Categories
ಸಿನಿ ಸುದ್ದಿ

ವೃಷಭ ಟೀಮ್ ಸೇರಿದ ಹಾಲಿವುಡ್ ನ ನಿಕ್ ತರ್ಲೋ! ಕಾರ್ಯಕಾರಿ ನಿರ್ಮಾಪಕರಾಗಿ ಎಂಟ್ರಿ

ಮೋಹನ್ ಲಾಲ್ ಮತ್ತು ರೋಶನ್ ಮೇಕ ಅಭಿನಯದ ‘ವೃಷಭ’ ಚಿತ್ರದ ಚಿತ್ರೀಕರಣ ಕಳೆದ ವಾರವಷ್ಟೇ ಅಧಿಕೃತವಾಗಿ ಪ್ರಾರಂಭವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ನಿಕ್ ತರ್ಲೋ, ಕಾರ್ಯಕಾರಿ ನಿರ್ಮಾಪಕರಾಗಿ ಸೇರ್ಪಡೆಯಾಗಿದ್ದಾರೆ.

ನಿಕ್ ತರ್ಲೋ ಹಲವು ಹಾಲಿವುಡ್ ಚಿತ್ರಗಳ ನಿರ್ಮಾಪಕರಾಗಿ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡವರು. ಆಸ್ಕರ್ ಪ್ರಶಸ್ತಿ ಚಿತ್ರಗಳಾದ ‘ಮೂನ್ಲೈಟ್’, ‘ಮಿಸೌರಿ’, ‘ಥ್ರೀ ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್’ ಮುಂತಾದ ಚಿತ್ರಗಳಿಗೆ ದುಡಿದವರು. ಈಗ ಅವರು ‘ವೃಷಭ’ ಚಿತ್ರದ ಮೂಲಕ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.

‘ವೃಷಭ’ ಚಿತ್ರವು ಹಾಲಿವುಡ್ ಚಿತ್ರಗಳ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಚಿತ್ರತಂಡದವರು ಚಿತ್ರಕ್ಕೆ ಹೇಗೆಲ್ಲ ತಯಾರಿಗಳು ನಡೆಯುತ್ತಿದೆ, ಚಿತ್ರೀಕರಣ ಸಮಯದಲ್ಲಿ ಏನೆಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸುವ 57 ಸೆಕೆಂಡ್‌ಗಳ ಒಂದು ವೀಡಿಯೋ ಬಿಡುಗಡೆ ಮಾಡಲಾಗಿದೆ. ಹಾಲಿವುಡ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ “ವೃಷಭ” ಪಾತ್ರವಾಗಿದೆ.

