Categories
ಸಿನಿ ಸುದ್ದಿ

ಮೈ ಹೀರೋ ಸಿನಿಮಾ‌ ಮೂಲಕ ಭಾರತದ ನೋಟವೇ ಬದಲಾಗಲಿದೆ! ಹೀಗಂತಾರೆ ಹೊಸ ನಿರ್ದೇಶಕರು…

ಕನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿದೆ. ಅದೇ ಸಾಲಿಗೆ ಸೇರುವ ಮತ್ತೊಂದು ಒಳ್ಳೆಯ ಕಂಟೆಂಟ್ ಓರಿಯಂಟೆಡ್ ಸಿನಿಮಾ ” ಮೈ ಹೀರೋ “. ಇತ್ತೀಚಿಗೆ ಚಿತ್ರದ ಮುಹೂರ್ತ ನಡೆದಿದೆ. ಮೊದಲ ಸನ್ನಿವೇಶಕ್ಕೆ ಮಹಾಲಕ್ಷ್ಮಿ ಆರಂಭ ಫಲಕ ತೋರಿದರೆ ಹಿರಿಯ ನಟ ದತ್ತಣ್ಣ ಕ್ಯಾಮೆರಾ ಚಾಲನೆ ಮಾಡಿದರು.

ನಿರ್ದೇಶಕ ಕಮ್ ನಿರ್ಮಾಪಕ ಅವಿನಾಶ್ ವಿಜಯಕುಮಾರ್, ತಮ್ಮ ಸಿನಿಮಾ ಕುರಿತು ಹೇಳಿದ್ದು ಹೀಗೆ. ‘ನಾನು ಮೂಲತಃ ರಂಗಭೂಮಿ ಕಲಾವಿದ . ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್ ನಲ್ಲಿ ನಿರ್ದೇಶನದ ಕುರಿತು ಹಾಗೂ ಬಾಂಬೆ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ನಮ್ಮದೇ ಆದ ಎ ವಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ.

ಅಮೇರಿಕಾದ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಾಗ ಹುಡುಗನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಕಥೆ ಸಾಗುತ್ತದೆ. ಕೆಲವು ಚಿತ್ರದಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸಿ ತೋರಿಸಲಾಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಭಾರತವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಿದ್ದೇವೆ‌. ಚಿತ್ರ ನೋಡಿದ ಮೇಲೆ ಭಾರತವನ್ನು ನೋಡುವ ರೀತಿ ಬದಲಾಗಬಹುದು ಎಂಬುದು ನನ್ನ ಅನಿಸಿಕೆ‌. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭವಾಗುತ್ತದೆ. ಮಧ್ಯಪ್ರದೇಶ ಹಾಗೂ ಯು ಎಸ್ ಎ ನಲ್ಲೂ ಚಿತ್ರೀಕರಣ ನಡೆಯುತ್ತದೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ಬರಲಿದೆ‌ ಎಂದರು.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಗಗನ್ ಬಧಾರಿಯಾ ಸಂಗೀತ ನೀಡುತ್ತಿದ್ದಾರೆ. ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ಹಾಡು ಚಿತ್ರದಲ್ಲಿದೆ. ಕುಮಾರಗೌಡ ಈ ಚಿತ್ರದ ಛಾಯಾಗ್ರಾಹಕರು. ಚಿತ್ರಕಥೆಯನ್ನು ನಾನು ಮುತ್ತುರಾಜ್ ಬರೆದಿದ್ದೇವೆ. ಜೆಮ್ ಶಿವು ಸಂಭಾಷಣೆ ಬರೆದಿದ್ದಾರೆ. ಇದು ಇಲ್ಲಿನ ತಂತ್ರಜ್ಞರ ಮಾಹಿತಿ. ಹಾಲಿವುಡ್ ನ ತಂತ್ರಜ್ಞರು ಸಹ ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕ ಅವಿನಾಶ್ ವಿಜಯಕುಮಾರ್ “ಮೈ ಹೀರೋ” ಬಗ್ಗೆ ಮಾಹಿತಿ ನೀಡಿದರು.

