ವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 2.55 ನಿಮಿಷವಿರುವ ಟ್ರೇಲರ್ ಫನ್-ಎಮೋಷನ್, ಸೆಂಟಿಮೆಂಟ್, ರೋಮ್ಯಾನ್ಸ್, ಮೋಜು-ಮಸ್ತಿ, ಪಂಚಿಂಗ್ ಡೈಲಾಗ್ ಕಿಕ್ ಗಳಿಂದ ಕೂಡಿದೆ. ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್.
90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್, ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ. ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಅರಸು ಸಾಹಿತ್ಯದ ಹಾಡಿಗೆ ಕಂಠ ಕೂಡ ಕುಣಿಸಿದ್ದಾರೆ. ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ.
ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಟ್ಯೂನ್ ಹಾಕಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಟ್ರೇಲರ್ ಮೂಲಕ ಕಿಕ್ ಕೊಟ್ಟಿರುವ ಬೆಂಗಳೂರು ಬಾಯ್ಸ್ ಆದಷ್ಟು ಬೆಳ್ಳಿತೆರೆಮೇಲೆ ಅಬ್ಬರಿಸಲಿದೆ.
ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿದ್ದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜೂನ್ 9ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಮೇ 26ರಂದು ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಟೈಟಲ್ ನಡಿ ತೆರೆಕಂಡ ಈ ಸಿನಿಮಾಗೆ ಅದ್ಭುತ ಯಶಸ್ಸು ಕಂಡಿದೆ.
ಇದರ ಬೆನ್ನಲ್ಲೇ ಕನ್ನಡದಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಪವಿತ್ರಾ ಹಾಗೂ ನರೇಶ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಜೋಡಿ ಮತ್ತೆ ಮದುವೆ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
ನಟ ನರೇಶ್ ಮಾತನಾಡಿ, ಈಗಾಗಲೇ ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಮತ್ತೆ ಮದುವೆ ಒಳ್ಳೆಯ ಕಂಟೆಂಟ್ ಇರುವ, ಸದ್ಯ ಸಮಾಜದಲ್ಲಿ ಗಂಡ, ಹೆಂಡತಿ ಸಂಬಂಧಗಳ ಕುರಿತ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಎಂದು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಷ್ಟೇ ಸಾಕು ಎಂದು ಹೇಳಿದರು ಈಗ ಕನ್ನಡದಲ್ಲಿ ಜೂನ್ 9ರಂದು ಮತ್ತೆ ಮದುವೆ ಸಿನಿಮಾ ಬಿಡುಗಡೆ ಆಗುತ್ತಿದೆ.
ರಂಗಸ್ಥಳಂ ಹಾಗೂ RRR, ಪುಷ್ಪ ಅಂತಹ ಪರಭಾಷೆಯ ಸಿನಿಮಾಗಳಿಗೆ ಕನ್ನಡದಲ್ಲಿ ಡಬ್ಬಿಂಗ್ ಜೊತೆಗೆ ಹಾಡುಗಳನ್ನ ಬರೆದಿರುವ ವರದರಾಜ್ ಚಿಕ್ಕಬಳ್ಳಾಪುರ ಮತ್ತೆ ಮದುವೆ ಸಿನಿಮಾಗೆ ಬಹಳ ಅಚ್ಚುಕಟ್ಟಾಗಿ ಡಬ್ಬಿಂಗ್ ಜೊತೆಗೆ ಅದ್ಭುತ ಹಾಡುಗಳನ್ನ ಕನ್ನಡದಲ್ಲಿ ಬರೆದಿದ್ದಾರೆ. ಇವರ ಸಹಾಯದಿಂದ ಮತ್ತೆ ಮದುವೆ ಚಿತ್ರದ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ ಎಂದರು.
ಪವಿತ್ರಾ ಲೋಕೇಶ್ ಮಾತನಾಡಿ, ವಿಜಯ್ ಕೃಷ್ಣ ಮೂವೀಸ್ ಮತ್ತೆ ಲಾಂಚ್ ಮಾಡಿ ಒಳ್ಳೆ ಸಿನಿಮಾ ಮಾಡಬೇಕು. ಈ ಬ್ಯಾನರ್ ನಲ್ಲಿ ಹಿಂದೆ ಬಂದ ಸಿನಿಮಾಗಳು ಮೆಸೇಜ್ ಓರಿಯೆಂಟೆಡ್ ಆಗಿತ್ತು. ಸಮಾಜಕ್ಕೆ ಒಳ್ಳೆ ವಿಷಯ ತಲುಪಿಸುವ ಕೆಲಸ ಮಾಡಿದ್ದರು. ವಿಜಯ್ ಕೃಷ್ಣ ಮೂವೀಸ್ ನಡಿ ಮತ್ತೊಂದು ಮೆಸೇಜ್ ಕೊಡುವಂತಹ ಸ್ಟ್ರಾಂಗ್ ಸಿನಿಮಾ ಮಾಡಬೇಕು ಎಂಬುವುದು ನರೇಶ್ ಅವರ ಉದ್ದೇಶವಾಗಿತ್ತು. ಮತ್ತೆ ಮದುವೆ ಕಥೆಯನ್ನು ಎಂ ಎಸ್ ರಾಜು ಅವರು ತಂದಾಗ ಕನ್ನಡದಲ್ಲಿಯೂ ಮಾಡಬೇಕು ಎಂದು ತೀರ್ಮಾನ ಮಾಡಿದೆವು. ತೆಲುಗು ಕನ್ನಡ ಎರಡು ಭಾಷೆಯಲ್ಲಿಯೂ ಒಟ್ಟಿಗೆ ಪ್ರಚಾರ ಮಾಡಲು ಕಷ್ಟವಾಗುತ್ತದೆ ಎಂದು ಮೊದಲ ತೆಲುಗಿನಲ್ಲಿ ಸಿನಿಮಾ ರಿಲೀಸ್ ಮಾಡಿದೆವು. ಜೂನ್ 9ಕ್ಕೆ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಒಳ್ಳೊಳ್ಳೆ ಸಾಂಗ್ಸ್ ಇದೆ. ಒಳ್ಳೆ ಮೆಸೇಜ್ ಎಂದರು.
