Categories
ಸಿನಿ ಸುದ್ದಿ

ಸೃಜನ್ ಲೋಕೇಶ್ ಈಗ ನಿರ್ದೇಶಕ: ಜಿಎಸ್ ಟಿ ಕಟ್ಟೋಕೆ ರೆಡಿಯಾದ ನಿರ್ಮಾಪಕ‌ ಸಂದೇಶ್

ಸೃಜನ್ ಲೋಕೇಶ್ ನಟನಾಗಿ, ನಿರ್ಮಾಪಕನಾಗಿ ಜನಪ್ರಿಯ. ಈಗ “G S T” ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರವನ್ನು ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿದರು. ಗಿರಿಜಾ ಲೋಕೇಶ್ ಕ್ಯಾಮೆರಾ ಚಾಲನೆ ಮಾಡಿದರು.
ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಸುಂದರರಾಜ್, ತಾರಾ, ಶೃತಿ, ನಿರೂಪ್ ಭಂಡಾರಿ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರದಲ್ಲಿ ಮೂರು ವಿಶೇಷಗಳಿವೆ ಎಂದು ಮಾತು ಆರಂಭಿಸಿದ ಸೃಜನ್ ಲೋಕೇಶ್, ನನ್ನ ಲಕ್ಕಿ ನಂಬರ್ 7. ಮೊದಲು‌ ಇದು 2023 ಇದನ್ನು ಕೂಡಿಸಿದಾಗ ಏಳು ಬರುತ್ತದೆ. ನನ್ನ ನಟನೆಯ 25 ನೇ ಚಿತ್ರ. 2+5 =7.
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಚಿತ್ರ. 3 + 4 ಕೂಡಿದಾಗ ಏಳಾಗುತ್ತದೆ. ಇನ್ನೊಂದು ವಿಶೇಷ, ನಮ್ಮ ತಾತನ ಚಿತ್ರದಲ್ಲಿ ನಮ್ಮ ಅಪ್ಪ ಬಾಲ ಕಲಾವಿದನಾಗಿ, ನಮ್ಮಪ್ಪನ ಚಿತ್ರದಲ್ಲಿ ನಾನು ಬಾಲ ಕಲಾವಿದನಾಗಿ ಅಭಿನಯಿಸಿದ್ದರು.‌ ಈಗ ನನ್ನ ಚಿತ್ರದಲ್ಲಿ ನನ್ನ ಮಗ ಮಾಸ್ಟರ್ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ. ನಾಲ್ಕನೇ ಜನರೇಶನ್ ಈ ರೀತಿ ನಟಿಸುತ್ತಿರುವುದು ಇದೇ ಮೊದಲು ಎನ್ನಬಹುದು. ಮತ್ತೊಂದು ವಿಶೇಷವೆಂದರೆ ನನ್ನ ಮೊದಲ ನಿರ್ದೇಶನದ ಚಿತ್ರದಲ್ಲೇ ನನ್ನ ತಾಯಿಗೆ ಆಕ್ಷನ್ ಕಟ್ ಹೇಳುತ್ತಿರುವುದು. ಈ ಎಲ್ಲಾ‌ ಕಾರಣಗಳಿಂದ ಈ ಚಿತ್ರ ನನಗೆ ವಿಶೇಷ.

ಇನ್ನು “G S T” ಬಗ್ಗೆ ಹೇಳಬೇಕೆಂದರೆ, ಚಿತ್ರಕ್ಕೆ “ಘೋಸ್ಟ್ ಇನ್ ಟ್ರಬಲ್” ಎಂಬ ಅಡಿಬರಹವಿದೆ. ಈ ವಾಕ್ಯ ಹೇಳುವಂತೆ “ದೆವ್ವಗಳಿಗೂ‌ ಸಮಸ್ಯೆಯಿದೆ” ಎಂಬುದು. ಆ‌ ಸಮಸ್ಯೆ ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು.‌ ಈ ಚಿತ್ರದಲ್ಲಿ ಮನರಂಜನೆಯ ಮಹಾಪೂರ ಹರಿಯುವುದು ಗ್ಯಾರಂಟಿ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದರು.

ಸೃಜನ್ , ನನ್ನ ಆತ್ಮೀಯ ಗೆಳೆಯ. ಗೆಳೆಯನಿಗಾಗಿ ಮಾಡುತ್ತಿರುವ ಸಿನಿಮಾವಿದು ಎಂದು ನಿರ್ಮಾಪಕ ಸಂದೇಶ್ ಎನ್ ತಿಳಿಸಿದರು. ಸಂದೇಶ್ ಪ್ರೊಡಕ್ಷನ್ಸ್ ನ ಸಂದೇಶ್ ನಾಗರಾಜ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ನಟಿಸುತ್ತಿರುವ ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ನಿವೇದಿತಾ, ತಬಲ ನಾಣಿ, ಅರವಿಂದ್ ರಾವ್, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮುಂತಾದವರು, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಗೀತಸಾಹಿತಿ ಕವಿರಾಜ್, ಸಂಭಾಷಣೆಕಾರ ರಾಜಶೇಖರ್ ಮತ್ತು ತೇಜಸ್ವಿ ನಾಗ್ “G S T” ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ನಿಖಿಲ್ ಸಿನಿಮಾ ಮಾಡಲು ಲೈಕಾ ಪ್ರೊಡಕ್ಷನ್ಸ್ ನಾಲ್ಕು ವರ್ಷ ಕಾದಿದ್ದು ನಿಜಾನ?

