ಕಳೆದ ವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ತಮ್ಮ ನಟನೆ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ “ಲಂಕಾಸುರ” ಚಿತ್ರ ನಿರ್ಮಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರ ಪತ್ನಿ ವಿನೋದ್ ಪ್ರಭಾಕರ್ ನಿರ್ಮಾಪಕರು.
ತಮ್ಮ ನಿರ್ಮಾಣ ಸಂಸ್ಥೆಗೆ “ಟೈಗರ್ ಟಾಕಿಸ್” ಎಂಬ ಹೆಸರಿಟ್ಟರುವ ವಿನೋದ್ ಪ್ರಭಾಕರ್, ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡು ಹೊಸಹೆಜ್ಜೆ ಇಟ್ಟಿದ್ದಾರೆ.
ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ . ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ದೇವರಾಜ್, ರವಿಶಂಕರ್ ಮುಂತಾದವರು ಚಿತ್ರದಲ್ಲಿದ್ದಾರೆ.
ಆಕ್ಷನ್ ಕಥಾಹಂದರದ ಈ ಚಿತ್ರವನ್ನು ಪ್ರಮೋದ್ ಕುಮಾರ್ ಡಿ ಎಸ್ ನಿರ್ದೇಶಿಸುತ್ತಿದ್ದಾರೆ. ಡಿರ್ಫೆಂಟ್ ಡ್ಯಾನಿ, ವಿನೋದ್, ಕುಂಪ್ಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ .
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಮಾಡಿದ್ದಾರೆ.
ಸಿದ್ಲಿಂಗು, ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್ (ಜ್ಞಾನ ಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ರವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ರವರ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ.