Categories
ಸಿನಿ ಸುದ್ದಿ

ರಿಷಿ ಈಗ ಶೈತಾನ್! ಕ್ರೈಮ್ ಡ್ರಾಮಾ ವೆಬ್ ಸಿರೀಸ್ ಗೆ ಹೊಸ ಅವತಾರ!! ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಜೂ.15ಕ್ಕೆ ಶುರು…

ಈಗೇನಿದ್ದರೂ ಡಿಜಿಟಲ್ ಜಮಾನ. ಒಟಿಟಿ ಮೂಲಕ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಪ್ರೇಕ್ಷಕರ ಎದುರು ಬರುತ್ತಿವೆ. ಬಾಲಿವುಡ್ ಚಿತ್ರರಂಗದ ದೊಡ್ಡ ದೊಡ್ಡ ತಾರೆಯರು ಹಾಗೂ ಫಿಲ್ಮಂ ಮೇಕರ್ಸ್ ಸಹ ವೆಬ್ ಸಿರೀಸ್ ಗಳತ್ತ ಚಿತ್ತ ಹರಿಸಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿಯೂ ವೆಬ್ ಸಿರೀಸ್ ಗಳ ನಿರ್ಮಾಣ ಜೋರಾಗಿ ನಡೆಯುತ್ತಿದೆ. ಕನ್ನಡ ತಾರೆಯರು ಕೂಡ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಪ್ರತಿಭಾನ್ವಿತ ನಟ ರಿಷಿ.

ಸಿನಿಮಾಗಳು ಹಾಗೂ ಪಾತ್ರಗಳ ಆಯ್ಕೆಯಲ್ಲಿ ಇವರು ಬಹಳ ವಿಭಿನ್ನ. ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಯಾವುದೇ ಇರಲಿ ಎಲ್ಲದಕ್ಕೂ ಸರಿಹೊಂದುವ ನಟ ರಿಷಿ. ಅದಕ್ಕೆ ಉದಾರಹಣೆ ಅಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾಗಳು. ಪ್ರತಿ ಸಿನಿಮಾದಲ್ಲಿಯೂ ಹೊಸ ಬಗೆಯ ಕಂಟೆಂಟ್, ಕ್ಯಾರೆಕ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ತಾವೊಬ್ಬ ಪ್ರತಿಭಾನ್ವಿತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸದ್ಯ ರಾಮನ ಅವತಾರ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ರಿಷಿ ಒಂದಷ್ಟು ಹೊಸ ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ಈಗ ವೆಬ್ ಸಿರೀಸ್ ಜಗತ್ತಿನಲ್ಲಿಯೂ‌ ತಮ್ಮ ನಟನ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ತೆಲುಗಿನ ಹೆಸರಾಂತ ನಿರ್ದೇಶಕರಾದ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ಶೈತಾನ್ ಮೂಲಕ ರಿಷಿ ತೆಲುಗು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೆಬ್ ಸರಣಿಯಲ್ಲಿ ರಿಷಿ ಬಾಲಿ‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್ ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಕಂಪ್ಲೀಟ್ ಮಾಸ್ ಅವತರಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 15ರಂದು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಶೈತಾನ್ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಭಾಷೆ ಜೊತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸರಣಿ ಮೂಡಿಬರಲಿದೆ.

ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ ಭಾಗವಾಗಿದ್ದಾರೆ. ಹಾಗ್ ನೋಡಿದರೆ ತೆಲುಗು ಚಿತ್ರರಂಗದಲ್ಲಿಯೂ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಹಾಗಿದ್ದರೂ ರಿಷಿ ಅವರಿಗೆ ಶೈತಾನ್ ವೆಬ್ ಸಿರೀಸ್ ಸಿಗೋದಿಕ್ಕೆ ಅವರ ಅಭಿನಯವೇ ಕಾರಣ. ರಿಷಿ ಸಿನಿಮಾಗಳನ್ನು ನೋಡಿ ಥ್ರಿಲ್ ಆಗಿದ್ದ ನಿರ್ದೇಶಕ ಮಹಿ ರಾಘವ್ ತಮ್ಮ ವೆಬ್ ಸಿರೀಸ್ ತಾವೇ ನಟಿಸುವ ಆಫರ್ ಇಟ್ಟಿದ್ದರು. ಅದಕ್ಕೆ‌ ನೋ ಎನ್ನದ ರಿಷಿ, ಬಾಲಿಯಾಗಿ ಅಬ್ಬರಿಸಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಹಾಗೂ ಕನ್ನಡ ಕಲಾವಿದರ ನಟನೆಗೆ ಒಂದೊಳ್ಳೆ ಬೆಲೆ ಸಿಗುತ್ತಿದೆ. ನಮ್ಮ ಇಂಡಸ್ಟ್ರೀಯ ಸ್ಟಾರ್ಸ್ ಅಕ್ಕಪಕ್ಕದ ಸಿನಿ ಲೋಕದಲ್ಲಿ ಮಿಂಚು ಹರಿಸುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ರಿಷಿ.

ಕಾಮಿಡಿ, ಸಸ್ಪೆನ್ಸ್ ಪಾತ್ರದ ಮೂಲಕ ಗಮನಸೆಳೆದಿದ್ದ ಅವರೀಗ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಡಲು ಸಜ್ಜಾಗಿದ್ದಾರೆ. ಬಹುಕೋಟಿ ಬಜೆಟ್ ನಲ್ಲಿ ತಯಾಗಿರುವ ಶೈತಾನ್ ಮೂಲಕ ಇಡೀ ಇಂಡಿಯನ್ ಸಿನಿಲೋಕಕ್ಕೆ ಪರಿಚಯವಾಗಲಿದ್ದಾರೆ. ಕನ್ನಡದ ಹುಡ್ಗನ ಪ್ರತಿಭೆ ಗಮನಿಸಿ, ಅವರಿಂದ ಮಾತ್ರ ಈ ಪಾತ್ರ ಮಾಡಲು ಸಾಧ್ಯ ಅಂತಾ ಅವಕಾಶ ನೀಡಿರುವ ನಿರ್ದೇಶಕ ಮಹಿ ರಾಘವ್ ಹಾಗೂ ಇಡೀ ಚಿತ್ರತಂಡಕ್ಕೆ ರಿಷಿ ಧನ್ಯವಾದ ಅರ್ಪಿಸಿದ್ದಾರೆ.

Categories
ಸಿನಿ ಸುದ್ದಿ

ಹಿರಿಯ ಕಲಾವಿದೆ ಲೀಲಾವತಿ ಮನೆಯಲ್ಲಿ ಕನ್ನಡ ಕಲಾವಿದರು: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಅಂದ್ರು ಸನ್ಮಾನಿಸಿದರು

ಮಹಿಳಾ ದಿನದ ಅಂಗವಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಿರಿಯ ನಟಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಿತ್ತು. ಆದರೆ ವಯೋಸಹಜ ಕಾಯಿಲೆ ಅವರು ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ.

ಹೀಗಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಅವರ ತೋಟದ ಮನೆಗೆ ಭೇಟಿ ನೀಡಿ ಹಿರಿಯ ನಟಿಯನ್ನು ಕನ್ನಡ ಕಲಾಬಳಗ ಸನ್ಮಾನ ಮಾಡುವ ಕಾರ್ಯಕ್ರಮ ನೆರವೇರಿದೆ.

ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರು ‘ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ” ಪ್ರಶಸ್ತಿ ಪ್ರದಾನ ಮಾಡಿ ಹಿರಿಯ ಚೇತನವನ್ನು ಗೌರವಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಕಲಾಬಳಗವೇ ಲೀಲಾವತಿ ಅವರ ಮನೆಗೆ ಆಗಮಿಸಿತ್ತು.