ಒಂದಲ್ಲ ಎರಡಲ್ಲ ಮೂರಲ್ಲ ಬರೋಬ್ಬರಿ ನಾಲ್ಕು ವರ್ಷ ಕಾದು ಈಗ ಆ ಹೀರೋ ಸಿನಿಮಾ ಮಾಡುತ್ತಿದೆ ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್. ಇಷ್ಟಕ್ಕೂ ಆ ಹೀರೋಗಾಗಿ ಲೈಕಾ ಸಂಸ್ಥೆ ಕಾದಿದ್ದು ಯಾಕೆ ಗೊತ್ತಾ? ಆ ಹೀರೋನ ಸಿನಿಮಾ ನೋಡಿದ ನಂತರವೇ ಅವರಿಗೊಂದು ಸಿನಿಮಾ‌ ಮಾಡಲು‌ಲೈಕಾ ನಿರ್ಧರಿಸಿತ್ತು. ಅದೀಗ ನೆರವೇರುತ್ತಿದೆ.

ಹೌದು, ನಿಖಿಲ್ ಕುಮಾರ ಸ್ವಾಮಿ ಅವರಿಗಾಗಿ ಲೈಕಾ ಸಂಸ್ಥೆ ನಾಲ್ಕು ವರ್ಷ ಕಾದಿದೆ ಎಂಬುದು ಸುದ್ದಿ. ಯುವರಾಜನ ಮಾಸ್ ಲುಕ್ ಹಾಗೂ ಸ್ಟಂಟ್ಸ್ ಗೆ ಮನಸೋತ ಬಿಗ್ ಪ್ರೊಡಕ್ಷನ್ ಹೌಸ್ ಅವರ ಡೇಟ್ ಗಾಗಿ ಕಾದು ಇದೀಗ ನಿರ್ಮಾಣ‌ ಮಾಡಲು ಮುಂದಾಗಿದೆ.

ಇನ್ನು, ಎರಡು ವರ್ಷದ ನಂತರ ನಿಖಿಲ್ ಕುಮಾರ ಸ್ವಾಮಿ ಅವರು ಸಿನಿಮಾ ಕಡೆ ಮುಖ‌ ಮಾಡಿದ್ದಾರೆ.
ರೈಡರ್ ಚಿತ್ರದ ನಂತರ ಅವರು ಚುನಾವಣೆಯತ್ತ ಗಮನ ಹರಿಸಿದ್ದರು. ಅವರು ಸಂಪೂರ್ಣ ರಾಜಕೀಯ ಕಡೆ ವಾಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರಡ, ಒಂದೊಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದರು. ಈಗ ನಿಖಿಲ್ ಲೈಕಾ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ನಿಖಿಲ್ ಗಾಗಿ ಕಾಲಿವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿ ನೀಡಿರುವುದು ವಿಶೇಷ.
ನಿಖಿಲ್ ಜೊತೆ ಸಿನಿಮಾ ಮಾಡಲು ನಾಲ್ಕು ವರ್ಷ ಕಾದ ಲೈಕಾ ಸಂಸ್ಥೆ , ನಿಖಿಲ್ ಅವರ ಸೀತಾ ರಾಮ ಕಲ್ಯಾಣ ಸಿನಿಮಾ ನೋಡಿ ಇಂಪ್ರೆಸ್ ಆಗಿದ್ದ ಲೈಕಾ ಸಂಸ್ಥೆ ಮಾಲೀಕ ಸುಭಾಷ್ ಕರಣ್ , ಇದೀಗ ಲೈಕಾ ಸಂಸ್ಥೆ ಮೂಲಕ ನಿಖಿಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಆಗಸ್ಟ್ 23 ರಂದು ಬೆಂಗಳೂರಿನಲ್ಲಿ ನಿಖಿಲ್ ಕುಮಾರ್ ಅವರ ಹೊಸ ಸಿನಿಮಾಗೆ ಮಹೂರ್ತ ನಡೆಯಲಿದೆ.
ಇದೇ ಮೊದಲ ಬಾರಿಗೆ ಭಾರತದ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡ ನಾಯಕ ನಟನ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹಾಕುತ್ತಿದೆ.
ಇದು ನಿಖಿಲ್ ಕೆರಿಯರ್ ನಲ್ಲೇ ಬಿಗ್ ಬಜೆಟ್ ಸಿನಿಮಾ ಎನ್ನಲಾಗಿದೆ.

