ಎನ್. ಗೊಂಬೆ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣದ “ಉಸಿರೇ ಉಸಿರೇ” ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯಿಸುತ್ತಿದ್ದಾರೆ. “ಉಸಿರೇ ಉಸಿರೇ” ಚಿತ್ರತಂಡದಿಂದ ದೇವರಾಜ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ “ಉಸಿರೇ ಉಸಿರೇ” ಚಿತ್ರದಲ್ಲಿನ ದೇವರಾಜ್ ರವರ ವಿಭಿನ್ನ ಪಾತ್ರದಲ್ಲಿನ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಯಿತು.
“ಬಿಗ್ ಬಾಸ್” ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮುಂತಾದವರು ಇದ್ದಾರೆ. ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.
ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು.
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ” ಚಿತ್ರದ “ಗಲ್ಲಿ ಬಾಯ್” ಹಾಡನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.
ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ. ನೃತ್ಯ ನಿರ್ದೇಶಕ ಇಮ್ರಾನ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅವರ ಕಾರ್ಯವೈಖರಿ ಚೆನ್ನಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ನವೆಂಬರ್11 ರಂದು ಚಿತ್ರ ತೆರೆಗೆ ಬರಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್.
ಚಿತ್ರ ಚೆನ್ನಾಗಿ ಬಂದಿದೆ. ಈ ಹಾಡಂತೂ ಸಖತಾಗಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಬರೆದಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ ಎಂದರು ನಾಯಕಿ ರೀಷ್ಮಾ ನಾಣಯ್ಯ.
ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು. ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ. ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11 ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.
ಹಾಡು ಬಿಡುಗಡೆ ಮಾಡಿದ ಪ್ರೇಮ್ ಸರ್ ಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನವೆಂಬರ್ 11 ಬಿಡುಗಡೆಯಾಗಲಿದೆ. ತಂಡದರೆಲ್ಲಾ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನಂದಕಿಶೋರ್.
ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.
ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು.
ಚಿತ್ರದಲ್ಲಿ ಅಭಿನಯಿಸಿರುವ ಕೋಟೆ ಪ್ರಭಾಕರ್, ಅಶೋಕ್ , ರಘು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ಮಾತನಾಡಿದರು. ಕೇಶವ್ ಇದ್ದರು.
ಸಿನಿಮಾ ಅನ್ನೋದು ಅದ್ಭುತ ಪ್ರತಿಕ್ರಿಯೆ. ಸಿನಿಮಾ ಪ್ರೀತಿ ಮಾಡೋರಿಗೆ ಸದಾ ಅದರದ್ದೇ ಧ್ಯಾನ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದೆ. ಇಡೀ ಭಾರತೀಯ ಸಿನಿಮಾರಂಗವೇ ಹಾಗೊಮ್ಮೆ ಇತ್ತ ಕಣ್ಣಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಇಲ್ಲಿ ಸಿನಿಮಾ ಮಾಡೋದು ಎಷ್ಟು ಕಷ್ಟ-ಇಷ್ಟ ಅನ್ನೋದು ಅಲ್ಲಿ ಅನುಭವಿಸಿದವರಿಗಷ್ಟೇ ಗೊತ್ತು. ಸಿನಿಮಾ ಮಾಡೋದು ದೊಡ್ಡದ್ದಲ್ಲ. ಅದನ್ನು ರಿಲೀಸ್ ಮಾಡಿ, ವ್ಯಾಪಾರ ವಹಿವಾಟು ನಡೆಸೋದು ಮುಖ್ಯ. ಅದೆಷ್ಟೋ ಸಿನಿಮಾಗಳು ತಯಾರಾಗಿ ರಿಲೀಸ್ ಅಗದೆ ಇಂದಿಗೂ ಆ ಪ್ರಯತ್ನದಲ್ಲಿವೆ. ಹಾಕಿದ ಹಣ ವಾಪಾಸ್ ಪಡೆಯೋದು ಕಷ್ಟ ಅನಿಸಿರುವ ಈ ಸಂದರ್ಭದಲ್ಲೊಂದು ಕನ್ನಡ ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಕನ್ನಡದ ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವುಗಳಿಗೆ ಪ್ರಚಾರವನ್ನೂ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಆ ನಿರ್ಮಾಪಕರಿಗೆ ಸಾಥ್ ನೀಡುವ ಸಂಸ್ಥೆಯೊಂದು ಹುಟ್ಟುಕೊಂಡಿದೆ. ಅಂದಹಾಗೆ, ಅದು ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್’ ಸಂಸ್ಥೆ. ಇದು ಕನ್ನಡ ಸಿನಿ ಜಗತ್ತಿನಲ್ಲಿ ಆರಂಭಗೊಂಡ ಹೊಸ ಸಂಸ್ಥೆ.