ಮತ್ತೆ ಮದುವೆ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜೂನ್ 9ರಂದು ಮತ್ತೆ ಮದುವೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ “ಯಾವ ಮೋಹನ ಮುರಳಿ ಕರೆಯಿತು” ಎಂಬ ಹಾಡು ಬಹಳ ಜನಪ್ರಿಯ. ಈಗ ಈ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚಿಗೆ “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
“ಯಾವ ಮೋಹನ ಮುರಳಿ ಕರೆಯಿತು” ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ.
ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಮೂರು ಹಾಡುಗಳಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರವೆಂದರು ನಿರ್ದೇಶಕ ವಿಶ್ವಾಸ್ ಕೃಷ್ಣ.
ನಾನು ಉದ್ಯಮಿ. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದೇನೆ. ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದರು.
ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ, ನಾಯಕ ಮಾಧವ, ನಾಯಕಿ ಸ್ವಪ್ನಾ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ಹಾಗೂ ಸಂಗೀತ ನಿರ್ದೇಶಕ ಅನಿಲ್ ಸಿ ಜೆ ಚಿತ್ರದ ಕುರಿತು ಮಾತನಾಡಿದರು. ಪತ್ರಿಕಾಗೋಷ್ಠಿಗೆ ರಾಕಿ(ಶ್ವಾನ) ಕೂಡ ಆಗಮಿಸಿತ್ತು. ರಾಕಿ ಟ್ರೈನರ್ ಸ್ವಾಮಿ, ರಾಕಿಯ ದಿನಚರಿ ಬಗ್ಗೆ ವಿವರಣೆ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ಬಣ್ಣದ ಕನಸು ಹೊತ್ತು ಬರುವವರಿಗೇನು ಕಮ್ಮಿ ಇಲ್ಲ. ದಿನ ಕಳೆದಂತೆ ಇಲ್ಲಿ ನೂರಾರು ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಗಂಧದಗುಡಿಯಲ್ಲಿ ಗಟ್ಟಿನೆಲೆ ಕಾಣಬೇಕೆಂಬ ಬಯಕೆ ಎಲ್ಲರಲ್ಲೂ ಇದೆ. ಅಂಥದ್ದೊಂದು ಬಯಕೆ, ಹಂಬಲ ಹೊತ್ತು ಬಂದ ಯುವ ನಟಿಯರ ಪೈಕಿ ಸ್ವಪ್ನ ಎಂಬ ಹಾಲುಗಲ್ಲದ ಹುಡುಗಿಯೂ ಒಬ್ಬಳು.
ಹೌದು, ಸ್ವಪ್ನ ಕನ್ನಡಕ್ಕೆ ಹೊಸ ಹುಡುಗಿಯಲ್ಲ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸಿಕ್ಕ ಪಾತ್ರಗಳ ಮೂಲಕ ಗಮನಸೆಳೆದವರು. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದರೂ, ಸ್ವಪ್ನ ಅವರು ಆಯ್ಕೆಯಲ್ಲಿ ಎಚ್ಚರ ತಪ್ಪಲಿಲ್ಲ. ಇದುವರೆಗೂ ಮಾಡಿದ ಸಿನಿಮಾಗಳ ಪಾತ್ರಗಳ ಮೇಲೆ ಸ್ವಪ್ನಗೆ ಖುಷಿ ಇದೆ. ಈಗ ನಾಯಕಿಯಾಗಿ ನಟಿಸಿರುವ ಆರೇಳು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ.
ಬೇಬಿ ಪ್ರಕೃತಿ, ರಾಕಿ
ಸ್ವಪ್ಪ ನಾಯಕಿಯಾಗಿ ಅಭಿನಯಿಸಿರುವ ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಈಗ ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಸಿನಿಮಾ ಬಗ್ಗೆ ಸ್ವಪ್ನ ಅವರಿಗೆ ಅತೀವ ವಿಶ್ವಾಸ. ಕಾರಣ ಸಿನಿಮಾ ಕಥೆ ಹಾಗು ಗಟ್ಟಿ ಪಾತ್ರ. ಈ ಕುರಿತು ‘ಸಿನಿ ಲಹರಿ’ ಜೊತೆ ಸ್ವಪ್ನ ತಮ್ಮ ಸಿನಿ ಜರ್ನಿ ಕುರಿತು ಮಾತಾಡಿದ್ದಾರೆ.
ಸ್ವಪ್ನ
ಓವರ್ ಟು ಸ್ವಪ್ನ…
‘ನಾನು ಮೂಲತಃ ಮಂಗಳೂರಿನ ಹುಡುಗಿ. ತಂದೆ ಮಂಗಳೂರಿನವರು. ತಾಯಿ ಉತ್ತರ ಕರ್ನಾಟಕದವರು. ಹುಬ್ಬಳ್ಳಿ ಸಮೀಪದ ನವಲಗುಂದದಲ್ಲೇ ಹೆಚ್ಛು ಆಡಿ, ಓದಿ ಬೆಳೆದವಳು.
ಬೆಳ್ಳಿಪರದೆಗೆ ಬರಲು ಕಾರಣ?
ಇಷ್ಟಕ್ಕೂ ನನಗೆ ಸಿನಿಮಾಗೆ ಬರಬೇಕು ಅಂತ ಆಸೆಯೇನೂ ಇರಲಿಲ್ಲ. ಆದರೆ, ನನಗೆ ಒಬ್ಬರು ಸಿನಿಮಾ ವಿಚಾರದಲ್ಲೇ ಹರ್ಟ್ ಮಾಡಿದರು. ಅದೊಂದೇ ಕಾರಣಕ್ಕೆ ನಾನೇಕೆ ಇಲ್ಲಿ ಬಂದು ನಿಲ್ಲಬಾರದು ಅಂತ ಚಾಲೆಂಜ್ ಮಾಡಿ ಒಬ್ಬ ನಟಿಗೆ ಬೇಕಾದ ನಟನಾ ತರಬೇತಿ ಸೇರಿದಂತೆ ಸಿನಿಮಾಗೆ ಇರಬೇಕಾದ ಒಂದಷ್ಟು ಅರ್ಹತೆ ಪಡೆದು ಸಿನಿಮಾ ಪ್ರವೇಶಿಸಿದೆ. ಆರಂಭದಲ್ಲಿ ನಾನು ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗಲೇ ತುಳು ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ತು.