Categories
ಸಿನಿ ಸುದ್ದಿ

ನಿಖಿಲ್ ಮತ್ತೆ ಬಂದ್ರು! ಕನ್ನಡಕ್ಕೆ ಬಂದ ಲೈಕಾ ಪ್ರೊಡಕ್ಷನ್ ಸಂಸ್ಥೆ ಜೊತೆ ಸಿನಿಮಾ ಮಾಡ್ತಾರೆ ಯುವರಾಜಕುಮಾರ

ನಿಖಿಲ್ ಕುಮಾರ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಪ್ರಶ್ನೆ ಇತ್ತು. ಈಗ ಸ್ಪಷ್ಟತೆ ಸಿಕ್ಕಿದೆ. ಅವರು ಸಿನಿಮಾ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಬಾರಿ ಅವರು ಲೈಕಾ ಸಂಸ್ಥೆ ಮೂಲಕ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

ಕನ್ನಡ ಸಿನಿಮಾರಂಗಕ್ಕೆ ಈಗಾಗಲೇ ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪೆನಿಗಳು ಆಗಮಿಸುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ದೊಡ್ಡ ಪ್ರೊಡಕ್ಷನ್ ಹೌಸ್ ಲಗ್ಗೆ ಇಡುತ್ತಿದೆ.

ಹೌದು, ನಿಖಿಲ್ ಕುಮಾರ್ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಅದರ ಮಹೂರ್ತ ಕೂಡ ಫಿಕ್ಸ್ ಆಗಿದೆ. ಅದೊಂದು ಬಿಗ್ ಬಜೆಟ್ ಸಿನಿಮಾ ಆಗಲಿದೆ. ಅಂದಹಾಗೆ, ನಿಖಿಲ್ ಕುಮಾರ್ ಅವರ ಸಿನಿಮಾಗೆ ತಮಿಳಿನ ಪ್ರಖ್ಯಾತ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹಾಕಲಿದೆ.

ಕನ್ನಡಕ್ಕೆ ಆಗಮಿಸುತಗತಿರುವ ಲೈಕಾ ಪ್ರೊಡಕ್ಷನ್ಸ್ ತಮಿಳಿನಲ್ಲೂ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.
ಕಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಖ್ಯಾತಿ ಪಡೆದಿರೋ ಲೈಕಾ ಸಿನಿಮಾ ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡಲು ನಿರ್ಧರಿಸಿದೆ.

ಈಗಾಗಲೇ ಲೈಕಾ ಪ್ರೊಡಕ್ಷನ್ಸ್, ಕತ್ತಿ, 2.0, ವಡಾ ಚೆನೈ , ದರ್ಬಾರ್ , PS1, PS2, ಡಾನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದೆ.
ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ2, ಚಿತ್ರಗಳನ್ನ ನಿರ್ಮಾಣ ಮಾಡಿರುವ ಲೈಕಾ ಸಂಸ್ಥೆ,
ಇದೀಗ ನಿಖಿಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದೆ ಎಂಬುದು ವಿಶೇಷ.

ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆ, ಕಮಲ್ ಹಾಸನ್ , ವಿಕ್ರಂ, ಅಜಿತ್, ರಜನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿ ಗೆಲುವು ಕಂಡಿದೆ.

ಇನ್ನು, ನಿಖಿಲ್ ಕುಮಾರ್ ಅವರ ಸಿನಿಮಾಗೆ, ನಿರ್ದೇಶಕ ಯಾರು ಎಂಬುದು ಗೌಪ್ಯ. ಅಂದಹಾಗೆ,
ಆಗಸ್ಟ್ 23ರಂದು ಸೆಟ್ಟೇರಲಿದೆ ಎಂಬುದು ವಿಶೇಷ.

