ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಸಡಗರ ರಾಘವೇಂದ್ರ ನಿರ್ದೇಶನದ ಆಪರೇಷನ್ ಲಂಡನ್ ಕೆಫೆ ಚಿತ್ರ ತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಅದಕ್ಕೂ ಮೊದಲು ಮರಾಠಿ ಮೂಲದ ಮತ್ತೊಬ್ಬ ಸ್ಟಾರ್ ಕಲಾವಿದ ವಿರಾಟ್ ಮಡಕೆಯ ಮಾಸ್ ಲುಕ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರದ ಒಂದೊಂದೇ ಮಗ್ಗುಲನ್ನು ಹಂತ ಹಂತವಾಗಿ ಚಿತ್ರ ಪ್ರೇಮಿಗಳಿಗೆ ಪರಿಚಯಿಸುತ್ತಿದ್ದಾರೆ.
ಈ ಚಿತ್ರ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದ್ದು ಚಿತ್ರ ರಸಿಕರಿಗೆ ಇಷ್ಟವಾಗುವ ರೀತಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎನ್ನುವುದು ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ತನ್ನ ಮೊದಲನೇ ಚಿತ್ರ ಜಿಲ್ಕಾ ನಂತರ ಕವೀಶ್ ಶೆಟ್ಟಿ ಸಂಪೂರ್ಣ ಮಾಸ್ ಶೈಲಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಈ ಚಿತ್ರದ ಇನ್ನೊಂದು ಹೈಲೈಟ್ ಮೇಘಾ ಶೆಟ್ಟಿ.
ತಮ್ಮ ಸಹಜ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಮೇಘಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದಲ್ಲಿ ಬಜಾರಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ತುಂಬಾ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮರಾಠಿಯ ಶಿವಾನಿ ಸುರ್ವೆ, ವಿರಾಟ್ ಮಡಕೆ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಉಡುಪಿ ಚಿಕ್ಕಮಗಳೂರು ಸುತ್ತಮುತ್ತ ಭಟ್ಕಳ ಕಳಸ ಕಾಡು ಮತ್ತು ಬೆಂಗಳೂರು ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು ಇನ್ನು ಕೆಲವೇ ದಿನಗಳ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸಜ್ಜಾಗುತ್ತಿದೆ. ವಿಜಯ್ ಕುಮಾರ್ ಶೆಟ್ಟಿ ಹವರಾಲ್ ದೀಪಕ್ ರಾಣೆ ರಮೇಶ್ ಕೊಠಾರಿ ಮತ್ತು ವಿಜಯ್ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಮೇಲಿನ ಅಪಾರ ಕನಸೊತ್ತು ಹೊಸಬರ ಚಿತ್ರತಂಡವೊಂದು ಸ್ಯಾಂಡಲ್ ವುಡ್ ಅಂಗಳಕ್ಕೆ ಮೊದಲ ಹೆಜ್ಜೆ ಇಟ್ಟಿದೆ. ಇವರ ಮೊದಲ ಕನಸು, ಪರಿಶ್ರಮ, ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಆ ಚಿತ್ರವೇ ‘ಥಗ್ಸ್ ಆಫ್ ರಾಮಘಡ’. ಈ ಚಿತ್ರದ ಫಸ್ಟ್ ಲುಕ್ ಭಟ್ರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇಂಟ್ರಸ್ಟಿಂಗ್ ಎನಿಸೋ ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರಕ್ಕೆ ಕಾರ್ತಿಕ್ ಮಾರಲಭಾವಿ ಆಕ್ಷನ್ ಕಟ್ ಹೇಳಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಸಿನಿಮಾ ಮೇಲಿನ ಅಪಾರ ಪ್ಯಾಶನ್ ಬಣ್ಣದ ಲೋಕಕ್ಕೆ ಕರೆ ತಂದು ನಿಲ್ಲಿಸಿದೆ. ಆದ್ರಿಂದಲೇ ಕೆಲಸಕ್ಕೆ ಗುಡ್ ಬೈ ಹೇಳಿ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೂಲಕ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಮೂಲತಃ ಯಾದಗಿರಿಯವರಾದ ಕಾರ್ತಿಕ್ ಮಾರಲಭಾವಿ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ.
ಸುರಪುರ, ವಿಜಯಪುರ, ಶಹಪುರ, ತಾಳಿಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ತಂಡ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಸದ್ಯ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರೋ ಚಿತ್ರತಂಡ ಇನ್ಮುಂದೆ ಸಿನಿಮಾದ ಒಂದೊಂದೇ ಸ್ಯಾಂಪಲ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆಯಲು ತಯಾರಿ ಮಾಡಿಕೊಂಡಿದೆ.
ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ವಿಶಾಲ್ ಪಾಟೀಲ್, ರವಿ ಸಾಲಿಯನ್, ರಾಘವೇಂದ್ರ, ಭೀಷ್ಮ, ಲೋಕೇಶ್ ಗೌಡ, ಟೈಗರ್ ಗಂಗ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್.ವೈ.ಎಸ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ
‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಉಡಾಳ್ ಬಾಬು ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಮೋದ್ ‘ಬಾಂಡ್ ರವಿ’ಯಾಗಿ ಹೊಸ ಅವತಾರ ತಾಳಿದ್ದಾರೆ. ಪ್ರಮೋದ್ ಸಿನಿ ಕೆರಿಯರ್ ನ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಮಾಸ್ ಟೀಸರ್ ಹಾಗೂ ಹಾಡಿನ ಮೂಲಕ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 9ರಂದು ‘ಬಾಂಡ್ ರವಿ’ ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾನೆ.
‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ’, ‘ಪ್ರೀಮಿಯರ್ ಪದ್ಮಿನಿ’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಬಾಂಡ್ ರವಿ ಮೂಲಕ ಮಾಸ್ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಆಕ್ಷನ್ ಲವ್ ಸ್ಟೋರಿ ಒಳಗೊಂಡ ಈ ಚಿತ್ರಕ್ಕೆ ಪ್ರಜ್ವಲ್ ಎಸ್.ಪಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಡಿಸೆಂಬರ್ 9ರಂದು ತೆರೆ ಕಾಣುತ್ತಿದೆ.
ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ವಿಜಯ ಪ್ರಕಾಶ್ ದನಿಯಾಗಿರುವ ‘ಮಜ ಮಜ ಮಾಡು ಬಾ’, ಜಯಂತ್ ಕಾಯ್ಕಿಣಿ ಸಾಹಿತ್ಯದ ಸೋನು ನಿಗಂ ದನಿಯಾಗಿರುವ ರೋಮ್ಯಾಂಟಿಕ್ ಸಾಂಗ್ ‘ಸಹಜ ಸಖಿ’ ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಗೆದ್ದಿವೆ.
ನರಸಿಂಹಮೂರ್ತಿ. ವಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಹೊಸ ತಂಡದ ಹೊಸ ಪ್ರಯತ್ನ “ಮಾಂಕ್ ದಿ ಯಂಗ್”. ಇತ್ತೀಚೆಗೆ ಈ ಚಿತ್ರದ ” ಕಣ್ ಗಳೆ ಸೋತು” ಎಂಬ ಹಾಡು ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಹಾಗೂ ಹಿರಿಯ ನಟ ಸುಂದರರಾಜ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಸುಪ್ರೀತ್ ಫಲ್ಗುಣ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಸುಮಧುರ ಕಂಠದ ಗಾಯಕಿ ಐಶ್ವರ್ಯ ರಂಗರಾಜನ್ ಇಂಪಾಗಿ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಮೆಚ್ಚುಗೆ ಪಡೆಯುತ್ತಿದೆ. ಅಶ್ವಿನ್ ಶಾನ್ ಭಾಗ್ ಈ ಹಾಡನ್ನು ಬರೆದಿದ್ದಾರೆ.
ನಮ್ಮ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅಶ್ವಿನ್ ಶಾನ್ ಭಾಗ್ ಬರೆದಿದ್ದಾರೆ. ಖ್ಯಾತ ಗಾಯಕಿಯರಾದ ಐಶ್ವರ್ಯ ರಂಗರಾಜನ್ ಹಾಗೂ ಸಾದ್ವಿನಿ ಕೊಪ್ಪ ಈ ಹಾಡುಗಳನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಸುಪ್ರೀತ್ ಫಲ್ಗುಣ ಮಾಹಿತಿ ನೀಡಿದರು.
ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ, ಎಲ್ಲರ ಸಹಕಾರದಿಂದ ಚೆನ್ನಾಗಿ ಬಂದಿದೆ. ಹಾಡುಗಳಂತೂ ಅದ್ಭುತವಾಗಿದೆ ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ.
ನಾಯಕ ಸರೋವರ್, ನಾಯಕಿ ಸೌಂದರ್ಯ ಗೌಡ, ನಟಿ ಉಷಾ ಭಂಡಾರಿ, ನಟ ಶಿವಪ್ಪ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್, ಲಾಲ್ ಚಂದ್ ಖತಾರ್ ಐದು ಜನ ಸೇರಿ “ಮಾಂಕ್ ದಿ ಯಂಗ್” ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಐದು ಜನ ನಿರ್ಮಾಪಕರು ಮಾತನಾಡಿ, ತಮ್ಮ ನೂತನ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.
ಛಾಯಾಗ್ರಾಹಕ ಕಾರ್ತಿಕ್ ಶರ್ಮ, ನೃತ್ಯ ನಿರ್ದೇಶಕ ಹರ್ಷವರ್ಧನ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರ್ಮಾಪಕ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು. ನಾಡಿನ ಪ್ರಸಿದ್ದ ನೃತ್ಯಗಾರರು ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು.