ಈ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾತನಾಡಿರುವ ನಿಕ್ ತರ್ಲೋ, ‘ಇದು ನನ್ನ ಮೊದಲ ಭಾರತೀಯ ಚಿತ್ರ ಮತ್ತು ನಾನು ಇಲ್ಲಿ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ. ಒಬ್ಬ ಕಾರ್ಯಕಾರಿ ನಿರ್ಮಾಪಕನಾಗಿ, ಚಿತ್ರದ ಸೃಜನಶೀಲ ಚಟುವಟಿಕೆಗಳು ಸೇರಿದಂತೆ ಹಲವು ವಿಭಾಗಗಳ ಕುರಿತು ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ದೇಶದ ಚಿತ್ರಗಳ ಹೊರತಾಗಿ, ನಾನು ಕೆಲಸ ಮಾಡುತ್ತಿರುವ ಬೇರೆ ದೇಶದ ಮೊದಲ ಚಿತ್ರವಿದು. ಅದರಲ್ಲೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರ ನನಗೆ ಒಂದು ಹೊಸ ಅನುಭವ. ಈ ಚಿತ್ರದಿಂದ ನಾನು ಬಹಳಷ್ಟು ಕಲಿಯುವುದಿದೆ ಮತ್ತು ಈ ಅನುಭವ ಅದ್ಭುತವಾಗಿ ಇರುತ್ತದೆ ಎಂದು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಚಿತ್ರತಂಡಕ್ಕೆ ನಿಕ್ ಸೇರ್ಪಡೆಯ ಕುರಿತು ಮಾತನಾಡಿರುವ ನಿರ್ಮಾಪಕ ವಿಶಾಲ್ ಗುರ್ನಾನಿ, ‘ನಿಕ್ ಸೇರ್ಪಡೆಯಿಂದ ನಮ್ಮ ಚಿತ್ರ ಇನ್ನಷ್ಟು ದೊಡ್ಡದಾಗಿದೆ. ಈ ಚಿತ್ರವನ್ನು ನಾವು ಹಾಲಿವುಡ್ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ನಿಕ್ರಂತಹ ಸಮರ್ಥ ವ್ಯಕ್ತಿ ನಮ್ಮ ಜೊತೆಗೆ ಕೈಜೋಡಿಸಿರುವುದು ತಂಡದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹೇಳಿಕೊಂಡಿದ್ದಾರೆ.
‘ವೃಷಭ’ ಚಿತ್ರವು ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಂದು ಆಕ್ಷನ್-ಸೆಂಟಿಮೆಂಟ್ ಚಿತ್ರವಾಗಿದ್ದು, ಮೋಹನ್ ಲಾಲ್ ಮತ್ತು ರೋಶನ್ ಮೇಕ ಜೊತೆಗೆ ಶನಾಯ ಕಪೂರ್, ಜಹ್ರ ಎಸ್ ಖಾನ್, ಶ್ರೀಕಾಂತ್ ಮೇಕ, ರಾಗಿಣಿ ದ್ವಿವೇದಿ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಮುಂದಿನ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ ಇದು ಸಹ ಒಂದಾಗಿದೆ.

‘ವೃಷಭ’ ಚಿತ್ರವನ್ನು ಬಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಕನ್ನಡದ ನಂದಕಿಶೋರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವು ಮಲಯಾಳಂ, ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡು ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ವಾಮನಗೆ ಸಾಥ್ ನೀಡಿದ ಅಭಿಷೇಕ್ ಅಂಬರೀಶ್: ಮುದ್ದು ರಾಕ್ಷಸಿ ಹಾಡು ಹೊರಬಂತು

ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆಷ್ಟೇ ರಿಲೀಸ್ ಆಗಿದ್ದ ವಾ..ವಾ..ವಾ..ವಾಮನ ಮಾಸ್ ನಂಬರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ವಾಮನ ಅಂಗಳದಿಂದ ಮುದ್ದು ರಾಕ್ಷಸಿ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಕಂಠ ಕುಣಿಸಿದ್ದಾರೆ. ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಈಕ್ವಿನಾಕ್ಸ್ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ “ಚೇತನ್‌ ಗೌಡ” ಅದ್ಧೂರಿಯಾಗಿ ನಿರ್ಮಿಸಿರುವ ವಾಮನ ಸಿನಿಮಾವನ್ನು ಯುವ ನಿರ್ದೇಶಕ “ಶಂಕರ್‌ ರಾಮನ್‌” ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಮುದ್ದು ರಾಕ್ಷಸಿ ಮೆಲೋಡಿ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರಿಲೀಸ್ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್ ಕೊಟ್ಟರು.

ಅಭಿಷೇಕ್ ಅಂಬರೀಷ್, ನಾನು ಈಗಷ್ಟೇ ಮುದ್ದು ರಾಕ್ಷಸಿ ಹಾಡು ನೋಡಿದೆ. ಒಂದು ಸಾಂಗ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ ಹೀರೋಯಿನ್ ಗೂ ಅಲ್ಲ. ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸಿಸ್ಟ್ ಗೆ. ಅವರ ಎಫರ್ಟ್ ಜಾಸ್ತಿ ಇರುತ್ತದೆ. ನಮ್ಮ ಗೆಳೆಯ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೇವು. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ ಎಂದರು.

ಧ್ವನೀರ್ ಗೌಡ ಮಾತನಾಡಿ, ಒಂದೇ ಒಂದು ಫೋನ್ ಕಾಲ್ ಗೆ ಬಂದು ಮುದ್ದು ರಾಕ್ಷಸಿ ಹಾಡನ್ನು ಅಭಿಷೇಕ್ ಅಂಬರೀಶ್ ಅವರು ಲಾಂಚ್ ಮಾಡಿಕೊಟ್ಟಿದ್ದಾರೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಗೆ ಹೆಜ್ಜೆ ಹಾಕಿದ್ದೇನೆ ಎಂದರು.