Categories
ಸಿನಿ ಸುದ್ದಿ

ಪ್ರೈಡ್ ಇಂಡಿಯಾ ಅವಾರ್ಡ್ ಇವೆಂಟ್ ಗೆ ಶ್ರೀಯಾ ಶರಣ್ ಸಾಕ್ಷಿ

ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡಮಾಡಿ ಪ್ರೋತ್ಸಾಹಿಸುವಲ್ಲಿ `ಪ್ರೈಡ್ ಇಂಡಿಯಾ ಅವಾರ್ಡ್’ ಮಹತ್ವದ್ದೆನ್ನಿಸಿಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಯಶವಂತಪುರ ತಾಜ್‍ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಅಚ್ಚುಕಟ್ಟಾಗಿ ನೆರವೇರಿದೆ. ಉದ್ಯಮ ರಂಗದ ದಿಗ್ಗಜರು, ಸಾಧಕರು ನೆರೆದಿದ್ದ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಉದ್ಯಮ ಜಗತ್ತೆಂಬುದು ಸಾಗರವಿದ್ದಂತೆ. ಅದರಲ್ಲಿನ ನಾನಾ ವಿಭಾಗಗಳಲ್ಲಿ ಗೇಮ್ ಚೇಂಜರ್ ಅನ್ನಿಸಿಕೊಂಡು, ಹೊಸತನಗಳ ಮೂಲಕ ಸಾಧನೆ ತೋರಿದ ತೊರೆಗಳೆಲ್ಲ ಯಶವಂತಪುರ ತಾಜ್ ಪ್ರಾಂಗಣದಲ್ಲಿ ಸಂಗಮಿಸಿದಂತಿತ್ತು. ಈ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಶ್ರೀಯಾ ಶರಣ್, ಇದೊಂದು ಅದ್ಭುತ ಕಾರ್ಯಕ್ರಮ ಎಂಬಂಥಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಎಲ್ಲ ಸವಾಲುಗಳನ್ನು ಮೀರಿಕೊಂಡು ಉದ್ಯಮ ರಂಗದಲ್ಲಿ ಸಾಧನೆಗೈದವರನ್ನು ಸನ್ಮಾನಿಸುವ ಕಾರ್ಯಕ್ರಮವದು. ಇದರಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಕಬ್ಜಾ ಖ್ಯಾತಿಯ ಶ್ರೀಯಾ ಶರಣ್ ಪ್ರಶಸ್ತಿಗಳನ್ನು ಸಾಧಕರಿಗೆ ಕೊಟ್ಟು ಸಂತಸಪಟ್ಟಿದ್ದಾರೆ. ಇಂಡಿಯಾ ಪ್ರೈಡ್ ಅವಾರ್ಡ್ ಇವೆಂಟ್ ಬೆಂಗಳೂರಿನಲ್ಲಿ ನಡೆಯುತ್ತಿರೋದೇ ಖುಷಿ ಎಂಬುದಾಗಿ ಮಾತು ಶುರು ಮಾಡಿದ ಶ್ರೀಯಾ, ಈ ಪ್ರಶಸ್ತಿಗಳನ್ನು ತಾನೇ ಕೊಟ್ಟಿದ್ದನ್ನು ಕಂಡು ತಮ್ಮ ಪೋಶಕರೂ ಹೆಮ್ಮೆ ಪಡುತ್ತಾರೆಂದಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಕೊಡುವ ಈ ಕಾರ್ಯಕ್ರಮ ಅರ್ಥವತ್ತಾಗಿದೆ. ಸಣ್ಣದು ದೊಡ್ಡದೆಂಬುದರಾಚೆಗೆ ಇಂಥಾ ಪ್ರಶಸ್ತಿಗಳು ಘನತೆಯ ಕಾರಣದಿಂದ ಮುಖ್ಯವಾಗುತ್ತವೆ. ಮುಂದೊಂದು ದಿನ ಪ್ರೈಡ್ ಇಂಡಿಯಾ ಅವಾರ್ಡ್ ಕಾರ್ಯಕ್ರಮ ಗ್ರೇಟ್ ಶೋ ಅನ್ನಿಸಿಕೊಳ್ಳಲಿದೆ ಅಂತ ಭವಿಷ್ಯ ನುಡಿದಿದ್ದಾರೆ.

ಪ್ರೈಡ್ ಇಂಡಿಯಾ ಅವಾರ್ಡ್ ಎಂಬ ಪರಿಕಲ್ಪನೆ ವಿನಯ್ ಕುಮಾರ್ ನಾರಾಯಣಸ್ವಾಮಿ ಅವರ ಕನಸಿನ ಕೂಸು. ಉದ್ಯಮ ವಲಯದಲ್ಲಿ ಹೊಸಾ ಸಾಹಸಗಳನ್ನು ಮಾಡಿ ಗೆದ್ದವರು, ನಾನಾ ವಿಭಾಗದಲ್ಲಿದ್ದಾರೆ. ಅಂಥವರನ್ನೆಲ್ಲ ಗುರುತಿಸಿ, ಪ್ರೋತ್ಸಾಹಿಸುತ್ತಾ, ಭಾರತೀಯ ಉದ್ಯಮ ರಂಗ ಹೊಸಾ ಸಾಧ್ಯತೆಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಣೆ ನೀಡುವುದು ಈ ಇವೆಂಟಿನ ಅಸಲಿ ಆಶಯ. ಇದೀಗ ಬೆಂಗಳೂರಿನಲ್ಲಿ ಜರುಗಿರುವ ಈ ಕಾರ್ಯಕ್ರಮದಲ್ಲಿ ಉದ್ಯಮ ರಂಗದ ಮುನ್ನೂರಕ್ಕೂ ಹೆಚ್ಚು ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭಾರತದ ಆರ್ಥಿಕ ಪಥವನ್ನು ಪ್ರಜ್ವಲಿಸುವಂತೆ ಮಾಡುವಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅನೇಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆ ಪ್ರಕ್ರಿಯೆ ಕೂಡಾ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದೆ.

