Categories
ಸಿನಿ ಸುದ್ದಿ

ಯಥಾಭವ ಎಂಬ ಕೋರ್ಟ್ ಡ್ರಾಮ: ಡಬ್ಬಿಂಗ್ ಮುಗೀತು- ಆ.25ಕ್ಕೆ ಟೀಸರ್ ರಿಲೀಸ್

ಗೌತಮ್ ಬಸವರಾಜ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ “ಯಥಾಭವ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪ್ರಸ್ತುತ ಡಬ್ಬಿಂಗ್ ಸಹ ಪೂರ್ಣವಾಗಿದೆ. “ಕೋರ್ಟ್ ಡ್ರಾಮ” ಜಾನರ್ ನ ಈ ಚಿತ್ರದ ಟೀಸರ್ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.

ಪವನ್ ಶಂಕರ್ ಹಾಗೂ ಸಹನ ಸುಧಾಕರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ದತ್ತಣ್ಣ, ಬಾಲ ರಾಜವಾಡಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅಭಿನಯಿಸಿದ್ದಾರೆ.

ಎಂಭತ್ತರ ಹರಯದಲ್ಲೂ ಯುವಕರು ನಾಚುವಂತಹ ದತ್ತಣ್ಣ ಈ ಚಿತ್ರದಲ್ಲಿ ನ್ಯಾಯಾಧೀಶರಾಗಿ ಅಭಿನಯಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರು ವಕೀಲರಾಗಿ ಹಾಗೂ ಬಾಲ ರಾಜವಾಡಿ ಅವರು ಗೃಹ ಸಚಿವರಾಗಿ ಕಾಣಿಸಿಕೊಂಡಿದ್ದಾರೆ. ಮೂವರ ಅಭಿನಯವೂ ಮನೋಜ್ಞವಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು.

ನಿರ್ದೇಶಕ ಗೌತಮ್ ಬಸವರಾಜ್ ಅವರು ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಬಹುತೇಕ ತಂತ್ರಜ್ಞರು ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ಮೂರುವರ್ಷಗಳ‌ ಕಾಲ ಫಿಲಂ ಮೇಕಿಂಗ್ ಕೋರ್ಸ್ ಮುಗಿಸಿ ಈ ಮಾಡಿರುವುದು ವಿಶೇಷ.

Macht entertainments ಲಾಂಛನದಲ್ಲಿ ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ.ಎನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್, ನೃತ್ಯ ನಿರ್ದೇಶನವಿದೆ.

ಸ್ಮಿತ ಕುಲಕರ್ಣಿ ಕಲಾ ನಿರ್ದೇಶನ ಹಾಗೂ ನಿರ್ಮಾಲ್ ಜೋಶಿ ಅವರ ಸಹ ನಿರ್ದೇಶನವಿದೆ. ಉತ್ಸವ್ ಶ್ರೇಯಸ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಹಾಡುಗಳನ್ನು ಬರೆದಿದ್ದಾರೆ.

ಹಿರಿಯ ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ತೋತಾಪುರಿ ಹಿಡಿದ ಡಾಲಿ: ಜಗ್ಗೇಶ್ ಜೊತೆ ಧನಂಜಯ್ ಅಬ್ಬರ

ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದ್ದ ‘ತೋತಾಪುರಿ’, ಬಿಡುಗಡೆಯಾದ ಮೇಲೂ ಗಮನ ಸೆಳೆದಿತ್ತು. ಇದೀಗ ‘ತೋತಾಪುರಿ-2’ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಹರಿಬಿಟ್ಟ ಈ ಸಿನಿಮಾದ ಪೋಸ್ಟರ್‌ಗಳು ಹಾಗೂ ಹಾಡೊಂದು ನಾನಾ ಕಾರಣಗಳಿಂದಾಗಿ ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಎಂಬುದು ಒಂದೆಡೆಯಾದರೆ, ಎರಡು ಭಾಗಗಳಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಕಾನಿಸಿಕೊಂಡಿರೋದು ವಿಶೇಷ.