ಇದು ಕನ್ಮಡದ ಹಾಸ್ಯ ನಟ ಮಿತ್ರ ಅವರ ಸಾರಥ್ಯದಲ್ಲಿ ಉದ್ಯಮಿ ಮನೀಶ್ ಮೆಹ್ತಾ ಮತ್ತು ಗೆಳೆಯರು ಸೇರಿ ಮಾಡಿರುವ ಸಂಸ್ಥೆ. ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ‘ ಎಂಬ ಬ್ಯಾನರ್ ಮೂಲಕ ಸದಭಿರುಚಿಯ ಸಿನಿಮಾಗಳ ರೈಟ್ಸ್ , ಅವುಗಳ ವಿತರಣೆ, ರಿಲೀಸ್ ಹೊಣೆ ಹಾಗು ಸಿನಿಮಾ ನಿರ್ಮಾಣ ಆಗಲಿದೆ. ಪ್ರಮುಖವಾಗಿ ಈ ಸಂಸ್ಥೆಯ ಉದ್ದೇಶ, ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ಕೆಲಸಕ್ಕೆ ಕೈ ಹಾಕಿದೆ. ತಯಾರಾದ ಚಿತ್ರಗಳು, ತಯಾರಾಗದೆ ಸಮಸ್ಯೆಯಲ್ಲಿರುವ ಸಿನಿಮಾಗಳಿಗೂ ಸಾಥ್ ನೀಡುವ ಕೆಲಸ ಮಾಡಲು ಈ ಸಂಸ್ಥೆ ಮುಂದಾಗಿದೆ.
ಮನೀಶ್ ಮೆಹ್ತಾ ಸಂಸ್ಥೆ ಮುಖ್ಯಸ್ಥ
ಈಗಾಗಲೇ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಡಿ ತಯಾರಾಗಿರುವ ‘ ಡೈಮಂಡ್ ಕ್ರಾಸ್’ ಎಂಬ ಜಾಕಿಚಾನ್ ಮಾದರಿಯ ಕನ್ನಡದ ಆಕ್ಷನ್ ಸಿನಿಮಾವೊಂದರ ರೈಟ್ಸ್ ಪಡೆದು ರಿಲೀಸ್ ಮಾಡಲು ಮುಂದಾಗಿದೆ. ಇದರೊಂದಿಗೆ ಇನ್ನೂ ಹನ್ನೊಂದು ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ತಯಾರಿಯಲ್ಲಿದೆ. ‘ಡೈಮಂಡ್ ಕ್ರಾಸ್’ ಚಿತ್ರವನ್ನು ನಾಗತಿಹಳ್ಳಿ ಅವರ ಅಕ್ಕನ ಮಗ ರಾಮ್ ದೀಪ್ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಧ್ರುವ , ರೋಜರ್ ನಾರಾಯಣ್ ಸೇರಿದಂತೆ ಹಲವರು ಸಿನಿಮಾದಲ್ಲಿದ್ದಾರೆ. ಕನ್ನಡಕ್ಕೆ ಈ ರೀತಿಯ ಒಂದು ಫ್ಲಾಟ್ ಫಾರಂ ಕೊರತೆ ಇತ್ತು. ಅದನ್ನು ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ಸಂಸ್ಥೆ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ.
ಈಗ ಸಿನಿಮಾ ಮಾಡಿ ರಿಲೀಸ್ ಮಾಡೋದು ಕಷ್ಟ ಸಾಧ್ಯ. ಅದರಲ್ಲೂ ಹಾಕಿದ ಬಂಡವಾಳ ಹಿಂದಕ್ಕೆ ಬಂದರೆ ಅದೇ ಗೆಲುವು. ಇಂತಹದರಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬಿಡುಗಡೆಗೆ, ವ್ಯಾಪಾರಕ್ಕೆ ಅಲೆದಾಡುವ ಸ್ಥಿತಿ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಸಿನಿಮಾಗಳ ಖರೀದಿಸಿ, ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.
