ಚಿತ್ರ ವಿಮರ್ಶೆ: ವಿಭ
ರೇಟಿಂಗ್: 5/3
ಚಿತ್ರ: ಕೆಂಡದ ಸೆರಗು
ನಿರ್ದೇಶನ: ರಾಕಿ ಸೋಮ್ಲಿ
ನಿರ್ಮಾಣ: ಕೆ.ಕೊಟ್ರೇಶ್ ಗೌಡ
ತಾರಾಗಣ: ಮಾಲಾಶ್ರೀ, ಭೂಮಿ ಶೆಟ್ಟಿ, ಸಿಂಧು ಲೋಕನಾಥ್, ಯಶ್ ಶೆಟ್ಟಿ, ವರ್ಧನ್, ಪ್ರತಿಮಾ, ಶೋಭಿತಾ, ಹರೀಶ್ ಅರಸು ಇತರರು.
“ನಾನ್ ಹೂವು ಅನ್ಕೊಂಡ್ ಮುಟ್ಟೋಕ್ ಬಂದೋರಿಗೆ ಗೊತ್ತಾಗ್ ಬೇಕು, ನಾನು ಹೂವು ಅಲ್ಲ ಮುಳ್ಳು ಅಂತ..”
ಆ ಛಲಗಾತಿಯ ಮನದಲ್ಲಿ ಈ ಡೈಲಾಗ್ ಬರುವ ಹೊತ್ತಿಗೆ ಆ ಊರ ಜನ ಅವಳನ್ನ ವೈಶ್ಯೆ ಮಗಳು ಅನ್ನೋ ಪಟ್ಟ ಕಟ್ಟಿರುತ್ತಾರೆ. ಅಪ್ಪನನ್ನು ಕಳಕೊಂಡ ಅವಳ ಅಮ್ಮನನ್ನು ಕೆಲ ಕಿಡಿಗೇಡಿಗಳು ಹಿಂಡಿ ಹಿಪ್ಪೆ ಮಾಡಿರುತ್ತಾರೆ. ಇದು ಮಹಿಳೆಯೊಬ್ಬಳ ಬದುಕಿನ ಕಥೆ- ವ್ಯಥೆ. ಅಲ್ಲಿಗೆ ಇದೊಂದು ಮಹಿಳಾ ಪ್ರಧಾನ ಚಿತ್ರ ಅಂತ ಪ್ರತ್ಯೇವಾಗಿ ಹೇಳಬೇಕಿಲ್ಲ.

ಕನ್ನಡದಲ್ಲಿ ಈಗಾಗಲೇ ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಇದು ಕೂಡ ಕೆಂಡದ ಸೆರಗು ಕಾದಂಬರಿ ಚಿತ್ರ. ಹಾಗಾಗಿ ಹೆಣ್ಣಿಗೆ ಹೆಚ್ಚು ಮಹತ್ವ ಕೊಟ್ಟಿರುವ, ಆಕೆಯ ಬದುಕು-ಬವಣೆ, ಶಕ್ತಿ, ಯುಕ್ತಿ, ಅವಳು ಅಬಲೆಯಲ್ಲ ಅಬಲೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ಸಿನಿಮಾ ಕಾದಂಬರಿಯ ಕಥೆಯಂತೆಯೇ ನೋಡಿಸಿಕೊಂಡು ಹೋಗುತ್ತಾದರೂ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ನಿರೂಪಣೆಯಲ್ಲಿ ಚುರುಕುತನ ಇರಬೇಕಿತ್ತು. ಮೊದಲರ್ಧ ನಿಧಾನವೆನಿಸುವ ಚಿತ್ರ ದ್ವಿತಿಯಾರ್ಧ ವೇಗ ಪಡೆದುಕೊಳ್ಳುತ್ತೆ. ಅಲ್ಲಲ್ಲಿ ಟ್ವಿಸ್ಟ್ ಅನಿಸಿದರೂ ನೋಡಗರನ್ನು ಟೆಸ್ಟೂ ಮಾಡುತ್ತೆ.
ಕಥೆ ಚೆನ್ನಾಗಿದೆ. ಅದಕ್ಕೆ ಚಿತ್ರಕಥೆಯ ವೇಗ ಕಡಿಮೆ. ಪಾತ್ರಗಳ ಆಯ್ಕೆ ಚೆನ್ನಾಗಿದೆ. ಆದರೆ, ಕಂಟಿನ್ಯುಟಿ ಕಡೆ ಗಮನಿಸಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಉಳಿದಂತೆ ಸೆರಗೊಳಗೆ ಕೆಂಡ ನಿಗಿ ನಿಗಿ.
ಕಥೆ ಏನು?
