Categories
ಸಿನಿ ಸುದ್ದಿ

ದೆವ್ವದ ಜೊತೆ ಪ್ರಥಮ್ ಫಸ್ಟ್ ನೈಟ್! ಶುರುವಾಯ್ತು ಹೊಸ ಚಿತ್ರ

ನಟ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ, ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಹಿರಿಯನಟ ಶ್ರೀನಿವಾಸಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದ್ದಾರೆ.

“ಫಸ್ಟ್ ನೈಟ್ ವಿತ್ ದೆವ್ವ” ಹಾರಾರ್ ವಿತ್ ಕಾಮಿಡಿ ಜಾನರ್ ನ ಚಿತ್ರ ಎಂದು ಮಾತನಾಡಿದ ನಾಯಕ ಪ್ರಥಮ್, ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನಾನು ಈ ಚಿತ್ರಕ್ಕೆ ಕಥೆ ಬರೆಯಲು “ವಿಕ್ರಮ್ ಮತ್ತು ಬೇತಾಳ” ಕಥೆ ಸ್ಪೂರ್ತಿ. ಸಾಕಷ್ಟು ಹಾರಾರ್ ಚಿತ್ರ ಬಂದಿದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ‌.

ನಿಖಿತ ಅವರು ನನ್ನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಮುಂತಾದವರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಮಾನ್ಯ ಸಿಂಗ್ ದೆವ್ವದ ಪಾತ್ರ ಮಾಡುತ್ತಿದ್ದಾರೆ. ನನ್ನ ಸ್ನೇಹಿತ ನವೀನ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಥಮ್ ಬರೆದಿರುವ ಕಥೆ ಚೆನ್ನಾಗಿದೆ. ನಾನು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ‌. ಇಂದಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಹಾಡಿನ ಚಿತ್ರೀಕರಣ ಹೊರದೇಶದಲ್ಲಿ ನಡೆಯಲಿದೆ ಎಂದರು ನಿರ್ದೇಶಕ ಪಿ.ವಿ.ಆರ್ ಸ್ವಾಮಿ.

ಚಿತ್ರದ ನಾಯಕಿರಾದ ನಿಖಿತ ಹಾಗೂ ಮಾನ್ಯ ಸಿಂಗ್, ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಶ್ರೀನಿವಾಸಮೂರ್ತಿ, ಸಂಗೀತ, ಹರೀಶ್ ರಾಜ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಅದ್ವಿಕ್ ವರ್ಮ ಹಾಗೂ ಸಂಭಾಷಣೆ ಬರೆದು ಸಂಕಲನ ಕಾರ್ಯವನ್ನು ಮಾಡುತ್ತಿರುವ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನವೆಂಬರ್ 22ಕ್ಕೆ ಡಂಕಿಯ ಲಪ್ ಟಪ್ ಗಯಾ ಹಾಡು ರಿಲೀಸ್: ಇದು ಮೊದಲ ರೊಮ್ಯಾಂಟಿಕ್ ಸಾಂಗ್

ಶಾರುಖ್‌ ಖಾನ್‌ ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್‌ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಡಂಕಿ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಡಂಕಿ ಸಿನಿಮಾದ ರೋಮ್ಯಾಂಟಿಕ್ ನಂಬರ್ ಇದೇ ತಿಂಗಳ‌ 22ರಂದು ರಿಲೀಸ್ ಆಗಲಿದೆ. ಲಪ್ ಪಟ್ ಗಯಾ ಎಂಬ ಸಾಹಿತ್ಯವುಳ್ಳ ಸುಮಧುರ ಹಾಡಿಗೆ ಪ್ರೀತಂ ಚಕ್ರವರ್ತಿ ಟ್ಯೂನ್ ಹಾಕಿದ್ದಾರೆ. ಹೇಗಿರಲಿ ಡಂಕಿ ಮೊದಲ ಗಾನಬಜಾನ ಎಂಬ ನಿರೀಕ್ಷೆ ಹೆಚ್ಚಿಸಿದೆ.

ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಇನ್ನೇನು ಡಿಸೆಂಬರ್‌ ಕೊನೇ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

Categories
ಸಿನಿ ಸುದ್ದಿ

ಬರ್ತ್ ಡೇ ಖುಷಿಯಲ್ಲಿ ಡಂಕಿ ಡೈರೆಕ್ಟರ್ : ರಾಜ್ ಕುಮಾರ್ ಹಿರಾನಿ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್. ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು ಜನ್ಮದಿನದ ಸಂಭ್ರಮ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ ಸಿನಿಮಾ ಅನೌನ್ಸ್ ಮಾಡಿರುವುದು ಗೊತ್ತೇ ಇದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ನಾಯಕನಾಗಿ ಶಾರುಖ್ ಖಾನ್ ನಟಿಸಿದ್ದು, ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಅತೀ ದೊಡ್ಡ ತಾರಾಬಳಗದ ಡಂಕಿ' ಸಿನಿಮಾ ವಿಶ್ವದಾದ್ಯಂತ ಕಣಕ್ಕಿಳಿಯಲು ಸಜ್ಜಾಗಿದ್ದು,ಸಲಾರ್’ ಎದುರು ಸ್ಪರ್ಧಿಸಲು ಸಿದ್ದವಾಗಿದೆ. ಇದೇ ಡಿಸೆಂಬರ್ 22ರಂದು ಮೋಸ್ಟ್ ಅವೈಟೆಡ್ ಡಂಕಿ ತೆರೆಗಪ್ಪಳಿಸಲಿದೆ.

Categories
ಸಿನಿ ಸುದ್ದಿ

ಝೀಬ್ರಾ ಶೂಟಿಂಗ್ ಮುಗೀತು; ಇದು ಡಾಲಿ- ಸತ್ಯದೇವ್ ಚಿತ್ರ

ಡಾಲಿ ಧನಂಜಯ್ ಹಾಗೂ ಸತ್ಯದೇವ್ ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ. ಶುರು ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

ಝೀಬ್ರಾ ಎಂಬ ಮಾಸ್ ಎಂಟರ್‌ಟೇನರ್ ಚಿತ್ರವಾಗಿದ್ದು, ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ.

ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್​ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

Categories
ಸಿನಿ ಸುದ್ದಿ

ನಂದಿ ಫಿಲ್ಮಂ ಅವಾರ್ಡ್-2023ರ ಕರ್ಟನ್ ರೈಸ್ ಗೆ ಸುದೀಪ್ ಚಾಲನೆ: ಡಿ. 6ಕ್ಕೆ ಪ್ರಶಸ್ತಿ ಸಮಾರಂಭ

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆ ನಡೆದಿದೆ. ನಂದಿ ಚಲನಚಿತ್ರ ಪ್ರಶಸ್ತಿ-2023ರ ಕರ್ಟನ್ ರೈಸ್ ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಹೊಸ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದರು.

ಕಿಚ್ಚ ಸುದೀಪ್ ಮಾತನಾಡಿ, ‌ಸಂಸ್ಥಾಪಕರಿಗೆ ಒಳ್ಳೆದಾಗಲಿ. ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗುವುದು ಬಿಟ್ಟು 2003-2004 ಕೊನೆ.‌ಆ ಬಳಿಕ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಅದಕ್ಕೆ ಬೇರೆ ಇತಿಹಾಸವಿದೆ. ‌ಆದರೆ ಇಲ್ಲಿ ಆ ಅವಾರ್ಡ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಎಲ್ಲರಿಗೂ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ನನ್ನ ಮನವಿ ಏನೆಂದರೆ ಯಾರಿಗೆ ಹೋಗಬೇಕು ಅವರಿಗೆ ಹೋಗಲಿ. ಮಿಕ್ಕಿದವರೆಲ್ಲಾ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ಅವರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ನಡೆಸುತ್ತೀರಾ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೋಗ್ರಾಂ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದರು.

ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ‘ನಂದಿ ಫಿಲ್ಮಂ ಅವಾರ್ಡ್’ ಸಂಸ್ಥಾಪರಾಗಿದ್ದಾರೆ. ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.

ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ಕನ್ನಡದ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದ್ದು, ನಂದಿ ಅವಾರ್ಡ್ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದ ಪ್ರೇಮ್ ನಿಖಿಲ್

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ‌. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಭರ್ಜರಿ ಯಶಸ್ವಿಯಾಗಲೆಂದು ಹಾರೈಸಿದರು. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

“ಶುಗರ್ ಫ್ಯಾಕ್ಟರಿ” ಎಂದರೆ ಒಂದು ಪಬ್ ನ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ದೀಪಕ್ ಅರಸ್, ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ ಹಾಗಾಗಿ ನಮ್ಮ ಚಿತ್ರಕ್ಕೆ “ಶುಗರ್ ಫ್ಯಾಕ್ಟರಿ” ಎಂದು ಹೆಸರಿಟ್ಟಿದ್ದೇವೆ‌. ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನೋರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ ಎಂದರು.

ಚಿತ್ರತಂಡದವರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಬಂದಿದೆ. ಇದೇ ನವೆಂಬರ್ 24ರಂದು ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಆರ್ ಗಿರೀಶ್.

“ಲವ್ ಮಾಕ್ಟೇಲ್” ಚಿತ್ರದ ನಂತರ ಕೇಳಿದ ಕಥೆ ಇದು. ನಾನು “ಲವ್ ಮಾಕ್ಟೇಲ್ ” ಚಿತ್ರದ ಆಡಿಶನ್ ನಲ್ಲಿ ಯುವಜನತೆ ಈಗ ಯಾವ ರೀತಿ ಕಥೆ ಇಷ್ಟ ಪಡುತ್ತಾರೆ ಎಂದು ಕೇಳುತ್ತಿದೆ‌. ಅದೇ ತರಹದ ಕಥೆಯನ್ನು ದೀಪಕ್ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.

ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಗೂ ನೃತ್ಯ ನಿರ್ದೇಶಕ ಧನಂಜಯ್ “ಶುಗರ್ ಫ್ಯಾಕ್ಟರಿ” ಬಗ್ಗೆ ಮಾತನಾಡಿದರು. ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಬರಗೂರು ಅವರ ಚಿಣ್ಣರ ಚಂದ್ರ ಚಿತ್ರ ಅಹಮದಾಬಾದ್ ಚಿತ್ರೋತ್ಸವಕ್ಕೆ ಎಂಟ್ರಿ

ಅಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಚಿಣ್ಣರ ಚಂದ್ರ” ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದ್ದು, ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ.

ಈ ಚಿತ್ರ ಈಗಾಗಲೇ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ.

“ಚಿಣ್ಣರ ಚಂದ್ರ” ಚಿತ್ರವು ಶಿಕ್ಷಣದ ಮಹತ್ವವನ್ನು ಸಾದರ ಪಡಿಸುತ್ತಲೇ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಚಿತ್ರಿಸುತ್ತದೆ.

ಬರಗೂರರ “ಅಡಗೂಲಜ್ಜಿ” ಎಂಬ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಿಸಿದ್ದಾರೆ.

ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ, ಷಡ್ಜ, ಈಶಾನ್, ಅಭಿನವ್ ನಾಗ್, ಸುಂದರರಾಜ್, ರೇಖಾ, ವತ್ಸಲ ಮೋಹನ್, ರಾಧ ರಾಮಚಂದ್ರ, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ಮುಂತಾದವರಿದ್ದಾರೆ.

ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ್ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತ ಮಲ್ನಾಡ್ ಕೆಲಸ ಮಾಡಿದ್ದಾರೆ. ಸಹ ನಿರ್ದೇಶಕರು ನಟರಾಜ್ ಶಿವ ಮತ್ತು ಪ್ರವೀಣ್.

“ಚಿಣ್ಣರ ಚಂದ್ರ” ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಲ್ಲದೇ ಶಾಲಾ ಮಕ್ಕಳಿಗೆ ರಾಜ್ಯದಾದ್ಯಂತ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ.

Categories
ಸಿನಿ ಸುದ್ದಿ

ಯೋಗಿಯ ರೋಜಿಯಲ್ಲಿ ಲಿಯೋ ಸಿನಿಮಾ ನಟನ ಆಗಮನ

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ. ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ “ರೋಜಿ” ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ ವಿಜಯ್ ಅಭಿನಯದ “ಲಿಯೊ” ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. “ಲಿಯೊ” ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಎಂದು ಸ್ಯಾಂಡಿ ಮಾಸ್ಟರ್ ತಿಳಿಸಿದರು.