ನಾನು ಕೂಡ ರಂಗಭೂಮಿ ಕಲಾವಿದ. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದೇನೆ‌. ಈ ಚಿತ್ರದ ಕಥೆ ಇಷ್ಟವಾಯಿತು ಎಂದು ಹಾಲಿವುಡ್ ನಟ ಜಿಲಾಲಿ ಹೇಳಿದರು.

ಕಲಾವಿದರಾದ ಪ್ರಕಾಶ್ ಬೆಳವಾಡಿ, ದತ್ತಣ್ಣ, ನಿರಂಜನ್ ದೇಶಪಾಂಡೆ ಹಾಗೂ ಸಂಗೀತ ನಿರ್ದೇಶಕ ಗಗನ್ ಬಧಾರಿಯಾ ಪತ್ರಿಕಾಗೋಷ್ಠಿಯಲ್ಲಿ “ಮೈ ಹೀರೋ” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಆರ್. ಚಂದ್ರು ತವರೂರಲ್ಲಿ ಕಬ್ಜ ಕಲರವ ! ಶಿಡ್ಲಘಟ್ಟದಲ್ಲಿ ಫೆಬ್ರವರಿ 26ಕ್ಕೆ ಕಮರ್ಷಿಯಲ್ ಸಾಂಗ್ ರಿಲೀಸ್…

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ, ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯ ಸಿನಿಮಾ “ಕಬ್ಬ”. ಆರ್ ಚಂದ್ರು ನಿರ್ದೇಶಿಸಿರುವ “ಕಬ್ಜ” ಚಿತ್ರದ ಕಮರ್ಷಿಯಲ್ ಸಾಂಗ್
ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಬಿಡುಗಡೆಯಾಗಲಿದೆ

ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಶಿಡ್ಲಘಟ್ಟ ಆರ್. ಚಂದ್ರು ಅವರ ತವರೂರು. ತಮ್ಮೂರಿನಲ್ಲಿ “ಕಬ್ಜ” ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವ ಆರ್ ಚಂದ್ರು, ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂದ್ರ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ “ಕಬ್ಜ” ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಪರಿಮಳ ಡಿಸೋಜಾಗಾಗಿ ಅಮ್ಮನ ಹಾಡು ಹಾಡಿದ ಜೋಗಿ ಪ್ರೇಮ್

ಪ್ರಪಂಚದಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಅಂತಹ ಅಮ್ಮ ಜೊತೆಗಿದ್ದರೆ ಧೈರ್ಯವೂ ಕೂಡ. ಅದ್ಭುತ ವ್ಯಕ್ತಿತ್ವದ ಅಮ್ಮನ ಬಗ್ಗೆ “ಅಮ್ಮ ಎಂಬ ಹೆಸರೆ ಆತ್ಮ ಬಲ” ಎಂಬ ಹಾಡನ್ನು ಪ್ರೇಮಕವಿ ಕೆ.ಕಲ್ಯಾಣ್ ಬರೆದಿದ್ದಾರೆ. ಇದು”ಪರಿಮಳ ಡಿಸೋಜಾ” ಚಿತ್ರಕ್ಕಾಗಿ ಬರೆದ ಹಾಡು. ನಿರ್ದೇಶಕ ಜೋಗಿ ಪ್ರೇಮ್ ಈ ಗೀತೆಯನ್ನು ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಕಲ್ಯಾಣ್, ನಟಿ ಭವ್ಯ, ಜಂಕಾರ್ ಮ್ಯೂಸಿಕ್ ಭರತ್ ಮುಂತಾದವರು ಇದ್ದರು.

ನಮ್ಮ ಚಿತ್ರಕ್ಕಾಗಿ ಕೆ.ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜೇಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ “ಪರಿಮಳ ಡಿಸೋಜಾ” ತೆರೆಗೆ ಬರಲು ಸಿದ್ದವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಡಾ.ಗಿರಿಧರ್ ಹೆಚ್ ಟಿ.

ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗ ಎಂದು. ಅಮ್ಮನ ಹಾಡನ್ನು ಪ್ರೇಮ್ ಅವರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ ಎಂದು ಪ್ರೇಮಕವಿ ಕಲ್ಯಾಣ್ ತಿಳಿಸಿದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು ಹಿರಿಯ ನಟಿ ಭವ್ಯ.

“ಪರಿಮಳ ಡಿಸೋಜಾ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಅಮ್ಮನ ಹಾಡು ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹಾಡು‌ ಬರೆದ ಕಲ್ಯಾಣ್ ಅವರಿಗೆ, ಸುಮಧುರವಾಗಿ ಹಾಡಿದ್ದ ಪ್ರೇಮ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕ ವಿನೋದ್ ಶೇಷಾದ್ರಿ, ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ಹೇಳಿದರು.

ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ ಬನವಾಸಿ ಸೇರಿದಂತೆ ಅನೇಕ ಕಲಾವಿದರು “ಪರಿಮಳ ಡಿಸೋಜಾ” ಚಿತ್ರದ ಬಗ್ಗೆ ಮಾತನಾಡಿದರು.
ತಾಯಿಯ ಬಗ್ಗೆಗಿನ ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ ವಿಶೇಷವಾಗಿ ಮೂರು ಜನ ತಾಯಂದಿರನ್ನು ಸನ್ಮಾನಿಸಲಾಯಿತು.

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಭಗವಾನ್ ನಿಧನ: ರಾಜಕುಮಾರ್ ಗೆ ಹೆಚ್ಚು ಚಿತ್ರ ನಿರ್ದೇಶಿಸಿದ್ದ ಹೆಗ್ಗಳಿಕೆ…

ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (95) ಅವರು ಸೋಮವಾರ ಮುಂಜಾನೆ 6.15ಕ್ಕೆ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ‌ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.

ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗ ಹಾಗು ಅಭಿಮಾನಿಗಳನ್ನು ಬಿಟ್ಟು ಭಗವಾನ್ ಅಗಲಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದೊರೈ – ಭಗವಾನ್‌ ಕನ್ನಡದ ಮಹತ್ವದ ಚಿತ್ರನಿರ್ದೇಶಕ ಜೋಡಿ. ದೊರೈ ಜೊತೆಗೂಡಿ ಭಗವಾನ್‌ ಅವರು ಎರಡು ತಮಿಳು ಚಿತ್ರಗಳು ಸೇರಿದಂತೆ 32 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಮಾಂಗಲ್ಯ ಬಂಧನ’ ಮತ್ತು ‘ಆಡುವ ಗೊಂಬೆ’ ಭಗವಾನ್‌ ಒಬ್ಬರೇ ನಿರ್ದೇಶಿಸಿದ ಸಿನಿಮಾಗಳು.

ಟೀವಿ ಧಾರಾವಾಹಿ ಹಾಗೂ ಸಾಕ್ಷ್ಯ ಚಿತ್ರಗಳ ನಿರ್ದೇಶನವನ್ನೂ ಮಾಡಿದ್ದಾರೆ. ‘ಮಂಗಳ ಸೂತ್ರ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಭಗವಾನ್‌ ‘ಬೆಂಗಳೂರು ಮೈಲ್‌’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.

Categories
ಸಿನಿ ಸುದ್ದಿ

ತತ್ಸಮ ತದ್ಭವ ಪೋಸ್ಟರ್ ಬಂತು: ನೂರಾರು ನಟ ನಟಿಯರು ಏಕಕಾಲಕ್ಕೆ ರಿಲೀಸ್ ಮಾಡಿದ ಪೋಸ್ಟರ್ ಇದು!

ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ “ತತ್ಸಮ ತದ್ಭವ”ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ

ನಿರ್ದೇಶಕ ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ವಿಶೇಷವೆಂದರೆ, ಫೆಬ್ರವರಿ 19 ರಂದು “ತತ್ಸಮ ತದ್ಭವ” ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನೂರಕ್ಕೂ ಹೆಚ್ಚು ನಟನಟಿಯರು ತಮ್ಮ ಸಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ. ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ.

