Categories
ಸಿನಿ ಸುದ್ದಿ

ಪುನೀತ್ ರಾಜ್ ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿದ ಸುದೀಪ್; ಇದು ಡಾ.ಶರಣು ಹುಲ್ಲೂರು ಕೃತಿ

ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ ಅನ್ನೋದು ವಿಶೇಷ.

ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದರು.

ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು.

ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.
ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ.

ಪುನೀತ್ ಅವರ ಹುಟ್ಟು ಹಬ್ಬದ ದಿನಕ್ಕೆ ಈ ಕೃತಿ ಬಂದಿದೆ. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ಅಪರೂಪದ ಸಂಗತಿಗಳು ಮತ್ತು ಫೋಟೋಗಳನ್ನುಈ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಲೇಖಕ ಶರಣು ಹುಲ್ಲೂರು.

Categories
ಸಿನಿ ಸುದ್ದಿ

ಧನ್ವೀರ್‌ ಹೊಸ ಸಿನಿಮಾಗೆ ಚಾಲನೆ; ವಾಮನ ಚಿತ್ರೀಕರಣ ಶುರು ಗುರು…

ಬಜಾರ್ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದ ಶೋಕ್ದಾರ್ ಧನ್ವೀರ್ ಸದ್ಯ ಬೈ ಟು ಲವ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಬೈ ಟು ಲವ್ ಸಕ್ಸಸ್ ಯಾತ್ರೆ ಮುಗಿಸಿಕೊಂಡು ಇದೀಗ ಹೊಸ ಸಿನಿಮಾದತ್ತ ಮುಖ ಮಾಡಿದ್ದಾರೆ. ಹೌದು, ಅವರೀಗ “ವಾಮನ” ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಗೊತ್ತೇ ಇದೆ. ಅದಕ್ಕೆ ಕತ್ತಿ ಮಾರಮ್ಮ ದೇಗುಲದಲ್ಲಿ ಮಂಗಳವಾರ ಸರಳವಾಗಿ ಮುಹೂರ್ತ ನಡೆದಿದೆ.

ಧನ್ವೀರ್ ಗೌಡ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಬಿಟ್ಟರೆ, ಬೇರೆ ಅಪ್ ಡೇಟ್ ಸಿಕ್ಕಿರಲಿಲ್ಲ. ಇದೀಗ ವಾಮನ ಸಿನಿಮಾದ ಮುಹೂರ್ತ ಸರಳವಾಗಿ ದೇವನಹಳ್ಳಿಯ ಕತ್ತಿ ಮಾರಮ್ಮ ದೇಗುಲದಲ್ಲಿ ನೆರವೇರಿದೆ.

ವಾಮನ ಸಿನಿಮಾದ ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಗೆ‌ ಮುನ್ನುಡಿ ಬರೆದಿದೆ. ಬೆಂಗಳೂರಿನಲ್ಲಿಯೇ‌ ಮೊದಲ ಹಂತದ ಶೂಟಿಂಗ್ ನಡೆಸುತ್ತಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಅಗಿರುವ ಶಂಕರ್ ರಾಮನ್ ವಾಮನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕ್ವಿನಾಕ್ಸ್ ಗೋಬಲ್ ಎಂಟರ್ ಟ್ರೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪು ಎಂಬ ಮಹಾನುಭಾವ! ಸಂಭ್ರಮ್‌ ಸ್ಟುಡಿಯೋಸ್‌ ಮೂಲಕ ಗೀತ ನಮನ

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋದ ಆದರ್ಶ ಮತ್ತು ಮಾನವೀಯ ಮೌಲ್ಯಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅಪ್ಪು ಅವರ ನೆನಪಲ್ಲಿ ಈಗಾಗಲೇ ಹಲವು ಗೀತೆಗಳು ಹೊರಬಂದಿವೆ. ಬರುತ್ತಲೂ ಇವೆ. ಮಾರ್ಚ್‌ 17 ರಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆಯೇ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರು ತಮ್ಮ ಹೊಸ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್ಪು ಅವರಿಗೊಂದು ವಿನೂತನ ಎನಿಸುವ ಗೀತೆಯನ್ನು ರಿಲೀಸ್‌ ಮಾಡಿದ್ದಾರೆ

