Categories
ಸಿನಿ ಸುದ್ದಿ

ಫ್ಯಾನ್ಸ್ ಗೆ ಶಿವಣ್ಣ ಧನ್ಯವಾದ: ಭೈರತಿ ರಣಗಲ್ ಅಪ್ಪಿಕೊಂಡ ಮನಸ್ಸುಗಳಿಗೆ ಶರಣು

ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್’ ಚಿತ್ರ ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. “ಮಫ್ತಿ” ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಬಂದು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಕನ್ನಡ ಚಿತ್ರಗಳಿಗೆ ಜನರು ಬರುತ್ತಿಲ್ಲ ಎಂಬ ಮಾತನ್ನು “ಭೈರತಿ ರಣಗಲ್” ಚಿತ್ರ ದೂರ ಮಾಡಿದೆ. ಶಿವರಾಜಕುಮಾರ್ ಅವರ ಅದ್ಭುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

“ಮಫ್ತಿ” ಚಿತ್ರದಲ್ಲಿ ನನ್ನ “ಭೈರತಿ ರಣಗಲ್” ಪಾತ್ರವನ್ನು ನೀವು ಇಷ್ಟಪಟ್ಟಿದ್ದಿರಿ. ಆದರೆ “ಭೈರತಿ ರಣಗಲ್” ಚಿತ್ರದ ರಣಗಲ್ ಪಾತ್ರವನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರ. ನಿಮಗೆ ತುಂಬು ಹೃದಯದ ಧನ್ಯವಾದ ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿ ಮಾತನಾಡಿದ ಶಿವರಾಜಕುಮಾರ್, ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದು. ಮುಂದೆ “ಮಫ್ತಿ ೨” ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತ ಮಾಡುತ್ತೇನೆ. ಆದರೆ ಶೀರ್ಷಿಕೆ “ಮಫ್ತಿ ೨” ಅಂತ ಇರುವುದಿಲ್ಲ. ಸದ್ಯದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ತಿಳಿಸುತ್ತೇನೆ ಎಂದರು.

ಅಪ್ಪಾಜಿ ಅವರು ಹೇಳಿದ ಹಾಗೆ ಈ ಯಶಸ್ಸಿಗೆ ಮುಖ್ಯ ಕಾರಣ ಅಭಿಮಾನಿ ದೇವರುಗಳು. ಅವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನರ್ತನ್ ಅವರು ಬಂದು ಈ ಚಿತ್ರದ ಕಥೆ ಹೇಳಿದಾಗ, ನಾನು ಅವರು “ಮಫ್ತಿ”ಯ ಸೀಕ್ವೆಲ್ ಹೇಳಬಹುದು ಅಂದುಕೊಂಡೆ. ಅವರು ಪ್ರೀಕ್ವೆಲ್ ಹೇಳಿದರು. ಈ ಚಿತ್ರದ ಯಶಸ್ಸಿನ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ನಮ್ಮ ಸಂಸ್ಥೆಯಿಂದ ಮುಂದೆ ಕೂಡ ಉತ್ತಮ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದರು.

ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ ಅವರ ಅಭಿಮಾನಿಗಳು. ಅವರು “ಮಫ್ತಿ” ಚಿತ್ರದ ಯಶಸ್ಸಿನ ನಂತರ, “ರಣಗಲ್” ಚಿತ್ರ ಮಾಡಿ ಎಂದು ಹೇಳಿದ್ದರು. ಈ ಚಿತ್ರ ಆಗಲು ಅವರೆ ಮುಖ್ಯ ಕಾರಣ ಎನ್ನಬಹುದು. ಆನಂತರ ನನ್ನನ್ನು ಕರೆದು ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು “ಭೈರತಿ ರಣಗಲ್” ಚಿತ್ರ ಮಾಡಲು ಅಡ್ವಾನ್ಸ್ ನೀಡಿದ್ದು ಗೀತಾ ಶಿವರಾಜಕುಮಾರ್ ಅವರು. ಅವರಿಗೆ ಹಾಗೂ ರಣಗಲ್ ಪಾತ್ರಕ್ಕೆ ಜೀವ ತುಂಬಿದ ಶಿವರಾಜಕುಮಾರ್ ಅವರಿಗೆ ಮತ್ತು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ನರ್ತನ್.

ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಚಿತ್ರಗಳನ್ನು ಬಂದರೆ ಜನ ಖಂಡಿತವಾಗಿ ಜನ ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ “ಭೈರತಿ ರಣಗಲ್” ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮುಖದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆ ಎಂದರು ವಿತರಕ ಜಗದೀಶ್.

ಚಿತ್ರದಲ್ಲಿ ನಟಿಸಿರುವ ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಛಾಯಾಗ್ರಾಹಕ ನವೀನ್ ಕುಮಾರ್, ಸಂಕಲನಕಾರ ಅಕ್ಷಯ್ ಹಿರೇಮಠ್ ಮುಂತಾದ ತಂತ್ರಜ್ಞರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

ವೀರೇಶ ಚಿತ್ರಮಂದಿರದ ಕುಶಾಲ್, ನರ್ತಕಿ ಚಿತ್ರಮಂದಿರದ ವೆಂಕಟೇಶ್ ಹಾಗೂ ಮೈಸೂರಿನ ಗಾಯತ್ರಿ ಚಿತ್ರಮಂದಿರದ ಜಯರಾಂ ಅವರು “ಭೈರತಿ ರಣಗಲ್” ಚಿತ್ರಕ್ಕೆ ಚಿತ್ರಮಂದಿರಕ್ಕೆ ಹರಿದು ಬರುತ್ತಿರುವ ಜನಸಾಗರ ಕಂಡು ಸಂತೋಷವಾಗಿದೆ ಎಂದರು. ನಿರ್ಮಾಪಕರಾದ ರಾಜಕುಮಾರ್, ಕೆ.ಪಿ.ಶ್ರೀಕಾಂತ್, ಸುಧೀಂದ್ರ, ಕೃಷ್ಣ ಸಾರ್ಥಕ್, ನಾಗೇಂದ್ರ, ಪುನೀತ್ ಮುಂತಾದವರು ಸಕ್ಸಸ್ ಮೀಟ್ ನಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಡಿಸ್ಕೊ ಜೊತೆ congratulations ಬ್ರದರ್ ಶುರು: ಎರಡಕ್ಕೂ ಹರಿ ಸಂತೋಷ್ ಸಾರಥ್ಯ