ಚಿತ್ರದ ಸುಮಧುರ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ, ನಿಖಿತ ಪ್ರಿಯ ವಸ್ತ್ರವಿನ್ಯಾಸ ಹಾಗೂ ಸಂತೋಷ್ ಪಂಚಾಲ್ ಕಲಾ ನಿರ್ದೇಶನವಿರುವ “ತತ್ಸಮ ತದ್ಭವ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

19.20.21 ಟ್ರೇಲರ್ ಗೆ ಭರಪೂರ ಮೆಚ್ಚುಗೆ: ಮಾರ್ಚ್ 3ಕ್ಕೆ ಮಂಸೋರೆ ಚಿತ್ರ ದರ್ಶನ…

ನಿರ್ದೇಶಕ ಮಂಸೋರೆ ‘19.20.21’ ಸಿನಿಮಾ ಮೂಲಕ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದ್ದಾರೆ. ಟೀಸರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಕುತೂಹಲ ಭರಿತ ಟ್ರೇಲರ್ ಬಿಡುಗಡೆ ಮಾಡಿದೆ. ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಾಗೂ ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಮಂಸೋರೆ ಮಾತನಾಡಿ, ನೈಜ ಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಒಂಭತ್ತು ವರ್ಷದಿಂದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದ್ದೇನೆ. 2021ರಲ್ಲಿ ಘಟನೆಗೆ ಸಂಬಂಧಿಸಿದ ತೀರ್ಪು ಬಂದ ಮೇಲೆ ಸಿನಿಮಾ ಮಾಡಲು ನಿರ್ಧರಿಸಿದ್ವಿ. ನಾನು, ವೀರೇಂದ್ರ ಮಲ್ಲಣ್ಣ ಮತ್ತು ಸಂತೋಷ್ ಮೂರು ಜನ ಈ ಘಟನೆಗೆ ಸಂಬಂಧಿಸಿದ ಮಾಹಿತ ಕಲೆ ಹಾಕಿ ಸ್ಕ್ರಿಪ್ಟ್ ಮಾಡಿದ್ದೇವೆ. ಸಮುದಾಯದ ಒಬ್ಬ ಹುಡುಗನ ಹೋರಾಟದ ಕಥೆ ಇದು. ನಿರ್ಮಾಪಕರಾದ ದೇವರಾಜ್ ಹಾಗೂ ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಕಥೆ ಕೇಳಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಕೊಂಡ್ರು. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದರು.

ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಮಾತನಾಡಿ ಚಿತ್ರದ ಸ್ಕ್ರಿಪ್ಟ್ ತುಂಬಾ ಇಷ್ಟ ಆಯ್ತು. ರೆಗ್ಯೂಲರ್ ಸಿನಿಮಾ ಬಿಟ್ಟು ನೈಜ ಘಟನೆ ಆಧಾರಿತ ಹಾಗೂ ಪ್ರಯೋಗಾತ್ಮಕ ಸಿನಿಮಾ ಮಾಡೋಣ ಎಂದು ನಿರ್ಧರಿಸಿದ್ವಿ. ಒಂದೊಳ್ಳೆ ಕಥೆಗೆ, ಚಿತ್ರತಂಡಕ್ಕೆ ಸಪೋರ್ಟ್ ಆಗಿ ಇದ್ದೇನೆ ಎಂದು ತಿಳಿಸಿದರು.

ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಈ ಚಿತ್ರದ ಟ್ರೇಲರ್ ನೋಡಿದ ಮೇಲೆ ಸಮಾಜಕ್ಕೆ, ಸರ್ಕಾರಕ್ಕೆ, ವ್ಯವಸ್ಥೆಗೆ ಬೇಕಾಗಿರುವ ಸಿನಿಮಾವನ್ನು ಮಂಸೋರೆ ಹಾಗೂ ಅವರ ತಂಡ ನೀಡಿದೆ ಎನ್ನಿಸುತ್ತೆ. ಮಂಸೋರೆ ಅವರ ಬರವಣಿಗೆ, ಮಾಡುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿವೆ. ಯುವ ಸಮೂಹಕ್ಕೆ, ಪ್ರಜ್ಞಾವಂತರಿಗೆ ಹಾಗೂ ಸಮಾಜದಲ್ಲಿ ಘಾತುಕ ಶಕ್ತಿಗಳಾಗಿ ಕೆಲಸ ಮಾಡಲು ಹೊರಡುತ್ತಿರುವವರು ಈ ಸಿನಿಮಾ ನೋಡಿದ ಮೇಲೆ ವಾಪಾಸ್ಸು ಸಾಮಾಜಿಕ ನ್ಯಾಯದ ಪರವಾಗಿ ಬರುದ ಸಾಧ್ಯತೆ ತುಂಬಾ ಇದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡಕ್ಕೆ ಬೆಂಬಲ ನೀಡಿ ಎಂದರು.

