ವಿಜಯ್ ಭರಮಸಾಗರ
ರೇಟಿಂಗ್: 3.5/5
ಚಿತ್ರ: ಪೀಟರ್
ನಿರ್ದೇಶಕ: ಸುಕೇಶ್ ಶೆಟ್ಟಿ
ನಿರ್ಮಾಣ: ರವಿ ಹಿರೇಮಠ್, ರಾಕೇಶ್ ಹೆಗಡೆ
ತಾರಾಗಣ: ರಾಜೇಶ್ ಧ್ರುವ , ಜಾನವಿ ರಾಯಲ, ರವೀಕ್ಷ ಶೆಟ್ಟಿ ಇತರರು.
ಒಂದು ಸಿನಿಮಾ ಮೊದಲು ನೋಡುಗನ ಮನಸ್ಸನ್ನು ಗೆಲ್ಲಬೇಕು. ಹೊರ ಬಂದರೂ ಆ ಕಥೆ ಕಾಡಬೇಕು. ತೆರೆ ಮೇಲಿನ ಪಾತ್ರಗಳು ನೆನಪಲ್ಲುಳಿಯಬೇಕು. ಇಡೀ ಸಿನಿಮಾಗೆ ಸರಾಗವಾಗಿ ನೋಡಿಸಿಕೊಂಡು ಹೋಗುವ ತಾಕತ್ತು ಮತ್ತು ಗುಣ ಇರಬೇಕು. ಈ ಎಲ್ಲಾ ಗುಣ ವಿಶೇಷ ಇರುವ ಸಿನಿಮಾ ‘ಪೀಟರ್’ ಅಂತ ಮುಲಾಜಿಲ್ಲದೆ ಹೇಳಬಹುದು. ಕನ್ನಡದಲ್ಲಿ ಈಗಾಗಲೇ ಅನೇಕ ಕಂಟೆಂಟ್ ಸಿನಿಮಾಗಳು ಬಂದಿವೆ. ಆ ಸಾಲಿಗೆ ಪೀಟರ್ ಕೂಡ ಸೇರಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಪೀಟರ್ ಕಾಡುವ ಮತ್ತು ನೋಡುವ ಚಿತ್ರ.

ಇಲ್ಲಿ ಗಟ್ಟಿ ಕಥೆ ಇದೆ. ಚಿತ್ರಕಥೆಯಲ್ಲಿ ಧಮ್ ಇದೆ. ಬಿಗಿಯಾದ ನಿರೂಪಣೆ ಇದೆ. ಆರಂಭದಿಂದ ಅಂತ್ಯದವರೆಗೆ ಎಲ್ಲೂ ಗೊಂದಲವಿಲ್ಲದೆ, ನೋಡುಗನಿಗೆ ಆ ಕಥೆ, ಪಾತ್ರಗಳು, ಸನ್ನಿವೇಶಗಳು ಕನೆಕ್ಟ್ ಆಗುವ ಮೂಲಕ ನವಿರಾದ ಪ್ರೀತಿ ಕಥೆಯೊಳು ಸಣ್ಣದ್ದೊಂದು ರಕ್ತಸಿಕ್ತ ಅಧ್ಯಾಯ ಮತ್ತಷ್ಟು ರೋಚಕ ಎನಿಸಿದೆ.
ನಿರ್ದೇಶಕರಿಗೆ ಸ್ಪಷ್ಟತೆ ಇದೆ. ಅ ಕಾರಣಕ್ಕೆ ಸಿನಿಮಾ ಎಲ್ಲೂ ಬೋರ್ ಎನಿಸಲ್ಲ. ಮೊದಲರ್ಧ ಕಟ್ಟಿಕೊಟ್ಟಿರುವ ಕಥೆಯಲ್ಲಿ ಕೊಂಚ ಮಂದಗತಿ ಎಂಬ ಮಾತು ಬಿಟ್ಟರೆ, ದ್ವಿತಿಯಾರ್ಧ ಸಿನಿಮಾ ಅತ್ತಿತ್ತ ನೋಡದೆ ತದೇಕಚಿತ್ತದಿಂದ ನೋಡುವಂತೆ ಮಾಡಿಸುತ್ತೆ.