ಕನ್ನಡ ಚಿತ್ರರಂಗದಲ್ಲಿ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುಕವಿ ಈಗ ನಿರ್ದೇಶಕರಾಗಿ ಟೆಂಪರ್ ಎನ್ನುವ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸೇರಿದಂತೆ 2 ಭಾಷೆಗಳಲ್ಲಿ ನಿರ್ಮಾಣವಾಗಿ, ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಸಮಾರಂಭದಲ್ಲಿ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಧ್ರುವರಾಜ್, ಬಸವರಾಜ್ ಬಣಕಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಕ್ಕಳನ್ನು ಚಿಕ್ಕವರಿದ್ದಾಗಲೇ ಸುಸಂಸ್ಕೃತರನ್ನಾಗಿ ಬೆಳೆಸದೆ ಹೋದರೆ ಮುಂದೆ ಅವರು ಹೇಗೆ ಸಮಾಜಕ್ಕೆ ಹೊರೆಯಾಗುತ್ತಾರೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಮಕ್ಕಳ ಜೊತೆ ತಂದೆ-ತಾಯಿಯ ಬಾಂಧವ್ಯ ಹಾಗೂ ಸ್ನೇಹದ ಕುರಿತಾಗಿ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ ಎಂಬುದು ತಂಡದ ಮಾತು.
ಈ ವೇಳೆ ಮಾತನಾಡಿದ ನಿರ್ದೇಶಕ ಮಂಜುಕವಿ, ಕುಟುಂಬ ಸಮೇತ ನೋಡಬಹುದಾದ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದ್ದು, ಹೊಡಿ ಬಡಿ ಮಾತ್ರವಲ್ಲದೆ, ಒಂದೊಳ್ಳೆಯ ಸಂದೇಶವಿದೆ. ನ್ನ ಜೊತೆ ಕೆಲಸ ಮಾಡಿದ ನಿರ್ದೇಶಕ ತಂಡದ ಸಹಕಾರದಿಂದಲೇ ಚಿತ್ರ ಇಷ್ಟು ಅದ್ಭುತವಾಗಿ ಮೂಡಿಬಂದಿದೆ, ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ನಾಯಕ ಚಿಕ್ಕಹುಡುಗನಾಗಿದ್ದಾಗಿಂದಲೂ ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಂಡು ಟೆಂಪರ್ ಆಗುತ್ತಾನೆ. ತನ್ನ ಗುಣ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಚಿತ್ರದ ಮೂಲಕ ಹೇಳಿದ್ದೇವೆ. ಗ್ಯಾರೇಜ್ ಮೆಕ್ಯಾನಿಕ್ ಆದ ನಾಯಕ ಊರ ಗೌಡನ ಮಗಳು ಗೀತಾಳನ್ನು ಲವ್ ಮಾಡುತ್ತಾನೆ. ಗೌಡನ ಅಟ್ಟಹಾಸವನ್ನು ಮುರಿದು ನಾಯಕ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಎಳೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ 5 ಹಾಡುಗಳನ್ನು ನಾನೇ ಬರೆದಿದ್ದೇನೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಎಲ್ಲರೂ ಥೇಟರಿಗೆ ಬಂದು ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು. ಇನ್ನು ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ರಫಿ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ನಾಯಕ ಆರ್ಯನ್ ಸೂರ್ಯ ಮಾತನಾಡಿ, ಮೊದಲಚಿತ್ರ ಆರಂಭದಲ್ಲಿ ಭಯ ಇತ್ತು. ತಬಲಾನಾಣಿ ಅವರು ಚೆನ್ನಾಗಿ ಮಾಡು ಎಂದು ಧೈರ್ಯ ತುಂಬಿದರು. ಆಕ್ಷನ್ ಚೆನ್ನಾಗಿ ಮಾಡಲು ಮಾಸ್ ಮಾದ ಅವರೇ ಕಾರಣ. ಮೆಕ್ಯಾನಿಕ್ ಆದ ನಾನು ಕೆಟ್ಟದ್ದನ್ನು ನೋಡಿದರೆ ತಕ್ಷಣ ಟೆಂಪರ್ ಆಗುತ್ತೇನೆ, ಅದರಿಂದ ಏನೇನೆಲ್ಲ ಆಯ್ತು ಅನ್ನೋದೆ ಕಥೆ ಎಂದು ಹೇಳಿದರು. ಕಾಶಿಮಾ ಒಂದು ನದಿಯ ಹೆಸರು, ಆ ನದಿಯಂತೆಯೇ ಸಪೂರ ದೇಹ ಹೊಂದಿರುವ ನಾಯಕಿ ತನ್ನ ಪಾತ್ರದ ಕುರಿತಂತೆ ಮಾತನಾಡುತ್ತ ಚಿತ್ರದಲ್ಲಿ ನಾನು ಒಬ್ಬ ಮೆಡಿಕಲ್ ಸ್ಟೂಡೆಂಟ್ ಹಾಗೂ ಊರಗೌಡನ ಮಗಳು. ಮೆಕ್ಯಾನಿಕ್ ಒಬ್ಬನನ್ನು ಲವ್ ಮಾಡುತ್ತೇನೆ, ಆ ವಿಷಯ ನಮ್ಮ ಮನೆಯಲ್ಲಿ ಗೊತ್ತಾದ ನಂತರ ಏನಾಗುತ್ತೆ ಅನ್ನೋದು ಚಿತ್ರದಲ್ಲಿದೆ ಎಂದು ಹೇಳಿದರು.
