ತುಕ್ರ-ತನಿಯ ಸಿನಿಮಾಗೆ ಭೀಮ ಸಾಥ್: ರಘು ಶಿವಮೊಗ್ಗ ಚಿತ್ರದ ಟೈಟಲ್ ಲಾಂಚ್ ಮಾಡಿದ ದುನಿಯಾ ವಿಜಯ್

ಚೂರಿಕಟ್ಟೆ, ಪೆಂಟಗನ್ ರೀತಿಯ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿರುವ ನಟ ಕಂ ನಿರ್ದೇಶಕ ರಾಘು ಶಿವಮೊಗ್ಗ ಮೂರನೇ ಕನಸು ಇಂದು ಅನಾವರಣಗೊಂಡಿದೆ. ರಾಘು ನಿರ್ದೇಶನದ ಹೊಸ ಸಿನಿಮಾದ ಟೈಟಲ್ ನ್ನು ಭೀಮ ದುನಿಯಾ ವಿಜಯ್ ಅನಾವರಣ ಮಾಡಿ ಶುಭಾಶಯ ಕೋರಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ತುಕ್ರ ತನಿಯ ಎಂಬ ವಿಭಿನ್ನ ಬಗೆಯ ಶೀರ್ಷಿಕೆ ಇಡಲಾಗಿದೆ.

ತುಕ್ರ ಅಂದರೆ ಶುಕ್ರವಾರ ಹುಟ್ಟಿದವನು. ತನಿಯ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ-ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ. ಪ್ರವೀಣ್ ತೇಜ್ ಹಾಗೂ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ ನಿಂದ ಚಿತ್ರೀಕರಣ ನಡೆಸೋದಿಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ತುಕ್ರ ತನಿಯ ಸಿನಿಮಾಗೆ ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿದೆ.

ನಿರ್ದೇಶಕನ ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ರಾಘು, ಮೊದಲು ಚೌಕಬಾರ ಹೆಸರಿನ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್ ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ಚೂರಿಕಟ್ಟೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು.

ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ಆಕ್ಟ್ 1978 ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿಯೇ ಬ್ಯುಸಿಯಾದರು. ಈಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ.

Related Posts

error: Content is protected !!