ಹೌದು, ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರು, ಹಲವಾರು ವರ್ಷಗಳಿಂದಲೂ ಅನೇಕ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಾಕಷ್ಟು ಸೂಪರ್‌ ಹಿಟ್‌ ಸಾಂಗ್‌ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಸಂಗೀತ ಯಾನ ನಡೆಸಿರುವ ಶ್ರೀಧರ್‌ ಸಂಭ್ರಮ್‌ ಇದೀಗ ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ ಶುರುಮಾಡಿದ್ದಾರೆ. ಆಮೂಲಕ ಅವರೀಗ ಪುನೀತ್‌ ರಾಜಕುಮಾರ್‌ ಅವರಿಗಾಗಿಯೇ “ಮಹಾನುಭಾವ” ಎಂಬ ಗೀತೆ ಬಿಡುಗಡೆ ಮಾಡಿದ್ದಾರೆ. ಈ ಮಹಾನುಭಾವ ಹಲವು ವಿಶೇಷತೆಗಳನ್ನು ಹೊಂದಿದೆ. ಆ ಕುರಿತು ಸ್ವತಃ ಶ್ರೀಧರ್‌ ಸಂಭ್ರಮ್‌ ಹೇಳುವುದಿಷ್ಟು.

“ಅಪ್ಪು ಸರ್‌ ಅಂದರೆ, ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಅಪ್ಪು ಸರ್‌ ಇಲ್ಲ ಅನ್ನುವುದನ್ನೂ ಸಹ ಊಹಿಸಿಕೊಳ್ಳಲಾಗುತ್ತಿಲ್ಲ. ಅವರು ಯಾವುದೇ ಕ್ಷಣದಲ್ಲಿ ಸಿಕ್ಕರೂ ಪ್ರೀತಿಯಿಂದಲೇ ಮಾತಾಡಿಸುತ್ತಿದ್ದರು. ಸದಾ ನಗುಮೊಗದಲ್ಲೇ ಇರುತ್ತಿದ್ದ ಅಪ್ಪು ಸರ್‌ ನಮ್ಮೊಂದಿಗಿಲ್ಲ. ಹಾಗಂತ ಆ ಭಾವನೆಯಲ್ಲೂ ನಾವಿಲ್ಲ. ಅವರ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರಿಗಾಗಿಯೇ ಒಂದೊಳ್ಳೆಯ ಗೀತೆ ಮಾಡಬೇಕು ಎಂಬ ಉದ್ದೇಶವಿತ್ತು.

ಕರುನಾಡಿಗರೆಲ್ಲರೂ ಅವರಿಲ್ಲದ ನೋವಲ್ಲಿದ್ದಾರೆ. ಹಾಗಂತ, ಪ್ರತಿನಿತ್ಯ ಆ ನೋವಲ್ಲೇ ಬಾಳುವುದಕ್ಕಾಗಲ್ಲ. ಅವರನ್ನು ಹಾಡಿನ ಮೂಲಕ ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಹಾಗಾಗಿಯೇ ಅವರನ್ನು ಹತ್ತಿರದಿಂದ ನೋಡಿದ್ದರಿಂದ, ಅವರ ಒಡನಾಟ ಇದ್ದುದರಿಂದ, ದೊಡ್ಮನೆ ಹುಡುಗನಾಗಿ ಹೇಗೆಲ್ಲಾ ಇದ್ದರು, ಏನೆಲ್ಲಾ ಮಾಡಿದ್ದರು, ಹೇಗೆಲ್ಲ ಪ್ರೀತಿ ತೋರುತ್ತಿದ್ದರು ಅನ್ನುವುದನ್ನೇ ಹಾಡಿನ ಮೂಲಕ ಹೇಳಲಾಗಿದೆ. ಅದೊಂದು ಅವರ ಮೇಲಿನ ಪ್ರೀತಿ ಮತ್ತು ಗೌರವಕ್ಕಾಗಿ ಮಾಡಿರುವ ಹಾಡಿದು” ಎಂದು ವಿವರ ಕೊಡುತ್ತಾರೆ ಶ್ರೀಧರ್‌ ವಿ.ಸಂಭ್ರಮ್.‌

ಇನ್ನು, ಈ ಹಾಡನ್ನು ನಿರ್ದೇಶಕ ಕಾಂತ ಕನ್ನಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ತಕ್ಕಂತೆ ನಾನು ಸಂಗೀತ ನೀಡಿದ್ದೇನೆ. ” ಆಕಾಶ ಭೂಮಿ ಹೇಳಿದೆ, ಊರಿಗೇ ನಮ್ಮೂರಿಗೆ ಮಹಾನುಭಾವ ನೀನಯ್ಯ… ನಾಡಿಗೆ ಕರುನಾಡಿಗೆ ಮಹಾನುಭಾವ ನೀನಯ್ಯ…” ಎಂದು ಶುರುವಾಗುವ ಗೀತೆ ಈಗಾಗಲೇ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಜನ ಹಾಡನ್ನು ಮೆಚ್ಚಿಕೊಂಡಿದ್ದಾರೆ.

ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು, ಹಾಡಲ್ಲಿ ವಿಶೇಷತೆಗಳಿವೆ. ಈ ಹಾಡಿಗೆ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಬಾಲಿವುಡ್‌ ಗಾಯಕರಾದ ಸೋನು ನಿಗಮ್‌, ಶಂಕರ್‌ ಮಹದೇವನ್.‌ ವಿಜಯ ಪ್ರಕಾಶ್‌, ಕೈಲಾಶ್‌ ಕೇರ್ ಅವರು ಧ್ವನಿಯಾಗಿರುವುದು ವಿಶೇಷತೆಗಳಲ್ಲೊಂದು ನಿರ್ದೇಶಕ‌ ಕಾಂತ ಕನ್ನಲ್ಲಿ ಅವರ ಗೀತ ಸಾಹಿತ್ಯದ ಜೊತೆ ಪರಿಕಲ್ಪನೆಯೂ ಇದೆ. ಇನ್ನು, ಇಂಥದ್ದೊಂದು ಒಳ್ಳೆಯ ಹಾಡಿಗೆ ಸುನೀಲ್‌ ಬಿ.ಎನ್.‌ ಅವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ ಶ್ರೀಧರ್‌ ವಿ.ಸಂಭ್ರಮ್.‌

“ಮಹಾನುಭಾವ” ಗೀತೆಯಿಂದ ಬರುವ ಆದಾಯವನ್ನು ಅಪ್ಪು ಸರ್‌ ಅವರ ಚಾರಿಟಿಗೆ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಯಾಕೆಂದರೆ, ಅಪ್ಪು ಸರ್‌ ಅವರು ಯಾರಿಗೂ ಗೊತ್ತಾಗದ ರೀತಿ ಹಲವು ಮಾನವೀಯ ಕೆಲಸ ಮಾಡಿದ್ದಾರೆ. ಅನೇಕರ ಕಷ್ಟಕ್ಕೆ ಮಿಡಿದಿದ್ದಾರೆ. ಹಾಗಾಗಿ, ಅವರ ನೆನಪಲ್ಲಿ ಮಾಡಿರುವ ಈ ಗೀತೆಯಿಂದ ಬರುವ ಆದಾಯವನ್ನು ಅವರ ಚಾರಿಟಿಗೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನುವ ಶ್ರೀಧರ್‌ ಸಂಭ್ರಮ್‌, ಮುಂದಿನ ದಿನಗಳಲ್ಲಿ ನಮ್ಮ ಸಂಭ್ರಮ್‌ ಸ್ಟುಡಿಯೋಸ್‌ ಯುಟ್ಯೂಬ್‌ ಚಾನೆಲ್‌ ಮೂಲಕ ಹೊಸ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಇಲ್ಲಿ ಗೀತೆಗಳ ಜೊತೆಯಲ್ಲಿ ವಿಡಿಯೋ ಆಲ್ಬಂ ಕೂಡ ರಿಲೀಸ್‌ ಮಾಡಲಾಗುತ್ತದೆ. ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದಲೇ ನಾವು ನಾಗಭಾವಿಯಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿ, ಆ ಮೂಲಕ ಹೊಸಬರಿಗೆ ವೇದಿಕೆ ಕಲ್ಪಿಸುವ ಉದ್ದೇಶನ ನನ್ನದು. “ಮಹಾನುಭಾವ” ಗೀತೆ ಮೂಲಕ ನಮ್ಮ ಯುಟ್ಯೂಬ್‌ ಚಾನೆಲ್‌ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಗೀತೆಗಳನ್ನೂ ಕೊಡುವ ಉದ್ದೇಶವಿದೆ ಎನ್ನುತ್ತಾರೆ ಶ್ರೀಧರ್.

Categories
ಸಿನಿ ಸುದ್ದಿ

ಲೂಸ್ ಮಾದ ಈಗ ಕಿರಿಕ್ ಶಂಕರ್; ಹೊಸ ಹುಡುಗಿ ಅದ್ವಿಕ ನಾಯಕಿ

ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ” ಕಿರಿಕ್ ಶಂಕರ್ ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ.

ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ
ಬಂದಿದೆ. ಇದೇ ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದರು ಎಂ.ಎನ್.ಕುಮಾರ್.

ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೆ ಕಥಾಸಾರಾಂಶ. ಕಥೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೆ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಂತರಾಜು.

ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ. ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತ್ತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಲೂಸ್ ಮಾದ ಯೋಗಿ.

ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ವಂದನೆಗಳನ್ನು ಸಲ್ಲಿಸಿದರು ನಾಯಕಿ‌ ಅದ್ವಿಕ.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿದರು.
ಅದ್ವಿಕರಿಗೆ ಅಭಿನಯ ತರಭೇತಿ ನೀಡಿದ ನಿರ್ದೇಶಕ ಗಿರಿರಾಜ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದರುವ ಯೋಗೀಶ್ ಹುಣಸೂರು ಹಾಗೂ
ಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳಾಡಿದರು. ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಲ್ ರಾಜ ಇದ್ದರು.

Categories
ಸಿನಿ ಸುದ್ದಿ

ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್….

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಿಸಿದೆ.
ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ 46 ವರ್ಷದ ಹಿಂದೆ ಡಾ.ರಾಜ್​ಕುಮಾರ್ ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಮಾರ್ಚ್ 22ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಪುನೀತ್​ಗೆ ಮರಣೋತ್ತರ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮಾತನಾಡಿ, “ಈ ಹಿಂದೆ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.

ಈಗ ಮೈಸೂರು ವಿಶ್ವವಿದ್ಯಾಲಯ ಇದೀಗ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಮರಣೋತ್ತರವಾಗಿ ನೀಡಲು ತೀರ್ಮಾನಿಸಿದೆ” ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಜೇಮ್ಸ್ ಜತೆ ಬೈರಾಗಿ ಟೀಸರ್; ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್…

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟು ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್‌’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ.

ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎಂಬುದು ಚಿತ್ರತಂಡದ ಅನಿಸಿಕೆ.

ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

Categories
ಎಡಿಟೋರಿಯಲ್ ಸಿನಿ ಸುದ್ದಿ

ಸಿನಿ‌ಲಹರಿ ಯುಟ್ಯೂಬ್‌ ಚಾನೆಲ್‌ಗೆ ವರ್ಷದ ಹರ್ಷ… ಮೊದಲ ವರ್ಷದ ಯಶಸ್ವೀ ಪಯಣ…

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ…

2020 ನಂವೆಬರ್ 1ಕ್ಕೆ “ಸಿನಿ ಲಹರಿ” ವೆಬ್ ಸೈಟ್ ಶುರುವಾಗಿದ್ದು ಎಲ್ಲರಿಗೂ ಗೊತ್ತು. ಅಂದು ಎಲ್ಲವೂ ಹರಿಬಿರಿ, ಅವಸರ, ಆತುರ, ಸಣ್ಣ ಭಯ ಮತ್ತು ಒಂದಷ್ಟು ಗೊಂದಲದಲ್ಲಿಯೇ ಒಂದೊಳ್ಳೆಯ ಕಾರ್ಯಕ್ರಮ ನಡೆಯಿತು. ಅಂದು ಯಾರೆಲ್ಲ ಬರುತ್ತಾರೋ‌ ಎಂಬ ಸಣ್ಣ ಭಯದಲ್ಲೇ ಆಹ್ವಾನಿಸಿದರೆಲ್ಲರೂ ಬಂದು ಹೃದಯ ತುಂಬಿ ಹರಿಸಿದರು. ಅದ್ಯಾವ ಸಂದರ್ಭವೋ ಏನೋ ಗೊತ್ತಿಲ್ಲ. ಬಂದವರೆಲ್ಲ ಬೊಗಸೆ ತುಂಬಿ ಕೊಟ್ಟ ಪ್ರೀತಿ, ಹಾರೈಕೆ , ಧೈರ್ಯದಿಂದ ನಾವು ಯುಟ್ಯೂಬ್‌ ಚಾನೆಲ್‌ಗೂ ಕೈ ಹಾಕಿದೆವು.