ನಾದಬ್ರಹ್ಮ ಹಂಸಲೇಖ ಮಾತನಾಡಿ ಸಂವಿಧಾನದ ಹಿನ್ನೆಲೆ ಇಟ್ಟುಕೊಂಡು ಟೈಟಲ್ ಇಟ್ಟಿರೋದು ಭಾರತೀಯ ಚಿತ್ರರಂಗದಲ್ಲಿ ಇದೆ ಮೊದಲು. ಇತ್ತೀಚೆಗೆ ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಮುಂದೆ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ಎಂಬ ಪ್ರಚಂಡ ಮಾಧ್ಯಮದ ಮೂಲಕ ಮಂಸೋರೆ ‘19.20.21’ ಚಿತ್ರದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದ್ದಾರೆ. ಇದೇ ರೀತಿಯ ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಂಸೋರೆ ಮಾಡಲಿ ಎಂದು ನಿರ್ದೇಶಕರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಒಂದಂಕೆ ಕಾಡಲ್ಲಿ ಸಸ್ಪೆನ್ಸ್ ಕಥೆ! ಮಾರ್ಚ್ 3ಕ್ಕೆ ಥ್ರಿಲ್ಲರ್ ಸಿನಿಮಾ ರಿಲೀಸ್…

ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಒಂದಂಕೆ ಕಾಡು’ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಟ್ರೇಲರ್, ಹಾಡುಗಳ ಮೂಲಕ ಗಮನ ಸೆಳೆದಿದೆ.

ನಿರ್ದೇಶಕ ರಾಮಚಂದ್ರ ವೈದ್ಯ ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗಿನಲ್ಲಿ ‘ಅನಗನಗಾ ಒಕ ಅಡವಿ’ ಹೆಸರಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ‘ಒಂದಂಕೆ ಕಾಡು’ ಎಂದು ಟೈಟಲ್ ಇಡಲು ಕಾರಣವಿದೆ. ಉತ್ತರ ಕನ್ನಡದಲ್ಲಿ ವಿಶಿಷ್ಟ ಕಾಡಿದೆ. ಮರಗಳ ಬೇರು ನೆಲದ ಒಳಗೆ ಹೋಗುತ್ತದೆ ಆದ್ರೆ ಈ ಭಾಗದ ಕಾಡಲ್ಲಿ ಎಲ್ಲಾ ಮರದ ಬೇರುಗಳು ಕನ್ನಡದ ಒಂದಂಕೆ ಹಾಗೆ ಇರುತ್ತೆ ಅದಕ್ಕೆ ಒಂದಂಕೆ ಕಾಡು ಎಂದು ಇಡಲಾಗಿದೆ. ಕಾಡಿನ ಮಧ್ಯೆ ಚಿತ್ರೀಕರಣ ನಡೆಸಲಾಗಿದೆ. ಕಾರವಾರ, ದಾಂಡೇಲಿ, ಶಿರಸಿ, ಯಲ್ಲಾಪುರ, ಗೋವಾ ಬಾರ್ಡರ್ ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ ಎಂದರು.