ನಟ ಮಿತ್ರ ಮಾತನಾಡಿ, ಮಂಜು ಪ್ರತಿಭಾವಂತ ಬರಹಗಾರ, ಸ್ನೇಹ ಮತ್ತು ಸಂಬಂಧದ ಸಾರವನ್ನು ಹೇಳುವ ಚಿತ್ರವಿದು. ಹಾಸ್ಯ ಇದ್ದರೂ ಮೆಚ್ಯೂರ್ ಆದಂಥ ಪಾತ್ರವನ್ನು ಮಾಡಿದ್ದೇನೆ ಎಂದು ಹೇಳಿದರು. ಶ್ರೀಬಾಲಾಜಿ ಎಂಟರ್ ಪ್ರೈಸಸ್ ಮೂಲಕ ವಿ. ವಿನೋದ್‌ಕುಮಾರ್ ಹಾಗೂ ಮೋಹನಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪತ್ರಕರ್ತ ಧನು ಯಲಗಚ್ ಹಾಗೂ ಮಜಾಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ ನಾಯಕನ ತಂದೆ, ತಾಯಿಯಾಗಿ ನಟಿಸಿದ್ದಾರೆ. ನಾಯಕನ ಬಾಲ್ಯದ ಪಾತ್ರವನ್ನು ಮಾಸ್ಟರ್ ಪವನ್ ಮೋರೆ ಮಾಡಿದ್ದಾರೆ. ಈ ಚಿತ್ರದಲ್ಲಿ ೫ ಹಾಡುಗಳಿದ್ದು ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾವರ್ಕ್ ಚಿತ್ರಕ್ಕಿದೆ.
ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ರವರು ಜಂಟಿಯಾಗಿ ನಿರ್ಮಿಸಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ ‘ಪದವಿಪೂರ್ವ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಫ್ರೆಂಡ್ಶಿಪ್ ಸಾಂಗ್ ಮೂಲಕ ಈಗಾಗಲೇ ಭರ್ಜರಿ ಸದ್ದು ಮಾಡಿರುವ ಚಿತ್ರ ಡಿಸೆಂಬರ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶರತ್ ಲೋಹಿತಾಶ್ವ, ರಂಗಾಯಣ ರಘು, ರಾಮಾರಾಮಾರೆ ಖ್ಯಾತಿಯ ನಟರಾಜ್ ಭಟ್ ನಟಿಸಿದ್ದು ಯೋಗರಾಜ್ ಭಟ್, ನಟಿ ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂದ್‌ಕುರ್, ಶ್ರೀ ಮಹದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪದವಿಪೂರ್ವ ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಣ್ಚಳಕ ಹಾಗು ಮಧು ತುಂಬಕೆರೆಯ ಸಂಕಲನದ ಕೈಚಳಕ ಚಿತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.
ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಕಾಲ ಎನ್ನಬಹುದು. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಚಿತ್ರರಸಿಕರು ಒಪ್ಪಿಕೊಂಡು, ಯಶಸ್ವಿಗೊಳಿಸಿದ್ದಾರೆ. ಅಂತಹುದೇ ವಿಭಿನ್ನ ಕಥೆಯ “ಇನಾಮ್ದಾರ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೀಸರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ ಸಂಘರ್ಷದ ಕಥೆ. “ಇನಾಮ್ದಾರ್” ಚಿತ್ರಕ್ಕೆ “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಳಗಾವಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಡಬ್ಬಿಂಗ್ ಸಹ ಪೂರ್ಣವಾಗಿದೆ. ಚಿತ್ರ ಹೇಗೆ ಬಂದಿದೆ ಎಂದು ಟೀಸರ್ ಮೂಲಕ ತೋರಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ನನ್ನ ಕನಸಿಗೆ ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ತಾವು ಕೂಡ ಒಂದು ಪಾತ್ರ ಮಾಡಿರುವುದಾಗಿ ಹೇಳಿದರು.
ನನ್ನದು ಈ ಚಿತ್ರದಲ್ಲಿ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಬಣ್ಣ ಹಾಕಲು ಎರಡು ಗಂಟೆ ಹಿಡಿಸಿದರೆ, ತೆಗೆಯಲು ಐದು ಗಂಟೆ ಹಿಡಿಸುತ್ತಿತ್ತು ಎಂದು ಚಿತ್ರೀಕರಣದ ಅನುಭವವನ್ನು ಪ್ರಮೋದ್ ಶೆಟ್ಟಿ ಹಂಚಿಕೊಂಡರು.
ಅಭಿನಯದ ಅನುಭವವಿಲ್ಲದ ನನಗೆ ಅಭಿನಯ ಹೇಳಿಕೊಟ್ಟವರು ನಿರ್ದೇಶಕರು. ನನ್ನ ಅಭಿನಯ ಚೆನ್ನಾಗಿ ಬಂದಿದ್ದರೆ, ಅದಕ್ಕೆ ನಿರ್ದೇಶಕರೆ ಕಾರಣ ಎಂದರು ನಿರಂಜನ್ ಛತ್ರಪತಿ.
ನಿರ್ದೇಶಕ ಸಂದೇಶ್ ನನ್ನ ಆತ್ಮೀಯ ಸ್ನೇಹಿತ. ಚಿತ್ರದ ಟೀಸರ್ ನೋಡಿ ಖುಷಿಯಾಗಿದೆ. ಚಿತ್ರ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆ ಮೂಡಿದೆ ಎಂದರು ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು.