ವಾಮನ ನಿರ್ಮಾಪಕ ಚೇತನ್ ಗೌಡ ಮಾತನಾಡಿ, ಎಲ್ಲರಿಗೂ ಧನ್ಯವಾದ..ಈ ಸಮಾರಂಭವನ್ನು ಇಷ್ಟು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಾ. ನಾನು ಮೊದಲ ಸಾಂಗ್ ಬಿಡುಗಡೆ ಟೈಮ್ ನಲ್ಲಿ ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿದ್ದೇನೆ. ಈ ಹಾಡನ್ನು ನೋಡಿ ಸಪೋರ್ಟ್ ಮಾಡಿ. ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಚಿತ್ರರಂಗ ಬೆಳೆಸಿ ಎಂದರು.

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಸಾಂಗ್ ನಿಮಗೆ ಡೆಡಿಕೇಟ್ ಗೆ ಮಾಡುತ್ತಿದ್ದೇವೆ. ಅಜನೀಶ್ ಲೋಕನಾಥ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಮುದ್ದಾದ ಸಾಹಿತ್ಯ, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕೂಡಿಸಿದ್ದು, ಭೂಷಣ್ ಮಾಸ್ಟರ್ ಕೊರಿಯೋಗ್ರಫ್ ಮಾಡಿದ್ದಾರೆ. ಮನೆಗೆ ಹೋಗ್ತಾ ನೀವು ಮುದ್ದು ಮುದ್ದು ರಾಕ್ಷಸಿ ಹಾಡುತ್ತಾ ಹೋಗಿ ಎಂದರು.

ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಅವರು ಕೆಲಸ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ್ದರು. ನಿನ್ನೆ ಸಂಜೆ 5 ಗಂಟೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತದಿಂದಾಗಿ
ಇಂದು (ಆ.7) ನಿಧನರಾಗಿದ್ದಾರೆ.

ನಿನ್ನೆ ರಾತ್ರಿಯೇ ವಿಜಯ ರಾಘವೇಂದ್ರ ಅವರು‌ ಬ್ಯಾಂಕಾಕ್ ಗೆ ತೆರಳಿದ್ದರು. ಈಗ ವಿಷಯ ತಿಳಿಯುತ್ತಿದ್ದಂತೆಯೇ ವಿಜರಾಘವೇಂದ್ರ ಅವರ ಕುಟುಂಬ ಕೂಡ ಬ್ಯಾಂಕಾಕ್ ಗೆ ತೆರಳಲಿದೆ.


ಈಗಾಗಲೇ ಬ್ಯಾಂಕಾಕ್ ಗೆ ತೆರಳಲು ಕುಟುಂಬ ರೆಡಿಯಾಗಿದೆ. ಇಂದು ರಾತ್ರಿ ಅಥವಾ ಬೆಳಗ್ಗೆ ಪಾರ್ಥಿವ ಶರೀರವನ್ನು ತರಲಾಗುವುದು.
ಮಲ್ಲೇಶ್ವರಂ ನಲ್ಲಿರುವ ಬಿ.ಕೆ.ಶಿವರಾಮ್ ಅವರ ಮನೆಗೆ ಶ್ರೀ ಮುರಳಿ ತೆರಳಿದ್ದಾರೆ.

ಬ್ಯಾಂಕಾಕ್ ನಲ್ಲಿ ಸ್ಪಂದನಾ ಅವರು ತಮ್ಮ ಸ್ನೇಹಿತೆಯರ ಜೊತೆ ಶಾಪಿಂಗ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಸದ್ಯ ಬ್ಯಾಂಕಾಕ್ ನತ್ತ ವಿಜಯರಾಘವೇಂದ್ರ ಅವರ ಕುಟುಂಬ ತೆರಳಲಿದೆ.