ಡಾಲಿ ಧನಂಜಯ್ ಈವರೆಗೂ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಮಿಂಚು ಹರಿಸಿದ್ದಾರೆ. ಅವರು ನಟಿಸಿರುವ ಪಾತ್ರಗಳಲ್ಲಿ ನಾಯಕ-ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದೀಗ ‘ತೋತಾಪುರಿ-2’ ಮೂಲಕ ಮತ್ತಷ್ಟು ಸೌಂಡು ಮಾಡಲು ಸಜ್ಜಾಗಿದ್ದಾರೆ ಡಾಲಿ.

ಈಗಾಗಲೇ ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಇತ್ಯಾದಿ ವಿಷಯಗಳ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ. ಇದೀಗ ‘ತೋತಾಪುರಿ-2’ ಬಿಡುಗಡೆಯ ಹಂತಕ್ಕೆ ಬಂದಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಒಂದಷ್ಟು ವಿವರಣೆ ಹೊರಬಿದ್ದಿದೆ.

ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಬೃಹತ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್‌ಸ್ಟೈಲ್, ಲವ್‌ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳ್ನು ‘ತೋತಾಪುರಿ-೨’ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಇತ್ತೀಚೆಗಷ್ಟೇ ಡಾಲಿ ಹಾಗೂ ಸುಮನ್ ರಂಗನಾಥ್ ಕಾಣಿಸಿಕೊಂಡಿರುವ ‘ಮೊದಲ ಮಳೆ’ ಹಾಡು ಬಿಡುಗಡೆಯಾಗಿದ್ದು. ಇದೀಗ ‘ಲಾಂಗ್ ಡ್ರೈವ್ ಹೋಗೋಣ’ ಎಂಬ ಹಾಡು ಸಹ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಡಾಲಿ ಮೂರ‍್ನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಶೇಡ್ ಕೂಡ ಇರಲಿದೆ ಎಂಬುದು ಸದ್ಯದ ಮಾಹಿತಿ. ಈವರೆಗೂ ಕಾಣಿಸಿಕೊಂಡಿರದ ಸ್ಟೈಲ್, ಮಾತಿನ ಲಹರಿ ‘ತೋತಾಪುರಿ-2′ ಮೂಲಕ ಅನಾವರಣ ಮಾಡಲು ಸಜ್ಜಾಗಿದೆ ಚಿತ್ರತಂಡ. ಬಿಡುಗಡೆಗೂ ಮುನ್ನ ಡಾಲಿ ಗೆಟಪ್‌ಗಳನ್ನು ಹರಿಬಿಟ್ಟಿರುವ ಚಿತ್ರತಂಡ, ಸಿನಿಮಾ ಮೇಲೆ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಮೈಸೂರು, ಕೂರ್ಗ್, ಕೇರಳ ಸೇರಿದಂತೆ ರಮಣೀಯ ಸ್ಥಳಗಳಲ್ಲಿ ಡಾಲಿ-ಸುಮನ್ ಅಭಿನಯಿಸಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಇನ್ನು ಡಾಲಿ ಜೋಡಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ನಾಗಚೈತನ್ಯ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ: ಕಾರ್ತಿಕೇಯ-2 ನಿರ್ದೇಶಕನ ಜೊತೆ ಹೊಸ ಚಿತ್ರ

ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಅದಕ್ಕಾಗಿ ಅವರು ಆಂಧ್ರ ಪ್ರದೇಶದ ಶ್ರೀಕಾಕುಳಂ ಹಳ್ಳಿಗೆ ಭೇಟಿ ನೀಡಿ ಮೀನುಗಾರರ ಸಮುದಾಯ ಭೇಟಿ ಮಾಡಿ ಕೆಲ ಸಮಯ ಅವರೊಟ್ಟಿಗೆ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಅಂದಹಾಗೇ ನಾಗಚೈತನ್ಯ ನಟಿಸುತ್ತಿರುವ 23 ನೇ ಚಿತ್ರ ಇದಾಗಿದ್ದು, ನೈಜ ಘಟನೆಯ ಸುತ್ತ ಇಡೀ ಕಥೆಯನ್ನು ಕಟ್ಟಿಕೊಡಲಾಗಿದೆ.