ಇನ್ನು, ಎಲ್ಲಾ ಸಿನಿಮಾಗಳ ರೈಟ್ಸ್ ಅಸಾಧ್ಯ. ಇಲ್ಲೂ ಕೆಲ ಮಾನದಂಡಗಳಿವೆ. ಸಂಸ್ಥೆಯ ಮುಖ್ಯಸ್ಥ ಮನೀಶ್ ಅವರು ಹೇಳುವಂತೆ, ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವರ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ನಟ ಮಿತ್ರ ಅವರು ಸಿನಿಮಾ ವೀಕ್ಷಿಸಿ, ಅದರ ಕಂಟೆಂಟ್ ಹಾಗು ಕ್ವಾಲಿಟಿ ಪರಿಶೀಲಿಸಿ, ಅದು ಚೆನ್ನಾಗಿದೆ ಎಂದು ಸರ್ಟಿಫಿಕೆಟ್ ಕೊಟ್ಟ ಬಳಿಕವೇ ಆ ಸಿನಿಮಾ ರೈಟ್ಸ್ ಇತ್ಯಾದಿ ಬಗ್ಗೆ ಅಂತಿಮಗೊಳಿಸಲಾಗುತ್ತದೆ ಎನ್ನುತ್ತಾರೆ.
ಮಿತ್ರ ಅವರ ಪ್ರಕಾರ, ಈ ವೇದಿಕೆ ಹುಟ್ಟುಹಾಕಿದ್ದೇ, ಹೊಸ ಪ್ರತಿಭೆಗಳಿಗಂತೆ. ಸಿನಿಮಾ ಮಾಡಿ ರಿಲೀಸ್ ಮಾಡಲಾಗದೆ, ವ್ಯಾಪಾರ ಮಾಡಲಾಗದೆ ಅಸಹಾಯಕರಾಗುವ ನಿರ್ಮಾಪಕರಿಗೆ ಸಾಥ್ ನೀಡಬೇಕೆಂಬ ಉದ್ದೇಶದಿಂದ. ಅದೀಗ ಸಾಕಾರವಾಗುತ್ತಿದೆ. ಈ ವೇದಿಕೆ ಮೂಲಕ ಕನ್ನಡದ ಒಂದಷ್ಟು ಪ್ರತಿಭಾವಂತರನ್ನು ಗಟ್ಟಿಗೊಳಿಸುವ ಸಣ್ಣ ಪ್ರಯತ್ನ ನಮ್ಮದು ಎನ್ನುತ್ತಾರೆ.
ಅದೇನೆ ಇರಲಿ, ಒಳ್ಳೆಯ ಸಿನಿಮಾಗಳು ಜನರಿಗೆ ತಲುಪಬೇಕೆಂಬ ಉದ್ದೇಶ ಈ ಸಂಸ್ಥೆಯದ್ದು. ಈಗಷ್ಟೇ ತನ್ನ ಕಾರ್ಯಕ್ಕೆ ಕೈ ಹಾಕಿರುವ ಈ ಸಂಸ್ಥೆ ಕನ್ನಡದ ಒಂದಷ್ಟು ನಿರ್ಮಾಪಕರಿಗೆ ಸಾಥ್ ನೀಡಲಿ ಅನ್ನೋದು ‘ಸಿನಿಲಹರಿ’ ಆಶಯ.
ನಟರಾಕ್ಷಸ ಡಾಲಿ ಧನಂಜಯ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಡಾಲಿ ನಟನೆಯ ಮಾನ್ಸೂನ್ ರಾಗ ರಿಲೀಸ್ ಆಗಿದ್ದು, ಸದ್ಯ ತೋತಾಪುರಿ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಇದರ ಜೊತೆಗೆ ಹೊಯ್ಸಳ, ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಧನಂಜಯ್ ಅಕೌಂಟ್ ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ.