ಯಶವಂತಪುರ ತಾಜ್ ನಲ್ಲಿ ನಡೆದಿರುವ ಪ್ರೈಡ್ ಇಂಡಿಯಾ ಅವಾರ್ಡ್ ವಿಶೇಷ ಆವೃತ್ತಿಯಲ್ಲಿ ಡಾ. ಸಿದ್ದೇಶ್ವರ್ ಮನೋಜ್, ಡಾ. ಮೀರ್ ಅನ್ವರ್, ಮೊಹಿಯುದ್ದೀನ್, ಸುಧಾಂಶು ಶ್ರೀವಾತ್ಸವ್, ಡಾ. ಭಾಸ್ಕರನ್ ರಾಜು ಅವರಂಥಾ ತೀರ್ಪುಗಾರರ ವಿಶೇಷ ಸಮಿತಿಯನ್ನು ಒಳಗೊಂಡಿತ್ತು. ಯಾವುದೇ ಉದ್ಯಮದಲ್ಲಿನ ಹೊಸತನ, ಪ್ರಯೋಗಶೀಲತೆ, ಸಾಹಸ ಪ್ರವೃತ್ತಿಯನ್ನು ಪರಿಗಣಿಸುತ್ತಲೇ, ಗಹನವಾದ ಚರ್ಚೆ, ಹಲವಾರು ಮಾನದಂಡಗಳ ಆಧಾರದಲ್ಲಿ ಈ ಸಮಿತಿ ಪ್ರೈಡ್ ಇಂಡಿಯಾ ಅವಾರ್ಡ್ ಗೆ ಅರ್ಹರನ್ನು ಆಯ್ಕೆ ಮಾಡಿದೆ.
ಇದೇ ಸಂದರ್ಭದಲ್ಲಿ ಈ ಅವಾರ್ಡ್ ಈವೆಂಟಿನ ಸ್ಥಾಪಕರಾದ ವಿನಯ್ ಕುಮಾರ್ ನಾರಾಯಣಸ್ವಾಮಿ ಮನದುಂಬಿ ಮಾತಾಡಿದ್ದಾರೆ.

ಭಾರತೀಯ ಉದ್ಯಮ ರಂಗದಲ್ಲಿ ನಡೆಯುತ್ತಿರುವ ನಾವೀನ್ಯತೆ ಬೆರೆತ ಪ್ರಯತ್ನಗಳಾಗುತ್ತಿರುವುದು ಖುಷಿ ಕೊಡುತ್ತಿದೆ. ಪ್ರೈಡ್ ಇಂಡಿಯಾ ಅವಾರ್ಡ್ ಸಂಸ್ಥೆ ಸದಾ ಕಾಲವೂ ಉದ್ಯಮ ರಂಗದಲ್ಲಿನ ವೈಶಿಷ್ಟ್ಯ ಮತ್ತು ಅಮೋಘ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಧ್ಯೇಯ ಹೊಂದಿದೆ. ಈ ಕಾರ್ಯಕ್ರಮದಿಂದ ಅದಕ್ಕೆ ಮತ್ತಷ್ಟು ಅರ್ಥ ಸಿಕ್ಕಂತಾಗಿದೆ ಎಂದಿದ್ದಾರೆ. ಈ ಇವೆಂಟ್ ಉದ್ಯಮ ರಂಗದ ಎಲ್ಲ ಸಾಧಕರಿಗೂ ಸ್ಫೂರ್ತಿಯಾಗಿ, ಅದಾಗಲೇ ಮಹತ್ವದ್ದನ್ನು ಸಾಧಿಸಿದವರ ಸಮಾಗಮವಾಗಿ ಮುಖ್ಯವೆನಿಸುತ್ತದೆ. ಈ ಬಾರಿಯ ಸದರಿ ಅವಾರ್ಡ್ ಇವೆಂಟಿನಲ್ಲಿ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ತಾರೆ ಶ್ರೀಯಾ ಶರಣ್ ಪ್ರಧಾನ ಆಕರ್ಷಣೆಯಾಗಿದ್ದರು. ಅವರ ಇರುವಿಕೆಯಿಂದ ಈ ಈವೆಂಟ್ ಕಳೆಗಟ್ಟಿಕೊಂಡು ನೆರವೇರಿದೆ.