ಕಾರ್ತಿಕೇಯ-2 ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದ್ದು, ಶೀಘ್ರದಲ್ಲೇ ಈ ಚಿತ್ರ ಸೆಟ್ಟೇರುತ್ತಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.

NC23 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಇದೇ ತಿಂಗಳಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ನಾಗಚೈತನ್ಯ, ಚಂದೂ ಮೊಂಡೇಟಿ ಹಾಗೂ ಬನ್ನಿ ವಾಸ್ ನಿನ್ನೆ ವೈಜಾಗ್ ನಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಶ್ರೀಕಾಕುಳಂ ಗ್ರಾಮಕ್ಕೆ ತೆರಳಿ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ‌ ಮಾತನಾಡಿದ ನಾಯಕ ನಾಗಚೈತನ್ಯ, “ಚಂದು ಅವರು 6 ತಿಂಗಳ ಹಿಂದೆ ಕಥೆಯನ್ನು ಹೇಳಿದ್ದರು. ನಾನು ತುಂಬಾ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಅವರು ಕಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಾಸ್ ಮತ್ತು ಚಂದೂ ಎರಡು ವರ್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಥೆ ತುಂಬಾ ಸ್ಪೂರ್ತಿದಾಯಕವಾಗಿತ್ತು. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಇಂದಿನಿಂದ ಪ್ರಾರಂಭವಾಗುತ್ತವೆ. ”

ಚಂದೂ ಮೊಂಡೇಟಿ, “ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ 2018 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅವರು ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಕಥೆಯನ್ನು ಹೇಳಿದರು. ಕಥೆ ಕೇಳಿದಾಗ ಎಕ್ಸೈಟ್ ಆದೆ. ನಾವು ಕಳೆದ 2 ವರ್ಷಗಳಿಂದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ.

ಇದೀಗ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಚೆನ್ನಾಗಿ ಬಂದಿದೆ. ಚೈತನ್ಯ ಕಥೆಯಿಂದ ಸಂತಸಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಆರಂಭಿಸಲು ನಾವು ಬಯಸಿದ್ದೇವೆ ಎಂದರು.

ಶೀಘ್ರದಲ್ಲೇ ಈ ಪ್ರಾಜೆಕ್ಟ್ ಅಪ್ ಡೇಟ್ ಬಗ್ಗೆ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.

Categories
ಸಿನಿ ಸುದ್ದಿ

ಸ್ಕಂದ ಸಿನಿಮಾದ ಮೊದಲ ಹಾಡು ಬಂತು: ಉಸ್ತಾದ್ ರಾಮ್ ಪೋತಿನೇನಿ- ಶ್ರೀಲೀಲಾ ಸ್ಟೆಪ್

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆಕ್ಷನ್ ಎಂಟರ್ ಟೈನರ್ ಸ್ಕಂದ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿನ್ ಸುತ್ತ ಸುತ್ತ ತಿರುಗಿದೆ ಎಂಬ ಗಾನ ಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠ ಕುಣಿಸಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಐದು ಭಾಷೆಯಲ್ಲಿಯೂ ಸ್ಕಂದ ಹಾಡು ಬಿಡುಗಡೆಯಾಗಿದೆ.

ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾಗಾಗಿ ಮಾಸ್ ಅವತಾರ ತಾಳಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಸಂಗೀತ ಚಿತ್ರಕ್ಕಿದೆ. ಸ್ಕಂದ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

ಸ್ಕಂದ ಸಿನಿಮಾವನ್ನು ದಸರಾ ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ದಸರಾಗೂ ಮೊದ್ಲೇ ಅಂದರೆ ಸೆಪ್ಟಂಬರ್ 15ರಂದು ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಚಿತ್ರ ತೆರೆಕಾಣಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ಸ್ಕಂದ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕೆಎಂಎಫ್ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ ಹಾಗೆ ಶಿವಣ್ಣ ಕೂಡ ಸಂಭಾವನೆ ಬೇಡ ಅಂದ್ರು

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆ ಎಂ ಎಫ್‌) ಉತ್ಪನ್ನಗಳಿಗೆ ಯಾವುದೇ ಸಂಭಾವನೆ ಪಡೆಯದೇ ‘ನಟಸಾರ್ವಭೌಮ’ ಡಾ ರಾಜ್‌ಕುಮಾರ್ ಅವರು ರಾಯಭಾರಿಯಾಗಿದ್ದರು. ಅವರ ಬಳಿಕ ನಟ ಪುನೀತ್ ರಾಜ್‌ಕುಮಾರ್ ಕೂಡ ಅಣ್ಣಾವ್ರ ಹಾದಿ ತುಳಿದಿದ್ದರು. ಈಗ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಕೆಎಂಎಫ್‌ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಯಾವುದೇ ರೀತಿಯ ಸಂಭಾವನೆ ಪಡೆಯದೆ ಅವರು ರಾಯಭರಿಯಾಗಿದ್ದಾರೆ.

ಆ ಹಿನ್ನೆಲೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಅವರು ಶಿವಣ್ಣ ನಿವಾಸಕ್ಕೆ ಭೇಟಿ ನೀಡಿ, ಶುಭಕೋರಿದ್ದಾರೆ.

Categories
ಸಿನಿ ಸುದ್ದಿ

ಬಯಲು ಸೀಮೆ ಮಂದಿಗೆ ಸಾಥ್ ನೀಡಿದ ಜೂ.ರೆಬೆಲ್ ಸ್ಟಾರ್: ಜವಾರಿ ಭಾಷೆಯ ಸಿನಿಮಾ ಟ್ರೇಲರ್ ಬಂತು

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ ‘ಬಯಲುಸೀಮೆ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. 2 ನಿಮಿಷ 50 ಸೆಕೆಂಡ್ ಇರುವ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದೆ.

ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಮೇಲಾಟದ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನಸೆಳೆದಿರುವ ಬಯಲುಸೀಮೆ ಸಿನಿಬಳಗ ಟ್ರೇಲರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ವರುಣ್ ಕಟ್ಟಿಮನಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.

ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ ಇರುವ ಬಯಲುಸೀಮೆ ಸಿನಿಮಾ ಇದೇ 18ಕ್ಕೆ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಉಸಿರೇ ಉಸಿರೇ ಅಂತ ಹಾಡಿದ ರಾಜೀವ್: ಅತಿಥಿ ಪಾತ್ರದಲ್ಲಿ ಕಿಚ್ಚ

ಬಿಗ್ ಬಾಸ್ ಖ್ಯಾತಿಯ ನಟ ರಾಜೀವ್ ನಾಯಕರಾಗಿ ನಟಿಸಿರುವ “ಉಸಿರೇ ಉಸಿರೇ” ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ “ಉಸಿರೇ ನನ್ನ ಉಸಿರೇ” ಎಂಬ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ವಾಸುಕಿ ವೈಭವ್ ಹಾಡಿರುವ ಈ ಹಾಡನ್ನು ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಹಾಗೂ ಭೀಮ ಜ್ಯುಯಲರ್ಸ್ ನ ಮಾಲೀಕರಾದ ವಿಷ್ಣು ಭಟ್ ಬಿಡುಗಡೆ ಮಾಡಿದರು.

