ತಂಗಲಾನ್ ನಿರೀಕ್ಷೆಯ ಸಿನಿಮಾ: ವಿಕ್ರಮ್ ನಟನೆಯ ಈ ಚಿತ್ರ ಆ.15ಕ್ಕೆ‌ ರಿಲೀಸ್

ಜ್ಞಾನವೇಲ್ ರಾಜ್ ನಿರ್ಮಾಣದ,‌ ಪ.ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್‍ ಅಭಿನಯದ ‘ತಂಗಲಾನ್’ ಚಿತ್ರವು ಇದೇ ಆಗಸ್ಟ್ 15ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೆಜಿಎಫ್‍ನಲ್ಲಿ ನಡೆದಿರಬಹುದಾದ ಒಂದು ಕಾಲ್ಪನಿಕ ಕಥೆಯನ್ನು ಚಿತ್ರ ಮಾಡಿದ್ದಾರೆ “ಕಬಾಲಿ” ಖ್ಯಾತಿಯ ನಿರ್ದೇಶಕ ಪ. ರಂಜಿತ್‍. ಈ ಚಿತ್ರದಲ್ಲಿ ವಿಕ್ರಮ್, ಮಾಳವಿಕಾ ಮೋಹನನ್, ಪಾರ್ವತಿ, ಬ್ರಿಟಿಷ್‍ ನಟ ಡೇನಿಯಲ್‍ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡಲು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಕ್ರಮ್‍, ‘ನಾನು ಇದುವರೆಗೂ “ಅನ್ನಿಯನ್”, “ಪಿತಾಮಗನ್” ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ‘ತಂಗಲಾನ್‍’ ಚಿತ್ರಕ್ಕೆ ಹೋಲಿಸಿದರೆ ಅದು ಶೇ. 8ರಷ್ಟು ಮಾತ್ರ. ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಿತ್ರ. ಪ್ರತಿ ದೃಶ್ಯಕ್ಕೂ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಏಟು ಬಿದ್ದಿವೆ.

ರೊಮ್ಯಾಂಟಿಕ್‍ ದೃಶ್ಯಗಳು ಸಹ ಕಷ್ಟವಾಗಿತ್ತು. ನಾವು ನಮಗೆ ಗೊತ್ತಿಲ್ಲದ ಪಾತ್ರಗಳಾಗುವುದೇ ನಿಜವಾದ ಕಷ್ಟ. ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಏನಾಗಿದ್ದರಿಬಹುದು? ಆಗಿನ ಬುಡಕಟ್ಟು ಜನಾಂಗದವರು ಹೇಗಿದ್ದಿರಬಹುದು ಎಂದು ನಮಗೆ ಗೊತ್ತಿಲ್ಲ. ಹಾಗಾಗಿ, ಯಾವ ದೃಶ್ಯವೂ ಸುಲಭವಾಗಿರಲಿಲ್ಲ. ಇಲ್ಲಿ ನಾವು ಅವರ ತರಹ ನಟನೆ ಮಾಡಬೇಕು ಎಂಬುದಕ್ಕಿಂತ, ಅವರ ತರಹ ಇರಬೇಕಿತ್ತು. ಈ ಚಿತ್ರಕ್ಕಾಗಿ ಒಂದು ಶತಕದ ಹಿಂದಕ್ಕೆಹೋಗುವಂತಾಯಿತು ಎಂದು ತಿಳಿಸಿದರು.

ಈ ಚಿತ್ರದ ಪಾತ್ರಕ್ಕಾಗಿ ವಿಕ್ರಮ್‍ ಆರು ತಿಂಗಳ ತಯಾರಿ ನಡೆಸಿದಾರಂತೆ ಹಾಗೂ ತುಂಬಾ ತೂಕವನ್ನು ಕಳೆದುಕೊಂಡಿದಾರಂತೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲ್ಕೈದು ಗಂಟೆಗಳ ಕಾಲ ಮೇಕಪ್‍ ಹಾಕಿಕೊಳ್ಳಬೇಕಿತ್ತು ಎಂದು ಚಿತ್ರೀಕರಣ ಸಮಯದ ಅನುಭವವನ್ನು ವಿಕ್ರಮ್ ಹಂಚಿಕೊಂಡರು.

ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುವುದಕ್ಕೆ ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ದೊಡ್ಡ ಸ್ಫೂರ್ತಿ ಎಂದು ತಿಳಿಸಿದ ಚಿಯಾನ್ ವಿಕ್ರಮ್, ಉತ್ತಮ ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎನ್ನುವುದನ್ನು ಆ ಚಿತ್ರ ತೋರಿಸಿತು’ ಎಂದರು.

ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕ ಪ.ರಂಜಿತ್ ವಿವರಿಸಿದರು. “ನಾನು ಮತ್ತು ವರಲಕ್ಷ್ಮೀ” ಕನ್ನಡ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡ ನಟಿ ಮಾಳವಿಕ ಮೋಹನನ್ “ತಂಗಲಾನ್” ಚಿತ್ರದ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಹಾಲಿವುಡ್ ನಟ ಡೇನಿಯಲ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಚಿತ್ರ ಪ್ರತಿಷ್ಠಿತ ಕೆ.ವಿ‌.ಎನ್ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ‌.

Related Posts

error: Content is protected !!