ಪುಷ್ಪ ಸಿನಿಮಾ ಮೂಲಕ ತೆಲುಗು ಸಿನಿಲೋಕಕ್ಕೂ ಪರಿಚಿತರಾದ ಡಾಲಿ ಈಗ ಬಹುಭಾಷಾ ನಟ. ಹೀಗಾಗಿ ಧನಂಜಯ್ ಗೆ ಬೇಡಿಕೆ ಹೆಚ್ಚಿದ್ದು, ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆ ಚಿತ್ರಕ್ಕೆ ನಟರಾಕ್ಷಸ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾ. ಈ ಚಿತ್ರದಲ್ಲಿ ಧನಂಜಯ್ ಜೊತೆಗೆ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಕೂಡ ಹೌದು..
ಈ ಹಿಂದೆ ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕ್ರೈಮ್ ಕಥೆಯನ್ನೊಳಗೊಂಡ ಈ ಚಿತ್ರವನ್ನು ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ.
ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ ಸಿನಿಮಾಕ್ಕಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
” ಅಧ್ಯಕ್ಷ ” ಚಿತ್ರದಲ್ಲಿ ಚಿಕ್ಕಣ್ಣ “ಉಪಾಧ್ಯಕ್ಷ” ರಾಗಿ ಜನಪ್ರಿಯರಾಗಿದ್ದರು. ಈಗ “ಉಪಾಧ್ಯಕ್ಷ” ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸುತ್ತಿದ್ದಾರೆ.
ಉಮಾಪತಿ ಫಿಲಂಸ್ ಅರ್ಪಿಸುವ, ಡಿ.ಎನ್ ಸಿನಿಮಾಸ್ ಬ್ಯಾನರ್ ನಲ್ಲಿ ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ ಮುಂತಾದ ಕಡೆ ಐವತ್ತಕ್ಕೂ ಅಧಿಕ ದಿನಗಳ ಚಿತ್ರೀಕರಣ ನಡೆದಿದೆ.
ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ಮಲೈಕ ನಟಿಸುತ್ತಿದ್ದಾರೆ. ಸಾಧುಕೋಕಿಲ, ರವಿಶಂಕರ್, ವೀಣಾಸುಂದರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ದೂದ್ ಪೇಡಾ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಅಂಗಳದಿಂದ ಮತ್ತೊಂದು ಹೊಸ ಸಮಾಚಾರ ರಿವೀಲ್ ಆಗಿದೆ. ಇತ್ತೀಚೆಗಷ್ಟೇ ಸರಳವಾಗಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದ್ದು, ಇದೀಗ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಬಳಗಕ್ಕೆ ಪಂಚರಂಗಿ ಬ್ಯೂಟಿ ನಿಧಿ ಸುಬ್ಬಯ್ಯ ಎಂಟ್ರಿ ಕೊಟ್ಟಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಪಂಚರಂಗಿಯಲ್ಲಿ ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾ ಇವರಿಬ್ಬರು ಬ್ರೇಕ್ ನೀಡಿತ್ತು. ಈ ಚಿತ್ರದ ನಂತ್ರ ನಿಧಿ ದಿಗಂತ್ ಮತ್ತೆ ಯಾವುದೇ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಇದೀಗ ಹತ್ತು ವರ್ಷದ ನಂತರ ದಿಗಂತ್ ನಾಯಕನಾಗಿ ನಟಿಸುತ್ತಿರುವ ಎಡಗೈ ಅಪಫಾತ ಚಿತ್ರದಲ್ಲಿ ನಿಧಿ ನಟಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ನಿರ್ದೇಶಕ ಸಮರ್ಥ್ ಕಡ್ಕೋಳ್ ನಿಧಿ ಪಾತ್ರ ಪ್ರೇಕ್ಷಕರಿಗೆ ಪಕ್ಕ ಮನರಂಜನೆ ನೀಡುತ್ತದೆ ಅಂತ ಹೇಳಿದ್ದಾರೆ.
ಸಮರ್ಥ್ ಕಡ್ಕೋಳ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಮರ್ಥ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ವಿಶೇಷವಾದ ಸಬ್ಜೆಕ್ಟ್ ಹೊಂದಿದೆ. ಯಲಹಂಕ ಬಳಿಯ ಲಕ್ಷುರಿ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ಸಿನಿಮಾದ ಚಿತ್ರೀಕರಣ ಶುಕ್ರವಾರದಿಂದ ಆರಂಭವಾಗಿದೆ. ದಿಗಂತ್ ಜೋಡಿಯಾಗಿ ನಾಯಕಿ ಧನು ಹರ್ಷ ನಟಿಸುತ್ತಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ತವಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.
ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮಾದೇವ ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ ಎದುರು ಶ್ರೀನಗರ ಕಿಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.
ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ.
ಹೈದ್ರಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇ. ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.
ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಈಗ ನಟರೂ ಕೂಡ. ಇವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ವಿಜಯ ದಶಮಿ ಶುಭದಿನದಂದು ಆರಂಭವಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹಾಡುಗಳ ಬಿಡುಗಡೆ, ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಸಮಾರಂಭಗಳನ್ನು ಅದ್ದೂರಿಯಾಗಿ ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುವ ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ ಮೀಡಿಯಾ ದ ನವರಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈವರೆಗೂ “ದಮಯಂತಿ” ಸೇರಿದಂತೆ ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದೊಂದಿಗೆ ಕ್ರಿಯೇಟಿವ್ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಬಲ ನಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ ಅಭಿನಯದ, ಆರ್. ಚಂದ್ರು ನಿರ್ದೇಶಿಸಿರುವ, ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಬಿಡುಗಡೆಯಾದ ಕ್ಷಣದಿಂದಲೇ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸುತ್ತಿದೆ.
ಉಪೇಂದ್ರ ಸರ್ ಮುಂದೆ ನಿಂತು ಮಾತನಾಡುವುದಕ್ಕೆ ಭಯ ಆಗತ್ತೆ. ಅಂತಹ ಅದ್ಭುತ ನಟ ಅವರು. ಖ್ಯಾತ ನಟಿ ಶ್ರೀಯಾ ಶರಣ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್. ಚಂದ್ರು ಮತ್ತು ತಂಡದ ಅದ್ಭುತ ಕೆಲಸ ಟೀಸರ್ ನಲ್ಲಿ ಕಾಣುತ್ತಿದೆ. “ಕಬ್ಜ” ಭರ್ಜರಿ ಯಶಸ್ಸು ಕಾಣಲಿ ಎಂದು ರಾಣಾ ದಗ್ಗುಬಾಟಿ ಹಾರೈಸಿದರು.
ನನಗೆ ಆರ್. ಚಂದ್ರು ಅವರು ಕಥೆ ಹೇಳಲು ಬಂದಾಗ, ಕಥೆ ಕೇಳಿ, ನಿಜವಾಗಿಯೂ ಈ ರೀತಿ ಮಾಡಲು ಆಗುವುದಾ? ಅಂತಾ ಕೇಳಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ ಚಂದ್ರು ಅವರ ಕಾರ್ಯ ವೈಖರಿ ನೋಡಿ ಆಶ್ಚರ್ಯವಾಯಿತು. ಈಗಂತೂ ಟೀಸರ್ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ಹೆಚ್ಚಿನ ಕ್ರೆಡಿಟ್ ಚಂದ್ರು ಅವರಿಗೆ ಸೇರಬೇಕು. ಶ್ರೀಯಾ ಅವರ ಅಭಿನಯ ಕೂಡ ಚೆನ್ನಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ರಾಣಾ ಅವರಿಗೆ ಧನ್ಯವಾದ ಎಂದರು ರಿಯಲ್ ಸ್ಟಾರ್ ಉಪೇಂದ್ರ.
ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ನನಗೆ ಖುಷಿಯಾಗಿದೆ. ಅದರಲ್ಲೂ ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿರುವುದು ಹೆಚ್ಚಿನ ಸಂತೋಷ ತಂದಿದೆ. ತುಂಬಾ ಸಹೃದಯಿ, ಸರಳವ್ಯಕ್ತಿ ಅವರು. ಚಂದ್ರು ಸರ್ ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ ಎಂದ ನಾಯಕಿ ಶ್ರೀಯಾ ಶರಣ್, ಟೀಸರ್ ಬಿಡುಗಡೆ ಮಾಡಿದ ರಾಣಾ ಅವರಿಗೆ ಧನ್ಯವಾದ ತಿಳಿಸಿದರು.