ನಾಯಕ ನಟ ರಥರ್ವ ಮಾತನಾಡಿ, ಚಿತ್ರದಲ್ಲಿ ರಿಷಿ ಪಾತ್ರದಲ್ಲಿ ನಟಿಸಿದ್ದೇನೆ. ರಿಷಿ ಬೆಂಗಳೂರು ಹುಡುಗ. ಕೆಲಸ ಹಾಗೂ ಹೆಂಡ್ತಿ ಇಷ್ಟೇ ಅವನಿಗೆ ಜೀವನ. ಹೀಗಿರುವಾಗ ಇಬ್ಬರು ಒಂದಂಕೆ ಕಾಡಿಗೆ ವೆಕೇಶನ್ ಹೋಗುತ್ತಾರೆ. ಆ ಕಾಡಿನಲ್ಲಿ ಏನೇನು ಸಮಸ್ಯೆ ಎದುರಿಸುತ್ತಾರೆ, ಅದನ್ನೆಲ್ಲ ಹೇಗೆ ಫೇಸ್ ಮಾಡ್ತಾರೆ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದು ನನ್ನ ಮೊದಲ ಸಿನಿಮಾ. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದರು.

ನಾಯಕಿ ಸೋನಿ ಮಾತನಾಡಿ, ನಾನು ಮೂಲತಃ ಮೈಸೂರಿನವಳು. ರಂಗಭೂಮಿ ಕಲಾವಿದೆ. ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಚಿತ್ರದಲ್ಲಿ ನಂದಿನಿ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ಅನುಭವ ಈ ಸಿನಿಮಾ ನೀಡಿದೆ. ನನಗೆ ಈ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂತಸ ಹಂಚಿಕೊಂಡರು.

ಗಣೇಶ್ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿದ್ದು, ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಿನ್ನೆಲೆ ಗಾಯನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೂರದರ್ಶನ ಟ್ರೇಲರ್ ಬಂತು: ಮಾರ್ಚ್ 3ಕ್ಕೆ ಚಿತ್ರ ದರ್ಶನ…

ಸುಕೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದೂರದರ್ಶನ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಮಾರ್ಚ್ 3ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಅಯಾನ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ನಾಯಕ ಪೃಥ್ವಿ ಅಂಬರ್ ಮಾತನಾಡಿ, ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರ ಆಗುತ್ತೆ. ಒಂದು ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಎಲ್ಲರಿಗೂ ನೀಡುತ್ತೆ. ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದೂರದರ್ಶನ ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕಿ ಅಯಾನ, ಈ ಸಿನಿಮಾ ನಮ್ಮ ನಿರ್ದೇಶಕರ ಡ್ರೀಮ್ ಪ್ರಾಜೆಕ್ಟ್. ಈ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದಕ್ಕೆ ತುಂಬಾ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ಮೈತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿಂಪಲ್ ಹುಡುಗಿ ಪಾತ್ರ. ಲವ್ ಸ್ಟೋರಿ ಕೂಡ ಇದೆ. ಎಲ್ಲಾ ಕಲಾವಿದರೊಂದಿಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದರು.

ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಈ ಸಿನಿಮಾ ಈ ಮಟ್ಟಿಗೆ ಬಂದು ನಿಂತಿದೆ ಅಂದರೆ ಕಾರಣ ನಮ್ಮ ನಿರ್ಮಾಪಕರು. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತೆ. ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ರಾಜೇಶ್ ಭಟ್ ಮಾತನಾಡಿ, ಈ ಸಿನಿಮಾ ಕೇವಲ ನನ್ನೊಬ್ಬನಿಂದ ಆಗಿಲ್ಲ. ತಾಂತ್ರಿಕ ವರ್ಗ, ಕಲಾವಿದರ ಸಹಕಾರ ಇವರೆಲ್ಲರಿಂದ ಈ ಸಿನಿಮಾ ಆಗಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ಜೊತೆ ಕೆಲಸ ಮಾಡಿದ್ದು ತುಂಬಾ ಹೆಮ್ಮೆ ಎನಿಸುತ್ತೆ. ಎಲ್ಲರ ಸಪೋರ್ಟ್ ಸಿನಿಮಾ ಮೇಲೆ ಇರಲಿ ಎಂದರು.