Categories
ಸಿನಿ ಸುದ್ದಿ

ಆನ್ ಲೈನ್ ಮದುವೆಯಂತೆ! ಆಫ್ ಲೈನ್ ಶೋಭನವಂತೆ!! ಇದು‌ ಹೊಸಬರ ಸಿನಿಮಾ

ಈ ಹಿಂದೆ ಗರ್ಭದಗುಡಿ, 141, ಅಕ್ಕ ಭಾವ ಬಾಮೈದ, ನೀನೇನಾ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಅವರೀಗ ಹಾಸ್ಯ ಪ್ರದಾನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿರುವ ಆ ಚಿತ್ರದ ಹೆಸರು ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ.

ಇದೇ ತಿಂಗಳಲ್ಲಿ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಚಿತ್ರವನ್ನು ಇತ್ತೀಚೆಗಷ್ಟೇ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಯಾವುದೇ ಕಟ್ಸ್ ಹೇಳದೆ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ಕೊಟ್ಟಿದೆ.

ವಿಭಿನ್ನ ಹಾಗೂ ಪರಿಶುದ್ದವಾದ ಹಾಸ್ಯ, ಜೊತೆಗೆ ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ, ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಕಾಮಿಡಿ ಕಥೆ ಹೊಂದಿದೆ.

ಈ ಚಿತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಅಲ್ಲದೇ ಹಾಡುಗಳನ್ನು ಆನೇಕಲ್ ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್ ವೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಅಲ್ಲದೆ ಆಂಕರ್ ದಯಾನಂದ್ ಕೂಡ ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಬಹಳ ವರ್ಷಗಳ ನಂತರ ತೆರೆಗೆ ಬರುತ್ತಿರುವ ಪಕ್ಕಾ ಕಾಮಿಡಿ ಹಾಗೂ ಫ್ಯಾಮಿಲಿ‌ ಎಂಟರ್ ಟೈನರ್ ಚಲನಚಿತ್ರ ಇದಾಗಿದ್ದು,ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆಯನ್ನು ನಿರ್ದೇಶಕ ವೇಂಪಲ್ಲಿ ಬಾವಾಜೀ ಅವರೇ ಬರೆದಿದ್ದಾರೆ.

ಬಾಲು ಅವರ ಕ್ಯಾಮೆರಾ ವರ್ಕ್, ರೋಹಿತ್ ಅವರ ಸಂಕಲನ, ಅಲೆಕ್ಸ್ ಅವರ ಸಂಗೀತ, ಅರುಣ ಪ್ರಸಾದ್ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ‘ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ’ ಪ್ರೇಕ್ಷಕರ ‌ಮುಂದೆ ಬರಲಿದೆ.

Categories
ಸಿನಿ ಸುದ್ದಿ

ಸಿನಿ ಪ್ರಿಯರಿಗೆ ಅನಿರುದ್ಧ ರಸದೂಟ! ಅವರೀಗ ಚೆಫ್ ಚಿದಂಬರ: ಟೈಟಲ್ ರಿಲೀಸ್ ಮಾಡಿದ ಕಿಚ್ಚ

ನಟ ಅನಿರುದ್ಧ್ , ಐದು ವರ್ಷಗಳ ನಂತರ “ರಾಘು” ಚಿತ್ರದ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ನೂತನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಈ ಮೊದಲೇ ತಿಳಿಸಲಾಗಿತ್ತು.

ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ “chef ಚಿದಂಬರ” ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದ್ದಾರೆ.

ಅನಿರುದ್ಧ್ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ತಿಂಗಳ ಹತ್ತರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ಅನಿರುದ್ದ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನವಿದೆ.

ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು “chef ಚಿದಂಬರ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಅಂಕಿತಾ-ಆದಿತ್ಯ ಬರೆದ ಹೊಸ ಕಾಗದ: ಫಸ್ಟ್ ಲುಕ್ ರಿಲೀಸ್ ಮಾಡಿದ ಡಾರ್ಲಿಂಗ್ ಜೋಡಿ