ನಾಯಕಿಯರಾದ ಚಿರಶ್ರೀ ಅಂಚಿನ್, ಎಸ್ತರ್ ನರೋನ್ಹಾ, ಚಿತ್ರದಲ್ಲಿ ನಟಿಸಿರುವ ಎಂ.ಕೆ.ಮಠ, ರಘು ಪಾಂಡೇಶ್ವರ ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ರಾಕಿ ಸೋನು, ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಹಾಗೂ ನೃತ್ಯ ನಿರ್ದೇಶಕಿ ಗೀತಾ ಸಾಯಿ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.
ಕನ್ಮಡ ಚಿತ್ರರಂಗಕ್ಕೆ ಮತ್ತೊಬ್ಬ ಚೆಲುವೆಯ ಆಗಮನವಾಗುತ್ತಿದೆ. ಹೌದು, ಈಗಾಗಲೇ ಹಲವು ಸ್ಟಾರ್ ನಟರ ಮಕ್ಕಳು ಕನ್ನಡ ಸಿನಿ ಜಗತ್ತಿಗೆ ಕಾಲಿಟ್ಟಾಗಿದೆ. ಆ ಸಾಲಿಗೆ ಬ್ಯೂಟಿಫುಲ್ ಹೊಸ ನಾಯಕಿಯ ಆಗಮನಾವಗುತ್ತಿದೆ. ಅದು ಬೇರಾರೂ ಅಲ್ಲ, ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಅಮೃತ ಪ್ರೇಮ್
ಇದು ಎಲ್ಲರಿಗೂ ಅಚ್ಚರಿ ಆಗಬಹುದು. ಆದರೂ ಇದು ನಿಜ. ಪ್ರೇಮ್ ಪುತ್ರಿ ಆಮೃತ ಅವರು ಸಿನಿಮಾಗೆ ಕಾಲಿಡುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಯಾಕೆಂದರೆ, ಲವ್ಲಿ ಪ್ರಿನ್ಸಸ್ ಗೆ ತಾನೊಬ್ಬ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಅದರಂತೆಯೇ ಅಮೃತ ಅವರ ಪ್ರೀತಿಯ ಅಪ್ಪ ಪ್ರೇಮ್ ಕೂಡ ಮಗಳ ಆಸೆಯಂತೆಯೇ ಓದಿಸುವತ್ತ ಚಿತ್ತ ಹರಿಸಿದ್ದರು. ಮೆಡಿಕಲ್ ವಿಷಯಕ್ಕೆ ಸಂಬಂಧಿಸಿದಂತೆಯೇ ಅಮೃತ ಬಯೋಮೆಡಿಕಲ್ ಕೋರ್ಸ್ ಮಾಡುತ್ತಿದ್ದರು.
ಮಗಳ ಸಿನಿಮಾಗೆ ಪ್ರೇಮ್ ಟ್ವೀಟ್…
ಹಾಗೊಮ್ಮೆ ಸಡನ್ ಆಗಿ ಪ್ರೇಮ್ ಅವರ ಬಳಿ ಮಗಳನ್ನು ಸಿನಿಮಾ ನಾಯಕಿ ಕುರಿತ ವಿಷಯ ಚರ್ಚೆ ಆಗುತ್ತೆ. ಸರಿ, ಪ್ರೇಮ್ ಕೂಡ, ಮಗಳ ಬಳಿ ಬಂದು ಮಗಳೇ ಹೀಗೊಂದು ಒಳ್ಳೆಯ ಬ್ಯಾನರ್ ಮತ್ತು ಕಥೆ ಇರುವ ಸಿನಿಮಾಗೆ ಆಫರ್ ಬಂದಿದೆ ಮಾಡ್ತೀಯ ಅಂದಿದ್ದಾರೆ. ಮಗಳು ಅಮೃತ ಕೂಡ ಹಿಂದೆ ಮುಂದೆ ನೋಡದೆ, ಯೆಸ್ ಪಪ್ಪಾ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಂದಹಾಗೆ, ಪ್ರೇಮ್ ಪುತ್ರಿಗೆ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ಡಾಲಿ ಧನಂಜಯ್ ಅವರ ಡಾಲಿ ಫಿಲಂಸ್ ಬ್ಯಾನರ್ ಚಿತ್ರ. ಹೆಸರು ‘ಟಗರು ಪಲ್ಯ’ ಇದು ಡಾಲಿ ಧನಂಜಯ ನಿರ್ಮಾಣದ ಸಿನಿಮಾ. ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶಿಸುತ್ತಿದ್ದಾರೆ.
ಇದೊಂದು ಹಳ್ಳಿ ವಾತಾವರಣದಲ್ಲಿ ನಡೆಯೋ ಕಥೆ. ಅದರಲ್ಲೂ ಮಹಿಳಾ ಪ್ರಧಾನ ಕಥೆ ಆಗಿರುವುದರಿಂದ ಮಿಸ್ ಆಗಬಾರದು ಅಂತ ಪ್ರೇಮ್ ಕೂಡ ಮಗಳಿಗೆ ಸಾಥ್ ನೀಡಿದ್ದಾರೆ. ಕಥೆಯ ಒನ್ ಲೈನ್ ಕೇಳಿಯೇ ಅಮೃತ ಕೂಡ ನಟಿಸಲು ಒಪ್ಪಿದ್ದಾರೆ.