ಕಥೆಯಲ್ಲಿ ಶ್ರೀಮಂತಿಕೆ ಇಲ್ಲ. ಸರಳ ಕಥೆಯಾದರೂ ಚಿತ್ರಕಥೆ ಮತ್ತು ನಿರೂಪಣೆ ಹೈಲೆಟ್ ಆಗಿದೆ. ಯಾವ ಪಾತ್ರಗಳು ಇಲ್ಲಿ ವಿನಾಕಾರಣ ತೂರಿ ಬರಲ್ಲ. ಅಂತೆಯೇ, ಬರುವ ಪ್ರತಿ ಪಾತ್ರಕ್ಕೂ ಅರ್ಥವಿದೆ. ಆಳವಿದೆ.
ನೋಡುಗರಿಗೆ ಅದು ಹಾರರ್ ಸ್ಪರ್ಶ ಕೊಡಲಾಗಿದೆಯಾ ಎಂಬ ಪ್ರಶ್ನೆ ಸಹಜ. ಅಂಥದ್ದೊಂದಯಬಪ್ರಶ್ನೆ ಮೂಡಲು ಮೇರಿ ಪಾತ್ರ ಕಾರಣವಾಗುತ್ತೆ.
ಅಂದಹಾಗೆ, ಇಲ್ಲಿ ಗಟ್ಟಿ ಗೆಳೆತನವಿದೆ. ಚೆಂಡೆ ಮೇಲಿನ ಪ್ರೀತಿ ಇದೆ. ಒಂದಷ್ಟು ಮೋಸವಿದೆ, ದ್ವೇಷವಿದೆ. ತಾಯಿ ಮಗನ ವಾತ್ಸಲ್ಯವಿದೆ. ನಿಷ್ಕಲ್ಮಷ ಪ್ರೀತಿ ಇದೆ. ಮುದ್ದಾದ ಪ್ರೀತಿಗೆ, ಗಟ್ಟಿ ಗೆಳೆತನಕ್ಕೆ ಹುಳಿ ಹಿಂಡುವ ಕೆಲಸವೂ ಇದೆ. ಇಷ್ಟು ಹೇಳಿದ ಮೇಲೆ ಕುತೂಹಲ ಸಹಜ. ಆ ಕುತೂಹಲ ಇದ್ದರೆ ಒಮ್ಮೆ ಪೀಟರ್ ನೋಡಲು ಅಡ್ಡಿ ಇಲ್ಲ.
ಇದುವರೆಗೆ ಅನೇಕ ಕಥೆ ಬಂದರೂ ಪೀಟರ್ ಬೇರೆ ಆಯಾಮದಲ್ಲಿ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆ ಪ್ರಯತ್ನದಲ್ಲಿ ಪೀಟರ್ ಹೋರಾಟ ಇಲ್ಲಿ ಸಾರ್ಥಕ ಎನಿಸುತ್ತೆ.
ಕೆಲವು ಕಡೆ ಅನಗತ್ಯ ದೃಶ್ಯ ಎನಿಸಿದರೂ ಅವೆಲ್ಲವನ್ನೂ ಹಿನ್ನೆಲೆ ಸಂಗೀತ ಪಕ್ಕಕ್ಕಿಟ್ಟು ದೃಶ್ಯವನ್ನು ವೈಭವೀಕರಿಸಿದೆ.
ಕಥೆ ಏನು?