ಈ ಹಿಂದೆ ಆ್ಯಪಲ್ ಕೇಕ್ ಎಂಬ ಸಿನಿಮಾ ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡ ಎರಡನೇ ಹೆಜ್ಜೆ ಕಾಗದ. ಮದರಂಗಿ, ವಾಸ್ಕೋ ಡಿಗಾಮ ಸೇರಿದಂತೆ ಹಲವರು ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ರಂಜಿತ್ ಆ್ಯಪಲ್ ಕೇಕ್ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು. ಈಗ ಅವರ ನಿರ್ದೇಶನದ ಎರಡನೇ ಸಿನಿಮಾ ಕಾಗದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಕಾಗದ ಸಿನಿಮಾ ಮೂಲಕ ಬಾಲನಟಿ ಅಂಕಿತಾ ನಾಯಕಿಯಾಗಿ, ಆದಿತ್ಯ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಮಫ್ತಿ ಖ್ಯಾತಿಯ ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ತಾರಾಬಳಗದಲ್ಲಿದ್ದಾರೆ. ಕಾಗದ ಪ್ರೇಮಕಥಾಹಂದರದ ಚಿತ್ರ. 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರ ವಹಿಸಿದೆ ಅನ್ನೋದು ಚಿತ್ರದ ಕಂಟೆಂಟ್.

ರಂಜಿತ್ ಕುಮಾರ್ ಗೌಡ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕಾಗದ ಸಿನಿಮಾಗೆ ಅರುಣ್ ಕುಮಾರ್ ಎ ಬಂಡವಾಳ ಹೂಡಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ನಡಿ ಸಿನಿಮಾ ಮೂಡಿ ಬರಲಿದ್ದು, ಇದೇ ನಿರ್ಮಾಣ ಸಂಸ್ಥೆಯಡಿ ಈ ಹಿಂದೆ ರಗಡ್ ಎಂಬ ಚಿತ್ರ ನಿರ್ಮಾಣವಾಗಿತ್ತು.

ಕಾಗದ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಎಸ್ ಪ್ರದೀಪ್ ವರ್ಮಾ ಸಂಗೀತ, ಪವನ್ ಗೌಡ ಸಂಕಲನ, ಭೂಷಣ್ ಕೊರಿಯೋಗ್ರಫಿ ಸಿನಿಮಾಕ್ಕಿದೆ. ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಗದ ಸಿನಿಮಾದ ಚಿತ್ರೀಕರದ ಮಾಡಲಾಗಿದೆ.

Categories
ಸಿನಿ ಸುದ್ದಿ

ರಚಿತಾಗೆ ಸಂಜೆ ಮೇಲೆ ಸುಮ್ನೆ‌ ಫೋನ್ ಮಾಡ್ಲ ಅಂತಂದ ನೀನಾಸಂ ಸತೀಶ್ !

ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಅಭಿನಯಿಸಿದ್ದ ಅಯೋಗ್ಯ ಚಿತ್ರದ “ಏನಮ್ಮಿ ಏನಮ್ಮಿ” ಹಾಡು ಸಖತ್ ಹಿಟ್ ಆಗಿತ್ತು. ಈಗಲೂ ಆ ಹಾಡು ಜನಪ್ರಿಯ. ಈಗ ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ಮ್ಯಾಟ್ನಿ” ಚಿತ್ರದಿಂದ “ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ” ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆ ಸಿಗುತ್ತಿದೆ.

ಬಹಳ ಅದ್ಭುತವಾದ ಹಾಡು. ಕಲಾ ನಿರ್ದೇಶನ, ನೃತೃ ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎಂದು ಮಾತು ಪ್ರಾರಂಭಿಸಿದ ನೀನಾಸಂ ಸತೀಶ್, ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್ ನಲ್ಲಿ ಇದು ಬೆಸ್ಟ್ ಸಾಂಗ್ ಇದು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅಷ್ಟೇ ಚೆನ್ನಾಗಿ ಹಾಡು ಮಾಡಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡು ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ.

ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. “ಅಯೋಗ್ಯ” ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ಈ ಕಥೆಗೆ ರಚಿತಾ ರಾಮ್ ಅವರೇ ಸೂಕ್ತ ಅನಿಸಿತು. ನಂತರ ಮತ್ತೊಬ್ಬ ನಾಯಕಿಯಾಗಿ ಅದಿತಿ ಚಿತ್ರತಂಡ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಈ ಚಿತ್ರದಲ್ಲಿದ್ದಾರೆ. ಒಬ್ಬರು ಇರುವಾಗ ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು. ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ, ಪೂರ್ಣ ಎಲ್ಲರೂ ಸ್ನೇಹಿತರು. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಮುಂದೆ ನನ್ನ ಹಾಗೂ ಅದಿತಿ ಅವರ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆನಂದ್ ಆಡಿಯೋದವರು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ನಮ್ಮದು ಹಳೆಯ ನಂಟು. ನನ್ನ ಹಲವು ಚಿತ್ರದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ನನಗೆ ಬಹಳ ಲಕ್ಕಿ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಈ ಹಾಡಿನ ಚಿತ್ರೀಕರಣದಲ್ಲೇ ಇದು ಬಹಳ ಚೆನ್ನಾಗಿ ಮೂಡಿಬರುತ್ತದೆ ಎಂದೆನಿಸಿತ್ತು. ಅದರಂತೆ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಡು, ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್‌ಗಳನ್ನು ಹಾಕಿದ್ದಾರೆ. ಅದರಲ್ಲೂ ಒಂದು ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದು, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿದ ಹಾಗನಿಸಿತು. ಇಡೀ ತಂಡದ ಶ್ರಮದಿಂದ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಮನೋಹರ್ ಕಥೆ ಮಾಡಿಕೊಂಡು ಬಂದಾಗ ಖುಷಿಯಾಯಿತು. ಅದ್ಭುತವಾದ ತಾರಾಗಣ ಈ ಚಿತ್ರದಲ್ಲಿದೆ. ಒಳ್ಳೆಯ ಪಾತ್ರವಿದೆ. ಇದರಲ್ಲಿ ಹೊಸ ಶೇಡ್ ಇದೆ. ಟ್ರೇಲರ್ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ಗೊತ್ತಾಗುತ್ತದೆ ಎಂದರು ರಚಿತರಾಮ್.

ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಎನ್ನುತ್ತೇವೆ. ಅದೇ ರೀತಿ ನಮ್ಮ ಚಿತ್ರದ ಅದ್ಭುತ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ನಮ್ಮ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಿದ್ದೇವೆ. ಸತೀಶ್ ಹಾಗೂ ರಚಿತಾರಾಮ್ ಅಭಿನಯದ ಈ ಹಾಡು ಅದ್ಭುತವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಅದಿತಿ ಪ್ರಭುದೇವ ತಿಳಿಸಿದರು.

ನಿರ್ಮಾಪಕಿ ಪಾರ್ವತಿ ಎಸ್ ಗೌಡ, ನಿರ್ದೇಶಕ ಮನೋಹರ್ ಕಾಂಪಲ್ಲಿ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ಮೈಸೂರು ಹಾಗು ನಟರಾದ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು “ಮ್ಯಾಟ್ನಿ” ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಚಂದ್ರಮುಖಿಯಲ್ಲಿ ಕಂಗನಾ ಆಗಮನ: ಆಭರಣ ರಾಣಿಯ ಫಸ್ಟ್ ಲುಕ್ ರಿಲೀಸ್

ರಾಘವ್ ಲಾರೆನ್ಸ್ ಹಾಗೂ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2 ಸಿನಿಮಾ ಬಿಡುಗಡೆಗೆ ಹೊಸ್ತಿಲಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಈ ಚಿತ್ರ ಎಂಟ್ರಿ ಕೊಡ್ತಿದ್ದು, ಇಂದು ಕಂಗನಾ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಂಪ್ರಾದಾಯಿಕ ಉಡುಗೆ ತೊಟ್ಟು, ಬಂಗಾರದ ಆಭರಣಗಳಲ್ಲಿ ಕಂಗನಾ ಕಂಗೊಳಿಸಿದ್ದಾಳೆ. ಕಳೆದ ವಾರವಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ರಾಘವ್ ಲಾರೆನ್ಸ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದರು.

ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. ಗಣೇಶ್ ಹಬ್ಬಕ್ಕೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಂದ್ರಮುಖಿ-2 ಸಿನಿಮಾ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ವುಲ್ಫ್ ಟೀಸರ್ ಭರ್ಜರಿ ಸೌಂಡ್: ಇದು ಪ್ರಭುದೇವ ಇರುವ ಸಂದೇಶ ಚಿತ್ರ!

