ಟೆಂಪರ್ ಟ್ರೇಲರ್ ರಿಲೀಸ್: ಲವ್ವು-ಕೋಪ ಇತ್ಯಾದಿಯ ಹೊಸ ಕಥೆ…

ಕನ್ನಡ ಚಿತ್ರರಂಗದಲ್ಲಿ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುಕವಿ ಈಗ ನಿರ್ದೇಶಕರಾಗಿ ಟೆಂಪರ್ ಎನ್ನುವ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸೇರಿದಂತೆ 2 ಭಾಷೆಗಳಲ್ಲಿ ನಿರ್ಮಾಣವಾಗಿ, ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಸಮಾರಂಭದಲ್ಲಿ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಧ್ರುವರಾಜ್, ಬಸವರಾಜ್ ಬಣಕಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಮಕ್ಕಳನ್ನು ಚಿಕ್ಕವರಿದ್ದಾಗಲೇ ಸುಸಂಸ್ಕೃತರನ್ನಾಗಿ ಬೆಳೆಸದೆ ಹೋದರೆ ಮುಂದೆ ಅವರು ಹೇಗೆ ಸಮಾಜಕ್ಕೆ ಹೊರೆಯಾಗುತ್ತಾರೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಮಕ್ಕಳ ಜೊತೆ ತಂದೆ-ತಾಯಿಯ ಬಾಂಧವ್ಯ ಹಾಗೂ ಸ್ನೇಹದ ಕುರಿತಾಗಿ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ ಎಂಬುದು ತಂಡದ‌ ಮಾತು.


ಈ ವೇಳೆ ಮಾತನಾಡಿದ ನಿರ್ದೇಶಕ ಮಂಜುಕವಿ, ಕುಟುಂಬ ಸಮೇತ ನೋಡಬಹುದಾದ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಇದಾಗಿದ್ದು, ಹೊಡಿ ಬಡಿ ಮಾತ್ರವಲ್ಲದೆ, ಒಂದೊಳ್ಳೆಯ ಸಂದೇಶವಿದೆ. ನ್ನ ಜೊತೆ ಕೆಲಸ ಮಾಡಿದ ನಿರ್ದೇಶಕ ತಂಡದ ಸಹಕಾರದಿಂದಲೇ ಚಿತ್ರ ಇಷ್ಟು ಅದ್ಭುತವಾಗಿ ಮೂಡಿಬಂದಿದೆ, ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ನಾಯಕ ಚಿಕ್ಕಹುಡುಗನಾಗಿದ್ದಾಗಿಂದಲೂ ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಂಡು ಟೆಂಪರ್ ಆಗುತ್ತಾನೆ. ತನ್ನ ಗುಣ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಚಿತ್ರದ ಮೂಲಕ ಹೇಳಿದ್ದೇವೆ. ಗ್ಯಾರೇಜ್ ಮೆಕ್ಯಾನಿಕ್ ಆದ ನಾಯಕ ಊರ ಗೌಡನ ಮಗಳು ಗೀತಾಳನ್ನು ಲವ್ ಮಾಡುತ್ತಾನೆ. ಗೌಡನ ಅಟ್ಟಹಾಸವನ್ನು ಮುರಿದು ನಾಯಕ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಎಳೆ.

ಚಿತ್ರದ ಕಥೆ, ಚಿತ್ರಕಥೆ ಹಾಗೂ 5 ಹಾಡುಗಳನ್ನು ನಾನೇ ಬರೆದಿದ್ದೇನೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಎಲ್ಲರೂ ಥೇಟರಿಗೆ ಬಂದು ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು. ಇನ್ನು ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ರಫಿ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ನಾಯಕ ಆರ್ಯನ್ ಸೂರ್ಯ ಮಾತನಾಡಿ, ಮೊದಲಚಿತ್ರ ಆರಂಭದಲ್ಲಿ ಭಯ ಇತ್ತು. ತಬಲಾನಾಣಿ ಅವರು ಚೆನ್ನಾಗಿ ಮಾಡು ಎಂದು ಧೈರ್ಯ ತುಂಬಿದರು. ಆಕ್ಷನ್ ಚೆನ್ನಾಗಿ ಮಾಡಲು ಮಾಸ್ ಮಾದ ಅವರೇ ಕಾರಣ. ಮೆಕ್ಯಾನಿಕ್ ಆದ ನಾನು ಕೆಟ್ಟದ್ದನ್ನು ನೋಡಿದರೆ ತಕ್ಷಣ ಟೆಂಪರ್ ಆಗುತ್ತೇನೆ, ಅದರಿಂದ ಏನೇನೆಲ್ಲ ಆಯ್ತು ಅನ್ನೋದೆ ಕಥೆ ಎಂದು ಹೇಳಿದರು. ಕಾಶಿಮಾ ಒಂದು ನದಿಯ ಹೆಸರು, ಆ ನದಿಯಂತೆಯೇ ಸಪೂರ ದೇಹ ಹೊಂದಿರುವ ನಾಯಕಿ ತನ್ನ ಪಾತ್ರದ ಕುರಿತಂತೆ ಮಾತನಾಡುತ್ತ ಚಿತ್ರದಲ್ಲಿ ನಾನು ಒಬ್ಬ ಮೆಡಿಕಲ್ ಸ್ಟೂಡೆಂಟ್ ಹಾಗೂ ಊರಗೌಡನ ಮಗಳು. ಮೆಕ್ಯಾನಿಕ್ ಒಬ್ಬನನ್ನು ಲವ್ ಮಾಡುತ್ತೇನೆ, ಆ ವಿಷಯ ನಮ್ಮ ಮನೆಯಲ್ಲಿ ಗೊತ್ತಾದ ನಂತರ ಏನಾಗುತ್ತೆ ಅನ್ನೋದು ಚಿತ್ರದಲ್ಲಿದೆ ಎಂದು ಹೇಳಿದರು.


ನಟ ಮಿತ್ರ ಮಾತನಾಡಿ, ಮಂಜು ಪ್ರತಿಭಾವಂತ ಬರಹಗಾರ, ಸ್ನೇಹ ಮತ್ತು ಸಂಬಂಧದ ಸಾರವನ್ನು ಹೇಳುವ ಚಿತ್ರವಿದು. ಹಾಸ್ಯ ಇದ್ದರೂ ಮೆಚ್ಯೂರ್ ಆದಂಥ ಪಾತ್ರವನ್ನು ಮಾಡಿದ್ದೇನೆ ಎಂದು ಹೇಳಿದರು.
ಶ್ರೀಬಾಲಾಜಿ ಎಂಟರ್ ಪ್ರೈಸಸ್ ಮೂಲಕ ವಿ. ವಿನೋದ್‌ಕುಮಾರ್ ಹಾಗೂ ಮೋಹನಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪತ್ರಕರ್ತ ಧನು ಯಲಗಚ್ ಹಾಗೂ ಮಜಾಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ ನಾಯಕನ ತಂದೆ, ತಾಯಿಯಾಗಿ ನಟಿಸಿದ್ದಾರೆ. ನಾಯಕನ ಬಾಲ್ಯದ ಪಾತ್ರವನ್ನು ಮಾಸ್ಟರ್ ಪವನ್ ಮೋರೆ ಮಾಡಿದ್ದಾರೆ. ಈ ಚಿತ್ರದಲ್ಲಿ ೫ ಹಾಡುಗಳಿದ್ದು ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾವರ್ಕ್ ಚಿತ್ರಕ್ಕಿದೆ.

Related Posts

error: Content is protected !!