ಆದರೆ, ಆ ಸಿನಿಮಾ ನಿಂತು ಹೋಯ್ತು. ಅಲ್ಲೊಂದಷ್ಟು ಅವಮಾನಗಳೂ ಆದವು. ಕೊನೆಗೆ ನಾನು ನಟಿ ಆಗಲೇಬೇಕು ಅಂತ ಡಿಸೈಡ್ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂತು. ಮೊದಲು ‘ನಾನು ನನ್ನ ಹುಡುಗಿ’ ಎಂಬ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ತು ಆದರೆ, ಆ ಸಿನಿಮಾನೂ ನಿಂತು ಹೋಯ್ತು. ಅದೇ ಸಿನಿಮಾ ನಿರ್ದೇಶಕರು ಮತ್ತೊಂದು ಸಿನಿಮಾ ಮಾಡಿದ್ರು. ಅಲ್ಲಿ ನಟಿಸೋ ಅವಕಾಶ ಸಿಕ್ತು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯ್ತು.
ಈ ಸಿನಿಮಾರಂಗಕ್ಕೆ ಬಂದಿದ್ದು ಖುಷಿ ಇದೆ. ಕಲರ್ ಫುಲ್ ಜಗತ್ತು ಇದು. ಕಲರ್ ಫುಲ್ ಆಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಅದಮ್ಯ ಆಸೆ ಇದೆ. ಆರು ವರ್ಷಗಳ ಈ ಜರ್ನಿಯಲ್ಲಿ ಸಿನಿಮಾ ಸಾಕಷ್ಟು ಕಲಿಸಿಕೊಟ್ಟಿದೆ. ಒಳ್ಳೆಯ ಮತ್ತು ಕೆಟ್ಟ ಅನುಭವವೂ ಆಗಿದೆ. ಇಲ್ಲೀಗ ಗಟ್ಟಿನೆಲೆ ಕಾಣಬೇಕು ಅಂತ ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಒಳ್ಳೊಳ್ಳೆಯ ಕಥೆ ಮತ್ತು ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.
ಬೇಸರ ಆಗಿದ್ದುಂಟು…
ಆರಂಭದಲ್ಲಿ ಸಿಕ್ಕ ಪಾತ್ರಗಳನ್ನು ಮಾಡುತ್ತಿದ್ದೆ. ಹೀರೋಯಿನ್ ಆಗುವ ತುಡಿತ ಇತ್ತು. ಆದರೆ, ಕೆಲ ನಿರ್ದೇಶಕರ ದೃಷ್ಟಿಯಲ್ಲಿ ನಾನು ಹೀರೋಯಿನ್ ಮೆಟೀರಿಯಲ್ ಆಗಿರಲಿಲ್ಲ. ಆಮೇಲೆ ಹೀರೋಯಿನ್ ಆಗಲೇಬೇಕು ಅಂತ ವರ್ಕೌಟ್ ಶುರು ಮಾಡಿದೆ. ಸಿನಿಮಾ ನಾಯಕಿ ಆಗುವ ಎಲ್ಲ ಅರ್ಹತೆ ಪಡದುಕೊಂಡೆ. ಅಲ್ಲಿಂದ ಮೂರ್ನಾಲ್ಕು ಸಿನಿಮಾಗಳಿಗೆ ನಾಯಕಿ ಅದೆ. ಒಮ್ಮೊಮ್ಮೆ ನನಗೆ ಈ ಇಂಡಸ್ಟ್ರಿ ಬೇಸರ ತರಿಸಿದ್ದು ನಿಜ. ಅವಕಾಶ ಮಿಸ್ ಆದಾಗೆಲ್ಲ ಬೇಜಾರು ಆಗುತ್ತಿತ್ತು. ಆದರೂ, ತಾಳ್ಮೆಯಿಂದಲೇ ಅವಕಾಶ ಪಡೆದೆ. 19 ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡುತ್ತ ಅನುಭವ ಪಡೆದೆ. ಈಗ ಆರು ಸಿನಿಮಾಗಳಲ್ಲಿ ನಾಯಕಿಯಾಗಿದ್ದೇನೆ. ‘ಡವ್ ಮಾಸ್ಟರ್’ ಸಿನಿಮಾ ಪಾತ್ರ ಚೆನ್ನಾಗಿದೆ. ಅಲ್ಲಿ ಕಥೆಯೇ ಹೈಲೆಟ್. ಇನ್ನು, ‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಬಗ್ಗೆ ಹೇಳಲೇಬೇಕು. ಇದು ನನಗೆ ಮಾತ್ರವಲ್ಲ, ಇಡೀ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಭವ್ಯ ಭರವಸೆ ಇದೆ.
ಈ ಚಿತ್ರ ಭಾವನೆಗಳ ಗುಚ್ಛ
‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರ ಇಷ್ಟ ಆಗೋಕೆ ಕಾರಣ ಕಥೆ ಮತ್ತು ಪಾತ್ರ. ಅಲ್ಲಿ ಎಮೋಷನ್ಸ್ ಇದೆ, ಭಾವನೆಗಳಿವೆ, ಭಾವುಕತೆ ಇದೆ, ಸಂಬಂಧಗಳ ಮೌಲ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯ ಗುಣ ಇದೆ. ನಾನಿಲ್ಲಿ ವಿಕಲಚೇತನ ಮಗಳ ತಾಯಿಯಾಗಿ ನಟಿಸಿದ್ದೇನೆ. ಅದೊಂದು ತೂಕದ ಪಾತ್ರ. ಇಡೀ ಸಿನಿಮಾದಲ್ಲಿ ಬದುಕಿನ ಅರ್ಥವಿದೆ. ಭಾವನೆಗಳ ಗುಚ್ಛವಿದೆ. ಅ ಕಾರಣಕ್ಕೆ ಈ ಸಿನಿಮಾಒಪ್ಪಿಕೊಂಡೆ. ಸದ್ಯ ಸಿನಿಮಾದ ಟೀಸರ್ ಮತ್ತು ಲಿರಿಕಲ್ ಸಾಂಗ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರಾಕಿ ಹವಾ ಜೋರು!