ಸಿನಿ‌ಲಹರಿ‌ ವೆಬ್ಸೈಟ್ ಶುರುವಾಗಿ ನಾಲ್ಕು ತಿಂಗಳು ಕಳೆಯವ ಹೊತ್ತಿಗೆ ಒಂದು ವ್ಯವಸ್ಥಿತವಾದ ಸ್ಟುಡಿಯೋ, ಆಫೀಸು, ಕ್ಯಾಮೆರಾಗಳು, ಅಗತ್ಯ ಸಿಬ್ಬಂದಿ ಮೂಲಕ ಒಂದು ಯುಟ್ಯೂಬ್ ಚಾನೆಲ್ ಶುರುವಾಯ್ತು. ಇಷ್ಟೆಲ್ಲಾ ಆಗಿದ್ದು, ಆತ್ಮೀಯ ಗೆಳೆಯರ ಸಹಕಾರ, ಪ್ರೋತ್ಸಾಹ ಮತ್ತು ನಮ್ಮೊಳಗಿದ್ದ ಆತ್ಮವಿಶ್ವಾಸ. ಮಿತ್ರರು ಹಾಗು ಉದ್ಯಮಿ ಪಿ. ಕೃಷ್ಣ ಅವರು ನಮ್ಮೊಂದಿಗೆ ಸಾಥ್‌ ಕೊಟ್ಟರು. ಹಾಗಾಗಿ ಯುಟ್ಯೂಬ್‌ ಚಾನೆಲ್‌ ಯಾವುದೇ ಅಡೆತಡೆಗಳಿಲ್ಲದೆ ಶುರುವಾಯ್ತು.

ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್‌ ಚಾನೆಲ್‌ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ.

ಚಿತ್ರೋದ್ಯಮಕ್ಕಾಗಿಯೇ ಶುರುವಾದ ಸಿನಿಲಹರಿ, ಚಿತ್ರರಂಗ ಒಪ್ಪುವ ಮತ್ತು ಅಪ್ಪುವಂತೆ ಕೆಲಸ ಮಾಡಿಕೊಂಡು ಹೋಗಬೇಕೆನ್ನುವ ಧ್ಯೇಯವಿದೆ. ಅದೇ ಹಾದಿಯಲ್ಲಿ ಸಾಗುತ್ತಿದೆ. ಸಿನಿ‌ಲಹರಿ ಅಂದರೆ ಒಂದಷ್ಟು ನಂಬಿಕೆ ಹುಟ್ಟ ಬೇಕೆನ್ನುವ ಹಾಗೆ ವೃತ್ತಿಯನ್ನು ಪ್ರದರ್ಶಿಸೋಣ ಅನ್ನೋದು ನಮ್ಮ ಆಸೆ. ಇದೆಲ್ಲ ಕೈ ಗೂಡಬೇಕಾದರೆ, ನೀವುಗಳೇ ಮುಖ್ಯ. ನಿಮ್ಮ ಬೆಂಬಲ ನಮಗೆ ಸದಾ ಇರಬೇಕು.


ಕೊನೆಯ ಮಾತು: ಪ್ರತಿಯೊಬ್ಬರ ಬದುಕಿನ ಸಾಹಸಗಳು ಸುಮ್ಮನೆ ಶುರುವಾಗೋದಿಲ್ಲ. ‌ಅವುಗಳ ಹಿಂದೆ ಹುಮ್ಮಸ್ಸು ಇರುತ್ತೆ, ಛಲ ಇರುತ್ತೆ, ದರ್ದು ಇರುತ್ತೆ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಅಲ್ಲಿ ನೋವು, ಅವಮಾನಗಳು ಇರುತ್ತವೆ. ಸಿನಿ‌ಲಹರಿ ಆರಂಭವೂ ಕೂಡ ಇದರಿಂದ ಹೊರತಲ್ಲ.

ವಿಜಯ್ ಭರಮಸಾಗರ, ದೇಶಾದ್ರಿ ಹೊಸ್ಮನೆ

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಆರ್‌ಆರ್‌ಆರ್ ಪ್ರಮೋಷನ್‌ಗೆ ರಾಜಮೌಳಿ ಸಜ್ಜು; ಮಾರ್ಚ್ 14ಕ್ಕೆ ಎತ್ತುವ ಜಂಡಾ ಎಂಬ ಮತ್ತೊಂದು ಹಾಡು ರಿಲೀಸ್…

ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾ‌ ನೋಡಲು ಚಿತ್ರಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಜೂ.ಎನ್. ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆ ಮೇಲೆ ರಾರಾಜಿಸಬೇಕಿತ್ತು. ಆದರೆ ಕೊರೋನಾ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಹೀಗಾಗಿ ಎರಡು ಮುಹೂರ್ತ ಅನೌನ್ಸ್ ಮಾಡಿದ್ದ ರಾಜಮೌಳಿ, ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದಾರೆ. ಹೊಸ ದಿನಾಂಕ ಘೋಷಣೆ ಬಳಿ ರಾಜ್‌ಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್ ಆರ್ ಆರ್ ಟೀಂ ಸಜ್ಜಾಗಿದೆ.

ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್

ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು. ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ನೇ ರಂದು “ಎತ್ತುವ ಜಂಡಾ” ಹಾಡು ರಿಲೀಸ್ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ.

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ, ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ‘ಆರ್‌ಆರ್‌ಆರ್‌’ ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್, ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.

Categories
ಸಿನಿ ಸುದ್ದಿ

ಆಸ್ಕರ್‌ ಕೃಷ್ಣ ಹೊಸ ಚಿತ್ರ; ಮಾರ್ಚ್‌ 14ರಂದು ಶೀರ್ಷಿಕೆ ಅನಾವರಣ

ಇತ್ತೀಚೆಗೆ ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ ಸಿನಿಮಾ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಮತ್ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾರ್ಚ್‌ 14 ರಂದು ಅವರು ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ. ಅಂದಹಾಗೆ, ಮಾರ್ಚ್‌ 14 ಅವರ ಬರ್ತ್‌ ಡೇ. ಸೋ ಅಂದೇ ಅವರು ಹೊಸ ಚಿತ್ರ ಅನೌನ್ಸ್‌ ಮಾಡುತ್ತಿದ್ದಾರೆ

ನಟ‌, ನಿರ್ದೇಶಕ ಕಮ್ ನಿರ್ಮಾಪಕ ಆಸ್ಕರ್ ಕೃಷ್ಣ‌ ಹೊಸದೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಆ ವಿಷಯವನ್ನು ಮಾರ್ಚ್ 14ರಂದು ಹೇಳಲಿದ್ದಾರೆ, ಆ ದಿನ ಆಸ್ಕರ್‌ ಕೃಷ್ಣ ಅವರ ಹುಟ್ಟು ಹಬ್ಬ. ಹಾಗಾಗಿ ಅವರು ತಮ್ಮ ಮುಂದಿನ ಚಿತ್ರದ “ಶೀರ್ಷಿಕೆ” ಬಿಡುಗಡೆಗೊಳಿಸಲಿದ್ದಾರೆ.
ಈ ಹಿಂದೆ ” ಆಸ್ಕರ್”, “ಮಿಸ್ ಮಲ್ಲಿಗೆ”, ” ಮೋನಿಕಾ ಈಸ್ ಮಿಸ್ಸಿಂಗ್”, “ಮನಸಿನ ಮರೆಯಲಿ” ಹಾಗೂ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಇತ್ತೀಚೆಗಷ್ಟೇ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ನಿರ್ದೇಶಿಸಿದ್ದರು. ಜೊತೆಗೆ ಆ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮುಂದೆ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಆದರೆ, ಯಾವ ಸಿನಿಮಾ ಅಂತ ಘೋಷಣೆ ಮಾಡಿರಲಿಲ್ಲ. ಮಾರ್ಚ್ 14ರಂದು‌ ಹೊಸ ಸಿನಿಮಾದ ಶೀರ್ಷಿಕೆ ಬಗ್ಗೆ ಹೇಳಲಿದ್ದಾರೆ.
ತಮ್ಮ‌ ಮುಂದಿನ ಚಿತ್ರವನ್ನು ಆಸ್ಕರ್ ಕೃಷ್ಣ ಅವರೇ ನಿರ್ಮಿಸಿ, ನಿರ್ದೇಶಿಸುತ್ತಿರುವುದರ ಜೊತೆಗೆ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ನಾಯಕ ನಟನಾಗಿ ಇದು ಅವರಿಗೆ ಎರಡನೇ ಚಿತ್ರ.
ಗೌತಮ್ ರಾಮಚಂದ್ರ ಎಂಬುವವರು ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆಸ್ಕರ್ ಕೃಷ್ಣ ಅವರ ಜೊತೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್ ರಾಮಚಂದ್ರ ರವರು‌ ಸಾಫ್ಟ್ ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಆಸ್ಕರ್ ಕೃಷ್ಣ ಅವರ ಜೊತೆ ಸೇರಿ ನಿರ್ಮಾಣಕ್ಕಿಳಿದಿರುವ ಇವರಿಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಆಸೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಗಟ್ಟಿನೆಲೆ ಕಾಣುವಾಸೆ; ರಜನಿ ಎಂಬ ಪ್ರತಿಭೆಯ ಮನದಾಳದ ಮಾತು…