“ಕಬ್ಜ” ನನ್ನ ಕನಸು. ಈ ಹಿಂದೆ “ತಾಜ್ ಮಹಲ್”, ” ಚಾರ್ ಮಿನಾರ್”, “ಮೈಲಾರಿ” ನಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ಇದು ಬೇರೆಯದೆ ತರಹದ ಸಿನಿಮಾ. “ಕಬ್ಜ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಅಂದರೆ ಅದು ನನ್ನೊಬ್ಬನಿಂದ ಅಲ್ಲ. ಇಡೀ ತಂಡದಿಂದ. ಅದರಲ್ಲೂ ಉಪೇಂದ್ರ ಸರ್ ಅವರ ಸಹಕಾರ ಅಪಾರ. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಳ್ಳಬೇಕು. ನಾನು ಈ ರೀತಿಯ ಪಾತ್ರವಿದೆ ಅಂತ ಹೇಳಿದೆ. ಅವರು ಒಪ್ಪಿಕೊಂಡು ಅಭಿನಯಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಶ್ರೀಯಾ ಶರಣ್ ಅವರು ಈ ಚಿತ್ರದಲ್ಲಿ ಅಭಿನಯಿಸಿರುವುದು ಹೆಚ್ಚಿನ ಖುಷಿ ತಂದಿದೆ. ಟೀಸರ್ ಬಿಡುಗಡೆ ಮಾಡಿಕೊಡಲು ಕೇಳಿದಾಗ ಒಪ್ಪಿ ಬಂದು ಟೀಸರ್ ಬಿಡುಗಡೆ ಮಾಡಿಕೊಟ್ಟಿರುವುದಕ್ಕೆ ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರಿಗೆ ಹಾಗೂ ಇಂದಿನ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ತುಂಬು ಹೃದಯದ ಧನ್ಯವಾದ.
ನಮ್ಮ”ಕಬ್ಜ” ಚಿತ್ರ ಏಳು ಭಾಷೆಗಳ ಚಿತ್ರವಲ್ಲ. ಒಟ್ಟು ಒಂಭತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಸೇರಿದಂತೆ ಅನೇಕ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು.
ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ಎ ಜೆ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು “ಕಬ್ಜ” ದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಚಿತ್ರಕ್ಕೆ ಶುಭ ಕೋರಿದರು.
ಕೊರೋನ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಬಿಡುಗಡೆಯಾದ ಚಿತ್ರ ಲೂಸ್ ಮಾದ ಯೋಗಿ ಅಭಿನಯದ “ಲಂಕೆ”. ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಇತ್ತೀಚೆಗೆ ನೂರು ದಿನಗಳ ಕಾಲ ಚಿತ್ರ ಪ್ರದರ್ಶನವಾಗುತ್ತಿರುವುದೇ ಕಷ್ಟ. ಅಂತಹದರಲ್ಲಿ ಕನ್ನಡ ಚಿತ್ರವೊಂದು 365 ದಿನಗಳು ಪೂರೈಸಿರುವುದು ಖುಷಿಯ ವಿಚಾರ.
ಈ ಖುಷಿ ಹಂಚಿಕೊಳ್ಳಲು ನಿರ್ದೇಶಕ ಕಮ್ ನಿರ್ಮಾಪಕ ರಾಮ್ ಪ್ರಸಾದ್ ಸಮಾರಂಭ ಆಯೋಜಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.
ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು ನಾಯಕ ಲೂಸ್ ಮಾದ ಯೋಗಿ.
ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನು ನಿರ್ಮಾಪಕರಾದ ಸುರೇಖ ರಾಮ್ ಪ್ರಸಾದ್ ಹಾಗೂ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು.
ಹೊಸ ಚಿತ್ರ ಅನೌನ್ಸ್…
ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ . ನಿಮ್ಮ ಹಾರೈಕೆಯಿರಲಿ ಎಂದ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದರು.
ನಾಯಕಿ ಕೃಷಿ ತಾಪಂಡ, ಚಿತ್ರದಲ್ಲಿ ನಟಿಸಿರುವ ಎಸ್ತರ್ ನರೋನ, ಡ್ಯಾನಿ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಲಂಕೆ” ಯ ಗೆಲುವನ್ನು ಹಂಚಿಕೊಂಡರು.
ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ. ಇದಕ್ಕೆ ಕಾರಣ ರಾಮ್ ಪ್ರಸಾದ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.