Categories
ಸಿನಿ ಸುದ್ದಿ

ವರಮಹಾಲಕ್ಷ್ಮೀ ಹಬ್ಬಕ್ಕೆ ಯಥಾಭವ ಟೀಸರ್ ರಿಲೀಸ್

ಗೌತಮ್ ಬಸವರಾಜು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ “ಯಥಾಭವ” ಚಿತ್ರದ ಟೀಸರ್ ಆಗಸ್ಟ್ 25, ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಲಿದೆ

ಕೋರ್ಟ್ ಡ್ರಾಮ ಜಾನರ್ ನ ಈ ಚಿತ್ರದಲ್ಲಿ ಪವನ್ ಶಂಕರ್ ಹಾಗೂ ಸಹನ ಸುಧಾಕರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ರಾಕ್ ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದತ್ತಣ್ಣ, ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ,ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್, ಮಹೇಶ್ ಕಾಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Macht entertainments ಲಾಂಛನದಲ್ಲಿ ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ.ಎನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್, ನೃತ್ಯ ನಿರ್ದೇಶನವಿದೆ.

ಸ್ಮಿತ ಕುಲಕರ್ಣಿ ಕಲಾ ನಿರ್ದೇಶನ ಹಾಗೂ ನಿರ್ಮಾಲ್ ಜೋಶಿ ಅವರ ಸಹ ನಿರ್ದೇಶನವಿದೆ. ಉತ್ಸವ್ ಶ್ರೇಯಸ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಹಾಡುಗಳನ್ನು ಬರೆದಿದ್ದಾರೆ.

Categories
ಸಿನಿ ಸುದ್ದಿ

ಆಗಸ್ಟ್ 23ಕ್ಕೆ ರಾನಿ ಹಿಂದಿ ಟೀಸರ್ ರಿಲೀಸ್

ಆಗಸ್ಟ್ 23 ರಂದು ಕಿರಣ್ ರಾಜ್ ನಾಯಕರಾಗಿ ನಟಿಸಿರುವ “ರಾನಿ” ಚಿತ್ರದ ಹಿಂದಿ ಟೀಸರ್ T ಸೀರಿಸ್ ಸಂಸ್ಥೆಯ ಮೂಲಕ‌ ಬಿಡುಗಡೆಯಾಗಲಿದೆ. ಈಗಾಗಲೇ ಕನ್ನಡ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ.


ಈಗ 2 ನಿಮಿಷ 22 ಸೆಕೆಂಡ್ ನ ಹಿಂದಿ ಟೀಸರ್ ಬಿಡುಗಡೆಯಾಗುತ್ತಿದ್ದು, ಈ ಮೂಲಕ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿ ಬಿಟ್ಟುಕೊಡುತ್ತಿದ್ದೇವೆ ಹಾಗೂ ಹಿಂದಿ ಪ್ರಾದೇಶಿಕತೆಗೆ ತಕ್ಕಂತೆ ಟೀಸರ್ ಕಟ್ಸ್ ಇರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.


ಕಿರಣ್ ರಾಜ್ ಅವರು ಮಾಸ್ look ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಅಪೂರ್ವ, ರಾಧ್ಯ, ಸಮೀಕ್ಷಾ ಮೂವರು ನಾಯಕಿಯಾರಿದ್ದಾರೆ, ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾವಾಗುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ ಹೆಗ್ಡೆ ನಿರ್ಮಿಸಿದ್ದಾರೆ.


ರವಿ ಶಂಕರ್, ಮೈಕೋ ನಾಗರಾಜ್, ಮಂಡ್ಯ ರಮೇಶ್,ಗಿರೀಶ್ ಹೆಗ್ಡೆ , B ಸುರೇಶ, ಸೂರ್ಯ ಕುಂದಾಪುರ, ಧರ್ಮಣ್ಣ, ಉಗ್ರಂ ಮಂಜು, ಉಗ್ರಂ ರವಿ, ಮನಮೋಹನ್ ರೈ,ಅನಿಲ್ ಯಾದವ್ ,ಪ್ರಥ್ವಿ, ಧರ್ಮೇಂದ್ರ ಆರಸ್, ಸುಜಯ್ ಶಾಸ್ತ್ರಿ ಅನೇಕ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಸಿದ್ದಾರೆ.

ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಗೀತರಚನೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ, ರಾಘವೇಂದ್ರ B ಕೋಲಾರ ಛಾಯಾಗ್ರಾಹಣ ಉಮೇಶ R B ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ “ರಾನಿ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಣ್ಣಪ್ಪ ಸಿನಿಮಾ ಶುರು: ಕಾಳಹಸ್ತಿಯಲ್ಲಿ ವಿಷ್ಣು ಮಂಚು ಚಿತ್ರಕ್ಕೆ ಪೂಜೆ

ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯು ಯುಗಯುಗಗಳಿಂದಲೂ ಭಾರತೀಯ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದೆ. ಕಣ್ಣಪ್ಪನ ಕಥೆಯು ಮತ್ತೊಮ್ಮೆ ಬೆಳ್ಳಿಯೆರೆಯ ಮೇಲೆ ಮೂಡಿಬರುತ್ತಿದ್ದು, ವಿಷ್ಣುಮಂಚು ಅಭಿನಯದ ಈ ಚಿತ್ರಕ್ಕೆ ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರನ್ನು ಒಳಗೊಂಡಿರುವ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳ ಅಡಿಯಲ್ಲಿ ಈ ಚಿತ್ರವನ್ನು ನಟ ಹಾಗೂ ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ.

