿಯಾಗಿದ್ದೇನೆ ಎಂಬುದು ಅವರ ಮಾತು.

‘ಈ ಹಿಂದಿ ಸಿನಿಮಾ ಜೊತೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ 2 ಸಿನಿಮಾ ಮಾಡುತ್ತಿದ್ದೇನೆ. ಈ ಮಾರ್ಚ್‌ ಗೆ ನನ್ನ ಸಿನಿಮಾಗಳು ರಿಲೀಸ್ ಆಗಬಹುದು.

‘ನಾನೊಬ್ಬ ಭಾರತೀಯ’ ಎಂಬ ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡುತ್ತಿದ್ದು, ಇದು ನನಗೆ ವಿಷೇಶವಾದ ಸಿನಿಮಾ’ ಎನ್ನುತ್ತಾರೆ ರಾಗಿಣಿ.

Categories
ಸಿನಿ ಸುದ್ದಿ

ಸಂಗೀತ ನಿರ್ದೇಶಕನ ಕಿಡ್ನ್ಯಾಪ್! ಇದು ಹಾಸ್ಟೆಲ್ ಹುಡುಗರ ಹುಚ್ಚಾಟ!! ವೀವ್ಸ್ ಸಿಗದಿದ್ದಕ್ಕೆ ಅಪಹರಣ: ಪ್ರೇಕ್ಷಕರ ಎದರು ಪ್ರಕರಣ…

ಹಾಸ್ಟೆಲ್ ಹುಡುಗರೆಲ್ಲ ಸೇರಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರನ್ನು ಕಿಡ್ನಾಪ್ ಮಾಡಿದ್ದಾರೆ. ಎರಡು ವಾರವಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಹಾಡು ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಹುಡುಗರು, ಈಗ ಬಿಡುಗಡೆಯಾಗಿರುವ ಹಾಡು ಹತ್ತು ಮಿಲಿಯನ್ ವೀವ್ಸ್ ಪಡೆದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಅಜನೀಶ್ ಲೋಕನಾಥ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಿಡುಗಡೆಯಾಗಿರುವ ‘ಪ್ರೊಟೆಸ್ಟ್ ಸಾಂಗ್’ ಹತ್ತು ಮಿಲಿಯನ್ ವೀವ್ಸ್ ಪಡೆಯಲು ಸಹಕರಿಸಿ ಎಂದು ಕರ್ನಾಟಕ ಜನತೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಅಜನೀಶ್. ಆದರೆ ಇದೆಲ್ಲ ರಿಯಲ್ ಅಲ್ಲ ರೀಲ್. ಹೌದು, ಇದು ಬಿಡುಗಡೆಗೆ ಸಜ್ಜಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಹೊಸ ರೀತಿಯ ಪ್ರಮೋಶನ್ ತಂತ್ರ.

ಸಖತ್ ಕ್ರಿಯೇಟಿವ್ ಆಗಿ ಸಿನಿಮಾ ಪ್ರಮೋಷನ್ ಮಾಡುತ್ತ ಕಲಾರಸಿಕರುನ್ನು ತನ್ನತ್ತ ಸೆಳೆಯುತ್ತಿರುವ, ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಕಳೆದ ವಾರ ಚಿತ್ರತಂಡ ‘ಪ್ರೊಟೆಸ್ಟ್ ಸಾಂಗ್’ ಬಿಡುಗಡೆ ಮಾಡಿತ್ತು. ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಯೋಗರಾಜ್ ಭಟ್ ಕ್ಯಾಚಿ ಲಿರಿಕ್ಸ್, ಅಜನೀಶ್ ಲೋಕನಾಥ್ ಕಿಕ್ ಕೊಡೋ ಮ್ಯೂಸಿಕ್ ಹಾಗೂ ಹಾಡು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು.

ಇದೀಗ ಈ ಹಾಡು ಹತ್ತು ಮಿಲಿಯನ್ ವೀವ್ಸ್ ಕಾಣಬೇಕೆಂಬುದು ಹಾಸ್ಟೆಲ್ ಹುಡುಗರ ಮಹದಾಸೆ. ಅದಕ್ಕೆಂದೇ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಿಂದ ಪತ್ರ ಬರೆಸಿ ಮನವಿ ಮಾಡಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.

ಯೂನಿಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಗುಜರಿ ಅಂಗಡಿ ಮಾಲೀಕನ ಪ್ರೇಮ ಕಥೆ: ಇದು ಅಂತರ್ಜಾತಿ ಜೋಡಿಯ ರಿಯಲ್ ಲವ್ ಸ್ಟೋರಿ ಕಣ್ರೀ…

ಈ ಹಿಂದೆ ಪಲ್ಲಕ್ಕಿ, ಅಮೃತವಾಹಿನಿ ಚಿತ್ರ ನಿರ್ದೇಶಿಸಿದ್ದ ಕೆ.ನರೇಂದ್ರಬಾಬು ಈಗ ’13’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ ಇಲ್ಲಿ ಹೈಲೆಟ್. ಯುವಿ ಪ್ರೊಡಕ್ಷನ್ಸ್ ಮೂಲಕ ಚಿತ್ರವನ್ನು ಸಂಪತ್‌ ಕುಮಾರ್‌, ಮಂಜುನಾಥ್‌, ಮಂಜುನಾಥಗೌಡ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಗುಜರಿ ಅಂಗಡಿ ಮಾಲೀಕರಾಗಿ, ಶ್ರುತಿ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ.


ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿತು.
ಅಂತರ್ಜಾತಿ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಫೂರ್ತಿ ಹೇಗೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು.

‘ಮುಹೂರ್ತದ ಸಂದರ್ಭದಲ್ಲಿ 3 ತಿಂಗಳಲ್ಲಿ ಮೊದಲ ಪ್ರತಿ ಹೊರ ತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ 6 ತಿಂಗಳಾಗಿದೆ, ಕೊಟ್ಟಿಗೆಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಲ್ವರು ಪ್ರೊಡ್ಯೂಸರ್ ಪಿಲ್ಲರ್ ಗಳಂತೆ ನಿಂತಿದ್ದಾರೆ. ರಾಘಣ್ಣ ಅವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ಇಲ್ಲಿ ನೋಡಬಹುದು ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು.


ರಾಘಣ್ಣ ಮಾತನಾಡಿ, ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ ’13’ ಇದೇನಿರಬಹುದು ಅನಿಸಿತ್ತು. ಶೃತಿ ಮಾಡುತ್ತಿದ್ದಾರೆ ಅಂದಾಗ ಇಷ್ಟವಾಯ್ತು. ನಮಗೂ ಆಕ್ಟ್ ಮಾಡುವಾಗ ಕುತೂಹಲ ಮೂಡುತ್ತೆ. ಚಿತ್ರದಲ್ಲಿ 13 ಪದಕ್ಕೆ ಅರ್ಥ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಈಗ ಶೂಟಿಂಗ್ ಮಾಡುವುದು ಮುಖ್ಯವಲ್ಲ, ನಂತರ ಅದನ್ನು ಹೇಗೆ ಪ್ರೊಮೋಟ್ ಮಾಡಬೇಕು ಅನ್ನೋದು ಮುಖ್ಯ. ಶಾಲೆ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದು, ಇಂಥ ಕೆಲಸಗಳನ್ನು ಮಾಡುವ ಮೂಲಕ ಪ್ರೊಮೋಟ್ ಮಾಡಬೇಕಿದೆ. ಎಲ್ಲೋ ಒಂದು ಕಡೆ ಸಿನಿಮಾದವರು ಸೇವೆಯನ್ನೂ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗಬೇಕು. ಶ್ರುತಿ ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು.

ಶೃತಿ ಮಾತನಾಡಿ, 13 ಹೆಸರು ಮಾತ್ರ ನೆಗೆಟಿವ್, ಸಿನಿಮಾಪೂರ್ತಿ ಪಾಸಿಟಿವ್ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಹೆದರಿದ್ದೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಅಲ್ಲದೆ ಎಲ್ಲೋ ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಜೊತೆ ಅಭಿನಯಿಸಿದ್ದೇನೆ ಎಂದು ಹೇಳಿದರು.


ನಿರ್ಮಾಪಕ ಕೆ. ಸಂಪತ್‍ ಕುಮಾರ್ ಮಾತನಾಡಿ, ಏನೇ ನೋವು ಕೊಟ್ಟರೂ ಸಿನಿಮಾ ಆದ್ಭುತವಾಗಿ ಬಂದಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.
ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅಭಯ್ ಈಗ ಮಂಡ್ಯ ಹೈದ: ಇದು ಪ್ರೀತಿಗಾಗಿ ಪ್ರಾಣ ಬಿಡುವ-ತೆಗೆವ ಕಥೆ ವ್ಯಥೆ…

ಯುವನಟ ಅಭಯ್ ಚಂದ್ರಶೇಖರ್ ವಿಭಿನ್ನ ಪ್ರೇಮಕಥೆಯುಳ್ಳ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಈಗವರು ಮತ್ತೊಂದು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅಭಯ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದ ಹೆಸರು ಮಂಡ್ಯಹೈದ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ಮಂಡ್ಯ ಹೈದ ನಮ್ಮ ಬ್ಯಾನರ್‌ನಿಂದ ಹೊರಬರುತ್ತಿರುವ ೫ನೇ ಚಿತ್ರ. ಅಲ್ಲದೆ ನನ್ನ ಮಗನನ್ನು ಹಾಕಿಕೊಂಡು ನಿರ್ಮಿಸುತ್ತಿರುವ ೨ನೇ ಚಿತ್ರವೂ ಹೌದು. ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳ‌ ೧೮ರಂದು ಚಿತ್ರದ ಮುಹೂರ್ತ ನಡೆಸಿ, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ, ಅದೇ ದಿನ ಚಿತ್ರದ ಟೈಟಲ್, ಕಥೆಯ ಕುರಿತಂತೆ ಹಾಗೂ ಚಿತ್ರೀಕರಣದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ, ಇಂದು ಅಭಯ್ ಹುಟ್ಟುಹಬ್ಬ, ಹಾಗಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ದೇವೆ, ಕಿರುತೆರೆ ನಟಿ ಭೂಮಿಕಾ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.

ನಂತರ ನಿರ್ದೇಶನ ಶ್ರೀಕಾಂತ್ ಮಾತನಾಡಿ, ನಾನು ಈ ಹಿಂದೆ ರಾಗಣ್ಣ ಅಭಿನಯದ ವಾರ್ಡ್ ನಂ.೧೧ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ನಿರ್ದೇಶನದ ೨ನೇ ಚಿತ್ರ. ಮಂಡ್ಯ ಹೈದನ ಲವ್ ಯಾವ ಥರ ಇರುತ್ತೆ ಅಂತ ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನೇ ತೆಗೀತಾರೆ, ಇನ್ನೂ ಕೆಲವರು ಪ್ರಾಣವನ್ನು ಕೊಡುತ್ತಾರೆ, ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ, ಅಥವಾ ಪ್ರಾಣ ತೆಗೀತಾನಾ ಅನ್ನುವುದೇ ಮಂಡ್ಯಹೈದ ಚಿತ್ರದ ಒನ್‌ಲೈನ್ ಕಥೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ ಎಂದು ಹೇಳಿದರು.
ಚಿತ್ರದ ನಾಯಕ ಅಭಯ್ ಮಾತನಾಡಿ ಇಂದು ನನಗೆ ತುಂಬಾ ವಿಶೇಷವಾದ ದಿನ, ಈ ಸಿನಿಮಾದಲ್ಲಿ ನನ್ನ ತಂದೆ ತುಂಬಾ ಇನ್‌ವಾಲ್ ಆಗಿದ್ದಾರೆ. ನನ್ನ ಮೊದಲ ಚಿತ್ರದಲ್ಲೂ ಅಷ್ಟೇ. ಅಲ್ಲದೆ ಇದು ನನಗೆ ತುಂಬಾ ಇಷ್ಟವಾಗಿರುವಂಥ ಸಬ್ಜೆಕ್ಟ್. ಪಕ್ಕಾ ಮಂಡ್ಯ ಭಾಷೆ ಈ ಚಿತ್ರದಲ್ಲಿರುತ್ತದೆ. ನನ್ನ ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.

ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾ ಮಾತನಾಡುತ್ತ ನಾನು ಈಗಾಗಲೇ ಗೀತಾ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೆ. ಜೊತೆಗೆ ಪುಟ್ಟಕ್ಕನ ಮಕ್ಕಳು ನಲ್ಲೂ ಅಭಿನಯಿಸಿದ್ದೇನೆ. ಜೊತೆಗೆ ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ಮಾಡಿದ್ದೆ, ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದೇನೆ ಎಂದು ಹೇಳಿದರು,