“ಅಲೆಮಾರಿ” ಚಿತ್ರದೊಂದಿಗೆ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿ, ಇಲ್ಲಿಯವರೆಗೂ ಹತ್ತು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್, ಸಾರಥ್ಯದ ಎರಡು ಚಿತ್ರಗಳ ಆರಂಭೋತ್ಸವ ಕಾರ್ತಿಕ ಸೋಮವಾರದ ಶುಭದಿನದಂದು ನೆರವೇರಿತು. ಕೆ.ವಿ.ಎನ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಹಾಗೂ ರವಿಕುಮಾರ್ ಪೋಸ್ಟರ್ ಅನಾವರಣ ‌ಮಾಡುವ ಮೂಲಕ ನೂತನ ಚಿತ್ರಗಳಿಗೆ ಚಾಲನೆ ನೀಡಿದರು. ಡಿ.ಎಸ್ ಮ್ಯಾಕ್ಸ್ ನ ದಯಾನಂದ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

“ಡಿಸ್ಕೋ” ತಂಡದ ಮಾತುಕತೆ.

“ಡಿಸ್ಕೋ” ಇದು ನಾಯಕನ ಅಡ್ಡ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ಹರಿ ಸಂತೋಷ್, ವಿಕ್ಕಿ ವರುಣ್ ಈ ಚಿತ್ರದ ನಾಯಕ. ನನ್ನ ಹಾಗೂ ವಿಕ್ಕಿ ವರಣ್ ಕಾಂಬಿನೇಶನ್ ನಲ್ಲಿ “ಕಾಲೇಜ್ ಕುಮಾರ” ಚಿತ್ರದ ನಂತರ ಈ ಚಿತ್ರ ಮೂಡಿಬರುತ್ತಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಬ್ಯನಾರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ರೆಡ್ಡಿ(ಸಹ ನಿರ್ಮಾಪಕ)ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಧ್ರುವ್ ಸಂಗೀತ ನೀಡಲಿದ್ದಾರೆ‌. ಇಂದು ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದರು.

ಇದು ನಾನು ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಹಿಂದಿನ ಮೂರು ಚಿತ್ರಗಳೆ ಬೇರೆ ತರಹ.‌ ಇದೇ ಬೇರೆ ತರಹ. ನಾನು ಹೇಗೆ ಇದ್ದಿನೊ ಅದೇ ತರಹ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬಂದ ಹುಡುಗನ ಕಥೆ ಅಲ್ಲ. ಹಳ್ಳಿಯನ್ನೇ ಸಿಟಿ‌ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಎಂದರು ನಾಯಕ ವಿಕ್ಕಿ ವರುಣ್.

ಸಹ ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಸಹ ನಿರ್ಮಾಪಕ ಹರೀಶ್ ರೆಡ್ಡಿ ಹಾಗೂ ಸಂಗೀತ ನಿರ್ದೇಶಕ ಧ್ರುವ್ “ಡಿಸ್ಕೊ” ಚಿತ್ರದ ಬಗ್ಗೆ ಮಾತನಾಡಿದರು.

congratulations ಬ್ರದರ್” ಚಿತ್ರತಂಡದ ಮಾತು

ಎರಡು ವರ್ಷಗಳಿಂದ ನಾವು ಹನ್ನೆರಡು ಜನ ಸ್ನೇಹಿತರು ಸೇರಿ “ಪೆನ್ ಎನ್ ಪೇಪರ್” ಸಂಸ್ಥೆ ಆರಂಭಿಸಿದ್ದೆವು. ಈ ಮೂಲಕ ಹಲವು ವೆಬ್ ಸಿರೀಸ್ ಗಳಿಗೆ ಹಾಗೂ ಕೆಲವು ಪ್ರೊಡಕ್ಷನ್ ಹೌಸ್ ಗಳಿಗೆ ಕಥೆ ಒದಗಿಸಿಕೊಟ್ಟಿದ್ದೇವೆ. ಈಗ ಇದೇ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ಅದೇ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ “congratulations ಬ್ರದರ್”. ಈ ಚಿತ್ರದ ಕಥೆ ಬರೆಯಲು ಒಂದು ವರ್ಷವಾಯಿತು. ಮಾರ್ನಿಂಗ್ ಶೋ ಆಡಿಯನ್ಸ್ ನ ತಲೆಯಲ್ಲಿಟ್ಟಿಕೊಂಡು ಕಥೆ ಮಾಡಿದ್ದೇವೆ. ನನ್ನ ತಂಡದಲ್ಲಿರುವ ಪ್ರತಾಪ್ ಗಂಧರ್ವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಪ್ರಶಾಂತ್ ಕಲ್ಲೂರ್ , ಹರೀಶ್ ರೆಡ್ಡಿ(ಸಹ ನಿರ್ಮಾಪಕ) ನಿರ್ಮಾಣಕ್ಕೆ ಜೊತೆಯಾಗಿದ್ದಾರೆ‌. ಸಂಜನಾ ಈ ಚಿತ್ರದ ನಾಯಕಿ. ಅನುಷಾ ಎಂಬ ಹೊಸ ಹುಡುಗಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ರೊಮ್ಯಾಂಟಿಕ್ ಜಾನರ್ ನ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಪ್ರತಾಪ್, ರಕ್ಷಿತ್ ಮುಂತಾದವರು ಚಿತ್ರಕಥೆ ರಚಿಸಿದ್ದಾರೆ ಎಂದು ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ತಿಳಿಸಿದರು.

ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ. ನಮ್ಮ ತಂಡದ ಅನೇಕರಿಗೆ ಇದು ಹೊಸ ಹೆಜ್ಜೆ. ಸಾಮಾನ್ಯವಾಗಿ ಹೊಸ ಹೆಜ್ಜೆ ಅಷ್ಟು ಸುಲಭವಾಗಿರುವುದಿಲ್ಲ.‌ ಅದನ್ನು‌ ನಮಗೆ ಹರಿ ಸಂತೋಷ್ ಸುಲಭ ಮಾಡಿಕೊಟ್ಟಿದ್ದಾರೆ. ಹರಿ ಸಂತೋಷ್ ಅವರು ಹೇಳಿದ ಹಾಗೆ ಈ ಚಿತ್ರದ ಕಥೆ, ಚಿತ್ರಕಥೆ ರಚನೆಗೆ ವರ್ಷದ ಸಮಯ ಹಿಡಿಸಿದೆ. ನಮ್ಮ ಕಥೆ ಪೇಪರ್ ನಲ್ಲಿ ಈಗಾಗಲೇ ಗದ್ದಿದೆ. ಪ್ರೇಕ್ಷಕರು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ನಾಳೆಯಿಂದಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ತಿಳಿಸಿದರು.

ಕಿರುತೆರೆ ಹಾಗೂ ನಾಟಕಗಳಲ್ಲಿ ನಟಿಸಿರುವ ನನಗೆ ಹಿರಿತೆರೆಯಲ್ಲಿ ನಾಯಕನಾಗಿ ಮೊದಲ ಚಿತ್ರ ಎಂದರು ನಾಯಕ ರಕ್ಷಿತ್ ನಾಗ್. ನಾಯಕಿ ಸಂಜನಾ, ನಟಿ ಅನೂಷ, ಸಂಗೀತ ನಿರ್ದೇಶಕ ಸೂರಜ್ ಜೋಯಿಸ್, ಛಾಯಾಗ್ರಾಹಕ ಗುರು, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.

ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್ ಹಾಗೂ ಸಹ ನಿರ್ಮಾಪಕ ಹರೀಶ್ ರೆಡ್ಡಿ ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ‌ ಮಾಡಿದರು.

Categories
ಸಿನಿ ಸುದ್ದಿ

ಮರ್ಯಾದೆ ಪ್ರಶ್ನೆಯಿಂದ ಬಂದ ಮತ್ತೊಂದು ಹಾಡು: ಪಿರಾಕೋ ಮಾರ್ ಹಾಡು ಎಲ್ಲೆಡೆ ಮೆಚ್ಚುಗೆ

ಕಳೆದ ವಾರ ಬಿಡುಗಡೆಯಾಗಿರುವ ಟ್ರೈಲರಿಂದ ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ಮೂರನೇಯ ಹಾಡು ‘ಫಿರಾಕೋ ಮಾರ್’ ಈಗ ಬಿಡುಗಡೆಯಾಗಿದೆ. ಎಲ್ಲ ಚಿತ್ರ ತಂಡಗಳು ಹಿಟ್ ಸಾಂಗ್ ಕೊಡಲು ಮುಂದಾದರೆ ಮರ್ಯಾದೆ ಪ್ರಶ್ನೆ ತಂಡ ‘ಹಿಟ್ ಬ್ಯಾಕ್’ ಹಾಡನ್ನು ನೀಡಿದೆ. ದಕ್ನಿ ರ್ಯಾಪರ್ ಪಾಶಾಬಾಯ್ ಈ ರ್ಯಾಪ್ ಬರೆದು ಹಾಡಿದ್ದಾರೆ. ಕಳೆದ ಎರಡು ಹಾಡುಗಳನ್ನು ಮೆಲೋಡಿ, ಜಾನಪದ ಶೈಲಿಯಲ್ಲಿ ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಹಿಪ್‌ಹಾಪ್ ಶೈಲಿಯಲ್ಲಿ‌ ಪ್ರಸ್ತುತಪಡಿಸಿದ್ದಾರೆ.

ಈ ಹಾಡಿನ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಅರ್ಜುನ್ ರಾಮು “ಮಿಡಲ್ ಕ್ಲಾಸ್ ಅಗ್ರೆಶನ್ ತೋರಿಸುವ ಹಾಡೊಂದು ಸಿನಿಮಾಕ್ಕೆ‌ ಬೇಕಿತ್ತು. ಪಾಶಾಬಾಯ್ ಜತೆ ಸೇರಿ ಈ ರ್ಯಾಪ್ ಮಾಡಿದ್ದೇವೆ. ಕ್ಲಾಸಿನ ಜತೆ ಸಕ್ಕತ್ ಮಾಸ್ ಬಿಜಿಎಮ್ ಇರುವ ಈ ಹಾಡು ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ” ಎಂದರು.

ಟ್ರೇಲರಿನಲ್ಲಿ ತೋರಿಸಿದ ವಿಷಯಗಳಿಗೆ ಪುಷ್ಟಿ ನೀಡುವಂತಿರುವ ಎರಡೂವರೆ ನಿಮಿಷಗಳ ಈ ಹಾಡಿನ ಪ್ರೋಮೋ ವಿಡಿಯೋದಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗರನ್ನ ಬೆಳೆಯೋಕೆ ಬಿಡದೇ ಇದ್ರೂ ಬೆಳೆದೇ ಬೇಳಿತಾರೆ ಎನ್ನುವುದನ್ನು ಕೂಗಿ ಹೇಳುತ್ತಿರುವ ಈ ಹಾಡನ್ನು ಈಗ ಸಖತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ‘ಮರ್ಯಾದೆ ಪ್ರಶ್ನೆ’ ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ. .

ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು.

ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ, ನಿರ್ದೇಶನವಿದೆ. ‘ಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಟ್ಲೆ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಸಾಥ್ : ಇದು ಕೆಂಪೇಗೌಡ ಚಿತ್ರ

ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ಹಾಗೂ ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖಪಾತ್ರದಲ್ಲಿ ನಟಿಸಿರುವ “ಕಟ್ಲೆ” ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ಯಾರೋ ನಾ ಕಾಣೆ. ಚಂದಾಗೌಳೆ ಶಾಣೆ” ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ.

ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿದ ಅವರು “ಕಟ್ಲೆ” ಚಿತ್ರಕ್ಕೆ ಅದ್ಭುತವಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವ ಭರತ್ ಗೌಡ‌ ಅವರು. ಅವರು ನಮ್ಮ‌ ಮೇಲೆ ನಂಬಿಕೆಯಿಟ್ಟು ಬಂಡವಾಳ ಹಾಕಿರುವುದೇ ನಮ್ಮ ಕನಸು ನನಸಾಗಲು ಕಾರಣ. ಅವರಿಗೆ ಹಾಗೂ ನನ್ನ‌ ತಂಡಕ್ಕೆ ನನ್ನ ಧನ್ಯವಾದ. ನಮ್ಮ ಚಿತ್ರದ ಪ್ರಥಮ ಹಾಡು ಇಂದು ಬಿಡುಗಡೆಯಾಗಿದೆ. ಸದ್ಯದಲ್ಲೇ “ಕಟ್ಲೆ” ಸೆನ್ಸಾರ್ ವೀಕ್ಷಿಸಲಿದ್ದು, ಡಿಸೆಂಬರ್ ವೇಳೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು ನಿರ್ದೇಶಕ ಶ್ರೀವಿದ.

ಶ್ರೀವಿದ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಭರತ್ ಗೌಡ ಹೇಳಿದರು‌.

ಹಾಡು ಹುಟ್ಟಿದ ಬಗ್ಗೆ ಹಾಡು ಬರೆದಿರುವ ಚೇತನ್ ಕುಮಾರ್ ಹಾಗೂ ಸಂಗೀತ ಸಂಯೋಜಕನೆ ಕುರಿತು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಮಾಹಿತಿ ನೀಡಿದರು. ನಾಯಕಿಯರಾದ ಅಮೃತ ರಾಜ್, ಸಂಹಿತ, ನಟರಾದ ಉಮೇಶ್, ತಬಲ ನಾಣಿ, ಹರೀಶ್ ರಾಜ್, ಕರಿಸುಬ್ಬು ನಟಿಯರಾದ ಶೃತಿ, ನಿಸರ್ಗ ಅಪ್ಪಣ್ಣ ಮುಂತಾದವರು “ಕಟ್ಲೆ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ನಂಬಿಕೆ- ಕಂಬನಿಗೆ ರಣಗಲ್ ಕಾವಲಿಗ!

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

  • ರೇಟಿಂಗ್: 5/3.5

ಚಿತ್ರ : ಭೈರತಿ ರಣಗಲ್
ನಿರ್ದೇಶನ: ನರ್ತನ್
ನಿರ್ಮಾಣ: ಗೀತಾ ಶಿವರಾಜಕುಮಾರ್
ತಾರಾಗಣ: ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸೆ, ಛಾಯಾಸಿಂಗ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ ಇತರರು.

ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನು ಕಳ್ಕೊಂಡಿದ್ದಾರೆ… ಜನರಿಗೋಸ್ಕರ ನಾನ್ ಯಾರನ್ನ ಬೇಕಾದ್ರೂ ಕಳ್ಕೊತ್ತೀನಿ. ಆ ದರೆ ಜನರನ್ನೇ ಕಳಕ್ಕೊಳೋದಿಲ್ಲ…
ನಾಯಕ ಭೈರತಿ ರಣಗಲ್ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲಿ ರಾಶಿ ರಾಶಿ ಹೆಣಗಳು ಉರುಳಿರುತ್ತವೆ. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಿಂತ ಭೈರತಿ, ಕ್ರಿಮಿನಲ್ ಗಳನ್ನು ಸದೆಬಡಿಯೋಕೆ ಕ್ರಿಮಿನಲ್ ಆಗಿಯೇ ಫೀಲ್ಡ್ ಗಿಳಿದಿರುತ್ತಾನೆ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಒಂದೇ ಮಾತಲ್ಲಿ ಹೇಳುವುದಾದರೆ ಇದೊಂದು ಆಕ್ಷನ್ ಪ್ಯಾಕ್ಡ್ ಸಿನಿಮಾ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಂಟೆಂಟ್ ಇಲ್ಲಿದೆ. ಆ ಕಾರಣಕ್ಕೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧದ ಆರಂಭದಲ್ಲಿ ನಿಧಾನಗತಿ ಎನಿಸುವ ಸಿನಿಮಾ, ಘಟನೆಯೊಂದರ ಬಳಿಕ ಹೊಸ ತಿರುವು ಪಡೆದುಕೊಂಡು ವೇಗ ಕಂಡುಕೊಳ್ಳುತ್ತದೆ. ದ್ವಿತಿಯಾರ್ಧ ಅಚ್ಚರಿಯ ಬೆಳವಣಿಗೆ ನಡುವೆ ಕುತೂಹಲದೊಂದಿಗೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಸಿನಿಮಾದಲ್ಲಿ ಹೈಲೆಟ್ ಅಂದರೆ ಚಿತ್ರಕಥೆ. ಕಥೆಗೆ ಪೂರಕವಾಗಿ ಸ್ಕ್ರೀನ್ ಪ್ಲೇ ಮೂಡಿಬಂದಿದೆ.