ಸದ್ಯ ಅಮೃತ ಅವರು ಕಳೆದ ಹತ್ತು ದಿನಗಳಿಂದ ಚಿತ್ರತಂಡದ ವರ್ಕ್ ಶಾಪ್ ನಲ್ಲಿ ತೊಡಗಿಕೊಂಡಿದ್ದಾರೆ. ಯಶಸ್ವಿನಿ ಎನ್ನುವವರು ಅಮೃತಗೆ ತರಬೇತಿ ನೀಡುತ್ತಿದ್ದಾರೆ. ಡಿಸೆಂಬರ್ 1 ರಿಂದ ‘ಟಗರು ಪಲ್ಯ’ ಚಿತ್ರಕ್ಕೆ ಚಾಲನೆ ಸಿಗಲಿದೆ. ಬಹುತೇಕ ಕರ್ನಾಟಕದಲ್ಲೇ ಚಿತ್ರೀಕರಣ ನಡೆಯಲಿದೆ.
ಅದೇನೆ ಇರಲಿ, ಲವ್ಲಿ ಸ್ಟಾರ್ ಕೂಡ ಸಕ್ಸಸ್ ಸಿನಿಮಾ ಕೊಡುವ ಮೂಲಕ ಚಿತ್ರರಂಗದ ಬೇಡಿಕೆ ನಟರಾಗಿದ್ದಾರೆ. ಈಗ ಲವ್ಲಿ ಪ್ರಿನ್ಸಸ್ ಕಲರವ ಶುರುವಾಗುತ್ತಿದೆ. ಅಮೃತ ಪ್ರೇಮ್ ಅವರ ಹೊಸ ಜರ್ನಿ ಚೆನ್ನಾಗಿರಲಿ ಅನ್ನೋದು ಸಿನಿಲಹರಿ ಆಶಯ.
ಹೊಂಬಾಳೆ ಫಿಲಂಸ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸುತ್ತಿರುವ ‘ಧೂಮಂ’ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ಹಾಗು ಕಾಂತಾರ ನಿರ್ದೇಶಕ ರಿಷಭ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ ಮುಂತಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಚಿತ್ರೀಕರಣದಲ್ಲಿ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ ಮತ್ತಿತರರು ಭಾಗವಹಿಸಿದ್ದು ಅವರೊಂದಿಗೆ ಒಂದಷ್ಟು ಮಾತುಕತೆ ನಡೆಸಿದ್ಣದಾರೆ.
‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣವಿದೆ.
ಚಿತ್ರ : ಖಾಸಗಿ ಪುಟಗಳು ನಿರ್ದೇಶನ : ಸಂತೋಷ್ ಶ್ರೀಕಂಠಪ್ಪ ನಿರ್ಮಾಣ : ಮಂಜು, ವೀಣಾ , ಮಂಜುನಾಥ್ ಸಂಗೀತ : ವಾಸುಕಿ ವೈಭವ್ ಛಾಯಾಗ್ರಾಹಕ : ವಿಶ್ವಜಿತ್ ರಾವ್ ತಾರಾಗಣ : ವಿಶ್ವ , ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಚೇತನ್ ದುರ್ಗ ನಂದಕುಮಾರ್, ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್, ಮೋಹನ್ ಜುನೇಜ ಇತರರು.
ಸಿನಿಮಾ ಅಂದರೆ, ಕಿವಿಗೆ ಇಂಪೆನಿಸಬೇಕು, ಕಣ್ಣಿಗೂ ತಂಪೆನಿಸಬೇಕು ಇವೆರೆಡರ ಹೊರತಾಗಿ ಹೃದಯಕ್ಕೆ ನಾಟುವಂತಿರಬೇಕು. ಜೊತೆಗೆ ಮತ್ತೆ ಮತ್ತೆ ಕಾಡುವ ಹಾಗು ನೋಡುವಂತಿರಬೇಕು. ಈ ಮೇಲಿನ ಎಲ್ಲಾ ಅರ್ಹತೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಅಂತಹ ಗುಣಗಳಿರುವ ಸಿನಿಮಾ ಸಾಲಿಗೆ ‘ಖಾಸಗಿ ಪುಟಗಳು’ ಸಿನಿಮಾವೂ ಸೇರಿದೆ.
ಅವರಿಬ್ಬರದು ಮೊದಲ ನೋಟಕ್ಕೆ ಬಿದ್ದ ಪ್ರೀತಿ. ಆ ಪ್ರೀತಿ ಮೇಲೆ ಯಾರ ಕಣ್ಣೂ ಬೀಳಲ್ಲ. ಗೆಳೆಯರ ಸಾಥ್ ಒಂದಷ್ಟು ಮನ್ ಕೀ ಬಾತ್ ಫಲಿಸುವ ಪ್ರೀತಿಯ ತಾಕತ್ತು. ಕರಾವಳಿಯ ಹಿನ್ನೆಲೆಯಲ್ಲಿ ಅರಳುವ ಸುಂದರ ಪ್ರೇಮ ಕಾವ್ಯ ಇಡೀ ಸಿನಿಮಾದ ಹೈಲೆಟ್. ಅವಳು ಮತ್ತು ಅವನ ನಡುವೆ ನಿಷ್ಕಲ್ಮಷ ಪ್ರೀತಿ. ಅದಮ್ಯ ನಂಬಿಕೆ, ನಿಟ್ಟಿರಲಾರದ ಗಟ್ಟಿ ಗೆಳೆತನ, ಲವಲವಿಕೆ ತುಂಬಿರುವ ಕಾಲೇಜ್ ಲೈಫು, ಅಲ್ಲಲ್ಲಿ ನೋವು, ನಲಿವು… ಇದು ಸಿನಿಮಾದೊಳಗಿನ ಹೂರಣ.