ಸಂದೇಶ್ ಪ್ರೊಡಕ್ಷನ್ ನಿರ್ಮಾಣದ 30ನೇ ಚಿತ್ರ ಬಹು ಭಾಷೆಗಳಲ್ಲಿ (ತಮಿಳು,ಕನ್ನಡ,ಹಿಂದಿ, ತೆಲುಗು) ತಯಾರಾಗಿರುವ ಡಾನ್ಸಿಂಗ್ ಸ್ಟಾರ್ ಪ್ರಭುದೇವ, ಅನುಸೂಯ ಭಾರದ್ವಾಜ್,ಲಕ್ಷ್ಮಿ ರೈ,ವಸಿಷ್ಠ ಸಿಂಹ,ಅಂಜು ಕುರಿಯನ್,ಮುಂತಾದ ಖ್ಯಾತ ತಾರಾ ಬಳಗವನ್ನೆ ಹೊಂದಿರುವ ವುಲ್ಫ್ ತಾಂತ್ರಿಕ ಕೆಲಸಗಳನ್ನು ಮುಗಿಸಿದೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಟೀಸರ್ ಕೂಡ ಮೆಚ್ಚುಗೆ ಪಡೆದಿದೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಕಥಾ ಹಂದರದ ಈ ಚಿತ್ರವನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ಸಜ್ಜಾಗಿದೆ. ಆಗಸ್ಟ್ 16 ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನುಮದಿನ. ಅಂದು ನಟ ವಿಜಯ ಸೇತುಪತಿ ಹಾಡಿರುವ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಹ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್ ಸಂಗೀತ ನಿರ್ದೇಶನ ಮಾಡಿರುವ, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿರುವ ಈ ಚಿತ್ರವನ್ನು ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ….

Categories
ಸಿನಿ ಸುದ್ದಿ

ಸಾಧು ಬ್ರದರ್ ಈಗ ಡೈರೆಕ್ಟರ್: ತಾಯ್ತ ಎಂಬ ನಯಾ ಚಿತ್ರ ನಿರ್ದೇಶಿಸಿದ ಲಯ

ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯಕೋಕಿಲ ಚೊಚ್ಚಲ ನಿರ್ದೇಶನದ “ತಾಯ್ತ” ಚಿತ್ರಕ್ಕಾಗಿ ರಾಮ್ ನಾರಾಯಣ್ ಅವರು ಬರೆದಿರುವ “ಶಿವನೇ ಕಾಪಾಡು” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಮೂರು ದೇವರ ಕುರಿತಾದ ಈ ಹಾಡನ್ನು ಮೂರು ಧರ್ಮದ ಗುರುಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ , ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.

ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ‌. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕನಾಗಿದ್ದಾರೆ. ಅವರ ನಿರ್ದೇಶನದ “ತಾಯ್ತ” ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಿದೆ. ಅವರೇ ಸಂಗೀತ ನೀಡಿದ್ದಾರೆ. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಧುಕೋಕಿಲ ಹಾರೈಸಿದರು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಾರರ್ ಜಾನರ್ ನ ಚಿತ್ರವಾಗಿದ್ದರೂ, ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.

ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇಂದು ಬಿಡುಗಡೆಯಾಗಿರುವ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಅನುರಾಧ ಭಟ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು ಲಯಕೋಕಿಲ.

ನಾಯಕ ರಿಯಾನ್, ನಾಯಕಿ ಹರ್ಷಿಕಾ ಪೂಣಚ್ಛ, ನಟಿ ಭಾನುಪ್ರಿಯ, ಸೇರಿದಂತೆ ಅನೇಕ ಕಲಾವಿದರು ಹಾಗೂ ಹಾಡು ಬರೆದಿರುವ ರಾಮ್ ನಾರಾಯಣ್ ಮುಂತಾದವರು “ತಾಯ್ತ” ಚಿತ್ರದ ಕುರಿತು ಮಾತನಾಡಿದರು.

error: Content is protected !!