‘ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾದ ಸ್ಪೆಷಲ್ ಅಂದ್ರೆ ರಾಕಿ. ಇಡೀ ಚಿತ್ರದ ಕೇಂದ್ರ ಬಿಂದು ರಾಕಿ. ರಾಕಿ ಅಂದರೆ ಶ್ವಾನದ ಹೆಸರು. ನನ್ನ ಮಗಳು ಮತ್ತು ರಾಕಿ ನಡುವಿನ ಸಂಬಂಧ ಮತ್ತು ಅವರಿಬ್ಬರ ಬದುಕಿನ ಉತ್ಸಾಹವೇ ಜೀವಾಳ. ಶೂಟಿಂಗ್ ವೇಳೆ ನಾವುಗಳು ಟೇಕ್ ತೆಗೆದುಕೊಂಡರೆ, ರಾಕಿ ಮಾತ್ರ ಒಂದೇ ಟೇಕ್ ಓಕೆ ಮಾಡುತ್ತಿದ್ದ. ಸೋ ಆ ಕ್ಷಣಗಳೇ ಮರೆಯದ ಅನುಭವ. ಸಿನಿಮಾ ಶೂಟಿಂಗ್ ಅನಿಸಲಿಲ್ಲ ಫ್ಯಾಮಿಲಿ ಟ್ರಿಪ್ ಥರಾ ಇತ್ತು. ಅದಕ್ಕೆ ಕಾರಣ ಟೀಮ್ ಮತ್ತು ಪ್ರೊಡಕ್ಷನ್ ಹೌಸ್. ನಿರ್ಮಾಪಕ ಶರಣಪ್ಪ ಹಾಗು ನಿರ್ದೇಶಕ ವಿಶ್ವಾಸ್ ಕೊಟ್ಟ ಸಹಕಾರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.
ಖಳನಟಿ ಪಾತ್ರಕ್ಕೂ ರೆಡಿ
ನನಗೆ ಬಾಲಿವುಡ್ ನಟಿ ರೇಖಾ ಅವರು ರೋಲ್ ಮಾಡೆಲ್. ಇನ್ನು ನನಗೆ ಚಾಲೆಂಜ್ ಎನಿಸುವ ಪಾತ್ರ ಮಾಡುವಾಸೆ. ಅದರಲ್ಲೂ ವಿಲನ್ ಇದ್ದರಂತೂ ಓಕೆ. ಈಗಾಗಲೇ ಕ್ಲಾಂತ ಎಂಬ ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ನಾಯಕಿಯಷ್ಟೇ ಪ್ರಬಲ ಪಾತ್ರವದು.
ಕನ್ನಡ ಮಾತ್ರವಲ್ಲ, ಪರಭಾಷೆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಕಂಟೆಂಟ್ ಇದ್ದರೆ ಅಲ್ಲೂ ಹೋಗೋಕೆ ರೆಡಿ. ಇನ್ನು, ನಟನೆ ಜೊತೆ ನಾನು ಹಾಡ್ತೀನಿ ಕೂಡ. ಅದರಲ್ಲೂ ಜನಪದ ಮಾತ್ರ. ಜೊತೆಗೆ ನಿರ್ದೇಶನದ ಮೇಲೂ ಒಲವಿದೆ. ಒಂದೆರೆಡು ಕಥೆ ಕೂಡ ಬರೆದಿಟ್ಟುಕೊಂಡಿದ್ದೇನೆ. ಆ ಟೈಮ್ ಗಾಗಿ ಕಾಯುತ್ತಿದ್ದೇನೆ.
ಈಗ ರಿಲೀಸ್ ಗೆ ಏಳು ಸಿನಿಮಾಗಳಿವೆ. ಒಂದಷ್ಟು ಕಥೆ ಕೇಳುತ್ತಿದ್ದೇನೆ. ಸದ್ಉ ಯಾವ ಮೋಹನ ಮುರಳಿ ಕರೆಯಿತು ಮೇಲೆ ಹೆಚ್ಚು ನಿರೀಕ್ಷೆ ಇದೆ.
ಮತೀನ್ ಹುಸೇನ್ ಅಭಿನಯದ ‘ರೋಡ್ ಕಿಂಗ್’ ಚಿತ್ರ ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, Randy Kent ಎಂಬ ಹಾಲಿವುಡ್ ನಿರ್ದೇಕರು ಈ ಚಿತ್ರವನ್ನು ನಿರ್ದೇಶಸಿದ್ದಾರೆ.
‘ರೋಡ್ ಕಿಂಗ್’ ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮತೀನ್ ಹುಸೇನ್, ಮೂಲತಃ ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲಾ ಅಮೇರಿಕಾದಲ್ಲಿ. ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್ನ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲವಂತೆ. ಆಗ ಅವರಿಗೆ ನೆನಪಾಗಿದ್ದೇ ರಾಂಡಿ ಕೆಂಟ್.
ಮತೀನ್ ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರಂತೆ. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.