ಹೀರೋ ಹರಿಬಿಡುವ ಡೈಲಾಗ್ ಕೂಡ ಸಿನಿಮಾದೊಳಗಿನ ಕಿಚ್ಚನ್ನು ಎಬ್ಬಿಸುತ್ತದೆ. ಇಲ್ಲಿ ಅಸಹಾಯಕತೆ ಇದೆ. ತಣ್ಣನೆಯ ಪ್ರೀತಿ ಇದೆ. ಕ್ರೌರ್ಯವಿದೆ. ನಂಬಿಕೆ ಇದೆ, ಮೋಸವಿದೆ, ಅನ್ಯಾಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಂಬನಿ ನೂರೆಂಟು ಕಥೆಗಳನ್ನು ಹೇಳುತ್ತಾ ಹೋಗುತ್ತೆ. ಹೀರೋ ಅನ್ಯಾಯದ ವಿರುದ್ಧ ನ್ಯಾಯದ ಧ್ವನಿ ಎತ್ತುತ್ತಾನೆ. ಅದ್ಯಾವುದೂ ವರ್ಕೌಟ್ ಆಗೋದಿಲ್ಲ. ಕೊನೆಗೆ ದಂಡಂ ದಶಗುಣಂ ಅನ್ನೋ ಮಂತ್ರಕ್ಕೆ ರೆಡಿಯಾಗುತ್ತಾನೆ. ಆಮೇಲೆ ನಡೆಯೋದೆಲ್ಲವೂ ಅದ್ಭುತ.

ಎಲ್ಲಾ ಸಿನಿಮಾಗಳಂತೆ ಇಲ್ಲೂ ಹೀರೋ ಜನಪರ ಹೋರಾಡುತ್ತಾನೆ. ಆದರೆ, ಹೀರೋ ಹೋರಾಡುವ ವಿಷಯ ಮಾತ್ರ ಅಲ್ಟಿಮೇಟ್. ಚಿತ್ರದಲ್ಲಿ ಮೇಕಿಂಗ್ ವಿಶೇಷ. ಸಿನಿಮಾ ಕಥೆಗೆ ತಕ್ಕಂತೆಯೇ ಚಿತ್ರಕಥೆ ವೇಗ ಕಂಡುಕೊಂಡಿದೆ. ಪ್ರತಿ ದೃಶ್ಯ ಕೂಡ ವಿಜೃಂಭಿಸಿದೆ. ಮುಖ್ಯವಾಗಿ ಇಲ್ಲಿ ಹೈಲೆಟ್ ಅಂದರೆ, ಆಕ್ಷನ್, ಹೀರೋ ಗನ್ ಮತ್ತು ಲಾಂಗ್ ಹಿಡಿದು ಹೊಡೆದಾಡುವ ದೃಶ್ಯಗಳು ನೋಡುವ ಒಂದು ವರ್ಗಕ್ಕೆ ಇಷ್ಟವಾಗದೇ ಇರದು. ಇಲ್ಲಿ ಡೈಲಾಗ್ ಮಜಾ ಕೊಡುತ್ತವೆ. ಕತ್ತರಿ ಪ್ರಯೋಗ ಕೂಡ ಸಿನಿಮಾವನ್ನು ಒಂದೇ ಗುಕ್ಕಿನಲ್ಲಿ ನೋಡಿಸಿಕೊಂಡು ಹೋಗುತ್ತೆ. ಕೆಲವು ಕಡೆ ಮೈನಸ್ ಎನಿಸುವ ಅಂಶಗಳಿವೆಯಾದರೂ, ಒಂದಷ್ಟು ಎಮೋಷನಲ್ ದೃಶ್ಯಗಳು ಅವೆಲ್ಲವನ್ನೂ ಮರೆಸುತ್ತೆ. ಎಲ್ಲೋ ಒಂದು ಕಡೆ ರಮೇಶ್ ಅರವಿಂದ್ ಅವರ ಹಿನ್ನೆಲೆ ಧ್ವನಿ ಸರಿ ಹೊಂದಿಲ್ಲ. ರಣಗಲ್ ಚರಿತ್ರೆಯ ಹಿನ್ನೆಲೆ ಹೇಳುವ ಧ್ವನಿಯಲ್ಲಿ ಖಡಕ್ ಇರಬೇಕಿತ್ತು. ಬೇರೆ ಗಟ್ಟಿ ಧ್ವನಿ ಇದ್ದಿದ್ದರೆ, ಸಿನಿಮಾ ಇನ್ನೂ ಮಜ ಎನಿಸುತ್ತಿತ್ತು. ಆದರೂ, ಆ ವಾಯ್ಸ್ ಪಕ್ಕಕ್ಕಿಟ್ಟು ನೋಡುವುದಾದರೆ, ಭೈರತಿಯ ಆಟ ಆದ್ಭುತ.

ಕಥೆ ಏನು?


ರೋಣಾಪುರ ಎಂಬ ಊರಲ್ಲಿ ಕುಡಿಯುವ ನೀರೀಗೂ ಪರದಾಡುವ ಜನ. ಕಿತ್ತು ತಿನ್ನುವ ಬಡತನ. ಬಾಲ್ಯದಲ್ಲೇ ಭೈರತಿ ರಣಗಲ್ ಅನ್ಯಾಯದ ವಿರುದ್ಧ ಸಿಡಿದೇಳುತ್ತಾನೆ. ಸರ್ಕಾರಿ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಬಾಂಬ್ ಇಟ್ಟು ಹತ್ಯೆ ಮಾಡುತ್ತಾನೆ. ನಂತರ ಜೈಲುಪಾಲಾಗಿ, ಜೈಲಲ್ಲೇ ಕಾನೂನು ಓದುತ್ತಾನೆ. ಲಾಯರ್ ಆಗಿ ಹೊರಬರುವ ರಣಗಲ್, ಊರಿನ ಜನರ ಪರ ನಿಲ್ಲುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದಾಗ, ಕೈಯಲ್ಲಿ ಲಾಂಗ್ ಹಿಡಿಯುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದು ಸಸ್ಪೆನ್ಸ್.