ಎರಡು ಟ್ರ್ಯಾಕ್ ನಲ್ಲಿ ಕಥೆ ಸಾಗುತ್ತೆ. ಎರಡು ಕಥೆಯಲ್ಲೂ ಸ್ಪಷ್ಟತೆ ಇದೆ. ಮದ್ವೆಯಾಗಿ ಚೆಂದದ ಬದುಕು ಸವೆಸುವ ನೇತ್ರ ಬಾಳಲ್ಲಿ ಗಂಡ ದೂರವಾಗುತ್ತಾನೆ. ಗಂಡನಿಲ್ಲದ ಹೆಣ್ಣನ್ನು ಈ ಸಮಾಜ ನೋಡುವ ದೃಷ್ಟಿಕೋನ ಬೇರೆ. ನೇತ್ರಳಿಗೆ ಒಂದು ಹೆಣ್ಣು ಮಗು ಇರುತ್ತೆ. ನೇತ್ರಾಳ ಬದುಕು ಕಷ್ಟ. ಮಗಳಿಗಾಗಿ ಬದುಕಲೇಬೇಕು ಅನ್ನೋ ಅನಿವಾರ್ಯ ಬಂದಾಗ, ಆ ಊರ ಗೌಡನ ಜೊತೆ ನೇತ್ರಾ ಸೆರಗು ಹಾಸುತ್ತಾಳೆ. ಅಲ್ಲಿಂದ ಊರಲೆಲ್ಲಾ ನೇತ್ರಾಗೆ ವೈಶೈ ಪಟ್ಟ ಕಟ್ತಾರೆ. ಊರಲ್ಲಿರೋ ಒಂದಷ್ಟು ಜನ ಬಲವಂತವಾಗಿ ನೇತ್ರಾಳ ಮನೆ ಬಾಗಿಲು ಬಡಿತಾರೆ. ರಾತ್ರಿ ಸೆರಗು ಹಾಸುವ ಕೆಲಸ ಮಾಮೂಲಾಗುತ್ತೆ. ಒಂದು ಹಂತದಲ್ಲಿ ರಕ್ಷಣೆಮಾಡೋ ಪೊಲೀಸ್ ಅಧಿಕಾರಿ ಕೂಡ ನೇತ್ರಾಳ ಸೆರಗು ಎಳಿತಾನೆ. ಅವಳಿಗಿರೋ ಮಗಳ ಮೇಲೂ ಕಣ್ಣಾಕುತ್ತಾನೆ. ಅತ್ತ, ಮಗಳು ಊರು ಬಿಟ್ಟು ಪಟ್ಟಣ ಸೇರುತ್ತಾಳೆ. ಅವಳಿಗೂ ಕೆಟ್ಟ ಘಟನೆ ಎದುರಾಗುತ್ತೆ. ಅಲ್ಲಿಂದ ಆಕೆ ಮೆಟ್ಟಿ ನಿಲ್ಲುವ ಕಥೆಯೇ ರೋಚಕ! ಆ ಕುತೂಹಲ ಇದ್ದರೆ ಸಿನಿಮಾ ನೋಡಿ.
ಇಲ್ಲಿ ನಿರ್ದೇಶಕರು ಸೂಕ್ಷ್ಮ ಸಂವೇದನೆಯ ವಿಷಯ ಹೇಳಿದ್ದಾರೆ. ಜೊತೆಗೆ ಹದಿಹರೆಯದ ಪ್ರೀತಿ ಹೇಗೆಲ್ಲಾ ಬದುಕನ್ನು ಹಾಳು ಮಾಡುತ್ತೆ ಅನ್ನುವುದನ್ನು ತೋರಿಸಿದ್ದಾರೆ. ಲವ್ ಜಿಹಾದ್ ಕುರಿತ ವಿಷಯವೂ ಇಣುಕಿ ಹಾಕುತ್ತೆ. ಒಟ್ಟಾರೆ ವಾಸ್ತವ ಬದುಕಿನ ಚಿತ್ರಣ ಇಲ್ಲಿದೆ.
ಯಾರು ಹೇಗೆ?
ಇಲ್ಲಿ ಮಾಲಾಶ್ರೀ ಅವರು ಹೆಸರಿಗಷ್ಟೇ. ಪೊಲೀಸ್ ಅಧಿಕಾರಿ ಪಾತ್ರ ಅವರದು. ಬಿಲ್ಡಪ್ ಗೆ ಒಂದು ಫೈಟ್ ಇದೆ. ಜನರ್ ದಸ್ತ್ ಫೈಟ್ ಅಂತೂ ಅಲ್ಲ. ಮಾಲಾಶ್ರೀ ಅವರನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಉಳಿದಂತೆ ಭೂಮಿಶೆಟ್ಟಿ ಅವರಿಗೆ ದ್ವಿತಿಯಾರ್ಧ ಕೆಲಸ. ಶೋಭಿತ ಸಿನಿಮಾದ ಹೈಲೆಟ್ ಅನ್ನಬಹುದು. ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಯಶ್ ಶೆಟ್ಟಿ, ವರ್ಧನ್, ಬಲರಾಜ್ ವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರತಿಮಾ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿಂಧು ಲೋಕನಾಥ್ ಒಂದು ಸೀನ್ ಗೆ ಸೀಮಿತ. ಹರೀಶ್ ಅರಸು ತೆರೆ ಮೇಲೆ ಇರುವಷ್ಟು ಕಾಲ ಇಷ್ಟ ಆಗ್ತಾರೆ. ಪಾತ್ರಕ್ಕೆ ಮೋಸ ಮಾಡಿಲ್ಲ.
ವಿಪಿನ್ ಕ್ಯಾಮರಾದಲ್ಲಿ ಸೊಗಸಿದೆ.
ವೀರೇಶ್ ಕಂಬಳಿ ಸಂಗೀತದಲ್ಲಿ ಒಂದು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು.
ಕೊನೆ ಮಾತು: ಬರೀ ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಹೆಣ್ಣಿನ ಅಸಾಹಯಕತೆ ಬಳಸಿಕೊಂಡು ಸಮಾಜ ಹೇಗೆ ಮೃಗವರ್ತನೆ ತೋರಿಸುತ್ತೆ ಎಂಬುದು ಹೈಲೆಟ್.