ಅಂದಹಾಗೆ, ಈ ಚಿತ್ರದ ನಿರ್ದೇಶನವನ್ನು ದೂರದ ಅಮೇರಿಕಾದಲ್ಲಿದ್ದುಕೊಂಡು ಸ್ಕೈಪ್ ಮೂಲಕವೇ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಮಾತನಾಡುವ ಮತೀನ್, ‘ಚಿತ್ರೀಕರಣಕ್ಕೆ ಎಲ್ಲ ತಯಾರಿಯೂ ಆಗಿತ್ತು. ಆದರೆ, ರಾಂಡಿಗೆ ವೀಸಾ ಸಿಗಲಿಲ್ಲ. ಎರಡನೆಯ ಬಾರಿಗೂ ಅದೇ ರೀತಿ ಆಯಿತು. ಕೊನೆಗೆ ಅವರು ಸ್ಕೈಪ್ ಮೂಲಕವೇ ಚಿತ್ರ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಮತೀನ್.
ಮತೀನ್ ಇದಕ್ಕೂ ಮುನ್ನ ‘ಬಿಂದಾಸ್ ದಾದಾಗಿರಿ’ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದು, ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ‘ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದು, ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಆರಿಫ್ ಲಲಾನಿ ಛಾಯಾಗ್ರಹಣ ಮಾಡಿದ್ದು, ಹಾಲಿವುಡ್ನ ಜನಪ್ರಿಯ ಸೌಂಡ್ ಡಿಸೈನರ್ ಸ್ಕಾಟ್ ವುಲ್ಫ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈಗಾಗಲೇ ಜಗತ್ತಿನಾದ್ಯಂತ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ರೋಡ್ ಕಿಂಗ್’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.
“ಆಪರೇಶನ್ ಅಲಮೇಲಮ್ಮ”, “ಕವಲುದಾರಿ” ನಟ ರಿಷಿ ನಾಯಕರಾಗಿ ನಟಿಸುತ್ತಿರುವ, ಕೆ.ಎಸ್ ನಂದೀಶ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. ನಟ ನೀನಾಸಂ ಸತೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. “ರುದ್ರ ಗರುಡ ಪುರಾಣ” ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
“ಚಂಬಲ್”, ” ಡಿಯರ್ ವಿಕ್ರಮ್” ಚಿತ್ರಗಳು ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ಅಭಿನಯಿಸುತ್ತಿದ್ದಾರೆ.
“ರುದ್ರ ಗರುಡ ಪುರಾಣ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನಗೆ. 2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್ ಪಡೆದಿರುವ ಮೈಸೂರು ಮೂಲದ ಕೆ.ಸೌರಭ್ ಅವರು ಸಂದರ್ಶನವೊಂದರಲ್ಲಿ ನನಗೆ ಪುನೀತ್ ರಾಜಕುಮಾರ್ ಅಭಿನಯದ “ಪೃಥ್ವಿ” ಚಿತ್ರ ಪ್ರೇರಣೆ ಎಂದಿದ್ದಾರೆ.
“ಪೃಥ್ವಿ” ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ. ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದು ನಿರ್ದೇಶಕ ಕೆ.ಎಸ್ ನಂದೀಶ್ ತಿಳಿಸಿದರು.
ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ “ಕವಲುದಾರಿ” ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್ ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ.
ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ “ಗರುಡ ಪುರಾಣ” ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ “ರುದ್ರ ಗರುಡ ಪುರಾಣ” ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದರು ನಾಯಕ ರಿಷಿ.
ನಾಯಕಿ ಪ್ರಿಯಾಂಕ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್ ಮಾತಾಡಿದರು.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಜೆ.ಕೆ ನಾಯಕರಾಗಿ ನಟಿಸಿರುವ “ಐರಾವನ್” ಚಿತ್ರ ಇದೇ ಜೂನ್ ಹದಿನಾರರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಾನು ಮೂಲತಃ ವೈದ್ಯ. ಕೋವಿಡ್ ಸಮಯದಲ್ಲಿ ನಿರ್ದೇಶಕ ರಾಮ್ಸ್ ರಂಗ ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಆ ಸಮಯದಲ್ಲಿ ಚಿತ್ರರಂಗದ ಬಹುತೇಕರು ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿ ನಾನು ಸಿನಿಮಾ ನಿರ್ಮಾಣ ಮಾಡಿದರೆ ಅನೇಕ ಜನರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶ ನನ್ನದಾಗಿತ್ತು. ಈಗ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಡಾ.ನಿರಂತರ ಗಣೇಶ್.
“ಐರಾವನ್” ಎಂದರೆ ಮಹಾಭಾರತದಲ್ಲಿ ಬರುವ ಪಾತ್ರವೊಂದರ ಹೆಸರು. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸಮುದ್ರದಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಿರುವುದು ಚಿತ್ರದ ವಿಶೇಷ ಎಂದು ನಿರ್ದೇಶಕ ರಾಮ್ಸ್ ರಂಗ ತಿಳಿಸಿದರು.
“ಐರಾವನ್” ಚಿತ್ರದ ಟೀಸರ್ ಗೆ ತಮ್ಮಿಂದ ಸಿಕ್ಕಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ಕೆಲವರಿಗೆ ಈ ಚಿತ್ರದ ಬಗ್ಗೆ ಗೊಂದಲವಿತ್ತು. ಇದು ಹಿಂದಿ ಚಿತ್ರದ ಡಬ್ ಇರಬಹುದು ಎಂದು. ಆದರೆ ಇದು ಪಕ್ಕಾ ಕನ್ನಡ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಹಾಡುಗಳು ಚೆನ್ನಾಗಿದೆ. ನಿರ್ಮಾಪಕ ಡಾ. ನಿರಂತರ ಗಣೇಶ್ ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಜೂನ್ 16 ಚಿತ್ರ ತೆರೆಗೆ ಬರುತ್ತಿದೆ ಎಂದು ನಾಯಕ ಜೆ.ಕೆ ತಿಳಿಸಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ಅದ್ವಿತಿ ಶೆಟ್ಟಿ, ಹಾಗೂ ನವ ನಟ ವಿವೇಕ್, ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ, ಛಾಯಾಗ್ರಹಣದ ಕುರಿತು ದೇವೇಂದ್ರ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಸಂತೋಷ್ ಉಪಸ್ಥಿತರಿದ್ದರು.
ಶಿವರಾಜಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಚಿತ್ರೀಕರಣ ಸೆಟ್ ಗೆ ನೂತನ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಚಿತ್ರ ಯಶಸ್ವಿಯಾಗಲಿ ಎಂದುಶುಭ ಹಾರೈಸಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಘೋಸ್ಟ್ ಸಿನಿಮಾ ನಿರ್ಮಾಣವಾಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಸಂದೇಶ್ ಎನ್ ಚಿತ್ರದ ನಿರ್ದೇಶಕರು ನಿರ್ಮಾಪಕರು.
ಇನ್ನು ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ನಾರದ ಹೈಲೆಟ್. “ಘೋಸ್ಟ್” ಚಿತ್ರದ ಚಿತ್ರೀಕರಣ ಚಾಮರಾಜಪೇಟೆ ಪೊಲೀಸ್ ಮೈದಾನದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ.
ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂತನ ಸಚಿವರಾದ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.
ಚಿತ್ರತಂಡದವರ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದ ಸಚಿವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022 ರ ಸೆಪ್ಟೆಂಬರ್ 18ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್ ಕಟೌಟ್‌ಗಳನ್ನು ಸ್ಥಾಪಿಸಿ “ಕಟೌಟ್ ಜಾತ್ರೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಆ ಕಟೌಟ್‌ಗಳಿಗೆ ಬೃಹತ್ ಹಾರಗಳನ್ನು ಸಹ ಹಾಕಿಸಿದ್ದರು. ಇಡೀ ಕಾರ್ಯಕ್ರಮಕ್ಕೆ ಅಂದಾಜು ೪೦ ಲಕ್ಷದಷ್ಟು ಹಣ ಖರ್ಚಾಗಿತ್ತು. ಪೊಲೀಸ್ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಅಂದೇ ಈ ಕಟೌಟ್ ಜಾತ್ರೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲು ಮನವಿ ಸಲ್ಲಿಸಲಾಗಿತ್ತು.
ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆ ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿದ್ದರು.
ಇದೀಗ ಆ ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಈ ಕಟೌಟ್ ಜಾತ್ರೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ದಾಖಲೆಯಾಗಿದೆ. ಆ ಎರಡೂ ದಾಖಲೆಗಳ ಸರ್ಟಿಫಿಕೇಟ್ ಮತ್ತು ಪದಕಗಳು ಈಗ ತಲುಪಿವೆ.
ತೆರೆಮುಂದೆ ತೆರೆಹಿಂದೆ ನುಡಿದಂತೆ ನಡೆದ ಮೇರುನಟನ ಹೆಸರಲ್ಲಿ ಇಂತಹದ್ದೊಂದು ದಾಖಲೆಯನ್ನು ಅವರಿಲ್ಲದ ಹೊತ್ತಿನಲ್ಲಿ ಸ್ಥಾಪಿಸಲು ಸಾಧ್ಯವಾಗಿದ್ದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇವೆ.
ಈ ದಾಖಲೆಯು ಡಾ.ವಿಷ್ಣುವರ್ಧನ್ ಅವರ ಅಗಲಿಕೆಯ 13 ವರ್ಷಗಳ ನಂತರವೂ ಅವರ ನೆನಪನ್ನು ಹಸಿರಾಗಿಡುವ ಕೆಲಸವನ್ನು ಅವರ ಅಭಿಮಾನಿಗಳು ನಿರಂತರವಾಗಿ ಮಾಡುತ್ತಿರುವುದರ ದ್ಯೋತಕವಾಗಿದೆ.
ಈ ಕಟೌಟ್ ಜಾತ್ರೆಗೆ ಬೆನ್ನೆಲುಬಾಗಿ ನಿಂತ 50 ಸೇನಾನಿಗಳಿಗೆ, ಯೋಜನೆ ಕಾರ್ಯಸಾಧುಗೊಳಿಸಿದ ಆನಂದ್ ರಾಚ್, ಕಟೌಟ್ ವಿನ್ಯಾಸ ಮಾಡಿದ ರಾಜುವಿಷ್ಣು ಮತ್ತು ಈ ಸಂಸ್ಥೆಗಳ ಜೊತೆ ಸಂವಹನ ನಡೆಸಿ, ಸಾಧ್ಯವಾಗಿಸಿದ ಸಾಹಿತಿ ಜನಾರ್ಧನ್ ರಾವ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದು ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.
ಚಿತ್ರ : ಪಿಂಕಿ ಎಲ್ಲಿ ? ನಿರ್ಮಾಪಕ : ಕೃಷ್ಣೇಗೌಡ ನಿರ್ದೇಶಕ : ಪೃಥ್ವಿ ಕೋಣನೂರು ತಾರಾಗಣ : ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಕೋಣನೂರು ಇತರರು.
ಸಣ್ಣಮ್ಮ ಮನೇಲಿ ಇಲ್ಲ… ಆದರೆ, ಇಲ್ಲಿ ಬುರ್ಕಾ ಬಿದ್ದಿದೆ! ಪಿಂಕಿ ಎಲ್ಲಿ?
ಹೀಗೆ ಆತಂಕದಲ್ಲೇ ತನ್ನ ಹೆತ್ತ ಮಗು ಕಾಣದ್ದನ್ನುಬಕಂಡು ಗದ್ಗದಿತರಾಗುವ ತಾಯಿ ಹೃದಯ ಚಡಪಡಿಸೋ ಹೊತ್ತಿಗೆ, ಅಲ್ಲೊಂದು ಘಟನೆ ನಡೆದು ಹೋಗಿರುತ್ತೆ.