ನನ್ನ ಪಾತ್ರದ ಹೆಸರು “ರೋಜಿ”. ನಮ್ಮ ಚಿತ್ರಕ್ಕೆ ಈಗಾಗಲೇ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದ ಲೂಸ್ ಮಾದ ಯೋಗಿ, ಸದ್ಯದಲ್ಲೇ ವಿಭಿನ್ನವಾದ ಟೀಸರ್ ಸಹ ಬರಲಿದೆ. ಇದು ಮೂರು ನಿಮಿಷಗಳ ಅವಧಿಯಿದ್ದು ಟೀಸರ್ ಎನ್ನಬೇಕೊ ಅಥವಾ ಟ್ರೇಲರ್ ಎನ್ನಬೇಕೊ ಗೊತ್ತಾಗುತ್ತಿಲ್ಲ ಎಂದರು.

ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣದ ಕೆಲವು ಭಾಗಗಳನ್ನು ಆಯ್ಕೆ ಮಾಡಿ ಟೀಸರ್ ಸಹ ಸಿದ್ದವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಈಗ ಸ್ಯಾಂಡಿ ಮಾಸ್ಟರ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ವಿಭಿನ್ನಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟರಿಬ್ಬರು ಹಾಗೂ ತೆಲುಗಿನ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುವುದಾಗಿ “ಹೆಡ್ ಬುಷ್” ಚಿತ್ರದ ಖ್ಯಾತಿಯ ನಿರ್ದೇಶಕ ಶೂನ್ಯ.

ಟೀಸರ್ ಗೆ ಹಿನ್ನೆಲೆ ಸಂಗೀತ ನೀಡಲು ಶೂನ್ಯ ನನ್ನ ಸಂಪರ್ಕಿಸಿದರು. ಟೀಸರ್ ಚೆನ್ನಾಗಿ ಬಂದಿದೆ‌. ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಯೋಗಿ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು ಸಂಗೀತ ನಿರ್ದೇಶಕ ಗುರುಕಿರಣ್.

ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನಿರ್ಮಾಪಕ ಡಿ.ವೈ.ರಾಜೇಶ್ ಧನ್ಯವಾದ ತಿಳಿಸಿದರು. ಸಹ ನಿರ್ಮಾಪಕ ಡಿ.ವೈ ವಿನೋದ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಪತ್ರಿಕಾಗೋಷ್ಠಿಯಲ್ಲಿದ್ದರು.

Categories
ಸಿನಿ ಸುದ್ದಿ

ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೇಲರ್ ಗೆ ಮೆಚ್ಚುಗೆ: ನವೆಂಬರ್ 24ಕ್ಕೆ ರಿಲೀಸ್

ರಾಜ್‍ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಅವರು ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲೈಟರ್ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ “ಸ್ವಾತಿ ಮುತ್ತಿನ‌ ಮಳೆ ಹನಿಯೇ” ಚಿತ್ರ ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ, ನಾನೊಬ್ಬ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿ. ನಾನು ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಾವಿನಂಚಿನಲ್ಲಿರುವ ರೋಗಿಗಳನ್ನು ಶುಶ್ರೂಷೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಕಥೆ ಮಾಡಬೇಕೆನಿಸಿತು. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಕಪ್ಪೆಚಿಪ್ಪಿನ ಜೊತೆ ಸೇರಿ ಮುತ್ತಾಗುತ್ತದೆ.

ಹಾಗಾಗಿ ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ “ಸ್ವಾತಿ ಮುತ್ತಿನ ಮಳೆ ಹನಿಯೇ” ಎಂದು ಶೀರ್ಷಿಕೆ ಇಟ್ಟಿದ್ದೇವೆ. ಅನಿಕೇತ್ ನನ್ನ ಪಾತ್ರದ ಹೆಸರು. ಮಿಥುನ್ ಮುಕುಂದನ್ ಸುಮಧುರ ಸಂಗೀತದಲ್ಲಿ ಚಿತ್ರದ ಹಾಡುಗಳು ಇಂಪಾಗಿ ಮೂಡಿಬಂದಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಕೂಡ ಚೆನ್ನಾಗಿ ಬಂದಿದೆ ಎಂದರು.

ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪ್ರೇರಣ. ಹಾಸ್ ಪೈಸ್ ವೊಂದರಲ್ಲಿ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸಾವಿನಂಚಿನಲ್ಲಿರುವವರಿಗೆ ಸಾವಿನ ಬಗ್ಗೆ ಧೈರ್ಯ ತುಂಬುವ ಪಾತ್ರ ಎನ್ನಬಹುದು ಎಂದರು ನಾಯಕಿ ಸಿರಿ ರವಿಕುಮಾರ್.

ಮಿಥುನ್‍ ಮುಕುಂದನ್‍ ಸಂಗೀತದ ಬಗ್ಗೆ ಮಾಹಿತಿ ‌ನೀಡಿದರು. ಗಾಯಕಿ ಮಾಧುರಿ ಶೇಷಾದ್ರಿ ಚಿತ್ರದ “ಮೆಲ್ಲಗೆ” ಹಾಡನ್ನು ಹಾಡಿದರು.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಟಿಸಿರುವ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮಾ ಮುಂತಾದವರು ತಮ್ಮ ಪಾತ್ರದ ಕುರಿತು‌ ಮಾತನಾಡಿದರು.

ಪ್ರವೀಣ್‍ ಶ್ರೀಯಾನ್‍ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್‍ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ಮುದುಡಿದ ಎಲೆಗಳು : ಇದು ದೈನಂದಿನ ಬದುಕು- ಬವಣೆ ಚಿತ್ರ

ರಿಯೊ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಂಜನಿ ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ ನಿರ್ದೇಶಿಸುತ್ತಿರುವ ” ಮುದುಡಿದ ಎಲೆಗಳು” ಚಿತ್ರದ ಮುಹೂರ್ತಕ್ಕೆ ಚಾಲನೆ ಸಿಕ್ಕಿದೆ. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ತಂಡಕ್ಕೆ ಶುಭ ಕೋರಿದ್ದಾರೆ.

ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್ನ ಮಾತನಾಡಿ, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು‌. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ. ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. “ಮುದುಡಿದ ಎಲೆಗಳು” ಹೇಗೆ ಚದರಿ ಹೋಗುತ್ತದೆ .

ಮತ್ತೆ ಹೇಗೆ ಒಂದಾಗುತ್ತದೆ ಎಂಬ ಅಂಶವನ್ನೂ ಕಥೆ ಆಧರಿಸಿದೆ. ಮೂವತ್ತು ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ‌. ಈ ಚಿತ್ರದಲ್ಲಿ ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ ಹಾಗೂ ದರ್ಶನ್ ಸೂರ್ಯ ಮೂವರು ನಾಯಕರು.

ಊರ್ವಶಿ ರಾಯ್, ಸೀಮಾ ವಸಂತ್ ಹಾಗೂ ಸುಶ್ಮಿತ ನಾಯಕಿಯರು. ಹಿರಿಯ ನಟ ಭವ್ಯ, ಶೋಭ್ ರಾಜ್, ಶಂಕರ್ ಅಶ್ವಥ್, ಹರ್ಷಿಕಾ ಪೂಣ್ಣಚ್ಚ, ಸಂತೋಷ್ ರೆಡ್ಡಿ, ಅಮಿತ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಮೇಶ್ ಕೋಟೆ ಸಹ ನಿರ್ದೇಶನ, ಶ್ಯಾಮ್ ಸಿಂಧನೂರು ಛಾಯಾಗ್ರಹಣ ಹಾಗೂ ವಿಕಾಸ್ ವಸಿಷ್ಠ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.

ನನ್ನ ಪತಿ ಶಂಕರ್ ಅವರ ಸಾರಥ್ಯದಲ್ಲಿ “ಮುದುಡಿದ ಎಲೆಗಳು” ಚಿತ್ರ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಹ ನಿರ್ಮಾಪಕಿ ರಂಜನಿ.

ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸಹ ನಿರ್ದೇಶಕ ರಮೇಶ್ ಕೋಟೆ ನೀಡಿದರು.

ಚಿತ್ರದಲ್ಲಿ ನಟಿಸುತ್ತಿರುವ ಭವ್ಯ, ಅಮಿತ್ ರಾಜ್, ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್, ದರ್ಶನ್ ಸೂರ್ಯ, ಊರ್ವಶಿ ರಾಯ್, ಸುಶ್ಮಿತ, ಸೀಮಾ ವಸಂತ್ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

error: Content is protected !!