ಮುಗ್ಧ ಮನಸುಗಳ ಮೇಲಿನ ಪ್ರೀತಿ ಸುತ್ತವೇ ತಿರುಗುವ ಭೂಮಿ, ಸೂರ್ಯನ ಪ್ರೇಮಕ್ಕೆ ಜೈ ಅನ್ನದಿರಲಾರದು. ಅಷ್ಟರಮಟ್ಟಿಗೆ ನಿರ್ದೇಶಕರು ಇಲ್ಲೊಂದುಪ್ರೇಮ ದೃಶ್ಯ ಕಾವ್ಯ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವ ಪ್ರತಿಯೊಬ್ಬರಲ್ಲೂ ತಮ್ಮ ಕಾಲೇಜು ದಿನಗಳ ಪ್ರೀತಿ ಪ್ರೇಮದ ಛಾಯೆ ಹಾಗೊಮ್ಮೆ ಹಾದು ಹೋಗದೆ ಇರದು. ಇಲ್ಲಿ “ಖಾಸಗಿ ಪ್ರೀತಿಯ ವಿಷಯಗಳದ್ದೇ ದರ್ಬಾರು. ಅಂತಹ ಅದೆಷ್ಟೋ ಸೂಕ್ಷ್ಮ ಸಂವೇದನೆಯ ವಿಷಯಗಳು ಖಾಸಗಿ ಪುಟಗಳಲ್ಲಿ ದಾಖಲಾಗಿ, ಕಣ್ ಒದ್ದೆಯಾಗಿಸುವಂತೆ ಮಾಡುತ್ತವೆ.
ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಖಾಸಗಿ ವಿಷಯ ಕಾಮನ್. ಚಿತ್ರದ ಹೀರೋ ಸೂರ್ಯನ ಫ್ಲ್ಯಾಶ್ ಬ್ಯಾಕ್ ಕಥೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಕಾಲೇಜು ಓದುವ ಸೂರ್ಯನಿಗೆ ಅದೇ ಕಾಲೇಜಿಗೆ ಓದಲು ಬರುವ ಭೂಮಿ ಇಷ್ಟವಾಗುತ್ತಾಳೆ. ಆ ಇಷ್ಟ ಪ್ರೀತಿಗೆ ತಿರುಗಿ ಇನ್ನೇನು ಗಟ್ಟಿಮೇಳಕ್ಕೆ ಸಜ್ಜಾಗುತ್ತಾರೆ. ನೋಡುಗರಿಗೆ ಅದೆಂಥಾ ಪ್ರೀತಿ ಮಾಯೆ ಅಂತೆನಿಸಿ, ಮಂದಹಾಸ ಬೀರುತ್ತಲೇ ಇಡೀ ಸಿನಿಮಾ ಕಥೆಯೊಳಗೆ ತಲ್ಲೀನರಾಗುವಷ್ಟರ ಮಟ್ಟಿಗೆ ಸೂರ್ಯ, ಭೂಮಿ ಆವರಿಸಿಕೊಳ್ಳುತ್ತಾರೆ. ಅವರೊಂದಿಗೆ ಸೂರ್ಯನ ಗೆಳೆಯರ ತುಂಟಾಟ, ಕಚಗುಳಿ ಮಾತು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.
ಕಾಲೇಜು ಅಂದಮೇಲೆ ತರಲೆ, ರಗಳೆ ಸಹಜ. ಅದು ಇಲ್ಲೂ ಇದೆ. ಫಸ್ಟ್ ಬೆಂಚ್ ಸ್ಟೂಡೆಂಟ್ ಹಾಗು ಲಾಸ್ಟ್ ಬೆಂಚ್ ಸ್ಟೂಡೆಂಟ್ ಬಗ್ಗೆ ಗುಣಗಾನವೂ ಇದೆ.
ಇಲ್ಲಿ ಪ್ರೀತಿ ಗೀತಿ ಇತ್ಯಾದಿಯ ಜೊತೆಗೊಂದು ಭಾವನಾತ್ಮಕ ಬೆಸುಗೆ ಇದೆ. ಅದು ಏನು ಅನ್ನೋದಕ್ಕೆ ಸಿನಿಮಾ ನೋಡಲೇಬೇಕು. ಅಲ್ಲಲ್ಲಿ ನಗು ಜೊತೆ ಭಾವುಕತೆಯೂ ತುಂಬಿದೆ. ಕೆಲ ಸನ್ನಿವೇಶಗಳು ಎದೆಭಾರವಾಗಿಸುತ್ತ ಹೋಗುತ್ತೆ. ಅಲ್ಲಲ್ಲಿ ಕೆಲವು ಟ್ವಿಸ್ಟು ಟೆಸ್ಟುಗಳ ನಡುವೆ ಸಿನಿಮಾ ಕಾಡುತ್ತಲೇ ಹೋಗುತ್ತೆ. ಮೊದಲರ್ಧ ಒಂದು ರೀತಿ ಕಾಡಿದರೆ, ದ್ವಿತಿಯಾರ್ಧ ಕಾಡುವ ರೀತಿಯೇ ಬೇರೆ. ಈ ಕಾಡುವಿಕೆಯ ಅನುಭವ ನಿಮಗೂ ಆಗಬೇಕಾದರೆ ಮಿಸ್ ಮಾಡದೆ ಹೊಸಬರ ಖಾಸಗಿ ಪ್ರೀತಿಗೆ ಜೈ ಅಂದು ಬನ್ನಿ.