ಉಗ್ರಂ ಮಂಜು ಮಾತನಾಡಿ, ಇಡೀ ತಂಡ ಶ್ರಮ ಹಾಗೂ ಪ್ರೀತಿಯಿಂದ ಮಾಡಿರುವ ಸಿನಿಮಾ ‘ದೂರದರ್ಶನ’. ಚಿತ್ರದಲ್ಲಿ ಕಿಟ್ಟಿ ಎಂಬ ಪಾತ್ರ ಮಾಡಿದ್ದೇನೆ. 80.90ರ ದಶಕದಲ್ಲಿ ನೋಡುವ ಸ್ನೇಹ, ದ್ವೇಷ ಜೊತೆಗೆ ಕುಟುಂಬದ ಕನಸನ್ನು ನೆರವೇರಿಸುವ ಹುಡುಗನ ಪಾತ್ರ. ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದ ಸಹಕಾರದಿಂದ ಈ ಚಿತ್ರ ಈ ಮಟ್ಟಿಗೆ ಬಂದಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ನನಗೆ ಕಥೆ ಹೇಳುವಾಗ ಏನು ಪ್ರಾಮಿಸ್ ಮಾಡಿದ್ದರೋ ಹಾಗೆಯೇ ಸಿನಿಮಾ ಮೂಡಿ ಬಂದಿದೆ. ಅವರ ಎಫರ್ಟ್ ನೋಡಿ ಹೆಮ್ಮೆ ಎನಿಸುತ್ತೆ. ಮಾರ್ಚ್ 3ರಂದು ಎಲ್ಲರೂ ಸಿನಿಮಾ ನೋಡಿ ನಮ್ಮ ತಂಡವನ್ನು ಪ್ರೋತ್ಸಾಹಿಸಿ ಎಂದರು.

ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ರಾಜೇಶ್ ಭಟ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಉಗ್ರಂ ಮಂಜು ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ. ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿ ಜಿ ಸಂಭಾಷಣೆ, ವಾಸುಕಿ ವೈಭವ ಸಂಗೀತ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸಿನಿ ಬಜಾರ್ ಎಂಬ ಡಿಜಿಟಲ್ ಥಿಯೇಟರ್! ಇದು ನಿರ್ಮಾಪಕ ಸ್ನೇಹಿ ಓಟಿಟಿ…

ತಂತ್ರಜ್ಞಾನ ಮುಂದುವರಿದ ಹಾಗೆ ಜೀವನ‌ಶೈಲಿ ಕೂಡ ಬದಲಾಗುತ್ತಿದೆ. ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇಂತಹುದೇ ವಿಶೇಷ ತಂತ್ರಜ್ಞಾನವುಳ್ಳ “ಸಿನಿಬಜಾರ್” ಎಂಬ ಓಟಿಟಿ ಬಿಡುಗಡೆಯಾಗಿದ್ದು, ಈ ಓಟಿಟಿ ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನರು ತಮ್ಮ ನೆಚ್ಚಿನ ಸಿನಿಮಾಗಳನ್ನು ತಾವು ಇದ್ದಲ್ಲಿಯೇ ನೋಡಬಹುದು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿಗೆ “ಸಿನಿಬಜಾರ್” ಓಟಿಟಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

“ಸಿನಿಬಜಾರ್” ಓಟಿಟಿಯಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳು ವಿಶ್ವದ 177 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿವೆ. ಹೀಗಾಗಿ ಇದು ಪ್ಯಾನ್ ವರ್ಲ್ಡ್. ಈ ಆಪ್ ಮೂಲಕ ಪ್ರಪಂಚದೆಲ್ಲೆಡೆ ಇರುವ ಸಿನಿ ಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಬಹುದು. ಟಿವಿ, ಮೊಬೈಲ್, ಇಂಟರ್ ನೆಟ್ ಹಾಗೂ ವೆಬ್ ಸೈಟ್ ನಲ್ಲಿ ಈ ಆಪ್ ದೊರಕುತ್ತದೆ. No ads & no subscription ಇಲ್ಲದೆ ಕೋಟ್ಯಾಂತರ ಜನರು ಏಕಕಾಲಕ್ಕೆ ಚಿತ್ರಗಳನ್ನು ನೋಡಬಹುದು.