ಇದೊಂದು ನವೀರದ ಪ್ರೇಮಕಥೆ. ಪ್ರೀತಿಗೆ ಜಾತಿಯಿಲ್ಲ ಎಂದು ಸಾರುವ ಕಥೆ ಎಂದು ಮಾತು ಪ್ರಾರಂಭಿಸಿದ ನಾಯಕ ರಾಜೀವ್, “ಉಸಿರೇ ಉಸಿರೇ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ‌. ಇತ್ತೀಚೆಗೆ ಬಳ್ಳಾರಿಯ ರೇಣುಕಾಂಬ ಜಾತ್ರೆಯಲ್ಲಿ ಹಾಗೂ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಚಿತ್ರದ ಟೀಸರ್ ಬಿಡುಗಡೆ‌ ಮಾಡಿದ್ದೆವು. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಎಲ್ಲರೂ ಸಾಮಾನ್ಯವಾಗಿ ಮೊದಲು ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡುತ್ತಾರೆ. ಆದರೆ ನಾವು ಪ್ಯಾತೋ ಸಾಂಗ್ ಬಿಡುಗಡೆ ಮಾಡಿದ್ದೇವೆ. ಈ ಹಾಡನ್ನು ಮೊದಲು ಬಿಡುಗಡೆ ಮಾಡಲು ಕಾರಣವೆಂದರೆ, ಈ ಹಾಡಿನಲ್ಲಿ ಇಡೀ ಚಿತ್ರದ ಕಥೆಯಿದೆ. ಹಾಡನ್ನು ಗಮನವಿಟ್ಟು ಕೇಳಿದಾಗ ನಮ್ಮ ಚಿತ್ರದ ಕಥೆ ಅರ್ಥವಾಗುತ್ತದೆ. ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟ ಗುರುಕಿರಣ್, ಭಾ.ಮ.ಹರೀಶ್ ಹಾಗೂ ವಿಷ್ಣು ಭಟ್ ಅವರಿಗೆ ಧನ್ಯವಾದ ತಿಳಿಸಿದರು.

ಇದು ನನ್ನ ಮೊದಲ ನಿರ್ಮಾಣದ ಚಿತ್ರ.‌ ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಪೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅವರ ಅಭಿನಯದ ಸನ್ನಿವೇಶಗಳು ಸುಮಾರು 18 ನಿಮಿಷಗಳು ಬರುತ್ತದೆ‌. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಪ್ರದೀಪ್ ಯಾದವ್.

ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸೆಪ್ಟೆಂಬರ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ನಮ್ಮ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟರಾದ ಡಾ.ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ.

ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಇನ್ನೂ ಮುಂತಾದವರ ತಾರಾಬಳಗವಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮುಂದೆ ಉಳಿದ ಹಾಡುಗಳು ಹಾಗೂ ಟ್ರೇಲರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಿ.ಎಂ.ವಿಜಯ್ ತಿಳಿಸಿದರು.

ನಾಯಕಿ ಶ್ರೀಜಿತ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಕುರಿತು ವಿವೇಕ್ ಚಕ್ರವರ್ತಿ ಮಾಹಿತಿ ನೀಡಿದರು. ನಿರ್ಮಾಪಕರ ತಾಯಿ ಪ್ರಮಿಳಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಜಲಪಾತಕ್ಕೆ ಧುಮುಕಿದ ಪ್ರತಿಭಾವಂತೆ ನಾಗಶ್ರೀ! ಬೆಳ್ಳಿತೆರೆಗೆ ಬಂದ ನಟಿ

ಶೃಂಗೇರಿ ಕಲೆಯ ನೆಲೆ. ಈಗಾಗಲೇ ಇಲ್ಲಿಂದ ಬಂದು ವಿವಿಧ ಕ್ಷೇತ್ರಗಳಂತೆ ಸಿನಿಮಾ ಮಾಧ್ಯಮದಲ್ಲೂ ನಭಾ ನಟೇಶ್ , ಸಂಗೀತ ಶೃಂಗೇರಿ ಯಂಥ ಕಲಾವಿದೆಯರು ಹೆಸರು ಮಾಡಿದ್ದಾರೆ. ಇವರ ಸಾಲಿಗೆ ಮತ್ತೊಬ್ಬ ಪ್ರತಿಭಾವಂತ ನಟಿ ನಾಗಶ್ರೀ ಬೇಗಾರ್ ಬೆಳ್ಳಿತೆರೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ

ಬಿಡುಗಡೆಗೆ ಸಿದ್ಧಗೊಂಡಿರುವ , ಮಲೆನಾಡ ಪರಿಸರದ ಕಥೆ ಹೊಂದಿದ ” ಜಲಪಾತ ” ಚಿತ್ರದ ಲೀಡ್ ರೋಲ್ ನಲ್ಲಿ ನಾಗಶ್ರೀ ಕಾಣಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ಮಲೆನಾಡು ಭಾಗದಲ್ಲಿ ಯಕ್ಷಗಾನ , ನಾಟಕ , ನೃತ್ಯ ಮತ್ತು ಕಿರುತೆರೆಯಲ್ಲಿ ಈಕೆ ಹೆಸರು ಮಾಡಿದ್ದ ಪ್ರತಿಭಾನ್ವಿತೆ. ನಂತರ ಈಕೆ ನಾಯಕಿಯಾಗಿ ನಟಿಸಿದ್ದ ಹುಚ್ಚಿಕ್ಕಿ ಎಂಬ ಕಿರುಚಿತ್ರ ಅಪಾರ ಹೆಸರು ತಂದುಕೊಟ್ಟಿತು.

ವೈಶಂಪಾಯನ ತೀರ ಸಿನಿಮಾದಲ್ಲಿ ಟಾಮ್ ಬಾಯ್ ಮಾದರಿಯ ಅತ್ಯಂತ ವಿಭಿನ್ನ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಪ್ರತಿಷ್ಠಿತ ನಾಟಕೋತ್ಸವ , ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಬಾಚಿಕೊಂಡ ರಂಗಭೂಮಿ ಪ್ರತಿಭೆಯೂ ಆಗಿದ್ದಾರೆ ನಾಗಶ್ರೀ.

ಜಲಪಾತ ಚಿತ್ರದಲ್ಲಿ 3 ಶೇಡ್ ಇರುವ ಸಂಕೀರ್ಣ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮಲೆನಾಡ ಪ್ರಾದೇಶಿಕ ಭಾಷೆಯನ್ನು ನಾಗಶ್ರೀ ಸಮರ್ಪಕವಾಗಿ ದುಡಿಸಿಕೊಂಡಿದ್ದು ಈ ಪ್ರತಿಭೆಗೆ ಉಜ್ವಲ ಅವಕಾಶಗಳು ತೆರೆದುಕೊಳ್ಳಲಿ.

ಚಾಲೆಂಜಿಂಗ್ ಪಾತ್ರಗಳ ನಿರೀಕ್ಷೆಯಲ್ಲಿ

ತನ್ನ ಕಲಾಚಟುವಟಿಗೆ ಶೃಂಗೇರಿ ಯಲ್ಲಿ , ಬಾಲ್ಯದಲ್ಲಿ ಸಿಕ್ಕ ಪರಿಸರ , ಊರಿನ ಸಾಂಸ್ಕೃತಿಕ ಹಿನ್ನೆಲೆ ತನಗೆ ವರದಾನವಾಯ್ತೆಂದು ತಿಳಿಸುವ ನಾಗಶ್ರೀ ಸದಾ ವಿಭಿನ್ನವಾದ ಪಾತ್ರಗಳನ್ನು ನಿರೀಕ್ಷಿಸುತ್ತಾರಂತೆ. ಈಗಾಗಲೇ ಮತ್ತೆ ಮಾಯಮೃಗ ಧಾರಾವಾಹಿ , ಬ್ಯಾಚುಲರ್ಸ್ ಪಾರ್ಟಿ , ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವೂ ಇರುವ ನಾಗಶ್ರೀ ಸ್ವತಃ ಗಾಯಕಿ . ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆಯೂ ಹೌದು. ಪಾತ್ರಗಳ ನಿರ್ವಹಣೆಗೆ ಅದರ ಒಳತೋಟಿಯನ್ನು ಹಿಡಿದು ಜೀವಿಸಬೇಕು ಎಂಬುದು ನಾಗಶ್ರೀ ಪ್ರತಿಪಾದನೆ.