ಇನ್ನು, ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಅವರಿಗೆ ಪ್ರೀತಿಯ ಬಡಿತ ಹೇಗಿರುತ್ತೆ ಅನ್ನುವುದರ ಅರಿವಿದೆ. ಅದನ್ನು ಚೆಂದವಾಗಿ ಕಟ್ಟಿ ಕೊಟ್ಟಿದ್ದಾರೆ. ಪ್ರೀತಿ ವಿಷಯದ ಜೊತೆ ಕಥೆಯ ಖಾಸಗಿ ಪುಟದಲ್ಲಿ ಅಪ್ಪ ಮಗಳ ಪ್ರೀತಿ, ಅಪ್ಪ ಮಗನ ಬಾಂಧವ್ಯ, ಗೆಳೆಯರ ಸಹಕಾರ, ಉಪನ್ಯಾಸಕರ ಪ್ರೋತ್ಸಾಹ ಒಂದಷ್ಟು ದುಗುಡ- ದುಮ್ಮಾನಗಳನ್ನು ಬ್ಯಾಲೆನ್ಸ್ ಮಾಡಿ ಚೆಂದದ ಪ್ರೀತಿಯ ‘ಪುಟ’ ವಿನ್ಯಾಸ ಮಾಡಿದ್ದಾರೆ.
ಸಿನಿಮಾದ ಮತ್ತೊಂದು ಹೈಲೆಟ್ ಅಂದರೆ, ಅದು ವಿಶ್ವಜಿತ್ ರಾವ್ ಅವರ ಕ್ಯಾಮೆರಾ ಕೈಚಳಕ. ಇಡೀ ಪ್ರೀತಿಯ ಪುಟವನ್ನು ಕರಾವಳಿಯ ನೇಸರದಲ್ಲಿ ಅದ್ಭುತ ಎನಿಸುವಂತೆ ಹಿಡಿದಿಟ್ಟಿದ್ದಾರೆ. ಪ್ರತಿ ಫ್ರೇಮ್ ಕೂಡ ಕಣ್ಣಿಗೆ ಇಷ್ಟವಾಗುವಂತೆ ತಮ್ಮ ಕ್ಯಾಮೆರಾ ಕೆಲಸ ತೋರಿಸಿದ್ದಾರೆ.
ಈ ಸಿನಿಮಾ ಇಷ್ಟವಾಗೋಕೆ ಮತ್ತೊಂದು ಕಾರಣ, ಹಿನ್ನೆಲೆ ಸಂಗೀತ ಮತ್ತು ಹಾಡು. ವಾಸುಕಿ ವೈಭವ್ ಅವರ ಸಂಗೀತದ ವೈಭವ ಇಲ್ಲೂ ಅರಳಿದೆ. ಕಥೆಗೆ ಪೂರಕವಾಗಿ ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗಿತ ಹರಿದಾಡಿದೆ.
ಇನ್ನು, ಇಡೀ ಸಿನಿಮಾವನ್ನು ನಾಯಕ ವಿಶ್ವ ಹೆಗಲ ಮೇಲೆ ಹೊತ್ತಿದ್ದಾರೆ. ನಟನೆ, ಫೈಟು ಎರಡರಲ್ಲೂ ಇಷ್ಟವಾಗುತ್ತಾರೆ. ಮುಗ್ಧ ಪ್ರೇಮಿಯಾಗಿ ಕೊನೆಯವರೆಗೂ ಕಾಡುತ್ತಾರೆ.
ನಾಯಕಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕೂಡ ಗಮನ ಸೆಳೆಯುತ್ತಾರೆ. ಸಿನಿಮಾ ವೇಗಕ್ಕೆ ಗೆಳೆಯರಾಗಿ ಕಾಣಿಸಿಕೊಂಡಿರುವ ಚೇತನ್ ದುರ್ಗ, ಶ್ರೀಧರ್ ಗಂಗಾವತಿ, ನಂದ ಗೋಪಾಲ್ ಇಷ್ಟವಾಗುತ್ತಾರೆ.
ಒಟ್ಟಾರೆ ‘ಖಾಸಗಿ ಪುಟಗಳ’ನ್ನು ನೋಡಿ ಹೊರಬಂದವರಿಗೆ ಎದೆಯ ಪುಟದಲ್ಲಿ ಅಡಗಿ ಕೂತ ಒಂದೊಂದೆ ವಿಷಯಗಳು ಮತ್ತೆ ಮತ್ತೆ ನೆನಪಾಗದೇ ಇರದು…