ಕನ್ನಡದಲ್ಲಿ ದಿನ ಕಳೆದಂತೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಇಲ್ಲಿ ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಪ್ರತಿಭಾವಂತರಿಗೇನೂ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಇಲ್ಲಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಆ ಸಾಲಿಗೆ ಈಗ ಹೊಸ ಪ್ರತಿಭೆಯೊಂದು ಸೇರಿದೆ. ಹೌದು, ರಜನಿ ಎಂಬ ನಟಿ ಈಗ ಕನ್ನಡದಲ್ಲಿ ಗಟ್ಟಿ ನೆಲೆ ಕಾಣಬೇಕು ಎಂಬ ಕನಸು ಹೊತ್ತು ಬಂದಿದ್ದಾರೆ. ಆ ನಿಟ್ಟಿನಲ್ಲೀಗ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಅಂದಹಾಗೆ, ಯಾರು ಈ ರಜನಿ? ಎಲ್ಲಿಯವರು? ಅವರ ಹಿನ್ನೆಲೆ ಏನು ಇತ್ಯಾದಿ ಕುರಿತು ಒಂದು ರೌಂಡಪ್…‌

ರಜನಿ ಈಗಷ್ಟೇ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿರುವ ಬೆಡಗಿ. ಈ ಹುಡುಗಿಗೆ ತಾನೊಬ್ಬ ನಟಿ ಅನ್ನುವುದಕ್ಕಿಂತ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಬಯಕೆ. ಈವರೆಗೆ ಈ ಹುಡುಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. “ರೂಮ್‌ ಬಾಯ್”‌, “ಓಟ” ಮತ್ತು “ಒಂದಕ್ಕೆ ಮೂರು” ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ “ಓಟ” ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿದೆ. ತಮ್ಮ ಸಿನಿಮಾ ಎಂಟ್ರಿ ಕುರಿತು ರಜನಿ ಹೇಳುವುದಿಷ್ಟು.

“ನಾನು ಮೂಲತಃ ಬೆಂಗಳೂರಿನವಳು. ಬಯೋಕೆಮಿಸ್ಟ್ರಿ ಓದಿದ್ದೇನೆ. ಸಿನಿಮಾ ಮೇಲೆ ಇನ್ನಿಲ್ಲದ ಒಲವಿತ್ತು. ಆದರೆ, ಸಿನಿಮಾಗೆ ಹೇಗೆ ಹೋಗಬೇಕೆಂಬುದು ಗೊತ್ತಿರಲಿಲ್ಲ. ಸಿನಿಮಾ ನೋಡುವ ಅಭ್ಯಾಸ ಹೆಚ್ಚಾಗಿತ್ತು. ಒಮ್ಮೆ ನನ್ನ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೋ ಪೋಸ್ಟ್‌ ಮಾಡಿದ್ದೆ. ಅದನ್ನು ನೋಡಿಯೇ ನನಗೆ ಸಿನಿಮಾಗೆ ಬರಲು ದಾರಿಯಾಯ್ತು. ಮೊದ ಮೊದಲು ಸಿನಿಮಾಗೆ ಹೇಗಪ್ಪಾ ಹೋಗೋದು ಅಂತ ಯೋಚಿಸುತ್ತಿದ್ದೆ. ಒಂದು ಫೋಟೋ ನನನ್ನು ಸಿನಿಮಾಗೆ ಎಂಟ್ರಿಯಾಗಲು ಅವಕಾಶ ಸಿಕ್ತುʼ ಎಂದು ಹೇಳುತ್ತಾರೆ ರಜನಿ.