ಯಾರು ಹೇಗೆ?

ಶಿವರಾಜಕುಮಾರ್ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ಸಿಕ್ಕಿದೆ. ಅವರ ಪಂಚೆ,ಶರ್ಟ್ ಹೈಲೆಟ್. ಎಂದಿಗಿಂತಲೂ ಅವರ ಲುಕ್ ಮತ್ತು ಗತ್ತು ಇಲ್ಲಿ ಹೊಸದಾಗಿದೆ. ನಡೆಯೋ ಸ್ಟೈಲ್ ಹರಿಬಿಡುವ ಮಾತು, ನೋಡುವ ನೋಟ, ಖುಷಿ ಎನಿಸುವ ಬಾಡಿಲಾಂಗ್ವೇಜ್, ಹಿಡಿಯುವ ಲಾಂಗ್ ಮತ್ತು ಗನ್ ಎಲ್ಲವೂ ಹೊಸತೆನಿಸಿದೆ. ಸ್ಕ್ರೀನ್ ಮೇಲೆ ಅವರ ಅಬ್ಬರ ರಾರಾಜಿಸಿದೆ. ರುಕ್ಮಿಣಿ ವಸಂತ್ ಡಾಕ್ಟರ್ ಆಗಿ ಇಷ್ಟ ಆಗುತ್ತಾರೆ. ಛಾಯಾಸಿಂಗ್ ತಂಗಿಯಾಗಿ ಇರುವಷ್ಟು ಸಮಯ ಕಾಡುತ್ತಾರೆ. ರಾಹುಲ್ ಬೋಸೆ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಅವಿನಾಶ್ ಹೊಸ ಗೆಟಪ್ ಮೂಲಕ ಗಮನ ಸೆಳೆದರೆ, ಗೋಪಾಲಕೃಷ್ಣ ದೇಶಪಾಂಡೆ ಇಷ್ಟ ಆಗುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪ್ರತಿ ಪಾತ್ರಗಳೂ ನ್ಯಾಯ ಸಲ್ಲಿಸಿವೆ. ರವಿಬಸ್ರೂರ್ ಅವರಿಗೆ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಸ್ಕೋಪ್ ಸಿಕ್ಕಿದೆ. ಅಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ. ಉಳಿದಂತೆ ಎರಡು ಬಿಟ್ ಹಾಡು ಇದೆಯಾದರೂ, ಗುನುಗುವಂತಿಲ್ಲ. ನವೀನ್ ಕುಮಾರ್ ಅವರ ಕ್ಯಾಮೆರಾ ಕೈಚಳಕ ರಣಗಲ್ ರೋಚಕತೆಗೆ ಸಾಕ್ಷಿಯಾಗಿದೆ. ಆಕಾಶ್ ಹಿರೇಮಠ್ ಅವರ ಕತ್ತರಿ ಪ್ರಯೋಗ ಚಿತ್ರದ ವೇಗ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಶಿವಣ್ಣ ಈಗ ಕ್ಲಾಸ್ ಟೀಚರ್: ಶಿವಣ್ಣ-ಶ್ರೀನಿ ಹೊಸ ಸಿನಿಮಾ ಅನೌನ್ಸ್

ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ…ಗೀತಾ ಪಿಕ್ಚರ್ಸ್ ಮೂರನೇ ಸಿನಿಮಾ A for ಆನಂದ್. ಮಕ್ಕಳ‌ ದಿನಾಚರಣೆ ದಿನದಂದು‌ ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ….ಗೀತಾ ಪಿಕ್ಚರ್ಸ್ ನಡಿ ಶ್ರೀನಿ ನಿರ್ದೇಶನದ ಚಿತ್ರ A for ಆನಂದ್

ಭೈರತಿ ರಣಗಲ್ ನಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿಯಲ್ಲಿ ಡಾನ್… ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್ ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಭಜರಂಗಿ ಈಗ ಭೋದಕನಾಗಿದ್ದಾರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ದೊಡ್ಮನೆ ದೊರೆ ಶಿವ ಸೈನ್ಯಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ ಹೊಸ ಸಿನಿಮಾ ಘೋಷಿಸಿದ್ದಾರೆ.

ಇಂದು ಮಕ್ಕಳ‌ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. ‘ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ಕರುನಾಡ ಕಿಂಗ್ ಈಗ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.

ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಘೋಸ್ಟ್ ಸೂತ್ರಧಾರ ಶ್ರೀ‌ನಿ‌ ಸಜ್ಜಾಗಿದ್ದಾರೆ. ಶ್ರೀನಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್‌ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ ಕಾಂಬೋದ A for ಆನಂದ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. A for ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Categories
ಸಿನಿ ಸುದ್ದಿ

ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರದ ಎರಡನೇ ಭಾಗಕ್ಕೆ ಚಾಲನೆ‌

ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಆರಾಧನಾ ಪರ್ವಕಾಲದಲ್ಲಿ “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 2” ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ‌‌‌

ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ ನಿರ್ಮಾಪಕ ತ್ರಿವಿಕ್ರಮ ಜೋಶಿ, ನಾನೇ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕ್ಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನನ್ನನ್ನು ಎಳೆದು ತಂದಿದ್ದಾರೆ.

ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.‌ ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸುತ್ತಿದ್ದೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ.ಅನಂತಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು‌ ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ.

ಅವರ ಜೊತಗೆ ಅನಂತಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನ ತರಹ ಸಾಕಷ್ಟು ಅನಂತಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.

“ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ.‌ ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಭತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿರುತ್ತಾರೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಚಿತ್ರಕಥೆ ಹಾಗೂ ಸಂಭಾಷಣೆ ಕುರಿತು ಜೆ.ಎಂ.ಪ್ರಹ್ಲಾದ್ ಮಾತನಾಡಿದರು. ಗೋಪಾಲದಾಸರ ಪಾತ್ರದಲ್ಲಿ ಕಾಣಿಕೊಳ್ಳುತ್ತಿರುವುದಾಗಿ ಪ್ರಭಂಜನ ದೇಶಪಾಂಡೆ ಹಾಗು ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರ ನಿರ್ವಹಿಸುತ್ತಿರುವುದಾಗಿ ನಟಿ ಶ್ರೀಲತ ಬಾಗೇವಾಡಿ ತಿಳಿಸಿದರು.

Categories
ಸಿನಿ ಸುದ್ದಿ

ಅಮರನ್ ಅಬ್ಬರ: ಶಿವ ಕಾರ್ತಿಕೇಯನ್-ಸಾಯಿಪಲ್ಲವಿ ಸಿನಿಮಾಗೆ ಜೈ ಎಂದ ಪ್ರೇಕ್ಷಕ

ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ನಲ್ಲೂ ಗಳಿಕೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್ ಸಿನಿಮಾ 2024ರ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಅಕ್ಟೋಬರ್ 31ರಂದು ತೆರೆಕಂಡ ಅಮರನ್ ಸಿನಿಮಾ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.

ಈ ಚಿತ್ರವು ದಿವಂಗತ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದೆ. ಶಿವಕಾರ್ತಿಕೇಯನ್ ಅವರು ಮೇಜರ್ ಮುಕುಂದ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ. ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಬ್ಬದ ದಿನದಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಅಮರನ್ ಎಲ್ಲೆಡೆ ಅಬ್ಬರಿಸುತ್ತಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

Categories
ಸಿನಿ ಸುದ್ದಿ

ಟಾಕ್ಸಿಕ್ ಸಿನಿಮಾ ವಿರುದ್ಧ ಎಫ್ಐಆರ್: ಸಿನಿಮಾಗೆ ಕಂಟಕ

ಕನ್ನಡದ ನಟ ಯಶ್‌ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮಾಡಲು ಎಚ್ಎಂಟಿಯಲ್ಲಿದ್ದ ಮರ-ಗಿಡಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ನ್ಯಾಯಾಲಯದ ಆದೇಶ ಪಡೆದು ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿನ್ , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗು ಹೆಚ್‍ಎಂಟಿ ಜನರಲ್ ಮ್ಯಾನೇಜರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೆಲವು ದಿನಗಳ ಹಿಂದೆ ಮರಗಳ ಮಾರಣ ಹೋಮದ ಆರೋಪ ಕೇಳಿ ಬಂದಿದ್ದರಿಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದರು. ಆಗ, ಯಾರು ಶೂಟಿಂಗ್ ಗಾಗಿ ಮರ ಗಿಡಗಳನ್ನು ಕಡಿಯಲು ಅನುಮತಿ ನೀಡಿದ್ದರು. ಯಾರು ಈ ಕೃತ್ಯ ನಡೆಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಪತ್ರದ ಆದೇಶದ ಮೇಲೆ, ಅರಣ್ಯ ಅಧಿಕಾರಿಗಳು, ವಿಚಾರಣೆ ನಡೆಸಿ, ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿಯೇ ಮರಗಿಡ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಸಿದ್ದರು.

Categories
ಸಿನಿ ಸುದ್ದಿ

ಸಂಜು ವೆಡ್ಸ್ ಗೀತಾ-2 ಉಪ್ಪಿ ಮೆಚ್ಚಿದ ಕ್ಲೈಮ್ಯಾಕ್ಸ್: ಅವನು ಸಂಜು ಅವಳು ಗೀತಾ ಹಾಡು ಬಂತು

  • ಕ್ಲೈಮ್ಯಾಕ್ಸ್ ನೋಡಿ 100% ಹಿಟ್ ಅಂದ ಉಪ್ಪಿ,
  • ಸಾಂಗ್ ನೋಡಿ ಸೂಪರ್ ಹಿಟ್ ಅಂದ್ರು

ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ’ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ ನಟ ಉಪೇಂದ್ರ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಹಾಜರಿದ್ದರು.
ಕವಿರಾಜ್ ಅವರ ಸಾಹಿತ್ಯ ರಚನೆಯ ಈ ಹಾಡಿಗೆ ಶ್ರೀಧರ್ ವಿ.ಸಂಭ್ರಮ್ ಅದ್ಭುತವಾದ ಟ್ಯೂನ್ ಹಾಕಿದ್ದಾರೆ.

ನಿರ್ದೇಶಕ‌ ನಾಗಶೇಖರ್ ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು 6 ಸುಂದರ ಹಾಡುಗಳು ಚಿತ್ರದಲ್ಲಿದ್ದು, ಈ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ. ಸ್ವಿಟ್ಜರ್ ಲ್ಯಾಂಡ್ ಸೈನಿಕನೊಬ್ಬ ತನ್ನ ರಾಣಿ ಸೆಲ್ವಿಕ್ ಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಪ್ರೀತಿ ಮಾಡ್ತಿರ್ತಾನೆ. ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಕ್ಕೆ ಆಗ್ತಿರಲಿಲ್ಲ, ಏಕೆಂದರೆ ಆಕೆ ಮಹಾರಾಣಿ. ಆತನದು ಒನ್ ವೇ ಲವ್, ಒಮ್ಮೆ ಜರ್ಮನ್ ಸೈನಿಕರು ಸ್ವಿಟ್ಜರ್ ಲ್ಯಾಂಡ್ ಮೇಲೆ ಅಟ್ಯಾಕ್ ಮಾಡ್ತಾರೆ.