ಮಲೆನಾಡು ವಾತಾವರಣದಲ್ಲಿರುವ ಗ್ರಾಮವೊಂದರ ಕಥೆ ಇದು. ಆ ಊರಲ್ಲಿ ಪೀಟರ್ ಅಂದರೆ ಎಲ್ಲರಿಗೂ ಇಷ್ಟ. ಅವನದ್ದೊಂದು ಗೆಳೆಯರ ಬಳಗ. ಚೆಂಡೆ ಕಲೆ ಆ ಹುಡುಗರ ನಿತ್ಯದ ಹವ್ಯಾಸ. ಊರ ದೇವರ ಮುಂದೆ ಪೀಟರ್ ಮತ್ತು ಗೆಳೆಯರೇ ಚೆಂಡೆ ಬಾರಿಸಬೇಕು. ಈ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗುತ್ತೆ. ಅಲ್ಲೊಂದು ಘಟನೆ ನಡೆಯುತ್ತೆ. ಅದು ಸಿನಿಮಾದ ವೇಗಕ್ಕೊಂದು ಟ್ವಿಸ್ಟು. ತಾನು ಮಾಡದ ತಪ್ಪಿಗೆ ಪೀಟರ್ ಊರನ್ನೇ ಬಿಡಬೇಕಾದ ಸಂದರ್ಭ ಬರುತ್ತೆ. ಎರಡು ವರ್ಷ ಕಾಸರಗೋಡಿನಲ್ಲಿದ್ದು, ಕೊನೆಗೆ ಊರಿನತ್ತ ಬರುವ ಪೀಟರ್ ನ ಹಿನ್ನೆಲೆಯ ಕಥೆ ಒಂದೊಂದೇ ಬಿಚ್ಚಿಕೊಳ್ಳುತ್ತೆ. ಪ್ರತಿ ಹಂತದಲ್ಲೊಂದು ತಿರುವು. ಕೊನೆಗೆ ಒಂದಷ್ಟು ವಿಚಿತ್ರ ಘಟನಾವಳಿಗಳು ನಡೆಯುತ್ತವೆ ಅದೇ ಇಲ್ಲಿ ಹೈಲೆಟ್.
ಯಾರು ಹೇಗೆ?
ಇಲ್ಲಿ ಎಲ್ಲಾ ಪಾತ್ರಗಳಿಗೂ ಫುಲ್ ಮಾರ್ಕ್ಸ್ ಕೊಡಲೇಬೇಕು ಮುಖ್ಯವಾಗಿ ರಾಜೇಶ್ ಧ್ರುವ ಅವರಿಲ್ಲಿ ಕಾಡುತ್ತಾರೆ. ಎಂದಿಗಿಂತಲೂ ಅವರು ಇಷ್ಟವಾಗುತ್ತಾರೆ. ನಟನೆ, ಡೈಲಾಗ್ ಡಿಲವರಿ, ಎಲ್ಲದ್ದರಲ್ಲೂ ಸೈ. ಇಂತಹ ನಟನನ್ನು ಚೆನ್ನಾಗಿ ಬಳಸಿಕೊಳ್ಳಬೇಕಷ್ಟೇ. ಇನ್ನು ಜಾನವಿ ರಾಯಲ, ರವೀಕ್ಷ ಶೆಟ್ಟಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಇಬ್ಬರೂ ಒಳ್ಳೆಯ ಆಯ್ಕೆಯತ್ತ ಗಮನ ಹರಿಸಿದರೆ ಗಟ್ಟಿ ನೆಲೆ ಕಾಣಬಹುದು.
ಉಳಿದಂತೆ ಮೇರಿ, ಶಂಭು, ಡೇವಿಡ್, ಜೋಸೆಫ್, ಜೆಸ್ಸಿ, ಬಟಾಣಿ ಹೀಗೆ ಒಂದಷ್ಟು ಪಾತ್ರಗಳು ನೋಡುಗರನ್ನು ಆವರಿಸಿಕೊಳ್ಳುತ್ತವೆ.
ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಿನಿಮಾದ ಪ್ಲಸ್.
ಗುರುಪ್ರಸಾದ್ ಕ್ಯಾಮೆರಾ ಕೈಚಳಕದಲ್ಲಿ ಪೀಟರ್ ವಿಜೃಂಭಿಸಿದ್ದಾನೆ.