ಕಣ್ಣಪ್ಪ ಚಿತ್ರವು ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಾಸ್ತಿಕನಾದ ಕಣ್ಣಪ್ಪನ ವಿಸ್ಮಯಕಾರಿ ರೂಪಾಂತರವು ಈ ಚಿತ್ರದ ಕಥಾವಸ್ತು. ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ವಿಷ್ಣು ಮಂಚು ಹೇಳಿಕೊಂಡಿದ್ದಾರೆ.

ಇದುವರೆಗೂ ಹಲವು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ವಿಷ್ಣು ಮಂಚು, ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

ಈ ಚಿತ್ರಕ್ಕೆ ಧೀಮಂತ ಲೇಖಕರಾದ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು‌, ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣವಿದೆ.

ಈ ಹಿಂದೆ ಸ್ಟಾರ್ ಪ್ಲಸ್ ಗಾಗಿ ಮಹಾಭಾರತ ಸರಣಿಯನ್ನು ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್, ಮೇರುಕೃತಿಯನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟಿ ನೂಪುರ್ ಸನೋನ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಭಕ್ತಿ ಪ್ರಧಾನ “ಕಣ್ಣಪ್ಪ” ( ಎ ಟ್ರೂ ಎಪಿಕ್ ಇಂಡಿಯನ್ ಟೇಲ್) ಚಿತ್ರ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಹುಭಾಷೆಗಳಲ್ಲಿ ಬರಲಿದೆ.

Categories
ಸಿನಿ ಸುದ್ದಿ

ಸುನಾಮಿ ಎಬ್ಬಿಸಿದ ಗ್ಲಾಮರ್ ಗಾಡಿ! ಮಾರಕಾಸ್ತ್ರ ಚಿತ್ರದ ನಂಬರ್ ಸಾಂಗ್ ರಿಲೀಸ್

ನಟರಾಜ್ ಅವರು ಅರ್ಪಿಸುವ, ಕೋಮಲ ನಟರಾಜ್ ನಿರ್ಮಿಸಿರುವ “ಮಾರಕಾಸ್ತ್ರ” ಚಿತ್ರಕ್ಕಾಗಿ ಮಂಜು ಕವಿ ಬರೆದು, ಸಂಗೀತ ಸಂಯೋಜಿಸಿರುವ “ಗ್ಲಾಮರು ಗಾಡಿ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಅನನ್ಯ ಭಟ್ ಹಾಡಿರುವ ಈ‌ ಹಾಡು A2 music ಮೂಲಕ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ. ಹೀನಾ ಎಂ ಪಂಚಾಲ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

ನಾನು ಸಿನಿಮಾ ಮಾಡುತ್ತೇನೆ ಎಂದಾಗ, ಬೇಡ ಅಂದವರೆ ಹೆಚ್ಚು. ಆದರೆ ಅವರುಗಳು ಹೇಳಿದ ತರಹ ಅನುಭವ ನನಗೆ ಈ ಚಿತ್ರದಲ್ಲಿ ಆಗಿಲ್ಲ. ಏಕೆಂದರೆ ಒಳ್ಳೆಯ ತಂಡದ ಸಹಕಾರ. ಆಕ್ಷನ್ ಕ್ವೀನ್ ಮಾಲಾಶ್ರೀ ಅವರು ಸೇರಿದಂತೆ ಬಹು ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಈ ಚಿತ್ರದ ನಾಲ್ಕು ಹಾಡುಗಳನ್ನು ಹಾಡಿದ್ದೇನೆ ಹಾಗೂ ನಟಿಸಿದ್ದೇನೆ ಎನ್ನುತ್ತಾರೆ ನಟರಾಜ್. ನಟರಾಜ್ ಅವರ ಪತ್ನಿ ನಿರ್ಮಾಪಕಿ ಕೋಮಲ ನಟರಾಜ್ ಸಹ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

ಇದು ನನ್ನ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ಗುರುಮೂರ್ತಿ ಸುನಾಮಿ, “ಮಾರಕಾಸ್ತ್ರ” ಒಂದು ಕೌಟುಂಬಿಕ ಚಿತ್ರ‌. ಇದರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಈಗಾಗಲೇ ಟೀಸರ್ ಎಲ್ಲರ ಮನ ಗೆದ್ದಿದೆ. ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ ಎಂದು ತಿಳಿಸಿದರು.