ಹಿರಿಯ ನಟರಾದ ಶ್ರೀಧರ್, ದೊಡ್ಡಣ್ಣ, ಸುಂದರ್ ರಾಜ್, ಜೈಜಗದೀಶ್, ಹಿರಿಯ ನಟ ಗಿರಿಜಾ ಲೋಕೇಶ್, ಪದ್ಮಾವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾಗಾಂಧಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಹಾಗೂ ಮಂಡಳಿ ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ನಟ ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು. ನಟ ನಟಿಯರನ್ನು ಬರಮಾಡಿಕೊಂಡ ಲೀಲಾವತಿ ಅವರ ಮಗ ವಿನೋದ್ ರಾಜ್ ಕಲಾವಿದರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಲೀಲಾವತಿ ಅವರ ಸಿನಿಮಾಗಳ ಹಾಡುಗಳ, ನೃತ್ಯ ಕಾರ್ಯಕ್ರಮದ ಹೈಲೆಟ್ಸ್.

Categories
ಸಿನಿ ಸುದ್ದಿ

ರಾಮ ಜೆಂಟಲ್ ಮ್ಯಾನ್ ಅವತಾರ! ರಾಮನ ಅವತಾರ ಹಾಡು ರಿಲೀಸ್

ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ರಾಮ ಈಸ್ ಜೆಂಟಲ್ ಮ್ಯಾನ್ ಎಂಬ ಸಿಂಗಿಂಗ್ ಮಸ್ತಿಗೆ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಕಂ ರೋಮ್ಯಾಂಟಿಕ್ ಹಾಡಾಗಿರುವ ರಾಮ ಈಸ್ ಜೆಂಟಲ್ ಮ್ಯಾನ್ ನಲ್ಲಿ ರಿಷಿ ತನ್ನ ಪ್ರೀತಿಯನ್ನು ನಾಯಕಿ ಶುಭ್ರಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ.

ಈ ಹಾಡಿನ ಚಿತ್ರೀಕರಣ ಸಾವನದುರ್ಗ ಮತ್ತು ಶಿವಗಂಗೆ ಸ್ಥಳಗಳಲ್ಲಿ ಮಾಡಿದ್ದು… ವೆಸ್ಟೆರ್ನ್ ಶೈಲಿಯ ಸಂಗೀತಕ್ಕೆ ಪಕ್ಕಾ ದೇಸಿ ಟಚ್ ಕೊಟ್ಟಂತಿದೆ. ಸಾಹಿತ್ಯ ಕೇಳಲು ಇಂಪಾಗಿರುವದರ ಜೊತೆಗೆ ಪ್ರೇಕ್ಷರ ಮುಖದಲ್ಲಿ ನಗುವನ್ನು ತರಿಸುವುದರಲ್ಲಿ ಯಶಸ್ವಿಯಾಗಿದೆ. .. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ರಿಷಿ ರಾಮ ಐಸ್ ಆ ಜೆಂಟಲ್ ಮ್ಯಾನ್ ಹಾಡಿನಲ್ಲಿ ಕುಣಿದು ಜನರನ್ನು ಮನೋರಂಜಿಸಿದ್ದಾರೆ. ಈ ಹಾಡಿನ ಮುಖಾಂತರ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿರುವ ಚಿತ್ರತಂಡ ಚಿತ್ರದ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಟೀಸರ್ ಮೂಲಕ ಭರಪೂರ ಕಾಮಿಡಿ ಉಣಬಡಿಸಿದ್ದ ರಾಮನ ಅವಾತರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದೆ.

, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ರವಿ ಬಸ್ರೂರ್ ಪುತ್ರ ಸಿನಿಮಾಗೆ ಎಂಟ್ರಿ: ಕ್ಲಿಕ್ ಮೂಲಕ ಪವನ್ ಬಣ್ಣ

ಉಗ್ರಂ, ಮಫ್ತಿ, ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಗಾಯಕರಾಗಿಯೂ, ನಿರ್ಮಾಪಕರಾಗಿಯೂ ಸ್ಯಾಂಡಲ್ ವುಡ್ ಗೆ ಚಿರಪರಿತ. ಪರಭಾಷೆಯ ಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ ಎಂಬ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರ್ ಮಗ ಪವನ್ ಬಸ್ರೂರ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಮಾಸ್ಟರ್ ಪವನ್ ಜೊತೆಯಲ್ಲಿ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಉಳಿದಂತೆ ಚಂದ್ರಕಲಾಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ ಸಾಗುವ ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕೋ ಡೈರೆಕ್ಟರ್ ಆಗಿ ವೀರು ಸಾಥ್ ಕೊಟ್ಟಿದ್ದಾರೆ.

ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ. ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರುಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಅಂಬರೀಶ್ ಹುಟ್ಟು ಹಬ್ಬಕ್ಕೆ ಪುತ್ರ ಅಭಿಷೇಕ್ ವಿಶೇಷ ವೀಡಿಯೋ

ಮೇ 29. ಡಾ. ಅಂಬರೀಶ್ ಅವರ 71ನೇ ಹುಟ್ಟು ಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈ ಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ ಸಹ ಕಾಣಿಸಿಕೊಂಡಿರುವುದು ವಿಶೇಷ.

ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವೀವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವೀವಾ ಜೊತೆಗೆ ದಾಂಪತ್ಯ ಚಿತ್ರಕ್ಕೆ ಕಾಲಿಡುತ್ತಿದ್ದಾರೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Categories
ಸಿನಿ ಸುದ್ದಿ

ಆನಂದ್ ಆಡಿಯೋಗೆ ಒಲಿದ ಯುಟ್ಯೂಬ್ ಡೈಮಂಡ್ ಬಟನ್: ಚಿತ್ರೋದ್ಯಮಕ್ಕೆ ಶ್ಯಾಮ್-ಆನಂದ್ ಧನ್ಯವಾದ

ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತ ಬಂದಿರುವ
ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ.

ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಬಟನ್ ಸಿಕ್ಕಿದೆ.

“ಮೇ 24, ಆನಂದ್ ಆಡಿಯೋ ಮಾಲೀಕರಾದ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ.

ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಧನ್ಯವಾದ ತಿಳಿಸಿದ್ದಾರೆ

Categories
ಸಿನಿ ಸುದ್ದಿ

ಹತ್ಯ ನೋಡೋಕೆ ರೆಡಿ: ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ದೆಹಲಿ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ ಘಟನೆಗಳು ಸೇರಿದಂತೆ ಇಂತಹ ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವೆ “ಹತ್ಯ”.

ಈ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ನೋವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ನೋವು ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ ಇದೇ ಚಿತ್ರದ ಕಥಾಹಂದರ. ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಗಂಗಾಧರ್(ಗಂಗು).

ವರುಣ್ ‌.ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

ಸಾಗರಂ ವಲ್ಡ್ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

Categories
ಸಿನಿ ಸುದ್ದಿ

ತಂದೆ ಮಗನ ಬಾಂಧವ್ಯಕ್ಕೆ ಡಾಲಿ ಸಾಥ್: ಪರಂವಃ ಹಾಡು ರಿಲೀಸ್ ಮಾಡಿದ ಧನಂಜಯ

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಪರಂವಃ”.

ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ ” ಭೂರಮೆಲಿ ಮತ್ಯಾರು” ಎಂಬ ತಂದೆ – ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ “ಪರಂವಃ” ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.

ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ – ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ – ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.

ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಯಾರದು ಈ ಫಾರೆಸ್ಟ್ ಕಾರು? ಹೀಗೊಂದು ಫ್ಯಾಂಟಸಿ, ಹಾರರ್ ಚಿತ್ರ

ಸದ್ದಿಲ್ಲದೆ “ಫಾರೆಸ್ಟ್‌ ಕಾರ್” ಎಂಬ ವಿಭಿನ್ನ ಬಗೆಯ ಕಥಾ ಹಂದರದ ಸಿನಿಮಾ ಚಿತ್ರೀಕರಣ ಮುಗಿಸಿದೆ. ಮೆಡ್ಲೇ ಸ್ಟುಡಿಯೋ ಬ್ಯಾನರ್‌ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಈ ಚಿತ್ರ ಫ್ಯಾಂಟಸಿ ಮತ್ತು ಹಾರರ್ ಕಥಾಹಾಂದರಹೊಂದಿದೆ. ಅತ್ಯಾಧುನಿಕ ಹಾಗೂ ವಿಭಿನ್ನ‌ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರ ತಂಡ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್ ಕಾರ್ಯದಲ್ಲಿ ನಿರತವಾಗಿದೆ. ಈ ಚಿತ್ರಕ್ಕೆ ಹರ್ಷಿತ್ ನಿರ್ದೇಶಕರು. ವೆಂಕಟೇಶ್ ನಲ್ಲಿಬಿಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಪ್ರವೀಣ್‌ ರೆಡ್ಡಿ ನಾಯಕ ನಟರಾಗಿದ್ದು, ಅವರ ಜೊತೆಗೆ ವರ್ಣಿಕ ಶೆಟ್ಟಿ ನಾಯಕಿ.

ಬೆಂಗಳೂರು, ಹೈದ್ರಾಬಾದ್‌ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗಲಿರುವ. ಚಿತ್ರವು ಎಲ್ಲಾ ವರ್ಗದವರನ್ನು ಆಕರ್ಷಿಸಲು ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ಜೂನ್ 2ಕ್ಕೆ ಪಿಂಕಿ ಸಿಕ್ತಾಳೆ! ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಿಂಕಿ ಎಲ್ಲಿ ರಿಲೀಸ್

ಪ್ರಪಂಚದಾದ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ “ಪಿಂಕಿ ಎಲ್ಲಿ?” ಚಿತ್ರ ಜೂನ್ 2 ರಂದು ಬಿಡುಗಡೆಯಾಗುತ್ತಿದೆ‌. ಈ ವಿಷಯವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.

ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಅವರು ನಿರ್ಮಾಣಕ್ಕೆ ಮುಂದಾದರು. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ‌.

ಅದರಲ್ಲೂ ಗುಂಜಲಮ್ಮ ಹಾಗೂ ಸಂಗಮ್ಮ ಇಬ್ಬರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ಲಂ ನಿವಾಸಿಗಳು. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ ‌. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಜೂನ್ ಎರಡರಂದು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪೃಥ್ವಿ ಕೋಣನೂರು ತಿಳಿಸಿದರು.

ನಿರ್ದೇಶಕರು ಕಥೆ ಹೇಳುವ ರೀತಿಯೆ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು ಎಂದರು ನಟಿ ಅಕ್ಷತಾ ಪಾಂಡವಪುರ.

ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಮಗು ಕಳೆದು ಹೋಗಿರುವ ಸುತ್ತಲ್ಲಿನ ಕಥೆ ಎಂದು ಕಥೆಯ ಒಂದೆಳೆ ಹೇಳಿದರು. ನಾನು ಆಗಲೇ ಚೆನ್ನಾಗಿದೆ . ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ಹೇಳಿದೆ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ – ತಾಯಿ ಕೆಲಸಕ್ಕಾಗಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಕೃಷ್ಣೇಗೌಡ.

ಚಿತ್ರದಲ್ಲಿ ನಟಿಸಿರುವ ದೀಪಕ್ ಸುಬ್ರಹ್ಮಣ್ಯ, ಗುಂಜಲಮ್ಮ, ಸಂಗಮ್ಮ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

error: Content is protected !!