ಹೌದು, ವಾಸ್ತವಕ್ಕೆ ಹತ್ತಿರವಾದ, ಸಮಾಜದಲ್ಲಿ ಈಗಲೂ ಹಾಡಹಗಲೇ ನಡೆಯುವ ಘಟನೆಗಳಿಗೆ ಪಿಂಕಿ ಸಾಕ್ಷಿಯಾಗುತ್ತಾಳೆ. ಒಂದೊಳ್ಳೆಯ ಎಳೆ ಇಟ್ಟುಕೊಂಡು ನಿರ್ದೇಶಕ ಪೃಥ್ವಿ ಕೋಣನೂರು ಮನಸ್ಸಿಗೆ ಹಿಡಿಸುವ, ಕೊಂಚ ಎದೆ ಭಾರವಾಗಿಸುವ, ವಸ್ತುಸ್ಥಿತಿಯ ಚಿತ್ರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಡಿ-ಬಡಿ- ಕಡಿ ಸಿನಿಮಾಗಳ ನಡುವೆ ಪಿಂಕಿ ವಿಭಿನ್ನ ಎನಿಸಿಕೊಳ್ಳುತ್ತಾಳೆ.
ಒಂದೇ ಮಾತಲ್ಲಿ ಹೇಳುವುದಾದರೆ, ಪಿಂಕಿ ಕಾಡುವ ಮತ್ತು ನೋಡುವ ಚಿತ್ರ. ಆಧುನಿಕ ಜಗತ್ತಲ್ಲಿ ಎಲ್ಲವೂ ಗೌಣ. ಇಲ್ಲಿ ಸಂಬಂಧಗಳ ಮೌಲ್ಯ ಲೆಕ್ಕಕ್ಕಿಲ್ಲ. ಹಣಕ್ಕಷ್ಟೇ ಬೆಲೆ ಎಂಬ ಸೂಕ್ಷ್ಮ ಅಂಶವನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಈಗಂತೂ ಇಲ್ಲಿ ಪ್ರೀ, ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜಂಜಾಟದ ಬದುಕಿನ ಮಧ್ಯೆ ಮನಸ್ಸುಗಳು ಕುಸಿಯುತ್ತಿವೆ. ಅರ್ಥ ಕಳೆದುಕೊಂಡ ಮನಸ್ಸುಗಳು ಅನಾಹುತಕ್ಕೆ ಕಾರಣವಾಗುತ್ತಿವೆ. ಅಂಥದ್ದೊಂದು ಅಂಶ ಮತ್ತು ಸಂದೇಶ ಪಿಂಕಿಯೊಳಗಿದೆ.
ಇಲ್ಲಿ ತಪ್ಪಿನ ಅರಿವಿದೆ, ಆತಂಕವಿದೆ, ಆಕ್ರಂದನವಿದೆ, ನೋವು, ತಳಮಳ, ಭಾವುಕತೆ, ಪಾಪಪ್ರಜ್ಞೆಯೂ ಇದೆ. ಇದರೊಂದಿಗೆ ಆಸೆ, ದುರಾಸೆಗಳ ಗುಚ್ಛವೂ ಇದೆ. ಕಥೆಯಲ್ಲಿ ಒಂದಷ್ಟು ಆಶಯವಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬಹುದಿತ್ತು. ಎಲ್ಲವೂ ಇಲ್ಲಿ ನೈಜ ಎನಿಸುವುದರಿಂದ ಅಲ್ಲಲ್ಲಿ ಕಾಣುವ ತಪ್ಪುಗಳನ್ನು ಬದಿಗೊತ್ತಲು ಅಡ್ಡಿ ಇಲ್ಲ.
ನಿರ್ದೇಶಕರ ಕಲ್ಪನೆ, ನಿರೂಪಣೆ, ಆಯ್ಕೆ ಮಾಡಿಕೊಂಡ ಪಾತ್ರಗಳು ಸಿನಿಮಾದ ವೇಗ ಹೆಚ್ಚಿಸಿವೆ. ಅದಕ್ಕೆ ತಕ್ಕಂತಹ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕೂಡ ಪಿಂಕಿಗೆ ಬಲ ಕೊಟ್ಟಿದೆ. ಸಮಾಜದಲ್ಲಿ ನಡೆಯೋ ಘಟನೆಯೊಂದು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತೆ ಅನ್ನೋದು ಹೈಲೆಟ್. ಆ ಕುತೂಹಲ ಇದ್ದರೆ, ಒಮ್ಮೆ ಪಿಂಕಿ ನೋಡಲ್ಲಡ್ಡಿಯಿಲ್ಲ.
ಕಥೆ ಏನು?
ಪಿಂಕಿ ಎಂಬ ಎಂಟು ತಿಂಗಳ ಹೆಣ್ಣು ಮಗು ಕಥೆಯ ಕೇಂದ್ರ ಬಿಂದು. ಬೆಂಗಳೂರು ಎಂಬ ದಟ್ಟ ಕಾಂಕ್ರೀಟ್ ನಗರದಲ್ಲಿ ಒಂದು ಕುಟುಂಬ. ಆ ಮನೆಯಲ್ಲಿ ಪಿಂಕಿ ಮತ್ತು ಆಕೆಯ ಅಪ್ಪ ಅಮ್ಮ ವಾಸ. ದುಡಿಯಲು ಹೊರ ಹೋಗುವ ಅಪ್ಪ ಅಮ್ಮ ಪಿಂಕಿ ನೋಡಿಕೊಳ್ಳಲೆಂದೆ ಕೆಲಸದಾಕೆಯನ್ನು ನೇಮಿಸುತ್ತಾರೆ. ಅತ್ತ ಪಿಂಕಿಯ ಪೋಷಕರು ಕೆಲಸಕ್ಕೆ ಹೊರಡುತ್ತಿದ್ದಂತೆ ಇತ್ತ ಕೆಲಸವಳ ಚಾಲಾಕಿ ಬುದ್ಧಿ ಅನಾವರಣಗೊಳ್ಳುತ್ತೆ. ಅದೇನು ಅನ್ನೋದು ಸಸ್ಪೆನ್ಸ್.