ನಾನು ಯಾವ ನಟನಾ ತರಬೇತಿ ಪಡೆದಿಲ್ಲ. ಆದರೆ, ಸಿನಿಮಾಗಳನ್ನು ನೋಡಿ, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಬೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಗೆಳೆಯರ ಮೂಲಕವೂ ಒಂದಷ್ಟು ಪ್ರಾಜೆಕ್ಟ್‌ಗಳು ಸಿಗುತ್ತಿವೆ. ಸಿನಿಮಾ ಮೇಲೆ ಅತಿಯಾದ ಪ್ರೀತಿ ಇದ್ದುದರಿಂದ ಹೇಗಾದರೂ ಮಾಡಿ ಎಂಟ್ರಿಕೊಡಬೇಕು ಅಂದುಕೊಳ್ಳುತ್ತಿರುವಾಗಲೇ, ನನ್ನದ್ದೊಂದು ಫೋಟೋ ಪೋಸ್ಟ್‌ನಿಂದಾಗಿ ನಾನು ಸಿನಿಮಾರಂಗ ಪ್ರವೇಶ ಮಾಡುವಂತಾಯ್ತು. ಸದ್ಯ ನನಗೆ ಸಿಕ್ಕ ಮೂರು ಪ್ರಾಜೆಕ್ಟ್‌ಗಳಲ್ಲೂ ಒಳ್ಳೆಯ ಪಾತ್ರಗಳಿವೆ. ರೂಮ್‌ ಬಾಯ್‌ ಸಿನಿಮಾ ವಿಶೇಷ ಪ್ರಯೋಗಾತ್ಮಕ ಸಿನಿಮಾ.

ಕಮರ್ಷಿಯಲ್‌ ಅಂಶಗಳೊಂದಿಗೆ ವಿಭಿನ್ನ ಕಥಾಹಂದರ ಹೊಂದಿದೆ. ಇನ್ನು ತಮಿಳು ಹಾಗು ಕನ್ನಡದಲ್ಲಿ ತಯಾರಾಗುತ್ತಿರುವ ಓಟ ಸಿನಿಮಾ ಕೂಡ ವಿಶೇಷತೆ ಹೊಂದಿದೆ. ಆ ಚಿತ್ರದಲ್ಲಿ ನಾನು ನೆಗೆಟಿವ್‌ ಪಾತ್ರ ಮಾಡಿದ್ದೇನೆ. ಇನ್ನು ಒಂದಕ್ಕೆ ಮೂರು ಸಿನಿಮಾದಲ್ಲಿ ಲೀಡ್‌ ರೋಲ್‌ ಇದೆ. ಒಂದಷ್ಟು ಹೊಸ ಸಿನಿಮಾಗಳ ಜೊತೆ ಮಾತುಕತೆ ನಡೆಯುತ್ತಿದೆ. ಇದಕ್ಕೂ ಮುನ್ನ ಹಲವು ಕಿರುಚಿತ್ರಗಳಲ್ಲೂ ನಟಿಸಿದ್ದೇನೆ. ಅವೆಲ್ಲವೂ ಸಿನಿಮಾಗಳಿಗೆ ಈಗ ಸಹಕಾರಿಯಾಗಿವೆ ಎನ್ನುತ್ತಾರೆ ರಜನಿ.

ನನಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ. ಅದರಲ್ಲೂ ಚಾಲೆಂಜಿಂಗ್‌ ಪಾತ್ರಗಳು ನನಗಿಷ್ಟ. ಮಹಿಳಾ ಪ್ರಧಾನ ಕಥೆ ಇರುವ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಅಂಥದ್ದೊಂದು ಅವಕಾಶವನ್ನು ಎದುರು ನೋಡುತ್ತಿದ್ದೇನೆ. ಯಾವುದೇ ಪಾತ್ರವಿರಲಿ, ನನಗೆ ಅದು ಗುರುತಿಸುವಂತಿರಬೇಕಷ್ಟೇ. ಸಿನಿಮಾ ಅನ್ನೋದು ಗ್ಲಾಮರಸ್‌ ಲೋಕ.

ಹಾಗಾಗಿ ನಾನು ಗ್ಲಾಮರ್‌ ಇರುವಂತಹ ಪಾತ್ರವನ್ನೂ ಮಾಡುತ್ತೇನೆ. ಹಾಗಂತ, ಅದು ವಲ್ಗರ್‌ ಆಗಿರಬಾರದು. ಒಳ್ಳೆಯ ಕಥೆ, ಪಾತ್ರವಿದ್ದರೆ, ನಾನು ನಿರ್ವಹಿಸಲು ರೆಡಿ. ಒಟ್ಟಾರೆ, ಸಿನಿಮಾದಲ್ಲಿ ಗಟ್ಟಿ ನೆಲೆ ಕಾಣುವ ಆಸೆ ಇದೆ. ಅದಕ್ಕಾಗಿ ನಾನೀಗ ಹೊಸ ಪ್ರಯೋಗಾತ್ಮಕ ಸಿನಿಮಾಗಳ ಜೊತೆ ಜೊತೆಯಲ್ಲಿ ವಿಭಿನ್ನ ಕಥೆ ಇರುವ ಸಿನಿಮಾಗಳಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ರಜನಿ.

error: Content is protected !!