ಚಿತ್ರದಲ್ಲಿ ಏಳು ಹಾಡುಗಳಿವೆ. ಆ ಪೈಕಿ ನಾಲ್ಕು ಹಾಡುಗಳನ್ನು ನಟರಾಜ್ ಅವರೆ ಹಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡನ್ನು ನಾನೇ ಬರೆದಿದ್ದೇನೆ. ಅನನ್ಯಾ ಭಟ್ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಮಂಜು ಕವಿ ತಿಳಿಸಿದರು.

“ಮಾರಕಾಸ್ತ್ರ” ಚಿತ್ರದ ನಿರ್ಮಾಪಕರು ಈಗಾಗಲೇ ಅರ್ಧದಷ್ಟು ಸೇಫ್ ಆಗಿದ್ದಾರೆ. ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಚಿತ್ರದ ಹಿಂದಿ ರೈಟ್ಸ್ ಬಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ನೃತ್ಯ ನಿರ್ದೇಶಕ ಹಾಗೂ ಕ್ರಿಯೇಟಿವ್ ಹೆಡ್ ಧನ ಕುಮಾರ್ ಮಾಹಿತಿ ನೀಡಿದರು.

ಚಿತ್ರದ ಛಾಯಾಗ್ರಹಕ ಅರುಣ್ ಸುರೇಶ್, ಸಂಕಲನಕಾರ ವಿಶ್ವ ಹಾಗೂ ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯನ್, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಮುಂತಾದವರು “ಮಾರಕಾಸ್ತ್ರ” ಚಿತ್ರದ ಕುರಿತು ಮಾತನಾಡಿದರು.
ಮಾಲಾಶ್ರೀ ಹಾಗೂ ಹರ್ಷಿಕಾ ಪೂಣಚ್ಛ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಕ್ಯಾಟ್ಬರೀಸ್ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಧರ್ಮ ಕೀರ್ತಿರಾಜ್ : ರೌಡಿ ಕಲ್ಕಿಯಾಗಿ ಜೆಕೆ ಎಂಟ್ರಿ; ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್

ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಅಭಿನಯದ ತಲ್ವಾರ್ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.

ಕಥೆ, ಚಿತ್ರಕಥೆ ಸಂಭಾಷಣೆ ಬರೆದು ರಾಘವ ಮುರಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದು.

ಇನ್ನು, ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್, ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು.

ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.

ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.

ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ.

ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ‘ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟು ಫ್ಯಾಮಿಲಿ ಹಾಳಾಗ್ತವೆ ಎಂಬ ಸಂದೇಶವನ್ನು ಈ ಚಿತ್ರ ದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು.

ಸದ್ಯ ಯು/ಎ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ ರಿಲೀಸ್ ಆಗಲು ತಯಾರಿ ನಡೆಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಚಿತ್ರದಲ್ಲಿ ಕನ್ನಡತಿ ಸಪ್ತಮಿ ಗೌಡ: ಸೆಪ್ಟಂಬರ್​ 28ಕ್ಕೆ ‘ದಿ ವ್ಯಾಕ್ಸಿನ್​ ವಾರ್ ರಿಲೀಸ್

‘ ದಿಕಾಶ್ಮೀರ್ ಫೈಲ್ಸ್’ ಬಳಿಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾಗಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಟೀಸರ್ ಹಾಗೂ ಬಿಡುಗಡೆ ದಿನಾಂಕ ಪ್ರಕಟವಾಗಿದೆ.

ಸ್ವಾತಂತ್ರ್ಯ ದಿನದ ಅಂಗವಾಗಿ ರಿಲೀಸ್ ಆಗಿದ್ದ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ‌. ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕುರಿತ ಪ್ರಯೋಗದ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಭಾರತೀಯ ವಿಜ್ಞಾನಿಗಳು ವ್ಯಾಕ್ಸಿನ್‌ ಗಾಗಿ ಪಟ್ಟ ಶ್ರಮವನ್ನು ಟೀಸರ್ ನಲ್ಲಿ ಕಟ್ಟಿಕೊಡಲಾಗಿದೆ.

ಕೋವಿಡ್ ವ್ಯಾಕ್ಸಿನ್ ಸುತ್ತ ಸಾಗುವ ಕಥೆಯಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

ಸೆಪ್ಟಂಬರ್​ 28ರಂದೇ ‘ದಿ ವ್ಯಾಕ್ಸಿನ್​ ವಾರ್’ ಚಿತ್ರ 11 ಭಾಷೆಯಲ್ಲಿ ತೆರೆ ಕಾಣಲಿದೆ. ಇದೇ ದಿನ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಸಿನಿಮಾ ಕೂಡ ಬಿಡುಗಡೆಯಾಗಲಿದೆ.

error: Content is protected !!