Categories
ಸಿನಿ ಸುದ್ದಿ

ಬಾಲಿವುಡ್ ಅಂಗಳದಲ್ಲಿ ರಾಗಿಣಿ ಮಿರ ಮಿರ ಮಿಂಚಿಂಗ್: ಹಿಂದಿ ಸಿನಿಮಾದ ಹೊಸ ಲುಕ್ ಇದು…

ರಾಗಿಣಿ ದ್ವಿವೇದಿ…. ಈ ಹೆಸರು ಕೇಳಿದಾಕ್ಷಣ, ಪಡ್ಡೆ ಹುಡುಗರ ಕಿವಿ ನೆಟ್ಟಗಾಗುತ್ತೆ . ಕಣ್ಮುಂದೆ ಹತ್ತಾರು ಕಲ್ಪನೆಗಳು ಓಡಾಡುತ್ತವೆ. ಅದರಲ್ಲೂ ಹುಡುಗರಂತೂ ರಂಗಾದ ರಾಗಿಣಿ ಪೋಸ್ಟರ್ ನೋಡಿಯೇ ಥ್ರಿಲ್ ಆಗುವಷ್ಟರ ಮಟ್ಟಿಗೆ ರಾಗಿಣಿ ಮೋಡೊ ಮಾಡಿರುವುದಂತೂ ಸುಳ್ಳಲ್ಲ.

ಅಂದಹಾಗೆ, ರಾಗಿಣಿ ಹೆಸರು ಬರೀ ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೆ ಚಿರಪರಿಚಿತ. ರಾಗಿಣಿ ಈಗ ಒಂದಷ್ಟು ಸಿನಿಮಾಗಳ ಮೂಲಕ ಬ್ಯುಜಿ. ಕನ್ನಡ ಮಾತ್ರವಲ್ಲ, ಅವರು ಪರಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಬ್ಯುಜಿಯಾಗಿದ್ದಾರೆ ಅಂದರೆ ಒಪ್ಪಲೇಬೇಕು.

ಅವರು ನಟಿಸಿರುವ ಕನ್ನಡದ ‘ಸಾರಿ’ ಕರ್ಮ ರಿಟರ್ನ್ಸ್ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ರಾಗಿಣಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಮೇಲೆ ರಾಗಿಣಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಇದರೊಂದಿಗೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರು ನಿರ್ದೇಶಿಸುತ್ತಿರುವ ‘ಬಿಂಗೋ’ ಸಿನಿಮಾ ಕೂಡ ಕೈಯಲ್ಲಿದೆ. ಈ ಸಿನಿಮಾದಲ್ಲೂ ರಾಗಿಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ‌ ನಡುವೆ ಒಂದಷ್ಟು ಕಥೆಗಳನ್ನು ಕೇಳಿರುವ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಬೇಕಷ್ಟೆ. ರಾಗಿಣಿ ಈಗಾಗಲೇ ಮಲಯಾಳಂ ಸಿನಿಮಾವೊಂದರಲ್ಲೂ ಕಾಣಿಸಿಕೊಂಡಾಗಿದೆ. ಈಗ ಬಾಲಿವುಡ್ ಅಂಗಳದಲ್ಲೂ ಸದ್ದು ಮಾಡೋಕೆ ಹೊರಟಿದ್ದಾರೆ.

ಇನ್ನೂ ಹೆಸರಿಡದ ಬಾಲಿವುಡ್ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಆ ಸಿನಿಮಾಗಾಗಿಯೇ ರಾಗಿಣಿ ಒಂದಷ್ಟು ಹೊಸ. ಲುಕ್ ನಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ.

ಸದ್ಯ ಹೊಸ ಬಗೆಯ ಕಥೆ ಹಾಗು ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿರುವ ರಾಗಿಣಿ, ಸೂಕ್ತ ಕಥೆ ಮತ್ತು ಪಾತ್ರಗಳ ಆಯ್ಕೆ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ವೈರಂ ಎಂಬ ಆ್ಯಂಗ್ರಿ ಯಂಗ್ ಮ್ಯಾನ್ ಸ್ಟೋರಿ: ಪ್ರಣಾಮ್ ದೇವರಾಜ್ ನಟನೆಯ ಟೀಸರ್ ಹೊರಬಂತು…

ನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರ ವೈರಂ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ವೇಳೆ ಇದ್ದರು.

ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಮಾತನಾಡಿ, ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ.

ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ.ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.

ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು.

ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.

ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್, ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು.

ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು.
ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕೋಮಲ್ ಜೊತೆ ಪ್ರಕಾಶ್ ರೈ; ಕಾಲಾಯ ನಮಃ ಸಿನಿಮಾಗೆ ಹೊಸ ಎಂಟ್ರಿ…

ತಮ್ಮ ಅಮೋಘ ನಟನೆಯ ಮೂಲಕ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ “ಕಾಲಾಯಾ ನಮಃ”.

ಚಿತ್ರಕ್ಕೆ ಈಗ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ” ಕಾಲಾಯಾ ನಮಃ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕೋಮಲ್ ಕುಮಾರ್, ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!