ಟಿಕೆಟ್ ಬೆಲೆ ಕೂಡ 10 ರಿಂದ 25 ರೂಪಾಯಿ ಒಳಗೆ ಇರುತ್ತದೆ. ಈ ಆಪ್ ನಿರ್ಮಾಪಕರುಗಳಿಗೆ ಹೆಚ್ಚಿನ ಆದಾಯದಾಯಕವಾಗಿರುತ್ತದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಈ ಆಪ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರುತ್ತದೆ. ಆಸಕ್ತಿಯಿರುವ ನಿರ್ಮಾಪಕರು ನೇರವಾಗಿ ಕೂಡ ಈ ಆಪ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಬಹುದು. ಸ್ಕ್ಯಾನ್ ಮಾಡುವ ಮೂಲಕ ಚಿತ್ರಗಳನ್ನು ವೀಕ್ಷಿಸಬಹುದು ಎಂದು ಮುಖ್ಯಸ್ಥ ಭಾಸ್ಕರ್ ವೆಂಕಟೇಶ್ ಮಾಹಿತಿ ನೀಡಿದರು.

ನನಗೆ ಭಾಸ್ಕರ್ ವೆಂಕಟೇಶ್ ಅವರು ಲಾಕ್ ಡೌನ್ ಸಮಯದಲ್ಲಿ ಈ ಓಟಿಟಿ ಬಗ್ಗೆ ಹೇಳಿದರು. ಅವರು ಹೇಳಿದ ಹಾಗೆ ಇದರಿಂದ ನಿರ್ಮಾಪಕರಿಗೆ ಅನುಕೂಲವಾಗಬಹುದು ಎಂದು ನನಗೂ ಅನಿಸಿತು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ “ಸಿನಿಬಜಾರ್” ಗೆ ಶುಭ ಕೋರಿದರು.
ಆಪ್ ಡೆವಲಪ್ ಮಾಡಿರುವ ತಂತ್ರಜ್ಞರು ಸಹ ಹೆಚ್ಚಿನ ಮಾಹಿತಿ ನೀಡಿದರು.

ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ “ಭಾಗ್ಯವಂತರು” ಈ ಓಟಿಟಿಯ ಮೊದಲ ಚಿತ್ರವಾಗಿ ಬರಲಿದೆ. “ಪಂಪ”, ” ಕಾಕ್ಟೈಲ್ “, “ಗುರ್ಬಿ” ಮುಂತಾದ ಚಿತ್ರಗಳ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಈ ಆಪ್ ನ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆಯಾ ಸಿನಿಮಾಗೆ ಸಂಬಂಧಿಸಿದ ಪ್ರಮುಖರು ಈ ಆಪ್ ನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Categories
ಸಿನಿ ಸುದ್ದಿ

ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ “ಕಬ್ಜ” ಚಿತ್ರದಿಂದ ಗೀತ ನಮನ…

ಗಣ್ಯರ ಸಮ್ಮುಖದಲ್ಲಿ, ಚೆನ್ನೈ ನಗರದಲ್ಲಿ ಅದ್ದೂರಿಯಾಗಿ ಕಬ್ಜ ಸಿನಿಮಾದ “ನಮಾಮಿ ನಮಾಮಿ” ಹಾಡು ರಿಲೀಸ್…

ಇಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ “ನಮಾಮಿ ನಮಾಮಿ” ಎಂಬ ಸುಮಧುರ ಗೀತೆ ಬಿಡುಗಡೆಯಾಗಿದೆ.

ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆದಿದೆ. ಸಾಕಷ್ಟು ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್ ಚಂದ್ರು, “ಕಬ್ಜ” ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ.
ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

“ಕಬ್ಜ” ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಟಿ ಶ್ರೇಯಾ ಶರಣ್.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ “ಕಬ್ಜ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.


ಪ್ರಪಂಚದಾದ್ಯಂತ ಅಭಿಮಾನಿಗಳು ಕಾಯುತ್ತಿರುವ “ಕಬ್ಜ” ಚಿತ್ರ ಮಾರ್ಚ್ 17 ರಂದು(ಪನೀತ್ ರಾಜಕುಮಾರ್ ಜನ್ಮದಿನದಂದು) ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

error: Content is protected !!