Categories
ಸಿನಿ ಸುದ್ದಿ

ಚಂದ್ರಮುಖಿ-2 ಫಸ್ಟ್ ಲುಕ್ ರಿಲೀಸ್ ಮಾಡಿದ ತಲೈವ: ರಾಘವನ್ ಲಾರೆನ್ಸ್ ಈಗ ವೆಟ್ಟೈಯನ್ ರಾಜ

ರಾಘವ್ ಲಾರೆನ್ಸ್ ಹಾಗೂ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಘವ್ ಲಾರೆನ್ಸ್, ವೆಟ್ಟೈಯನ್ ರಾಜನ ಫಸ್ಟ್ ಲುಕ್ ಬಿಡುಗಡೆ ಮಾಡಿದ ತಲೈವರ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನಿಮಗೆ ಧನ್ಯವಾದಗಳು. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಗಣೇಶ್ ಹಬ್ಬಕ್ಕೆ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲಿಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಾ ವಾ ವಾ ವಾಮನ ಅಂತ ಹಾಡಿ ಕುಣಿದ ಧನ್ವೀರ್: ಮಾಸ್ ಎಂಟ್ರಿ ಕೊಟ್ಟ ಶೋಕ್ದಾರ್

ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ನಾಯಕನ ಇಂಟ್ಯೂಡಕ್ಷನ್ ಹಾಡಿಗೆ ಧನ್ವೀರ್ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.


ಈಕ್ವಿನಾಕ್ಸ್ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ “ಚೇತನ್‌ ಗೌಡ” ಅದ್ಧೂರಿಯಾಗಿ ನಿರ್ಮಿಸಿರುವ ವಾಮನ ಸಿನಿಮಾವನ್ನು ಯುವ ನಿರ್ದೇಶಕ “ಶಂಕರ್‌ ರಾಮನ್‌” ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕ ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್ ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ ಎಂದರು.

ನಾಯಕ‌ ಧನ್ವೀರ್ ಮಾತನಾಡಿ, ವಾಮನ ಇದು ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ನ್ನ ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್ ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲಾ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ ಎಂದರು.

ನಾಯಕಿ ರೀಷ್ಮಾ ನಾಣಯ್ಯ ಮಾತಾನಾಡಿ, ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್ ನಲ್ಲಿಯೇ ಫೈಟ್ ಇದೆ ಎಂದರು.

ನಿರ್ಮಾಪಕ ಚೇತನ್ ಗೌಡ ಮಾತನಾಡಿ, ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಿರ್ದೇಶಕರು, ಆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಿಯೂ ಶ್ರಮ ಕೊಡಲಿಲ್ಲ. ನಾನು ಶೂಟಿಂಗ್ ಸ್ಪಾರ್ಟ್ ಗೆ ಹೋಗಿರುವುದು ಕೇವಲ ನಾಲ್ಕು ದಿನವಷ್ಟೇ. ಅವರ ಮನೆ ಸಿನಿಮಾ ಎನ್ನುವಂತೆ ಎಲ್ಲರು ಕೆಲಸ ಮಾಡಿದ್ದಾರೆ. ಒಳ್ಳೆ ಸಿನಿಮಾ ಮಾಡಬೇಕೆಂದು ಬಂದಿದ್ದೆ. ಒಳ್ಳೆ ಸಿನಿಮಾ ಆಗಿದೆ. ಕನ್ನಡ ಸಿನಿಮಾರಂಗಕ್ಕೆ ನಮ್ಮೊಂದು ಕೊಡುಗೆ ಇರಲಿ ಎಂದು ಮಾಡಿದ್ದೇವೆ. ಕೈ ಹಿಡಿದು ಆಶೀರ್ವದಿಸಿ ಎಂದರು.

ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

error: Content is protected !!