ಆಗ ವೀರಾವೇಶದಿಂದ ಹೋರಾಡಿದ ಆ ಸೈನಿಕ ಅವರನ್ನು ಸೋಲಿಸಿ ವೀರಮರಣವನ್ನಪ್ಪುತ್ತಾನೆ, ತನ್ನ ರಾಣಿಗೆ ಆಕೆಯ ಕಿರೀಟವನ್ನು ಮತ್ತೆ ತಂದುಕೊಡುತ್ತಾನೆ. ಸಾಯೋ ಸಮಯದಲ್ಲಿ ಆತ ರಾಣಿಗೆ ತನ್ನ ರಕ್ತದಲ್ಲಿ “ಐ ಲವ್ ಯು ಫಾರೆವರ್” ಅಂತ ಒಂದು ಪತ್ರ ಬರೆಯುತ್ತಾನೆ. ಈ ಹಾಡು ಚಿತ್ರಕಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುತ್ತದೆ. ಈ ಸಾಂಗ್ ನಲ್ಲಿ ಮೊದಲಬಾರಿಗೆ ಆಕ್ಷನ್ ಇಟ್ಟಿದ್ದೇನೆ ಎಂದು ಹೇಳಿದರು.

ಶ್ರೀಧರ್ ವಿ.ಸಂಭ್ರಮ್ ಮಾತನಾಡಿ ‌ನಾಗಶೇಖರ್ ಅವರು ಈ ಥರದ ಕಥೆ ಇದೆ ಎಂದಾಗ ಖುಷಿಯಾಯ್ತು. ಅವರು ಸುಲಭವಾಗಿ ಟ್ಯೂನ್ ಒಪ್ಪುವವರಲ್ಲ, ಆದರೆ ಈ ನಾನು ಈ ಟ್ಯೂನ್ ಕೊಟ್ಟ ಕೂಡಲೇ ಒಪ್ಪಿದರು. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿ ಮೂಡಿಬಂದಿವೆ ಎಂದರು. ಸಾಹಿತಿ ಕವಿರಾಜ್ ಮಾತನಾಡಿ ಇದು ಸಿನಿಮಾ ಕೆಲಸ ಅನಿಸೋದೇ ಇಲ್ಲ. ನಮಗೆ ಅಷ್ಟು ಫ್ರೀಡಂ ಕೊಟ್ಟಿರ್ತಾರೆ. ನಾಗಶೇಖರ್ ಸಿನಿಮಾಗೆ ಹಾಡುಗಳನ್ನು ಬರೀಬೇಕಾದ್ರೆ ತಾನಾಗೇ ಒಳ್ಳೊಳ್ಳೆ ಪದಗಳು ಹುಟ್ಟಿಕೊಳ್ಳುತ್ತವೆ. ನಿರ್ದೇಶಕರು ನಮಗೆಲ್ಲ ಒಂದು ರೆಸಾರ್ಟ್ ಬುಕ್ ಮಾಡಿ ಲಿರಿಕ್ ಬರೆಯಲು ಹೇಳಿದ್ದರು, ಈ ಚಿತ್ರದ ಸಾಂಗ್ ಬರೆಯಲು ಹೋದಾಗ ಏನೋ ಹೊಸ ಸ್ಪೂರ್ತಿ ಬರುತ್ತದೆ ಎಂದು ಹೇಳಿದರು.

ನಟ ಉಪೇಂದ್ರ ಮಾತನಾಡಿ ನನಗೆ ಮೊದಲು ಈ ಚಿತ್ರದ ಕ್ಲೈಮ್ಯಾಕ್ಸ್ ಏನು ಅಂತ ಗೊತ್ತಾಯ್ತು.ನಾನು ಅವತ್ತೇ ಹೇಳಿದೆ ಈ ಸಿನಿಮಾ ಸೂಪರ್ ಸಕ್ಸಸ್ ಅಂತ. ಈಗ ಈ ಹಾಡನ್ನು ನೋಡಿದಾಗ ಡಿಸೈಡ್ ಮಾಡಿದೆ. 100% ಹಿಟ್ ಆಗುತ್ತೆ ಎಂದು ಕಾನ್ಫಿಡೆಂಟಾಗಿ ಹೇಳಿದರು.
ನಿರ್ಮಾಪಕ ಛಲವಾದಿ ಕುಮಾರ್, ಮಾತನಾಡುತ್ತ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಖಂಡಿತ ಹಿಟ್ ಆಗುತ್ತೆ ಎಂಬ ಬಂಬಿಕೆಯಿದೆ ಎಂದರು. ನಾಯಕಿ ರಚಿತಾರಾಮ್ ಶೂಟಿಂಗ್ ನಲ್ಲಿದ್ದುದರಿಂದ ಬಂದಿರಲಿಲ್ಲ.

ವಿತರಕ ಗೋಕುಲರಾಜ್ ಮಾತನಾಡಿ ನನಗೆ ಚಿತ್ರದ ಸ್ಯಾಂಪಲ್ಸ್ ತೋರಿಸಿದರು.‌ ತುಂಬಾ ಚೆನ್ನಾಗಿ ಬಂದಿದೆ. ಎಂದರು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಶ್ಮೆ ಬೆಳೆಗಾರನಾಗಿ ನಟ ಶ್ರೀನಗರ ಕಿಟ್ಟಿ ಅವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ.
ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ನ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ, ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಈ ಚಿತ್ರದ ಮೂಲಕ ನಾಗಶೇಖರ್ ಹೇಳ ಹೊರಟಿದ್ದಾರೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್‌ ಪ್ರೈಸ್ ಕೂಡ ಈ ಚಿತ್ರದಲ್ಲಿದೆ.

ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ ಮೊದಲಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

error: Content is protected !!