ಪಿಂಕಿ ಕೇವಲ 8 ತಿಂಗಳಲ್ಲೇ ದುಡಿಯೋ ಮಗುವಾಗುತ್ತಾಳೆ! ಅಲ್ಲೊಂದು ಜಾಲ ಪಿಂಕಿಯನ್ನು ದುರುಪಯೋಗ ಮಾಡಿಕೊಳ್ಳುತ್ತೆ. ಹೀಗಿರುವಾಗಲೇ ಪಿಂಕಿ ಕಳೆದುಹೋಗುತ್ತಾಳೆ. ಪಿಂಕಿ ಕಳೆದದ್ದು ಹೇಗೆ? ಅವಳನ್ನು ಹೊತ್ತು ಹೊಯ್ದವರಾರು? ಇಷ್ಕಕ್ಕೂ ಪಿಂಕಿ ಭಿಕ್ಷೆ ಬೇಡಿ ಬದುಕುವ ಮಹಿಳೆಯೊಬ್ಬಳ ಕೈ ಸೇರುತ್ತಾಳೆ ಹಾಲಲ್ಲಿ ಅಮಲು ಬರುವ ಆಲ್ಕೋಹಾಲ್ ಸೇರಿಸಿ ಅವಳನ್ನು ಮಲಗುವಂತೆ ಮಾಡುವ ಭಿಕ್ಷುಕಿಯೊಬ್ಬಳು, ತನ್ನ ಕುಡಿತದ ಚಟಕ್ಕೆ ಪಿಂಕಿಯನ್ನೇ ಬೀದಿ ಬದಿ ಬಿಟ್ಟುಬಿಡುತ್ತಾಳೆ!!
ಪೃಥ್ವಿ ಕೋಣನೂರು, ನಿರ್ದೇಶಕ
ಅಲ್ಲಿಂದ ಪಿಂಕಿಯ ಹುಡುಕಾಟ ಶುರುವಾಗುತ್ತೆ. ಅಲ್ಲಿಂದಲೇ ಸಂಬಂಧಗಳ ಒಂದೊಂದೇ ಕರಾಳ ಮುಖ ಬೆತ್ತಲಾಗುತ್ತವೆ. ಒಂದು ಕಡೆ ಮಕ್ಕಳಿಲ್ಲದ ಪರಿತಪಿಸುವ ಸ್ಲಂ ಬಳಿ ವಾಸಿಸುವ ದಂಪತಿ ಕೈಗೆ ಪಿಂಕಿ ಸಿಕ್ಕಾಗ ನಡೆಯೋ ಘಟನಾವಳಿ ಇಮ್ನೂ ವಿಶೇಷ ಎನಿಸುತ್ತವೆ. ಒಂದಮದೇ ಜಾಲಗಳ ದರ್ಶನವೂ ಆಗುತ್ತದೆ. ಇದೆಲ್ಲದರ ನಡುವೆ ಕಳಚಿ ಬಿದ್ದ ಸಂಬಂಧಗಳ ಪರಿಚಯವಾಗುತ್ತದೆ. ಭಾವನೆಗಳಿಲ್ಲದೆ ಬದುಕುವ ಮಂದಿಯ ವ್ಯಕ್ತಿತ್ವ ಬಯಲಾಗುತ್ತೆ. ಇದೆಲ್ಲದರ ನಡುವೆ ಪಿಂಕಿ ಎಲ್ಲಿ? ಆಕೆ ಸಿಕ್ತಾಳ ಇಲ್ಲವೋ ಅನ್ನೋದೇ ಇಲ್ಲಿರುವ ಚಿತ್ರಣ.
ಹಾಗೆ ನೋಡಿದರೆ, ಇಲ್ಲಿ ಪಿಂಕಿ ನೆಪಮಾತ್ರ. ಅವಳ ಹುಡುಕುವ ಜರ್ನಿಯಲ್ಲಿ ಬರುವ ದೃಶ್ಯಗಳು ಹುಬ್ಬೇರಿಸುತ್ತವೆ. ಗಂಡ ಹೆಂಡತಿ ಮತ್ತು ಸ್ನೇಹಿತರ ನಡುವಿನ ಭಾವನೆಗಳ ಬಣ್ಣ ಕಳಚುತ್ತದೆ. ಪಿಂಕಿಯ ಹುಡುಕಾಟದ ಜೊತೆಯಲ್ಲಿ ಸಮಾಜದ ಅವ್ಯವಸ್ಥೆ ರಾಚುತ್ತದೆ.
ಕೃಷ್ಣೇಗೌಡ, ನಿರ್ಮಾಪಕ
ಯಾರು ಹೇಗೆ?
ಇಂತಹ ಕಥೆಗೆ ನುರಿತ ಕಲಾವಿದರ ಅಗತ್ಯವಿಲ್ಲ. ಯಾಕೆಂದರೆಬಿಲ್ಲಿ ಗಟ್ಟಿ ಕಥೆ ಇದೆ. ಅಲ್ಲಿ ಯಾರೇ ಇದ್ದರೂ ಕಥೆಯೇ ಎದ್ದುಬಕಾಣುತ್ತೆ. ಅಕ್ಷತಾ ಅಮ್ಮನಾಗಿ ಇಷ್ಟವಾಗುತ್ತಾರೆ. ಮಗು ಕಳಕೊಂಡು ಚಡಪಡಿಸುವ ನೈಜ ಅಭಿನಯ ಮೂಲಕ ಮೆಚ್ಚುಗೆ ಆಗುತ್ತಾರೆ. ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಸೇರಿದಂತೆ ಕೊಳಗೇರಿ ವಾಸಿಗಳಾಗಿ ಕಾಣಿಕೊಂಡ ಸಣ್ಣಮ್ಮ, ಅನುಷ ಕಲಾವಿದರಿಗೆ ಇದು ಹೊಸತಾದರೂ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ಕಥೆಗೆ ಪೂರಕವಾಗಿ ಸಂಗೀತವೂ ಇದೆ.
ಅದೇನೆ ಇರಲಿ, ನಮ್ಮ ನಡುವೆ ನಡೆಯೋ ಇಂತಹ ಘಟನೆಗಳನ್ನು ದೃಶ್ಯರೂಪಕ್ಕೆ ಅಳವಡಿಸಿ ಮನಕಲಕುವಂತೆ ಮಾಡಿರುವ ತಂಡದ ಪ್ರಯತ್ನ ಸಾರ್ಥಕ.